Saturday, 23rd November 2024

ಅಹಿಂದ ನಾಯಕ ಅತೃಪ್ತಿ ತಣಿಸದಿದ್ದರೆ, ಆಪತ್ತು

ಅಶ್ವತ್ಥಕಟ್ಟೆ

ranjith.hoskere@gmail.com

ಭಾರತದಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಅಂಶವೂ ಕೊನೆಯಲ್ಲಿ ಕೊನೆಯಾಗುವುದು ‘ಜಾತಿಯ ವಿಷಯದಲ್ಲಿ’ ಅದರಲ್ಲಿಯೂ ರಾಜಕೀಯ ವಿಷಯದಲ್ಲಂತೂ ‘ಜಾತಿ’ಯಿಲ್ಲದೇ ವಿಷಯ ಮುಂದಕ್ಕೆ ಹೋಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ.

ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿದೆ ಆದರೂ, ಈ ಹಿಂದೆ ಬಹುತೇಕ ರಾಜ್ಯ ಗಳಲ್ಲಿ ಚುನಾವಣೆ ನಡೆಯು ತ್ತಿದದ್ದು ಜಾತಿಯ ಲೆಕ್ಕಾಚಾರದಲ್ಲಿ. ದಕ್ಷಿಣ ಭಾರತದ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಜಾತಿಗಿಂತ ಹೆಚ್ಚಾಗಿ, ವ್ಯಕ್ತಿ ನೋಡಿ ಮತಹಾಕಿದರೆ, ಕರ್ನಾಟಕದಲ್ಲಿ ಮಾತ್ರ ಜಾತಿಯ ಆಧಾರದಲ್ಲಿಯೇ ಚುನಾವಣೆಗಳು ನಡೆಯುತ್ತವೆ. ಅದರಲ್ಲಿಯೂ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಮತದಾರರನ್ನು ಒಲಿಸಿಕೊಂಡರೆ ಶೇ.೭೦ರಷ್ಟು ಚುನಾವಣೆ ಗೆದ್ದಂತೆ ಎನ್ನುವುದು ಬಹುತೇಕ ರಾಜಕೀಯ ಪಕ್ಷಗಳ ಲೆಕ್ಕಚಾರ.

ಆದರೆ ರಾಜ್ಯ ಕಾಂಗ್ರೆಸ್‌ನಲ್ಲಿನ ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದರೆ, ಈ ಪ್ರಮುಖ ಸಮುದಾಯಗಳನ್ನೇ ನಿರ್ಲಕ್ಷ್ಯ ಮಾಡುವ ರೀತಿಯ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ. ಅಹಿಂದ ಸಮುದಾಯವನ್ನು ಕಾಂಗ್ರೆಸ್‌ನ ಬಹುದೊಡ್ಡ ವೋಟ್‌ಬ್ಯಾಂಕ್ ಎಂದೇ ವಿಶ್ಲೇಷಿಸಲಾಗುತ್ತದೆ. ರಾಜ್ಯದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ಕಾಂಗ್ರೆಸ್ ಪರವಾಗಿ ಹೇಳಿಕೊಳ್ಳುವಂತೆ ನಿಲ್ಲದಿದ್ದರೂ, ಅಹಿಂದ ಮತಗಳ ಸಹಾಯದಿಂದ ಕಾಂಗ್ರೆಸ್ ಕರ್ನಾಟಕದಲ್ಲಿ ಭದ್ರಕೋಟೆಯನ್ನು ನಿರ್ಮಿಸಿಕೊಂಡಿತ್ತು. ಆದರೆ ಕಾಂಗ್ರೆಸ್‌ನಲ್ಲಿ ಇತ್ತೀಚಿಗೆ ನಡೆಯುತ್ತಿರುವ ಬೆಳೆವಣಿಗೆಯನ್ನು ಗಮನಿಸಿದರೆ, ಈ ಅಹಿಂದ ಸಮುದಾಯದ ನಾಯಕರೇ ಅಸಂತುಷ್ಟರಾಗಿ, ಪಕ್ಷದಿಂದ ಹೊರ ನಡೆಯುತ್ತಿರುವುದು ಇಲ್ಲವೇ, ಪಕ್ಷದಲ್ಲಿದ್ದುಕೊಂಡು ಪಕ್ಷದ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕುತ್ತಿರುವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ.

