Sunday, 8th September 2024

ಜಾಗತಿಕ ಆಹಾರ ಮುಗ್ಗಟ್ಟು- ಅವಲೋಕನ

ಶಿಶಿರ ಕಾಲ

shishirh@gmail.com

ಕುಟುಂಬದ ಒಂದೊಳ್ಳೆಯ ಸದಸ್ಯನಾಗಿರಬೇಕೆಂದರೆ ಮೊದಲು ಆ ಮನೆಯ ಆರ್ಥಿಕತೆ ಸೇರಿದಂತೆ ಕುಟುಂಬವೆನ್ನುವ ಯಂತ್ರ ಹೇಗೆ
ಕೆಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಅದು ತಿಳಿದರೆ ಒಂದಷ್ಟು ಜವಾಬ್ದಾರಿ ಸಹಜವಾಗಿ ಹುಟ್ಟುತ್ತದೆ.

ಅದು ಮನೆಯ ಎಲ್ಲ ಸದಸ್ಯರಿಗೂ ಅವರ ವಯಸ್ಸಿಗೆ ತಕ್ಕಂತೆ, ತಕ್ಕಷ್ಟು ತಿಳಿದಿರಬೇಕು. ಕೆಲವೊಮ್ಮೆ ಹಿರಿಯರು – ಇಂಥದ್ದೆಲ್ಲ ರಗಳೆ ಕೊಡುವ ವಿಚಾರಗಳು ದೊಡ್ಡವರಿಗೇ ಉಳಿದು ಬಿಡಲಿ, ಚಿಕ್ಕವರಿಗೆ ಅದೆಲ್ಲ ಏಕೆ ಎಂದು ಒಂದು ತೆರನಾದ ಮಾಸ್ಕ್ ಅನ್ನು ಕುಟುಂಬ ದೊಳಕ್ಕೆ ನಿರ್ಮಿಸಿಕೊಂಡಿರುತ್ತಾರೆ. ಇದರಿಂದಾಗಿ ಚಿಕ್ಕವರು ಒಂದೋ ತೀರಾ ಅಬ್ಬೇಪಾರಿಗಳಾಗಿ, ಬೇಜವಾಬ್ದಾರಿಯಿಂದ ವ್ಯವಹರಿಸು ತ್ತಾರೆ. ಕುಟುಂಬ ನೀಗಿಸಲಾಗದ ತಮ್ಮ ಬೇಕುಗಳನ್ನು ಮುಂದಿಡುತ್ತಾರೆ ಅಥವಾ ತೀರಾ ಕಷ್ಟದಲ್ಲಿದ್ದೇವೆ ಯೇನೋ ಎಂದು ತಮ್ಮಷ್ಟಕ್ಕೆ ತಾವೇ ಅವಶ್ಯಕತೆಗಿಂತ ಹೆಚ್ಚಿನ ಮುಗ್ಗಟ್ಟಿನಲ್ಲಿ, ಭಿನ್ನ ಮಾನಸಿಕ ಒದ್ದಾಟದಲ್ಲಿ ಅದೇ ಮನೆಯಲ್ಲಿ ಬದುಕುತ್ತಿರುತ್ತಾರೆ.

