Sunday, 8th September 2024

ಗುಣಗಳ ಆಕರ ಶ್ರೀರಾಮ

ತನ್ನಿಮಿತ್ತ

ಗ.ನಾ.ಭಟ್ಟ

ಕಲ್ಯಾಣಾನಾಂ ನಿಧಾನಂ ಕಲಿಮಲಮಥನಂ ಪಾವನಂ ಪಾವನಾನಾಮ್ |
ಪಾಥೇಯಂ ಯನ್ಮುಮುಕ್ಷೋಃ ಸಪದಿ ಪರಪದಪ್ರಾಪ್ತಯೇ ಪ್ರಸ್ಥಿತಸ್ಯ ||
ವಿಶ್ರಾಮಸ್ಥಾನಮೇಕಂ ಕವಿವರವಚಸಾಂ ಜೀವನಂ ಸಜ್ಜನಾನಾಮ್ |
ಬೀಜಂ ಧರ್ಮದ್ರುಮಸ್ಯ ಪ್ರಭವತು ಭವತಾಂ ಭೂತಯೇ ರಾಮನಾಮ ||

‘ಸಮಸ್ತ ಮಂಗಳಗಳ ನೆಲೆವೀಡಾದ, ಕಲಿಯ ಕೊಳೆಯನ್ನು ತೊಳೆಯಬಲ್ಲ, ಲೋಕವನ್ನೆಲ್ಲಾ ಪಾವನಗೊಳಿಸಬಲ್ಲ, ಪರಮ
ಪದಕ್ಕೇರಲು ಹೊರಟವನಿಗೆ ದಾರಿಯಲ್ಲಿ ಬುತ್ತಿಯಂತಿರುವ, ಕವಿವರರು ಶ್ಲೋಕಾದಿಗಳನ್ನು ರಚಿಸುತ್ತಾ ಆಯಾಸಗೊಂಡಾಗ ವಿಶ್ರಾಂತಿ ಪಡೆಯಲು ಯೋಗ್ಯಸ್ಥಾನವೆನಿಸಿರುವ, ಸಜ್ಜನರಿಗೆ ಜೀವನವೇ ಆಗಿರುವ, ಧರ್ಮವೆಂಬ ವೃಕ್ಷಕ್ಕೆ ಬೀಜದಂತಿರುವ ಶ್ರೀರಾಮ ನಮ್ಮ ನಿಮ್ಮೆಲ್ಲರ ಶ್ರೇಯಸ್ಸಿಗೆ, ಸಂಪತ್ತಿಗೆ ಕಾರಣವಾಗಲಿ’ ಎನ್ನುವ ಈ ಶ್ಲೋಕ ಶ್ರೀರಾಮನ ನಾಮವು ಎಷ್ಟು ವಿಧದಲ್ಲಿ ಭಕ್ತರಿಗೆ ಸಹಾಯವೆಸಗುತ್ತದೆ ಅನ್ನುವುದನ್ನು ಬಹು ಸೊಗಸಾಗಿ ನಿರೂಪಿಸುತ್ತದೆ.

ಶ್ರೀರಾಮನ ಹೆಸರೇ ಅಂಥಾದ್ದು. ಅದು ವಿಷ್ಣುವಿನ ಸಾವಿರ ನಾಮಗಳಿಗೆ ಸಮಾನ ಎಂದು ಹೇಳುತ್ತಾರೆ. ‘ಸಹಸ್ರನಾಮತಸ್ತುಲ್ಯಂ ರಾಮನಾಮ ವರಾನನೇ’ ಅದು ತಾರಕವೂ ಹೌದು. ಕಾಶಿಯಲ್ಲಿ ದೇಹತ್ಯಾಗ ಮಾಡುವವರಿಗೆ ಸ್ವತಃಶಿವನೇ ಕಿವಿಯಲ್ಲಿ ರಾಮನಾಮವನ್ನು ಉಪದೇಶ ಮಾಡುತ್ತಾನೆ ಎಂಬ ಪ್ರತೀತಿ ಇದೆ.

ರಮಂತೇ ಯೋಗಿನೋನಂತೇ ನಿತ್ಯಾನಂದೇ ಚಿದಾತ್ಮನಿ |
ಇತಿ ರಾಮಪದೇನಾಸೌ ಪರಂ ಬ್ರಹ್ಮಾಭಿಧೀಯತೇ ||

ಅನ್ನುವಂತೆ ಇನ್ನೊಂದೆಡೆ ಅದು ‘ಪರಬ್ರಹ್ಮ’ ವಾಚಕವಾಗಿ ಅಪರಿಮಿತ ಆನಂದವನ್ನು ನೀಡುತ್ತದೆ. ಒಟ್ಟಿನಲ್ಲಿ ಶ್ರೀರಾಮನಾಮ
ಬಹು ಮುದ್ದಾದು, ಸುಂದರವಾದುದು, ಮನೋಜ್ಞವಾದುದು, ಹೃದ್ಯವಾದುದು. ಇಂಥ ರಾಮನನ್ನು ಕುರಿತು ಒಂದು ಕಾವ್ಯವೇ
ಉದಯಿಸಿತು. ಅದು ರಾಮಾಯಣವೆಂದು ಖ್ಯಾತಿಯನ್ನು ಪಡೆಯಿತು. ಈ ರಾಮಾಯಣದ ಉಗಮಕ್ಕೆ ಮೊದಲು ವಾಲ್ಮೀಕಿ
ಮಹರ್ಷಿ ವಾಗ್ವಿಶಾರದ ನಾರದರ ಬಳಿ ಕೇಳಿದ ಪ್ರಶ್ನೆಯೇ ರಾಮಯಾಣದ ಹುಟ್ಟಿಗೆ ತಳಹದಿಯಾಯಿತು. ಮಾತ್ರವಲ್ಲ ಶ್ರೀರಾಮನ ರೋಚಕ, ಹೃದಯಂಗಮ ವ್ಯಕ್ತಿತ್ವ ಪರಿಚಯಕ್ಕೂ ನಾಂದಿಯನ್ನು ಹಾಡಿತು.

