Wednesday, 29th May 2024

ನಾವೆಲ್ಲ ಹೇಳುವ ಸುಳ್ಳಿನ ಹಿಂದಿನ ವೈಜ್ಞಾನಿಕ ಸತ್ಯಗಳು

ಶ್ವೇತಪತ್ರ

shwethabc@gmail.com

ಸುಳ್ಳಿನ ಹಿಂದಿನ ಮನೋವಿಜ್ಞಾನ ಹುಡುಕ ಹೊರಟರೆ ನಾವೆಲ್ಲ ಗೊಂದಲಕ್ಕೀಡಾಗುವುದು ಸಹಜ. ಯಾಕೆಂದರೆ ಜನ ಹಲವಾರು ಕಾರಣಗಳಿಗೆ ಸುಳ್ಳು ಹೇಳುತ್ತಾರೆ.

ಕೆಲವರು ಶಿಕ್ಷೆ ತಪ್ಪಿಸಲು, ಇನ್ನು ಕೆಲವರು ಬೇರೆಯವರ ಭಾವನೆಗಳಿಗೆ ನೋವಾಗುವುದನ್ನು ತಪ್ಪಿಸಲು, ಒಂದಿಷ್ಟು ಮಂದಿ ಬೇರೆಯವರ ಕಣ್ಣುಗಳಲ್ಲಿ ಉತ್ತಮವಾಗಿ ಕಾಣಿಸಿಕೊಳ್ಳಲು ಸುಳ್ಳು ಹೇಳುತ್ತಾರೆ. ನಮ್ಮನ್ನು ನಾವು ಆತಂಕ, ಅವಮಾನಗಳಿಂದ ರಕ್ಷಿಸಿಕೊಳ್ಳಲು ಸುಳ್ಳನ್ನು ರಕ್ಷಣಾ ತಂತ್ರ ವನ್ನಾಗಿ ಬಳಸುತ್ತೇವೆ. ಸುಳ್ಳು ಹೇಳುವುದು ತಪ್ಪು ಎನ್ನುವ ಸೂಚನೆಯನ್ನು ನಾವೆಲ್ಲ ಚಿಕ್ಕವಯಸ್ಸಿನಿಂದಲೂ ಕೇಳುತ್ತಲೇ ಬೆಳೆದಿದ್ದೇವೆ ಇದಕ್ಕೆ ಪೂರಕವಾಗಿ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಜನಪದೀಯ ಭಾಗವಾಗಿ ಪುಣ್ಯಕೋಟಿ ನಿಲ್ಲುತ್ತಾಳೆ.

ಆದರೂ ನಾವೆಲ್ಲ ಸುಳ್ಳು ಹೇಳ್ತೀವಿ. ನೆನ್ನೆ ಕಾಲೇಜಿನಲ್ಲಿ ಯಾರೋ ‘ಹಾಯ್ ಶ್ವೇತಾ! ಹೇಗಿದ್ದೀರಾ?’ ಎಂದು ಕೇಳಿದರು. ಮುಗುಳು ನಗುತ್ತಾ ನಾನು ‘ಆರಾಮಾಗಿದ್ದೀನಿ, ನೀವು ಹೇಗಿದ್ದೀರಿ? ಎಂದು ಉತ್ತರಿಸಿದೆ. ನಿಜ ಹೇಳ ಬೇಕೆಂದರೆ ಇಲ್ಲಿ ನನ್ನ ಉತ್ತರ ಪ್ರಾಮಾಣಿಕವಾಗಿ ಇರಲಿಲ್ಲ. ಹಿಂದಿನ ದಿನ ಮನೆಯಲ್ಲಿ ನಡೆದ ಯಾವುದೋ ಘಟನೆಯಿಂದ ನಾನು ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ದೆ.