ಕೆಲವೊಮ್ಮೆ ಇಂತಹ ಕ್ಷುಲ್ಲಕ ಕಾರಣಕ್ಕೆ ಮನೆಬಿಟ್ಟು ಓಡಿ ಹೋಗುವ ಮಕ್ಕಳನ್ನೂ ನೋಡುತ್ತೇವೆ. ಚಿಕ್ಕವರ ಈ ರೀತಿಯ ವ್ಯತಿರಿಕ್ತ ನಡೆಗೆ ದೊಡ್ಡವರ ಪ್ರೀತಿಯ ಕಾರಣ ದಿಂದ ಒದಗಿಸುವ ಕಂಫರ್ಟ್ ಜೋನ್ ಕಾರಣವಾಗಿರುತ್ತದೆ. ಈ ಮಾತು ಕುಟುಂಬವೊಂದಕ್ಕಷ್ಟೇ ಸೀಮಿತವಲ್ಲ. ಇದು ಒಂದು ಊರಿಗೆ, ಜಿಲ್ಲೆ, ರಾಜ್ಯ, ದೇಶಕ್ಕೆ ಕೂಡ ಲಾಗು ಆಗುತ್ತದೆ. ಪ್ರಜೆ ದೇಶದ ಆಗುಹೋಗುಗಳನ್ನು ಸಮಚಿತ್ತ ದಿಂದ, ಕರಾರುವಕ್ಕಾಗಿ ಗ್ರಹಿಸಿದರೆ ಅದೆಷ್ಟೋ ಗಂಡಾಂತರಗಳು ತಪ್ಪುತ್ತವೆ. ದೇಶದಗುವ ಮುಷ್ಕರಗಳ ಹಿಂದೆ, ವಸ್ತುಗಳು, ಆಹಾರ, ಪೆಟ್ರೋಲ್ ತುಟ್ಟಿಯಾಯಿತು ಎನ್ನುವ ಹರತಾಳಗಳ ಹಿಂದೆ ರಾಜಕೀಯದ ಜತೆ ನಾಗರಿಕನ ಅಪೂರ್ಣ ಜ್ಞಾನವೂ ಕಾರಣವಾಗಿರುತ್ತದೆ. ಅದನ್ನು ಆಡಳಿತ ಪಕ್ಷ ಮನದಟ್ಟು ಮಾಡುವಲ್ಲಿ ಸೋತಿರುತ್ತದೆ.

ಈ ಕಾರಣಕ್ಕೆ ಒಂದಿಡೀ ವ್ಯವಸ್ಥೆ, ದೇಶ, ಅದರಾಚೆಯ ವ್ಯಾಪ್ತಿಯಾದ ಜಾಗತಿಕ ವ್ಯವಹಾರಗಳು ಹೇಗೆ ಕೆಲಸ ಮಾಡುತ್ತವೆ ಮತ್ತು
ಅಂತಾರಾಷ್ಟ್ರೀಯ ಬೆಳವಣಿಗೆಗಳು ಯಾವ ರೀತಿ ಪರಿಣಾಮ ಬೀರಬಲ್ಲದು ಎನ್ನುವುದನ್ನು ಗ್ರಹಿಸುವುದು ಸತ್ಪ್ರಜೆಯ ಅವಶ್ಯಕತೆ. ಆಗ ಮಾತ್ರ ನಾವು ಕಟ್ಟಿಕೊಂಡ ಸಮಾಜ, ಈ ಜಗತ್ತಿನಲ್ಲಿ ಏಕೆ ಹೀಗಾಗುತ್ತಿದೆ ಎನ್ನುವುದರ ಅಂದಾಜು ಹತ್ತುತ್ತದೆ. ಅದಿಲ್ಲವಾದಲ್ಲಿ ‘ಹೀಗೇ ಕೆಂದು ತಿಳಿಯುತ್ತಿಲ್ಲ, ನನಗೆ ಸಂಬಂಧವಿಲ್ಲ, ನನಗೆ ಬೇಕಾದದ್ದು ಬೇಕು, ಅಷ್ಟೇ’ ಎಂದು ನಾಗರಿಕ ಹಠಕ್ಕೆ ಬೀಳುತ್ತಾನೆ, ದಂಗೆಯೇಳು ತ್ತಾನೆ.