ವಾಲ್ಮೀಕಿ ಕೇಳಿದ್ದು ಇಷ್ಟೆ!
ಕೋನ್ವಸ್ಮಿನ್ ಸಾಂಪ್ರತಂ ಲೋಕೇ ಗುಣವಾನ್ ಕಶ್ಚ ವೀರ್ಯವಾನ್ |
ಧರ್ಮಜ್ಞಶ್ಚ ಕೃತಜ್ಞಶ್ಚ ಸತ್ಯವಾಕ್ಯೋ ದೃಢವ್ರತಃ ||
ಚಾರತ್ರೇಣ ಚ ಕೋ ಯುಕ್ತಃ ಸರ್ವಭೂತೇಷು ಕೋ ಹಿತಃ |
ವಿದ್ವಾನ್ ಕಃ ಕಃ ಸಮರ್ಥಶ್ಚ ಕಶ್ಚೆ ಕಪ್ರಿಯದರ್ಶನಃ ||
ಆತ್ಮವಾನ್ ಕೋ ಜಿತಕ್ರೋಧೋ ದ್ಯುತಿಮಾನ್ ಕೋನಸೂಯಕಃ
ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಷಸ್ಯ ಸಂಯುಗೇ ||
ಏತದಿಚ್ಛಾಮ್ಯಹಂ ಶ್ರೋತುಂ ಪರಂ ಕೌತೂಹಲಂ ಹಿ ಮೇ |
ಮಹರ್ಷೇ ತ್ವಂ ಸಮರ್ಥೋಸಿ ಜ್ಞಾತುಂ ಏವಂವಿಧಂ ನರಮ್ ||

‘ಈ ಲೋಕದಲ್ಲಿ ಗುಣವಂತ, ವೀರ್ಯವಂತ, ಧರ್ಮಜ್ಞ, ಕೃತಜ್ಞ, ಸತ್ಯವಾದಿ, ದೃಢವ್ರತ, ಚಾರಿತ್ರ್ಯವಂತ, ಸಕಲಪ್ರಾಣಿ ಗಳಿಗಳಿಗೂ ಹಿತವನ್ನು ಬಯಸುವವ, ವಿದ್ವಾಂಸ, ಸಮರ್ಥ, ಸುಂದರ, ಆತ್ಮವಂತ, ಕ್ರೋಧವನ್ನು ಗೆದ್ದವ, ವರ್ಚಸ್ವಿ, ಅಸೂಯೆ ಇಲ್ಲದವ – ಯುದ್ಧದಲ್ಲಿ ಮುನಿದುನಿಂತರೆ ಯಾರಿಗೆ ದೇವತೆಗಳೂ ಹೆದರುತ್ತಾರೋ ಅಂತಹ ನರಶ್ರೇಷ್ಠನನ್ನು ಕುರಿತು ತಿಳಿಯುವ ಕುತೂಹಲವುಂಟಾಗಿದೆ.

ಅಂಥವನನ್ನು ತಿಳಿಸಿಕೊಡುವುದಕ್ಕೆ ತಾವು ಸಮರ್ಥರಿದ್ದೀರಿ. ದಯಮಾಡಿ ತಿಳಿಸಿ’ ಎಂದು ವಾಲ್ಮೀಕಿಗಳು ನಾರದರಲ್ಲಿ ಕೇಳಿ ಕೊಂಡರು. ಇಲ್ಲಿಯೇ ಕೌತುಕವಿರುವುದು. ಶ್ರೀರಾಮನ ಸಮಕಾಲೀನರಾದ ವಾಲ್ಮೀಕಿ ಮಹರ್ಷಿಗಳಿಗೆ ಅಂತಹ ವ್ಯಕ್ತಿ ಶ್ರೀರಾಮ ನಲ್ಲದೆ ಬೇರಾರು ಇರಲು ಸಾಧ್ಯ ಎಂದು ಗೊತ್ತಿರಲಿಲ್ಲವೆ? ಗೊತ್ತಿತ್ತು. ಆದರೂ ಅದನ್ನು ಗುರು ಮುಖೇನ  ತಿಳಿಯಬೇಕೆಂಬ ಶಿಷ್ಯಭಾವ ಅವರಲ್ಲಿ ತಲೆದೋರಿತ್ತು. ಆ ಗುರು ಅವರಿಗೆ ನಾರದರೇ ಆಗಿದ್ದರು.

ತನ್ನ ವ್ಯಾಧವೃತ್ತಿಯಿಂದ ತನ್ನನ್ನು ಬಿಡುಗಡೆಗೊಳಿಸಿ ತಾನು ಮಹರ್ಷಿಯಾಗುವುದಕ್ಕೆ ಅವರೇ ಕಾರಣರಾಗಿದ್ದರು ಅನ್ನುವುದು ಅವರಿಗೆ ಸದಾ ನೆನಪಿನ ಬುತ್ತಿಯಾಗಿತ್ತು. ನಾರದರನ್ನು ಪುನಃ ಕಂಡಕೂಡಲೆ ತಮ್ಮ ಮನೋರಥವನ್ನು ಈಡೇರಿಸಿಕೊಳ್ಳುವುದಕ್ಕೆ ಅವರು ಕೂಡಲೆ ಮುಂದಾಗಿಬಿಟ್ಟರು. ಜತೆಗೆ ಅವರ ಮನಸ್ಸಿನಲ್ಲಿ ಇನ್ನೂ ಒಂದು ಬಯಕೆಯಿತ್ತು.