ಹಾಗಿದ್ರೆ ನನ್ನ ಉತ್ತರ ಸುಳ್ಳೊಂದನ್ನು ರೂಪಿಸಿತ್ತಾ? ಇನ್ನೊಂದು ದಿನ ಸ್ನೇಹಿತೆಯೊಬ್ಬಳು ಫೋನ್ ಮಾಡಿ ಮಕ್ಕಳನ್ನು ಕರ್ಕೊಂಡು ಊಟಕ್ಕೆ ಹೋಗೋಣ ಅಂತ ಕೇಳಿದ್ಲು. ಆದರೆ ಅವತ್ತು ನನಗೆ ಹೊರಗೆ ಹೋಗುವ ಮನಸ್ಸು ಇರಲಿಲ್ಲ. ಕಾಲೇಜಿನ
ಯಾವುದೋ ಕೆಲಸ ಇದೆ ತುಂಬಾ ಇಂಪಾರ್ಟೆಂಟ್ ಅಂತ ತಪ್ಪಿಸಿಕೊಂಡೆ, ಮತ್ತೊಂದು ದಿನ ದಾರಿಯಲ್ಲಿ ಸಿಕ್ಕ ಯಾರೋ
ಪರಿಚಿತರನ್ನು ಬಹಳ ಒತ್ತಾಯಪೂರ್ವಕ ನಕ್ಕು ಮಾತಾಡಿಸಿದ್ದೆ.

ನಿಜವಾದ ಖುಷಿಯಿರಲಿಲ್ಲ. ಹಾಗಿದ್ದರೆ ಆ ನನ್ನ ವರ್ತನೆಯೂ ಸುಳ್ಳನ್ನು ರೂಪಿಸಿತ್ತಾ? ಎದುರಿಗಿರುವವರನ್ನು ಕೆಲವೊಂದು ಸಲ ದಾರಿತಪ್ಪಿಸಿ ನಮ್ಮನ್ನ ನಾವು ಪ್ರೆಸೆಂಟ್ ಮಾಡಿಕೊಂಡಿರುತ್ತೇವೆ. ಅವೆಲ್ಲವುಗಳನ್ನು ನಾವು ಸುಳ್ಳುಗಳೆಂದೇ ಪರಿಗಣಿಸಬೇಕಾ? ಹೀಗೆ ಯೋಚಿಸುತ್ತಿರಬೇಕಾದರೆ ಸುಳ್ಳನ್ನು ವಿವರಿಸುವ ವ್ಯಾಖ್ಯಾನ ಒಂದು ಸಿಕ್ಕಿತ್ತು. ತಪ್ಪಾಗಿರುವ ಅಥವಾ ಅಮಾನ್ಯ ವಾಗಿರುವ ವಿಷಯವನ್ನು ಬೇರೆಯವರು ಒಪ್ಪಿಕೊಳ್ಳುವಂತೆ ಮಾಡುವ ಕಾರ್ಯಕಾರಣವೇ ಸುಳ್ಳು. ಜನ ಯಾಕೆ ಸುಳ್ಳು ಹೇಳ್ತಾರೆ ಅನ್ನುವುದಕ್ಕೆ ಅನೇಕ ವಿವರಣೆಗಳಿವೆ – ಸಂದರ್ಭಕ್ಕನುಗುಣವಾಗಿ ನಾವೆಲ್ಲ ಸುಳ್ಳನ್ನು ಹೇಳುವವರೇ ಆದರೂ ಎಷ್ಟು ತೀವ್ರವಾಗಿ ಸುಳ್ಳನ್ನು ಹೇಳುತ್ತೇವೆ, ಎಷ್ಟು ಸಲ ಸುಳ್ಳನ್ನು ಹೇಳುತ್ತೇವೆ ಅನ್ನೋದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತ ಹೋಗುತ್ತದೆ.

