Sunday, 8th September 2024

ಶಿಕಾಗೋ ಹಿತ್ತಲ ಜೀವ ವಿಸ್ಮಯ

ಶಿಶಿರ ಕಾಲ

ಶಿಶಿರ ಹೆಗಡೆ

shishirh@gmail.com

ಈ ಎಲ್ಲ ಜೀವಿಗಳು ಚಳಿಗಾಲಕ್ಕಾಗಿ ಬೇಸಿಗೆಯಲ್ಲಿ ಅಥವಾ ಬೇಸಿಗೆಗೋಸ್ಕರ ಚಳಿಗಾಲವನ್ನು ಸತ್ತಂತೆ ಬದುಕಿ ದೂಡುತ್ತವೆಯೋ ಎನ್ನುವ ಪ್ರಶ್ನೆ ನನ್ನನ್ನು ಸದಾ ಕಾಡುತ್ತದೆ. ಇವುಗಳ ಬದುಕಿನ ಹೋರಾಟದ ಮುಂದೆ ಮನುಷ್ಯ ಬದುಕಿನ ಯಾವೊಂದು ಚಾಲೆಂಜ್ ಕೂಡ ಚಾಲೆಂಜಿಂಗ್ ಅನ್ನಿಸುವುದೇ ಇಲ್ಲ.

ಶಿಕಾಗೋದ ನಡು ಬೇಸಿಗೆಯೆಂದರೆ ಹೆಚ್ಚೂ ಕಡಿಮೆ ನಮ್ಮೂರ ಕರಾವಳಿಯದ್ದೇ ವಾತಾವರಣ. ಸುಡುವ ಬಿಸಿಲು, ಆರ್ದ್ರತೆ, ಆಗೀಗ ನಮ್ಮ ಮಲೆನಾಡಿನ ಮಳೆಯನ್ನೂ ಮೀರಿಸುವ ಕೋಲ್ಮಿಂಚು, ಗುಡುಗು ಸಿಡಿಲಿನ ಮಳೆ. ನಡುನಡುವೆ ಮನೆಯನ್ನೇ ಹಾರಿಸಿ ಕೊಂಡು ಹೋಗುತ್ತವೆಯೋ ಎನ್ನುವಷ್ಟು ತೀವ್ರವಾಗಿ ಬೀಸುವ ಗಾಳಿ.

ಮಿಚಿಗನ್ ಸರೋವರಕ್ಕೆ ತಾಗಿಕೊಂಡೇ ಇರುವ ಶಿಕಾಗೋಕ್ಕೆ ಇನ್ನೊಂದು ಹೆಸರು ವಿಂಡಿ ಸಿಟಿ – ಬಿರುಗಾಳಿಯ ನಗರ. ಮಿಚಿಗನ್ ಮಹಾ ಸರೋವರ ಉತ್ತರ ಅಮೆರಿಕದ ಐದು ಬೃಹತ್ ಸರೋವರಗಳಲ್ಲಿ ಒಂದು. ಸರೋವರ ಎಂದರೆ ನೋಡಲು ಥೇಟ್ ಸಮುದ್ರವೇ. ಆದರೆ ನೀರು ಮಾತ್ರ ಸಿಹಿ. ಇಡೀ ಶಿಕಾಗೋ ಮತ್ತು ಸುತ್ತಲಿನ ಪ್ರದೇಶಕ್ಕೆ, ಇಲಿನಾಯ, ಮಿಚಿಗನ್, ಇಂಡಿಯಾನಾ, ವಿಸ್ಕಾನ್ಸಿನ್ ಈ ಎಲ್ಲ ರಾಜ್ಯಗಳ ಬಹು ಭಾಗಕ್ಕೆ ನೀರು ಸರಬ ರಾಜು ಆಗುವುದೇ ಈ ಮಹಾ ಸರೋವರದಿಂದ. ಶಿಕಾಗೋ ಊರಿನ ತುಂಬೆಲ್ಲ ಚಿಕ್ಕ ಚಿಕ್ಕ ಸರೋವರಗಳಿವೆ.

