Sunday, 8th September 2024

ಎವ್ವೆರಿ ಡೇ ಈಸ್ ನಾಟ್ ಗುರುವಾರ

ಸಿನಿಗನ್ನಡ

ತುಂಟರಗಾಳಿ

ಕೆಲವು ಸಿನಿಮಾಗಳನ್ನು ನೋಡಿದಾಗ ಬೇರೆ ಒಳ್ಳೆ ಸಿನಿಮಾಗಳು ಕೂಡಾ ಅದರ ಮುಂದೆ ವೀಕ್ ಅನ್ನಿಸಿಬಿಡುತ್ತವೆ. ಆದರೆ ಇನ್ನು ಕೆಲವು ಸಿನಿಮಾ ನೋಡಿದಾಗ, ಯಪ್ಪಾ, ಇದಕ್ಕಿಂತ, ಮೊದಲು ಚೆನ್ನಾಗಿಲ್ಲ ಅದುಕೊಂಡಿದ್ದ ಸಿನಿಮಾನೇ ಸಾವಿರ ಪಾಲು ವಾಸಿ ಅನ್ನಿಸಿಬಿಡುತ್ತದೆ. ಶುಕ್ರವಾರ ಬೆಳಗ್ಗೆ
ಕರಟಕ ದಮನಕ ಸಿನಿಮಾ ನೋಡಿ, ಸಂಜೆ ರಂಗ ನಾಯಕ ನೋಡಿದ ಮೇಲೆ ಕರಟಕ ದಮನಕ ಸಿನಿಮಾ ಪರವಾಗಿಲ್ಲ ಚೆನ್ನಾಗೇ ಇತ್ತು ಅನ್ನಿಸಿದ್ರೆ
ಅದಕ್ಕೆ ರಂಗನಾಯಕನ ನಿರ್ದೇಶಕ ಗುರುಪ್ರಸಾದ್ ಅವರಿಗೆ ಕ್ರೆಡಿಟ್ ಕೊಡಬೇಕು.

ಒಂದು ಸಿನಿಮಾ ಮಾಡಿ ಅದರಿಂದ ಚೆನ್ನಾಗಿದೆ ಅಂತ ಹೇಳಿಸಿಕೊಳ್ಳೋದು ಒಂದು ಕಲೆ. ಆದರೆ ತಾವು ಒಂದು ಸಿನಿಮಾ ಮಾಡಿ, ಅದರಿಂದ ಪ್ರೇಕ್ಷಕ
ಇನ್ನೊಂದು ಸಿನಿಮಾವನ್ನ ಚೆನ್ನಾಗಿದೆ ಅಂತ ಹೇಳುವಂತೆ ಮಾಡೋದೇನು ಸಾಮಾನ್ಯ ಸಾಧನೆನಾ.. ಅದು ಗುರುಪ್ರಸಾದ್ ಅವರಂಥ ಸಾಧಕರಿಗೆ ಮಾತ್ರ ಸಾಧ್ಯ. ಅದನ್ನು ಗುರು ಅವರು ಈ ಚಿತ್ರದ ಮೂಲಕ ಮಾಡಿ ತೋರಿಸಿzರೆ. ಹೇಳಿಕೇಳಿ ಇದು ಗುರುಪ್ರಸಾದ, ಹಾಗಾಗಿ ಇಲ್ಲಿ ತೀರ್ಥಹಳ್ಳಿ, ಸಾಗರದ ರೆಫರೆನ್ಸ್ ಇದೆ. ಆದ್ರೆ ನಿರೂಪಣೆಯಲ್ಲಿ ಈ ಚಿತ್ರ ಕಲಸು ಮೇಲೋಗರ, ಸಂಭಾಷಣೆಯ ವಿಷಯದಲ್ಲಂತೂ ತೀರಾ ಹೊಲಸು ಮೇಲೋಗರ.