ಸದ್ಯ ಜಗತ್ತಿನಲ್ಲ ಸುದ್ದಿಯಲ್ಲಿರುವುದು ಆಹಾರ ಸರಬರಾಜಿಗೆ, ಲಭ್ಯತೆಗೆ ಸಂಬಂಧಿಸಿದ್ದು. ಬಹುತೇಕ ಮಾಧ್ಯಮಗಳಲ್ಲಿ ಇದು ಸದ್ಯ ನಮ್ಮ ಮುಂದಿರುವ ಅತ್ಯಂತ ದೊಡ್ಡ ಸಮಸ್ಯೆಯೆಂದೇ ಬಿಂಬಿತವಾಗುತ್ತಿದೆ. ನೀವು ಅಲ್ಲಲ್ಲಿ ಇದಕ್ಕೆ ಪೂರಕ, ಸಂಬಂಧಿಸಿದ ಸುದ್ದಿಯನ್ನು ಕೇಳಿಯೇ ಇರುತ್ತೀರಿ. ಇತ್ತೀಚೆಗೆ ಭಾರತ ಗೋಧಿಯನ್ನು ಬೇರೆ ದೇಶಕ್ಕೆ ಮಾರುವುದಕ್ಕೆ ಅಂಕುಶ ಹಾಕಿದ್ದು, ಆ ಕಾರಣಕ್ಕೆ ಅಮೆರಿಕ,
ಯುರೋಪ್ ರಾಷ್ಟ್ರಗಳು ಗರಂ ಆದದ್ದು ಇದೆಲ್ಲದರ ಒಂದು ಭಾಗ.

ಒಟ್ಟಾರೆ ಈಗ ಜಾಗತಿಕ ಆಹಾರ ಲಭ್ಯತೆ ಮತ್ತು ಸರಬರಾಜು ಬುಡಮೇಲಾಗಿರುವುದು ಸತ್ಯ. ಇದಕ್ಕೆ ಕರೋನಾ ಒಂದೇ ಕಾರಣವಲ್ಲ. ಕರೋನಾ, ನಂತರದಲ್ಲಿ ಆದ ಬೆಳವಣಿಗೆ, ಉಕ್ರೇನ್-ರಷ್ಯಾ ಯುದ್ಧ ಹೀಗೆ ಒಂದೊಂದು ಕೋನದಲ್ಲಿ ನೋಡಿದಾಗ ಇದುವೇ ಪೂರ್ಣ ಕಾರಣ ಎಂದೆನಿಸುತ್ತದೆ. ತಾನು ಕೊಡುವ ಕಾರಣವೇ ಪರಮ ಸತ್ಯವೆಂದು, ಅದು ಹೂಬೇ ಹೂಬು ಎನ್ನುವ ರೀತಿಯಲ್ಲಿ ಸರಣಿ ವರದಿ
ಗಳು ಕೆಲವೊಮ್ಮೆ ದಾರಿ ತಪ್ಪಿಸುತ್ತವೆ. ಇದೆಲ್ಲ ಕಾರಣಗಳನ್ನು ಸಮಗ್ರವಾಗಿ ಗ್ರಹಿಸಿದಾಗ ಮಾತ್ರ ಸ್ಪಷ್ಟತೆ ನಮ್ಮದಾಗುತ್ತದೆ.

ಮೊದಲನೆಯದಾಗಿ ಕರೋನಾ: ಸಾಂಕ್ರಾಮಿಕದಿಂದಾಗಿ ನಾವೆಲ್ಲ ಕಟ್ಟಿಕೊಂಡ ಜಾಗತಿಕ ಸಪ್ಲೈ ಚೈನ್ ಮುರಿದು ಬಿದ್ದಿದೆ. ಇದಕ್ಕೆ ಕಾರಣ ಒಮ್ಮಿಂದೊಮ್ಮೆಲೇ ಕಡಿಮೆಯಾದ, ನಂತರದಲ್ಲಿ ಒಮ್ಮೆಲೇ ಮಿತಿಮೀರಿದ ಅವಶ್ಯಕತೆಗಳು ಮತ್ತು ಉತ್ಪಾದನೆ. ನಮ್ಮೆಲ್ಲ ಅವಶ್ಯಕತೆ ಗಳಿಗೆ ಅವಲಂಬನೆ ಮಾನವ ಸಂಪನ್ಮೂಲ ಮತ್ತು ಭೂಮಿ. ಎಲ್ಲ ಉತ್ಪಾದನೆಗೆ ಒಂದು ವೇಗವಿರುತ್ತದೆ, ಮಿತಿಯಿರುತ್ತದೆ. ಅವಶ್ಯಕತೆ ಕಡಿಮೆಯಾಗಲಿ ಅಥವಾ ಹೆಚ್ಚಾಗಲಿ, ಒಂದು ಮಿತಿಯನ್ನು ದಾಟಿದಲ್ಲಿ ಅದನ್ನು ವ್ಯವಸ್ಥೆ ಹ್ಯಾಂಡಲ್ ಮಾಡುವಲ್ಲಿ ಸೋಲುತ್ತದೆ.