ನೀರಿಗೆ ಕೊರತೆಯೇ ಇಲ್ಲದ ಊರು ಶಿಕಾಗೋ. ಶಿಕಾಗೋ ಬೇಸಿಗೆಯ ಬಿಸಿಲಿನ ತಾಪ 35’ ಸೆಲ್ಸಿಯಸ್ಸಿಗೆ ತಲುಪುತ್ತದೆ. ದಿನವಿಡೀ ಎಸಿ ಉರಿಸುತ್ತಲೇ ಇರಬೇಕು. ಬೇಸಿಗೆಯೆಂದರೆ ಮರಗಳೆಲ್ಲ ಹಸಿರಿನಿಂದ ತುಂಬಿರುತ್ತವೆ. ನೂರೆಂಟು ರಂಗುಬಿರಂಗಿ ಹಕ್ಕಿಗಳು, ಮೊಲ, ಇಣಚಿ, ಜಿಂಕೆ, ಉತ್ತರ ಅಮೆರಿಕದ ತೋಳ ಇವೆಲ್ಲ ಎಲ್ಲಿಲ್ಲದ ಚಟುವಟಿಕೆಯಲ್ಲಿರುವುದೇ ಬೇಸಿಗೆಯಲ್ಲಿ. ಈ ಎಲ್ಲ ಪ್ರಾಣಿಗಳ ಜತೆ ಮನುಷ್ಯ ಚಟುವಟಿಕೆಯೂ ಬೇಸಿಗೆಯಲ್ಲಿಯೇ ಹೆಚ್ಚು. ಏಕೆಂದರೆ ಇಲ್ಲಿನ ಚಳಿಗಾಲ ಅಂಥದ್ದು.

ಬಹುತೇಕ ಜೀವಿಗಳು ಬದುಕಲು ಅಸಾಧ್ಯವೆನ್ನುವಷ್ಟು. ಬೇಸಿಗೆಯ ಸೆಖೆ 35’ ಸೆಲ್ಸಿಯಸ್ – ಆದರೆ ಚಳಿಗಾಲದ ಚಳಿ -15 ರಿಂದ -20’ ಸೆ. ಸಾಮಾನ್ಯ. -20 ಸೆಲ್ಸಿಯಸ್ ಇದ್ದರೂ ಅದರ ಅನುಭವ -30’ ರಿಂದ -40’ ನಂತಿರುತ್ತದೆ. ಇದಕ್ಕೆ ಕಾರಣ ಮಿಚಿಗನ್ ಸರೋವರದ ಮೇಲಿಂದ ಬೀಸುವ ಚಳಿ ಗಾಳಿ. ಹರಿಯದ ನೀರಿನ ಆಕರಗಳೆಲ್ಲ ಹೆಪ್ಪುಗಟ್ಟಿರುತ್ತವೆ. ಚಳಿಗಾಲದಲ್ಲಿ ಕೆಲ ದಿನ ಉಷ್ಣತೆ ಇದ್ದಕ್ಕಿದ್ದಂತೆ -40’ ಸೆ. ಆಗುವುದೂ ಇದೆ. ಈಗ ಎರಡು ವರ್ಷದ ಹಿಂದೆ ಎರಡು ದಿನ -56’ ಸೆ. ಮುಟ್ಟಿತ್ತು. ಆಗಂತೂ ಮನೆಯ ಬಾಗಿಲು ತೆರೆಯಲೂ ಆಗುತ್ತಿರಲಿಲ್ಲ.

