Thursday, 19th September 2024

ಕನ್ನಡ ಉಳಿಸು – ಬೆಳೆಸು ಎನ್ನುವ ಅರಣ್ಯ ರೋದನ !

ಅಭಿವ್ಯಕ್ತಿ

ರಮಾನಂದ ಶರ್ಮಾ

ರಾಜ್ಯವು 65ನೇ ರಾಜ್ಯೋತ್ಸವವನ್ನು ಆಚರಿಸಿದೆ. ಕನ್ನಡಭಾಷೆಯನ್ನು ಉಳಿಸಿ – ಬೆಳೆಸುವ ಘೋಷಣೆ ಮುಗಿಲು ಮುಟ್ಟುತ್ತಿದೆ. ಡಿಸೆಂಬರ್ ತಿಂಗಳ ಅಂತ್ಯದವರೆಗೂ ಸಾಮಾನ್ಯವಾಗಿ ನಡೆಯವ ಇಂಥ ಸಮಾರಂಭ ಗಳಲ್ಲಿ, ಕನ್ನಡ ಭಾಷೆಯನ್ನು ಉಳಿಸಿ – ಬೆಳೆಸುವ ನಿಟ್ಟಿನಲ್ಲಿ ಭಾಗವಹಿಸಿದವರೆಲ್ಲ ಏರು ಧ್ವನಿಯಲ್ಲಿ ಸಲಹೆ ಸೂಚನೆಗಳನ್ನು ಕೊಡುತ್ತಾರೆ.

ಅಧಿಕಾರಸ್ಥರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ರಾಜಕೀಯ ಪಕ್ಷಗಳ ಮುಖ್ಯವಾಗಿ ರಾಷ್ಟ್ರೀಯ ಪಕ್ಷಗಳ ಇಚ್ಛಾಶಕ್ತಿಯನ್ನು ಮತ್ತು ಈ ವಿಷಯದಲ್ಲಿ ದೃಢನಿರ್ಧಾರ ತೆಗೆದುಕೊಳ್ಳಲಾಗದ ಅವರ ಅಸಹಾಯಕತೆ ಯನ್ನು, ಕನ್ನಡವನ್ನು ಬದುಕುವ ಮತ್ತು ಅನ್ನದ ಭಾಷೆ ಮಾಡಲಾಗದ ಅವರ ಬದ್ಧತೆಯನ್ನು ತೀವ್ರವಾಗಿ
ಪ್ರಶ್ನಿಸುತ್ತಾರೆ. ಈ ಅವಧಿಯಲ್ಲಿ ಕನ್ನಡವನ್ನು ಉಳಿಸಿ – ಬೆಳೆಸುವ ನಿಟ್ಟಿನಲ್ಲಿ ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಸಾಕಷ್ಟು ಚಿಂತನ ಮಂಥನವಾಗುತ್ತದೆ.

ಕನ್ನಡೇತರರನ್ನು ಹೋಲಿಸಿ ಕನ್ನಡಿಗರಿಗೆ ಭಾಷಾಭಿಮಾನ, ತಮ್ಮತನ ಇಲ್ಲವೆಂದು ಮತ್ತು ನಾಡು – ನುಡಿಗಾಗಿ ಹೆಮ್ಮೆ ಪಡುವುದಿಲ್ಲವೆಂದು ವ್ಯಾಕುಲತೆ ವ್ಯಕ್ತವಾಗುತ್ತದೆ. ಕನ್ನಡ – ನಾಡು – ನುಡಿ ಜಲ ರಕ್ಷಣೆಗೆ ಜನಪ್ರತಿ ನಿಧಿಗಳು ಇನ್ನೊಮ್ಮೆ ಟೊಂಕ ಕಟ್ಟುತ್ತಾರೆ ಮತ್ತು ಈ ನಿಟ್ಟಿನಲ್ಲಿ ಬದ್ಧತೆ ಇದೆ ಎಂದು ಉಚ್ಛಸ್ಥಾಯಿಯಲ್ಲಿ ಒಕ್ಕೊರಲಿನಿಂದ ಇನ್ನೊಮ್ಮೆ ಪ್ರತಿಜ್ಞೆ ಮಾಡುತ್ತಾರೆ. ಈ ಎಲ್ಲಾ ಅನಿಸಿಕೆ, ಆಕ್ರೋಶ, ಕನ್ನಡದ ಬಗೆಗಿನ ಕಳಕಳಿ ಮತ್ತು ಅಭಿಪ್ರಾಯಗಳ ಹಿಂದಿನ ರಿಯಾಲಿಟಿ ಚೆಕ್ ಮಾಡಿದಾಗ, ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಯನ್ನು ವಿಶ್ಲೇಷಿಸಿದಾಗ ಇವು ಸತ್ಯಕ್ಕೆ ದೂರವಾಗಿಲ್ಲ ಎನ್ನುವ ಕಹಿ ವಾಸ್ತವ ತೆರೆದಿಟ್ಟುಕೊಳ್ಳುತ್ತದೆ ಮತ್ತು ಅತೃಪ್ತಿಯು ಅನಾವರಣಗೊಳ್ಳುತ್ತದೆ.

