Sunday, 8th September 2024

ಈ ಶತಮಾನ ಕಂಡ ಅಪರೂಪದ ಭಾಷಾತಜ್ಞ ’ಜಿ.ವಿ’

ಅಭಿವ್ಯಕ್ತಿ

ಸುರೇಶ್ ಗುದಗನವರ

ಕನ್ನಡ ಪಾಂಡಿತ್ಯಕ್ಕೆ ಹಾಗೂ ಭಾಷೆ, ವಿಮರ್ಶೆ, ಸಂಶೋಧನೆ, ಶಿಕ್ಷಣ, ಅನುವಾದ, ಸಮಾಜಸೇವೆ ಕ್ಷೇತ್ರಗಳಲ್ಲಿ ಮಾಡಿದ ಅನನ್ಯ ಸೇವೆಗೆ ಖ್ಯಾತರಾದ ಹಿರಿಯ ಆದರ್ಶ ಪ್ರಾಧ್ಯಾಪಕ ಪ್ರೊ.ಜಿ.ವೆಂಕಟ ಸುಬ್ಬಯ್ಯನವರು ಎಲೆಯ ಮರೆಯ ಕಾಯಿಯಂತೆ ಬಾಳಿದವರು.

ಚಿಕ್ಕದಾಗಿ ಜಿ.ವಿ. ಎಂದೇ ಆಪ್ತರಾಗಿರುವ ಇವರು ನಿಘಂಟಿನ ದೊಡ್ಡ ಗಂಟನ್ನೇ ಕನ್ನಡಕ್ಕೆ ನೀಡಿ ಕನ್ನಡದ ಸಿರಿವಂತಿಕೆಯನ್ನು ಹೆಚ್ಚಿಸಿದ್ದಾರೆ. ಕನ್ನಡ ಭಾಷೆಯನ್ನೇ ಬದುಕಾಗಿಸಿಕೊಂಡು, ಕನ್ನಡ ಪದಗಳನ್ನೇ ಉಸಿರಾಗಿಸಿ ಕೊಂಡು ಕನ್ನಡ ಕಟ್ಟುವ ಕೈಂಕರ್ಯದಲ್ಲಿ ಅಕ್ಷರಶಃ ತೊಡಗಿದವರು ಅಕ್ಷರಬ್ರಹ್ಮ ಜಿ.ವೆಂಕಟಸುಬ್ಬಯ್ಯನವರು.

ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾರಿ ಗ್ರಾಮದವರು. ಇವರು 1913ರ ಆಗಸ್ಟ್ 23 ರಂದು ತಾಯಿಯವರ
ತವರುಮನೆಯಾದ ಕೃಷ್ಣರಾಜಪೇಟೆಯ ಕೈಗೋನಹಳ್ಳಿಯಲ್ಲಿ ಜನಿಸಿದರು. ತಂದೆ ಗಂಜಾರಿ ತಿಮ್ಮಣ್ಣಯ್ಯ, ತಾಯಿ ಸುಬ್ಬಮ್ಮ.
ತಂದೆಯವರು ಮೈಸೂರು ಅರಮನೆಯ ವಿದ್ವಾಂಸರಾಗಿ, ಸಂಸ್ಕೃತ – ಕನ್ನಡ ಪಂಡಿತರಾಗಿ ವೇದೋಪನಿಷತ್ತುಗಳಲ್ಲಿ ಪರಿಣತ ರೆನಿಸಿಕೊಂಡವರು.

ವೆಂಕಟ ಸುಬ್ಬಯ್ಯನವರು ಸುಂಸ್ಕೃತ ಮನೆತನದ ಪಂಡಿತ ಪರಂಪರೆಯಲ್ಲಿ ಬೆಳೆದು ಬಂದಿದ್ದಾರೆ. ಅವರ ತಂದೆಯವರು ಪ್ರಾಥಮಿಕ ಶಿಕ್ಷಣ ಹಾಗೂ ಮಾಧ್ಯಮಿಕ ಶಿಕ್ಷಣದಲ್ಲಿ ನೆರವಾದರಷ್ಟೇ ಅಲ್ಲ, ವೆಂಕಟಸುಬ್ಬಯ್ಯನವರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ. ವೆಂಕಟಸುಬ್ಬಯ್ಯನವರು 1927 ರಿಂದ 1930ರವರೆಗಿನ ಪ್ರಾಢಶಾಲೆಯ ಶಿಕ್ಷಣವನ್ನು ಮಧುಗಿರಿಯಲ್ಲಿ ಮುಗಿಸಿ, ಮೈಸೂರಿಗೆ ಬಂದರು.

ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಅಧ್ಯಯನವನ್ನು ಮುಂದುವರಿಸಿದರು. ಬಿ.ಎಂ.ಶ್ರೀ, ಟಿ.ಎಸ್.ವೆಂಕಣ್ಣಯ್ಯ,
ಎ.ಆರ್.ಕೃಷ್ಣಶಾಸ್ತ್ರಿ ತಿ.ನಂ.ಶ್ರೀ, ಡಿ.ಎಲ್. ನರಸಿಂಹಾಚಾರ್ಯ ಮೊದಲಾದ ಹಿರಿಯರಿಂದ ಪ್ರೋತ್ಸಾಹ ಪಡೆದರು. 1937ರಲ್ಲಿ
ಮಹಾರಾಜಾ ಕಾಲೇಜಿನಿಂದಲೇ ಎಂ.ಎ. ಪದವಿ ಪಡೆದರು. ಅವರು ಪ್ರಥಮ ಸ್ಥಾನಗಳಿಸಿದ್ದಕ್ಕಾಗಿ ಕೇಣಿ ಸಿದ್ದಪ್ಪ ಸುವರ್ಣ ಪದಕ ಮತ್ತು ಹೊನ್ನಶೆಟ್ಟಿ ಬಹುಮಾನಗಳು ಬಂದವು. 1930ರಲ್ಲಿ ಬಿ.ಟಿ.ಪದವಿ ಪಡೆದರು. 1939ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದರು.

1945ರಲ್ಲಿ ಬೆಂಗಳೂರಿನ ಜಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದರು. ಜಯಾ ಸಂಜೆ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1973ರಲ್ಲಿ ವೃತ್ತಿಯಿಂದ ನಿವೃತ್ತರಾದರು. ವೃತ್ತಿಯಿಂದ ನಿವೃತ್ತರಾದ ಮೇಲೂ ತಮ್ಮ ಬೋಧನಾ ಪ್ರವೃತ್ತಿಯ ಫಲವಾಗಿ ಹಲವು ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು 1968-73ರ ವರೆಗೆ ರಾಷ್ಟ್ರೀಯ ವಿದ್ಯಾಲಯ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ವಿಶೇಷ ಪ್ರಾಧ್ಯಾಪಕರಾಗಿ, 1971-80ರವರೆಗೆ ಭಾರತ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಅಲ್ಲದೇ 1960 ರಿಂದ 1964ರ ವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್‌ನ ಸದಸ್ಯರಾಗಿ, 1964ರಿಂದ 1969ರವರೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಮತ್ತು 1964 ರಿಂದ 1967ರವರೆಗೆ ಬೆಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಪರೀಕ್ಷಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವೆಂಕಟ ಸುಬ್ಬಯ್ಯನವರ ಸೇವೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನೊಡನೆ ಇದ್ದ ಅವರ ನಂಟು ಬಹಳ ಹಳೆಯದು.

1954ರಿಂದ 1956ರ ವರೆಗೆ ಅದರ ಕಾರ್ಯದರ್ಶಿಯಾಗಿ ದುಡಿದು ಅನಂತರ 1964 ರಿಂದ 1969ರ ವರೆಗೆ ಅದರ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಅಂದಿನ ಪರಿಷತ್ತಿನ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಿ ಅದರ ಚಟುವಟಿಕೆ ಗಳನ್ನು ವಿಸ್ತರಿಸಿದ್ದಲ್ಲದೇ ಅದಕ್ಕೊಂದು ಉತ್ತಮ ಅಂಗರಚನೆಯನ್ನು ರಚಿಸಿಕೊಟ್ಟರು.

