Sunday, 8th September 2024

ಲಾಕ್ ಡೌನ್ ಕಾಲದಲ್ಲಿ ಗೋಡೆಯೂ ಒಂದಿಷ್ಟು ಸಾಂತ್ವನ ನೀಡಬಹುದು !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

Life is a solitary cell whose walls are mirrors. – Eugene O’Neill

ವಾಟ್ಸಾಪ್‌ನಲ್ಲಿ ಬಂದ ಒಂದು ಮೆಸೇಜ್ ನನ್ನನ್ನು ಬಹಳ ಕಾಡಿತು – ‘ಕಳೆದ ಒಂದು ವಾರದಿಂದ ನೀವು ಮನೆಯ ಗೋಡೆಯ ಜತೆಗೆ ಮಾತಾಡಲಾರಂಭಿಸಿದರೆ, ನಿಮ್ಮಲ್ಲಿ ಏನೋ  ದೋಷವುಂಟಾಗಿದೆ ಎಂದು ಗಾಬರಿಪಡಬೇಡಿ. ಅದು ಸಹಜ. ಒಂದು ವೇಳೆ ಗೋಡೆ ನಿಮ್ಮ ಬಳಿ ಮಾತಾಡಿದರೆ ಅಥವಾ ಮಾತಾಡುತ್ತಿದೆ ಎಂದು ಅನಿಸಿದರೆ ಮಾತ್ರ ಮಾನಸಿಕ ವೈದ್ಯರನ್ನು ಸಂಪರ್ಕಿಸಿ’ ವಕ್ರತುಂಡೋಕ್ತಿಯಂತಿರುವ ಈ ಸಾಲುಗಳು ನನ್ನನ್ನು ತುಸು ಚಿಂತಿಸುವಂತೆ ಮಾಡಿತು.

ಇದಾಗಿ ಎರಡು ದಿನಗಳ ನಂತರ, ಮುಂಬೈಯಿಂದ ಪ್ರಕಟವಾಗುವ ಮಿಡ್-ಡೇ ಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಅದೇನೆಂದರೆ, ಅದು ಎಂಟಡಿ ಅಗಲ ಹತ್ತು ಅಡಿ ಅಗಲದ ಒಂದು ಮನೆ. ಅದರೊಳಗೆ ಟಾಯ್ಲೆಟ್, ಅಡುಗೆಮನೆ, ಹಾಲ್. ಆತ ಬೆಳಗ್ಗೆ ಹೋದವ ರಾತ್ರಿ ಮಲಗಲು ಮಾತ್ರ ಅಲ್ಲಿಗೆ ಬರುತ್ತಿದ್ದ. ಲಾಕ್ ಡೌನ್ ಆರಂಭವಾದಂದಿನಿಂದ ಮನೆಯಲ್ಲಿ ಒಬ್ಬನೇ ಇzನೆ. ಮನೆಯಿಂದ ಹೊರಬರುವಂತಿಲ್ಲ. ಮೊದಲ ಮೂರ್ನಾಲ್ಕು ದಿನ ಅವನಿಗೆ ಏನೋ ಅಭದ್ರತೆ, ಒಬ್ಬಂಟಿತನ.

ಹತ್ತು ದಿನಗಳ ನಂತರ ಆತ ಗೋಡೆ ಜತೆ ಮಾತಾಡಲಾರಂಭಿಸಿದ್ದಾನೆ. ತನ್ನ ಭಾವನೆಗಳನ್ನೆಲ್ಲ ಗೋಡೆ ಜತೆ ಹಂಚಿಕೊಳ್ಳಲಾ ರಂಭಿಸಿದ್ದೇನೆ. ಆಗ ಅವನಿಗೆ ಏನೋ ಸಮಾಧಾನ. ಕನಿಷ್ಠ ಗೋಡೆಗಳ ಜತೆಗಾದರೂ ತನ್ನ ಭಾವನೆಗಳನ್ನು ಹಂಚಿಕೊಳ್ಳಬಹು ದಲ್ಲ ಎಂದು ಅನಿಸಲಾರಂಭಿಸಿದೆ. ಆನಂತರ ಅವನಿಗೆ ಗೋಡೆ ತನ್ನ ಮಾತಿಗೆ ಹೂಂಗುಟ್ಟಿದ, ಮಾತಾಡಿದ ಅನುಭವವಾಗಿದೆ. ಇದು ತನ್ನ ಭ್ರಮೆ ಎಂದು ಅಂದುಕೊಂಡವನಿಗೆ, ಇಲ್ಲ ಗೋಡೆ ತನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದೆ, ಸ್ಪಂದಿಸುತ್ತಿದೆ ಎಂದು ಅನಿಸಲಾರಂಭಿಸಿದೆ.

ಆತ ಗೋಡೆಯ ಜತೆಗೆ ಅಂದರೆ ಆ ಕೋಣೆಯೊಳಗೆ ಇರುವುದನ್ನು ಹೆಚ್ಚು ಹೆಚ್ಚು ಇಷ್ಟಪಡಲಾರಂಭಿಸಿದ್ದಾನೆ. ಆ ನಾಲ್ಕು ಗೋಡೆ ಯೊಳಗೆ ಇದ್ದರೆ, ಅವನಿಗೆ ಏನೋ ಸಮಾಧಾನ ಸಿಗುತ್ತಿದೆ. ಹೊರಗಿನ ಪ್ರಪಂಚಕ್ಕಿಂತ ಆತನಿಗೆ ಆ ನಾಲ್ಕು ಗೋಡೆಯೇ ಹೆಚ್ಚು ನೆಮ್ಮದಿ, ಭದ್ರತೆ ನೀಡುತ್ತಿದೆ. ಆತ ಎಂದೂ ಸತತವಾಗಿ ಅಷ್ಟು ದಿನ ಗೋಡೆಯ ಮಧ್ಯೆ ಕಳೆದವನಲ್ಲ. ಈಗ ಹೊರಗೆ ಹೋಗಲು ಅವನಿಗೆ ಭಯ. ಕರೋನಾ ವೈರಸ್ ಸೋಂಕಿದರೆ ಎಂಬ ದುಗುಡ. ಆ ನಾಲ್ಕು ಗೋಡೆಯ ಜಗತ್ತಿನೊಳಗೆ ಏನೇ ಆದರೂ ಕರೋನಾ ಸೋಂಕುವುದಿಲ್ಲ ಎಂಬ ಖಾತ್ರಿ.