ಸುಳ್ಳು ಹೇಳುತ್ತಿರುವ ವ್ಯಕ್ತಿಗೆ ಸುಳ್ಳೇ ಬಹುಮುಖ್ಯವಾಗುತ್ತದೆ. ಆತ ತನ್ನ ಸುಳ್ಳನ್ನು ವಿಪರೀತವಾಗಿ ನಂಬುತ್ತಾನೆ. ಬೇರೆಯ ವರಿಗೆ ಅವನ ಸುಳ್ಳು ಮುಖ್ಯವೋ ಅಮುಖ್ಯವೋ ಅವನಿಗೆ ಬೇಡದ ವಿಷಯ. ತಾನು ಯಾವ ವಿಚಾರದ ಬಗ್ಗೆ ಸುಳ್ಳು
ಹೇಳುತ್ತಾ ಇದ್ದೀನಿ ಎನ್ನುವ ವಿಷಯವನ್ನು ಮಾತ್ರ ಆತನೋ/ ಆಕೆಯೋ ನಂಬಿರುತ್ತಾರೆ; ಹೊರತು ವಾಸ್ತವವನ್ನಲ್ಲ. ಒಂದು
ಸಂದರ್ಭವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದಾಗ ಜನ ಸುಳ್ಳು ಹೇಳುತ್ತಾರೆ. ಹೀಗೆ ಅವರು ಹೇಳುವ ಸುಳ್ಳುಗಳು
ಎದುರಿಗಿರುವವರ ನಿರ್ಧಾರಗಳ ಮೇಲೆ, ಪ್ರತಿಕ್ರಿಯೆಗಳ ಮೇಲೆ ಪ್ರಭಾವವನ್ನು ಬೀರುತ್ತ ಹೋಗುತ್ತವೆ.

ಸತ್ಯ ಹೇಳಿದರೆ ಎಲ್ಲಿ ನಿರ್ಧಾರಗಳ ಮೇಲಿನ ಕಂಟ್ರೋಲ್ ತಪ್ಪಿ ಹೋಗುತ್ತದೆಯೋ ಅನ್ನುವ ಕಾರಣಕ್ಕೆ ಸುಳ್ಳು ಹೇಳುತ್ತಿರು ತ್ತಾರೆ. ಬೇರೆಯವರನ್ನು ಮೆಚ್ಚಿಸುವುದಕ್ಕೆ ಕೂಡ ನಾವು ಅನೇಕ ಬಾರಿ ಸುಳ್ಳು ಹೇಳ್ತೇವೆ. ಪ್ರೀತಿಪಾತ್ರರನ್ನು ನಿರಾಶೆ ಗೊಳಿಸದಿರುವ ಕಾರಣಕ್ಕಾಗಿ ಕೂಡ ಸುಳ್ಳುಗಳನ್ನು ಅನೇಕ ಸಲ ಪೋಣಿಸಿರುತ್ತೇವೆ. ಆದರೆ ಒಳಗೊಳಗೆ ಒಂದಲ್ಲ ಒಂದು ದಿನ ನಿಜ ಬಣ್ಣ ಬಯಲಾಗಿ ಗೌರವವನ್ನು ಕಳೆದುಕೊಂಡು ಬಿಡಬಹುದು, ಜನ ನಮ್ಮನ್ನು ತಿರಸ್ಕರಿಸಬಹುದು ಎಂಬ ಭಯ ಕಾಡದೇ ಇರುವುದಿಲ್ಲ.