ಗುರು ಅವರ ನಿರೂಪಣೆ ಅಂತೂ ಕೇಳಲೇಬೇಡಿ. ಸಿನಿಮಾದಲ್ಲಿ ಇರೋ ಸಂಭಾಷಣೆಗಳಲ್ಲಿ, ಸಿನಿಮಾಗೆ ಅಗತ್ಯ ಇಲ್ಲದಿರುವಂಥವೇ ಜಾಸ್ತಿ. ನಾವು ಫೇಸ್‌ಬುಕ್ಕಲ್ಲಿ ಹಾಕೋ ಒನ್‌ಲೈನರ್ ಸ್ಟೇಟಸ್‌ಗಳನ್ನ ಅವರು ಸಂಭಾಷಣೆ ಅಂತ ಕರೆದಿದ್ದಾರೆ. ಅಲ್ಲದೆ ತಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ಅಂತಲೇ ಪ್ರಶ್ನೆ ಕೇಳೋಕೆ ಅಂತಲೇ ಕೆಲವು ಪಾತ್ರಗಳು ಇವೆ. ಅವು ಅನಗತ್ಯವಾಗಿ ಪಂಚ್ ಡೈಲಾಗ್ ಹೊಡೆಯೋಕೆ ಸುಲಭ ಆಗೋ ಥರ ಪ್ರಶ್ನೆ ಕೇಳ್ತವೆ. ಹಾಗಾಗಿ, ಈ ಸಿನಿಮಾ ನಿರ್ದೇಶಕರ ಕಲ್ಪನೆ, ಇದು ನಿರ್ದೇಶಕರ ವ್ಯೂ ಅನ್ನೋದಕ್ಕಿಂತ ಬಹಳಷ್ಟು ಕಡೆ ಇಂಟರ್ ವ್ಯೂ ಅಂತನೇ ಅನ್ಸುತ್ತೆ.

ಸಿನಿಮಾದ ದೃಶ್ಯವೊಂದರಲ್ಲಿ ರಕ್ತಸಿಕ್ತ ಸಿನಿಮಾ ಮಾಡೋ ನಿರ್ದೇಶಕರನ್ನು ಆಡಿಕೊಂಡು, ನಾನು ಆ ಥರ ಸಿನಿಮಾ ಮಾಡಲ್ಲ ಅಂತಾರೆ. ಆದ್ರೆ ಈ ಚಿತ್ರದಲ್ಲಿ ಪರಮ ಅಶ್ಲೀಲ ಸಂಭಾಷಣೆಗಳನ್ನ ಕೇಳಿಸಿ, ಕೇಳುಗರ ಕಿವಿಯಲ್ಲಿ ರಕ್ತ ಬರುವಂತೆ ಮಾಡುವ ಗುರು ಪ್ರಸಾದ್, ಕಿವಿಯಲ್ಲಿ ಬೆರಳಿಟ್ಟುಕೊಳ್ಳೋ ಪ್ರೇಕ್ಷಕರನ್ನು ರಕ್ತಸಿಕ್ತಾ ಅಂತ ಕೇಳ್ತಾರೆ. ಒಟ್ಟಾರೆ ಹೇಳೋದಾದ್ರೆ, ಮಾತು ಮಾತಿಗೆ ನಾನೊಬ್ಬ ಹತಾಶ ಪ್ರೇಕ್ಷಕನಾಗಿ ಸಿನಿಮಾ ಮಾಡ್ತೀನಿ ಅನ್ನೋ
ಸೋ ಕಾಲ್ಡ್, ಸೆಲ್ಪ್‌ಕಾಲ್ಡ್ ಗುರುಪ್ರಸಾದ್ ಒಬ್ಬ ಹತಾಶ ನಿರ್ದೇಶಕ ಅಷ್ಟೇ ಆಗಿದ್ದಾರೆ ಅನ್ನೋದು ರಂಗನಾಯಕ ನೋಡಿದ ಮೇಲೆ ಗೊತ್ತಾಗುತ್ತೆ.

ಮಿಸ್ ಚಂಚಲಾ, ಚಿತ್ರನಟಿ

ಏನ್ರೀ ಮೊನ್ನೆ ಮದುವೆ ಆಗ್ತೀನಿ ಅಂದ್ರಂತೆ, ಈಗ ಆಗಲ್ಲ ಅಂತಿದೀರಂತೆ? ಅಲ್ಲ ರೀ, ಯಾರೋ ಸುದ್ದಿ ಬರೆದ್ರು ಅಂತ ಮದುವೆನೇ ಕ್ಯಾನ್ಸಲ್ ಮಾಡಿಬಿಡ್ತೀರಾ?