ಕೋವಿಡ್ ಶುರುವಾದಾಗ ಅಮೆರಿಕದವರೆಲ್ಲ ಎದ್ದು ಬಿದ್ದು ಟಾಯ್ಲೆಟ್ ಪೇಪರ್ ಖರೀದಿಸಿ ಅದು ಅಲಭ್ಯವಾದ ಸಮಯವೊಂದಿತ್ತು. ಇದು ಪ್ಯಾನಿಕ್ ಖರೀದಿಯಿಂದಾಗಿದ್ದು. ಆದರೆ ಇತ್ತೀಚೆಗೆ ಅತಿಯಾಗಿ ಅಮೆರಿಕದುದ್ದಗಲಕ್ಕೂ ಸುದ್ದಿಯಾದದ್ದು ಚಿಕ್ಕಮಕ್ಕಳ ಫಾರ್ಮುಲಾ ಫುಡ್ (ಶಿಶು ಆಹಾರ) ಸರಬರಾಜಿನದ ವ್ಯತ್ಯಯ. ಇದು ಅದ್ಯಾವ ಪ್ರಮಾಣದಲ್ಲಿ ಬಾಧಿಸಿತೆಂದರೆ ಅಕ್ಷರಶಃ ಅಮೆರಿಕದ ತಾಯಂದಿರೆಲ್ಲ
ಕಂಗಾಲಾಗಿ ಹೋಗಿದ್ದರು.

ಅಂಗಡಿಗಳಲ್ಲಿ ಶಿಶು ಆಹಾರ ಸಿಗುತ್ತಲೇ ಇರಲಿಲ್ಲ. ನಂತರ ಅಮೆರಿಕ ಸ್ವಿಟ್ಜರ್‌ಲೆಂಡ್‌ನಿಂದ ಹೆಚ್ಚಿನ ಹಣ ಕೊಟ್ಟು ಇದನ್ನು ಸ್ಪೆಷಲ್ ವಿಮಾನದಲ್ಲಿ ಆಮದು ಮಾಡಿಕೊಳ್ಳಬೇಕಾಯಿತು. ಇದೆಲ್ಲದಕ್ಕೆ ಕಾರಣ ಸರಬರಾಜು ವ್ಯವಸ್ಥೆ ಬುಡಮೇಲಾದದ್ದು. ಇಂದು ಜಗತ್ತಿನ
ಬಹುತೇಕ ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ಆಹಾರ ಪದಾರ್ಥಗಳು ಅತ್ಯಂತ ದುಬಾರಿಯಾಗಿರುವುದು ಕೂಡ ಅದು ಬೇಕೆನ್ನುವವರಿಗೆ ತಲುಪುವಲ್ಲಿ ವ್ಯತ್ಯಯವಾಗಿರುವುದರಿಂದ. ನಿಮ್ಮ ಮನೆಯ ಒಗ್ಗರಣೆ ಡಬ್ಬಿಯನ್ನು ಒಮ್ಮೆ ನೋಡಿ.