ಒಂದು ಸುಳ್ಳನ್ನು ಮುಚ್ಚಿ ಹಾಕಲು ಸಾವಿರ ಸುಳ್ಳುಗಳು. ಹೀಗೆ ಒಂದು ಸುಳ್ಳು ಸುಳ್ಳಿನ ದೊಡ್ಡ ಸರಮಾಲೆಯಾಗಿ ಬೆಳೆಯುತ್ತಲೇ ಹೋಗುತ್ತದೆ. ಸುಳ್ಳಿಗೆ ಸುಳ್ಳು ಜೋಡಿಸುತ್ತ ಹೋದಂತೆ ಅದರಲ್ಲಿನ ಒಂದು ಸುಳ್ಳನ್ನು ಯಾರಾದರೂ ನಿರಾಕರಿಸಿದರೆ ಬದುಕು ಹೆಚ್ಚು ಸಿಕ್ಕಾಗುತ್ತ ಹೋಗುತ್ತದೆ ಅಪನಂಬಿಕೆ ಶುರುವಿಟ್ಟುಕೊಳ್ಳುತ್ತದೆ. ಒಬ್ಬ ವ್ಯಕ್ತಿ ಸುಳ್ಳು ಹೇಳಿರುತ್ತಾನೆ ಅವನ ಪ್ರಕಾರ ಆ ವಿಷಯ ಅವನಿಗೆ ಸುಳ್ಳು ಆಗಿರುವುದಿಲ್ಲ. ಸುಳ್ಳನ್ನೇ ಅಭ್ಯಾಸ ಮಾಡಿಕೊಂಡವರಲ್ಲಿ ಹಾಗೂ ನಿರಂತರವಾಗಿ ಸುಳ್ಳು ಹೇಳುವವರ ನೆನಪಿನ ಶಕ್ತಿ ಕೆಲವೊಮ್ಮೆ ಕೈಕೊಡುತ್ತದೆ.

ಆಗೆಲ್ಲ ಅವರಿಗೆ ವಿಪರೀತ ಒತ್ತಡ ಉಂಟಾಗುತ್ತದೆ ಈ ಒತ್ತಡ ಮತ್ತಷ್ಟು ಸುಳ್ಳುಗಳಿಗೆ ಪ್ರೇರಣೆಯಾಗುತ್ತದೆ. ಹೀಗೆ ನಿರರ್ಗಳ ವಾಗಿ ಸುಳ್ಳಿನ ಪ್ರಚೋದನೆಗೆ ಒಳಪಡುವವರು ತಮ್ಮ ಮನಸ್ಸಿನಲ್ಲಿ ಪರ್ಯಾಯವಾದ ಜಗತ್ತೊಂದನ್ನು ಸೃಷ್ಟಿಸಿಕೊಳ್ಳುತ್ತಾರೆ;
ತಾವು ಹೇಳುತ್ತಿರುವ ಸುಳ್ಳುಗಳೇ ನಿಜವೆಂಬ ನಂಬಿಕೆಗಳಿಗೆ ಅವಕಾಶ ಕಲ್ಪಿಸಿಕೊಡಲು. ಸುಳ್ಳು ಹೇಳುತ್ತಿರುವ ವ್ಯಕ್ತಿಗಳಲ್ಲಿ
ಜನ ತಮ್ಮ ಸುಳ್ಳುಗಳನ್ನು ನಂಬಲೇಬೇಕು ಎನ್ನುವ ಹತಾಶೆ ಮತ್ತು ಆಸೆ ಕಾಡುತ್ತಲ್ಲಿರುತ್ತದೆ. ಈ ಹತಾಶೆಯೇ ಅವರಿಂದ
ಸತ್ಯದ ಬದಲು ಸುಳ್ಳನ್ನು ಆಡಿಸುತ್ತದೆ.

ಸುಳ್ಳುಗಳನ್ನು ಪದೇ ಪದೇ ಹೇಳುತ್ತಲೇ ಇದ್ದರೆ ಆ ಸುಳ್ಳೇ ಒಂದು ದಿನ ಸತ್ಯವಾಗಿ ಬಿಡಬಹುದು ಎಂಬ ನಂಬಿಕೆ ಅವರಿಗಿ ರುತ್ತದೆ. ಬೇರೆಯವರಿಗೆ ಕೇಡು ಬಗೆಯಲು, ನೋವನ್ನುಂಟು ಮಾಡಲು, ತಾವು ಮಾಡಿದ ತಪ್ಪುಗಳನ್ನು ಮುಚ್ಚಿಹಾಕಲು, ತಮ್ಮ ವ್ಯಕ್ತಿತ್ವವನ್ನು ಹಿಗ್ಗಿಸಿಕೊಳ್ಳಲು, ಹಣದ ಸಹಾಯ ಪಡೆಯಲು… ಹೀಗೆ ನಾನಾ ಕಾರಣಗಳಿಗೆ ಜನ ನಾನಾ ವೇಷಗಳನ್ನು ಹಾಕುತ್ತಲೇ ಇದ್ದಾರೆ, ಸುಳ್ಳನ್ನು ಹೇಳುತ್ತಲೇ ಇದ್ದಾರೆ.

