Friday, 18th October 2024

ಕಲಾಪಕ್ಕೆ ಬೇಕಿರುವುದು ನಿರ್ಬಂಧವಲ್ಲ, ಮನಸ್ಸು

ವರ್ತಮಾನ

maapala@gmail.com

ಪ್ರಕರಣ-೧: ಬಿ.ಎಸ್.ಯಡಿಯೂರಪ್ಪ ಅವರ ಸರಕಾರ ಉರುಳಿಸಲು ಶಾಸಕರನ್ನು ರಾತ್ರೋರಾತ್ರಿ ಅನರ್ಹಗೊಳಿಸಿದ ಸ್ಪೀಕರ್ ಕ್ರಮ ಪ್ರಶ್ನಿಸಿ ರಾಜ್ಯ ವಿಧಾನಸಭೆಯಲ್ಲಿ ಪಕ್ಷೇತರ ಶಾಸಕ ಗೂಳಿಹಟ್ಟಿ ಶೇಖರ್ ಬಟ್ಟೆ ಹರಿದುಕೊಂಡು, ಮೇಜಿನ ಮೇಲೆ ಹತ್ತಿ ಕೂಗಾಡಿ ಪ್ರತಿಭಟಿಸಿದ್ದರು. ಅಲ್ಲೇ ಬಿದ್ದು ಒದ್ದಾಡಿದರು.

ಪ್ರಕರಣ-೨: ವಿಧಾನ ಪರಿಷತ್ತಿನಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಒಟ್ಟು ಸೇರಿ ಉಪ ಸಭಾಪತಿಯನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಿದರೆ ಕಾಂಗ್ರೆಸ್ ಸದಸ್ಯರು ಉಪಸಭಾಪತಿಯವರನ್ನು ಪೀಠದಿಂದ ಬಲವಂತವಾಗಿ ಕೆಳಗಿಳಿಸಿ ಸದನದೊಳಗೆ ಎಳೆದಾಡಿ ರಂಪಾಟ ಮಾಡಿದರು.

ಪ್ರಕರಣ-೩: ಕೇಂದ್ರ ಸರಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಕೆಲವು ಸಂಸದರು ಉಪಸಭಾಪತಿಯವರೊಂದಿಗೆ ದುರ್ವರ್ತನೆ ತೋರಿದರಲ್ಲದೆ, ಅವರ ಮೇಜಿನ ಮೇಲಿದ್ದ ಮೈಕ್ ಕಿತ್ತೆಸೆದರು. ಒಂದು ಹಂತದಲ್ಲಿ ಹಲ್ಲೆಗೂ ಯತ್ನಿಸಿದರು.

ಪ್ರಕರಣ-೪: ವ್ಯಕ್ತಿಯೊಬ್ಬರ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಆಡಳಿತಾ ರೂಢ ಟಿಎಂಸಿ ಮತ್ತು ಪ್ರತಿಪಕ್ಷ ಬಿಜೆಪಿ ಸದಸ್ಯರ ಮಧ್ಯೆ ಮಾರಾಮಾರಿ ನಡೆದಿತ್ತು. ಶಾಸಕರು ಪರಸ್ಪರ ನಿಂದಿಸಿದ್ದಲ್ಲದೆ,
ಹೊಡೆದಾಡಿಕೊಂಡಿದ್ದರಿಂದ ಎಂಟು ಶಾಸಕರು ಗಾಯಗೊಂಡಿದ್ದರು.