– ಅಯ್ಯೋ… ಈಗಿನ್ ಕಾಲದಲ್ಲಿ ಮದುವೆಗಳೇ ಮೂರು ದಿನಕ್ಕೆ ಬಿದ್ದುಹೋಗುವಾಗ ಮದುವೆ ಸುದ್ದಿಗಳು ಬಿದ್ದು ಹೋಗೋದು ಯಾವ ಲೆಕ್ಕ ಬಿಡಿ.

ಮುಂದೆ ನಿಂತು ಮದುವೆ ಕ್ಯಾನ್ಸಲ್ ಮಾಡಿಸೋ ಹಿರಿಯರು ಇರ್ತಾರೆ ಬಿಡಿ. ಆದ್ರೆ, ಯಾರೇನೇ ಅಂದ್ರೂ, ನಿಮ್ಮಿಬ್ರಲ್ಲಿ ಯಾರಾದ್ರೂ ಒಬ್ರು ಬೇರೆಯವರನ್ನ ಮದುವೆ ಆಗಿ ಲೈಫಲ್ಲಿ ಸೆಟ್ಲ್ ಆಗೋವರೆಗೆ ಆ ಸುದ್ದಿಗೆ ಲೈಫ್ ಇದ್ದೇ ಇರುತ್ತೆ. ಅಲ್ವಾ?

– ಇಲ್ಲರೀ, ನಾವಿಬ್ರೂ ಮದುವೆ ಆಗ್ತಾ ಇದೀವಿ. ಆದರೆ, ಬೇರೆ ಬೇರೆ ಮದುವೆ ಆಗ್ತಾ ಇದೀವಿ. ಅಷ್ಟೆ.

ಅಯ್ಯೋ, ನೀವು ಮದುವೆ ಆಗ್ತಿದೀರೋ ಅಥವಾ ಬೇರೆ ಆಗ್ತಾ ಇದೀರೋ ಕನ್ಯೂಸ್ ಆಗ್ತಿದೆ. ನೀವು ಯಾರನ್ನ ಮದ್ವೆ ಆಗ್ತಿರಾ ಅನ್ನೋದೇನೂ ಮಿಲಿಯನ್ ಡಾಲರ್ ಕ್ವೆಶ್ಚನ್ ಅಲ್ಲ ಬಿಡಿ. ಆದ್ರೆ, ಇನ್ನೊಬ್ರು, ಕಂಗ್ರಾಟ್ಸ್ ಹೇಳೋಕೆ ಫೋನ್ ಮಾಡಿದ್ರೆ ಸುದ್ದಿನೇ ಸುಳ್ಳು ಅಂದ್ರಂತೆ?
– ಮದುವೆ ಆಗೋದು ಲೇಟ್ ಅಲ್ವಾ, ಸದ್ಯಕ್ಕೆ ಹಿಂಗೆ ಹೇಳಿ. ಅವರಿಗೆ ಮೇಕಿಂಗ್ ನ್ಯೂಸ್, ನಮಗೆ ಬ್ರೇಕಿಂಗ್ ನ್ಯೂಸ್ ಅಂತದ್ರು. ಹೋಗ್ಲಿ ಬಿಡಿ. ಬ್ರೇಕ್ ಆಗಿದ್ದಕ್ಕೆ ನೀವು ಕಂಗ್ರಾಟ್ಸ್ ಹೇಳಲ್ವಾ?

ಹಲೋ, ಮದುವೆ ಆಗೊ, ಸಿನಿಮಾ ಹೀರೋ ಹೀರೋಯಿನ್‌ಗಳಿಗೆಲ್ಲ ಕಂಗ್ರಾಟ್ಸ್ ಹೇಳೋದೆ ನಮ್ ಕೆಲಸ ಅಂದ್ಕೊಂಡಿದ್ದೀರಾ? ಅದ್ಬಿಡಿ, ಅದೇನೋ ಸಕ್ಸಸ್ ಸಿಕ್ಮೇಲೆ ಈ ಥರಾ ‘ಸಿಕ್’ಸಿಕ್’ ಸುದ್ದಿ ಕಾಮನ್ ಅಂದ್ರಂತೆ, ನೀವು ಯಾವ ಸಕ್ಸಸ್ ಬಗ್ಗೆ ಹೇಳಿದ್ರಿ ಅಂತ ಗೊತ್ತಾಗ್ಲಿಲ್ಲ..