ಜನ ತಮ್ಮ ಸ್ವ-ಆಸಕ್ತಿ ಗೋಸ್ಕರ ಹೆಚ್ಚಿನ ಸುಳ್ಳನ್ನು ಹೇಳಿರುತ್ತಾರೆ. ಕೆಲವೊಮ್ಮೆ ಸುಳ್ಳುಗಳನ್ನು ನಾವು ಒಳ್ಳೆಯ ಕಾರಣ
ಗಳಿಗೂ ಹೇಳಿರುತ್ತೇವೆ. ಯಾರದೋ ಭಾವನೆಗಳಿಗೆ ನೋವಾಗುವುದು ತಪ್ಪಿಸಲು. ಕೆಲವೊಂದು ಪ್ರಾಪಂಚಿಕ ಸುಳ್ಳು ಗಳಿಂದ ಯಾರಿಗೂ ತೊಂದರೆಯೂ ಇರುವುದಿಲ್ಲ, ಯಾರಿಗೂ ಪ್ರಯೋಜನವೂ ಇರುವುದಿಲ್ಲ. ಆದರೆ ನಮಗಿಲ್ಲಿ ಒಂದು ಪ್ರಜ್ಞಾ ಪೂರ್ವಕ ಎಚ್ಚರಿಕೆ ಇರಬೇಕಾಗುತ್ತದೆ. ಸುಳ್ಳಿನ ಬಗ್ಗೆ ನಾವು ಕೇವಲವಾಗಿ ಯೋಚಿಸಿದಷ್ಟೂ ಅವು ದೊಡ್ಡದಾಗಿಯೂ, ವಿನಾಶಕಾರಿ ಯಾಗಿಯೂ ಬೆಳೆದು ಬಿಡಬಹುದು.

ಇಲ್ಲಿ ಎರಡು ಪ್ರಸಂಗಗಳು ನನಗೆ ನೆನಪಿಗೆ ಬರುತ್ತವೆ ಒಂದು ‘ತೋಳ ಬಂತು ತೋಳ’ ಎಂಬ ಜಾನಪದ ಕಥೆ. ತೋಳ
ಬಂತು ತೋಳ ಅನ್ನುವ ತನ್ನದೇ ಸುಳ್ಳಿನ ತ್ರಿಲ್ ಗೆ ಒಳಗಾಗಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದ ಯುವಕ ಕೊನೆಗೆ ನಿಜವಾಗಲೂ ತೋಳದ ಬಾಯಿಗೆ ಸಿಕ್ಕು ಪ್ರಾಣಬಿಟ್ಟದ್ದು. ಮತ್ತೊಂದು ಇತ್ತಿಚೆಗೆ ಯುವಕನೊಬ್ಬ ಆಧುನಿಕ ಡ್ರೋನ್ ಹಾರಿಸಿ ರಾಜಕಾರಣಿಗಳು ಸೇರಿದಂತೆ ಮೀಡಿಯಾದವರನ್ನೇ ನಂಬಿಸಿ ಮೂರ್ಖರನ್ನಾಗಿಸಿ ಕೊನೆಗೆ ತನ್ನ ಆತ್ಮಗೌರವವನ್ನು
ಕಳೆದುಕೊಂಡಿದ್ದು. ಹೀಗೆ ಸುಳ್ಳಿಗೆ ಹೆಚ್ಚಿನ ಆಯುಸ್ಸಿರುವುದಿಲ್ಲ.