ಹಾಗೇ ನೋಡಿದರೆ ಕರ್ನಾಟಕದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗರ ಪ್ರಾಬಲ್ಯ ಉತ್ತಮ ರೀತಿಯಲ್ಲಿದೆ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯಗಳ ಮತಗಳೇ ನಿರ್ಣಾಯಕ ಪಾತ್ರವನ್ನುವಹಿಸುತ್ತವೆ. ಈ ಎರಡು ಸಮು ದಾಯಗಳು ಒಂದೊಂದು ಪ್ರಾಂತ್ಯದಲ್ಲಿ ಮಾತ್ರ ನಿರ್ಣಾಯಕ ಪಾತ್ರವಹಿಸಿದರೆ, ಅಹಿಂದ ಸಮುದಾಯದ ಮತಗಳು
ರಾಜ್ಯದ ಬಹುತೇಕ ಭಾಗದಲ್ಲಿ ನಿರ್ಣಾಯಕ ಪಾತ್ರ ವನ್ನು ವಹಿಸುತ್ತಿವೆ. ಆದ್ದರಿಂದಾಗಿಯೇ, ಕಾಂಗ್ರೆಸ್ ಇಲ್ಲಿಯವರೆಗೆ ಅಹಿಂದ ಮತಗಳನ್ನು ನೆಚ್ಚಿಕೊಂಡೇ ಚುನಾವಣೆ ನಡೆಸಿವೆ.

ಆದರೀಗ ಕಾಂಗ್ರೆಸ್‌ನಲ್ಲಿರುವ ಹಲವು ನಾಯಕರು ಕಾಂಗ್ರೆಸ್‌ನಲ್ಲಾಗುತ್ತಿರುವ ಆಂತರಿಕ ರಾಜಕೀಯ ಮೇಲಾಟಕ್ಕೆ ಬೇಸತ್ತು ಪಕ್ಷ ದಲ್ಲಿದ್ದುಕೊಂಡೇ ಪಕ್ಷದ ನಾಯಕರ ವಿರುದ್ಧ ಹೋರಾಟ ಮಾಡುವ ಅಥವಾ ಪಕ್ಷದಿಂದಲೇ ಹೊರ ಬರಲು ಶುರುಮಾಡಿದ್ದಾರೆ. ಅಲ್ಪ ಸಂಖ್ಯಾತ ನಾಯಕರಾದ ಸಿ.ಎಂ. ಇಬ್ರಾಹಿಂ ಅವರಿಂದ ಶುರುವಾದ ಈ ಪರ್ವ ಇದೀಗ ಮುನಿಯಪ್ಪ ಅವರ ತನಕ ಬಂದು ನಿಂತಿದೆ.

ಇಬ್ರಾಹಿಂ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿದ್ದರೂ, ಡಿ.ಕೆ.ಶಿವಕುಮಾರ್ ಅವರ ಧೋರಣೆಯನ್ನು ಖಂಡಿಸಿ ಪಕ್ಷದಿಂದ ಹೊರಬಂದು ಜೆಡಿಎಸ್ ಕಡೆ ಹೊರಟರು. ಇದೇ ಹಾದಿಯಲ್ಲಿ ಅನೇಕ ನಾಯಕರು ನಿಂತಿದ್ದಾರೆ ಎನ್ನುವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ. ಈ ರೀತಿ ಪಕ್ಷದ ವಿರುದ್ಧವೇ ಬಂಡಾಯವೇಳುವುದುಕ್ಕೆ ಪ್ರಮುಖವಾಗಿ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಕಿತ್ತಾಟವೇ ಕಾರಣವೆಂದು ಹೇಳಲಾಗುತ್ತಿದೆ.