ಮೆಣಸು ಬ್ಯಾಡಗಿ ಅಥವಾ ಗುಂಟೂರಿನಿಂದ ಬಂದಿರುತ್ತದೆ. ಇನ್ನು ಜೀರಿಗೆ ಭಾರತದ ಇನ್ನೊಂದು ಮೂಲೆಯಿಂದ ಅಥವಾ ಆಫ್ರಿಕಾದಿಂದ ಬಂದದ್ದಾಗಿರಬಹುದು. ಉದ್ದು, ಕಡಲೆಬೇಳೆ, ಮೆಂತೆ ಹೀಗೆ ಒಂದೊಂದು ಒಂದೊಂದು ರಾಜ್ಯ, ದೇಶದಿಂದ ಬಂದಿರುತ್ತದೆ. ಕೆಲವೊಮ್ಮೆ ನಮ್ಮದೇ ದೇಶದಲ್ಲಿ ಬೆಳೆಯುತ್ತಿದ್ದರೂ ಅವಶ್ಯಕತೆಗನುಗುಣವಾಗಿ ಅದನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇನ್ನು ಅತ್ಯಂತ
ಮುಖ್ಯವಾದ ಇಂಗು ಬರೋದು ಆಫ್ಘಾನ್, ಇರಾನ್ ಅಥವಾ ಉಜೇಕಿಸ್ತಾನದಿಂದ. ಅಮೆರಿಕದಂತಹ ದೇಶದ ಅಡುಗೆ ಮನೆಯಲ್ಲಿ ಒಂದೊಂದು ವಸ್ತುಗಳು ಒಂದೊಂದು ದೇಶದಿಂದ ಬಂದಿರುತ್ತವೆ.

ಸುಮ್ಮನೆ ಕುತೂಹಲಕ್ಕೆ ನಮ್ಮ ಮನೆಯ ಫ್ರಿಡ್ಜ್‌ನಲ್ಲಿರುವ ಕೆಚಪ್, ಸಾಸ್, ರೆಡಿಮೇಡ್ ಮಜ್ಜಿಗೆ ಮೊದಲಾದವುಗಳು ಯಾವ ದೇಶದಿಂದ ಬಂದಿವೆ ಎಂದು ಪಟ್ಟಿ ಮಾಡುತ್ತ ಹೋದೆ. ಬರೋಬ್ಬರಿ ಹದಿನಾರು ದೇಶಗಳು ಲೆಕ್ಕಕ್ಕೆ ಸಿಕ್ಕವು. ಈ ಸರಬರಾಜು ವ್ಯವಸ್ಥೆಯೇ ಹಾಗೆ. ಅಮೆರಿಕ ಅಂತಲ್ಲ – ಭಾರತ ಸೇರಿದಂತೆ ಇಡೀ ಜಗತ್ತು ಇಂದು ಸೇವಿಸುವ ಆಹಾರ ಹಲವು ದೇಶಗಳಿಂದ ಬಂದಿರುತ್ತವೆ. ಯಾವುದೇ ಒಂದು ಸರಬರಾಜು ಕೊಂಡಿ ಹೆಚ್ಚೂಕಡಿಮೆಯಾಯಿತೆನ್ನಿ, ಅದರ ಬೆಲೆ ಗಗನಕ್ಕೇರಿರುತ್ತದೆ.

ಆಮದಿನ ಬೆಲೆ ಏರಿದಾಗ ಅದಕ್ಕನುಗುಣವಾಗಿ ಸ್ಥಳೀಯ ಬೆಲೆ ಕೂಡ ಏರಿರುತ್ತದೆ. ಒಂದಕ್ಕೊಂದು ಕೊಂಡಿ. ಇನ್ನೊಂದು ಕಾರಣ ರಷ್ಯಾ ಉಕ್ರೇನ್ ಯುದ್ಧ. ಈ ಎರಡು ದೇಶಗಳು ಜಗತ್ತಿಗೆ ಶೇ.35 ಗೋಧಿ ಸರಬರಾಜು ಮಾಡುತ್ತಿದ್ದವು. ಒಂದು ಮೂರಾಂಶಕ್ಕಿಂತ ಜಾಸ್ತಿ ಸರಬ ರಾಜು ಇಂದು ಇಲ್ಲದಾಗಿದೆ. ಗೋಽಯನ್ನು ಜಾಗತಿಕ ಸರಾಸರಿ ಪ್ರತೀ ವ್ಯಕ್ತಿ 67 ಕೆಜಿ ವಾರ್ಷಿಕವಾಗಿ ಬಳಸುತ್ತಾನೆ ಎನ್ನುವುದು ಸ್ಟ್ಯಾಟಿಸ್ಟಿಕ್ಸ್. ಬಳಕೆಯಲ್ಲಿ ತರಕಾರಿ, ಹಾಲು, ಅನ್ನದ ನಂತರದ ಸ್ಥಾನ ಗೋಧಿಯದು. ಗೋಧಿ ಬಳಸಿ ಉತ್ಪಾದಿಸುವ ಆಹಾರ ಜಗತ್ತಿನಲ್ಲ ತುಟ್ಟಿಯಾಗಲು ಇದು ಕಾರಣ.