ಅದು ನಮ್ಮ ಬಗ್ಗೆ ನಾವೇ ಅನುಮಾನ, ಅಪನಂಬಿಕೆ, ವಿಶ್ವಾಸಾಘಾತಕ್ಕೆ ಅವಕಾಶಮಾಡಿಕೊಡುತ್ತದೆ. ಹೀಗೆ ದೊಡ್ಡದಾಗಿ
ಬೆಳೆದ ಸುಳ್ಳುಗಳು ವ್ಯಕ್ತಿತ್ವ ದೋಷಕ್ಕೂ ಕೂಡ ಎಡೆಮಾಡಿಕೊಡುತ್ತವೆ. ಉದಾಹರಣೆಗೆ ಸಮಾಜವಿರೋಧಿ ವ್ಯಕ್ತಿತ್ವ
ದೋಷ. ಇದನ್ನು ಸೋಶಿಯೊಪಾತ್ ಎಂದು ಕೂಡ ಕರೆಯಲಾಗುತ್ತದೆ. ಒಳ್ಳೆಯ ಅಥವಾ ಕೆಟ್ಟದ್ದು ಯಾವುದೆಂದು
ಯೋಚಿಸ ಲಾಗದ ಮನಸ್ಸಿನ ಸ್ಥಿತಿ ಇಂತಹ ಮನಸ್ಥಿತಿಯಲ್ಲಿ ವ್ಯಕ್ತಿಗೆ ಯಾವುದೇ ಪಶ್ಚಾತ್ತಾಪವಿರುವುದಿಲ್ಲ.  ಎದುರಿಗಿರು ವವರನ್ನು ಮೋಸಗೊಳಿಸುವುದಕ್ಕೆ ನಿರಂತರ ಸುಳ್ಳನ್ನಾಡುತ್ತಾರೆ, ಜನರನ್ನು ನಂಬಿಸುತ್ತಾರೆ.

ಸನ್ಯಾಸಿ ವೇಷ ಧರಿಸಿ ಬಂದು ಬಂಗಾರವನ್ನು ಹೊಳೆಯುವಂತೆ ಮಾಡಿಕೊಡುವುದಾಗಿ ನಂಬಿಸಿ ಒಡವೆ ಕದ್ದು ಹೋಗುವವರು, ದುಡ್ಡನ್ನು ಡಬಲ್ ಮಾಡಿಕೊಡುವುದಾಗಿ ನಂಬಿಸಿ ಮೋಸ ಮಾಡುವವರು… ಹೀಗೆ ನಮ್ಮ ಸುತ್ತ ಮುತ್ತಲೇ ಇರುತ್ತಾರೆ. ನಾವು ಹುಷಾರಾಗಿರಬೇಕು ಅಷ್ಟೇ. ಮತ್ತೊಂದು ಬೂಟಾಟಿಕೆ ಅಥವಾ ಆಶಾಢಭೂತಿ ವ್ಯಕ್ತಿತ್ವ ದೋಷ. ಆಶಾಡಭೂತಿಗಳು ತಮ್ಮ ಭಾವನೆಗಳನ್ನು ಅತಿರೇಕವಾಗಿ ವರ್ಣಿಸಿ ಎಲ್ಲರ ಗಮನವನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಾರೆ. ಅವರ ವರ್ತನೆಯ ಸುಳ್ಳುಗಳು ತುಂಬಿಹೋಗಿರುತ್ತವೆ. ಇವರಲ್ಲಿ ಸುಳ್ಳಿನ ಜತೆ ಜತೆಯ ಕೋಪವೋ ಕೂಡ ಸಮವಾಗಿರುತ್ತದೆ.