ಕರೋನಾ ಲಾಕ್ ಡೌನ್ ಕಾಲದಲ್ಲಿ ನೀವು ನಿಮ್ಮ ಮನೆಯಲ್ಲಿ ಸಮಯ ವನ್ನು ಹೇಗೆ ಕಳೆಯುತ್ತಿದ್ದೀರಿ, ಹೇಗೆ ನೆಮ್ಮದಿ ಕಂಡು ಕೊಳ್ಳುತ್ತಿದ್ದೀರಿ ಎಂದು ಪತ್ರಿಕೆ ಕೇಳಿದ ಪ್ರಶ್ನೆಗೆ ಆತ ಹೇಳಿದ್ದು – ‘ನೀವು ನಿಮ್ಮ ಮನೆಯ ರೂಮಿನ ಗೋಡೆಗಳನ್ನು ಪ್ರೀತಿಸಲಾ ರಂಭಿಸಿ. ಗೋಡೆಯ ಜತೆಗೆ ಮಾತಾಡಲಾರಂಭಿಸಿ. ಗೋಡೆಗಳಿಗಿಂತ ಭದ್ರತೆ, ನೆಮ್ಮದಿ ಕೊಡುವ ಸ್ನೇಹಿತ ಮತ್ತೊಬ್ಬನಿಲ್ಲ. ನೀವು ಗೋಡೆಗಳ ಜತೆ ಮಾತಾಡಲಾರಂಭಿಸಿದಂತೆ, ಗೋಡೆಯೂ ಹೂಂಗುಟ್ಟಲಾರಂಭಿಸಿದಂತೆ ನಿಮಗೆ ಭಾಸವಾಗುತ್ತದೆ.

ಆಗ ನೀವು ಗೋಡೆ ಜತೆ ಒಂದು wavelength ಸಾಧಿಸಿದ್ದೀರಿ ಮತ್ತು ಗೋಡೆಯಿಂದ ಭದ್ರತೆ ಕಾಣಲಾರಂಭಿಸಿದ್ದೀರಿ ಎಂದರ್ಥ.’ ಹಾಗೆಂದು ಆತ ಪತ್ರಿಕೆಗೆ ಉತ್ತರಿಸಿದ್ದಾನೆ. ನಾನು ತಟ್ಟನೆ ಯೋಗಿ ದುರ್ಲಭಜೀ ಅವರನ್ನು ಸಂಪರ್ಕಿಸಿ ಅವರಿಗೆ ಈ ವರದಿಯನ್ನು ಹೇಳಿ, ಇದು ಬಹಳ ತಮಾಷೆ ಆಗಿದೆಯಲ್ಲ?’ ಎಂದೆ. ಅದಕ್ಕೆ ಅವರು ಇದು ತೀರಾ ಸಹಜ ನಡವಳಿಕೆ.

abnormal ಅಲ್ಲ. ಪ್ರತಿ ಗೋಡೆಗೂ ಅದರದೇ ಆದ ಗುಣಲಕ್ಷಣಗಳಿವೆ. ದೇವಸ್ಥಾನದ ಗೋಡೆ ಕಂಡರೆ ಜನ ಹಣೆ ಹಣೆ ತಾಗಿಸು ತ್ತಾರೆ. ಅವರಿಗೆ ಆ ಗೋಡೆಯಲ್ಲಿ ದೇವರಿದ್ದಾನೆ ಎಂಬ ಭಾವನೆ. ಬಾತ್‌ರೂಮಿಗೆ ಹೋದಾಗ ನೀವು ಬೇಕಾದ ರೀತಿಯಲ್ಲಿ ಇರುತ್ತೀರಿ. ಹೀಗಾಗಿ ಅಲ್ಲಿ ಹಾಡುತ್ತೀರಿ. ಬೇರೆ ಯಾರೂ ಕೇಳಿಸಿಕೊಳ್ಳುವುದಿಲ್ಲ ಎಂಬ ಭರವಸೆ. ಹೀಗಾಗಿ ನಿಮ್ಮ ಮನಸ್ಸಿಗೆ ಬಂದಂತೆ ಹಾಡುತ್ತೀರಿ. ಬೆಡ್ ರೂಮಿಗೆ ಬಂದು ಹೆಂಡತಿ ಜತೆ ಗುಟ್ಟು ಹೇಳುತ್ತೀರಿ, ಯಾರೂ ಕೇಳಿಸಿಕೊಳ್ಳುವುದಿಲ್ಲ ಎಂದು ನಿಮಗೆ ಗೊತ್ತಿರುತ್ತದೆ. ಬೆಡ್ ರೂಮಿನಲ್ಲಿ ಹೇಳಿದ್ದನ್ನು ಜಗುಲಿಯಲ್ಲಿ ಹೇಳುವುದಿಲ್ಲ.