ಲೆಕ್ಕಾ ಹಾಕುತ್ತ ಹೋದರೆ ಇಂತಹ ಸಾಕಷ್ಟು ಉದಾಹರಣೆಗಳು ಸಿಗಬಹುದು. ಇನ್ನು ಪ್ರತಿಭಟನೆ, ಹೋರಾಟ, ಬರೆ
ಯಲು ಸಾಧ್ಯವಾಗದ ಪದಬಳಕೆಯಿಂದ ನಿಂದನೆ, ಮಾತಿನ ಚಕಮಕಿ, ಪರಸ್ಪರ ತೋಳೇರಿಸಿಕೊಂಡು ಹೋಗಿರುವುದು,
ವಿಧೇಯಕದ ಪ್ರತಿಗಳನ್ನು ಹರಿದು ಹಾಕಿದ್ದು, ಸಭಾಪತಿ, ಸ್ಪೀಕರ್ ವಿರುದ್ಧವೇ ಬಾಯಿಗೆ ಬಂದಂತೆ ಮಾತನಾಡಿದ
ಪ್ರಕರಣ ಗಳು ಲೆಕ್ಕಕ್ಕೇ ಸಿಗದಷ್ಟಿವೆ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ಅತ್ಯಂತ ಸಮೃದ್ಧ ಮತ್ತು ಅರ್ಥಪೂರ್ಣ ಸಂವಿಧಾನವನ್ನು ಹೊಂದಿರುವ ಭಾರತದ ಸಂಸತ್ ಮತ್ತು ವಿಧಾನಸಭೆಯಲ್ಲಿ ನಡೆದ ಕೆಲವು ಘಟನೆಗಳಿವು. ಸದನವನ್ನು ಪ್ರಜಾಪ್ರಭುತ್ವದ ದೇವಾಲಯ ಎಂದು ಹೇಳಿಕೊಳ್ಳುತ್ತಲೇ ಜನರಿಂದ ಆಯ್ಕೆಯಾದ ಸಂಸದರು, ಶಾಸಕರು ನಡೆದುಕೊಳ್ಳುವ ರೀತಿ ಇದು. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಂತೂ ಜನಪ್ರತಿನಿಧಿಗಳ ಇಂತಹ ನಡತೆ ಮೇರೆ ಮೀರುತ್ತಿದೆ. ಸದನದ ಹೊರಗೆ ಒತ್ತಟ್ಟಿಗಿರಲಿ, ಒಳಗೂ ಅವರ ವರ್ತನೆ ಹೇಸಿಗೆ ಹುಟ್ಟಿಸುವಂತಿದೆ.

ಈ ಬಗ್ಗೆ ಹೊರಗಿನವರು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದರೆ ಹಕ್ಕುಚ್ಯುತಿ ಮೂಲಕ ಅವರ ಬಾಯಿ ಮುಚ್ಚಿಸಲಾಗುತ್ತದೆ. ಹಾಗೆಂದು ಎಲ್ಲಾ ಜನಪ್ರತಿನಿಽಗಳು ಇದೇ ರೀತಿ ಇದ್ದಾರೆ ಎಂದು ಅರ್ಥವಲ್ಲ. ಸದನದ ಘನತೆ, ಗೌರವ ಕಾಪಾಡುವ ಸಾಕಷ್ಟು ಮಂದಿ ಇಂದಿಗೂ ತಮ್ಮಷ್ಟಕ್ಕೆ ತಾವು ಇದ್ದಾರೆ. ಇದೆಲ್ಲವನ್ನೂ ಹೇಳಲು ಕಾರಣ ಸಂಸತ್ತಿನಲ್ಲಿ ಕೆಲವು ಅಸಂಸದೀಯ ಪದಗಳ ಬಳಕೆಗೆ ನಿರ್ಬಂಧ ವಿಧಿಸಲು ಮುಂದಾದ ಲೋಕಸಭಾ ಕಾರ್ಯಾಲಯದ ನಿರ್ಧಾರ ಮತ್ತು ಅದಕ್ಕೆ ರಾಜಕೀಯ ಪಕ್ಷಗಳಿಂದ ವ್ಯಕ್ತವಾದ ಅಭಿಪ್ರಾಯ.

ಅರಾಜಕತನ, ಶಕುನಿ, ಆಷಾಢಭೂತಿತನ, ಅಸಮರ್ಥ, ಚಮಚಾ, ಚೇಲಾ, ನೌಟಂಕಿ ಸೇರಿದಂತೆ ಹಲವು ಪದಗಳನ್ನು ಬಳಸುಂತಿಲ್ಲ ಎಂದು ಕಾರ್ಯಾಲಯ ಹೇಳಿದೆ. ಇದಕ್ಕೆ ಕಾರಣ, ಆ ಪದಗಳು ಇನ್ನೊಬ್ಬರನ್ನು ಜಗಳಕ್ಕೆ ಪ್ರೇರೇಪಿಸುತ್ತದೆ. ಇದರಿಂದ ವಾಗ್ವಾದ ನಡೆದು ಗದ್ದಲ ಸೃಷ್ಟಿಯಾಗಿ ಕಲಾಪ ಹಾಳಾಗುತ್ತದೆ ಎಂಬುದು. ಆದರೆ, ಈ ಕ್ರಮಕ್ಕೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿವೆ.

