Friday, 20th September 2024

ಶ್ರೀ ಕೃಷ್ಣನ ರಾಜನೀತಿ – ರಾಜಧರ್ಮ

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್

dascapital1205@gmail.com

ನಾಗರಿಕ ಪ್ರಪಂಚದ ಮೊದಲ ಆರಾಧ್ಯದೈವ ಶ್ರೀ ರಾಮಚಂದ್ರ. ಅನಂತರ ಶ್ರೀಕೃಷ್ಣ. ಮನುಷ್ಯ ಜೀವನದ ಸಾರ್ವಕಾಲಿಕ ಮೌಲ್ಯಗಳನ್ನು ತನ್ನೊಂದಿಗೆ ತಾನೇ ಬೆಳೆಯುತ್ತಾ ಮಿತಿ ಮೀರುತ್ತಾ, ಮುಕ್ತತೆಯ ಬಂಧನದೊಳಗೇ ಇದ್ದು ತಾನು ಲೋಕಕ್ಕೆ ತೆರೆದುಕೊಳ್ಳುತ್ತಾ ಹೋಗುವುದರಿಂದ ಶ್ರೀ ಕೃಷ್ಣ ನಮಗೆ ಎಲ್ಲಾ ಬಗೆ ಯಿಂದಲೂ ಆಪ್ತವಾಗುತ್ತಾ ಹೋಗುತ್ತಾನೆ.

ಅರ್ಜುನ ಸ್ವರೂಪೀ ನಮ್ಮ ಸಮಾಜಕ್ಕೆ ಕೃಷ್ಣನೇ ಬಂದು ನಮ್ಮ ಸುಖದುಃಖಗಳಿಗೆ ಪರಿಹಾರವನ್ನು ನೀಡ ಬೇಕೆಂದು ಬಯಸುವ ನಾವು ಕೃಷ್ಣನನ್ನು ನಿವಂಚನೆ ಯಿಂದ ನಿಷ್ಕಲ್ಮಶವಾಗಿ ಸ್ಥಾಪಿಸಿಕೊಂಡಿರುತ್ತೇವೆ. ಮನಸು ಕೃಷ್ಣಮಯವಾಗುವುದು ಈ ತೆರದಲ್ಲಿ. ನಮ್ಮ ಬದುಕಿನ ನೀತಿಗೂ ಧರ್ಮಕ್ಕೂ ಕೃಷ್ಣನೇ ಬೇಕು. ಶುಕ್ರನೀತಿಗೂ, ಕಣಿಕನೀತಿ ದಮನಕ್ಕೂ ಕೃಷ್ಣನೇ ಬೇಕು. ಅಂತೂ ಕೃಷ್ಣನಿಲ್ಲದೆ ಈ ಬದುಕು ಚಲಿಸುವುದಿಲ್ಲ. ಕೃಷ್ಣ ಅಂದರೆ ಆಕರ್ಷಣೆ. ಕೃಷ್ಣ ಅಂದರೆ ಪ್ರೀತಿ. ಅದಕ್ಕಾಗಿ ಕೃಷ್ಣನನ್ನು ಏಕವಚನದಲ್ಲೇ ಸಂಬೋಧಿಸುವುದು. ಬೇರೆಬೇರೆ ರೂಪದಲ್ಲಿ ಅವನನ್ನು ಆರಾಽಸುತ್ತಾ ಕೃಷ್ಣನನ್ನು ಅನುಸರಿಸುತ್ತೇವೆ, ಅನುಕರಿಸುತ್ತೇವೆ. ಶ್ರೀಕೃಷ್ಣ ನಮ್ಮ ಕಾಲದ ಪುಣ್ಯ.

ಅದಕ್ಕಾಗಿ ಕೃಷ್ಣಪ್ರಜ್ಞೆ ನಮ್ಮನ್ನು ಬಲವಾಗಿ ಕಾಡುತ್ತದೆ. ನಮ್ಮ ವಿಕಸನದ ಮೂಲವೂ ಅವನೇ. ಕೃಷ್ಣನನ್ನು ವಿಮರ್ಶಿಸುತ್ತಲೇ ಅವನನ್ನು ಆಂತರ್ಯದಲ್ಲಿ ಒಪ್ಪಿ ಸ್ವೀಕರಿಸಲು ಸಾಧ್ಯವಾಗುವಷ್ಟು ನಮ್ಮ ಮನಸ್ಸು ಲೀನವಾಗುತ್ತದೆ. ಅದಕ್ಕಾಗಿ ಕೃಷ್ಣನ ಲೀಲೆಗಳನ್ನು ಮೆಚ್ಚುತ್ತೇವೆ. ಮೆಚ್ಚಿ ಸಾರುತ್ತೇವೆ. ಲೋಕೋತ್ತರ ಮಹಾಪುರುಷರ ಜಯಂತಿಯಂದು ಅವರ ಗುಣಗಳನ್ನು ಸ್ಮರಿಸುತ್ತಾ ಅವರ ಪ್ರಸ್ತುತತೆಯನ್ನು ಕಂಡುಕೊಳ್ಳುತ್ತಾ, ಜೀವನಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತ ಮುಂದಿನವರಿಗೆ ಅವರನ್ನು ಜೀವಂತವಾಗಿಯೇ ಕಟ್ಟಿಕೊಡುವ ನಿರಂತರ ಪ್ರಯತ್ನದಲ್ಲಿ ಸಾರ್ಥಕ್ಯವನ್ನು ಕಾಣುತ್ತೇವೆ. ಕೃಷ್ಣನನ್ನು ನಮ್ಮ ಜೀವನ ಪರಿಧಿಗೆ ಅವಾಹಿಸಿಕೊಳ್ಳುತ್ತೇವೆ. ಅಂಥ ಅನುಕರಣೀಯ, ಅನುಸರಣೀಯ ಆಕೃತಿಗಳಲ್ಲಿ ಕೃಷ್ಣನ ರಾಜನೀತಿ ಮತ್ತು ರಾಜಧರ್ಮದ ಅಂಶಗಳು ಸಾರ್ವಕಾಲಿಕ ಮೌಲ್ಯ ಗಳಾಗಿವೆ.