ಅಲ್ಲಿ ಬಹಳ ಕೃತಕವಾಗಿ ಮಾತಾಡುತ್ತೀರಿ. ಒಳಮನೆಯಲ್ಲಿ ಬೇರೆಯ ವಾತಾವರಣವೇ ಇರುತ್ತದೆ. ಇನ್ನು ಡೈನಿಂಗ್ ರೂಮಿನಲ್ಲಿ ಆಡುವ ಮಾತು, ವರ್ತಿಸುವ ರೀತಿ ಬೇರೆ. ಪ್ರತಿ ಗೋಡೆಯೂ ನಮ್ಮ ವರ್ತನೆ ಮೇಲೆ ಪರಿಣಾಮ ಬೀರುತ್ತದೆ. ಎಂದು ಅವರು ವಿವರಿಸಿದರು. ನಾನು ತುಸು ಕುತೂಹಲಗೊಂಡೆ.

‘ಯೋಗಿಜೀ, ಗೋಡೆ ಹೇಗೆ ನಮ್ಮ ವರ್ತನೆಯನ್ನು ನಿರ್ದೇಶಿಸಲು ಸಾಧ್ಯ?’ ಎಂದು ಕೇಳಿದೆ. ಗೋಡೆಗೆ ಯಾರೂ ಮಾತು ಕಲಿಸುವು ದಿಲ್ಲ. ಆದರೆ ಪ್ರತಿ ಗೋಡೆಗೆ ಒಂದು character ನ್ನು ನಾವೇ ನಿರೂಪಿಸುತ್ತೇವೆ. ನೀವೇಕೆ ಬಾತ್‌ರೂಮ್ ಗೋಡೆಗೆ ನಮಸ್ಕರಿಸುವು ದಿಲ್ಲ? ನಿಮಗೆ ಗೊತ್ತು, ಅದರಲ್ಲಿ ದೇವರಿಲ್ಲ ಎಂದು. ನೀವೇ ನಿರ್ಧಾರಕ್ಕೆ ಬಂದುಬಿಟ್ಟಿದ್ದೀರಿ. ಪೂಜಾ ರೂಮಿನ ಆ ಗೋಡೆಗೆ ನೀವೇ ಪಾವಿತ್ರ್ಯವನ್ನು ನೀಡಿದ್ದೀರಿ. ಎ ಗೋಡೆಗಳೂ ಅದೇ ಇಟ್ಟಿಗೆ, ಸಿಮೆಂಟಿನಿಂದ ಮಾಡಿದ್ದರೂ ನಿಮ್ಮ ಮನಸ್ಸಿನಲ್ಲಿ ಬೇರೆ ಬೇರೆ ವಿಂಗಡಣೆ ಮಾಡಿದ್ದೀರಿ. ನೀವೇ ಅದಕ್ಕೊಂದು ವ್ಯಕ್ತಿತ್ವ ನೀಡಿದ್ದೀರಿ.

ಹೀಗಾಗಿ ಪ್ರತಿ ಗೋಡೆಯ ಸಮೀಪ ಹೋಗುತ್ತಿದ್ದಂತೆ ನಿಮ್ಮ ನಡವಳಿಕೆ ಬದಲಾಗುತ್ತದೆ. ದೇವರ ಮುಂದೆ ಪ್ರಾರ್ಥನೆ ಮಾಡಿ ದರೂ, ಗರ್ಭಗುಡಿಯ ಹಿಂದಿನ ಗೋಡೆಗೆ ಹಣೆಹಚ್ಚಿ ಗುಟ್ಟಾಗಿ ಪ್ರಾರ್ಥನೆ ಸಲ್ಲಿಸುತ್ತೀರಿ, ಗೋಡೆಯ ಜತೆ ಗುಟ್ಟಾಗಿ ಮಾತಾಡು ತ್ತೀರಿ. ಈ ರೀತಿ ಗೋಡೆಗೆ ಅಭಿಮುಖವಾಗಿ ನಿಂತು ಮತ್ತೆಲ್ಲೂ ಪ್ರಾರ್ಥನೆ ಮಾಡುವುದಿಲ್ಲ’ ಎಂದು ಯೋಗಿಜೀ ವಿವರಿಸುತ್ತಿದ್ದರೆ, ನನ್ನ ಮುಂದೆ ನಿಂತಿದ್ದು ಇಸ್ರೇಲಿನ ಜೆರುಸಲೇಮ್ ನಲ್ಲಿರುವ ವೆಸ್ಟೆರ್ನ್ ವಾಲ್ ಅಥವಾ Wailing Wall  (ಅಳುವ ಗೋಡೆ)!

ಯಹೂದಿಯರಿಗೆ ಅತ್ಯಂತ ಪವಿತ್ರ ತಾಣವಾಗಿರುವ ಸುಮಾರು ಅರವತ್ತು ಅಡಿ ಎತ್ತರ ಮತ್ತು ಐನೂರು ಅಡಿ ಉದ್ದದ ಈ ಗೋಡೆಯ ಒಂದು ಪಾರ್ಶ್ವಕ್ಕೆ ಬಂದು ಇಸ್ರೇಲಿಗಳು ಹಣೆ ಹಚ್ಚಿ ಪ್ರಾರ್ಥನೆ ಸಲ್ಲಿಸುತ್ತಾರೆ. ತಮ್ಮ ಮನಸ್ಸಿನಲ್ಲಿರುವ ಕೋರಿಕೆ ಯನ್ನು ಚೀಟಿಯಲ್ಲಿ ಬರೆದು ಗೋಡೆಯ ಸಂದು, ಪಡಕಿನಲ್ಲಿಟ್ಟು ದೇವರಿಗೆ ಅರ್ಪಿಸುತ್ತಾರೆ. ಕೆಲವರಂತೂ ಈ ಗೋಡೆಗೆ ಹಣೆ ಬಡಿಯುತ್ತಾ ಜೋರಾಗಿ ಅಳುತ್ತಾರೆ. ಕೆಲವೊಮ್ಮೆ ಸಾವಿರಾರು ಜನ ಏಕಕಾಲದಲ್ಲಿ ಗೋಡೆಗೆ ಹಣೆ ಹಚ್ಚಿ ಪ್ರಾರ್ಥನೆ ಮಾಡುತ್ತಿರು ತ್ತಾರೆ.