ಇನ್ನೊಂದು ಕಾರಣ ಪೆಟ್ರೋಲ್ ಬೆಲೆ ಏರಿಕೆ. ಇದಕ್ಕೆ ಒಪೆಕ್ ರಾಷ್ಟ್ರಗಳು ಎಷ್ಟು ಕಾರಣವೋ ಅಷ್ಟೇ ಕಾರಣ ರಷ್ಯಾ. ಇದನ್ನು ಈ ಹಿಂದೆ ವಿಸ್ತೃತವಾಗಿ ಬರೆದಿದ್ದೆ. ಇದರ ನೇರ ಹೊಡೆತ ಬೀಳುವುದೇ ಆಹಾರ ದರಗಳ ಮೇಲೆ ಎನ್ನುವುದಕ್ಕೆ ವಿಶೇಷ ವಿವರಣೆ ಬೇಡವೆನ್ನಿಸುತ್ತದೆ.
ಇನ್ನೊಂದೆಂದರೆ ಅತಿ ಹೆಚ್ಚಿದ ಹಣದುಬ್ಬರ. ಪಾಕಿಸ್ತಾನದಂತಹ ದೇಶಗಳಲ್ಲಿ ಹಣದುಬ್ಬರ ಎರಡಂಕಿ ದಾಟಿದ್ದು ಒಂದು ಕಡೆಯಾದರೆ ರಾಜಕೀಯ ಅಪಸವ್ಯಗಳಿಂದಾಗಿ ದೇಶದ ಆರ್ಥಿಕತೆ ಇನ್ನಷ್ಟು ಜರ್ಜರಿತವಾಗಿ ಉತ್ಪಾದನೆ ಮತ್ತು ಕೊಳ್ಳುವಿಕೆಯ ಶಕ್ತಿ ಎರಡೂ ಕ್ಷೀಣಿಸಿದ್ದು ಇನ್ನೊಂದು.

ಆಹಾರ ತುಟ್ಟಿಯಾಗಲು ಇನ್ನೊಂದು ಕಾರಣವೆಂದರೆ ಜಾಗತಿಕ ವಿದ್ಯುತ್ ಅಲಭ್ಯತೆ. ಜಗತ್ತಿನ ಶೇ. 60ರಷ್ಟು ವಿದ್ಯುತ್ ಉತ್ಪಾದನೆ ಯಾಗುವುದು ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಉತ್ಪನ್ನವನ್ನು ಉರಿಸುವುದರಿಂದ. ತೈಲ ಬೆಲೆಯ ತುಟ್ಟಿ ಮತ್ತು ಅಲಭ್ಯತೆಯಿಂದಾಗಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಇಂದು ಕೃಷಿಯೆಂದರೆ ಅದಕ್ಕೆ ವಿದ್ಯುತ್ ಬೇಕೇ ಬೇಕು. ಹಾಗಾಗಿ ಬಹುದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿ, ಕುಂಠಿತ ಉತ್ಪಾದನೆಗೆ ಇದು ಇನ್ನೊಂದು ಕಾರಣ.

