Sunday, 8th September 2024

ಸೊಕ್ಕಿದ ಊರು ಸತ್ತಾಗ ಡಾಲರಿಗೊಂದು ಮನೆ

ಶಿಶಿರ ಕಾಲ

shishirh@gmail.com

ಕೆಲ ವರ್ಷದ ಹಿಂದೆ ಶಿಕಾಗೋ ಕನ್ನಡ ಕೂಟದ ಸಾಹಿತ್ಯೋತ್ಸವಕ್ಕೆ ಲೇಖಕ, ಕಥೆಗಾರ ವಸುಧೇಂದ್ರ ಬಂದಿದ್ದರು. ಆಗ ಅವರು ವಿಜಯನಗರ ಸಾಮ್ರಾಜ್ಯ, ಅದರ ಇತಿಹಾಸ, ವೈಭವ, ಬಹಮನಿ ಸಾಮ್ರಾಜ್ಯ, ಲಿಸ್ಬನ್ ನಗರ, ಅಲ್ಲಿನ ತೇಜೋ ನದಿ ಇವುಗಳ ಅಧ್ಯಯನದಲ್ಲಿಯೇ ಮುಳುಗಿಹೋಗಿದ್ದರು.

ಅವರು ಇತಿಹಾಸ ಅಧ್ಯಯನದ ತೀರಾ ಆಳಕ್ಕೆ ಇಳಿದದ್ದು ಅವರ ಮಾತಿನಲ್ಲಿಯೇ ಅಂದಾ ಜಾಗುತ್ತಿತ್ತು. ಆಗ ಬಹುಶಃ ಅವರು ‘ತೇಜೋ ತುಂಗಭದ್ರಾ’ ಕಾದಂಬರಿಯನ್ನು ಅರ್ಧ ಬರೆದಾಗಿತ್ತಿರಬೇಕು. ಅವರ ಕಾದಂಬರಿಗೆ ಅವಶ್ಯಕತೆಯಿರುವುದಕ್ಕಿಂತ ಸುಮಾರು ಹತ್ತಿಪ್ಪತ್ತು ಪಟ್ಟು ಜಾಸ್ತಿ ರಿಸರ್ಚ್ ಮಾಡಿಕೊಂಡಿದ್ದರು. ಪಟ್ಟಾಂಗ ಹೊಡೆಯುವಾಗ ಇತಿಹಾಸದ ಒಂದಿಷ್ಟು ಘಟನೆಗಳನ್ನು ಅವರು, ಬಿಂದುಗಳನ್ನು ಹಾಕಿ ರಂಗೋಲಿ ಬರೆದಂತೆ ವಿವರಿಸುತ್ತ ಹೋದಾಗ ಮಂತ್ರಮುಗ್ಧವಾಗಿ ಕೇಳುತ್ತ ಸಮಯ ಸರಿದದ್ದೇ ತಿಳಿಯಲಿಲ್ಲ.

ಶಾಲೆಗಳಲ್ಲಿ ಇತಿಹಾಸವನ್ನು ಕೆಟ್ಟ ಬೋರಿಂಗ್ ವಿಷಯದಂತೆ ಅನುಭವಿಸಿದ್ದ, ಇತಿಹಾಸ ಪುಸ್ತಕದ, ಅದರಲ್ಲಿ ಬರುವ ಇಸವಿಗಳ ಶೋಷಣೆಗೆ ಒಳಗಾಗಿದ್ದ ನನ್ನಂಥವರಿಗೆ ಇತಿಹಾ ಸದ ಹುಚ್ಚು ಹಿಡಿಸಿದ್ದೇ ಇಂತಹ ಕೆಲವು ಮೇರು ಲೇಖಕರು. ಅದರಲ್ಲಿ ಭೈರಪ್ಪನವರೂ ಒಬ್ಬರು. ಇತಿಹಾಸವೆಂದರೆ ಹೀಗೆಯೇ, ಕಥೆಯಂತೆ ಹೇಳಬೇಕು, ಸ್ವಲ್ಪ ಮಸಾಲೆಯಿರಬೇಕು. ಆಗ ಮಾತ್ರ ಅದು ನಮ್ಮೊಳಕ್ಕೆ ಅರ್ಥವಾಗುವಂತೆ ಇಳಿಯುತ್ತದೆ, ಕಲಿಕೆ ಪ್ರಸ್ತುತವೆನ್ನಿಸು ತ್ತದೆ.

ಅದಿಲ್ಲದಿದ್ದರೆ ವಿಜಯನಗರದ ಸಾಮ್ರಾಜ್ಯದಲ್ಲಿ ಚಿನ್ನವನ್ನು ರಸ್ತೆ ಬದಿಯಲ್ಲಿ ಮಾರುತ್ತಿದ್ದರು ಎನ್ನುವ ಕೆಲವೇ ಆಶ್ಚರ್ಯ ವಾಗುವ ವಿಚಾರಗಳು ಉತ್ಪ್ರೇಕ್ಷೆಯೆನಿಸಿಬಿಡುತ್ತವೆ. ಹಂಪಿಯ ವೈಭವ ಹೇಗಿತ್ತೆಂದು ನಮಗೀಗ ಅಂದಾಜಿಸಿಕೊಳ್ಳಲೂ ಸಾಧ್ಯವಿಲ್ಲ. ನಗರದ ಗತಿಸಿಹೋದ ವೈಭವವೊಂದು ಅದೆಷ್ಟೇ ಓದಿಕೊಂಡರೂ ಕೆಲವೊಮ್ಮೆ ಹಿಡಿತಕ್ಕೆ ದಕ್ಕುವುದೇ ಇಲ್ಲ. ಒಂದು ಊರು, ಜಾಗ ವೈಭವದ ನಂತರ ಅವಸಾನವಾಗುವುದು ಸಾಮಾನ್ಯದ ಪರಿವರ್ತನೆಯಲ್ಲ. ಇದು ಇತಿಹಾಸ ದುದ್ದಕ್ಕೂ ನಡೆದಿದೆ, ನಡೆಯುತ್ತಲೇ ಇದೆ. ಇಂತಹ ಊರು, ಇತಿಹಾಸ ಎಲ್ಲ ದೇಶ ಕಾಲದಲ್ಲಿಯೂ ಸಿಗುತ್ತದೆ.