ಈ ಗೋಡೆಗಾಗಿ ಈಗಲೂ ಯಹೂದಿಯರು ಮತ್ತು ಮುಸ್ಲಿಮರ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಚೀನಾ ಗೋಡೆಗಿಂತ ಜೆರುಸಲೇಮ್ ನಲ್ಲಿರುವ ಈ ಗೋಡೆ ಹೆಚ್ಚು ಸುದ್ದಿ ಮಾಡುತ್ತದೆ. ‘ಯಹೂದಿಯರು ಎಲ್ಲಿಯೇ ಇರಲಿ, ತಮ್ಮ ಮನೆಯಲ್ಲಿಯೇ ವೆಸ್ಟೆರ್ನ್ ವಾಲ’ ಎಂಬ ಕಲ್ಪಿತ ಗೋಡೆಯನ್ನು ನಿರ್ಮಿಸಿಕೊಂಡು ಪ್ರತಿದಿನ ಆ ಗೋಡೆಯನ್ನು ಪೂಜಿಸುತ್ತಾರೆ.

ಹೋಟೆಲ್ಲಿನಲ್ಲಿ ಉಳಿದುಕೊಂಡಾಗಲೂ, ಅಂದು ವೆಸ್ಟೆರ್ನ್ ವಾಲ್ ನಿರ್ಮಿಸಿಕೊಳ್ಳುತ್ತಾರೆ. ಆ ರೂಮಿನಲ್ಲಿ ಉಳಿದುಕೊಂಡಷ್ಟು
ಹೊತ್ತು ಆ ಪ್ರದೇಶವನ್ನು ಪೂಜೆಗಾಗಿ ಬಿಟ್ಟುಕೊಂಡಿರುತ್ತಾರೆ. ನಾಳೆ ಯಹೂದಿಯನೊಬ್ಬ ನಿಮ್ಮ ಮನೆಗೆ ಬಂದು ಉಳಿದು ಕೊಂಡರೂ ಜೆರುಸಲೇಮ್ ಇರುವ ದಿಕ್ಕಿಗೆ ಅಭಿಮುಖವಾಗಿರುವ ಗೋಡೆಯೇ ಅವನ ಪಾಲಿನ ವೆಸ್ಟೆರ್ನ್ ವಾಲ್. ಅವರಿಗೆ
ಗೋಡೆಗಿಂತ ದೊಡ್ಡ ದೇವರು ಯಾವುದೂ ಇಲ್ಲ. ಅವರ ಭಕ್ತಿ, ಶ್ರದ್ಧೆ , ದೈವತ್ವ ಎಲ್ಲವೂ ಗೋಡೆಯ ಭದ್ರ!

ಏನೇ ಆದರೂ ಯಹೂದಿಗಳು ಈ ಗೋಡೆಯನ್ನು ಬಿಟ್ಟುಕೊಡಲಾರರು. ಕೆಲ ವರ್ಷ ಈ ಗೋಡೆಯಿರುವ ಪ್ರದೇಶ ಅವರ ಕೈತಪ್ಪಿ ಹೋಗಿತ್ತು. ಅದನ್ನು ಮರಳಿ ಪಡೆಯಲು ಸಾವಿರಾರು ಜನರು ಪ್ರಾಣಕೊಡಬೇಕಾಯಿತು. ಇಂದಿಗೂ ಯಹೂದಿಯರು ಪ್ರಾಣ ತೆತ್ತಾರು, ಆದರೆ ಗೋಡೆಯನ್ನು ಮಾತ್ರ ಬಿಡಲೊಲ್ಲರು. ಜೆರುಸಲೇಮ್ ಮೇಲೆ ಅರಬ್ ರಾಷ್ಟ್ರಗಳು ಕಣ್ಣಿಟ್ಟಿದ್ದರೆ, ಅದು ವಿವಾದಿತ
ಕೇಂದ್ರವಾಗಿದ್ದರೆ, ಅದಕ್ಕೆ ಈ ಗೋಡೆಯೂ ಕಾರಣ. ಯೋಗಿಜೀ ಮಾತು ಮುಂದುವರಿಸಿದರು – ‘ನಮ್ಮ ಜನರಿಗೆ ಈ ಲಾಕ್ ಡೌನ್ ಹೊಸತು. ನಾವ್ಯಾರೂ ಈ ಮೊದಲು ಇದನ್ನು ಕಂಡು ಕೇಳಿಲ್ಲ.