ಆಗ ಇಡೀ ಕನ್ನಡ ಸಾರಸ್ವತ ಲೋಕವೇ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಕಾರ್ಯವೈಖರಿಗೆ ಶಹಭಾಶ್ ಎಂದಿತ್ತು. ಅವರು ಜನ
ಸಂಪರ್ಕ ಕಾರ್ಯ, ಪ್ರಕಟನಾ ಕಾರ್ಯ, ಕನ್ನಡ ಕಲಿಕೆ ಕಾರ್ಯ ಹಾಗೂ ಇತರ ಕಾರ್ಯಗಳಲ್ಲಿ ಅಭಿವೃದ್ಧಿಯಾಗುವಂತೆ
ಮಾರ್ಗದರ್ಶನ ಮಾಡಿದರು. ಜೊತೆಗೆ ‘ಕನ್ನಡ ನುಡಿ’ ಪತ್ರಿಕೆ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ಅವರು ಅಖಿಲ ಭಾರತ
ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪ ಬದಲಿಸಿ ಆಧುನಿಕ ಸಾಹಿತ್ಯ ವಿಮರ್ಶೆಗೆ ಪ್ರಾಧಾನ್ಯ ನೀಡಿದರು.

ನಡೆದಾಡುವ ನಿಘಂಟು, ಶಬ್ಧ ಬ್ರಹ್ಮ, ಎಂದೇ ಪ್ರಖ್ಯಾತರಾಗಿರುವ ಜಿ.ವೆಂಕಟಸುಬ್ಬಯ್ಯವರು ಸಾಹಿತ್ಯ ವಿಮರ್ಶೆ, ಸಂಶೋಧನೆ, ಅನುವಾದ, ನಿಘಂಟು ರಚನೆಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಹಾಗೂ ಹದಿನಾಲ್ಕುಕ್ಕೂ ಹೆಚ್ಚು ನಿಘಂಟುಗಳನ್ನು ಪ್ರಕಟಗೊಳಿಸಿದ್ದಾರೆ. ನಯನಸೇನ, ನಳಚಂಪು, ಅನುಕಲ್ಪನೆ, ಅಕ್ರೂರ ಚರಿತ್ರೆ, ಲಿಂಡನ್ ಜಾನ್ಸ್‌ನ್ ಕಥೆ, ಶಂಕರಾಚಾರ್ಯ, ಕಬೀರ್, ಸರಳಾದಾಸ್, ರತ್ನಾಕರವರ್ಣಿ, ಷಡಕ್ಷರದೇವ, ಸರ್ವಜ್ಞ, ದಾಸಸಾಹಿತ್ಯ,
ವಚನಸಾಹಿತ್ಯ, ಶಾಸನ ಸಾಹಿತ್ಯ, ಕನ್ನಡ – ಕನ್ನಡ ಇಂಗ್ಲೀಷ್ ನಿಘಂಟು, ಕನ್ನಡ – ಕನ್ನಡ ಕ್ಲಿಷ್ಟ ಪದಕೋಶ, ಇಂಗ್ಲೀಷ್ – ಕನ್ನಡ
ನಿಘಂಟು, ಮುದ್ದಣ ಭಂಡಾರ ಭಾಗ-1, ಮುದ್ದಣ ಭಂಡಾರ ಭಾಗ-2, ಕಾವ್ಯ ಲಹರಿ, ಕನ್ನಡ ಸಾಹಿತ್ಯ ಬೆಳೆದುಬಂದ ದಾರಿ,
ಕನ್ನಡದ ನಾಯಕ ಮಣಿಗಳು, ಕನ್ನಡವನ್ನು ಉಳಿಸಿ ಬೆಳೆಸಿದವರು, ಡಿ.ವಿ.ಗುಂಡಪ್ಪನವರು, ಕವಿ ಜನ್ನ, ಪ್ರೊ.ಟಿ.ಎಸ್.
ವೆಂಕಣ್ಣಯ್ಯನವರು. ನಾಗರಸನ ಭಗವದ್ಗೀತೆ, ಮುದ್ದಣ ಪದ ಪ್ರಯೋಗ ಕೋಶ, ಎರವಲು ಪದಕೋಶ, ತುಳು ಕತೆಗಳು, ಇಗೋ
ಕನ್ನಡ-1, ಇಗೋ ಕನ್ನಡ-2, ಕುಮಾರವ್ಯಾಸನ ಅಂತರಂಗ ಮುಂತಾದವು ಇವರ ಪ್ರಮುಖ ಕೃತಿಗಳು, ಇವರ ಇಗೋ ಕನ್ನಡ
ಅಂಕಣವಂತೂ ನಾಡಿನ ಮನೆಮಾತು.

