Friday, 20th September 2024

ಮುಂದೆ ಓಡು, ಹಿಂದೆ ಹಿಡಿ ಎಂಬ ಮನೋಭಾವ ಬಿಡಿ

ವಸಂತ ನಾಡಿಗೇರ
ನಾಡಿಮಿಡಿತ

ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ನಮ್ಮ 18 ಯೋಧರು ಮೃತಪಟ್ಟರು.

ಚೀನಾ ಕಡೆಯೂ ಅಪಾರ ಸಾವು ನೋವು ಸಂಭವಿಸಿದ್ದರೂ ನಿಖರ ಸಂಖ್ಯೆ ಎಷ್ಟೆೆಂಬುದು ಗೊತ್ತಾಗಿಲ್ಲ. ಈ ಸುದ್ದಿ ಪ್ರಕಟವಾಗು ತ್ತಲೇ ಅದಕ್ಕೆ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾದವು. ನಮ್ಮ ಯೋಧರು ಧೈರ್ಯ ಸಾಹಸದಿಂದ ಚೀನೀ ಸೈನಿಕರನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ಸರಕಾರ ಹೇಳಿತು. ಅವರು ಒಳನುಗ್ಗಲು ಏಕೆ ಮತ್ತು ಹೇಗೆ ಅವಕಾಶ ನೀಡಿದಿರಿ ಎಂದು ಪ್ರತಿಪಕ್ಷ ಗಳು ಟೀಕೆ ಮಾಡಿದವು. ಇದರ ಮುಂದುವರಿದ ಭಾಗವಾಗಿ ಭಾರತ ಸರಕಾರವು ಚೀನಾದ 58 ಆ್ಯಪ್‌ಗಳನ್ನು ನಿಷೇಧಿಸಿತು. ತೀರ ಇತ್ತೀಚೆಗೆ ಮತ್ತೆ 158 ಆ್ಯಪ್‌ಗಳನ್ನು ಬ್ಯಾನ್ ಮಾಡಲಾಯಿತು. ಇವುಗಳಲ್ಲಿ ಪ್ರಮುಖವಾದವು ಟಿಕ್ ಟಾಕ್ ಮತ್ತು ಪಬ್ಜಿ.

ಈಗ ರಾಜ್ಯದಲ್ಲಿ ಡ್ರಗ್‌ಸ್‌, ಅಂದರೆ ಮಾದಕ ದ್ರವ್ಯದ್ದೇ ಸುದ್ದಿ. ಇಬ್ಬರು ನಟಿಯರು – ಸಂಜನಾ ಮತ್ತು ರಾಗಿಣಿ ದ್ವಿವೇದಿ ಸೇರಿ ಹಲವರ ಬಂಧನವಾಗಿದೆ. ಹೀಗಾಗಿ ಇದೇ ಈಗ ಪ್ರಮುಖ ಸುದ್ದಿ. ಇದರ ಮುಂದೆ ಕರೋನಾ ಕೂಡ ಹಿಂದೆ ಸರಿದಿದೆ. ಇವೆರಡೂ ಸುದ್ದಿಗಳನ್ನು ಇಲ್ಲಿ ಪ್ರಸ್ತಾಪ ಮಾಡಿರುವ ಉದ್ದೇಶವಿಷ್ಟೆೆ. ಯಾವುದೇ ವಿಷಯವಾದರೂ ಸರಿ. ಏನಾದರೊಂದು ಗಂಭೀರ ಸಂಗತಿ ಘಟಿಸಿದಾಗ ಮಾತ್ರ ನಾವು ಕಣ್ಣು ತೆರೆಯುತ್ತೇವೆ. ಅದುವರೆಗೆ ಅದರ ಬಗ್ಗೆ ಗಮನವನ್ನೇ ಹರಿಸಿರುವುದಿಲ್ಲ. ಅಥವಾ ಅದನ್ನು
ನಿರ್ಲಕ್ಷಿಸಿರುತ್ತೇವೆ. ಹೀಗೆ ಏನಾದರೊಂದು ಸಂದರ್ಭ ಬಂದೊಡನೆ ಬೇರೆ ಯಾವುದೂ ಸುದ್ದಿಗಳೇ ಅಲ್ಲದವರಂತೆ, ಚಾವಣಿ ಹಾರಿ ಹೋಗುವಂತೆ, ಆಕಾಶ ಭೂಮಿ ಒಂದಾಗುವಂತೆ ಸದ್ದು ಮಾಡತೊಡಗುತ್ತೇವೆ. ಗುದ್ದು ನೀಡುತ್ತೇವೆ.