ಮನೆಯಿಂದ ಹೊರಕ್ಕೆ ಹೋಗಬಾರದೆಂದು ಸರಕಾರವೇ ಆದೇಶಿಸಿತ್ತು. ಹಿಮ ಒಂದೆರಡು ಫೂಟು ಬೀಳುವುದು ಸಾಮಾನ್ಯ. ಇಷ್ಟು ಚಳಿಯಲ್ಲಿ ಮನೆಯ ನಲ್ಲಿಯ ನೀರನ್ನು ಚಿಕ್ಕದಾಗಿ ಬಿಟ್ಟಿರದಿದ್ದರೆ ಪೈಪ್ ಐಸ್ ಆಗಿ ಒಡೆದುಹೋಗುತ್ತವೆ. ಇಲ್ಲಿ ಚಳಿಗಾಲ ಶುರುವಾಯಿತೆಂದರೆ ಸುತ್ತಲಿನ ಜಗತ್ತಿಗೆ ಜಗತ್ತೇ ಬದಲಾಗಿಬಿಡುತ್ತದೆ. ಬೇಸಿಗೆಯಲ್ಲಿ ಎಂದರಲ್ಲಿ ಹಸಿರಾದರೆ ಚಳಿಗಾಲವೆಂದರೆ
ಕೆಲವು ಸೂಜಿಮೊನೆಯ ಗಿಡಗಳನ್ನು ಬಿಟ್ಟು ಇನ್ಯಾವುದೇ ಹಸಿರು ಕಾಣುವುದಿಲ್ಲ. ಮರಗಳು ತಮ್ಮೆಲ್ಲ ಎಲೆಗಳನ್ನು ಕಳೆದು ಕೊಂಡು ಕೋಲು ಹೆಂಕಲುಗಳಾಗಿ ನಿಂತಿರುತ್ತವೆ.

ನಂತರ ಹಿಮಪಾತವಾಗುವಾಗ ಮರಗಳೆಲ್ಲ ಹಿಮ ಹೊತ್ತು ಬೆಳ್ಳಗೆ ನಿಂತಿರುತ್ತವೆ. ಮನೆಯ ಸುತ್ತ ಹುಲ್ಲಿನ ‘ಲಾನ್’ ಕೂಡ
ಬೆಳೆಯುವುದನ್ನೇ ನಿಲ್ಲಿಸಿಬಿಡುತ್ತವೆ. ಬೇಸಿಗೆಯಲ್ಲಿ ಹಿತ್ತಲಲ್ಲಿ ಏನನ್ನೇ ಬೆಳೆಯಬೇಕೆಂದರೂ ಅದಕ್ಕೆ ಬೇಲಿ ಹಾಕಿಯೇ ಬೆಳೆಸ ಬೇಕು. ಮೊಲ, ಜಿಂಕೆ ಇವೆಲ್ಲ ಒಂದನ್ನೂ ಉಳಿಸುವುದಿಲ್ಲ. ನಮ್ಮೂರಲ್ಲಿ ಅಪರೂಪವೆನ್ನಿಸುವ ಈ ಪ್ರಾಣಿಗಳು ಇಲ್ಲಿ ನಮ್ಮೂರ ನಾಯಿ, ದನಗಳಂತೆ.

ಅಷ್ಟಕ್ಕೂ ಅವುಗಳ ನೆಲದಲ್ಲಿ ನಾವು ಮನೆಕಟ್ಟಿಕೊಂಡು ಅವಕ್ಕೆ ಬಯ್ಯುವಂತಿಲ್ಲ ಬಿಡಿ. ಇನ್ನು ಬೇಸಿಗೆಯಲ್ಲಿ, ಮೊಲಗಳು
ಮರಿ ಹಾಕುವ ಸಮಯದಲ್ಲಂತೂ ಉತ್ತರ ಅಮೆರಿಕದ ತೋಳಗಳು (ಕಾಯೋಟೆ) ಹಿತ್ತಲಲ್ಲಿ ರಾತ್ರಿಯೆಲ್ಲ ತಿರುಗಾಡುತ್ತಿರುತ್ತವೆ. ಅದು ಅವುಗಳಿಗೆ ಹಬ್ಬದೂಟದ ಕಾಲ. ಈ ಕಾಡು ಮೊಲಗಳು ನೆಲದ ಹುಲ್ಲಿನ ಮಧ್ಯೆ ಸುಳಿವೂ ಸಿಗದಂತೆ ಆಳವಾದ ಬಿಲ ತೋಡಿ ಅಲ್ಲಿ ವಾಸಿಸುತ್ತವೆ. ಲಾನ್ ಕತ್ತರಿಸಲು ಮಷೀನ್ ತೆಗೆದುಕೊಂಡು ಹಿತ್ತಲಿಗೆ ಹೋದಾಗ ಶಬ್ದಕ್ಕೆ ಗಾಬರಿಗೊಂಡು ಚಿಕ್ಕ ಮರಿಗಳು ಹೊರಬಂದು ಚಪಿಲ್ಲಿಯಾಗಿ ಓಡುವುದು ಸಾಮಾನ್ಯ.