ತಾನು ತಿಳಿದಿದ್ದು ಸತ್ಯವೋ ಅಲ್ಲವೋ ಅನ್ನುವುದನ್ನು ಖಚಿತಪಡಿಸಿಕೊಳ್ಳಬೇಕಿತ್ತು; ದೃಢವಾಗಿಸಿಕೊಳ್ಳಬೇಕಿತ್ತು. ತನ್ನ ಪ್ರಶ್ನೆ ಗಳಿಗೆ ಶ್ರೀರಾಮನೇ ಉತ್ತರ ಅನ್ನುವುದೂ ಅವರಿಗೆ ಗೊತ್ತಿತ್ತು. ಅದು ಗುರುಮುಖದಿಂದಲೇ ಬಂದುಬಿಡಲಿ ಎಂದು ಅವರು ಬಯಸಿದ್ದರು. ಅವರೆಣಿಕೆಯಂತೆಯೇ ಆಯಿತು. ನಾರದರು ಉತ್ತರಿಸಿದರು. ನೀ ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ಒಬ್ಬ ಇದ್ದಾನೆ.
ಅದೂ ಈ ಸಾಂಪ್ರತಲೋಕದಲ್ಲಿ. ಅವನೇ ದಾಶರಥೀ ಶ್ರೀರಾಮಚಂದ್ರ. ನೀ ಕೇಳಿದ ಎಲ್ಲಾ ಗುಣಗಳೂ ಅವನಲ್ಲಿ ಇವೆ ಎಂದು ನಾರದರು ಉತ್ತರಿಸಿದರು.

ಗುಣವಂತ: ಶ್ರೀರಾಮನಲ್ಲಿ ಧೈರ್ಯ, ಸ್ಥೆ ರ್ಯ, ಶೌರ್ಯ, ದಯೆ, ವಾತ್ಸಲ್ಯ, ಮೊದಲಾದ ಆತ್ಮಧರ್ಮಗುಣಗಳಿವೆ. ಇವಲ್ಲದೆ
ಒಂದು ರಾಜ್ಯದ ದೊರೆಯಾಗುವವನಿಗೆ ಬೇಕಾಗುವ ರಾಜಸಂಬಂಧ ವಾದ ಸಂಧಿ, ವಿಗ್ರಹ, ಯಾನ, ಆಸನ, ದ್ವೆ ಧಿಭಾವ, ಆಶ್ರಯ
ಮುಂತಾದ ಗುಣಗಳು ಅವನಲ್ಲಿ ಮನೆಮಾಡಿಕೊಂಡಿವೆ. ಆತ “ಸ್ಮಿತಪೂ ರ್ವಭಾಷೀ”-ಪ್ರಜೆಗಳೊಡನೆ ನಗುನಗುತ್ತಾ ಮಾತನಾಡುತ್ತಾನೆ.

ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾನೆ; ಮರುಕಪಡುತ್ತಾನೆ. ಆತ ಅಪ್ರತಿಮ ಧನುರ್ಧಾರಿ. ಇಂದ್ರಿಯಗಳ ಮೇಲೆ ಅಪಾರ ಹಿಡಿತವುಳ್ಳ ವನು ಆಶ್ರಿತರಿಗೆ ಸದಾ ರಕ್ಷಕನಾಗಿದ್ದಾನೆ. ಆತ ವಾಗ್ವಿಶಾರದ. ಬೃಹಸ್ಪತಿಯಂತೆ ವಾಗ್ವೆ ಖರಿಯನ್ನು ಮೆರೆಸಬಲ್ಲ. ಗುರುಹಿರಿಯರಲ್ಲಿ ಎಣೆಯಿಲ್ಲದ ಗೌರವ ಅವನಿಗೆ. ಆತ ಉತ್ತಮ ಪುತ್ರನಾಗಿ, ಆದರ್ಶ ಪತಿಯಾಗಿ, ನೆಚ್ಚಿನ ಸ್ನೇಹಿತನಾಗಿ, ಪ್ರೀತಿಯ ಪ್ರಭುವಾಗಿ ಧರ್ಮದ ಆರಾಧಕನಾಗಿ, ಹೊಣೆಗಾರಿಕೆಯುಳ್ಳ ಚಕ್ರವರ್ತಿಯಾಗಿ, ಋಷಿಮುನಿಗಳ ಕಟ್ಟಾಕಿಂಕರನಾಗಿ ನಿಃಸ್ವಾರ್ಥ ಪ್ರಜಾಸೇವಕನಾಗಿ, ದೀನದಲಿತರ ಆಪದ್ಬಂಧುವಾಗಿ ಅವನು ನಡೆದುಕೊಂಡ ರೀತಿ ಅಸದೃಶವಾದುದು.

ಅವನ ಚರಿತ್ರೆಯೇ ಒಂದು ಸಾಗರವಾಗಿ ಹರಿದಿದೆ. ಇಂತಹ ಗುಣವಂತ ಈ ಭೂಲೋಕದಲ್ಲಿ ಬಹು ಅಪರೂಪ ಎಂದು ನಾರದರು ಬಣ್ಣಿಸಿದರು. ನಾರದರು ಕೇಳಿದ ಪ್ರಶ್ನೆಗಳಲ್ಲಿ ‘ವೀರ್ಯವಂತ’ ಅನ್ನವುದು ಇನ್ನೊಂದು.

ವೀರ್ಯವಂತ: ಯಾವುದೇ ಒಂದು ಕೆಲಸವನ್ನು ಮಾಡುವಾಗ ಮೊದಲಾಗಲಿ, ಆಮೇಲಾಗಲಿ, ತತ್ಕಾಲದಲ್ಲಾಗಲಿ ಆಯಾಸ ವಿಲ್ಲದೆ, ವಿಕಾರವಿಲ್ಲದೆ, ಏನೂ ನಡೆದೇ ಇಲ್ಲವೆಂಬಂತೆ ಲೀಲಾಜಾಲವಾಗಿ ಮಾಡಿತೋರಿಸುವ ಸಾಮರ್ಥ್ಯ, ಯೋಗ್ಯತೆ, ಸತ್ವಶಾಲಿತ್ವವನ್ನು ‘ವೀರ್ಯ’ವೆಂದು ಕರೆಯುತ್ತಾರೆ. ಅದನ್ನು ತಿಳಿಬೇಕಿದ್ದರೆ ನಾವು ಅವನ ವೀರ್ಯ, ಶೌರ್ಯ, ಪರಾಕ್ರಮ ಗಳನ್ನು ಅವನ ಧನುರ್ಧಾರಿತ್ವಕ್ಕಷ್ಟೇ ಸೀಮಿತಗೊಳಿಸಿ ನೋಡಬಾರದು.