ಕೆಲ ದಿನಗಳ ಹಿಂದೆ ಮಿಚಿಗನ್ ರಾಜ್ಯದ ಡೆಟ್ರಾಯಿಟ್ ಎನ್ನುವ ಊರಿಗೆ ಹೋಗಿದ್ದೆ. ಅಮೆರಿಕದ ನಗರಗಳೆಂದರೆ ಒಂದೇ ರೀತಿಯ ರಸ್ತೆ, ಅಂಗಡಿಗಳು, ಪೆಟ್ರೋಲ್ ಬಂಕಗಳು, ಎತ್ತೆತ್ತರದ ಬಿಲ್ಡಿಂಗುಗಳು, ಅದೇ ಫಾಸ್ಟ್ ಫುಡ್ಡುಗಳು, ವ್ಯವಸ್ಥೆಗಳು. ಹಾಗಾಗಿ ಬಹುತೇಕ ನಗರಗಳು ಮೇಲ್ನೋಟಕ್ಕೆ  ಒಂದೇ ರೀತಿ ಕಾಣಿಸುತ್ತವೆ. ಆದರೆ ಡೆಟ್ರಾಯಿಟ್ ಮಾತ್ರ ಹಾಗಿರಲಿಲ್ಲ. ಆ ಊರಿಗೆ ಸಂಜೆ ಬಂದಿಳಿದಾಗ ಪೇಟೆಯ ರಸ್ತೆ ಗಳೆಲ್ಲ ಬಿಕೋ ಎನ್ನುತ್ತಿದ್ದವು. ಊಟ ಹುಡುಕಿ ಹೊರಟರೆ ಬಹುತೇಕ ರೆಸ್ಟೋರಂಟುಗಳು ರಾತ್ರಿ ಹತ್ತಾಗಿಲ್ಲ, ಅದಾಗಲೇ ಮುಚ್ಚಿದ್ದವು.

ತೆರೆದಿದ್ದದ್ದು ಪೆಟ್ರೋಲ್ ಬಂಕುಗಳು ಮಾತ್ರ.  ಅವು ಕೂಡ ಬಾಗಿಲಲ್ಲಿ ಹೋಗಿ ನಿಂತರೆ ಕ್ಯಾಮರಾದಲ್ಲಿ ಮುಖ ನೋಡಿ ಆತ ಒಳಗಿಂದ ಬಝರ್ ಒತ್ತಿ ಬಾಗಿಲು ತೆರೆಯುತ್ತಿದ್ದ. ಅಂಗಡಿಯೊಳಗೆ ಆತ ಬುಲೆಟ್‌ಪ್ರೂಫ್ ಗ್ಲಾಸಿನ ಆಚೆಕಡೆ, ನಾವು ಗ್ರಾಹಕರು ಈ ಕಡೆ. ಅಮೆರಿಕದ ಪ್ರತಿ ಊರಲ್ಲೂ ಒಂದಿಷ್ಟು ನೋಟೋರಿಯಸ್ ಜಾಗಗಳಿರುತ್ತವೆ. ಶಿಕಾಗೋಗೆ ಬಂದರೆ ಸೌತ್ ಸೈಡ್, ನ್ಯೂಜರ್ಸಿಯಲ್ಲಿ ನೂವಾರ್ಕ, ಮೇರಿ ಲ್ಯಾಂಡ್‌ನ ಬಾಲ್ಟಿಮೋರ್, ಲೂಸಿಯಾ ನಾದ ಬ್ಯಾಟನ್ ರೋಗ್ ಇತ್ಯಾದಿ. ಇಲ್ಲ ಕೆಲವು ಪ್ರದೇಶಗಳಲ್ಲಿ ಹಗಲಿನಲ್ಲಿ ಹೋಗುವುದಕ್ಕೂ ಅಮೆರಿಕದಲ್ಲಿಯೇ ಹುಟ್ಟಿಬೆಳೆದವರೂ ಹೆದರುವುದಿದೆ.

ಸಾಮಾನ್ಯವಾಗಿ ಇಂತಹ ಕೆಲವು ಊರುಗಳ ನೋಟೋರಿಯಸ್ ಜಾಗಗಳಲ್ಲಿ ರಾತ್ರಿಯಾಯಿತೆಂದರೆ ಇಂತಹುದೇ ವಾತಾವರಣ ನೋಡಿದ್ದೆ. ಅಮೆರಿಕದ ಅಂಗಡಿಗಳಲ್ಲಿ ಒಂದು ಹಂತ ಮೀರಿದ ಸೆಕ್ಯೂರಿಟಿ ಇದೆಯೆಂದರೆ ತಕ್ಷಣ ಅದು ಸೇಫ್ ಅಲ್ಲದ ಜಾಗ ವೆಂದು ಅಂದಾಜಾಗಿಬಿಡುತ್ತದೆ. ಕೆಲವು ಜಾಗಗಳಲ್ಲಿ ಕ್ರೈಮ್ ಎಲ್ಲೆ ಮೀರಿದಾಗ ಇದೆಲ್ಲ ಸೆಕ್ಯೂರ್ ವ್ಯವಸ್ಥೆಗಳು ನಿರ್ಮಾಣ ವಾಗಿರುತ್ತವೆ.