ಕೆಲವೊಮ್ಮೆ ಅವು ಮಷೀನ್ ಗೆ ಸಿಕ್ಕಿ ಸಾಯುವುದೂ ಇದೆ. ಶಿಕಾಗೋ ಹಿತ್ತಲೆಂದರೆ ವಿವಿಧ ಹಕ್ಕಿಗಳು. ರಾಬಿನ್, ಕೆನಡಾ ಗೂಸ್, ಮಲಾರ್ಡ್, ಬಾತುಕೋಳಿ, ಹದ್ದುಗಳು, ಕಾಮನ್ ಗ್ರಾಕೆಲ್, ಕಾರ್ಡಿನಲ್, ಗುಬ್ಬಿ ಹೀಗೆ ನೂರೆಂಟು ಹಕ್ಕಿಗಳು. ಹಕ್ಕಿಗಳಿಗೆ ಆಹಾರ, ನೀರು ಇಟ್ಟು ಅವುಗಳನ್ನು ನೋಡುವುದೇ ಒಂದು ಅದ್ಭುತ ಅನುಭವ.

ಇದು ಬೇಸಿಗೆಯ ಹಿತ್ತಲಾಯಿತು. ಅದೇ ಹಿತ್ತಲು ಚಳಿಗಾಲದಲ್ಲಿ ಸಂಪೂರ್ಣ ನಿರ್ಜೀವ. ಹಿಮಾವೃತವಾದಾಗ ಒಂದೇ ಒಂದು ಹಕ್ಕಿಯೂ ಕಾಣಿಸುವುದಿಲ್ಲ. ಎಲ್ಲಾ ಮೂರ್ನಾಲ್ಕು ದಿನಕ್ಕೆ ಒಮ್ಮೆ ಮೊಲಗಳು ಬಿಲದಿಂದ ಹೊರಬರುವುದು ಬಿಟ್ಟರೆ ಮತ್ತಿನ್ನೊಂದು ಚಟುವಟಿಕೆ ಇರುವುದಿಲ್ಲ. ನಾವು ಮನುಷ್ಯರೇನೋ ಮನೆಯಲ್ಲಿ ಹೀಟರುಗಳನ್ನು ಹಾಕಿಕೊಂಡು ಉಳಿಯು ತ್ತೇವೆ. ಹೊರಗೆ ಎರಡು ಮೂರು ಪದರದ ಬಟ್ಟೆ, ಮೊಣಕಾಲವರೆಗೆ ಷೂಗಳ ಜತೆಗೆ, ಕಾರಿನಲ್ಲಿ ಹೊರಡುವುದಕ್ಕಿಂತ ಹತ್ತು ನಿಮಿಷ ಮೊದಲು ಹೀಟರ್ ಹಚ್ಚಿ ಬಿಸಿ ಮಾಡಿಕೊಳ್ಳಬೇಕು.