ಇದರ ಬೆನ್ನಲ್ಲೇ ಸಂಸತ್ತಿನ ಒಳಗೆ ಮತ್ತು ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸುವಂತಿಲ್ಲ ಎಂದು ಲೋಕಸಭಾ ಕಾರ್ಯಾಲಯ ಮತ್ತೊಂದು ಆದೇಶ ಹೊರಡಿಸಿದೆ. ಆ ಮೂಲಕ ಸ್ವಾತಂತ್ರ್ಯಾನಂತರ ಇದುವರೆಗೆ ಕೇಂದ್ರ ಸರಕಾರದ ಗಮನ ಸೆಳೆಯಲು ಪ್ರತಿಪಕ್ಷಗಳು ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ ಇಲ್ಲವೇ ಸಂಸತ್ ಭವನದ ಮುಂಭಾಗವನ್ನು ಬಳಸಿಕೊಳ್ಳುತ್ತಿದ್ದರು.

ಇದೀಗ ಅದಕ್ಕೂ ಕತ್ತರಿ ಹಾಕಿರುವುದು ಪ್ರತಿಪಕ್ಷಗಳನ್ನು ಕೆರಳುವಂತೆ ಮಾಡಿದೆ. ಹಾಗೆಂದು ಈ ಎರಡೂ ಆದೇಶಗಳು
ಪರಿಪಾಲನೆ ಆಗುತ್ತದೆ ಎಂದುಕೊಂಡರೆ ಅದು ಭ್ರಮೆ ಅಷ್ಟೆ. ಏಕೆಂದರೆ, ಕಾನೂನು ಇರುವುದೇ ಮುರಿಯುವುದಕ್ಕಾಗಿ
ಎಂದುಕೊಳ್ಳುವ ಕೆಲವು ಜನಪ್ರತಿನಿಽಗಳು ಇಂತಹ ಆದೇಶಗಳನ್ನು ಉಲ್ಲಂಸಿಕೊಂಡೇ ಬಂದಿದ್ದಾರೆ. ಹಾಗಿದ್ದರೆ
ಆಗಬೇಕಾ ಗಿರುವುದೇನು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಸಂಸತ್ ಇರಲಿ, ವಿಧಾನಸಭೆ, ವಿಧಾನ ಪರಿಷತ್ ಇರಲಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆ, ಹೋರಾಟ ಜನಪ್ರತಿನಿಧಿಗಳ ಹಕ್ಕು.

ಆದೇಶಗಳ ಮೂಲಕ ಅದನ್ನು ಹತ್ತಿಕ್ಕಲು ಸಾಧ್ಯವಿಲ್ಲ ಮತ್ತು ಅದು ಸಾಧುವೂ ಅಲ್ಲ. ಅದೇ ರೀತಿ ಸಿಟ್ಟಿನ ಭರದಲ್ಲಿ
ಮಾತನಾಡುವಾಗ ನಾಲಿಗೆ ಮೇಲಿನ ಹಿಡಿತ ತಪ್ಪಿ ಅಸಂಸದೀಯ ಪದಗಳು ಬಳಕೆಯಾಗುವುದು ಕೂಡ ಸಹಜ.
ಆದರೆ, ಇದಕ್ಕೆ ಅಂತ್ಯವಿಲ್ಲವೇ ಎಂದರೆ ಇಲ್ಲ ಎಂಬುದಷ್ಟೇ ಉತ್ತರ. ಏಕೆಂದರೆ, ಅದು ಭಾರತೀಯ ಸಂವಿಧಾನದಲ್ಲಿ
ಬಂದಿರುವ ಹಕ್ಕು.