ಅಲ್ಲ ಸಿಟಿ ಆಡಳಿತವೇ ಇಂತಹ ಸೆಕ್ಯುರಿಟಿಯನ್ನು ಕಡ್ಡಾಯ ಮಾಡುವುದೂ ಇದೆ. ಮೊದಲೇ ನನ್ನ ಚರ್ಮ ಕಂದು, ಹಾಗಾಗಿ ಹೆದರುವುದೇ ಬುದ್ಧಿವಂತಿಕೆ. ಅಮೆರಿಕವೆನ್ನುವ ಮಾಯಾದೇಶದ ಅಪಸವ್ಯಗಳು ಇವು. ಅಂತಹ ಜಾಗಗಳಲ್ಲಿ ಲಾಡ್ಜ್‌ಗಳು ಕೂಡ ಕಡಿಮೆ ಬೆಲೆಗೆ ಸಿಗುತ್ತವೆ. ಊರು ಗೊತ್ತಿಲ್ಲದವರು ಕೆಲವೊಮ್ಮೆ ಅಂತಹ ಜಾಗದಲ್ಲಿ ಲಾಡ್ಜ್ ಪಡೆದಿರುತ್ತೇವೆ. ಬಹುಶಃ ಅಂತಹ ಜಾಗವೊಂದರಲ್ಲಿಯೇ ನಾನು ಲೆಕ್ಕಾಚಾರ ತಪ್ಪಿ ಅಥವಾ ಜಾಸ್ತಿಯಾಗಿ ಲಾಡ್ಜ್ ಪಡೆದಿದ್ದೆ ಎಂದು ಅಂದಾಜಾಗಿ, ಜಾಗೃತನಾಗಿ ವಾಪಾಸ್ ಬಂದು ನೀರು ಕುಡಿದು ಮಲಗಿಬಿಟ್ಟೆ.

ಯಾವುದೇ ಊರಿಗೆ ಹೋಗುವ ಮುನ್ನ ಅಲ್ಲಿನ ಇತಿಹಾಸ ತಿಳಿದುಕೊಂಡು ಹೋದಾಗ ಆ ಜಾಗ ಬೇರೆಯದೇ ರೀತಿಯಲ್ಲಿ ಗ್ರಹಿಕೆಗೆ ಸಿಗುತ್ತದೆ, ಅದು ರೂಢಿಸಿಕೊಂಡ ಅಭ್ಯಾಸ. ಡೆಟ್ರಾಯಿಟ್‌ಗೆ ಒಂದು ಭವ್ಯ ಇತಿಹಾಸವಿದ್ದದ್ದು ತಿಳಿದಿತ್ತು. 1900 ರಲ್ಲಿ ಡೆಟ್ರಾಯಿಟ್ ಒಂದು ಚಿಕ್ಕ ಊರಾಗಿತ್ತು. ನದಿಯ ದಂಡೆಯ ಮೇಲಿರುವ ಈ ನಗರದ ಒಂದು ಬ್ರಿಡ್ಜ್ ದಾಟಿದರೆ ಆ ಕಡೆ ಕೆನಡಾ. ದಂಡೆಯಲ್ಲಿ ನಿಂತು ನೋಡಿದರೆ ಕೆನಡಾದಲ್ಲಿ ಓಡಾಡುವ ಜನರು ಕಾಣುವಷ್ಟು ಸನಿಹ.

ಊರೊಂದು ಬೆಳೆದು ಪಟ್ಟಣವಾಗಿ ಮೆರೆಯಲು ಬೇಕಾದ ನೀರು, ನದಿ, ಸಮತಟ್ಟಾದ ಜಾಗ ಎಲ್ಲವು ಡೆಟ್ರಾಯಿಟ್‌ನಲ್ಲಿದ್ದ ಕಾರಣಕ್ಕೆಸಹಜವಾಗಿ ಊರೊಂದು ನಗರವಾಗುತ್ತ ಹೋಯಿತು. ಅಲ್ಲಿಂದ ಮುಂದೆ ಡೆಟ್ರಾಯಿಟ್‌ನ ದೆಸೆ ಬದಲಾದದ್ದು, ಶುಕ್ರದೆಸೆ ಬಂದದ್ದು. ಬಂಡವಾಳಶಾಹಿ ಸಹಜವೆನ್ನುವಂತೆ ಡೆಟ್ರಾಯಿಟ್ ಅನ್ನು ಆರಿಸಿಕೊಂಡಿತ್ತು. ವಾಹನ ತಯಾರಿಕಾ
ಉದ್ಯಮ ಅಲ್ಲಿ ಬೆಳೆಯಲು ಶುರುವಾಯಿತು.

ಬಂಡವಾಳಗಳು ಹರಿದುಬಂದವು. ಫೋರ್ಡ್, ಜನರಲ್ ಮೋಟರ್ಸ್, ಕ್ರೈಸ್ಲರ್ ಮೊದಲಾದ ಅಟೋಮೊಬೈಲ್ ಕಂಪನಿಗಳು ಅಲ್ಲಿ ಕಾರ್ಖಾನೆಗಳನ್ನು ನಿರ್ಮಿಸಲು ಶುರುಮಾಡಿದವು. 1904ರಲ್ಲಿ ಅಲ್ಲಿ ಫೋರ್ಡ್ ಕಂಪನಿ ಹುಟ್ಟಿತು. ವರ್ಣಭೇದದ ಕಾರಣ
ದಿಂದ ಅಮೆರಿಕದ ದಕ್ಷಿಣ ಭಾಗದಲ್ಲಿದ್ದ ಕಪ್ಪು ವರ್ಣೀಯರ ದಂಡೇ ಡೆಟ್ರಾಯಿಟ್‌ನತ್ತ ಕನಸು ಹೊತ್ತು, ಗಂಟು ಕಟ್ಟಿಕೊಂಡು ಬಂತು. ಒಂದು ಚಿಕ್ಕ ಕೆಲಸಕ್ಕೆ ಬಾರದ ಊರಿನಂತಿದ್ದ ಡೆಟ್ರಾಯಿಟ್ 1930ರಿಂದ 1970ರ ಮಧ್ಯೆ ಅಮೆರಿಕದ ಅತ್ಯಂತ ಶ್ರೀಮಂತ ನಗರವಾಗಿ ಮಾರ್ಪಾಡಾಯಿತು.