ಆದರೆ ಈ ಪ್ರಾಣಿಗಳು ಹೇಗೆ ಬದುಕುತ್ತವೆ, ಎಲ್ಲಿಗೆ ಹೋಗುತ್ತವೆ? ಬಹುತೇಕ ಹಕ್ಕಿಗಳು ಚಳಿ ಶುರುವಾಯಿತೆಂದರೆ ದೇಶದ
ಇನ್ನಷ್ಟು ದಕ್ಷಿಣಕ್ಕೆ, ಉಷ್ಣತೆ ಹೆಚ್ಚಿರುವೆಡೆ ವಲಸೆ ಹೊರಡುತ್ತವೆ. ಆದರೂ ಅಲ್ಲಿಯೂ ಚಳಿಯೇನು ಕಡಿಮೆಯಿರುವುದಿಲ್ಲ. ಹಾಗಾಗಿ ಚಳಿಗಾಲಕ್ಕೆ ಮುಂಚೆಯೇ ಯಥೇಚ್ಛ ತಿಂದು ಚರ್ಮದ ಒಂದು ಪದರದಲ್ಲಿ ಕೊಬ್ಬು ಶೇಖರಿಸಿಕೊಳ್ಳುತ್ತವೆ. ಈ ಕೊಬ್ಬು ಅವಕ್ಕೆ ದೂರ ಹಾರಲು ಶಕ್ತಿಕೊಡುತ್ತವೆ – ಚಳಿಗೆ ಹೊದಿಕೆಯಂತೆ ಕೆಲಸಮಾಡುತ್ತವೆ. ಆದರೆ ಕೆಲ ಧಾಡಸಿ ಹಕ್ಕಿಗಳು ಮಾತ್ರ, ಇಲ್ಲಿಯೇ ಉಳಿದುಬಿಡುತ್ತವೆ.

ಅವು ಸಾಮಾನ್ಯವಾಗಿ ಕುರುಚಲು, ಸೂಜಿಮೊನೆಯ ಮರಗಳಲ್ಲಿ ಗಟ್ಟಿಯಾಗಿ ಕೂತು ಇಂತಹ ಘೋರ ಚಳಿಗಾಲವನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಕಳೆಯುತ್ತವೆ. ಇನ್ನು ಈ ಮೊಲಗಳು ಬಹುತೇಕ ಬಿಲದಲ್ಲಿಯೇ ಕಳೆಯುತ್ತವೆ. ಬೇಸಿಗೆಯಲ್ಲಿ ನರಪೇತಲನಂತಿರುವ ಇವು ಇನ್ನೇನು ಚಳಿಗಾಲ ಶುರುವಾಗುವಾಗ ತುಪ್ಪಳ ಉದುರಿಸುವುದನ್ನು ನಿಲ್ಲಿಸಿ ಮೈತುಂಬಿಕೊಳ್ಳುತ್ತವೆ. ದೇಹ ಗಾತ್ರ ಹೆಚ್ಚಿಸಿ
ಕೊಳ್ಳುತ್ತವೆ. ಅದಕ್ಕಿಂತ ಮೊದಲು ಬಲಿತ ದೇಹ ಹೊಕ್ಕುವಷ್ಟು ಗಾತ್ರವನ್ನು ಅಂದಾಜಿಸಿ ಬಿಲ ಕೊರೆದು, ಯಥೇಚ್ಛ ಆಹಾರ ವನ್ನು ತುಂಬಿಸಿಕೊಂಡಿರುತ್ತವೆ.