ಹಾಗಿದ್ದರೆ ಮಾಡಬೇಕಾಗಿರುವುದು ಏನು?
ಜನಪ್ರತಿನಿಽಗಳು ತಾವು ಜನರಿಂದ ಆಯ್ಕೆಯಾಗಿ ಬಂದವರು ಎಂಬುದನ್ನು ತಿಳಿದುಕೊಳ್ಳಬೇಕು. ತಮ್ಮ ನಡವಳಿಕೆ
ಯನ್ನು ಸ್ವಯಂ ಹಿಡಿತದಲ್ಲಿಟ್ಟುಕೊಳ್ಳಬೇಕು. ಸರಕಾರದ ವಿರುದ್ಧ, ಆಡಳಿತ ಪಕ್ಷದ ಧೋರಣೆ ಖಂಡಿಸಿ ತಮ್ಮ ಪ್ರತಿಭಟನೆ ಏನೇ ಇರಲಿ, ಅದನ್ನು ಒಮ್ಮೆ ವ್ಯಕ್ತಪಡಿಸಿ ಬಳಿಕ ಪ್ರತಿಪಕ್ಷಗಳು ಕಲಾಪಗಳು ಸುಗಮವಾಗಿ ಮುಂದುವರಿಯಲು ಸಹಕಾರ ನೀಡಬೇಕು. ಸದನದ ಹೊರಗೆ ತಮ್ಮ ಪ್ರತಿಭಟನೆ ಮುಂದುವರಿಸಬೇಕು. ಅದೇ ರೀತಿ ಮಾತುಗಳಿಗೆ ಸ್ವಯಂ ನಿರ್ಬಂಧ ವಿಽಸಿಕೊಳ್ಳಬೇಕು. ಇಷ್ಟಾದರೆ ಆದೇಶ ಹೊರಡಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ.

ಆದರೆ, ಇದನ್ನು ಮಾಡಲು ಸಾಧ್ಯವೇ?
ಸದ್ಯ ರಾಜಕೀಯ ಪಕ್ಷಗಳು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಖಂಡಿತಾ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಕಾರಣ ಅಧಿಕಾರದ ಹಪಹಪಿ. ಸ್ವಾತಂತ್ರ್ಯ ಬಂದು ಸಾಕಷ್ಟು ವರ್ಷವಾಗಿದೆ. ಪ್ರಮುಖ ರಾಜಕೀಯ ಪಕ್ಷಗಳು, ಆ ಪಕ್ಷಗಳನ್ನು ಪ್ರತಿನಿಽಸುವವರು ಅಧಿಕಾರದ ರುಚಿ ನೋಡಿ ಆಗಿದೆ. ಹೀಗಾಗಿ ಅಧಿಕಾರದಲ್ಲಿದ್ದರೆ, ಅದನ್ನು ಉಳಿಸಿಕೊಳ್ಳಲೇ ಬೇಕು ಎಂಬ ಮತ್ತು ಅಧಿಕಾರ ಕಳೆದುಕೊಂಡು ಪ್ರತಿಪಕ್ಷಗಲ್ಲಿ ಕುಳಿತವರಿಗೆ ಮತ್ತೆ ಅಧಿಕಾರಕ್ಕೆ ಬರಲೇ ಬೇಕು ಎಂಬ ಧಾವಂತ. ಹೀಗಾಗಿ ಸಣ್ಣ ಪುಟ್ಟ ವಿಚಾರಗಳಿಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತಮ್ಮ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಆ ಕ್ಷಣದಲ್ಲಿ ತಾವೇನು ಮಾಡುತ್ತಿದ್ದೇವೆ ಎಂಬುದನ್ನೇ ಮರೆತು ವರ್ತಿಸುತ್ತಾರೆ. ಮಾಡಿದ್ದು ತಪ್ಪು ಎಂಬುದು ಗೊತ್ತಾದರೂ ರಾಜಕೀಯ ಕಾರಣಕ್ಕಾಗಿ ಅದನ್ನು ಒಪ್ಪಿಕೊಳ್ಳದೆ ಮಾಡಿದ ತಪ್ಪನ್ನು ಸಮರ್ಥಿಸಿಕೊಳ್ಳಲು ಮತ್ತಷ್ಟು ತಪ್ಪುಗಳನ್ನು ಮಾಡುತ್ತಲೇ ಹೋಗುತ್ತಾರೆ.