ಡೆಟ್ರಾಯಿಟ್‌ಗೆ ಹೋಗಿ ಸೇರುವುದು ಎಂದರೆ ಆ ಕಾಲದಲ್ಲಿ ಹೆಮ್ಮೆಯ, ಊರಿಗೆಲ್ಲ ಹೇಳಿಕೊಂಡು ಬರುವ ವಿಚಾರವಾಗಿತ್ತು. ಆ ಸಮಯದಲ್ಲಿ ಅಮೆರಿಕದಲ್ಲಿ ಉಳಿದ ನಗರಗಳು ಒಂದಿಂದು ಕಾರಣದಿಂದ ಆರ್ಥಿಕವಾಗಿ ದುರ್ಬಲವಾಗು ತ್ತಿದ್ದವು, ಆದರೆ ಡೆಟ್ರಾಯಿಟ್ ಮಾತ್ರ ಚಿಗುರಿ ಕೆಲವೇ ವರ್ಷಗಳಲ್ಲಿ ಹೆಮ್ಮರವಾಗಿ ಬೆಳೆದಿತ್ತು. ಈ ನಗರವನ್ನು ಕಟ್ಟಿದ್ದು, ಬೆಳೆಸಿದ್ದು ಸರಕಾರ ವಲ್ಲ- ಬಂಡವಾಳಶಾಹಿಗಳು. ಆಧುನಿಕ ಅಮೆರಿಕ ಅರ್ಥವಾಗಬೇಕೆಂದರೆ ಹೆನ್ರಿ ಫೋರ್ಡ್ ಅವರು ಬರೆದ ‘ಮೈ ಲೈಫ್ ಅಂಡ್ ವರ್ಕ್’ ಪುಸ್ತಕವನ್ನು ಓದಬೇಕು.

ಹೆನ್ರಿ- ಫೋರ್ಡ್ ಕಂಪನಿಯನ್ನು ಕಟ್ಟಿಬೆಳೆಸಿದವನು. ಕೃಷಿಕ ಕುಟುಂಬದಲ್ಲಿ ಹುಟ್ಟಿದ್ದ ಹೆನ್ರಿ ಕೃಷಿಯಲ್ಲಿ ಎದುರಾದ ಎಲ್ಲ ಸಮಸ್ಯೆಗಳಿಂದಾಗಿ ಬೇರಿನ್ನೇನನ್ನೋ ಮಾಡಬೇಕೆಂದು ಸಾಹಸಕ್ಕೆ ಕೈಹಾಕಿದ್ದು. ಉಗಿಬಂಡಿಗಳು ಅವಿಷ್ಕಾರವಾಗಿ ಡೆಟ್ರಾಯಿಟ್‌ ನಲ್ಲಿ ಅದಾಗಲೇ ತಯಾರಿಕಾ ಘಟಕಗಳು ತಲೆಯೆತ್ತಿದ್ದವು. ಹೆನ್ರಿಗೆ ತನ್ನ ಶಾಲಾ ಟ್ರಿಪ್ ಒಂದರಲ್ಲಿ, ಈ ಉಗಿಬಂಡಿ
ಯನ್ನು ತಯಾರಿಸುವ ಕಾರ್ಖಾನೆಯನ್ನು ನೋಡುವ ಅವಕಾಶ ದೊರಕಿತು.

ಅದೇ ಸಮಯದಲ್ಲಿ ಈರಿ ಕ್ಯಾನಲ್ (ಕಾಲುವೆ) ಅಮೆರಿಕದ ಮಧ್ಯ ಉತ್ತರದಲ್ಲಿದ್ದ ಡೆಟ್ರಾಯಿಟ್ ಅನ್ನು ಪೂರ್ವದ ಅಟ್ಲಾಂಟಿಕ್ ಮಹಾಸಾಗರಕ್ಕೆ ಸಂಪರ್ಕಿಸಿತು. ಹಾಗಾಗಿ ಕ್ರಮೇಣ ಉಗಿಹಡಗುಗಳ ನಿರ್ಮಾಣ ಕೂಡ ಆರಂಭವಾದವು. ಉತ್ತರದ ಕೆನಡಾದಲ್ಲಿ ಕಬ್ಬಿಣ, ಅಮೆರಿಕದ ದಕ್ಷಿಣದಲ್ಲಿ ಯಥೇಚ್ಛ ಕಲ್ಲಿದ್ದಲು, ಮಧ್ಯದಲ್ಲಿ ಡೆಟ್ರಾಯಿಟ್- ಕೈಗಾರಿಕೆಗೆ ಹೇಳಿಮಾಡಿಸಿದ ಊರಾಗಿತ್ತು. ಹದಿಹರೆಯದ ಹೆನ್ರಿ ಕೃಷಿ ಬಿಟ್ಟು ಉಗಿಬಂಡಿ ಕಾರ್ಖಾನೆಗೆ ಮೆಕ್ಯಾನಿಕ್ ಆಗಿ ಸೇರಿಕೊಂಡ.