ಶ್ರೀರಾಮ ಮತ್ತು ಶ್ರೀಕೃಷ್ಣರ ಜೀವನ ಮೌಲ್ಯಗಳನ್ನು ಅವರವರ ಕೌಟುಂಬಿಕ ಮತ್ತು ರಾಜಕಾರಣದ ದೃಷ್ಟಿಯಿಂದ ಅವಿಭಾಜ್ಯವಾಗಿ ನೋಡಬೇಕಾಗುತ್ತದೆ.
ಪ್ರಾಚೀನ ಅಥವಾ ಪಾರಂಪರಿಕ ರಾಜಕಾರಣದ ಅಂಶ ಗಳೆಂದರೆ ಸಾಮ, ದಾನ, ಭೇದ, ದಂಡ- ಇವನ್ನು ಶ್ರೀ ಕೃಷ್ಣ ತನ್ನ ಒಟ್ಟೂ ನಡೆಯಲ್ಲಿ ಚೆನ್ನಾಗಿಯೇ ಅನುಸರಿಸಿ ಜಗತ್ತಿಗೇ ಮಾದರಿಯಾದ. ಶಕಟ, ಧೇನುಕ, ಪೂತನಿಯಾದಿಯಾಗಿ ರಕ್ಕಸರ ನಿಗ್ರಹದಿಂದ ಕಂಸವಧೆಯವರೆಗೂ ಇದನ್ನು ಕಾಣಬಹುದು. ಶತ್ರುವು ಅಸತ್ಯವೂ ವಕ್ರಮಾರ್ಗಾನುಸಾರಿಯೂ, ಕ್ರೂರಿಯೂ, ದಮನಕಾರಿಯೂ, ವಂಚಕನೂ ಆಗಿದ್ದಲ್ಲಿ ಅವನನ್ನು ಅವನದೇ ನೆಲೆಯಲ್ಲಿ ನಿಗ್ರಹಿಸಬೇಕಾಗುತ್ತದೆ.

ಕೊಂದವನಿಗೆ ಕೊಲೆಯೇ ಶಿಕ್ಷೆ. ಸಂಬಂಧಗಳನ್ನು ಮೀರಿ ಹುಂಬನಾಗಿ, ಒರಟನಾಗಿ, ಉದ್ಧಟನಾಗಿ, ಲೋಕಕಂಟಕನಾಗಿ, ರಾಕ್ಷಸೀಯಾಗಿ ಮಾರಕ ಪರಿಣಾಮವ
ನ್ನುಂಟು ಮಾಡಿ ಇಡೀ ಸಮೂಹವೇ ದ್ವೇಷಿಸುವಂತಾದರೆ ಅಂಥವನು ಯಾವ ನೀತಿನೆಲೆಯಿಂದಲೂ ಸಾಯುವುದಕ್ಕೆ ಅರ್ಹನಾಗುತ್ತಾನೆಂದೂ ಅಂಥವನನ್ನು ನಾಶಗೊಳಿಸಿ ಧರ್ಮ ಸಂಸ್ಥಾಪನೆ ಮಾಡಿ ಲೋಕಕ್ಷೇಮವನ್ನು ಮಾಡಿದ ಶ್ರೀ ಕೃಷ್ಣ ಶಿಷ್ಟರನ್ನು ಕಾಪಾಡಿ ತೋರಿದ. ಇದು ಶ್ರೀ ಕೃಷ್ಣನ ರಾಜನೀತಿ. ಸಾಮದಿಂದಲೂ ಆಗದಿದ್ದರೆ ದಾನ, ಬಗ್ಗದಿದ್ದರೆ ಭೇದ, ಒಗ್ಗದಿದ್ದರೆ ದಂಡವೇ ಅನಿವಾರ್ಯ. ಇವುಗಳ ಪಾಲನೆಗೆ ಕಾಲವನ್ನು ಕಾಯುವುದು ರಾಜತಂತ್ರ. ಸಂಧಿ, ವಿಗ್ರಹ, ಯಾನ, ಆಸನ, ದ್ವೈಧ, ಆಶ್ರಯ- ಇವು ರಾಜಕಾರಣದ ಷಡಂಗಗಳು. ಕೌಟಿಲ್ಯನ ಅರ್ಥಶಾಸ, ಭೀಷ್ಮನ ಅನುಶಾಸನ, ಶಾಂತಿಪರ್ವ, ರಾಮಾಯಣ, ಶುಕ್ರನೀತಿ, ಮನುಸ್ಮೃತಿಗಳಲ್ಲೂ ರಾಜನೀತಿ, ರಾಜಧರ್ಮದ ನಿರೂಪಣೆ ಸಂದರ್ಭದಲ್ಲಿ ಉಲ್ಲೇಖಗೊಂಡ ಇವು ಕೃಷ್ಣನ ರಾಜನೀತಿ ರಾಜಧರ್ಮದಲ್ಲಿ ಕಾಣುತ್ತವೆ.