ಪ್ರಮುಖವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯಸಭಾ ಪ್ರತಿಪಕ್ಷ ನಾಯಕ
ಮಲ್ಲಿಕಾರ್ಜುನ ಖರ್ಗೆ ಅವರು ಅವರದ್ದೇಯಾದ ಗುಂಪೊಂದು ರಚಿಸಿಕೊಂಡು, ಆ ಗುಂಪಿಗೆ ಅಗತ್ಯವಿರುವಂತೆ ಕಾರ್ಯತಂತ್ರ ರಚಿಸುತ್ತಿದ್ದಾರೆ. ಅದರಲ್ಲಿಯೂ ‘ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆ ಬಂದಾಗ’ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣದ ನಡುವೆ ಬಹುದೊಡ್ಡ ಕಂದಕವೇ ಸೃಷ್ಟಿಯಾಗುತ್ತಿದೆ. ಈ ವಿಷಯ ಕೇವಲ ರಾಜ್ಯದಲ್ಲಿಯೇ ನಿಲ್ಲದೇ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿವರೆಗೆ ಹೋಗಿದೆ. ಸ್ವತಃ ರಾಹುಲ್ ಗಾಂಧಿ ಅವರು ಈ ಇಬ್ಬರನ್ನು ಸಮಾಧಾನಪಡಿಸಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಎನ್ನುವ ಸೂಚನೆ ನೀಡಿದರೂ, ಅದು ಪ್ರಾಯೋಗಿಕವಾಗಿ ಜಾರಿಯಾಗುತ್ತಿಲ್ಲ.

ಸಿದ್ದರಾಮಯ್ಯ ಅವರ ಆಪ್ತರನ್ನು ಆಯಕಟ್ಟಿನ ಜಾಗದಿಂದ ದೂರವಿಡುವ ಪ್ರಯತ್ನವನ್ನು ಅಧ್ಯಕ್ಷ ಸ್ಥಾನಕ್ಕೆ ಬಂದಾಗಿನಿಂದಲೂ ಡಿ.ಕೆ.ಶಿವಕುಮಾರ್ ಮಾಡಿಕೊಂಡು ಬಂದಿದ್ದಾರೆ. ಇದರ ಫಲವಾಗಿಯೇ, ಸಿ.ಎಂ ಇಬ್ರಾಹಿಂ ಪಕ್ಷದಿಂದ ದೂರವಾದರು. ಇದಾದ ಬಳಿಕ ಮುಖ್ಯಮಂತ್ರಿ ಚಂದ್ರು ಅವರು ಪಕ್ಷಕ್ಕೆ ಗುಡ್‌ಬೈ ಹೇಳಿ ಆಮ್ ಆದ್ಮಿ ಪಕ್ಷದತ್ತ ಮುಖಮಾಡಿದರು. ಈ ಇಬ್ಬರು ಪಕ್ಷವನ್ನೇ ತ್ಯಜಿಸಿ ಬೇರೆ ಪಕ್ಷಗಳತ್ತ ಮುಖಮಾಡಿದರೆ, ವಿಧಾನಪರಿಷತ್ ಮಾಜಿ ಸದಸ್ಯ ಲಕ್ಷ್ಮೀನಾರಾಯಣ, ಎಂ.ಆರ್. ಸೀತಾರಾಂ ಹಾಗೂ ಮುನಿಯಪ್ಪ ಅವರು ಪಕ್ಷದಲ್ಲಿದ್ದರೂ, ಪಕ್ಷದ ತೀರ್ಮಾನವನ್ನು ಬಹಿರಂಗವಾಗಿಯೇ ವಿರೋಽಸುತ್ತಿದ್ದಾರೆ. ಈ ಎಲ್ಲರೂ ಅಹಿಂದ ವರ್ಗಕ್ಕೆ ಸೇರಿದವರಾಗಿದ್ದು, ಮುಂದಿನ ಚುನಾವಣೆಯಲ್ಲಿ ಇದರ ನೇರ ಪರಿಣಾಮ ಪಕ್ಷದ ಬೀರಲಿದೆ ಎನ್ನುವ ಆತಂಕ ಪಕ್ಷದ ಹಲವರಲ್ಲಿದೆ.