ಡೆಟ್ರಾಯಿಟ್ ಅವಕಾಶಕ್ಕೆ ಇನ್ನೊಂದು ಹೆಸರಾಗಿದ್ದ ಸಮಯವದು. ಈ ಒಂದು ಕಾಲುವೆ ತೆರೆದುಕೊಳ್ಳುತ್ತಿದ್ದಂತೆ ಸುಮಾರು ೧೦೦೦ ಕಂಪನಿಗಳು ಡೆಟ್ರಾಯಿಟ್‌ನಲ್ಲಿ ಹುಟ್ಟಿಕೊಂಡವು ಮತ್ತು ಒಂದೆರಡು ದಶಕದಲ್ಲಿ ಹತ್ತು ಸಾವಿರದಷ್ಟಿದ್ದ ಜನಸಂಖ್ಯೆ ನೂರು ಪಟ್ಟು ಜಾಸ್ತಿಯಾಗಿತ್ತು. ಹೆನ್ರಿ ಅದೇ ಸಮಯದಲ್ಲಿ ಪೆಟ್ರೋಲ್ ಎಂಜಿನ್‌ನ ಬಗ್ಗೆ ಒಂದು ಪುಸ್ತಕದಲ್ಲಿ ಓದಿಕೊಂಡಿದ್ದ. ಯುರೋಪಿನಲ್ಲಿ ಅದಾಗಲೇ ಪೆಟ್ರೋಲ್ ಎಂಜಿನ್ ಬಹುಸಾಧ್ಯತೆಯ ಕಾರಣಕ್ಕೆ ಸುದ್ದಿ ಯಾಗಿದ್ದರೂ ಅಮೆರಿಕದಲ್ಲಿ ಯಾರೂ ಅದರತ್ತ ಗಮನ ಹರಿಸಿರಲಿಲ್ಲ.

ಹೆನ್ರಿ ಮೆಕ್ಯಾನಿಕ್ ಆಗಿ ಉಗಿಬಂಡಿಯ ಕಂಪನಿಯಲ್ಲಿ ಕೆಲಸಮಾಡುತ್ತಿರುವಾಗ ಆಮದು ಮಾಡಿಕೊಂಡಿದ್ದ ಪೆಟ್ರೋಲ್ ಎಂಜಿನ್ ಒಂದರ ರಿಪೇರಿ ಕೆಲಸ ಆತನಿಗೆ ಒದಗಿಬಂತು. ಪೆಟ್ರೋಲ್ ಎಂಜಿನ್‌ಗಳಲ್ಲಿ ಸ್ಪಾರ್ಕ್ ಪ್ಲಗ್ ಎಲೆಕ್ಟ್ರಿಕ್ ನಿಂದ ಬೆಂಕಿಗೆ ಕಾರಣ ವಾಗುತ್ತದೆಯಲ್ಲ ಅದು ಉಗಿ ಬಂಡಿಯ ರಿಪೇರಿ ಮಾಡುತ್ತಿದ್ದ ಹೆನ್ರಿಯ ತಲೆಗೆ ಹೋಗಲಿಲ್ಲ. ವಿದ್ಯುತ್ ಬಗ್ಗೆ ಕಲಿಯಬೇಕೆಂದು ಅಲ್ಲಿನ ಎಲೆಕ್ಟ್ರಿಕ್ ಕಂಪನಿಯೊಂದಕ್ಕೆ ಸೇರಿಕೊಂಡ. ಹೀಗೆ ಒಂದಾದ ಮೇಲೆ ಒಂದನ್ನು ಕಲಿಯುತ್ತ 1904ರಲ್ಲಿ ಹೆನ್ರಿ ಫೋರ್ಡ್ ಪೆಟ್ರೋಲ್ ಎಂಜಿನ್‌ನ ಕಾರು ತಯಾರಿಸುವ ಕಂಪನಿ ಆರಂಭಿಸಿದ.

ಫೋರ್ಡ್ ಕಂಪನಿ ಮುಂದೆ ಆಧುನಿಕ ಅಮೆರಿಕವನ್ನು ಕಟ್ಟಿ ನಿಲ್ಲಿಸುವ ಮಟ್ಟಿಗೆ ಬೆಳೆದದ್ದು ಇತಿಹಾಸ. ಇದೆಲ್ಲ ನಡೆದದ್ದು ಇದೇ ಡೆಟ್ರಾಯಿಟ್ ನೆಲದಲ್ಲಿ. ಡೆಟ್ರಾಯಿಟ್‌ನ ಫೋರ್ಡ್ ಮ್ಯೂಸಿಯಂ ಈ ಇತಿಹಾಸವನ್ನು ಕಣ್ಣಮುಂದೆ ತಂದುನಿಲ್ಲಿಸುತ್ತದೆ.
ನಂತರದಲ್ಲಿ ನೋಡನೋಡುತ್ತಿದ್ದಂತೆ ಡೆಟ್ರಾಯಿಟ್ ಅಮೆರಿಕದ ಅತ್ಯಂತ ಶ್ರೀಮಂತ ನಗರವಾಗಿ ಮಾರ್ಪಾಡಾಗಿತ್ತು. ಅದು ಅಂದು ಅಮೆರಿಕದ ನಾಲ್ಕನೇ ಅತ್ಯಂತ ದೊಡ್ಡ ನಗರವೂ ಆಗಿತ್ತು. ಮೊದಲೇ ಹೇಳಿದಂತೆ ಇದನ್ನು ಕಟ್ಟಿದ್ದು ಸರಕಾರವಲ್ಲ, ಬಂಡವಾಳಶಾಹಿಗಳು.