ಚೀನದ ವಿಷಯಕ್ಕೆ ಮತ್ತೆ ಬರೋಣ. ಗಡಿಯಲ್ಲಿ ನಡೆದ ಘರ್ಷಣೆ ಬಗ್ಗೆೆ ರಾಜಕೀಯ ಆರೋಪ ಪ್ರತ್ಯಾರೋಪಗಳು ಒತ್ತಟ್ಟಿಗಿರಲಿ. ದೇಶದ ಸುರಕ್ಷತೆಯ ವಿಚಾರದಲ್ಲಿ ರಾಜಕೀಯ ಮಾಡಬೇಕೆ ಬೇಡವೆ ಎಂಬುದು ಚರ್ಚೆಯ ಮತ್ತೊೊಂದು ಮಗ್ಗಲು. ಆದರೆ
ಈ ಬಿಕ್ಕಟ್ಟಿಗೆ ನಾವು ಅಂದರೆ ಕೇಂದ್ರ ಸರಕಾರ ತೋರಿದ ದಿಢೀರ್ ಪ್ರತಿಕ್ರಿಯೆಯ (ನೀ ಜರ್ಕ್ ರಿಯಾಕ್ಷನ್) ಕುರಿತು ಒಂದಷ್ಟು ಮಾತುಗಳನ್ನು ಹೇಳಬೇಕಾಗಿದೆ.

ಮೊದಲ ಕಂತಿನಲ್ಲಿ 58 ಹಾಗೂ ಹಾಗೂ ತೀರ ಇತ್ತೀಚೆಗೆ ಮತ್ತೆ 158 ಚೀನೀ ಆ್ಯಪ್‌ಗಳನ್ನು ನಿಷೇಧಿಸಲಾಯಿತು. ಇವುಗಳಲ್ಲಿ ಸಾಕಷ್ಟು ಆ್ಯಪ್‌ಗಳು ನಾವು ಅತಿಯಾಗಿ ಬಳಸುತ್ತಿದ್ದಂಥವು. ಟಿಕ್‌ಟಾಕ್ ಮತ್ತು ಪಬ್‌ಜಿ – ಇವು ಈ ಪೈಕಿ ಪ್ರಮುಖವಾಗಿ ಹೆಸರಿಸಬಹುದಾದಂಥವು. ಟಿಕ್‌ಟಾಕ್‌ಗೆ ಜನರು ಎಷ್ಟು ಅಡಿಕ್‌ಟ್‌ ಆಗಿದ್ದರು ಎಂದರೆ ಅನೇಕರು ಅದನ್ನು ಕಸುಬಾಗಿ ಮಾಡಿ ಕೊಂಡಿದ್ದರು. ಒಳ್ಳೆಯ ಆದಾಯ ಗಳಿಸುತ್ತಿದ್ದರು. ಟಿಕ್ ಟಾಕ್ ಸ್ಟಾರ್ ಗಳಾಗಿದ್ದರು. ಅಸಂಖ್ಯಾತ  ಫಾಲೋವರ್ಸ್ ‌ಗಳಿದ್ದರು. ಪಬ್‌ಜಿ ಗೇಮ್ ಅಂತೂ ಯುವಜನಾಂಗಕ್ಕೆ ಹುಚ್ಚು ಹಿಡಿಸಿತ್ತು. ಸಾಕಷ್ಟು ಮಂದಿ ಅದರ ದಾಸರಾಗಿದ್ದರು. ಈ ಎರಡು ಆ್ಯಪ್‌ಗಳ ಬಗ್ಗೆ ವಿರೋಧವೂ ಸಾಕಷ್ಟು ಇತ್ತು. ಲಾಭಕ್ಕಿಿಂತ ನಷ್ಟ ಹೆಚ್ಚು ಎಂಬ ಅಭಿಪ್ರಾಯ ಹೆಚ್ಚಾಗಿತ್ತು.