ಈ ರೀತಿ ಏಕಾಏಕಿ ಅಸಮಾಧಾನ ಸೋಟಗೊಳ್ಳುವುದಕ್ಕೂ ಕಾರಣವಿದೆ. ಇತ್ತೀಚಿಗೆ ಮುಗಿದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿನ ಎರಡು ಸ್ಥಾನಗಳಿಗೆ, ಎಂ.ಆರ್ ಸೀತಾರಾಂ, ಎಂ.ಡಿ. ಲಕ್ಷ್ಮೀನಾರಾಯಣ, ಮುಖ್ಯಮಂತ್ರಿ ಚಂದ್ರು ಅವರು ಆಕಾಂಕ್ಷಿಗಳಾಗಿದ್ದರು. ಆದರೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಇವರ ಬದಲಿಗೆ ತಮ್ಮ ಆಪ್ತ ವಲಯದಲ್ಲಿದ್ದ ನಾಗರಾಜ್ ಯಾದವ್ ಹಾಗೂ ಅಬ್ದುಲ್ ಜಬ್ಬರ್ ಅವರಿಗೆ ಮಣೆ ಹಾಕಿದರು.

ಎಂ.ಡಿ. ಲಕ್ಷ್ಮೀನಾರಾಯಣ್ ಅವರು ಒಂದು ಹೆಜ್ಜೆ ಮುಂದೆ ಹೋಗಿ, ‘ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಖುರ್ಚಿ ಆಸೆಗೆ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದು ಇದೇ ಕಾರಣಕ್ಕೆ. ಈ ಎಲ್ಲರದ್ದು ಪರಿಷತ್ ಸೀಟಿನ ಮೇಲಿನ ಆಸೆಯಾದರೆ,
ಪಕ್ಷದ ನಿಷ್ಠಾವಂತ, ಹಿರಿಯ ಹಾಗೂ ವರಿಷ್ಠರ ಆಪ್ತವಲಯದಲ್ಲಿ ಕಾಣಿಸಿಕೊಂಡಿದ್ದ ಕೇಂದ್ರದ ಮಾಜಿ ರೈಲ್ವೇ ಸಚಿವ ಕೆ.ಎಚ್. ಮುನಿಯಪ್ಪ ಅವರದ್ದು ಇನ್ನೊಂದು ಸಮಸ್ಯೆ. ಆರಂಭದಲ್ಲಿ ಸ್ಥಳೀಯ ಸಮಸ್ಯೆಯಾಗಿ ಕಾಣಿಸಿಕೊಂಡರೂ, ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಮುನಿಯಪ್ಪ ಅವರು ಬಂದಿದ್ದಾರೆ.