ಇನ್ನು ಬಹಳಷ್ಟು ದೇಶಗಳಲ್ಲಿ ಸಾಂಕ್ರಾಮಿಕ ಪರಿಣಾಮಗಳಿಂದಾದ ಆರ್ಥಿಕ ಬಿಕ್ಕಟ್ಟಿನಿಂದ ಕೃಷಿಗೆ ಬೇಕಾದ ಗೊಬ್ಬರ, ಕೀಟನಾಶಕಗಳ ಅಲಭ್ಯತೆ. ಶ್ರೀಲಂಕಾ, ಈಜಿಪ್ಟ್ ಮೊದಲಾದ ದೇಶಗಳಲ್ಲಿ ಆದ ಬಿಕ್ಕಟ್ಟುಗಳು, ರಾಜಕೀಯ ದೊಂಬರಾಟಗಳು ; ಅಲ್ಲ ಪೆಟ್ಟು ಬಿದ್ದದ್ದು ಕೃಷಿಗೆ. ಇನ್ನೊಂದೆಂದರೆ ಇದೆಲ್ಲದರ ನಡುವೆ ಹೆಚ್ಚಿದ ಕ್ಷಾಮ. ಇದಕ್ಕೆ ಕಾರಣ ವಾತಾವರಣದದ ಏರುಪೇರು. ಇದು ತೀರಾ ಪರೋಕ್ಷ ವೆನ್ನಿಸಿದರೂ ನೇರವಾಗಿ ಜಾಗತಿಕ ಇಳುವರಿ ಯನ್ನೇ ಶೇ.೮ರಷ್ಟು ಕಡಿಮೆಯಾಗಲು ಇದೇ ಹೊಣೆ.

ಅದಕ್ಕೆ ನಾವೆಲ್ಲ ಸೇರಿ ಹೊಣೆ. ಇನ್ನು ನಿರ್ವೀರ್ಯವಾದ ವಿಶ್ವಸಂಸ್ಥೆ, ಒಪೆಕ್ ರಾಷ್ಟ್ರಗಳ ಪೆಟ್ರೋಲ್ ಉತ್ಪಾದನೆ ಕಡಿಮೆ ಮಾಡುವ
ಮೂಲಕ ನಡೆಯುತ್ತಿರುವ ಕತ್ತು ಹಿಚುಕುವ ಕೆಲಸ, ಸಾಂಕ್ರಾಮಿಕದಿಂದ ಹೆಚ್ಚಿದ ಬಡತನ ಮತ್ತು ಕಡಿಮೆಯಾದ ಎಲ್ಲ ವಸ್ತುಗಳ ಉತ್ಪಾದನೆಗಳು – ಇವೆಲ್ಲ ಸಂಕೀರ್ಣವಾಗಿ ಹೊಡೆತ ಕೊಟ್ಟಿರುವುದು ಕೃಷಿಗೆ, ಆಹಾರ ಉತ್ಪಾದನೆಗೆ. ಇದೆಲ್ಲ ಎತ್ತು ಮಾಡಿದ ತಪ್ಪಿಗೆ ಕೋಣಕ್ಕೆ ಶಿಕ್ಷೆಯಾಗುವ ಹಾಗೆ.