ಇನ್ನೊಂದು ಕಾಲ್ಪನಿಕ ವ್ಯಕ್ತಿತ್ವ ದೋಷ .ಇವರಲ್ಲಿ ಯಾವುದೇ ದೈಹಿಕ ಅಥವಾ ಮಾನಸಿಕ ಕಾಯಿಲೆಗಳು ಇರುವುದಿಲ್ಲ. ಆದರೂ ಯಾವುದೋ ಒಂದು ರೋಗಲಕ್ಷಣವನ್ನು ಹಿಡಿದುಕೊಂಡು ತಮಗೆ ಕಾಯಿಲೆ ಇದೆ ಎಂದು ಜನರನ್ನು ನಂಬಿಸಲು ಸುಳ್ಳುಗಳನ್ನು ಹೇಳತೊಡಗುತ್ತಾರೆ. ಇವೆಲ್ಲ ಸಂಪೂರ್ಣವಾಗಿ ವ್ಯಕ್ತಿತ್ವ ದೋಷವನ್ನು ಉಂಟುಮಾಡಿ ಮನೋಸಾಮಾಜಿಕ ಸಮಸ್ಯೆಗಳಾಗಿ ಪರಿವರ್ತನೆಗೊಳ್ಳುವ ಅಂಶಗಳಾಗಿರುತ್ತವೆ.

ಎಚ್ಚರಿಕೆ ಅಗತ್ಯ. ಸರ್ವೇಸಾಮಾನ್ಯವಾಗಿ ನಾವೆಲ್ಲ ಗಂಭೀರವಾಗಿ ಸುಳ್ಳು ಹೇಳು ವುದು ಶಿಕ್ಷೆಯನ್ನು ತಪ್ಪಿಸಲು. ಆದರೆ ನಾವೆಲ್ಲ ನೆನಪಿಡಬೇಕು, ಎಷ್ಟೋ ಬಾರಿ ಈ ಸುಳ್ಳುಗಳೇ ನಮಗೆ ಶಿಕ್ಷೆಗಳಾಗಿ ಪರಿಣಮಿಸಿ ಸಂಬಂಧಗಳಲ್ಲಿ, ಕೆಲಸ ಮಾಡುವ ಜಾಗಗಳಲ್ಲಿ, ಹಣದ ವಿಚಾರದಲ್ಲಿ ತೊಂದರೆಯನ್ನುಂಟು ಮಾಡಿಬಿಡಬಹುದು. ಲಾಭ ಉಂಟಾಗುತ್ತದೆ ಎನ್ನುವ ಕಾರಣಕ್ಕೂ ಕೂಡ ನಾವು ಅನೇಕ ಬಾರಿ ಸುಳ್ಳನ್ನು ಹೇಳಿರುತ್ತೇವೆ. ಸುಳ್ಳು ಹೇಳಲು ಮತ್ತೊಂದು ಕಾರಣ ನಮ್ಮನ್ನು ನಾವು ಆತಂಕಕ ರವಾದ ವಿಚಾರಗಳಿಂದ ರಕ್ಷಿಸಿಕೊಳ್ಳಲು, ಅವಮಾನಗಳಿಂದ ತಪ್ಪಿಸಿಕೊಳ್ಳಲು, ನಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳಲು, ವಿಧೇಯರಾಗಿರಲು ( ನಮ್ಮ ಬಾಸ್ ನಮಗೆ ಇಷ್ಟವೋ ಕಷ್ಟವೋ ‘ನಿಮ್ಮ ಆಡಳಿತ ಚೆನ್ನಾಗಿದೆ’ ಎನ್ನುವ ಸುಳ್ಳಿನ ಮೂಲಕ ಅವರನ್ನು ಮೆಚ್ಚಿಸುವುದು) ಸುಳ್ಳುಗಳು ನಮ್ಮ ಬದುಕಿನ ಭಾಗ ಹಾಗಂತ ಅವು ತೀವ್ರತರವಾದರೆ ಮೇಲಿನ ಮಾನಸಿಕ ಸಮಸ್ಯೆಗಳಾಗಿ ಕಾರಣವೂ ಆಗಬಹುದು, ನೆನಪಿರಲಿ. ಸುಳ್ಳು ಇಂದು ಮನುಷ್ಯನ ಮೂಲಭೂತ ಸರ್ವೈವಲ್ ಎನಿಸಿಕೊಳ್ಳುವ ಅಂಶವೇ ಆಗಿಬಿಟ್ಟಿದೆ.