1956ರಲ್ಲಿ ರಾಜ್ಯ ಪುನರ್ಘಟನೆ ಸಮಯದಲ್ಲಿ ನೆರೆಯ ಆಂಧ್ರ, ಮಹಾರಾಷ್ಟ್ರ, ತಮಿಳುನಾಡು, ಕೇರಳದಲ್ಲಿ ಹರಿದು ಹೋದ ಕನ್ನಡ ಭಾಷಿಕ ಪ್ರದೇಶಗಳನ್ನು ಒಟ್ಟುಗೂಡಿಸಿ ಕನ್ನಡಿಗರಿಗಾಗಿ ಕರ್ನಾಟಕ ರಾಜ್ಯವನ್ನು ಸ್ಥಾಪಿಸಲಾಯಿತು. ಆಂಧ್ರದ ಪೊಟ್ಟಿ ಶ್ರೀರಾಮುಲು ಅವರು ಭಾಷಾವಾರು ರಾಜ್ಯ ಸ್ಥಾಪನೆಗೆ ಆಮರಣ ಉಪವಾಸ ನಡೆಸಿದ ಫಲವಾಗಿ ಭಾಷಾವಾರು ರಾಜ್ಯಗಳೇನೋ ಸ್ಥಾಪನೆಯಾಯಿತು.

ಆದರೆ, ಹೆಚ್ಚು ಕನ್ನಡ ಭಾಷಿಕರಿರುವ ಆಂಧ್ರದ ಅಡೋಣಿ, ಮಹಾರಾಷ್ಟ್ರದ ಅಕ್ಕಲ ಕೋಟ, ಸಾಂಗಲಿ,
ಮಿರಜ್‌ಗಳು ಕರ್ನಾಟಕಕ್ಕೆ ಸೇರ್ಪಡೆಯಾಗಿಲ್ಲ. ತಮಿಳುನಾಡಿನ ತಾಳವಾಡಿ, ಕೇರಳದಲ್ಲಿರುವ ಕಾಸರ ಗೋಡಿನ ಕಥೆಯೂ ಇದೇ. ಮಹಾಜನ್ ಆಯೋಗ ಬೆಳಗಾವಿಯನ್ನು ಕರ್ನಾಟಕಕ್ಕೆ ನೀಡಿದರೂ, ಸದ್ಯ ಕರ್ನಾಟಕ ದಲ್ಲಿ ಇದ್ದರೂ, ಈ ವಿಷಯ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು, ಇನ್ನೂ ಕೊನೆಯ ಮಾತು
ಕೇಳಬೇಕಾಗಿದೆ. ಕರ್ನಾಟಕದ ಹೊರಗಿರುವ ಅಚ್ಚ ಕನ್ನಡ ಪ್ರದೇಶಗಳನ್ನು ಪಡೆಯುವ ಯಾವ ರಾಜಕೀಯ
ಪ್ರಯತ್ನವಾಗಿಲ್ಲ. ಹುಟ್ಟು ಹೋರಾಟಗಾರ ವಾಟಾಳ್ ನಾಗರಾಜರು ಆಗೊಮ್ಮೆ ಈಗೊಮ್ಮೆ ಧ್ವನಿ ಏರಿಸುವು ದನ್ನು ಬಿಟ್ಟರೆ ಈ ನಿಟ್ಟಿನಲ್ಲಿ ಯಾವುದೇ ರಾಜಕಾರಿಣಿ ಅಥವಾ ಕನ್ನಡ ಹೋರಾಟಗಾರರು ಬಾಯಿ ಬಿಡು ತ್ತಿಲ್ಲ. ಈ ಸಮಸ್ಯೆ ತನ್ನ ಅಂತ್ಯವನ್ನು ತಾನೇ ಕಂಡು ಕೊಂಡಿದೆ.