ಸಂಧಿ ಆಗದಿದ್ದಾಗ ವಿಗ್ರಹ, ಆಗ, ಯಾನ, ಮತ್ತೆ ಆಸನ, ಮುಂದುವರಿದು ದ್ವೈಧ- ಇವು ಯಾವವೂ ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿ ಪ್ರಬಲರ ಸಹಾಯ
ಪಡೆಯುವುದು ಆಶ್ರಯ. ಇವು ರಾಷ್ಟ್ರೀಯ ರಕ್ಷಣೆಯ ವಿಧಾನಗಳು, ಪ್ರಾಚೀನ ಭಾರತೀಯ ನೀತಿಗಳು. ಕೃಷ್ಣನದು ಕುಟಿಲ ಮಾರ್ಗ ಎಂಬ ಆರೋಪವಿದೆ.
ಕೃಷ್ಣನದು ಕುಟಿಲ ಮಾರ್ಗ ಕುಟಿಲ ಮನೋಧರ್ಮವು ದುಷ್ಟರಿಗೆ ಮಾತ್ರ. ಆ ಮಾರ್ಗವನ್ನು ಹಿಡಿಯದಿದ್ದರೆ ಕೌರವರು ಗೆದ್ದು ಅನ್ಯಾಯ, ಅಧರ್ಮ ಎಲ್ಲೆಡೆ ರಾರಾಜಿ ಸುತ್ತಿತ್ತು. ಧರ್ಮಕ್ಕಾಗಿ ವಕ್ರನೀತಿಯನ್ನು ಹಿಡಿಯುವುದು ಶುಕ್ರನೀತಿ ಒಪ್ಪುತ್ತದೆ. ಮಹಾಭಾರತದಲ್ಲಿ ಶ್ರೀಕೃಷ್ಣನದು ಶುಕ್ರನೀತಿ.

ಕೌರವರದ್ದು ಕಣಿಕ ನೀತಿ. ಕೃಷ್ಣನ ರಾಜನೀತಿಯನ್ನು ದೂಷಿಸುವವರು, ನಿಂದಿಸುವವರು, ಕೌರವರಿಗೆ ಕಣ್ಣೀರು ಸುರಿಸುವ ಚಿರಂಜೀವಿ ಅಶ್ವತ್ಥಾಮನಂಥವರು. ಶ್ರೀ ಕೃಷ್ಣ ಸತ್ಯ ಧರ್ಮವನ್ನು ಆರಂಭದಲ್ಲೇ ಗುರುತಿಸಿದ ಮತ್ತು ದುಷ್ಟರನ್ನು ಕೊಂದ! ಜರಾಸಂಧನನ್ನು ಭೀಮನಿಂದ ಕೊಲ್ಲಿಸಿದ. ದುರ್ಬಲರಾದ ಪಾಂಡವರಿಗೆ ದ್ರೌಪದಿಯ ವಿವಾಹ ಮೂಲಕ ದ್ರುಪದನ ಬೆಂಬಲವನ್ನು ಶ್ರೀ ಕೃಷ್ಣ ತಂದ. ದಿಗ್ವಿಜಯದಲ್ಲಿ ಅರ್ಜುನನಿಗೆ ನಾಗರ, ಯಾದವರ, ದಕ್ಷಿಣ ದವರ ಬಲವನ್ನು ಸುಭದ್ರೆ, ಚಿತ್ರಾಂಗದೆ, ಉಲೂಪಿಯರ ಮೂಲಕ ತಂದ. ಮಯ ಸಹವಾಸದಿಂದ ಇಂದ್ರಪ್ರಸ್ಥ ಮಾಡಿಸಿದ. ಸಾಮ್ರಾಟ ಪದವಿಗೆ ಯುಧಿಷ್ಠಿರನನ್ನು ಏರಿಸಿದ. ಶಿಶುಪಾಲಾದಿ
ದುರುಳರನ್ನು ಕೊಂದ. ಹದಿಮೂರು ವರ್ಷಗಳ ಪಾಂಡವರ ಕಷ್ಟಕಾಲದಲ್ಲಿ ವಿರಾಟ, ಜರಾಸಂಧ ಪುತ್ರ, ಶಿಶುಪಾಲ ಪುತ್ರ, ದ್ರುಪದನಿಂದಾಗಿ ನಾಲ್ಕೈದು ಅಕ್ಷೋಹಿಣೀ ಸೇನಾಬಲ ದೊರೆಯುವಂತೆ ಮಾಡಿದ.

ಯುದ್ಧಕ್ಕೆ ತಾನೇ ನಿಂತು ಎಲ್ಲಾ ಉಪಾಯ ಮಾಡಿದ. ಬುದ್ಧಿ ಹೇಳಿಸಿದ ಹಾಗೆ ಸನ್ನಿವೇಶ ನಿರ್ಮಾಣ ಮಾಡಿದ. ಯುದ್ಧದ ಆರಂಭದಲ್ಲಿ ಸಾತ್ಯಕಿಯೊಡಗೂಡಿ ಕರ್ಣನನ್ನು ಸಂಧಿಸಿ ಸತ್ಯವನ್ನರುಹಿ ಭೇದೋಪಾಯದ ತಂತ್ರವನ್ನು ಮಾಡಿದ. ಸಾತ್ಯಕಿಯೊಡಗೂಡಿ ಕರ್ಣನನ್ನು ಸಂಧಿಸಿ ಸತ್ಯವನ್ನರುಹಿದ. ಭೀಷ್ಮ ದ್ರೋಣರ
ಸ್ಥೈರ್ಯವನ್ನು ಅಲುಗಾಡಿಸಿದ. ವಿಧುರನ ಬಿಲ್ಲನ್ನು ಮುರಿಸಿ ಯುದ್ಧಕ್ಕೆ ವಿಮುಖನಾಗಿಸಿ ಪಾಂಡವರ ವಿಜಯಕ್ಕೆ ನಾಂದಿ ಹಾಡಿದ. ಯಾದವ ಸೇನೆಯನ್ನು ಕೊಟ್ಟು ಕೌರವನಿಗೆ ಗೆಲ್ಲುವ ಸುಳ್ಳು ಭರವಸೆಯ ತಂತ್ರ ಹೂಡಿದ. ಎಷ್ಟೆಲ್ಲಾ ಬಗೆಯಲ್ಲಿ ಯುದ್ಧವನ್ನು ತಪ್ಪಿಸಲು ಕೃಷ್ಣ ತಂತ್ರ ಮಾಡಿದರೂ ಯುದ್ಧವೇ ಒದಗಿತು. ವಿರಾಟ ನಗರದ ಪ್ರಸಂಗದಲ್ಲಿ ಅರ್ಜುನ ಒಬ್ಬನೇ ಗೆದ್ದುದ್ದನ್ನು ಕಂಡರೂ ಕೌರವ ಪಾಠ ಕಲಿಯಬೇಕಿತ್ತು.