ನಮ್ಮ ಅಪ್ಪ-ಅಮ್ಮ, ತಾತ-ಮುತ್ತಾತರಿಗೂ ಇದು ಹೊಸತು. ಪ್ಲೇಗ್ ಬಂದಾಗ ಜನ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಆದರೆ ಇಡೀ ಜಗತ್ತಿನ ಶೇಕಡಾ ಎಪ್ಪತ್ತೈದರಷ್ಟು ದೇಶಗಳು ಇಂದು ಲಾಕ್ ಡೌನ್ ಆಗಿ, ಅಲ್ಲಿನ ಜನರೆ ಮನೆಯಲ್ಲಿ ಉಳಿಯುವಂತಾಗಿದೆ. ಕೆಲವರು ಮನೆಯ ಹೊಸ್ತಿಲನ್ನು ಸಹ ದಾಟಿಲ್ಲ. ಸೂರ್ಯನನ್ನು ಕೂಡ ನೋಡಿಲ್ಲ.’ ಆದರೆ ಮನೆಯೊಳಗೇ ಸುಮ್ಮನೆ ಇದ್ದಾರೆ. ಅವೆಷ್ಟೋ ಲಕ್ಷ ಜನ ಮನೆಯಲ್ಲಿ ಏಕಾಂಗಿಯಾಗಿ ಕಾಲ ಕಳೆಯುತ್ತಿದ್ದಾರೆ. ಅವರೆಲ್ಲ ನಿರುಮ್ಮಳವಾಗಿರಲು ಈ ಗೋಡೆಗಳೇ ಕಾರಣ. ಜಗತ್ತಿಗೆಲ್ಲ ಕರೋನಾ ಸೋಂಕಿದರೂ ಅದು ತನ್ನನ್ನು ಸೋಂಕಲಾರದು ಎಂದು ಬೆಚ್ಚಗೆ ನಾಲ್ಕು ಗೋಡೆಗಳ ಮಧ್ಯೆ ಅಡಗಿದ್ದಾರೆ.

ಗೋಡೆ ಕೊಡುವ ಭದ್ರತೆಯನ್ನು ಮತ್ಯಾರೂ ಕೊಡಲಾರರು. ಒಂದು ಕ್ಷಣ ತಮ್ಮ ಸುತ್ತ ಗೋಡೆಗಳೇ ಇಲ್ಲ ಎಂದು ಅವರಿಗೆ ಅನಿಸಿದರೆ, ಅವರು ಭಯ, ಅಭದ್ರತೆಯಿಂದ ಸತ್ತು ಹೋಗಬಹುದು. ಗೋಡೆಗಳು ಇಲ್ಲದ ಗುಡಿಸಲು ಎಂದಿಗೂ ಭದ್ರತೆ ನೀಡಲು
ಸಾಧ್ಯವೇ ಇಲ್ಲ. ನಮ್ಮ ನಮ್ಮ ಮನೆಗಳಲ್ಲಿ ನಾವು ಸುರಕ್ಷಿತ ಏಕೆಂದರೆ, ನಮ್ಮ ಸುತ್ತ ಗೋಡೆಗಳಿವೆ ಎಂಬ ಭಾವ ನಮ್ಮನ್ನು
ಹಾಗೆ ಇಟ್ಟಿದೆ. ಗೋಡೆಯನ್ನು ದಾಟಿ ಯಾರೂ ಬರಲಾರರು ಎಂಬುದು ನಮಗೆ ಗೊತ್ತು. ಹೀಗಾಗಿ ನಾವು ನಾಲ್ಕು ಗೋಡೆ
ಮಧ್ಯೆ ಇದ್ದಷ್ಟು ಹೊತ್ತು ನಿರುಮ್ಮಳ.’

ನಿಮಗೆ ಗೊತ್ತಿರಬಹುದು, ಮರ್ಡರ್ ಮಾಡಿ ಜೈಲು ಸೇರಿದ ರೌಡಿ, ಜೈಲಿನಲ್ಲಿದ್ದಷ್ಟು ದಿನ ನೆಮ್ಮದಿಯಿಂದ ಇರುತ್ತಾನೆ. ಕಾರಣ
ಜೈಲಿನಲ್ಲಿರುವ ಭದ್ರ ಗೋಡೆಗಳು. ಯಾರೂ ಆ ಆಳೆತ್ತರದ ಗೋಡೆ ಹಾರಿ ಒಳಬಂದು, ತನ್ನ ಕೋಣೆಯನ್ನು ಭೇದಿಸಿ ಒಳಬಂದು ಸಾಯಿಸುವುದಿಲ್ಲ ಎಂಬುದು ಅವನಿಗೆ ಖಾತ್ರಿಯಾಗಿರುತ್ತದೆ. ಈ ಭದ್ರತೆಯೇ ಅವನಿಗೆ ಜೈಲಿನೊಂದಿಗೆ ಒಂದು comfortness ಕೊಡುತ್ತದೆ. ಯಾರೂ ಬಂದು ತನ್ನನ್ನು ಸಾಯಿಸಲಾರರು ಎಂಬ ನಂಬಿಕೆ ಅವನಲ್ಲಿ ಬೇರೂರಲಾರಂಭಿಸುತ್ತದೆ.

ವಿಚಾರಣೆಗೆ ಕೋರ್ಟಿಗೆ ಕರೆದುಕೊಂಡು ಹೋಗಬೇಕಾದಾಗ ಆತ ಒಳಗೊಳಗೇ ಕಂಪಿಸಲಾರಂಭಿಸುತ್ತಾನೆ. ಯಾರಾದರೂ ತನ್ನ ಮೇಲೆ ಅಟ್ಯಾಕ್ ಮಾಡಬಹುದು ಎಂದು ಅವನಿಗೆ ಅನಿಸುತ್ತದೆ. ರೌಡಿಗಳನ್ನು ಈ ಸಮಯದ ಸಾಯಿಸುವುದು. ಕೋರ್ಟಿಗೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಅನೇಕರ ಮೇಲೆ ಅಟ್ಯಾಕ್ ಆಗಿರುವುದನ್ನು ಗಮನಿಸಬಹುದು.’ ಗೋಡೆಗಳಿಲ್ಲದ ಜಗತ್ತಿನಲ್ಲಿ ಆತನಿಗೆ ಬದುಕುವುದು ಸಾಧ್ಯವೇ ಇಲ್ಲ. ಜೈಲುಶಿಕ್ಷೆ ಮುಗಿದು ಮನೆಗೆ ಹೋಗುವಾಗ, ಆತ ಒಲ್ಲದ ಮನಸ್ಸಿನಿಂದಲೇ ಜೈಲಿನಿಂದ ಹೊರಡುತ್ತಾನೆ. ಹೊರಗಿನ ಪ್ರಪಂಚ ತನಗೆ ಸುರಕ್ಷಿತ ಅಲ್ಲ ಎಂದು ಅವನಿಗೆ ಅನಿಸಲಾರಂಭಿಸುತ್ತದೆ.