– ಅದೇ ರೀ, ಇತ್ತೀಚೆಗೆ ನೂರು ದಿನ ಓಡದೇ ಇದ್ರೂ, ಬಿಡುಗಡೆ ಆಗಿ ನೂರು ದಿನ ಆಯ್ತಲ್ಲ, ಆ ಸಿನಿಮಾ.

ಓ, ಆ ಪಿಕ್ಚರ್‌ನಲ್ಲಿ ನೀವೂ ಆಕ್ಟಿಂಗ್ ಮಾಡಿದ್ರಲ್ವಾ… ಸರಿ, ಸರಿ, ಮರ್ತೇ ಹೋಗಿತ್ತು ನೋಡಿ.. ಸರಿ, ನೀವು ಈ ಮುಂಚೆ ಕೇರಳದಲ್ಲೂ ‘ಡ್ಯುಯೆಟ್’ ಹಾಡಿದ್ರಿ ಅಂತ ಕೇಳ್ದೆ, ಕನ್ನಡದಲ್ಲೂ, ಮಲಯಾಳಂನಲ್ಲೂ ಸಿಂಗರ್ ಆಗಿ ಹೊಸ ಹೊಸ ಹಾಡು ಹಾಡಿದ್ದಕ್ಕೇ,ಈಗ ದಿನಕ್ಕೊಂದ್ ಹೊಸರಾಗ ತೆಗೀತಿದೀರಂತೆ?

– ಏನ್ ಜೋಕ್ ಮಾಡ್ತಾ ಇದೀರಾ, ನಂಗೆ ಹಾಡೋಕೇ ಬರಲ್ಲ. ನನ್ ಮದುವೆ ಸುದ್ದಿ ಥರ, ಇದೆಲ್ಲ ನಂಗೆ ಆಗದೇ ಇರೋರು ಹಬ್ಬಿಸಿರೋ ಸುಳ್ಳು ಸುದ್ದಿ.
(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಖೇಮುಶ್ರೀ ಶಾಪಿಂಗ್‌ಮಾಲ್‌ನಿಂದ ಖರೀದಿ ಮುಗಿಸಿ ಹೊರ ಬಂದಳು. ಕಾರಿನ ಕೀ ತೆಗೆಯಲು ಪರ್ಸ್‌ಗೆ ಕೈ ಹಾಕಿದರೆ ಕೀ ಸಿಗಲಿಲ್ಲ. ತಡಬಡಾಯಿಸಿ
ಎಲ್ಲ ಕಡೆ ಹುಡುಕಿದರೂ ಕಾರ್ ಕೀನ ಸುಳಿವೇ ಇಲ್ಲ. ಅವಳಿಗೂ ಗೊತ್ತಿತ್ತು, ಕಾರ್ ಕೀ ವಿಷಯದಲ್ಲಿನ ತನ್ನ ಬೇಜವಾಬ್ದಾರಿತನ ಇದೇನೂ ಮೊದಲ ಬಾರಿ ಅಲ್ಲ ಎಂಬುದು. ಎಷ್ಟೋ ಸಾರಿ, ಕಾರ್ ಕೀಯನ್ನು ಕಾರಿನ ಬಿಟ್ಟು ಹೋಗಿದ್ದಕ್ಕಾಗಿ ಗಂಡ ಖೇಮುವಿನಿಂದ ಸಿಕ್ಕಾಪಟ್ಟೆ ಬೈಸಿಕೊಂಡಿದ್ದು ಅವಳಿ
ಗಿನ್ನೂ ನೆನಪಿತ್ತು. ಈ ಸಲಾನೂ ಹಂಗೇ ಆಯ್ತಾ, ಹಂಗೇ ಆಗಿದ್ರೆ ಆಕಸ್ಮಾತ್ ಯಾರಾದ್ರೂ ಕಾರನ್ನು ಲಪಟಾಯಿಸಿದ್ರೆ ಏನ್ ಗತಿ ಎಂಬ ಆತಂಕದಲ್ಲಿ ಪಾರ್ಕಿಂಗ್‌ಗೆ ಓಡೋಡಿ ಬಂದಳು. ಅವಳಂದುಕೊಂಡ ಹಾಗೇ ಆಗಿತ್ತು. ಅಲ್ಲಿ ಅವಳ ಕಾರ್ ಇರಲಿಲ್ಲ. ತಕ್ಷಣ ಪೊಲೀಸರಿಗೆ ಕಾಲ್ ಮಾಡಿ ಕರೆಸಿ, ಕಾರ್‌ನ ಕಲರ್, ನಂಬರ್ ಮತ್ತಿತರ ವಿವರಕೊಟ್ಟು, ದೂರುಕೊಟ್ಟಳು. ಪೊಲೀಸರು ಕಾರು ಹುಡುಕಲು ಹೊರಟರು.