ಕೌರವನಿಗೆ ಸಂಖ್ಯಾಬಲ ಇತ್ತು. ಕೌಂತೇಯರಿಗೆ ದೈವ ಬಲ, ಧರ್ಮ ಬಲ ಇತ್ತು. ನೇರವಾದ ಮಾರ್ಗಗಳೆಲ್ಲವೂ ಮುಗಿದಿತ್ತು. ಸಂಧಾನವೂ ಮುರಿದು ಬಿತ್ತು. ಹತ್ತು ದಿನಗಳ ಯುದ್ಧದಲ್ಲಿ ಭೀಷ್ಮನ ಬಾಹುಬಲವನ್ನು ಎದುರಿಸಲಾಗದೆ ಹೋದ ಪಾಂಡವರಿಗೆ ಭೀಷ್ಮನಿಂದಲೇ ಅವನ ಮರ್ಮವನ್ನು ತಿಳಿಯುವಂತೆ ಶಿಖಂಡಿಯಿಂದ ನಿಗ್ರಹಿಸಿದ. ಅಭಿಮನ್ಯು ವಧೆಯ ಮೂಲಕ ಅಧರ್ಮದ ಯುದ್ಧವನ್ನು ಆರಂಭಿಸಿದ ದ್ರೋಣನ ಗುಟ್ಟನ್ನು ಅವನಿಂದಲೇ ಹೇಳಿಸಿ ದ್ರೋಣನ
ಅವನತಿ ಮಾಡಿಸಿದ. ಅವನ ಕಣ್ಣಿಗೆ ಮಾತ್ರ ಕತ್ತಲೆಯಾಗಿಸಿ ಸೈಂಧವನನ್ನು ಮುಗಿಸಿದ. ಇಟ್ಟ ಗುರಿ ತಪ್ಪಿಸಬೇಡ- ಎಂಬ ಮಾತು, ಕುಂಡಲಾಹರಣ- ಇವುಗಳಿಂದ ಕರ್ಣನು ಸತ್ತ.

ಕರ್ಣನ ನಾಗಾಸದಿಂದ ಅರ್ಜುನನನ್ನು ತಪ್ಪಿಸಿದ. ಮಾಯಾವೀ ಮಾಯಯಾ ವಧ್ಯಃ- ಇದು ಕೃಷ್ಣನೀತಿ. ಮೋಸಗಾರರನ್ನು ಮೋಸದಿಂದಲೇ ಕೊಲ್ಲು. ಬೃಹಸ್ಪತಿ ನೀತಿಗಿಂತ ಇಲ್ಲೆಲ್ಲಾ ಶುಕ್ರನೀತಿಯೇ ಮುಖ್ಯವಾಗುತ್ತದೆ. ಶಸ್ತ್ರ-ಶಾಸ್ತ್ರ ಎರಡನ್ನೂ ರಾಜನೀತಿಯಲ್ಲಿ ಹೇಗೆ ಬಳಸಬೇಕೆಂಬುದನ್ನು ಶ್ರೀಕೃಷ್ಣ ಜಗತ್ತಿಗೆ ಬೋಧಿಸಿದ. ಕಂಸನನ್ನು ಕೊಂದ ಮೇಲೆ ಧೃತರಾಷ್ಟ್ರನಿಗೆ ಒಂದು ಸಂದೇಶವನ್ನು ಅಕ್ರೂರನ ಮುಖೇನ ಕೃಷ್ಣ ಕಳಿಸುತ್ತಾನೆ: ಧರ್ಮದಿಂದ ಆಳಿದರೆ, ಶೀಲದಿಂದ ಪ್ರಜಾರಂಜನೆ ಮಾಡಿದರೆ, ಪಾಂಡುವಿನ ಪುತ್ರರಲ್ಲಿ ಸಮನಾಗಿ ನಡೆದು ಕೊಂಡರೆ ನಿನಗೆ ಇಲ್ಲಿ ಕೀರ್ತಿ ಪರದಲ್ಲಿ ಶ್ರೇಯಸ್ಸು ಉಂಟು. ಇಲ್ಲವಾದರೆ ಎಲ್ಲರೂ ಅಪಹಾಸ್ಯ ಮಾಡುವರು. ಸತ್ತಮೇಲೂ ನರಕಕ್ಕೆ ಹೋಗುವೆ, ಆದ್ದರಿಂದ ಪಾಂಡವರಿಗೆ ದ್ರೋಹ ಮಾಡಬೇಡ. ಕೃಷ್ಣನ ಈ ಮಾತುಗಳು ಸಮಕಾಲೀನ ಜಾಗತಿಕ ರಾಜಕಾರಣದಲ್ಲಿ ನಮ್ಮ ಮತ್ತು ಚೀನಾ, ಪಾಕಿಸ್ತಾನ ದೊಂದಿಗಿನ ಸಂಬಂಧವನ್ನು ಯಾವ ಬಗೆಯಲ್ಲಿ ಇಟ್ಟುಕೊಳ್ಳ ಬೇಕು ಎಂಬುದನ್ನು ನಿರ್ದೇಶಿಸುತ್ತದೆ.
ಪುಣ್ಯ-ಪಾಪ ಅನುಭವಿಸಿದವನೂ ಒಬ್ಬನೆ ಯೇ!