ಯಾವ ಕ್ಷಣದದರೂ ತನ್ನ ಮೇಲೆ ಅಟ್ಯಾಕ್ ಆಗಬಹುದು ಎಂಬ ಭಯ ಆವರಿಸಿಕೊಳ್ಳಲಾರಂಭಿಸುತ್ತದೆ. ಹೀಗಾಗಿ ಕೆಲವು
ರೌಡಿಗಳು ಜೈಲು ಶಿಕ್ಷೆ ಮುಗಿಸಿ ಹೊರಬಂದ ಕೆಲ ದಿನಗಳಲ್ಲಿ ಮತ್ತೊಂದು ಮರ್ಡರ್‌ ಮಾಡಿ, ಜೈಲು ಸೇರಿಬಿಡುತ್ತಾರೆ. ಜೈಲಿನ
ಗೋಡೆಗಳು ಕೊಡುವ ಭದ್ರತೆಯನ್ನು ಹೊರಗಿನ ಸಮಾಜ ಆತನಿಗೆ ಕೊಡುವುದಿಲ್ಲ. ಜೈಲಿನ ಗೋಡೆಗಳ ಜತೆ ಅವನಿಗೊಂದು
ಬಂಧ ಬೆಳೆದಿರುತ್ತದೆ. ಹೊರಗಿನ ಪ್ರಪಂಚದ ಎಲ್ಲಾ ಸುಖ, ಐಷಾರಾಮಗಳನ್ನು ಆತ ಜೈಲಿನ ಗೋಡೆಗಳು ನೀಡುವ ಭದ್ರತೆ ಯಲ್ಲಿ ಕಾಣುತ್ತಾನೆ.

ತನ್ನನ್ನು ಯಾರೂ ಸಾಯಿಸಲಾರರು ಎಂಬ ಭರವಸೆಯೇ ಅವನಿಗೆ ಅಗಾಧ ನೆಮ್ಮದಿ ನೀಡುತ್ತದೆ. ಮನುಷ್ಯನಿಗೆ ಮತ್ತೇನಲ್ಲ ದಿದ್ದರೂ ಗೋಡೆಗಳು ನೀಡುವ ಭದ್ರತೆಯನ್ನು ಮತ್ಯಾವುದೂ ನೀಡಲಾರವು.’ ಗೋಡೆಯಾಚೆ ನಮ್ಮನ್ನು ಹತ್ಯೆ ಮಾಡಲು ಯಾರೋ ಹೊಂಚು ಹಾಕಿ ನಿಂತಿದ್ದರೂ ಆತ ಗೋಡೆ ಭೇದಿಸಿ ಬರಲಾರ ಎಂಬುದು ನಮಗೆ ಗೊತ್ತು. ಬಾಗಿಲನ್ನು ನಂಬಿ ಗೋಡೆ ಮೋಸ ಹೋಯಿತು ಎಂಬ ಗಾದೆಯನ್ನು ಕೇಳಿರಬಹುದು. ಗಟ್ಟಿಯಲ್ಲದ ಬಾಗಿಲು, ಬಲಿಷ್ಠ ಗೋಡೆಯನ್ನೂ ದುರ್ಬಲ ಮಾಡಿ ಬಿಡಬಲ್ಲದು ಎಂಬುದು ಈ ಗಾದೆಯ ತಾತ್ಪರ್ಯ.

ಗೋಡೆ ಸದಾ ತನ್ನನ್ನು ನಂಬುತ್ತದೆಯೇ ಹೊರತು, ತನಗೆ ಹೊಂದಿಕೊಂಡಿರುವ ಕಿಟಕಿ ಮತ್ತು ಬಾಗಿಲನ್ನು ನಂಬುವುದಿಲ್ಲ. ಗೋಡೆಗೆ ಕಿಟಕಿ ಮತ್ತು ಬಾಗಿಲ ಸಾಮರ್ಥ್ಯದಲ್ಲಿ ನಂಬಿಕೆ ಇಲ್ಲ. ಹೀಗಾಗಿ ಕಿಟಕಿ, ಬಾಗಿಲನ್ನು ಸುಲಭವಾಗಿ ಮುರಿದು ಒಳಬರು ವಂತೆ ಗೋಡೆಯನ್ನು ಕೆಡವಿ ಒಳಬರಲಾಗುವುದಿಲ್ಲ. ಬೇಕಾದರೆ ಪರೀಕ್ಷಿಸಿ, ಕಿಟಕಿ, ಬಾಗಿಲುಗಳು ಇಲ್ಲದ ಗೋಡೆಗೇ ಕಳ್ಳರು ಕನ್ನ ಹಾಕೋದು. ಗೋಡೆಗೊಂದು ಕಿಟಕಿಯೋ, ಬಾಗಿಲೋ ಇದ್ದರೆ ಯಾವ ಕಳ್ಳನೂ ಕನ್ನ ಕೊರೆಯುವುದಿಲ್ಲ. ಒದ್ದರೆ ಬೀಳುವಂಥ ದುರ್ಬಲ ಗೋಡೆಯಿದ್ದರೆ ಮಾತ್ರ ಹಾಗೆ ಮಾಡಬಹುದು.’