ವಿಶಾಲ ಅರ್ಥದಲ್ಲಿ ಗ್ರಹಿಸಬೇಕು. ಅಂದು ಕೈಕಾದೇವಿ ರಾಮನನ್ನು ಕಾಡಿಗೆ ಹೋಗು ಎಂದು ನಿರ್ಬಂಧಿಸಿದ್ದಳು. ಅದು ರಾಮನ ಪಾಲಿಗೆ ಮರಣೋಪಮ ಮಾತಾಗಿತ್ತು. ಆದರೂ ಶ್ರೀರಾಮಚಂದ್ರ ವ್ಯಥೆಪಡಲಿಲ್ಲ. ಮಹರ್ಷಿ ಅದನ್ನು ‘ನ ವಿವ್ಯಥೇ’ ಎಂದು ಹೇಳಿದ್ದಾನೆ. ಅದು ಅವನ ಸತ್ವ, ವೀರ್ಯಸಂಪನ್ನತೆ. ಜನಸ್ಥಾನದಲ್ಲಿ ಆತ ಹದಿನಾಲ್ಕು ಸಾವಿರ ರಕ್ಕಸರನ್ನು ಅರ್ಧಮುಹೂರ್ತದಲ್ಲಿ ಸಂಹರಿಸಿದ್ದು, ಅದುವರೆಗೆ ಯಾವ ಯುದ್ಧಶಿಕ್ಷಣವೂ ಇಲ್ಲದ ಬಾಲಕ ಶ್ರೀರಾಮ ತಾಟಕೆಯನ್ನು
ಸಂಹರಿಸಿದ್ದು, ಮುಂದೆ ದುಷ್ಟ ವಾಲಿಯನ್ನು ಒಂದೇ ಬಾಣದಲ್ಲಿ ನಿಗ್ರಹಿಸಿದ್ದು ಅವನ ‘ವೀರ್ಯವಂತ’ ಅನ್ನುವುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತದೆ. ಅವನು ವೀರ್ಯವಂತ, ಮಹಾಸಮರ್ಥ ಅನ್ನುವುದಕ್ಕೆ ಮತ್ತೊಂದು

ಸೊಗಸಾದ ಉದಾಹರಣೆ – ರಾವಣ ರಾಮನೊಡನೆ ಯುದ್ಧಕ್ಕೆ ತೊಡಗಿ ಸೋತು ನಿರ್ವಿಣ್ಣನಾದಾಗಲೂ ಅವನನ್ನು ಕೊಲ್ಲದೆ ಜೀವಸಹಿತ ಬಿಟ್ಟದ್ದು. ರಾವಣನ ಕಡೆಯ ಪ್ರಹಸ್ತ, ಅಕಂಪನ, ಧೂಮ್ರಾಕ್ಷ  ವಜ್ರದಂಷ್ಟ್ರ  ಮೊದಲಾದ ಮಹಾವೀರರು ರಣರಂಗದಲ್ಲಿ ಸಂಹೃತರಾಗುತ್ತಾರೆ.

ಅದರಿಂದ ಕಂಗೆಟ್ಟ ರಾವಣ ಸ್ವತಃ ತಾನೇ ಯುದ್ಧಕ್ಕೆ ಬರುತ್ತಾನೆ. ರಾಮನೊಡನೆ ಹೋರಾಡಿ ಸೋತು ಬಸವಳಿದ ರಾವಣ
ಹಲ್ಲು ಕಿತ್ತ ಹಾವಿನಂತಾಗುತ್ತಾನೆ. ತೇಜೋಹೀನನಾಗಿದ್ದ, ನಿಶಸನಾಗಿದ್ದ ರಾವಣನನ್ನು ಶ್ರೀರಾಮ ಆಗಲೇ ಮುಗಿಸಬಹುದಿತ್ತು. ಶತ್ರುವನ್ನು ಕೊಲ್ಲಲು ಅದೇ ಸುಸಮಯವಾಗಿತ್ತು. ಮತ್ತೆ ಯಾರಾದರೂ ಆಗಿದ್ದರೆ ಅಂತಹ ಶತ್ರುವನ್ನು ಜೀವಸಹಿತ ಬಿಡುತ್ತಿರ ಲಿಲ್ಲವಾಗಿತ್ತು. ಆದರೆ ಶ್ರೀರಾಮ ಅವನನ್ನು ಬಿಟ್ಟ. ಮಾತ್ರವಲ್ಲ.

‘ಅಯ್ಯಾ ರಾಕ್ಷಸೇಶ್ವರ, ನೀನಿಂದು ಭೀಕರವಾದ ಕಾರ್ಯವನ್ನೆಸಗಿ ನನ್ನ ಪಕ್ಷದಲ್ಲಿರುವ ಅನೇಕ ವೀರರನ್ನು ಸಂಹರಿಸಿದ್ದೀಯೆ. ಇಂದು ನೀನು ಬಹಳ ದಣಿದಿದ್ದೀಯೆ. ನಿನ್ನನ್ನು ಕೊಲ್ಲದೆ ಉಳಿಸುವೆ. ‘ಮೃತ್ಯುವಶಂ ನ ನಯಾಮಿ’. ನಿನಗೆ ಅನುಮತಿ ನೀಡಿದ್ದೇನೆ. ಲಂಕೆಗೆ ಹೋಗಿ, ವಿಶ್ರಮಿಸಿಕೊಂಡು ಬಾ. ಹೊಸ ರಥವನ್ನೇರಿ, ಹೊಸ ಧನುಸ್ಸನ್ನು ಹಿಡಿದು ಬಾ. ಆಗ ನೋಡುವಿ ಯಂತೆ ನನ್ನ ಪರಾಕ್ರಮವನ್ನು.’ ಹೀಗೆ ರಾವಣನಿಗೆ ಜೀವಭಿಕ್ಷೆ ಇತ್ತು ಕಳುಹಿಸಿದವನ ಆತ್ಮವಿಶ್ವಾಸ, ಸತ್ವಶಾಲಿತ್ವ ಎಂಥಾದ್ದಿರ ಬೇಕು! ಇದು ನಿಜಕ್ಕೂ ವೀರ್ಯವಂತನ ಲಕ್ಷಣ. ಅದನ್ನೇ ವಾಲ್ಮೀಕಿ ಕೇಳಿದ್ದು.