ಅನ್ಯಾಯದಿಂದ ನೀನು ರಾಜ್ಯ ಕೊಡಿಸಿದರೂ ನಿನಗೆ ಅದು ದಕ್ಕದೆ ಬೇರಾರೋ ದಡ್ಡರಿಗೆ ಸೇರೀತು. ಊಟಕ್ಕಿಲ್ಲದೆ ದೊಡ್ಡ ಮೀನು ಸಣ್ಣದನ್ನು ತಿನ್ನುವುದಿಲ್ಲವೆ?- ಹಾಗೆ. ಹೀಗೆ ನಂದಗೋಕುಲದಿಂದ ಮಥುರೆಗೆ, ಅಲ್ಲಿಂದ ಹಸ್ತಿನೆಯವರೆಗಿನ ಶ್ರೀಕೃಷ್ಣನ ಜೀವನದ ಪಥವನ್ನು ಅವಲೋಕಿಸಿದರೆ ವಾಸುದೇವಸ್ಯ ಮಹಾತ್ಮ್ಯಂ ಎಂದು ವ್ಯಾಸರು ಹೇಳಿದ್ದರ ಗಹನತೆ ಅರ್ಥವಾಗುತ್ತದೆ. ಆದರೆ ಪಾಮರರು ಹೇಳಿದಂತೆ ಕೃಷ್ಣ ಜಾರನೂ ಚೋರನೂ ಅಲ್ಲ. ಸಂಸ್ಕಾರಹೀನರ ಅಪಸೊಲ್ಲಿದು. ರಾಜಕಾರಣಕ್ಕೆ ಒಂದು ನಿರ್ದಿಷ್ಟ ಬದ್ಧತೆ ಬೇಕು. ಆ ಬದ್ಧತೆ ಧರ್ಮವಾಗಿ, ರಾಷ್ಟ್ರವಾಸಿಗಳನ್ನು ರಕ್ಷಿಸಿ, ಮಹಿಳೆಯರ ಮಾನ ಕಾಯ್ದು, ವೃದ್ಧರ ಜೀವ, ಗೌರವ ಕಾಪಾಡಿ, ದುಷ್ಟರನ್ನು ದಂಡಿಸಿ ಸಮರ್ಥವಾಗಿ ರಾಷ್ಟ್ರಧಾರಣೆ ಮಾಡಬೇಕು- ಇದು ಕೃಷ್ಣನ ರಾಜಧರ್ಮದ ನಡೆ.

ಯಾವ ದಿಸೆಯಿಂದಲಾದರೂ ಸರಿ ನಾವು ವೈಭೋಗವನ್ನು ಅನುಭವಿಸಬೇಕು ಎಂಬುದು ರಾಜನೀತಿಯೂ ಅಲ್ಲ, ರಾಜಧರ್ಮವು ಅಲ್ಲ. ಇದನ್ನು ಕೃಷ್ಣ
ವಿರೋಽಸಿದ. ದಂಡಿಸಿದ. ಅದಕ್ಕಾಗಿ ಸಂಧಾನದ ಅನಿವಾರ್ಯತೆ ಸೃಷ್ಟಿಸಿದ. ಭಾರತವನ್ನು ಹಾಗೂ ಶ್ರೀ ಕೃಷ್ಣನ ಬದುಕನ್ನು ಅವಲೋಕಿಸಿದಾಗ ಶ್ರೀ ಕೃಷ್ಣನೇ ಜಗತ್ತಿನ ಮೊಟ್ಟಮೊದಲ ಮನೋಶಾಸ್ತ್ರಜ್ಞ ಎಂಬುದು ತಿಳಿಯುತ್ತದೆ. ಅಸಂಖ್ಯ ಗೋಪಿಕೆಯರ ಮನಸನ್ನು ಕದ್ದ ಕೃಷ್ಣ, ದುಷ್ಟರಾಜರುಗಳ ಮನಸನ್ನು ಘಾಸಿಗೊಳಿಸಿದ. ಭೀತಗೊಳಿಸಿದ. ತಲ್ಲಣ ಗೊಳ್ಳುವಂತೆ ಮಾಡಿದ.