‘ಒಂದರ್ಥದಲ್ಲಿ ಗೋಡೆಗಳಿಗೂ ಜೀವವಿದೆ ಅಂದರೆ ನಿಮಗೆ ಆಶ್ಚರ್ಯ ಆಗಬಹುದು. ಹೇಗಂತೀರಾ? ಕೆಲವು ಸಲ ಈ ಗೋಡೆ ಗಳಿಗೆ ಕಣ್ಣು, ಕಿವಿಗಳಿವೆ, ಹುಷಾರು ಎಂದು ಹೇಳುವುದನ್ನು ಕೇಳಿರಬಹುದು. ಅಂದರೆ ಆ ನಾಲ್ಕು ಗೋಡೆಗಳ ಮಧ್ಯೆ ಏನೇ ಮಾಡಿ ದರೂ ಹೊರಗಿನವರಿಗೆ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಅಲಂಕಾರಿಕವಾಗಿ ಹಾಗೆ ಹೇಳುವುದುಂಟು. ಕಣ್ಣು, ಕಿವಿಗಳಿರುವ ಗೋಡೆಗಳೇ ಬಹಳ ಡೇಂಜರಸ್. ಒಮ್ಮೆ ನಿಮಗೆ ನೀವು ಮಲಗಿರುವ ಕೋಣೆಯ ಗೋಡೆಗಳಿಗೆ ಕಣ್ಣು, ಕಿವಿಗಳಿವೆ ಎಂಬುದು ಗೊತ್ತಾದರೆ ನಿದ್ದೆಯೇ ಬರುವುದಿಲ್ಲ. ಯಾರೋ ನಿಮ್ಮನ್ನು ದಿಟ್ಟಿಸುವಂತೆ, ಆಲಿಸುವಂತೆ ಭಾಸವಾಗುತ್ತದೆ.

ನಾಲ್ಕು ಗೋಡೆಗಳ ಮಧ್ಯೆ ಇದ್ದರೂ ಸುತ್ತ ನೋಡುತ್ತಾ, ತಾನು ಮಾತಾಡುವುದನ್ನು ಯಾರೂ ಆಲಿಸುತ್ತಿಲ್ಲ ಎಂಬುದನ್ನು  ಖಾತ್ರಿ
ಪಡಿಸಿಕೊಳ್ಳುತ್ತಾ ಮಾತಾಡುತ್ತೀರಿ. ಗೋಡೆಯನ್ನು ಸಂದೇಹಿಸುತ್ತೀರಿ. ಗೋಡೆ ನಿಮ್ಮನ್ನು ದುರುಗುಟ್ಟಿ ನೋಡುತ್ತಿರುವಂತೆ ಅನಿಸಲಾರಂಭಿಸುತ್ತದೆ. ಗೋಡೆಗೆ ಕಳ್ಳಗಿವಿ ಇದ್ದಿರಬಹುದಾ ಎಂಬ ಸಂಶಯ ಕಾಡಲಾರಂಭಿಸುತ್ತದೆ. ಆಗ ಗೋಡೆಯನ್ನೇ ವೈರಿ ಯಂತೆ ನೋಡಲಾರಂಭಿಸುತ್ತೀರಿ, ಯೋಚಿಸಿದ್ದೀರಾ?’ ಎಂದು ಯೋಗಿಜೀ ಸುದೀರ್ಘವಾಗಿ ಗೋಡೆ ಪುರಾಣ’ವನ್ನು ವಿವರಿಸಿದರು.

ಇಂದು ನಾವೆ ನಮ್ಮ ನಮ್ಮ ಮನೆಗಳಲ್ಲಿ ಕರೋನಾ ವೈರಸ್ಸಿನಿಂದ ಸುರಕ್ಷಿತವಾಗಿ ಇದ್ದೇವೆಂಬ ಭಾವನೆ ಮೂಡಿದ್ದರೆ ನಮ್ಮ ಮನೆಗಳ ಈ ಗೋಡೆಗಳೇ ಕಾರಣ. ತಿಂಗಳುಗಟ್ಟಲೆ ನಾಲ್ಕು ಗೋಡೆಗಳ ನಡುವೆ ಬಂದಿಯಾಗಿಯೂ ಹುಚ್ಚು ಹಿಡಿಯದೇ,
ನಿರುಮ್ಮಳವಾಗಿದ್ದರೆ ನಮ್ಮ ಚಿತ್ತ ಭಿತ್ತಿಯಲ್ಲಿ ಆವರಿಸಿರುವ, ನಮ್ಮನ್ನು ಯಾರೂ ತಟ್ಟಲಾರರು ಎಂಬ ಭರವಸೆಯ ಭಾವನೆಯೇ ಕಾರಣ. ಹೀಗಾಗಿ ನಾವು ನಮ್ಮ ನಮ್ಮ ಮನೆಗಳಲ್ಲಿ ಹೊಸ ಭರವಸೆಯೊಂದಿಗೆ, ಯಾರೋ ನಮ್ಮನ್ನು ಕಾಪಾಡುತ್ತಿದ್ದಾರೆ ಎಂಬ ವಿಶ್ವಾಸದೊಂದಿಗೆ, ಒಂದೇ ರೂಮಿ ನಲ್ಲಿ, ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುತ್ತಿದ್ದೇವೆ.