ಇಣಚಿ, ಗುಬ್ಬಚ್ಚಿಗಳು ಕೂಡ ಮೈ ಮೇಲೆ ತುಪ್ಪಳ ಬೆಳೆಸಿಕೊಂಡು, ಆಹಾರ ಶೇಖರಿಸಿಕೊಂಡು ಚಳಿಗೆ ಸಿದ್ಧವಾಗುವುದು ಇದೇ
ರೀತಿ, ಇದೇ ಸಮಯದಲ್ಲಿ. ಇನ್ನೊಂದು ಹಿತ್ತಲಲ್ಲಿ ಕಾಣಿಸಿಕೊಳ್ಳುವ, ಬಲು ನಾಚುವ ಪ್ರಾಣಿ ಎಂದರೆ ಗ್ರೌಂಡ್ ಹಾಗ್. ಇದು ಹೆಗ್ಗುಳ, ಇಲಿ, ಮೊಲ ಇವನ್ನೆಲ್ಲ ಸೇರಿಸಿ ಒಂದು ಪ್ರಾಣಿಯನ್ನು ತಯಾರಿಸಿದರೆ ಹೇಗೋ ಹಾಗಿರುತ್ತವೆ. ಇಲಿಯದೇ ಜಾತಿಯ ಪ್ರಾಣಿ.

ಇವು ಚಳಿಗಾಲಕ್ಕೆ ಒಗ್ಗಿಕೊಳ್ಳುವ ರೀತಿಯೇ ಬೇರೆ. ಸಾಮಾನ್ಯವಾಗಿ ಗ್ರೌಂಡ್ ಹಾಗ್ ಎದೆ ಬಡಿತ ಬೇಸಿಗೆಯಲ್ಲಿ ಪ್ರತೀ ನಿಮಿಷಕ್ಕೆ ಎಂಬತ್ತರಷ್ಟಿರುತ್ತದೆ. ಆದರೆ ಚಳಿಗಾಲದಲ್ಲಿ ಬಿಲಕ್ಕೆ ಹೊಕ್ಕ ಅವು ಹೈಬೆರ್ನೇಷನ್ ಅವಸ್ಥೆ ತಲುಪುತ್ತವೆ. ಆಗ ಅವುಗಳ ಹೃದಯ ಮಿಷಕ್ಕೆ ಕೇವಲ ಮೂರರಿಂದ ನಾಲ್ಕು ಬಾರಿಯಷ್ಟೇ ಬಡಿದುಕೊಳ್ಳುತ್ತದೆ. ಇಡೀ ದೇಹ ಸಂಪೂರ್ಣ ನಿಷ್ಕ್ರಿಯವಾಗಿ ಅರೆ ಸತ್ತಂತಿರುತ್ತವೆ. ಹೀಗಾಗಿ ಹೆಚ್ಚಿನ ಆಹಾರ ಬೇಕಾಗುವುದಿಲ್ಲ. ಆ ಸಮಯದಲ್ಲಿ ಅವುಗಳ ದೇಹದ ಉಷ್ಣತೆ 35’ ಸೆ. ಇಂದ 3’ ಸೆ. ಗೆ ಇಳಿದಿರುತ್ತದೆ.

ಒಮ್ಮೆ ನಮ್ಮ ಮನೆಯ ಒಡೆದ ಪೈಪ್ ಸರಿ ಪಡಿಸಲು ಹೊಂಡ ತೋಡಿದಾಗ ಅಂದು ಗ್ರೌಂಡ್ ಹಾಗ್, ಮರದ ಕೊರಡಿನಂತೆ
ಬಿಲದಲ್ಲಿ ಮಲಗಿತ್ತು. ಪುಣ್ಯವಶಾತ್ ಮಾರನೆಯ ದಿನವೇ ಉಷ್ಣತೆ ಹೆಚ್ಚಿ ಅದು ಸಹಜಕ್ಕೆ ಮರಳಿ ಮತ್ತೆ ಇನ್ನೊಂದು ಬಿಲ ದೊಳಕ್ಕೆ ಸೇರಿದ್ದು ಸಿಸಿ ಟಿವಿಯಲ್ಲಿ ನೋಡಿ ಸಮಾಧಾನವಾಯ್ತು. ಈ ಹೈಬೆರ್ನೇಷನ್ ಎನ್ನುವ ಸ್ಥಿತಿಯ ಸಾಧ್ಯತೆ ಸುಮಾರು
ಇನ್ನೂರು ಪ್ರಾಣಿವರ್ಗಗಳಿಗಿದೆ. ಕೆಲ ಪ್ರಭೇದದ ಆಮೆ, ಪೂವರ್ವಿಲ್ ಹಕ್ಕಿ, ಅರ್ಕಿಟಿಕ್ ಇಣಚಿ, ಚಿಕ್ಕ ಒಂದು ವರ್ಗದ ಇಲಿ, ಕರಡಿ ಇವುಗಳೆಲ್ಲ ಬಿಲದೊಳಕ್ಕೆ ಸೇರಿ, ಸಂಪೂರ್ಣ ಚಯಾಪಚಯ ಕ್ರಿಯೆಯನ್ನೇ ನಿಲ್ಲಿಸಿಕೊಂಡು ಚಳಿಗಾಲ ಕಳೆಯುತ್ತವೆ.