ಆದರೆ ಆಗ ಇವುಗಳನ್ನು ನಿಷೇಧಿಸುವ ಮನಸ್ಸು ಮಾಡದ ಸರಕಾರ, ಇದೀಗ ಚೀನಾದೊಡನೆ ಸಂಘರ್ಷದ ನೆಪ ಮಾಡಿ ಇಂಥ ದೊಂದು ಕ್ರಮಕ್ಕೆ ಮುಂದಾಗಿದೆ. ಇದು ಒತ್ತಟ್ಟಿಗಿರಲಿ. ಚೀನಾ ಜತೆಗಿನ ವ್ಯಾಪಾರ ವಹಿವಾಟಿನ ಮೇಲೂ ದೊಡ್ಡಮಟ್ಟಿನ
ಪರಿಣಾಮ ಬೀರಿದೆ. ಅನೇಕ ಚೀನಿ ಹೂಡಿಕೆಗಳನ್ನು ಸರಕಾರ ನಿಷೇಧಿಸಿದೆ. ಆಮದನ್ನು ನಿಷೇಧಿಸಿದೆ ಇಲ್ಲವೆ ನಿರ್ಬಂಧಿಸಿದೆ. ಹಾಗಾದರೆ ಇದರ ಪರಿಣಾಮವೇನು ಎಂಬುದನ್ನೂ ನಾವು ಯೋಚಿಸಬೇಕು. ಸುಮ್ಮನೆ ಒಂದು ಚಿತ್ರಣವನ್ನು ಗಮನಿಸೋಣ. ಭಾರತ-ಚೀನಾ ನಡುವಿನ ವ್ಯಾಾಪಾರದ ಪ್ರಮಾಣ ಇದಕ್ಕೆ ಮುನ್ನ

ಎಷ್ಟಿತ್ತು ಗೊತ್ತೆ? ಆಮದು 75.5 ಶತಕೋಟಿ ಡಾಲರ್ ನಷ್ಟು. ರಫ್ತುು ಕೇವಲ 16.6 ಶತಕೋಟಿ ಡಾಲರ್. ಅಂದರೆ ಆಮದು – ರಫ್ತಿನ ನಡುವೆ ಐದು ಪಟ್ಟಿಗೂ ಅಧಿಕ ಅಂತರ. ಇದರ ಅರ್ಥ, ನಾವು ಚೀನಾಗೆ ಕಳಿಸುವ ಸರಕಿಗಿಂತ ಅಲ್ಲಿಂದ ತರಿಸಿಕೊಳ್ಳುವುದೇ ಹೆಚ್ಚು. ಆಮದಿನಲ್ಲಿ ತಂತ್ರಜ್ಞಾನ, ಆಟೊಮೊಬೈಲ್ ಮತ್ತು ಔಷಧದ ಪಾಲು ಅತ್ಯಧಿಕ. ಉದಾಹರಣೆಗೆ ನಾವು ಕೊಳ್ಳುವ ಬಹುತೇಕ ಮೊಬೈಲ್‌ಗಳು ಚೀನೀ ಮೂಲದವೇ. ಈಗ ಅವುಗಳ ಮೇಲೆ ನಿಷೇಧ ಹೇರಿದರೆ ನಮಗೆ ಆಯ್ಕೆಗಳಿರುವುದಿಲ್ಲ. ಅಥವಾ ನಮ್ಮಲ್ಲಿ ಹೇಳಿಕೊಳ್ಳುವಂಥ ಮೊಬೈಲ್ ಬ್ರ್ಯಾಾಂಡ್‌ಗಳಿಲ್ಲ. ಕಂಪ್ಯೂಟರ್, ಟಿವಿ ಮೊದಲಾದ ವಸ್ತುಗಳು ಹಾಗೂ ಅವುಗಳ ಬಿಡಿಭಾಗಗಗಳ ಮೇಲೆ ನಾವು ಅತಿಯಾಗಿ ಅವಲಂಬಿಸಿದ್ದೇವೆ. ಈಗ ನಿಷೇಧದ ಬಳಿಕ ಕಚ್ಚಾವಸ್ತು ಅಥವಾ ಸಿದ್ಧವಸ್ತುಗಳ ಪೂರೈಕೆ ಇಲ್ಲದೆ ನಾವು ಬೇರೆಯವರತ್ತ ನೋಡಬೇಕಾಗುತ್ತದೆ. ಇದರಿಂದ ವಸ್ತುಗಳ ಕೊರತೆಯಾಗುತ್ತದೆ. ಜತೆಗೆ ದುಬಾರಿಯೂ
ಆಗಬಹುದು. ಅದೇ ರೀತಿ ಭಾರತವು ಔಷಧ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ ಅದಕ್ಕೆ ಬೇಕಾದ ಮೂಲಸರಕು (ಬಲ್‌ಕ್‌ ಡ್ರಗ್ ಎಂದು ಇದನ್ನು ಕರೆಯುತ್ತಾರೆ) ಚೀನಾದಿಂದ ಬರಬೇಕು. ಆದರೆ ಈಗ ಅಲ್ಲಿಂದ ಪೂರೈಕೆ ನಿಂತರೆ ಸಿದ್ಧ ಸರಕು ಗಳನ್ನು ಉತ್ಪಾದಿಸುವುದು ಹೇಗೆ ಸಾಧ್ಯ? ಹೀಗಾಗಿ ಭಾರತೀಯ ಔಷಧೋದ್ಯಮವು ಭಾರಿ ಆತಂಕದಲ್ಲಿದೆ. ಇಷ್ಟು ಮಾತ್ರವಲ್ಲದೆ ಸಕಲ ಪ್ಲಾಸ್ಟಿಕ್ ಉತ್ಪನ್ನಗಳಿಂದ ಹಿಡಿದು ಪಟಾಕಿ, ಆಕಾಶ ಬುಟ್ಟಿ, ಕೊನೆಗೆ ರಾಷ್ಟ್ರಧ್ವಜದ ವರೆಗೂ ಚೀನಿ ಸರಕುಗಳು ನಮ್ಮ ಮಾರುಕಟ್ಟೆೆಗೆ ಲಗ್ಗೆೆ ಇಟ್ಟಿವೆ.