ಕನ್ನಡಿಗರ ಮತ್ತು ಕನ್ನಡದ ಹೆಮ್ಮೆಯ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಕನ್ನಡಿಗರ ಬ್ಯಾಂಕ್ ಎಂದೇ ಜನಮಾನಸದಲ್ಲಿ ಅಚ್ಚು ಮೂಡಿಸಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಏಪ್ರಿಲ್ 1, 2017ರಂದು ಬ್ಯಾಂಕುಗಳ ದೊಡ್ಡಣ್ಣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನವಾಗಿ ಬ್ಯಾಂಕಿಂಗ್
ಭೂಪಟದಿಂದ ಮರೆಯಾಯಿತು. ಈ ಗಾಯ ಇನ್ನೂ ಮಾಸುವ ಮೊದಲು, ಕನ್ನಡಿಗರು ಸಮಯವೇ ಮರೆಸುವ ಗುಳಿಗೆ ಎಂದು ಬದಲಾವಣೆಗೆ ಹೊಂದಿಕೊಳ್ಳುತ್ತಿರುವಂತೆ 104 ವರ್ಷಗಳ ಇತಿಹಾಸ ಉಳ್ಳ ಅತಿ ಸಣ್ಣ ಅವಧಿಯಲ್ಲಿ ಹೆಮ್ಮೆರವಾಗಿ ಬೆಳೆಯುತ್ತಿದ್ದ ಕರ್ನಾಟಕದ ಇನ್ನೊಂದು ಹೆಮ್ಮೆಯ ಬ್ಯಾಂಕ್ ಆದ, ವಿಜಯಾ ಬ್ಯಾಂಕನ್ನು ಗುಜರಾಥ್ ಮೂಲದ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳಿಸಿ, ಬ್ಯಾಂಕಿಂಗ್
ಭೂಪಟದಿಂದ ಈ ಬ್ಯಾಂಕನ್ನು ತೆಗೆದು ಹಾಕಲಾಯಿತು. ಈ ನಿಟ್ಟಿನಲ್ಲಿ ಸರಕಾರದ ಧ್ಯೇಯೋದ್ದೇಶ ಏನೇ ಇರಲಿ, ಕನಿಷ್ಠ ಒಂದು ರೆಕಾರ್ಡ್‌ಗಾದರೂ ಪ್ರತಿಭಟನೆ, ಆಕ್ರೋಶ ನಮ್ಮ ರಾಜ್ಯದಲ್ಲಿ ವ್ಯಕ್ತವಾಗಿಲ್ಲ. ನಮ್ಮ ಜನಪ್ರತಿನಿಧಿಗಳಂತೂ ತಮಗೆ ಸಂಬಂಧವಿಲ್ಲದ ವಿಷಯವೆಂದು ಮೌನ ವಹಿಸಿದರು.