ಈ ಏಕಾಂಗಿತನದಲ್ಲೂ ಆಪ್ತತೆಯನ್ನು ಕಾಣುತ್ತಿದ್ದರೆ, ಅದಕ್ಕೆ ನಾಲ್ಕು ಗೋಡೆಗಳ ಮಧ್ಯೆ ಭದ್ರವಾಗಿದ್ದೇವೆ ಎಂಬ ಕಾರಣಕ್ಕೆ.
ಅಷ್ಟಕ್ಕೂ ನಾವು ನಾವಾಗಿರುವುದು ನಾಲ್ಕು ಗೋಡೆಗಳ ಮಧ್ಯದಲ್ಲಿದ್ದಾಗ ಮಾತ್ರ. ಗೋಡೆಯಿಂದ ಹೊರಬೀಳುತ್ತಿರುವಂತೆ
ನಾವು ನಾವಾಗಿರುವುದಿಲ್ಲ. ನಾವಲ್ಲದ ಇನ್ನೇನೋ ಆಗಿರುತ್ತೇವೆ. ನಾಲ್ಕು ಗೋಡೆಗಳ ಮಧ್ಯೆ ಏಕಾಂಗಿಯಾಗಿದ್ದಾಗ ಯಾರನ್ನೂ
ಮೆಚ್ಚಿಸುವ, ಪೋಸು ಕೊಡುವ ಪ್ರಸಂಗ ಬರುವುದಿಲ್ಲ.

ನಾಟಕಗಳೆ ಆರಂಭವಾಗುವುದು ಗೋಡೆಯಿಂದ ಹೊರಬಂದಾಗಲೇ. ಎರಡು ವರ್ಷಗಳ ಹಿಂದೆ ನಾನು ಜರ್ಮನಿಯ ಬರ್ಲಿನ್
ನಗರಕ್ಕೆ ಹೋಗಿದ್ದೆ. ಪಶ್ಚಿಮ ಮತ್ತು ಪೂರ್ವ ಜರ್ಮನಿಯನ್ನು ಬೇರ್ಪಡಿಸುವ ಬರ್ಲಿನ್ ಗೋಡೆಯನ್ನು ನೆಲಸಮ ಮಾಡಿ
ಮೂವತ್ತೊಂದು ವರ್ಷಗಳೇ ಆದರೂ, ಇಂದಿಗೂ ಅವೆಷ್ಟೋ ಜನರಿಗೆ ಗೋಡೆ ಇರುವ ಭಾವನೆಯೇ ಇದೆ. ಕಾರಣ ಅವರು
ತಮ್ಮ ಮನಸ್ಸಿನಲ್ಲಿ ಕಟ್ಟಿಕೊಂಡಿರುವ ಗೋಡೆಯನ್ನು ಇನ್ನೂ ನೆಲಸಮ ಮಾಡಿಲ್ಲ. ಅವರ ಪಾಲಿಗೆ ಬರ್ಲಿನ್ ಗೋಡೆ ಹಾಗೆಯೇ ನಿಂತಿದೆ. ಅವರ ಪಾಲಿಗೆ ಅದು ಚಿತ್ತ‘ಭಿತ್ತಿ’ಯೇ !

ನಾನು ಅಲ್ಲಿ ಕಂಡ ಒಂದು ಬರಹ ನನ್ನ ಮನಸ್ಸಿನ ಗೋಡೆಗೆ ಮೊಳೆ ಹೊಡೆದಂತಿದೆ – “Whatever life gives you, even if it hurts you, just be strong and act as if you are fine. strong walls may shake but they never fall down’ ಈ ಕರೋನಾ ಮಾರಿ ವಿಶ್ವವನ್ನೇ ವ್ಯಾಪಿಸಿರುವ ಈ ದಿನಗಳಲ್ಲಿ Stay Home, Stay Safe ಯಾಕೆ ದಿವ್ಯಮಂತ್ರದಂತೆ ಕೇಳಿಸುತ್ತಿದೆಯೆಂದರೆ, ನಮಗೆ ಗೋಡೆಗಳ ರಕ್ಷಣೆಯಿದೆ.

ಅಲ್ಲಿರುವಷ್ಟು ಹೊತ್ತು ಕರೋನಾ ನಮ್ಮನ್ನು ಸೋಂಕಲಾರದೆಂಬ ಅಚಲ ವಿಶ್ವಾಸವಿದೆ. ಗೋಡೆಗಳನ್ನು ನೋಡುತ್ತಾ, ಅವು ಗಳೊಂದಿಗೆ ಮಾತಾಡುತ್ತಾ, ದಿನ (Go Day) ದೂಡುವುದರಲ್ಲಿ ಆನಂದ ಕಾಣುವುದು ಸಹ ಒಂದು ಅನೂಹ್ಯ ಅನುಭೂತಿ ಯೇ!

ಗೋಡೆಯ ಬಗ್ಗೆ ನೆನಪಿಸಿಕೊಂಡಾಗ ನನಗೆ ಆಸ್ಕರ್ ವೈಲ್ಡ್ ಹೇಳಿದ ಮಾತು ನೆನಪಾಗುತ್ತದೆ – “I like talking to a wall. Its the only thing in the world that never contradicts nor criticises me. ಈ ದೃಷ್ಟಿಕೋನ ದಿಂದ ನೋಡಲಾರಂಭಿಸಿದರೆ, ಲಾಕ್ ಡೌನ್ ಕಾಲದಲ್ಲಿ ಗೋಡೆಯೂ ಒಂದಿಷ್ಟು ಸಾಂತ್ವನ ನೀಡಬಹುದು.

Leave a Reply

Your email address will not be published. Required fields are marked *

error: Content is protected !!