ಪ್ರೊ.ಜಿ. ವೆಂಕಟಸುಬ್ಬಯ್ಯನವರು ‘ಕನ್ನಡ ಕನ್ನಡ’ ಬೃಹತ್ ಕೋಶದ ಪ್ರಧಾನ ಸಂಪಾದಕರಾಗಿ ಮಾಡಿದ ಕಾರ್ಯ ಗಮನಾರ್ಹ ವಾಗಿದೆ. ಇದಲ್ಲದೆ ಐಬಿಎಚ್. ಕನ್ನಡ-ಕನ್ನಡ-ಇಂಗ್ಲೀಷ ನಿಘಂಟನ್ನು ಇತರೊಡನೆ ಜೊತೆಗೂಡಿ ರಚಿಸಿದ್ದಾರೆ. ‘ಮುದ್ದಣ್ಣ ಪದಪ್ರಯೋಗ ಕೋಶ’ ಇವರು ರಚಿಸಿದ ಮತ್ತೊಂದು ಕೋಶ. ಮುದ್ದಣ ಕವಿಯ ಕೃತಿಗಳನ್ನು ಇವರು ಎಷ್ಟು ಆಳವಾಗಿ ಅಭ್ಯಾಸ ಮಾಡುತ್ತಿದ್ದಾರೆನ್ನುವುದು ತಿಳಿಯುತ್ತದೆ. ಇಗೋ ಕನ್ನಡ ಸಾಮಾಜಿಕ ನಿಘಂಟನ್ನು ಮೂರು ಸಂಪುಟಗಳಲ್ಲಿ ರಚಿಸಿದ್ದು,
ಈ ನಿಘಂಟಿನ ವಿಶೇಷವೆಂದರೆ ಶಬ್ಧಗಳಿಗೆ ಅರ್ಥ ವಿವರಣೆ ನೀಡುತ್ತ, ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಕುರಿತಾಗಿ ಹೊಸ ರೀತಿಯ ಚಿಂತನೆಯ ನಡೆಸುವುದು.

‘ಪತ್ರಿಕಾ ಪದಕೋಶ’ ಇವರ ಮತ್ತೊಂದು ಮಹತ್ವದ ಸಂಪಾದನೆ, ‘ಎರವಲು ಪದಕೋಶ’ ಇವರ ಮತ್ತೊಂದು ವಿಶಿಷ್ಟ ಕೋಶ. ಗ್ರಂಥದ ಶೀರ್ಷಿಕೆಯೇ ಸೂಚಿಸುವಂತೆ ಇದು ಕನ್ನಡಕ್ಕೆ ಬೇರೆ ಭಾಷೆಗಳಿಂದ ಬಂದ ಶಬ್ಧಗಳ ನಿಘಂಟು. ಎರವಲು ಪದಗಳ ಮೊದಲ ಕೋಶ ಇದು. ಪ್ರೊ. ಜಿ.ವಿ ಪ್ರಿಸಮ್ ಇಂಗ್ಲೀಷ – ಕನ್ನಡ ನಿಘಂಟು ಇಪ್ಪತ್ತನೆಯ ಶತಮಾನದ ಕೊನೆಗೆ ಸಮಾಜದಲ್ಲಿ ಕಂಡುಬರುತ್ತಿದ್ದ ಇಂಗ್ಲೀಷ್ ಭಾಷೆಯ ಪ್ರಯೋಗ ಗಮನಿಸಿ ವೆಂಕಟಸುಬ್ಬಯ್ಯನವರು ರಚಿಸಿದ ಆಧುನಿಕ ನಿಘಂಟು
ಇದು. ‘ಕನ್ನಡ ನಿಘಂಟು ಶಾಸ ಪರಿಚಯ’ ಕನ್ನಡದಲ್ಲಿ ಇವರು ರಚಿಸಿದ ಮೊದಲ ಶಾಸ್ತ್ರ ಪುಸ್ತಕ, ಇವರ ಸಂಶೋಧನಾ
ಪ್ರವೃತ್ತಿಗನುಗುಣವಾಗಿ ಕರ್ನಾಟಕ ಕವಿ ಚರಿತೆ ಸಂಪುಟಗಳಲ್ಲಿ ಸಂಶೋಧನೆ ಮಾಡಿ ಹಲವಾರು ಹೊಸ ಅಂಶಗಳನ್ನು ಸಂಪುಟಗಳಲ್ಲಿ ಸೇರಿಸಿದ್ದಾರೆ.