ಒಬ್ಬಳೇ ನಿಂತಿದ್ದ ಖೇಮುಶ್ರೀ ಸ್ವಲ್ಪ ಹೊತ್ತಿನ ನಂತರ, ಬೈಸಿಕೊಂಡರೂ ಪರವಾಗಿಲ್ಲ, ಯಾವುದಕ್ಕೂ ಗಂಡನಿಗೆ ಪೋನ್ ಮಾಡಿ ವಿಷಯ ತಿಳಿಸೋದು ಒಳ್ಳೇದು ಎಂದು ಖೇಮುಗೆ ಕಾಲ್ ಮಾಡಿ ಮೆಲ್ಲನೆ ಅಳುಕಿನಿಂದಲೇ ಹೇಳಿದಳು ‘ರೀ, ನನ್ನ ಕಾರ್ ಕೀ ಕಾರ ಬಿಟ್ಟಿದ್ದೆ. ಈಗ ಕಾರು ಕಳುವಾಗಿದೆ. ಬಯ್‌ಬೇಡಿ, ನಾನಿಲ್ಲಿ ಶಾಪಿಂಗ್‌ಮಾಲ್ ಬಳಿ ಒಬ್ಬಳೇ ಇದೀನಿ ಬರ್ತೀರಾ ಪ್ಲೀಸ್’. ಆ ಕಡೆಯಿಂದ ಗಂಡ ಖೇಮು ರೇಗಿದ, ‘ಅಯ್ಯೋ, ನಿನ್ನ, ಲೇ, ಇವತ್ತು ನೀನೆ ಡ್ರೈವ್ ಮಾಡ್ಕೊಂಡ್ ಹೋಗಿz.. ಬೆಳಿಗ್ಗೆ ನಾನೇ ನಿನ್ನ ಕಾರಲ್ಲಿ ಕರ್ಕೊಂಡ್ ಹೋಗಿ ಶಾಪಿಂಗ್‌ಮಾಲ್ ಹತ್ರ ಬಿಟ್ ಬರಲಿಲ್ವಾ. ಈಗ ಈ ಪೊಲೀಸ್ನೋರಿಗೆ ನಿನ್ನ ಕಾರನ್ನ ನಾನು ಕದ್ದಿಲ್ಲ ಅಂತ ಕನ್ವಿ ಮಾಡಿ ಆಮೇಲ್ ಬರ್ತೀನಿ ಇರು’.

ಲೈನ್ ಮ್ಯಾನ್

ಲವ್‌ನಲ್ಲಿ ಹುಡುಗ ಕೈ ಕೊಟ್ರೆ – ಬಗಣಿ ಗೂಟ
– ಹುಡುಗಿ ಕೈ ಕೊಟ್ರೆ – ಭಗಿನಿ ಗೂಟ

ಹಳೆ ಮಾತು: ಸಮುದ್ರ ದಡದಲ್ಲಿ ಕಪ್ಪೆಚಿಪ್ಪುಗಳು ಸಿಗುತ್ತವೆ. ಮುತ್ತುಗಳು ಬೇಕು ಅಂದ್ರೆ ಸಮುದ್ರದ ತಳಕ್ಕೆ ಹೋಗಬೇಕು.

– ಹೊಸ ಮಾತು: ವಾಲ, ಟೈಮ್ ಲೈನ್‌ಗಳಲ್ಲಿ ಎಲ್ಲರೂ ಸಾಚಾಗಳೇ ಆಗಿರ್ತಾರೆ, ನಿಜವಾದ ಮುಖ ಗೊತ್ತಾಗಬೇಕು ಅಂದ್ರೆ ಇನ್‌ಬಾಕ್ಸ್‌ಗೆ ಹೋಗಬೇಕು.
ಅಧಿಕಾರಕ್ಕೆ ಏರುವಾಗ ಅರವಿಂದ ಕೇಜ್ರಿವಾಲ್ ಯಾರ ಮೇಲೆ ಆಣೆ ಮಾಡಿ ಹೇಗೆ ಪ್ರಮಾಣ ವಚನ ಸ್ವೀಕರಿಸ್ತಾರೆ