ಕರ್ನಾಟಕ, ಮುಖ್ಯವಾಗಿ ಬೆಂಗಳೂರು ಒಂದು ಕಾಲಕ್ಕೆ ಉದ್ಯಮಗಳ ತವರಾಗಿತ್ತು. ದಿನವಿಡಿ ಕಾರ್ಮಿಕರನ್ನು ಹೊತ್ತ ಬಸ್ಸುಗಳು ರಸ್ತೆ ತುಂಬಾ ಕಾಣುತ್ತಿದ್ದವು. ಎಲ್ಲಿ ಉದ್ಯೋಗದಲ್ಲಿ ಇದ್ದೀರೆಂದು ಕೇಳಿದರೆ, ಎಚ್‌ಎಂಟಿ, ಎಚ್‌ಎಎಲ್, ಎನ್‌ಎಎಲ್, ಎನ್‌ಜಿಇಎಫ್, ಮೈಸೂರು ಲ್ಯಾಂಪ್ಸ್, ಬಿಪಿಎಲ್, ಐಟಿಐ, ಬಿಇಎಲ್, ಬಿಎಚ್‌ಇಎಲ್, ಬಿಇಎಂಎಲ್, ಬಿಎಂಎಲ್ ಎಂದು ಜನರು ಹೆಮ್ಮೆಯಿಂದ ಹೇಳುತ್ತಿದ್ದರು. ಈಗ ಹೊಸ ಸಂಸ್ಥೆಗಳು, ಉದ್ಯಮಗಳು, (ಐಟಿ ಕಂಪನಿಗಳನ್ನು ಬಿಟ್ಟು) ಕರ್ನಾಟಕಕ್ಕೆ ಮೊದಲಿನಂತೆ ಬರದಿರುವುದು ಬೇರೆ ಮಾತು. ವಿಷಾದವೆಂದರೆ, ಲಕ್ಷಾಂತರ ಜನರಿಗೆ ಬದುಕು ನೀಡಿದ್ದ ಹಲವು ಉದ್ಯಮಗಳು ಒಂದೊಂದಾಗಿ ಕಳಚಿಕೊಳ್ಳುತ್ತಿರುವುದು.

ದಶಕಗಳ ಕಾಲ ಕನ್ನಡಿಗರ ಬದುಕಿಗೆ ಆಸರೆ ನೀಡಿದ ಎನ್‌ಜಿಇಎಫ್ ಸ್ವಿಚ್ ಆಫ್ ಆಗಿದೆ. ಎಚ್‌ಎಂಟಿ ಟಿಕ್ ಟಿಕ್ ಎನ್ನುತ್ತಿಲ್ಲ. ಮೈಸೂರು ಲ್ಯಾಂಪ್ಸ್‌ ಆರಿದೆ. ಬಿಪಿಎಲ್ ಬಾಗಿಲು ಮುಚ್ಚಿದೆ. ಬಿಜಿಎಂಎಲ್‌ನಲ್ಲಿ ಬಂಗಾರ
ಬರಿದಾಗಿದೆ. ಮಣಿಪಾಲ ಪೈಗಳು ಬೆವರು ಸುರಿಸಿ ಬೆಳೆಸಿದ, ಬ್ಯಾಂಕಿಂಗ್ ಭೀಷ್ಮ ಟಿ.ಎಂ.ಎ. ಪೈಯವರ ಕನಸಿನ ಕೂಸು ಸಿಂಡಿಕೇಟ್ ಬ್ಯಾಂಕ್ ಸದ್ಯ ಕರ್ನಾಟಕ ಮೂಲದ ಕೆನರಾ ಬ್ಯಾಂಕ್ ನಲ್ಲಿ ವಿಲೀನವಾಗಿದ್ದು, ಮುಂದಿನ ದಿನಗಳಲ್ಲಿ ಏನೋ? ಕರ್ನಾಟಕದ ಇನ್ನೊಂದು ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ಮುಂಬೈ ಮೂಲದ ಯೂನಿಯನ್ ಬ್ಯಾಂಕ್‌ನಲ್ಲಿ ವಿಲೀನವಾಗಿ ಅಸ್ತಿತ್ವವನ್ನು ಕಳೆದುಕೊಂಡಿದೆ.

ರಾಷ್ಟ್ರೀಯ ಪ್ರವಾಹದಲ್ಲಿ ಪ್ರಾದೇಶಿಕತೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದು ತೀರಾ ಸಾಮಾನ್ಯ. ಆದರೆ ಇದು ಕರ್ನಾಟಕದಲ್ಲಿ ಮಾತ್ರ ಎದ್ದು ಕಾಣುತ್ತಿರುವುದನ್ನು ಪ್ರಜ್ಞಾವಂತರು ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಇಂದು ಐಟಿ ವಲಯದಲ್ಲಿ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾದರೂ, ಐಟಿಯನ್ನು ಆಕರ್ಷಿಸುವ
ರಾಜ್ಯದ ಕಾರ್ಮಿಕ ನೀತಿಯನ್ನು ಬಳಸಿಕೊಂಡು ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚು ಸಂಖ್ಯೆಯಲ್ಲಿ  ಐಟಿಯಲ್ಲಿ ಲಾಗ್ ಇನ್ ಆಗುತ್ತಿದ್ದಾರೆ. ಎಷ್ಟೋ ಉದ್ಯಮಗಳು ರಾಜ್ಯದಲ್ಲಿ ನೆಲೆಯೂರುವ ತನಕ ಬಂದು ನೆರೆಯ ರಾಜ್ಯಕ್ಕೆ ಜಾರಿದ ಉದಾಹರಣೆಗಳಿವೆ.