ಹಲವು ಪತ್ರಿಕೆಗಳಲ್ಲಿ, ವಿಶ್ವಕೋಶದಲ್ಲಿ, ಸಾಹಿತ್ಯ ವಿಮರ್ಶೆಯ ಸಂಕಲನಗಳಲ್ಲಿ ಇವರ ಸಾಹಿತ್ಯ ವಿಮರ್ಶೆ ಮತ್ತು
ನಿಘಂಟು ವಿಚಾರವಾದ ಲೇಖನಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರಕಟವಾಗಿವೆ. ಪ್ರೊ.ಜಿ.ವೆಂಕಟಸುಬ್ಬಯ್ಯನವರ ಮಹತ್ವದ ಸಾಮಾಜಿಕ ಸಾಧನೆಯೆಂದರೆ ರಾಮಕೃಷ್ಣ ಸ್ಟೂಡೆಂಟ್ ಹೋಮ್‌ನ್ನು ಕಟ್ಟಿ ಬೆಳೆಸಿದುದು. ಅದಕ್ಕೆ ಮೊದಲು ಜಿ.ವಿ.ಅವರನ್ನು ಸದಸ್ಯರಾಗಿಸಿದವರು ಎಂ.ಬಿ. ಗೋಪಾಲಸ್ವಾಮಿ ಅವರು.

ಗೋಪಾಲಸ್ವಾಮಿ ಅವರು ನೀವು ಮಕ್ಕಳಿಗೆ ಪ್ರೀತಿಯಿಂದ ಪಾಠ ಹೇಳುವುದರಲ್ಲಿ ಎತ್ತಿದ ಕೈ ಹಾಗಾಗಿ ನೀವು ಈ ಕೆಲಸ ಮಾಡಬೇಕು ಎಂದಾಗ ಜಿ.ವಿ.ಅವರು ಪ್ರತಿನಿತ್ಯ ಬಿಡುವಿನ ಹೊತ್ತಿನಲ್ಲಿ ಹೋಗಿ ಅಲ್ಲಿನ ಬಡಮಕ್ಕಳಿಗೆ ಪಾಠ ಹೇಳುತ್ತಿದ್ದರು. ರಾಮಕೃಷ್ಣ ಸ್ಟೂಡೆಂಟ್ ಹೋಮ್‌ನಲ್ಲಿ ಪ್ರೊ.ವೆಂಕಟಸುಬ್ಬಯ್ಯನವರು ಬೆಳೆಸಿದ ವಿದ್ಯಾರ್ಥಿಗಳ ಸಂಖ್ಯೆ ಸಹಸ್ರಾರು. ನೂರು ವರ್ಷ ತುಂಬಿದ ಸಂದರ್ಭದಲ್ಲಿ ತಮ್ಮ ಬದುಕಿನ ಕುರಿತು ಹೇಳಿದಂಥ ಮಾತುಗಳೂ ಅವರ ಇಳಿವಯಸ್ಸಿನಲ್ಲೂ ಬತ್ತದ ಉತ್ಸಾಹಕ್ಕೆ ನಿದರ್ಶನ, ಸಂಸ್ಕೃತದಲ್ಲಿ ಒಂದು ಮಾತಿದೆ ‘ಜೀವನ ಭದ್ರಾಣಿ ಪಶ್ಯತಿ’ ಅಂತ.