ಒಟ್ಟಾರೆ ಈ ಎಲ್ಲ ಕಾರಣಗಳಿಂದ ಎಲ್ಲ ದೇಶಗಳ ಮೇಲೆ, ನೇರವಾಗಿ ಆಹಾರದ ಮೇಲೆ ಹೊಡೆತ ಬೀಳುತ್ತಿರುವುದು ಸಹಜವಾಗಿದೆ. ಇದೆಲ್ಲದರ ಪರಿಣಾಮವನ್ನು ಶೂನ್ಯ ಮಾಡಲು ಅಮೆರಿಕ ಬಿಡಿ, ಯಾವುದೇ ದೇಶಕ್ಕೂ ಸಾಧ್ಯವಾಗಿಲ್ಲ. ಆ ಕಾರಣಕ್ಕೆ ಇಂದು ಜಗತ್ತೇ ಹಣದುಬ್ಬರದಿಂದ ಒzಡುತ್ತಿದೆ. ಮಧ್ಯಮ ವರ್ಗದ ದೇಶಗಳಾದ ಅರ್ಜೆಂಟೀನಾ, ಟ್ಯುನೇಷಿಯ, ಪಾಕಿಸ್ತಾನ, ಫಿಲಿಪ್ಪೀನ್ಸ್ ಮೊದಲಾದ
ಅತಿಹೆಚ್ಚು ಆಹಾರ ಆಮದು ಅವಲಂಬಿತ ದೇಶಗಳಲ್ಲಿ ಅತಿಯೆನಿಸುವಷ್ಟು ಮತ್ತು ಬಡ ಆಫ್ರಿಕಾ ಮತ್ತು ಕೆಲ ಯುರೋಪಿಯನ್ ದೇಶಗಳಲ್ಲಿ ಹಸಿವಿನಿಂದ ಜನರು ಸಾಯುವಷ್ಟು ಕಷ್ಟಕ್ಕೆ ಇವೆಲ್ಲ ನಮ್ಮನ್ನು ತಂದುನಿಲ್ಲಿಸಿವೆ.

ಇಲ್ಲಿ ಯಾವ ದೇಶ ಹೆಚ್ಚು ಗಟ್ಟಿ ಎನ್ನುವುದರ ಮೇಲೆ ಹೆಚ್ಚಿನದು ಅವಲಂಬಿಸಿದರೂ ಮೊದಲೇ ಹೇಳಿದಂತೆ ಶ್ರೀಮಂತ ರಾಷ್ಟ್ರಗಳ ಬಡ, ಮಾಧ್ಯಮ ವರ್ಗಕ್ಕೆ ಇದೆಲ್ಲದರ ಬಿಸಿ ತಟ್ಟುತ್ತಿದೆ. ಇದೆಲ್ಲ ಸುಧಾರಿಸಲು, ಹದಕ್ಕೆ ಬರಲು ಸಮಯ ಬೇಕು. ಈ ಕಾಯುವ ಸಮಯದಲ್ಲಿ ಅದೆಷ್ಟೋ ಮಂದಿ ಬಡ ದೇಶಗಳಲ್ಲಿ ಪ್ರಾಣಕಳೆದುಕೊಳ್ಳುವವರಿದ್ದಾರೆ. ಮುಂಬರುವ ದಿನಗಳಲ್ಲಿ ಆಹಾರ ಮತ್ತು ವಸ್ತುಗಳು ಇನ್ನಷ್ಟು ತುಟ್ಟಿ ಯಾಗುವುದು ಖಚಿತ. ಹಣದುಬ್ಬರ ಇಂದು ಎಲ್ಲ ದೇಶದ ಎಲ್ಲ ವರ್ಗದವರ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಇದು ಇನ್ನಷ್ಟು ಕಾಲ ತೀವ್ರಗವಾಗುತ್ತ ಮುಂದುವರಿಯುತ್ತದೆ.

ಇದು ಹಲವು ದೇಶಗಳ ರಾಜಕೀಯ ಅಸ್ಥಿರತೆ, ಆಡಳಿತ ಬದಲಾವಣೆಗೆ ಕೂಡ ಕಾರಣವಾಗುವುದಿದೆ. ಇದೆಲ್ಲದರ ನಡುವೆ ನಾಗರಿಕ ನಾದವನ ಮುಂದಿರುವುದು ಬದುಕುವ ಸವಾಲು. ಅದರ ಜತೆ ಇದೆಲ್ಲದನ್ನು ಅರಿತು ದೇಶದ ಮುಂದಿನ ಸರಕಾರವನ್ನು ಸಮಚಿತ್ತದಿಂದ ಆಯ್ಕೆ ಮಾಡುವ, ಒಂದೊಳ್ಳೆ ಪ್ರಜೆಯಾಗಿರುವ ಜವಾಬ್ದಾರಿ.

error: Content is protected !!