ಕೋಲಾರದಲ್ಲಿ ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಅವರು ತಮ್ಮ ತಂಡ ದೊಂದಿಗೆ, ಮುನಿಯಪ್ಪ ಅವರ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಮುನಿಯಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ಸೋಲುವುದಕ್ಕೂ
ಇದೇ ಗ್ಯಾಂಗ್ ಕಾರಣವೆಂದು ಅನೇಕರು ಹೇಳಿದ್ದರು. ಇದೇ ವಿಷಯವನ್ನು ಮುನಿಯಪ್ಪ ಅವರು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದ ರಾಮಯ್ಯ ಅವರ ಬಳಿಕ ಹಲವು ಬಾರಿ ಪ್ರಸ್ತಾಪಿಸಿ, ಇದನ್ನು ಸರಿಪಡಿಸುವಂತೆ ಹೇಳಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಇದೀಗ ಬಹಿರಂಗವಾಗಿಯೇ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಮುನಿಯಪ್ಪ ಅವರು ಜೆಡಿಎಸ್‌ನತ್ತ ಮುಖಮಾಡಿದ್ದಾರೆ
ಎನ್ನಲಾಗುತ್ತಿದೆ. ಒಂದು ವೇಳೆ ಇದು ನಿಜವಾದರೆ, ಕಾಂಗ್ರೆಸ್‌ನಿಂದ ದಲಿತ ಸಮುದಾಯದ ಮತ್ತೊಂದು ಪ್ರಮುಖ ನಾಯಕ ಕೈಜಾರಿ ಹೋಗುವುದು ನಿಶ್ಚಿತವಾಗಲಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ಸಿ.ಎಂ.ಇಬ್ರಾಹಿಂ, ದಲಿತ ಸಮುದಾಯಕ್ಕೆ ಸೇರಿರುವ ಮುನಿಯಪ್ಪ, ಹಿಂದುಳಿದ ಸಮುದಾಯಕ್ಕೆ ಸೇರಿರುವ ಎಂ.ಡಿ. ಲಕ್ಷ್ಮೀ ನಾರಾಯಣ, ಎಂ.ಆರ್. ಸೀತಾರಾಂ. ಹೀಗೆ ಅಹಿಂದ
ಸಮುದಾಯದ ಪ್ರಮುಖ ನಾಯಕರು ಪಕ್ಷದಿಂದ ಹೊರಹೋಗುವುದು ಅಥವಾ ಪಕ್ಷದಿಂದ ಅಂತರಕಾಯ್ದುಕೊಂಡರೆ, ಮುಂದಿನ ಚುನಾವಣೆಯಲ್ಲಿ ಅಹಿಂದ ಮತಗಳು ಕೈಚೆಲ್ಲಿ ಹೋಗುವ ಆತಂಕದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.

ಈಗಲಾದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅತೃಪ್ತ ನಾಯಕರ ಸಭೆ ಕರೆದು, ಪಕ್ಷದಲ್ಲಿರುವ ಅಸಮಾಧಾನ, ಭಿನ್ನಮತವನ್ನು ಸರಿಪಡಿಸುವ ಕೆಲಸವನ್ನು ಮಾಡಬೇಕಿದೆ. ಇಲ್ಲದಿದ್ದರೆ, ಚುನಾವಣೆಯ ವೇಳೆಗೆ ಇನ್ನಷ್ಟು ‘ಆಘಾತ’ ಕಾಂಗ್ರೆಸ್ ಪಕ್ಷಕ್ಕೆ ಆಗಲಿದೆ. ಏಕೆಂದರೆ ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕೈಹಿಡಿದಿರುವುದು ಅಹಿಂದ ಮತಗಳೇ ಹೊರತು, ಒಕ್ಕಲಿಗ ಅಥವಾ ಲಿಂಗಾಯತ ಮತಗಳಲ್ಲ. ಕೇವಲ ಕರ್ನಾಟಕ ಮಾತ್ರವಲ್ಲದೇ, ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಇಲ್ಲಿಯವರೆಗೆ ಆಸರೆಯಾಗಿ ನಿಂತಿರುವುದು ಅಹಿಂದ ಮತದಾರರು.

ಈಗಾಗಲೇ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಹಿಂದ ಮತದಾರರನ್ನು ದೂರ ಮಾಡಿಕೊಂಡು, ಅಧಿಕಾರದಿಂದ ಬಹುದೂರ ಕಾಂಗ್ರೆಸ್ ಹೋಗಿದೆ. ಈ ಹಂತದಲ್ಲಿಯೂ ರಾಜ್ಯ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಳ್ಳದಿದ್ದರೆ ಕರ್ನಾಟಕದಲ್ಲಿಯೂ
ಚುನಾವಣಾ ಸಮಯದಲ್ಲಿ ಭಾರಿ ಬೆಲೆ ತೆರಬೇಕಾದೀತು.