ಸುದೀರ್ಘ ಹೋರಾಟದ ನಂತರ ಕರ್ನಾಟಕಕ್ಕೆ ಐಐಟಿ ದೊರಕಿದೆ. ಚೆನ್ನೈ ಐಐಟಿಯಲ್ಲಿ ಸ್ಥಳೀಯರಿಗೆ ಶೇ.25
ಮೀಸಲಾತಿ ಇರುವಂತೆ ಈ ಭಾಗ್ಯ ಕರ್ನಾಟಕದಲ್ಲಿ ಕನ್ನಡಿಗರಿಗೂ ದೊರಕಲಿ. ಅದೇ ರೀತಿ ನ್ಯಾಷನಲ್ ಲಾ ಸ್ಕೂ ನಲ್ಲಿ ಕೂಡಾಕನ್ನಡಿಗರಿಗೆ ಮೀಸಲಾತಿ ಪ್ರಸ್ತಾಪ ನೆಲೆ ಕಾಣಲಿಲ್ಲ. ಕರ್ನಾಟಕ ಕೇವಲ ಈ ಸಂಸ್ಥೆಗಳಿಗೆ ಉಚಿತ ಭೂಮಿ ಮತ್ತು ಇತರ ಮೂಲ ಸೌಕರ್ಯಗಳನ್ನು ಒದಗಿಸಲು ಸೀಮಿತವಾಯಿತೇ ಎನ್ನುವ ಪ್ರಶ್ನೆಗೆ ಸಮರ್ಪಕ ಉತ್ತರ ದೊರಕುತ್ತಿಲ್ಲ. ಬೇರೆ ಬೇರೆ ರಾಜ್ಯದಲ್ಲಿ ಹಂಚಿ ಹೋಗಿದ್ದ ಕರ್ನಾಟಕದ ಎಲ್ಲಾ ರೈಲು ಮಾರ್ಗಗಳನ್ನು ಕರ್ನಾಟಕ ಕೇಂದ್ರಿಕೃತ ಒಂದೇ ರೈಲು ವಲಯದಲ್ಲಿ ತರಲು ನೈರುತ್ಯ ರೈಲು ವಲಯ ವನ್ನು ಸುದೀರ್ಘ ಹೋರಾಟದ ನಂತರ ಸ್ಥಾಪಿಸಲಾಯಿತು. ಈ ವಲಯ ಸ್ಥಾಪನೆಯಾಗಿ 25 ವರ್ಷಗಳಾದರೂ ಅದರ ಹಿಂದಿನ ಆ ಕನಸು ನನಸಾಗಲಿಲ್ಲ.

ಮಂಗಳೂರು ಪ್ರದೇಶವು ಕೊಂಕಣ, ಪಾಲಘಾಟ ವಿಭಾಗ ಮತ್ತು ಪಶ್ಚಿಮ ವಲಯದಲ್ಲಿ ಸೇರಿದ್ದರೆ, ಗುಲ ಬರ್ಗಾ ಮತ್ತು ಬಳ್ಳಾರಿ ವಿಭಾಗದ ರೈಲು ಮಾರ್ಗಗಳು ಇನ್ನೂ ದಕ್ಷಿಣ ಮಧ್ಯ ವಲಯದಲ್ಲಿವೆ. ಗುಲಬರ್ಗಾ ಮತ್ತು ಮಂಗಳೂರಿನಲ್ಲಿ ರೈಲು ವಿಭಾಗ ಗಳನ್ನು ಸ್ಥಾಪಿಸಬೇಕು ಎನ್ನುವ ದಶಕಗಳ ಕೂಗು ಇನ್ನೂ ಕಡತ ಬಿಟ್ಟು ಮೇಲೇಳಲಿಲ್ಲ. ಬೆಂಗಳೂರು – ಮಿರಜ್ ದ್ವಿಪಥ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಕರಾವಳಿಯನ್ನು ಉತ್ತರ ಕರ್ನಾಟಕದ ಹಿನ್ನಾಡಿಗೆ ಸೇರಿಸಿ ಆ ಭಾಗದ ಅಭಿವೃದ್ಧಿಗೆ ಚಾಲನೆ ಕೊಡಬಹುದಾದ ಹುಬ್ಬಳ್ಳಿ – ಅಂಕೊಲಾ ರೈಲು ಯೋಜನೆಯು ಅಂತ್ಯವಿಲ್ಲದ ನ್ಯಾಯಾಲಯದ ಹೋರಾಟದಲ್ಲಿ ಹಳಿ ತಪ್ಪಿದೆ.