ಧರ್ಮಜ್ಞ: ಶ್ರೀರಾಮ ಧರ್ಮಜ್ಞನಾಗಿ ನಡೆದುಕೊಂಡಿ ದ್ದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ತಾಟಕಾ ವಧೆ, ವಾಲಿ ವಧೆ,
ಖರದೂಷಣಾದಿಗಳ ಸಂಹಾರ, ರಾವಣ ವಧೆ, ವನವಾಸ ನಿಶ್ಚಯ, ಪಿತೃವಾಕ್ಯ ಪರಿಪಾಲನೆ, ವೈರಿಪಕ್ಷದವನಾದ ವಿಭೀಷಣನನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರ ಹೀಗೆ ಅನೇಕ ಸಂದರ್ಭದಲ್ಲಿ ಆತ ಧರ್ಮವಂತನಾಗಿ ನಡೆದುಕೊಂಡಿದ್ದು ಕಂಡು ಬರುತ್ತದೆ.

‘ಧರ್ಮ’ ವೆಂದರೆ ಒಳ್ಳೆಯ ನಡವಳಿಕೆ. ಆತ್ಮದ ಮೊಗ್ಗಿನ ಅರಳಿಕೆ. ನಾವು ಹೇಗೆ ನಡೆದುಕೊಂಡರೆ ನಮ್ಮ ಸುತ್ತಮುತ್ತಲಿನ ಯಾರ ಬಾಳಿಗೂ ಕೇಡಾಗದೆ, ಎಲ್ಲರ ಬಾಳೂ ಸೊಗಸುಗೊಳ್ಳುತ್ತದೆಯೋ ಅಂಥ ನಡವಳಿಕೆ ಧರ್ಮವೆನಿಸಿಕೊಳ್ಳುತ್ತದೆ. ಅದು ಒಬ್ಬನ ಜೀವನವನ್ನು ಮಾತ್ರ ಅಲ್ಲ. ಎಲ್ಲರ ಜೀವನವನ್ನು ಧರಿಸಿ, ಪೋಷಿಸುವಂಥಾದ್ದು. ಅದನ್ನೇ ನಮ್ಮ ಹಿರಿಯರು ‘ಧಾರಣಾತ್ ಧರ್ಮಮ್ ಇತ್ಯಾಹುಃ’ ಅಂತ ಕರೆದರು.

ಅದು ಶ್ರೀರಾಮನಲ್ಲಿ ಧಾರಾಳವಾಗಿದ್ದವು. ಧರ್ಮವನ್ನು ಶಾಸರೀತಿಯಿಂದ ವ್ಯಾಖ್ಯಾನಿಸುವುದು ಅಷ್ಟು ಸುಲಭವಲ್ಲ. ಆದರೂ
ಸಾಮಾನ್ಯರೀತಿಯಲ್ಲಿ ಹೇಳುವುದಾದರೆ ಧರ್ಮದಲ್ಲಿ ಸತ್ಯ, ಶುಚಿ, ಗುಣ – ಶಕ್ತಿಗಳ ಪ್ರಕಾಶ, ಜನದಲ್ಲಿ ಪರಸ್ಪರ ನ್ಯಾಯ, ಸಹಾನು ಭೂತಿ, ಭೂತದಯೆ, ವಿಶ್ವಜೀವ ಗೌರವ ಇವೆಲ್ಲ ಸೇರಿರುತ್ತವೆ. ಈ ಎಲ್ಲಾ ಗುಣಗಳೂ ಶ್ರೀರಾಮನಲ್ಲಿ ಸಮೃದ್ಧವಾಗಿದ್ದವು. ಈ ಒಂದೊಂದು ಗುಣಕ್ಕೂ ಒಂದೊಂದು ಉದಾಹರಣೆ ಕೊಟ್ಟು ವಿವರಿಸುವುದಾದರೆ ಅದೇ ಒಂದು ಪುಸ್ತಕವಾದೀತು!

ರಾಮನ ಧರ್ಮಜ್ಞತೆಗೆ ಒಂದೆರಡು ಉದಾಹರಣೆಗಳನ್ನು ನೀಡುವುದಾದರೆ – ಅವನು ವನವಾಸಕ್ಕೆ ಹೊರಟಾಗ ಅವನ ತಾಯಿ ಕೌಸಲ್ಯೆ, ಗುರು ವಸಿಷ್ಠರು, ಪ್ರಜೆಗಳು, ವೈದಿಕರು ಹೀಗೆ ಎಲ್ಲರೂ ಅವನನ್ನು ತಡೆದು ವನವಾಸಕ್ಕೆ ಹೋಗುವುದು ಅಧರ್ಮವೆಂದು ಹೇಳುತ್ತಾರೆ. ನಾನಾ ರೀತಿಯ ಧರ್ಮಪಾಶಗಳನ್ನು ಬೀಸುತ್ತಾರೆ. ಆಗ ಶ್ರೀರಾಮನು ಅವರೆಲ್ಲರಿಗೂ ಧರ್ಮಸಮ್ಮತವಾದ
ಉತ್ತರಗಳನ್ನೇ ನೀಡಿ ವನಕ್ಕೆ ತೆರಳುತ್ತಾನೆ.