ಹೀಗಿರುವಾಗ ಯಾಕೆ ನಾವು ಸುಳ್ಳು ಹೇಳಬಾರದು? ಸುಳ್ಳುಗಳು ನಮ್ಮ ವ್ಯಕ್ತಿತ್ವದ ದೋಷಗಳಾಗಿ ಪರಿಣಮಿಸಿ ನಮ್ಮನ್ನು ಪ್ರಪಂಚದೆದುರು ಬೆತ್ತಲೆಯನ್ನಾಗಿಸುತ್ತವೆ. ಪ್ರತಿ ಬಾರಿಯ ನಮ್ಮ ಸುಳ್ಳುಗಳು ನಮ್ಮ ನಡತೆಯ ದೋಷಗಳಾಗೇ ಪ್ರತಿ ಬಿಂಬಿತವಾಗಿ ನಮ್ಮನ್ನು ನಾವು ಬದಲಾಯಿಸಿಕೊಳ್ಳಬಹುದಾದ ಅವಕಾಶಗಳನ್ನು ತಪ್ಪಿಸಿಬಿಡುತ್ತವೆ. ನಮ್ಮ ಸುಳ್ಳುಗಳು ಎದುರಿಗಿರುವವರು ನಮ್ಮನ್ನು ನಂಬದಂತೆ ತಡೆದುಬಿಡುತ್ತವೆ.

ನಾವು ಹೇಳುವ ಸುಳ್ಳುಗಳು ಬದುಕಿನ ಬಗ್ಗೆ ನಮಗಿರುವ ಅಭದ್ರತೆ ಹಾಗೂ ಆತ್ಮವಿಶ್ವಾಸದ ಕೊರತೆಯನ್ನು ಎತ್ತಿ ತೋರಿಸುತ್ತವೆ. ಮಾನಸಿಕ ಯೋಗಕ್ಷೇಮಕ್ಕಾಗಿ ಸುಳ್ಳು ಹೇಳುವುದನ್ನು ತಪ್ಪಿಸುವ ರೂಢಿಯನ್ನು ನಾವೆಲ್ಲ ಬೆಳೆಸಿಕೊಳ್ಳ ಬೇಕಿದೆ. ಈ ಪ್ರಕ್ರಿಯೆ ನಮ್ಮನ್ನು ನಾವು ಉತ್ತಮಗೊಳಿಸಿಕೊಳ್ಳಲು ಪರಸ್ಪರ ಬಾಂಧವ್ಯ ವೃದ್ಧಿಸಿಕೊಳ್ಳಲು
ಪೂರಕವಾಗಿರುತ್ತದೆ. ಸುಳ್ಳು ನಮ್ಮ ಮೌಲ್ಯಗಳು ಕುಸಿಯುವಂತೆ ಮಾಡುವುದಲ್ಲದೆ ಒತ್ತಡವನ್ನುಂಟು ಮಾಡುತ್ತ ವೈಯಕ್ತಿಕ ಬೆಳವಣಿಗೆಯನ್ನು ಕಸಿಯುತ್ತದೆ. ಸಮಾಜದೆದುರು ಸ್ವಾರ್ಥಿಗಳಾಗಿ ಗೌರವವನ್ನು ಕಳೆದುಕೊಂಡು ನಿಲ್ಲುವಂತೆ
ಮಾಡುತ್ತದೆ. ಇದೇ ಸುಳ್ಳು ನಮ್ಮನ್ನು ಮತ್ತಷ್ಟು ಹೇಡಿಗಳನ್ನಾಗಿಸುತ್ತದೆ. ಅಷ್ಟೇ ಅಲ್ಲದೇ ಮಾನಸಿಕವಾಗಿ ಜರ್ಜರಿತರನ್ನಾ
ಗಿಸುತ್ತದೆ. ಸುಳ್ಳಿನ ಗೋಡೆಗಳನ್ನು ಕೆಡವಿ ಮನುಷ್ಯರಾದ ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತ ಅರ್ಥೈಸಿಕೊಂಡು
ಬದುಕಬೇಕಿದೆ.

error: Content is protected !!