ಅಲ್ಲಿನ ಕಂಪನಿಗಳಿಗೆ, ಓನರ್‌ಗಳಿಗೆ ಡೆಟ್ರಾಯಿಟ್‌ನ ನೆಲದಲ್ಲಿನ ಲಾಭವಷ್ಟೇ ಬೇಕಿತ್ತು. ಅದರಾಚೆ ಯಾವುದೇ  ಮೋಹವಿರಲಿಲ್ಲ. ಅದಾಗಲೇ ಡೆಟ್ರಾಯಿಟ್ ಪರಮ ತುಟ್ಟಿಯ ಜಾಗವಾಗಿಹೋಗಿತ್ತು. 1970-80ರ ನಂತರ ಈ ಕಂಪನಿಗಳು ಅನ್ಯಜಾಗದಲ್ಲಿ ತಮ್ಮ ಕಾರ್ಖಾನೆಗಳನ್ನು ತೆರೆದರೆ ಹೆಚ್ಚು ಲಾಭವೆನ್ನುವುದನ್ನು  ಮನಗಂಡವು. 1961ರಲ್ಲಿ ಮೊದಲಬಾರಿ ಡೆಟ್ರಾಯಿಟ್ ನಗರ
ಅಲ್ಲಿನ ವ್ಯವಹಾರಗಳಿಗೆ ಕರ ಹೇರಲು ಶುರುಮಾಡಿತು.

ಇದೆಲ್ಲ ಕಾರಣಗಳಿಂದ ನಿಧಾನಕ್ಕೆ ತಯಾರಿಕಾ ಘಟಕಗಳು ಮೆಕ್ಸಿಕೋ, ಕೆನಡಾ ದೇಶಕ್ಕೆ ಸ್ಥಳಾಂತರಗೊಂಡವು. ನಂತರದಲ್ಲಿ
ಇವೆಲ್ಲ ಬಹುತೇಕ ಚೀನಾಕ್ಕೆ ವರ್ಗಾವಣೆಯಾಗಿದೆ. ಒಟ್ಟಾರೆ ಒಂದು ಕಾಲದಲ್ಲಿ ಸ್ವರ್ಣಲಂಕೆಯಂತಿದ್ದ ಊರಿನಲ್ಲಿ ಕ್ರಮೇಣ
ಆರ್ಥಿಕ ಇಳಿತವೆನ್ನುವ ಹನುಮನ ಬಾಲದ ಬೆಂಕಿ ಕಾಣಿಸಿಕೊಳ್ಳಲಾರಂಭಿಸಿತು. 1900ರಲ್ಲಿ ಕೇವಲ ಹತ್ತು ಸಾವಿರದಷ್ಟಿದ್ದ
ಜನಸಂಖ್ಯೆ 1975ರಲ್ಲಿ ಇಪ್ಪತ್ತು ಲಕ್ಷಕ್ಕೆ ಏರಿತ್ತು. ಅವರಿಗೆ ಬೇಕಾದ ಮನೆ, ವಸತಿ, ಅಂಗಡಿಗಳು, ವ್ಯವಹಾರ ಇವೆಲ್ಲ ನಿರ್ಮಾಣ ವಾಗಿದ್ದವು. ಎಂಜಿನ್ ತಯಾರಿಸುವ ಡೆಟ್ರಾಯಿಟ್ ನಗರವೆಂಬ ಎಂಜಿನ್ ಅತ್ಯಂತ ವೇಗವಾಗಿ ಓಡುತ್ತಿದ್ದ ಕಾಲವದು.

ಕ್ರಮೇಣ ಈ ಕಂಪನಿಗಳು ಕಾಲು ಕೀಳಲು ಶುರುಮಾಡಿದ ಕೂಡಲೇ ಅಲ್ಲಿ ಸಹಜವಾಗಿ ಬಡತನ, ನಿರುದ್ಯೋಗ ಮತ್ತು ಅದಕ್ಕನು ಗುಣವಾಗಿ ಅಪರಾಧಗಳು ಹೆಚ್ಚಿದವು. ಇಂದು ಡೆಟ್ರಾಯಿಟ್‌ನ ಜನಸಂಖ್ಯೆ ಕೇವಲ ಆರೂವರೆ ಲಕ್ಷ ! ಇದೇ ಬಂಡವಾಳಶಾಹಿತ್ವದ ಸಮಸ್ಯೆ. ಬಂಡವಾಳಶಾಹಿ ಎಲ್ಲಿ ಕೈ ಇಡುತ್ತದೆಯೋ ಅಲ್ಲ ಚಿನ್ನ- ಅದು ಮಾತ್ರ ಸುದ್ದಿ ಯಾಗುತ್ತದೆ. ಅದು ಕೈ ಬಿಟ್ಟಲ್ಲಿ ಸ್ಮಶಾನ ನಿರ್ಮಾಣವಾಗುತ್ತದೆ, ಅದು ಸುದ್ದಿಯಾಗುವುದಿಲ್ಲ. ಅಥವಾ ಆ ಸುದ್ದಿಯನ್ನು ಸಮಾಜ ಉಪೇಕ್ಷೆ ಮಾಡುತ್ತದೆ. ಇಪ್ಪತ್ತು ಲಕ್ಷ ದಷ್ಟಿದ್ದ ಜನಸಂಖ್ಯೆಯೆಂದರೆ ಅದಕ್ಕನುಗುಣವಾಗಿ ಮನೆ, ಅಂಗಡಿಗಳು, ವ್ಯಾಪಾರಗಳು ಬೆಳೆದಿದ್ದವು.

ಅಷ್ಟು ವ್ಯವಹಾರವಿದ್ದ ಜಾಗ ಬೆಳೆದಕ್ಕಿಂತ ಜಾಸ್ತಿ ವೇಗದಲ್ಲಿ ಆರು ಲಕ್ಷಕ್ಕೆ ಇಳಿದಾಗ ಅದು ಉಂಟುಮಾಡುವ ಸ್ಮಶಾನ ಭೀಕರತೆ ಯಿದೆಯಲ್ಲ ಅದಕ್ಕೆ ಉದಾಹರಣೆಯಾಗಿ ಇಂದು ಡೆಟ್ರಾಯಿಟ್ ನಿಂತಿದೆ. ಅದುವೇ ನನ್ನನ್ನು ಮಾರನೆಯ ದಿನ ಈ ನಗರವನ್ನು ನೋಡುವಾಗ, ಮತ್ತು ಸುತ್ತಲಿನ ಉಪನಗರಗಳಲ್ಲಿ ಓಡಾಡುವಾಗ ಕಾಡಿದ್ದು. ಕ್ರಮೇಣ ಜನಸಂಖ್ಯೆ, ವ್ಯವಹಾರಗಳು ನೆಲಕಚ್ಚುತ್ತಿದ್ದಂತೆ ಮನೆಗಳನ್ನು ಮಾರಿ ಬೇರೆಡೆ ಹೋಗಲೇಬೇಕಾದ ಅನಿವಾರ್ಯತೆ ಉಂಟಾಯಿತು.