ಭರತ ರಾಮನನ್ನು ಪುನಃ ಅಯೋಧ್ಯೆಗೆ ಕರೆತರಬೇಕೆಂದು ರಾಮನನ್ನು ಹುಡುಕಿಕೊಂಡು ಅರಣ್ಯಕ್ಕೆ ಹೋಗುತ್ತಾನೆ. ಭರತನನ್ನು
ದೂರದಿಂದಲೇ ಕಂಡ ಲಕ್ಷ್ಮಣ ಅವನನ್ನು ತಪ್ಪಾಗಿ ಭಾವಿಸಿ, ಕೋಪೋದ್ರಿಕ್ತನಾಗಿ ಅವನನ್ನು ಕೊಂದು ಮುಗಿಸುವುದಾಗಿ ಹೇಳುತ್ತಾನೆ. ಆಗ ಶ್ರೀರಾಮ ಅವನ ಕೋಪವನ್ನು ತಣ್ಣಗಾಗಿಸಿ ಧರ್ಮದ ಬಗ್ಗೆ ಒಂದು ಅಪೂರ್ವ ವ್ಯಾಖ್ಯಾನವನ್ನೇ ನೀಡುತ್ತಾನೆ. ‘ಕೋಪಕ್ಕೆ ಮೂಲ ಪ್ರಕೃತಿ; ಧರ್ಮಕ್ಕೆ ಮೂಲ ತತ್ತ್ವವಿಮರ್ಶೆ; ಕೋಪ ಸ್ವಭಾವಸಿದ್ಧವಾದುದು; ಧರ್ಮ ವಿವೇಕಸಿದ್ಧವಾದುದು’ ಮುಂತಾಗಿ ವಿವರಿಸಿ ಕೋಪದ ಯುಕ್ತಾಯುಕ್ತತೆಯನ್ನು ಧರ್ಮದ ದೃಷ್ಟಿಯಿಂದ ವಿವೇಚಿಸಬೇಕು ಎಂದು ಧರ್ಮಸೂಕ್ಷ್ಮವನ್ನು ವಿವರಿಸುತ್ತಾನೆ.

ಇಂಥಾದ್ದು ಎಷ್ಟೊ! ವಾಲ್ಮೀಕಿ ಕೇಳಿದ ಪ್ರಶ್ನೆಗಳಲ್ಲಿ ಇನ್ನೊಂದು ಮಹತ್ತರವಾದುದು ಕೃತಜ್ಞ ಅನ್ನುವುದು. ಕೃತಜ್ಞ; ‘ಕೃತಂ ಜಾನಾತಿ ಇತಿ ಕೃತಜ್ಞಃ’ ಮಾಡಿದ ಉಪಕಾರವನ್ನು ಸ್ಮರಿಸಿಕೊಳ್ಳುವುದಕ್ಕೆ ಕೃತಜ್ಞತೆ ಎಂದು ಕರೆಯುತ್ತಾರೆ. ಅದಕ್ಕೊಂದು
ಸುಂದರ ಉದಾಹರಣೆ ಅರಣ್ಯಕಾಂಡದಲ್ಲಿ ಸಿಗುತ್ತದೆ. ಶ್ರೀರಾಮ ಸೀತಾಲಕ್ಷ್ಮಣ ಸಹಿತ ಪಂಚವಟಿಯನ್ನು ತಲುಪಿದ್ದಾನೆ. ಆಗ ಶ್ರೀರಾಮ ಲಕ್ಷ್ಮಣನಿಗೆ ಪರ್ಣಕುಟಿಯೊಂದನ್ನು ರಚಿಸಿಕೊಡು ಎಂದು ಹೇಳಿ ಒಂದು ಸ್ಥಳವನ್ನು ನಿರ್ದೇಶನ ಮಾಡುತ್ತಾನೆ.

ಇಂಗಿಜ್ಞನಾದ ಲಕ್ಷ್ಮಣ ಒಂದು ಅದ್ಭುತವಾದ, ರಮ್ಯವಾದ ಪರ್ಣಕುಟಿಯೊಂದನ್ನು ನಿರ್ಮಿಸಿಕೊಡುತ್ತಾನೆ. ಅದೆಷ್ಟು ಅನುಕೂಲಕರವಾಗಿತ್ತು, ಸರ್ವರ್ತು ಯೋಗ್ಯವಾಗಿತ್ತು, ಎಷ್ಟು ಗಟ್ಟಿಮುಟ್ಟಾಗಿತ್ತು ಎಂದರೆ ಅದು ಶ್ರೀರಾಮನ ಹೃದಯವನ್ನೇ ಸೂರೆಗೊಳ್ಳುತ್ತದೆ. ಶ್ರೀರಾಮ ಮತ್ತು ಸೀತೆಗೇ ಎಂದು, ಅವರ ಏಕಾಂತಕ್ಕೇ ಎಂದು ಪ್ರತ್ಯೇಕ ಕೊಠಡಿಯನ್ನು ನಿರ್ಮಿಸಿದ್ದ
ಲಕ್ಷ್ಮಣ. ಅಗ್ನಿ ಉಪಾಸನೆಗೆ, ಮಹರ್ಷಿಗಳ ಸ್ವಾಗತಕ್ಕೆ, ಅತಿಥಿ ಸತ್ಕಾರಕ್ಕೆ ಎಂದೇ ಪ್ರತ್ಯೇಕ ಕೊಠಡಿಗಳನ್ನು ಮಾಡಿದ್ದ. ರಾಮ ಹೀಗೆ ಹೀಗೆಯೇ ಮಾಡು ಎಂದು ಹೇಳಿರಲಿಲ್ಲವಾಗಿತ್ತು.