ಚಿಕಾಗೋದಲ್ಲಿ ಉತ್ತರದಲ್ಲಿ ಕಾಣಸಿಗುವ ಅರ್ಕಿಟಿಕ್ ಇಣಚಿ ಬಿಲದೊಳಕ್ಕೆ ಸೇರಿ, ದೇಹದ ಉಷ್ಣತೆಯನ್ನು -2.3 ಸೆ. ಗೆ ಇಳಿಸಿ ಕೊಂಡು ಸಂಪೂರ್ಣ ನಿಷ್ಕ್ರಿಯವಾಗಿ ಬಿಡುತ್ತವೆ. ಇನ್ನು ಹಾರುಬೆಕ್ಕಿನಂತಿರುವ ಡ್ವಾರ್ಫ್ ಲೀಮರ್ ಚಳಿಗಾಲಕ್ಕೆ ಬೇಕಾಗುವ ಕೊಬ್ಬನ್ನು ಬಾಲದಲ್ಲಿ ಶೇಖರಿಸಿಕೊಂಡು ಹೈಬೆರ್ನೇಷನ್ ಸ್ಥಿತಿ ತಲುಪುತ್ತದೆ. ಇವುಗಳ ಬೇಸಿಗೆಯ ಎದೆ ಬಡಿತ ಸುಮಾರು ೧೮೦ರಷ್ಟಿದ್ದರೆ, ಹೀಗೆ ಹೈಬೆರ್ನೆಟ್ ಸ್ಥಿತಿಯಲ್ಲಿ ಅದು ನಿಮಿಷಕ್ಕೆ ನಾಲ್ಕಕ್ಕೆ ಇಳಿದಿರುತ್ತದೆ. ಈ ಸಮಯದಲ್ಲಿ ಅವುಗಳು ಪ್ರತೀ ಇಪ್ಪತ್ತೊಂದು ನಿಮಿಷಕ್ಕೆ ಒಮ್ಮೆ ಒಂದು ಉಸಿರು ತೆಗೆದುಕೊಳ್ಳುತ್ತವೆ.

ಹೀಗೆ ಹೈಬೆರ್ನೆಟ್ ಆಗುವ ಬಹುತೇಕ ಜೀವಿಗಳು ಈ ಸಮಯ ಮಲಮೂತ್ರ ವಿಸರ್ಜಿಸುವುದಿಲ್ಲ. ಬದುಕುಳಿಯಲು, ಮೆದುಳು ಮತ್ತು ಅಂಗಾಂಗಗಳು ಸುಸ್ಥಿತಿಯಲ್ಲಿರಲು ಎಷ್ಟು ರಕ್ತ ಸಂಚಲನ, ಆಮ್ಲಜನಕ ಬೇಕೋ ಅಷ್ಟನ್ನೇ ಇಟ್ಟುಕೊಂಡಿರುತ್ತವೆ.
ಹೈಬೆರ್ನೇಷನ್‌ನ ಇನ್ನೊಂದು ಲೆವೆಲ್ ಎಂದರೆ ಅಲಾಸ್ಕಾದಲ್ಲಿ ಕಾಣಸಿಗುವ ಒಂದು ಜಾತಿಯ ಮರಗಪ್ಪೆಗಳು. ಇವಂತೂ ಹಿಮಗಟ್ಟುವ ಚಳಿಯಲ್ಲಿ ಬಹುತೇಕ ಫ್ರೀಜ್ ಆಗಿ ಬಿಡುತ್ತವೆ. ಹೃದಯಬಡಿತ, ರಕ್ತ ಸಂಚಲನ ಸಂಪೂರ್ಣ ಸ್ತಬ್ಧವಾಗುತ್ತದೆ. ಅದಕ್ಕೂ ಮೊದಲು ದೇಹದಲ್ಲಿ, ರಕ್ತದಲ್ಲಿ ಮೂತ್ರವನ್ನು ಸೇರಿಸುವುದರ ಮೂಲಕ ಗ್ಲುಕೋಸ್ ಪ್ರಮಾಣ ಹೆಚ್ಚಿಸಿಕೊಂಡಿರುತ್ತವೆ.