ಗೋಪಿಕೆಯರ ಕನಸಿನಲ್ಲಿ ಬಂದ ಕೃಷ್ಣ ಕಂಸನ ನಿದ್ದೆಯಲ್ಲೂ ಅರಮನೆಯಲ್ಲೂ ಎಲ್ಲೆಲ್ಲೂ ಕಾಣಿಸಿಕೊಂಡು ಸಾವನ್ನು ತಾನೇ ಅಹ್ವಾನಿಸಿದಂತೆ ಕಂಡ. ವರ್ತಮಾನದಲ್ಲಿ ಮೋದಿಯ ಭಯ ಭಯೋತ್ಪಾದಕರಿಗೆ ಹೀಗೆ ಆಗಿದೆ. ಪಾಕಿಸ್ತಾನಕ್ಕೂ ಮೋದಿಯೆಂದರೆ ಎಲ್ಲೆಲೂ ಭಯ! ಶತ್ರುವಿನ ಶತ್ರು ಮಿತ್ರನಾಗುವುದು ರಾಜಕಾರಣದ ಒಂದು ತಂತ್ರ. ಚೀನಾ ಮತ್ತು ಪಾಕಿಸ್ತಾನದ ಶತ್ರುಗಳು ಭಾರತಕ್ಕೆ ಮಿತ್ರರಾಷ್ಟ್ರವಾಗುವುದು ಪ್ರಸ್ತುತ ಭಾರತದ ಅಂತಾರಾಷ್ಟ್ರೀಯ
ರಾಜಕಾರಣದ ಅಗತ್ಯತೆಯಾಗಿದೆ. u ಟ್ಠ್ಟoಛಿ ಮೋದಿಯವರ ನಡೆ ಆ ದಿಸೆಯಲ್ಲೇ ಇದೆ. ಆಂತರಿಕವಾದ ಸಂಘರ್ಷಗಳನ್ನು ದಮನಗೊಳಿಸಲು ಈ ಬಗೆಯ
ರಾಜತಂತ್ರಗಳನ್ನು ಅನುಸರಿಸಬೇಕು ಎಂಬುದು ರಾಜನೀತಿಯ ಬೋಧೆಯೇ ಆಗಿದೆ.

ಕರ್ಣಹೃದಯಭೇದನ ಕಪಟನಾಟಕ ಅಲ್ಲವೆಂಬುದು ಈಗಲಾದರೂ ಅರ್ಥವಾಗ ಬೇಕು. ಅಷ್ಟಕ್ಕೂ ತಾನು ಕುಂತಿಯ ಮಗ ಎಂಬುದು ಕರ್ಣನಿಗೆ ಮೊದಲೇ
ಗೊತ್ತಿತ್ತು. ಆದರೆ ಯಾವಾಗ ಎಂಬುದು ಅಸ್ಪಷ್ಟ. ಕೃಷ್ಣನ ಮೇಲಿನ ಆಕ್ಷೇಪ ಕುಮಾರವ್ಯಾಸ ಭಾರತದ್ದು. ಕೇವಲ ನ್ಯಾಯ, ಧರ್ಮ ಹೇಳಿದರೆ ಸಾಲದು, ಅಂಥವರನ್ನು ಬಲಗೊಳಿಸುವ ಕಾರ್ಯವನ್ನು ಕೃಷ್ಣ ಮಾಡಿತೋರಿಸಿದ. ಸಮಯ ಸಂದರ್ಭವನ್ನು ಸಾಧಿಸಿ ರಾಜಕೀಯದ ಪಟ್ಟಗಳನ್ನು ಸಾಧಿಸಬೇಕು. ಶ್ರೀಕೃಷ್ಣ ಜಗತ್ತಿನ ಶ್ರೇಷ್ಠ ರಾಜಕಾರಣಿ, ತತ್ತ್ವಶಾಸ್ತ್ರಸಜ್ಞ, ಮನಃಶಾಸ್ತ್ರಜ್ಞ, ಶಾಂತಿದೂತ, ದೂರದೃಷ್ಟಿಯುಳ್ಳ ಯೋಗೀಶ್ವರ, ಯೋಗೇಶ್ವರನಾಗಿ ಕಾಣುತ್ತಾನೆ.

ಅದಕ್ಕಾಗಿಯೇ ಇಡಿಯ ಮಹಾಭಾರತ ಶ್ರೀಕೃಷ್ಣಯೋಗವಾಗಿ ಕಾಣುತ್ತದೆ. ಅವತಾರವೆಂದರೆ ಇಳಿದು ಬರುವುದು. ಇಳಿದು ಬಂದು ಮೇಲೇರುವುದು. ಇಳಿದು ಭೂಮಿಗೆ ಬರುವುದು; ತನ್ನದಲ್ಲದ ಇಲ್ಲಿನ ಮೊರೆಗೆ ಸ್ಪಂದಿಸುವುದು. ತನ್ನದೆಂಬಂತೆ ಬದುಕಿ, ತನ್ನದಲ್ಲದೆಂಬಂತೆ ನಿರಾಳವಾಗಿರುವುದು. ನಿರಾಳತೆ ಯಲ್ಲೇ
ಮುದವನ್ನು ಈಯುವುದು. ಈ ಮಣ್ಣು ತನ್ನದಲ್ಲವೆಂದೂ, ಅದನ್ನು ಮೀರಿದ ಪ್ರeಯಲ್ಲಿಯೇ ಮಣ್ಣಿನ ಉದ್ಧಾರಕ್ಕಾಗಿ ಶ್ರಮಿಸುವ ಕಾಯಕವನ್ನು ಅವತಾರ ಗಳು ಮಾಡುತ್ತವೆ.