ಕರ್ನಾಟಕದಲ್ಲಿ ರಾಜ್ಯದ ಒಳಗಿನ ಆಂತರಿಕ ರೈಲು ಸಂಪರ್ಕಕ್ಕಿಂತ ಹೊರರಾಜ್ಯಗಳಿಗೆ ಸಾಗುವ ರೈಲುಗಳೇ
ಹೆಚ್ಚು ಎನ್ನುವ ಮಾತು ಕೇಳಿಬರುತ್ತಿದೆ. ಕರ್ನಾಟಕದಲ್ಲಿ ಸುಮಾರು 50 ವೈದ್ಯಕೀಯ ಕಾಲೇಜುಗಳಿವೆ.
ಆದರೂ ರಾಜ್ಯದಲ್ಲಿ ಮುಖ್ಯವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತದೆ. ಈ ವೈದ್ಯ ಕೀಯ ಕಾಲೇಜುಗಳ ಸೌಲಭ್ಯವನ್ನು ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚು ಬಳಸಿಕೊಂಡರು ಎನ್ನುವ ಆರೋಪದಲ್ಲಿ ಸತ್ಯ ಕಾಣುತ್ತಿದೆ. ಈ ವೈದ್ಯಕೀಯ ಕಾಲೇಜುಗಳಿಂದ ಹೊರ ಬಂದ ವೈದ್ಯರು ಕನಿಷ್ಠ ಒಂದೆ ರಡು ವರ್ಷಗಳನ್ನಾದರೂ ರಾಜ್ಯದಲ್ಲಿ ಸೇವೆ ಸಲ್ಲಿಸುವಂತೆ ಮಾಡಲಾಗದ ಅಸಹಾಯಕತೆ ವಿಷಾದನೀಯ.

ಕೇಂದ್ರ ಸರಕಾರದ ಹೊಸ ಶಿಕ್ಷಣನೀತಿ ಕನ್ನಡದ ಅಸ್ತಿತ್ವಕ್ಕೆ ಮಾರಕಪೆಟ್ಟು ನೀಡುವ ಬಗೆಗೆ ಮಾತುಗಳು ಕೇಳಿ ಬರುತ್ತಿದೆ. ಈ ನೀತಿ ಪ್ರಕಾರ ಐದನೇ ತರಗತಿವರೆಗೆ ಮಾತೃಭಾಷೆ, ಮನೆ ಭಾಷೆ ಅಥವಾ ಪ್ರಾದೇಶಿಕ ಭಾಷೆ, ಶಿಕ್ಷಣ ಮಾಧ್ಯಮ ವಾಗಬೇಕು. ಕರ್ನಾಟಕವು ಬೇರೆ ಬೇರೆ ಭಾಷೆಗಳನ್ನಾಡುವ 6 ರಾಜ್ಯಗಳಿಂದ ಸುತ್ತು ವರಿಯಲ್ಪಟ್ಟಿದ್ದು ಉದ್ಯೋಗ, ಬಿಜಿನೆಸ್ ಮತ್ತು ಶಿಕ್ಷಣ ಅರಸಿ ಬಹುಸಂಖ್ಯೆೆಯಲ್ಲಿ ಈ ರಾಜ್ಯಗಳಿಂದ ಜನರು ವಲಸೆ ಬರುತ್ತಿದ್ದು, ಇವರು ಹೊಸ ಶಿಕ್ಷಣ ನೀತಿಯ ಪ್ರಕಾರ ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಕೇಳಿದರೆ, ಕನ್ನಡ ಭಾಷೆ ಉಳಿಯಬಹುದೇ? ಈನೀತಿಯನ್ನು ಸಂಬಂಧಪಟ್ಟ ರಾಜ್ಯದ ಪ್ರಾಾದೇಶಿಕ ಭಾಷೆ ಎಂದು ಬದಲಾಯಿಸದಿದ್ದರೆ ಕನ್ನಡಕ್ಕೆ ಅಪಾಯ ತಪ್ಪಿದಲ್ಲ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಡುತ್ತಾರೆ. ರಾಜ್ಯ ದಲ್ಲಿರುವ ಕೇಂದ್ರೋದ್ಯಮಗಳಲ್ಲಿ ನೇಮಕಾತಿ ಪರೀಕ್ಷೆಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ನಡೆಯು ತ್ತಿದ್ದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಉದ್ಯೋಗ ವಂಚಿತರಾಗುತಿದ್ದಾರೆ.

ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾದ ಹಣಕಾಸು ಮಂತ್ರಿಗಳು ಭರವಸೆ ನೀಡಿದರೂ, ಬ್ಯಾಂಕ್ ನೇಮಕಾತಿ ಪರೀಕ್ಷೆಗಳು ಕನ್ನಡದಲ್ಲಿ ನಡೆಯುತ್ತಿಲ್ಲ. ಈ ಬಾರಿಯೂ ಅದೆ ಹಾಡು ರಿಪೀಟ್ ಆಗುತ್ತಿದೆ. ಕನ್ನಡಿಗರ ಕೂಗು ದೆಹಲಿ ಮುಟ್ಟದೆ ಸರೋಜಿನಿ ಮಹಿಷಿ ವರದಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಯಾದ ಕಾಲದಿಂದ, ವಿಧಾನ ಸೌಧದ ಕಪಾಟಿನಲ್ಲಿ ಭದ್ರವಾಗಿದೆ. ಬೇರೆ ರಾಜ್ಯಗಳು ಮಣ್ಣಿನ ಮಕ್ಕಳ ಬಗೆಗೆ ಕ್ರಮ ತೆಗೆದುಕೊಂಡಾಗ ಸರೋಜಿನಿ ಮಹಿಷಿ ವರದಿ ನೆನಪಾಗಿ ಅಷ್ಟೇ ಬೇಗ ಮರೆಯಾಗುತ್ತದೆ.

ಬಹುತೇಕ ಕನ್ನಡೇತರರು ಸ್ಟಾರ್ ‌ಸ್ಫೋರ್ಟ್ಸ್‌‌ನಂಥ ವಿದೇಶಿ ವಾಹಿನಿಗಳನ್ನು ತಮ್ಮ ಭಾಷೆಯಲ್ಲಿ ಡಬ್ ಮಾಡಿಸಿಕೊಂಡು ನೋಡುತ್ತಾರೆ. ಕೆಲವು ಕನ್ನಡ ಪರ ಸಂಘಟನೆಗಳು ನಿರಂತರ ಹೋರಾಡಿ, ಈ ವಿದೇಶಿ ಚಾನೆಲ್‌ಗಳು ಕನ್ನಡದಲ್ಲೂ ದೊರೆಯುವಂತೆ ಮಾಡಿದವು. ಆದರೆ, ಕನ್ನಡಿಗರು ಇವುಗಳನ್ನು ಹೆಚ್ಚಾಗಿ ಹಿಂದಿ – ಇಂಗ್ಲಿಷ್‌ನಲ್ಲಿ ನೋಡುತ್ತಾರೆ ವಿನಃ ಕನ್ನಡದತ್ತ ಮುಖಮಾಡುವುದು ತೀರಾ ಕಡಿಮೆ ಎನ್ನಬಹುದು. ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡ ಒಂದು ಸಮೀಕ್ಷೆ ಪ್ರಕಾರ ಕನ್ನಡದ ಸ್ಫೋರ್ಟ್ಸ್‌ ಚಾನೆಲ್ ನೋಡು ವವರ ಸಂಖ್ಯೆ ಐದನೇ ಸ್ಥಾನದಲ್ಲಿದೆ.