ಆದರೆ ಹಾಳೂರ ಮನೆಯನ್ನು ಖರೀದಿಸುವವರು ಯಾರು? ಅದಾಗಲೇ ನಗರದ ಬಹುತೇಕ ಅಂಗಡಿಗಳು ವ್ಯಾಪಾರವಿಲ್ಲದೆ ಮುಚ್ಚಿಕೊಂಡು ಹೋಗಿದ್ದವು. ಕೆಲವೊಂದು ಕಡೆ ತರಕಾರಿ ತರಬೇಕೆಂದರೆ ೮-೧೦ ಮೈಲಿ ಹೋಗಬೇಕಾದ ಸ್ಥಿತಿ ನಿರ್ಮಾಣ ವಾಯಿತು. ಅಲ್ಲಿ ವಾಸಿಸುವುದೇ ದುಸ್ತರವಾಯಿತು. ಜನರು ಮನೆ ಮಾರಾಟವಾಗದೆ ಹಾಗೆಯೇ ಖಾಲಿ ಬಿಟ್ಟು, ಬೀಗ ಹಾಕಿ ಕೊಂಡು ಹೋಗಬೇಕಾಯಿತು. ಬದುಕು ಅವರನ್ನು ಅನಿವಾರ್ಯವಾಗಿ ಗುಳೆ ಹೋಗುವಂತೆ ಮಾಡಿತ್ತು.

ಇಂದು ಕೆಲವು ಐಟಿ ಕಂಪನಿಗಳನ್ನು, ಫೋರ್ಡ್ ಮೊದಲಾದ ಕಾರು ಕಂಪನಿಯ ಕೆಲವು ಘಟಕಗಳನ್ನು ಬಿಟ್ಟರೆ ಅಲ್ಲಿ ಹೆಚ್ಚಿನ ವ್ಯವಹಾರಗಳಿಲ್ಲ. ಇಂದು, ಕಳೆದ ನಾಲ್ಕು ದಶಕದಿಂದೀಚೆ ಅಕ್ಷರಶಃ ಈ ನಗರ ವೆಂಟಿಲೇಟರ್‌ನಲ್ಲಿದೆ, ದಿನಗಳೆದಂತೆ ನಗರದ ಅರೋಗ್ಯ ಹದಗೆಡುತ್ತಲೇ ಇದೆ. ನಗರದಲ್ಲಿ ಒಂದು ಸುತ್ತು ಬಂದರೆ ಕಿಟಕಿ ಗಾಜುಗಳು ಒಡೆದ, ಅಸ್ತಿಪಂಜರ ದಂತಹ ಎತ್ತೆತ್ತರದ ಬಿಲ್ಡಿಂಗುಗಳು ಕಾಣಿಸುತ್ತವೆ. ಇಂದು ಅಂತಹ ಬಿಲ್ಡಿಂಗುಗಳಿಂದಲೇ ಡೆಟ್ರಾಯಿಟ್ ತುಂಬಿಹೋಗಿದೆ.

ಇಲ್ಲಿನ ನಗರಸಭೆಯ ತೆರಿಗೆ ಸಂಗ್ರಹದ ಪ್ರಮಾಣ ವ್ಯವಹಾರವಿಲ್ಲದೆ ತೀವ್ರ ಕಡಿಮೆಯಾಗಿದೆ. ನಗರಸಭೆಗೆ ಅಲ್ಲಿ ಉಳಿದುಕೊಂಡ ಜನರಿಗೆ ರಸ್ತೆ, ನೀರು ಒದಗಿಸುವುದೂ ಕಷ್ಟಕ್ಕೆ ಬಂದಿದೆ. 2013ರಲ್ಲಿ ಡೆಟ್ರಾಯಿಟ್ ನಗರಸಭೆ ದಿವಾಳಿ ಘೋಷಿಸಿತ್ತು. ಆರ್ಥಿಕ ದಿವಾಳಿತನದಿಂದಾಗಿ ತುರ್ತುಸ್ಥಿತಿ ಅಲ್ಲಿ ನಿರ್ಮಾಣ ವಾಗಿದ್ದು ಇಂದಿಗೂ ಅಲ್ಲಿನ ಆಡಳಿತ ಒzಡುತ್ತಿದೆ. ನಗರಸಭೆ ಈ ಊರನ್ನು ಬದುಕಿಸಿಕೊಳ್ಳಲು ಹೆಣಗುತ್ತಿದೆ. ಕರವೇ ಬೇಡ, ಇಲ್ಲಿ ಬಂದು ವ್ಯವಹಾರ ಮಾಡಿ ಎಂದು ಕಂಪನಿಗಳಿಗೆ ಅಲ್ಲಿನ ಸರಕಾರ ಆಹ್ವಾನ ನೀಡುತ್ತಿದೆ. ಆದರೆ ಬರಗೆಟ್ಟುಹೋದ ಊರಿಗೆ ಬಂದು ಹೊಸ ವ್ಯವಹಾರ ಸಾಹಸಕ್ಕೆ ಯಾರೂ ಧೈರ್ಯಮಾಡುತ್ತಿಲ್ಲ.