ಅಥವಾ ಇವುಗಳನ್ನು ತಂದು ಸುರಿಯಲು ನಾವು ಅವಕಾಶ ಮಾಡಿಕೊಟ್ಟಿದ್ದೇವೆ. ಇದೀಗ ಏಕಾಏಕಿ ನಿರ್ಬಂಧ ಹೇರಿದರೆ ಆ ಒಂದು ಪೂರೈಕೆ ಸರಪಳಿ ತುಂಡಾಗುವುದರಿಂದ ಎಲ್ಲ ಏರುಪೇರಾಗುತ್ತದೆ. ಜತೆಗೆ ಚೀನಾ ಕೂಡ ನಮ್ಮ ಮೇಲೆ ಪ್ರತೀಕಾರ ಕ್ರಮ
ತೆಗೆದುಕೊಳ್ಳದೇ ಇರುವುದೇ? ಇದೊಂದು ಸಂದಿಗ್ಧ ಪರಿಸ್ಥಿತಿಯಲ್ಲದೆ ಮತ್ತೇನು? ಮೊತ್ತಮೊದಲನೆಯಾಗಿ ಬೇಕು ಬೇಡವಾದು ದೆಲ್ಲಕ್ಕೂ ನಾವು ಚೀನದ ಮೇಲೆ ಅವಲಂಬಿತವಾಗಿದ್ದು ಮೊದಲ ತಪ್ಪು. ಹೀಗೊಂದು ದಿನ ಬರಬಹುದು ಅಂತ ಊಹಿಸಿ ಇತರರ ಜತೆಗೂ ವ್ಯಾಪಾರ ಸಂಬಂಧವನ್ನು ಚೆನ್ನಾಗಿ ಹೊಂದಿದ್ದರೆ ನಮಗೆ ಇಷ್ಟರ ಮಟ್ಟಿನ ಸಮಸ್ಯೆ ಉಂಟಾಗುತ್ತಿರಲಿಲ್ಲವೇನೋ.