ಮನುಷ್ಯ ವಿಕಾಸದ ಪಥಗಳಲ್ಲಿ ಅವತಾರ ಗಳೇ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಅವತಾರಗಳೆಂದರೆ ಏರುದಾರಿಯ ಕಥನಗಳು. ನಾರಾಯಣ ನೇ ನರನಾಗಿ ಬಂದು ನಾರಾಯಣ ಪದವಿಗೆ ಏರಿದ ಸಾಹಸ ಗಾಥೆಯ ಮಜಲುಗಳು. ಹಾಗೆ ನೋಡಿದರೆ ಮಹಾಭಾರತದ ಕಾಲ ಈಗಿನ ಕಾಲಕ್ಕಿಂತ ಕೆಟ್ಟದ್ದಾಗಿತ್ತು. ಅಂಥ ಸಂದರ್ಭದಲ್ಲಿ ಶ್ರೀಕೃಷ್ಣ ಜನ್ಮವೆತ್ತಿ ಬಂದು, ರಾಜಕಾರಣವಿಲ್ಲದೆ ಯಾವ ದೇಶವೂ ತನ್ನ ನಿಶ್ಚಿತ ಗುರಿಯನ್ನು ತಲುಪುವುದಿಲ್ಲವೆಂದು ತೋರಿಸಿದ. ಗುರಿ ತಲುಪಬೇಕಾದರೆ ಮತ್ತೊಮ್ಮೆ ಶ್ರೀಕೃಷ್ಣ ಅವತಾರವೆತ್ತಬೇಕು. ಗೀತೆಯ ಬೋಧನೆಯಾಗಬೇಕು. ಅಹಂ ಇಲ್ಲದ ರಾಜಕಾರಣ ಈ ದೇಶದಲ್ಲಿ ಬೆಳೆಯಬೇಕು. ದುಷ್ಟ, ಭ್ರಷ್ಟ ರಾಜಕಾರಣಿಗಳ ಸರ್ವನಾಶವಾಗಬೇಕು.

ಈ ದೇಶದ ಮೊದಲ ಪ್ರಧಾನಿ ೩೭೦ನೆಯ ವಿಧಿಯನ್ನು ಜಾರಿಗೊಳಿಸಿದರು. ಅದನ್ನು ಮೋದಿ ಸಾರಥ್ಯದ ಸರ್ಕಾರ ಅತ್ಯಂತ ನಾಜೂಕಾಗಿ, ಅಷ್ಟೇ ಪರಿಣಾಮ ಕಾರಿಯಾಗಿ, ಯಶಸ್ವಿಯಾಗಿ ರದ್ದು ಮಾಡಿತು. ೩೫ಎ ವಿಽಯನ್ನೂ ರದ್ದುಮಾಡಿತು. ಭಾರತದ ಚರಿತ್ರೆಯಲ್ಲಿ ನೆಹರೂ ಸಾಧನೆಯನ್ನು ಮೋದಿ ಮುರಿದರು. ಮೋದಿಯ ಈ ಸಾಧನೆಗೆ ಮೂಲಪ್ರೇರಣೆ ನೆಹರೂವೇ! ಸಾಧನೆಯ ಸಂಪೂರ್ಣ ಕ್ರೆಡಿಟ್ ನೆಹರೂಗೆ ಸಲ್ಲಬೇಕು ಹೊರತು ಮೋದಿಗಲ್ಲ. ಯಾಕೆಂದರೆ ನೆಹರೂ ಇಂಥ ವಿಧಿಯನ್ನು ಜಾರಿಗೊಳಿಸದೇ ಇದ್ದರೆ ಮೋದಿಗೆ ರದ್ದುಮಾಡುವ ಅವಕಾಶವೇ ಸಿಗುತ್ತಿರಲಿಲ್ಲ.

ಕಾರ್ಯಕ್ರಮ ವೊಂದರಲ್ಲಿ ರಜನೀಕಾಂತ್ ಅವರು, ಮೋದಿ ಮತ್ತು ಅಮಿತ್ ಷಾರನ್ನು ರಾಮ-ಕೃಷ್ಣರಿಗೆ ಹೋಲಿಸಿದ್ದರು. ಅವರು ರಾಮ-ಕೃಷ್ಣರಾಗಲು ಸಾಧ್ಯವೇ ಇಲ್ಲವೆಂಬ ಮಾತು ಬೇರೆ. ಆದರೆ ಹೋಲಿಕೆಯು ಮೋದಿ ಮತ್ತು ಷಾರ ರಾಜಕಾರಣದ ಒಟ್ಟೂ ನಡೆಯನ್ನು ಪ್ರತಿಬಿಂಬಿಸುತ್ತದೆ. ರಾಮನಾಗಿಯೂ ರಾಜಕಾರಣದ
ಸರ್ವಶ್ರೇಷ್ಠ ಮೌಲ್ಯವನ್ನು ತೇತ್ರಾಯುಗ ದಲ್ಲೂ, ಕೃಷ್ಣನಾಗಿಯೂ ರಾಜಕಾರಣದ ತಂತ್ರಗಳನ್ನು ಸಮಷ್ಟಿ ನೆಲೆಯಲ್ಲಿ ಹಿತವೂ ಆರೋಗ್ಯಯುತವೂ ಮಾದರಿಯೂ ಆಗುವಂತೆ ದ್ವಾಪರದ ಸಂದರ್ಭದಲ್ಲಿ ಕೃಷ್ಣನೂ ಹೇಗೆ ಅಳವಡಿಸಿದರೋ ಅದನ್ನೇ ಮೋದಿ ಮತ್ತು ಷಾ ಸರಿಹೊತ್ತಿನ ರಾಜಕೀಯದಲ್ಲಿ ಮಾಡಿ ತೋರಿಸಿದರೆಂಬ ಅರ್ಥದಲ್ಲಿ ರಜನೀಕಾಂತರ ಮಾತು ಸ್ಪಷ್ಟ ಮತ್ತು ನೇರ.