ನನ್ನ ಅಮೆರಿಕನ್ ಸ್ನೇಹಿತ ಈ ಊರನ್ನು ನೋಡಿ ನನಗಾದ ಶಾಕ್ ಕಂಡು ಒಂದಿಷ್ಟು ಜಾಗವನ್ನು ತೋರಿಸಲು ಕರೆದುಕೊಂಡು ಹೋಗಿದ್ದ. ‘8 ಮೈಲ’ ಎನ್ನುವ ಒಂದು ಉಪನಗರಕ್ಕೆ ಕಾರು ತೆಗೆದುಕೊಂಡು ಹೋದಾಗ ಮೈಲುಗಟ್ಟಲೆ ರಸ್ತೆಯ ಎರಡೂ ಬದಿಯಲ್ಲಿ ಖಾಲಿ ಶಿಥಿಲವಾದ ಮನೆಗಳು. ಸುಮಾರು ಹತ್ತಿಪ್ಪತ್ತು ಅಂತಹ ಮುರುಕು, ಜನ ವಾಸಿಸದ ಮನೆಗಳ ಮಧ್ಯೆ ಒಂದೋ ಎರಡೋ ಜನರಿರುವ ಮನೆಗಳಲ್ಲಿ ‘ಹಾಳೂರಲ್ಲಿ ಉಳಿದವನೇ ಗೌಡ’ ಎನ್ನುವ ಮಾತಿಗೆ ಹೋಲಿಕೆಯಾಗುವ ಕೆಲ ಬಡಕಲು ಜೀವಗಳು. ಅಲ್ಲಿ ಮತ್ತಿನ್ನೇನೂ ಇಲ್ಲ. ಒಂದು ಕಾರು ಬಂದರೆ ಅವರಿಗೆಲ್ಲ ಈ ಪಾಳುಬಿದ್ದದ್ದನ್ನು ನೋಡಲೇ ಬಂದದ್ದು ಎಂದು ತಿಳಿಯುತ್ತದೆ, ಕೋಪಿಸಿಕೊಂಡು ರಸ್ತೆಗೆ ಬಂದು ಕೂಗಾಡುತ್ತಾರೆ.

ಕೆಲವೆಡೆ ರಸ್ತೆಗಳ ಮಧ್ಯದಲ್ಲಿ ವಾಹನ ಓಡಾಡದೆ ಡಾಂಬರು ಬಿರುಕಿನಲ್ಲಿ ಎತ್ತೆತ್ತರದ ಗಿಡಗಳು ಬೆಳೆದುಕೊಂಡಿವೆ. ಇಂದು ಡೆಟ್ರಾಯಿಟ್‌ನಲ್ಲಿ, ಸುತ್ತಮುತ್ತ ಬರೋಬ್ಬರಿ ಸುಮಾರು ನಾಲ್ಕು ಲಕ್ಷ ವಾಸವಿಲ್ಲದ ಹಾಳುಬಿದ್ದ ಮನೆಗಳಿವೆ. ಆ ಮನೆಗಳಲ್ಲಿ ಹಲವು ಒಂದು ಡಾಲರ್‌ಗೆ ಮಾರಾಟಕ್ಕಿದೆ, ಖರೀದಿಸುವವರಿಲ್ಲ. ‘ಕಾಶಿಗೆ ಹೋದರೆ ಕಾಸಿಗೊಂದು ಕುದುರೆ’ ಎನ್ನುವುದು ಬೇರೆ ಯದೇ ಅರ್ಥದಲ್ಲಿ ಹೇಳುವುದಾದರೂ ಡೆಟ್ರಾಯಿಟ್‌ಗೆ ಹೋದರೆ ಕಾಸಿಗೊಂದು ಮನೆ. ಇನ್ನು ಕೆಲವು ಮನೆಗಳಿಗೆ ನೂರೇ
ಡಾಲರ್. ಸಿಟಿಯಲ್ಲಿ ಸಾವಿರದ ಲೆಕ್ಕದಲ್ಲಿ ಖಾಲಿ ಹೊಡೆಯುತ್ತಿರುವ ಬಿಲ್ಡಿಂಗ್‌ಗಳ ಎಲುಬು ಹಂದರದಲ್ಲಿ ದೆವ್ವಗಳು ವಾಸಿಸಲೂ ಅಂಜುವಂತಿದೆ.

ಕೆಲವೊಂದು ಪ್ರದೇಶಗಳಲ್ಲಿ ಬಡತನದ ಜತೆ ಕ್ರೈಮ್ ಕೂಡ ಲೆಕ್ಕ ದಾಟಿ, ಅಲ್ಲ ಹಗಲಿನಲ್ಲಿ ಓಡಾಡುವುದೂ ಕಷ್ಟ. ಡೆಟ್ರಾಯಿಟ್ ಇಂದು ಕ್ಯಾಪಿಟಲಿಸಂನ ಒಳ್ಳೆಯದು ಮತ್ತು ಕೆಟ್ಟದ್ದರ ಕೇಸ್ ಸ್ಟಡಿಗೆ ಪಾಠವಾಗಿ ನಿಂತಿದೆ. ಆರಾಮಾಗಿದ್ದ ಚಿಕ್ಕ ಊರೊಂದು, ಬೆಳೆದು, ಸೊಕ್ಕಿನಿಂದ ಮೆರೆದು, ಕನಸಿನ, ದೇಶದ ಶ್ರೀಮಂತ ನಗರವಾದದ್ದು, ನಂತರ ನಿಸ್ತೇಜವಾಗಿ ನಿಂತು ಜೀವ ಉಳಿಸಿಕೊಳ್ಳಲು ಒzಡುವ ಸ್ಥಿತಿಯಿದೆಯಲ್ಲ ಅದನ್ನು ನೋಡಿದಾಗ ಎಂಥವರಿಗೂ ಸಂಕಟವಾಗುತ್ತದೆ.

error: Content is protected !!