ಅದೇ ರೀತಿ ಈಗೀಗ ನಾವು ಮೇಕ್ ಇನ್ ಇಂಡಿಯಾ, ಸ್ಟ್ಯಾಾಂಡ್ ಅಪ್ ಇಂಡಿಯಾ, ಆತ್ಮನಿರ್ಭರ್ ಇತ್ಯಾದಿ ಮಾತುಗಳನ್ನು ಆಡುತ್ತೇವೆ. ಆದರೆ ಸ್ವಾವಲಂಬನೆ ಸಾಧಿಸುವುದು ಘೋಷಣೆ ಮಾಡಿದಷ್ಟು ಸುಲಭವಲ್ಲ. ಅದಕ್ಕೆ ಸಮಯ ಬೇಕು. ಸೂಕ್ತ ಸೌಲಭ್ಯಗಳು ಇರಬೇಕು. ಟಿಕ್ ಟಾಕ್‌ಗೆ ಪರ್ಯಾಯವಾಗಿ ಮಿತ್ರೋೋಂ ಅಂತ ಒಂದು ಆ್ಯಪ್ ಬಗ್ಗೆ ಭಾರಿ ಪ್ರಚಾರ ಮಾಡಲಾಯಿತು. ನೋಡಿದರೆ ಅದರಲ್ಲಿ ಭಾರತೀಯತೆ ಇಲ್ಲವೇ ಇಲ್ಲ. ಇಷ್ಟಕ್ಕೂ ಟಿಕ್ ಟಾಕ್ ಚೀನಾ ಮೂಲದ್ದಾದರೂ ಆ ದೇಶದಲ್ಲೇ ಅದರ ಬಳಕೆ ಇಲ್ಲ.

ಆದರೆ ನಮಗೆ ಅದು ಒಂದು ರೀತಿ ಅನಿವಾರ್ಯವಾಗಿತ್ತು. ಹಾಗೆಯೇ ಈಗ ಪಬ್ಜಿಗೆ ಬದಲಾಗಿ ಅದೇನೊ ಫೌಜಿ ಅಂತ ಮಾಡ
ಹೊರಟಿದ್ದಾಾರೆ. ಅದರ ಕಥೆ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕು. ಮಾದಕವಸ್ತು, ಅಂದರೆ ಡ್ರಗ್‌ಸ್‌ ದಂಧೆ ಎನ್ನಿ ಅಥವಾ
ಪಿಡುಗು ಎನ್ನಿ. ಇದು ನಿನ್ನೆ ಮೊನ್ನೆಯದಲ್ಲ. ಮೊದಲಿನಿಂದಲೂ ಈ ಸಮಸ್ಯೆ ಗಂಭೀರವಾಗಿಯೇ ಇದೆ. ಸೆಲೆಬ್ರಿಟಿಗಳು, ದೊಡ್ಡವ ರೆನ್ನಿಸಿಕೊಂಡವರಲ್ಲಿ ಡ್ರಗ್‌ಸ್‌ ಸೇವನೆ ಗೀಳು ಹೊಸದೇನಲ್ಲ. ಯುವಜನರಲ್ಲೂ ಈ ಚಟ ಜೋರಾಗಿಯೇ ಇರುತ್ತದೆ. ಹುಕ್ಕಾ ಬಾರ್ ಗಳಿವೆ. ರೇವ್ ಪಾರ್ಟಿಗಳು ನಡೆಯುತ್ತವೆ. ಇದೆಲ್ಲ ಎಲ್ಲರಿಗೂ ಗೊತ್ತಿರುವಂಥವೇ. ಹಾಗೆಂದು ಇದು ನಮ್ಮ ರಾಜ್ಯಕ್ಕೆ ಮಾತ್ರ ಸಿಮಿತವಾದ ಸಮಸ್ಯೆಯಲ್ಲ. ಮಾದಕವಸ್ತು ಪಿಡುಗಿನ ವಿರುದ್ಧದ ಹೋರಾಟವೂ ದೊಡ್ಡಮಟ್ಟದಲ್ಲೆ ಇದೆ. ಅದರ ದುಷ್ಪರಿ ಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಒಂದು ದಿನವೇ ಮೀಸಲಾಗಿದೆ.