ಆ ಪರ್ಣಕುಟೀರ ತಂದೆಯೊಬ್ಬ ತನ್ನ ಮಗನಿಗೆ ಪ್ರೀತಿಯಿಂದ, ಅಕ್ಕರೆಯಿಂದ ನಿರ್ಮಿಸಿಕೊಟ್ಟ ಸುಸಜ್ಜಿತ ಮನೆಯಂತಿತ್ತು. ಆಗ ರಾಮ ಲಕ್ಷ್ಮಣನಿಗೆ ಹೃದಯತುಂಬಿ ಹೇಳಿದ ಮಾತಿದು.

ಪ್ರೀತೋಸ್ಮಿ ತೇ ಮಹತ್ ಕರ್ಮ ತ್ವಯಾ ಕೃತಮಿದಂ ಪ್ರಭೋ |
ಪ್ರದೇಯೋ ಯನ್ನಿಮಿತ್ತಂ ತೇ ಪರಿಷ್ವಂಗೋ ಮಯಾ ಕೃತಃ ||
ಭಾವeನ ಕೃತeನ ಧರ್ಮeನ ಚ ಲಕ್ಷ್ಮಣ |
ತ್ವಯಾ ಪುತ್ರೇಣ ಧರ್ಮಾತ್ಮಾ ನ ಸಂವೃತ್ತಃ ಪಿತಾ ಮಮ ||

‘ಪ್ರಭು ಲಕ್ಷ್ಮಣ, ನೀನು ಮಹತ್ತರವಾದ ಕಾರ್ಯವನ್ನು ಮಾಡಿದ್ದೀಯೆ. ನನಗೆ ತುಂಬಾ ಸಂತೋಷವಾಗಿದೆ. ಇದಕ್ಕಾಗಿ ನಾನು
ನಿನಗೆ ಕೊಡುತ್ತಿರುವ ಪಾರಿತೋಷಕವೆಂದರೆ ಈ ಆಲಿಂಗನ ಮಾತ್ರ. ತಮ್ಮ, ನೀನು ಇಂಗಿತಜ್ಞ. ನಿನಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ನೀನು ಧರ್ಮಜ್ಞ. ನೀ ಮಾಡಿದ ಈ ಕೈಂಕರ್ಯದಿಂದಾಗಿ ಧರ್ಮಾತ್ಮನಾದ ನಮ್ಮ ತಂದೆ ಇನ್ನೂ ಬದುಕಿರುವಂತೆಯೇ ಭಾಸವಾಗುತ್ತಿದೆ.’ ಎಂದು ಹೇಳುತ್ತಾನೆ.

ಲಕ್ಷ್ಮಣ ಕಟ್ಟಿದ ಆ ಎಲೆಮನೆಯಿಂದಾಗಿ ರಾಮನಿಗೆ ಎಲ್ಲಿಲ್ಲದ ಸಂತೋಷವಾಗುತ್ತದೆ. ಅದನ್ನು ಮಹತ್ ಕಾರ್ಯವೆಂದು ಶ್ಲಾಸುತ್ತಾನೆ. ಪರ್ಣಕುಟಿಯನ್ನು ಕಟ್ಟುವಾಗ ರಾಮ ತನಗೂ ಸೀತೆಗೂ ಪ್ರತ್ಯೇಕ ಕೋಣೆ ಇರಬೇಕೆಂದು ಹೇಳಿರಲಿಲ್ಲ. ಅದು ಸಂಕೋಚದ ವಿಷಯ. ತಂದೆಯೊಬ್ಬ ಮಗನಿಗೂ ಸೊಸೆಗೂ ಏಕಾಂತಕ್ಕೆ ಪ್ರತ್ಯೇಕ ಕೋಣೆ ನಿರ್ಮಿಸಿಕೊಡುವಂತೆ ಲಕ್ಷ್ಮಣ
ನಿರ್ಮಿಸಿಕೊಟ್ಟಿದ್ದ. ಆಗ ಶ್ರೀರಾಮನಿಗೆ ಲಕ್ಷ್ಮಣನ ಕುರಿತು ನೆನಪಾದದ್ದು ತನ್ನ ತಂದೆಯೇ.

ಅದಕ್ಕಾಗಿ ಅವನನ್ನು ‘ಪ್ರಭು’ ಎಂದು ಸಂಬೋಧಿಸುತ್ತಾನೆ. ‘ನೀ ಮಾಡಿದ ಈ ಕೆಲಸದಿಂದಾಗಿ ತಂದೆ ಇನ್ನೂ ಸತ್ತಿಲ್ಲ ಎಂದೇ
ತಿಳಿಯುತ್ತೇನೆ’ ಅನ್ನುತ್ತಾ ಅವನನ್ನು ಭಾವಜ್ಞ, ಕೃತಜ್ಞ, ಧರ್ಮಜ್ಞ ಎಂದು ಕೊಂಡಾಡುತ್ತಾನೆ. ಇದು ಶ್ರೀರಾಮನ ಕೃತಜ್ಞತಾ ಗುಣ. ಸತ್ಯವಾಕ್ಯಃ ಸುಳ್ಳಾಡದಿರುವುದು, ಸದಾ ಸತ್ಯವನ್ನೇ ಹೇಳುವುದು ಎಂದು ಇದಕ್ಕೆ ಅರ್ಥ. ಶ್ರೀರಾಮ ಎಂದೂ ಸುಳ್ಳು ಹೇಳಿದವನಲ್ಲ.