ಆಗ ದೇಹದ ಪ್ರತಿ ಜೀವಕೋಶ ಸಕ್ರಿಯವಾಗಿದ್ದರೂ ಒಂದಕ್ಕೊಂದು ಸಂಜ್ಞೆ ರವಾನಿಸುವುದಿಲ್ಲ. ಅವು ಇದೇ ಸ್ಥಿತಿಯಲ್ಲಿ ಸರಿ ಸುಮಾರು ಏಳು ತಿಂಗಳು ಸತ್ತಂತೆ ಇರುತ್ತವೆ. ಉಷ್ಣತೆ ಹೆಚ್ಚಿದಾಕ್ಷಣ – ಫ್ರೋಜನ್ ಆಹಾರವನ್ನು ಬಿಸಿ ಬಂಡಿಯ ಮೇಲೆ ಹಾಕಿ ದಾಗ ಅರಳಿ ಬಿಟ್ಟುಕೊಳ್ಳುವಂತೆ ಸಹಜಕ್ಕೆ ಮರಳುತ್ತವೆ, ನೆಗೆದು ಹಾರುತ್ತವೆ.

ಉಟ್ಟಾರೆ ಈ ಶೀತಲ ಲೋಕದ ಜೀವಿಗಳು ಅತಿ ಚಳಿಗೆ ದೇಹವನ್ನು ಹೊಂದಿಸಿಕೊಳ್ಳುವ ರೀತಿಯೇ ಒಂದು ವಿಸ್ಮಯ. ಅದನ್ನು ಸೂಕ್ಷ್ಮವಾಗಿ ಗ್ರಹಿಸುವಾಗ ಹೊಸತೊಂದು ಜೀವ ಲೋಕದ ಬೆರಗು ನಮ್ಮೆದುರಿಗೆ ತೆರೆದುಕೊಳ್ಳುತ್ತದೆ. ಈ ಎಲ್ಲ ಜೀವಿಗಳು ಚಳಿಗಾಲಕ್ಕಾಗಿ ಬೇಸಿಗೆಯಲ್ಲಿ ಬದುಕುತ್ತವೆಯೋ ಅಥವಾ ಬೇಸಿಗೆಗೋಸ್ಕರ ಚಳಿಗಾಲವನ್ನು ಸತ್ತಂತೆ ಬದುಕಿ ದೂಡುತ್ತವೆಯೋ ಎನ್ನುವ ಪ್ರಶ್ನೆ ನನ್ನನ್ನು ಸದಾ ಕಾಡುತ್ತದೆ. ಇವುಗಳ ಬದುಕಿನ ಹೋರಾಟದ ಮುಂದೆ ಮನುಷ್ಯ ಬದುಕಿನ ಯಾವೊಂದು ಚಾಲೆಂಜ್ ಕೂಡ ಚಾಲೆಂಜಿಂಗ್ ಅನ್ನಿಸುವುದೇ ಇಲ್ಲ.

error: Content is protected !!