ಆ ಮಾತು ನನಗೆ ಚೆನ್ನಾಗಿ ಅನ್ವಯಿಸುತ್ತೆ. ನಾನು ಹೊಸಗನ್ನಡ ಅರೋಣದಯದ ಕಾಲವನ್ನು ಕಂಡವನು. ಬಿ.ಎಂ.
ಶ್ರೀಕಂಠಯ್ಯನವರ ನೇರ ಶಿಷ್ಯನಾದ್ದರಿಂದ ಅವರ ಉತ್ಸಾಹ ಮತ್ತು ಪರಿಶ್ರಮವನ್ನು ಕಂಡವನು. ‘ನೂರು ವರ್ಷ ಬದುಕಿರೋದಿ ದೆಯಲ್ಲ, ನನಗೆ ಒಂದು ವಿಧದಲ್ಲಿ ಸಂತೋಷವನ್ನು ತರುತ್ತೆ. ಹೆಚ್ಚು ಕೆಲಸವನ್ನು ಮಾಡಲಾಗಲಿಲ್ಲ. ನನ್ನ ಸಾಮರ್ಥ್ಯವನ್ನು
ಸಂಪೂರ್ಣ ಉಪಯೋಗಿಸುವ ಅವಕಾಶ ದೊರೆಯಲಿಲ್ಲ ಎನ್ನುವ ಬೇಸರವು ಇದೆ. ನಾನು ವಿಶ್ವವಿದ್ಯಾಲಯದಲ್ಲಿ ಇದ್ದಿದ್ರೆ. ಬೇಕಾದಂಥ ಗ್ರಂಥಗಳೆಲ್ಲ ಸಿಕ್ಕುವ ಹಾಗಿದ್ದಿದ್ರೆ, ನನ್ನ ಮನಸ್ಸಿನಲ್ಲಿ ಏನೇನು ಇಚ್ಛೆ ಇತ್ತೋ ಅದನ್ನೆಲ್ಲ ಮಾಡಬಹುದಾಗಿತ್ತು’ ಎಂದು ಹೇಳಿಕೊಂಡಿದ್ದಾರೆ.

ಕನ್ನಡ ಸಾರಸ್ವತ ಲೋಕಕ್ಕೆ ಸಲ್ಲಿಸಿದ ಗಣನೀಯ ಸೇವೆಗಾಗಿ ವೆಂಕಟಸುಬ್ಬಯ್ಯನವರಿಗೆ 1991ರಲ್ಲಿ ಕರ್ನಾಟಕ ರಾಜ್ಯೋತ್ಸವ
ಪ್ರಶಸ್ತಿ ಲಭಿಸಿದೆ. 1992ರಲ್ಲಿ ಕೆನಡಾದ ಮಾಂಟ್ರಿಯಲ್‌ನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಆಮಂತ್ರಿತ ರಾಗಿದ್ದರು. 1997ರಲ್ಲಿ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ದೊರೆತಿದೆ. 1999ರಲ್ಲಿ ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರವು ‘ಸೇಡಿಯಾಪು ಪ್ರಶಸ್ತಿ’ ನೀಡಿ ಗೌರಸಿದೆ.