ಉಡ್ತಾ ಪಂಜಾಬ್ ಎಂಬ ಚಿತ್ರವೇ ಬಂದಿತ್ತಲ್ಲ. ಕರ್ನಾಟಕವು ಉಡ್ತಾ ಪಂಜಾಬ್ ಆಗಲು ಬಿಡುವುದಿಲ್ಲ ಎಂಬ ಮಾತುಗಳೂ ಆಗಾಗ ಕೇಳಿಬರುತ್ತಿದ್ದವು. ಆದರೆ ಈಗ ಇದ್ದಕ್ಕಿಿಂದ್ದಂತೆ ಈ ವಿಷಯ ಧಿಗ್ಗನೆ ಎದ್ದು ನಿಂತಿದೆ. ಕೋಲಾಹಲ ಎಬ್ಬಿಸಿದೆ. ಅವರ ಬಂಧನ, ಇವರ ಬಂಧನ; ಆ ವಿಚಾರಣೆ ಈ ವಿಚಾರಣೆ ಎಂಬಿತ್ಯಾದಿ ವಿವರಗಳು ಕಿವಿಗೆ ಅಪ್ಪಳಿಸುತ್ತಿವೆ. ಡ್ರಗ್‌ಸ್‌ ನಂಟು, ಅದರ
ದುಷ್ಪರಿಣಾಮಗಳು, ಅದರ ಕಬಂಧ ಬಾಹುಗಳು, ಯಾರೆಲ್ಲ ಇದರ ಹಿಂದಿದ್ದಾರೆ ಇತ್ಯಾದಿ ವರದಿಗಳು ಪುಂಖಾನುಪುಂಖವಾಗಿ ಹರಿದುಬರುತ್ತಿವೆ. ಹಾಗಾದರೆ ಇಷ್ಟು ದಿನ ಇಲ್ಲದ ಸುದ್ದಿ ಈಗ್ಯಾಕೆ ಎಂದರೆ ಈಗ ಸೆಲೆಬ್ರಿಟಿಗಳು ಸಿಕ್ಕಿಬಿದ್ದಿದ್ದಾರೆ ಅದಕ್ಕೆ ಎಂಬಲ್ಲಿಗೇ ಅದು ಮುಗಿಯಬಹುದು. ಈ ಪ್ರಕರಣವೂ ಹತ್ತರ ಜತೆ ಹನ್ನೊೊಂದರಂತೆ, ಡ್ರಗ್‌ಸ್‌‌ನ ಹೊಗೆಯಂತೆ ಗಾಳಿಯಲ್ಲಿ
ಲೀನವಾಗಬಹುದು. ಇದಕ್ಕಿಿಂತ ದೊಡ್ಡ ಹಗರಣವೋ, ಸುದ್ದಿಯೋ, ವಿಪತ್ತೋ ಎದುರಾದಾಗ ಎಲ್ಲರೂ ಅದರ ಬೆನ್ನು ಹತ್ತು ತ್ತಾರೆ. ಆಗ ಇದು ತಾನೇ ತಾನಾಗಿ ನೇಪಥ್ಯ ಸೇರುತ್ತದೆ.
ಹಾಗೆಂದು ಇದು ಒಂದೆರಡು ಪ್ರಕರಣಗಳ ಕಥೆಯಲ್ಲ. ಯಾವಾಗಲೂ ಅಷ್ಟೇ. ಹಳೆಯದು ಹಿಂದೆ ಸರಿದಂತೆ ಹೊಸತು ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಬಹುಶಃ ಇದೇ ನಮ್ಮ ಜಾಯಮಾನವೂ ಇರಬಹುದೇನೊ. ಯಾವ ಸುದ್ದಿ ಓಡುತ್ತದೆಯೋ ಅದರ ಹಿಂದೆ ಓಡುತ್ತಿರುತ್ತೇವೆ. ಬೇರೊಂದು ಕುದುರೆ ಬಂದರೆ ಅದನ್ನು ಏರುತ್ತೇವೆ. ಒಂದೆರಡು ಸ್ಯಾಾಂಪಲ್‌ಗಳನ್ನು
ನೋಡೋಣ., ಕೊಳವೆಬಾವಿಗೆ ಬಾಲಕ ಅಥವಾ ಬಾಲಕಿ ಬಿದ್ದ ಪ್ರಕರಣವನ್ನು ತೆಗೆದುಕೊಳ್ಳಿ. ಸುದ್ದಿ ವರದಿಯಾಗುತ್ತಿದ್ದಂತೆ ಸರಕಾರದ ನಿರ್ಲಕ್ಷ್ಯ, ಈ ರೀತಿಯ ಎಷ್ಟು ಕೊಳವೆ ಬಾವಿಗಳಿವೆ ಇತ್ಯಾದಿ ವರದಿಗಳು ದಿನಗಟ್ಟಲೆ ಪ್ರಕಟವಾಗುತ್ತವೆ. ಆದರೆ ಇದರ ಬಗ್ಗೆ ಯಾರೂ ಈ ಮೊದಲು ಸ್ಟೋರಿ ಮಾಡಿರುವುದಿಲ್ಲ. ಅಥವಾ ಆ ಘಟನೆ ಹಳತಾದಂತೆ ಮತ್ತೆ ಆ ಕಡೆ ತಲೆ ಹಾಕುವುದೂ ಇಲ್ಲ. ಬಹುಮಹಡಿಯ ಕಟ್ಟಡ ಉರುಳಿ ಬಿದ್ದಾಗ ಮತ್ತೆ ಇವೆಲ್ಲ ರಿಪೀಟ್ ಆಗುತ್ತವೆ. ಈ ದುರ್ಘಟನೆಗೆ ಮೊದಲೇ ಆ ಕಟ್ಟಡಕ್ಕೆ ಅನುಮತಿ ಸಿಕ್ಕಿರುತ್ತದೆ. ಅಥವಾ ಅನುಮತಿ ಇಲ್ಲದೆಯೂ ಕಟ್ಟಡವನ್ನು ಕಟ್ಟಿರುತ್ತಾರೆ.