ಕನ್ನಡವನ್ನು ಇನ್ನೂ ಬೆಳೆಸಬೇಕಾದ ಸಂದಿಗ್ದತೆಯಲ್ಲಿರುವಾಗ, ಕನ್ನಡ ಭಾಷೆ ಉಳಿಸಲು ಹೋರಾಟ ಮಾಡ ಬೇಕಾಗಿ ಬಂದಿರುವುದು ದುರ್ದೈವ. ಕರ್ನಾಟಕದಲ್ಲಿ ಬದುಕಲು ಕನ್ನಡ ಭಾಷೆ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರಕಾರ ಮತ್ತು ಜನತೆ ಎರಡೂ ಸೋತಿವೆ ಮತ್ತು ಗಂಭೀರತೆಯನ್ನು ತೋರಿಸಿಲ್ಲ. ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವ ಬದಲು ಕನ್ನಡ ಶಾಲೆಯನ್ನೇ ಕಡಿಮೆ ಮಾಡುವುದು
ಒಂದಾದರೆ, ಭಾಷೆ ಯಾವುದಾದರೂ ಆಗಲಿ ಎನ್ನುವ ಜನತೆಯ ನಿರ್ಲಿಪ್ತ ಭಾವನೆ ಮತ್ತು ಧಾರಾಳತನ, ಕನ್ನಡವನ್ನು ಇನ್ನೂ ಕುಗ್ಗಿಸಿದೆ.

ರಾಜ್ಯೋತ್ಸವದ ದಿನಗಳಲ್ಲಿ ಮಾತ್ರ ಜೋರಾಗಿ ಕೇಳುವ ಕನ್ನಡ ಉಳಿಸಿ ಬೆಳೆಸಿ ಘೋಷಣೆ ಕೇವಲ ಅರಣ್ಯ ರೋಧನ ಎಂದರೆ ತಪ್ಪಾಗಲಾರದು. ಕರ್ನಾಟಕದ ಅಭಿವೃದ್ಧಿ ಮತ್ತು ಕನ್ನಡವನ್ನು ಉಳಿಸಿ ಬೆಳೆಸಲು ಪ್ರಾದೇಶಿಕ ಪಕ್ಷದ ಅನಿವಾರ್ಯತೆಯನ್ನು ಕೆಲವರು ಪ್ರತಿಪಾದಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ರೆಕ್ಕೆ ಪುಕ್ಕಗಳು ಬಂದರೆ ಆಶ್ಚರ್ಯವಿಲ್ಲ. ಬೆಂಗಳೂರಿನ ಮೆಟ್ರೋ ಸ್ಟೇಷನ್‌ಗಳಲ್ಲಿ ಹಿಂದಿ ನಾಮಫಲಕಗಳ
ತೆಗೆಯುವ ಹೋರಾಟದ ನಂತರ ಕರ್ನಾಟಕದಲ್ಲಿ ಕನ್ನಡ ಜಾಗೃತಿ ತೀವ್ರವಾಗುತ್ತಿದೆ. ಮಾಮೂಲಾಗಿ ಕೇಳುವ ಕನ್ನಡ್ ಕನ್ನಡ ಗೊತ್ತಿಲ್ಲ ಕನ್ನಡಾಕನ್ನಡ ಸ್ವಲ್ಪ ಗೊತ್ತು ಹೀಗೆ ಪುನರ್ ವರ್ತಿತವಾಗುತ್ತಿವೆ.

ಸ್ವಲ್ಪ ತಡವಾದರೂ ಕನ್ನಡಿಗರಿಗೆ ಕನ್ನಡ ಪ್ರಜ್ಞೆ ಮೂಡುತ್ತಿರುವುದು ಗಮನಾರ್ಹ ಬೆಳವಣಿಗೆ. ಮುಖ್ಯ ಮಂತ್ರಿಗಳು ಘೋಷಿಸಿದ ವಿಸ್ತೃತ ಕನ್ನಡ ಕಾಯಕ ವರ್ಷ ಕಾಯಾ ವಾಚಾ ಮನಸಾ ಅನುಷ್ಠಾನಗೊಳ್ಳಲಿ. ಇದು ಅಂಗಡಿ ಮುಂಗಟ್ಟುಗಳಿಗೆ ಕಡ್ಡಾಯ ಕನ್ನಡ ನಾಮ ಫಲಕದಂತೆ ಆಗದಿರಲಿ ಎಂದು ಕನ್ನಡಿಗರು ಆಶಿಸುತ್ತಿದ್ದಾರೆ.

Leave a Reply

Your email address will not be published. Required fields are marked *