– ‘ಆಪ್’ ಕಿ ಕಸಮ್

ಚಳಿಗಾಲದ ಸಮಸ್ಯೆ

– ಬೈಕಿನ ಹಿಂದೆ ಕೂತ ಹುಡುಗಿ ಬಾಯ್ ಫ್ರೆಂಡ್‌ನ ಅಪ್ಪಿಕೊಂಡಿರುವುದಕ್ಕೆ ಆ ಹುಡುಗನ ಮೇಲಿರೋ ಸಿಕ್ಕಾಪಟ್ಟೆ ಪ್ರೀತಿಯೇ ಕಾರಣ ಅಂತ ಹೇಳೋಕಾಗಲ್ಲ.

ನಮ್ ಜನ ಸರಿ ಇಲ್ಲಪ್ಪ,
– ಸಿಟ್ಟು ಬಂದಾಗ ರಾಜಕಾರಣಿಗಳನ್ನು ದೇಶದಿಂದ ಹೊರಗೆ ಹಾಕಬೇಕು ಅಂತಾರೆ ಈಗ ಅವರಾಗಿಯೇ ದೇಶದಿಂದ ಹೊರಗೆ ಹೋದರೆ ಸಿಟ್ಟು
ಮಾಡಿಕೋತಾರೆ

ಬೆಂಗಳೂರು ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಿಕ್ಕವರನ್ನೆಲ್ಲ ಹೊರಗೆ ತಳ್ಳುತ್ತ ಆಹ್ವಾನಿತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರನ್ನು ನೋಡಿದವರ ಕಾಮೆಂಟ್.
– ಆಹಾ, ಫಿಲ್ಮ್‌ನದ್ರೆ ಎ ಮುಗಿದ್ಮೇಲೆ ಕೊನೆಗ್ ಬರ್ತೀರ, ಫಿಲ್ಮ್ ಫೆಸ್ಟಿವಲ್‌ಗೆ ಮಾತ್ರ ಎಲ್ಲರಿಗಿಂತ ಮೊದಲೇ ಬಂದ್ಬಿಟ್ಟಿದೀರಾ.

ಕಮಲ್‌ಹಾಸನ್ ಗೆಸ್ಟ್ ಆಗಿ ಬಂದ್ರೆ ಫಿಲ್ಮ್ ಫೆಸ್ಟಿವಲ್‌ನ ವಿಶೇಷ:
– ಒಳಗೆ ಕಮಲ್‌ಹಾಸನ್ ಬಂದಾಗ ಅವರಿಗೆ ‘ಮುಂದೆ ಬನ್ನಿ’ ಸ್ವಾಗತ ಹೊರಗೆ ಪೊಲೀಸರಿಂದ ಪತ್ರಕರ್ತರಿಗೆ ‘ಹಿಂದೆ ತಳ್ಳಿ’ ಕಾರ್ಯಕ್ರಮ

ಸೀಕ್ವೆಲ್ ಮಾಡಲಾಗದ ಚಿತ್ರಗಳು

– ನಂ.೧
– ಒಕ್ಕೇ ಒಕ್ಕುಡು

ಅಪವಾದ ಎಂಬಂತೆ ಎರಡೆರಡು ‘ಸ್ವರ್ಗ’ ತೋರಿಸಿದ್ದು ‘ಜನ್ನತ್ ೨’
– ‘ಜನ್ನತ್ ೩’ ಸಿನಿಮಾ ಬಂದರೆ ಕನ್ನಡದಲ್ಲಿ ‘ಸ್ವರ್ಗಕ್ಕೆ’ ಮೂರೇ ‘ಗೇಣು’ ಅಂತ ರಿಮೇಕ್ ಮಾಡಬಹುದು

ಮಾಡರ್ನ್ ಗಾದೆ
– ಸುಸ್ಸೂ ಬಂತು ಅಂತ ಬೆಂಗಳೂರು ‘ಒನ್’ಗೆ ಹೋಗೋಕಾಯ್ತದ..?

Leave a Reply

Your email address will not be published. Required fields are marked *

error: Content is protected !!