ಯುಗವೊಂದು ಪಲ್ಲಟವಾಗುವ ಬಗೆಯಲ್ಲಿ ಮನುಷ್ಯನ ಮನಸು ಮತ್ತು ಬುದ್ಧಿಯೂ ಪಲ್ಲಟವಾಗುವುದು ದ್ವಾಪರದಲ್ಲಿ ಕಾಣುತ್ತದೆ. ತೇತ್ರಾಯುಗದ ರಾಮ ದ್ವಾಪರದಲ್ಲಿ ಕೃಷ್ಣನಾಗಿ ಕಾಣಿಸಿಕೊಳ್ಳು ವಲ್ಲಿಯೂ ಯುಗಾಂತರದ ಪಲ್ಲಟಗಳಿವೆ. ವಿಕಾಸಪಥದ ಹೆಜ್ಜೆಯಿದೆ.

ಕೊನೆಯ ಮಾತು: ಅದೇನೇ ಇರಲಿ, ರಾಮನೂ ಬೇಕು, ಕೃಷ್ಣನೂ ಬೇಕು. ರಾಮ-ಕೃಷ್ಣರು ಎಂದಿಗೂ ಬೇಕೇ ಬೇಕು. ಅವರಿಲ್ಲದೆ ಭಾರತ ಅಪೂರ್ಣ. ನಮ್ಮ ಬದುಕು ಅಪೂರ್ಣ. ಮನುಷ್ಯ ಸಹಜ ದೌರ್ಬಲ್ಯಗಳನ್ನು ಮೀರಿ ಔನ್ನತ್ಯವನ್ನು ಹೇಗೆ ಪಡೆದುಕೊಳ್ಳಲು ಸಾಧ್ಯವಿದೆಯೆಂಬುದನ್ನು ರಾಮ-ಕೃಷ್ಣರ ಬದುಕು ಹೇಳುತ್ತದೆ. ಯಾವ ವ್ಯಕ್ತಿ ಇನ್ನೊಬ್ಬನನ್ನು ಎತ್ತರಕ್ಕೆ ಬೆಳೆಸುತ್ತಾನೋ ಅಂಥವನು ಎತ್ತರದ ಸ್ಥಾನವನ್ನು ಹೊಂದುತ್ತಾನೆ. ಕೃಷ್ಣ ತನ್ನ ಬದುಕಿನಲ್ಲಿ ಕುಚೇಲ, ಕುಬ್ಜೆ, ಪೂತನಿ, ಅಕ್ರೂರ, ರಾಧೆ, ಇಂದುಪ್ರಿಯೆ, ಚಂದಗೋಪ, ವಿದುರರಂಥ ಅನೇಕರನ್ನು ಎತ್ತರಕ್ಕೆ ಬೆಳೆಸಿದ! ಜಗತ್ತೇ ಅಂಥವರನ್ನು ಗುರುತಿಸಿ ಗೌರವಿಸುವಂತೆ ಮಾಡಿದ! ಅಂಥ ಸದ್ಗುಣಗಳು ನಮ್ಮಲ್ಲೂ ಬೆಳೆಯಬೇಕು. ತಾನು ಇಲ್ಲದಾಗಲೂ ತನ್ನವರು ಚೆಂದವಾದ ನಿರ್ಭಯವಾದ ಸುಂದರ ಬದುಕನ್ನು ಕಟ್ಟಿಕೊಳ್ಳಲು
ಸಾಧ್ಯವಾಗುವಂತೆ ಕೃಷ್ಣ ಬದುಕಿ ತೋರಿದ. ಅಂದು ದುಷ್ಟ ರಾಜರಗಳ ಸಂಹಾರ ಮಾಡಿದ ಮೇಲೂ ಇಂದು ಎಷ್ಟೊಂದು ದುಷ್ಟರು ಜಗತ್ತನ್ನು ಆವರಿಸಿದ್ದಾರೆ! ಕೃಷ್ಣ ಆ ದುಷ್ಟರ ವಧೆ ಮಾಡದೇ ಹೋಗಿದ್ದರೆ ಜಗತ್ತನ್ನೆಲ್ಲ ದುಷ್ಟರೇ ವರಿಸಿಕೊಳ್ಳುತ್ತಿದ್ದರು!

ಅಧರ್ಮದ ಸಂಹಾರ ಎಷ್ಟು ಮುಖ್ಯವೋ ಧರ್ಮದ ಉತ್ಥಾನವೂ ರಾಷ್ಟ್ರೋತ್ಕರ್ಷವೂ ಅಷ್ಟೇ ಮುಖ್ಯವೆಂಬುದು ಕೃಷ್ಣನ ಧ್ಯೇಯವಾಗಿತ್ತು. ತಾನೊಂದೇ ಬೆಳೆಯಬೇಕು ಎಂಬುದು ಸರಿಯಲ್ಲ, ತನ್ನ ಅನಂತರದ ಈ ಜಗತ್ತು ರಾಗದ್ವೇಷರಹಿತವಾಗಿ ಬದುಕಬೇಕು ಎಂಬುದು ಕೃಷ್ಣನ ಜೀವನ ನೀತಿಯೂ,ರಾಜನೀತಿಯೂ ಆಗಿತ್ತು. ದುಷ್ಟ ರಾಜರುಗಳನ್ನು ವಧೆಮಾಡಿ, ಭ್ರಷ್ಟ ರಾಜಕೀಯವನ್ನು ಅಂತ್ಯಗೊಳಿಸುವುದಷ್ಟೆ ಕೃಷ್ಣನ ರಾಜನೀತಿಯಲ್ಲ, ಮೌಲ್ಯಾಧಾರಿತ ರಾಜಕಾರಣವನ್ನು ಸ್ಥಾಪಿಸುವುದು ಶ್ರೀ ಕೃಷ್ಣನ ರಾಜನೀತಿ ಮತ್ತು ರಾಜಧರ್ಮವಾಗಿತ್ತು.