ಆಗ ಯಾರೂ ಈ ಅಂಶವನ್ನು ಗಮನಕ್ಕೆೆ ತರುವುದಿಲ್ಲ. ಒಮ್ಮೆ ಅವಘಡ ಸಂಭವಿಸಿದ ಬಳಿಕವಷ್ಟೇ ಎಲ್ಲರೂ ಎಕ್‌ಸ್‌‌ಪರ್ಟ್ ಕಾಮೆಂಟ್, ರನ್ನಿಿಂಗ್ ಕಾಮೆಂಟರಿ ನೀಡತೊಡಗುವುದು. ಎಲ್ಲಿಂದ ಎಲ್ಲಿಗೆ ಹೋದರೂ, ಯಾವ ಪ್ರಕರಣವನ್ನು ತೆಗೆದು ಕೊಂಡರೂ ಇದು ಹೀಗೆಯೇ. ಮುಂಚಿತವಾಗಿಯೇ ಹೀಗಲ್ಲ ಹೀಗೆ ಎಂದು ಹೇಳುವವವರು ಕಡಿಮೆ. ಸಮಸ್ಯೆೆಯಾದ ಬಳಿಕ ಅಳಿಗೊಂದು ಕಲ್ಲು ಎಂಬಂತೆ ಅದರ ಹಿಂದೆ ಬೀಳುತ್ತೇವೆ. ವಿಶೇಷವಾಗಿ, ಡ್ರಗ್‌ಸ್‌, ಚೀನಾವಸ್ತು ಮೊದಲಾದ ವಿಷಯಗಳಲ್ಲಿ ನಾವು ಗೊತ್ತಿದ್ದೂ ಗೊತ್ತಿಲ್ಲದಂತೆ ಇರುತ್ತೇವೆ. ಅಥವಾ ನಾವೇ ಆ ಸಮಸ್ಯೆೆಯನ್ನು ಬೆಳಯ ಬಿಡುತ್ತೇವೆ. ಅಂದರೆ ಮುಂದೆ
ಓಡು ಎನ್ನುವವವರೂ ನಾವೇ. ಅನಂತರ ಹಿಂದಿನಿಂದ ಹಿಡಿ ಎನ್ನುವವವರೂ ನಾವೇ. ಈ ಪರಿಸ್ಥಿತಿ, ಮನೋಭಾವ ಬದಲಾಗದೆ, ಆ ಸಂದರ್ಭದಲ್ಲಿ ಒಂದಷ್ಟು ಕ್ರಮ ಕೈಗೊಂಡ ಉಪಚಾರ ಮಾಡಿ ಸುಮ್ಮನಾದರೆ ಯಾವ ಸಮಸ್ಯೆೆಯೂ ದಡ ಮುಟ್ಟುವುದಿಲ್ಲ.

ನಾಡಿಶಾಸ್ತ್ರ

ಮಗುವನ್ನು ಚಿವುಟುವವರೂ ಇವರೇ ತೊಟ್ಟಿಲನ್ನು ತೂಗುವವವರೂ ಇವರೇ ಹೀಗಾದರೆ ಸಮಸ್ಯೆ ಬಗೆಹರಿಯುವುದೆಂತು ಮೊಸಳೆ ಕಣ್ಣೀರ ಸುರಿಸಿದರೇನು ಬಂತು.