ಅದೇ ವರ್ಷ ಮೂಡುಬಿದಿರೆಯ ಶಿವರಾಮ ಕಾರಂತರ ಪ್ರತಿಷ್ಠಾನವು ‘ಶಿವರಾಮ ಕಾರಂತ’ ಪ್ರಶಸ್ತಿಯನ್ನು ಇವರಿಗೆ ಪ್ರಧಾನ
ಮಾಡಿದೆ. 2000ರಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯು ಇವರಿಗೆ ‘ವಿಶೇಷ ಪ್ರಶಸ್ತಿ’ ನೀಡಿದೆ. 2002ರಲ್ಲಿ ‘ಮುದ್ದಣ ಪುರಸ್ಕಾರ’ ಹಾಗೂ ‘ಅಂಕಣ ಶ್ರೀ’ ಪ್ರಶಸ್ತಿ ಲಭಿಸಿದೆ. ನಾಡೋಜ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೊರುರು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅ.ನ.ಕೃ. ಪ್ರತಿಷ್ಠಾನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ ಹಲವಾರು ಗೌರವಗಳು ಪ್ರೊ.ಜಿ. ವೆಂಕಟಸುಬ್ಬಯ್ಯನವರಿಗೆ ಲಭಿಸಿವೆ.

ಅಂತೆಯೇ ಡಾ.ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದಲ್ಲಿ ಜಿ.ವೆಂಕಟಸುಬ್ಬಯ್ಯನವರ ಕುರಿತು ನಿರ್ದೇಶಕ ಸುಚೇಂದ್ರ
ಪ್ರಸಾದರು ಸಾಕ್ಷಚಿತ್ರವನ್ನು ಚಿತ್ರೀಕರಿಸಿರುವುದು ಇವರಿಗೆ ಸಂದ ದೊಡ್ಡ ಗೌರವವೇ ಆಗಿದೆ. ಅಲ್ಲದೇ ಇವೆಲ್ಲಕ್ಕೂ ಕಳಶಪ್ರಾಯ ವಾಗಿ ಎಪ್ಪತ್ತೇಳನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠವನ್ನು ಪ್ರೊ.ಜಿ.ವೆಂಕಟಸುಬ್ಬಯ್ಯನವರಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡಿ ಗೌರವಿಸಿದೆ.

ಕನ್ನಡಕ್ಕಾಗಿ ದುಡಿದಿರುವ ಇವರ ಪ್ರಾಮಾಣಿಕ ಕನ್ನಡ ಕಾಯಕ ನಿಜಕ್ಕೂ ಮೆಚ್ಚುವಂಥದ್ದು. ನಿಘಂಟು ಸಾರ್ವಭೌಮ, ಶಬ್ಧ ಬ್ರಹ್ಮ, ಶಬ್ಧಸಾಗರ, ಶಬ್ಧ ಗಾರುಡಿಗ, ಶಬ್ಧ ಶಿಲ್ಪಿ, ಚಲಿಸುವ ಜ್ಞಾನ ಭಂಡಾರ, ಪದಗುರು, ಪದಜೀವಿ, ಕನ್ನಡದ ಕಿಟ್ಟಲ್ ಹೀಗೆ ಹಲವಾರು ಬಿರುದುಗಳಲ್ಲಿ ಮಿಂದಿರುವ  107 ವಯಸ್ಸಿನ ಸಾಹಿತ್ಯ ಭೀಷ್ಮ ಪ್ರೊ.ಜಿ.ವೆಂಕಟ ಸುಬ್ಬಯ್ಯನವರ ಸಾಧನೆಗೆ ಯಾವ ಬಿರುದುಗಳೂ ಭಾರವೆನಿಸದು. ಪ್ರೊ.ಜಿ.ವೆಂಕಟಸುಬ್ಬಯ್ಯನವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ನಷ್ಟ ವಾಗಿದೆ. ಸಾಹಿತ್ಯಲೋಕಕ್ಕೆ ಅವರು ಸಲ್ಲಿಸಿದ ಸೇವೆ ಚಿರಸ್ಮರಣೀಯ.

ಪ್ರೊ.ಜಿ.ವೆಂಕಟ ಸುಬ್ಬಯ್ಯನವರು ಈ ಶತಮಾನ ಕಂಡ ಅಪರೂಪದ ಭಾಷಾತಜ್ಞ ಎಂಬುದರಲ್ಲಿ ಎರಡು ಮಾತಿಲ್ಲ

Leave a Reply

Your email address will not be published. Required fields are marked *

error: Content is protected !!