ಸಂಸತ್ತಿನ ವಿಚಾರವನ್ನೇ ತೆಗೆದುಕೊಂಡರೆ, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ
ಅಧಿಕಾರಕ್ಕೆ ಬಂದ ಮೇಲೆ ಆರಂಭದ ಕೆಲವು ಅಧಿವೇಶನಗಳನ್ನು ಹೊರತುಪಡಿಸಿ ಬಹುತೇಕ ಅಧಿವೇಶನಗಳು ಸಮ
ರ್ಪಕವಾಗಿ ನಡೆದೇ ಇಲ್ಲ. ಮೊದಲೆಲ್ಲಾ ಸರಕಾರದ ನಿಲುವು ಖಂಡಿಸಿ ಸಭಾತ್ಯಾಗ ಮಾಡುವುದರೊಂದಿಗೆ ಪ್ರತಿಭಟನೆ
ಮುಕ್ತಾಯಗೊಳ್ಳುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸದನಗಳ ಕಲಾಪವನ್ನು ದಿನಗಟ್ಟಲೆ ಹಾಳು ಮಾಡಲಾಗುತ್ತಿದೆ. 20 ದಿನ, ಒಂದು ತಿಂಗಳ ಅಧಿವೇಶನದಲ್ಲಿ ನಾಲ್ಕೈದು ದಿನದ ಕಲಾಪಗಳೂ ಸರಿಯಾಗಿ ನಡೆಯುವುದೇ ಕಷ್ಟ ಎನ್ನುವಂತಾಗಿದೆ.

ಕಲಾಪ ನಡೆದರೂ ಅದರಲ್ಲಿ ಬಹುತೇಕ ಭಾಗ ಪಕ್ಷಗಳ ಟೀಕೆ, ವೈಯಕ್ತಿಕ ನಿಂದನೆ, ಸಿದ್ಧಾಂತದ ತಾಕಲಾಟಗಳು ನಡೆಯು ತ್ತವೆಯೇ ಹೊರತು ಮಹತ್ವದ ಅಥವಾ ಅರ್ಥಪೂರ್ಣ ಚರ್ಚೆ ನಡೆಯುವುದು ಕಷ್ಟ ಎನ್ನುವಂತಾಗಿದೆ. ಹಾಗೆಂದು ಇದಕ್ಕೆ ಪ್ರತಿಪಕ್ಷಗಳು ಮಾತ್ರ ಕಾರಣವಲ್ಲ. ಆಡಳಿತ ಪಕ್ಷದ ಪಾಲೂ ಇರುತ್ತದೆ. ಏಕೆಂದರೆ, ಮುಕ್ತ ಚರ್ಚೆ ನಡೆದರೆ ತಮ್ಮ ಬಂಡವಾಳ ಎಲ್ಲಿ ಬಯಲಾಗುವುದೋ ಎಂಬ ಆತಂಕ ಅವರನ್ನು ಕಾಡುತ್ತಿರುತ್ತದೆ.

ಆದ್ದರಿಂದ ಸದನದ ಕಲಾಪಗಳು ಮುಕ್ತವಾಗಿ, ಆರೋಗ್ಯಕರವಾಗಿ ನಡೆಯಬೇಕಾದರೆ ಅದಕ್ಕೆ ನಿರ್ಬಂಧ ಹೇರುವುದಲ್ಲ. ಚುನಾಯಿತ ಪ್ರತಿನಿಽಗಳ ಮನಸ್ಸು ಪರಿವರ್ತನೆಯಾಗಬೇಕು. ತಾವು ಜನರಿಗೆ ಉತ್ತರದಾಯಿಗಳು ಎಂಬ ಭಾವನೆ ಅವರಲ್ಲಿ ಮೂಡಬೇಕು. ತಮ್ಮ ನಡತೆ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಇದೇ ಸ್ಥಿತಿ ಮುಂದುವರಿಯುತ್ತದೆ.

ಲಾಸ್ಟ್ ಸಿಪ್: ಬೆಕ್ಕುಗಳದ್ದೇ ಸಾಮ್ರಾಜ್ಯದಲ್ಲಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?