“ರಾಮೋ ದ್ವಿರ್ನಾಭಿಭಾಷತೇ”. “ರಾಮ ಎಂದೂ ಎರಡು ಮಾತನಾಡುವವನಲ್ಲ” ಎಂಬ ಪ್ರಶಸ್ತಿಗೆ ಪಾತ್ರನದವನು. ಆದರೂ
ರಾಮ ಸುಳ್ಳಾಡಿದ್ದಾನೆ ಎಂದು ಉದಾಹರಣೆ ಸಹಿತ ಜಗಳವಾಡುವವರಿದ್ದಾರೆ. ಶೂರ್ಪಣಖೆ ಅವನನ್ನು ಮೋಹಿಸಿ ತನ್ನನ್ನು
ಮದುವೆಯಾಗು ಎಂದು ಒತ್ತಾಯಿಸಿದಾಗ ರಾಮ ಒಂದು ಸುಳ್ಳು ಹೇಳಬೇಕಾಯಿತು. ‘ತನಗೆ ಮದುವೆಯಾಗಿದೆಯೆಂದೂ (ಕೃತದಾರಃ) ತನ್ನ ತಮ್ಮ ಲಕ್ಷ್ಮಣನಿಗೆ ಮದುವೆಯಾಗಿಲ್ಲ. (ಅಕೃತದಾರಃ) ಅವನಿಗೊಬ್ಬ ಹೆಂಡತಿ ಬೇಕಾಗಿದ್ದಾಳೆ. ಅವನು ನನಗಿಂತ ಚೆಲುವ. ಅವನ ಬಳಿ ಹೋಗು. ನಿನ್ನ ಅಭಿಲಾಷೆ ನೆರವೇರುತ್ತದೆ’ ಅನ್ನುತ್ತಾನೆ.

ರಾಮನೊಟ್ಟಿಗೇ ಲಕ್ಷ್ಮಣನಿಗೂ ಮದುವೆಯಾಗಿದ್ದುದು ಜಗತ್ಪ್ರಸಿದ್ಧ ವಾಗಿರುವಾಗ ರಾಮ ಹಾಗೆ ಹೇಳಿದ್ದು ಸುಳ್ಳಲ್ಲವೆ ಅನ್ನುವುದು ಅವರ ವಾದ. ಇದು ಧರ್ಮಸೂಕ್ಷ್ಮ ಗೊತ್ತಿಲ್ಲದವರ ಅಪಲಾಪವೇ ಹೊರತು ಇದಕ್ಕೆ ಯಾವ ತಳಬುಡವೂ ಇಲ್ಲ. ಸತ್ಯವೇ ಅಸತ್ಯವಾಗುವ ಸಂದರ್ಭವೂ ಅಸತ್ಯವೇ ಸತ್ಯವಾಗುವ ಸಂದರ್ಭವೂ ಇರುತ್ತದೆ.

ಸತ್ಯಮೇವ ತು ವಕ್ಯವ್ಯಂ | ವಕ್ಯವ್ಯಮನೃತಂ ಭವೇತ್ |
ಯತ್ರಾನೃತಂ ಭವೇತ್ ಸತ್ಯಂ | ಸತ್ಯಂ ಚಾಪ್ಯನೃತಂ ಭವೇತ್ ||
ಇನ್ನೂ ಒಂದು ಮಾತಿದೆ. ಅದು-
ವಿವಾಹಕಾಲೇ ರತಿಸಂಪ್ರಯೋಗೇ ಪ್ರಾಣಾತ್ಯಯೇ
ಸರ್ವಧನಾಪಹಾರೇ |
ಮಿತ್ರಸ್ಯಚಾರ್ಥೇಷು ಅನೃತಂ ವದೇಯುಃ
ಪಂಚಾನೃತಾನ್ಯಾಹುರಪಾತಕಾನಿ ||

‘ವಿವಾಹದ ಮಂಗಳಕ್ಕೋಸ್ಕರ, ಸೀಪುರುಷರ ಮಾನಸಂರಕ್ಷಣೆಗೋಸ್ಕರ, ಪ್ರಾಣಿಹತ್ಯೆಯನ್ನು ತಪ್ಪಿಸುವುದಕ್ಕೋಸ್ಕರ, ಜೀವನ
ಸಾಮಗ್ರಿಯ ನಷ್ಟವನ್ನು ನಿಲ್ಲಿಸುವುಕ್ಕೋಸ್ಕರ, ಧರ್ಮವ್ಯವಸ್ಥೆಯನ್ನು ಸಮಗ್ರವಾಗಿ ಕಾಪಾಡುವುದಕ್ಕೋಸ್ಕರ- ಈ ಐದು ಮಹೋದ್ದೇಶಗಳಿಗೆ ಸುಳ್ಳು ಹೇಳಿದರೆ ಅದು ತಪ್ಪಾಗಲಾರದು; ಪಾಪವಾಗಲಾರದು’ ಎಂದು ಧರ್ಮಶಾಸಕಾರರು ನೀತಿಯ ವ್ಯಾಖ್ಯಾನವನ್ನು ಮಾಡಿದ್ದಾರೆ.

ಇಲ್ಲಿ ನಾವು ಗಮನಿಸಬೇಕಾದುದು-ಶೂರ್ಪಣಖೆ ರಾಮಲಕ್ಷ್ಮಣಸೀತೆಯರ ಮಾನಹಾನಿಗೇ ಪ್ರಯತ್ನಿಸಿದ್ದಳು. ರಾಮನ ಮೇಲೆ ಅತೀವ ಮೋಹಾವಿಷ್ಟಳಾಗಿ, ಕಾಮಾರ್ತಳಾಗಿ ಇಲ್ಲಸಲ್ಲದ ಮಾತುಗಳನ್ನಾಡಿದ್ದಳು. ತನ್ನ ರತಿಕ್ರೀಡೆಗೆ, ರತಿಸಂಪ್ರಯೋಗಕ್ಕೆ
ಅಡ್ಡಿಯಾದ ಲಕ್ಷ್ಮಣಸೀತೆಯರನ್ನು ತಿಂದುಬಿಡುವುದಾಗಿ ಹೇಳಿದ್ದಳು.

ಇಂಥವಳಿಗೆ ತಕ್ಕ ಶಿಕ್ಷೆ ಮಾಡೇಕೆಂದು ರಾಮ ಅವಳಿಗೆ ಸುಳ್ಳು ಹೇಳಿ ಲಕ್ಷ್ಮಣನ ಬಳಿ ಸಾಗಹಾಕುತ್ತಾನೆ. ಇಲ್ಲಿ ರಾಮ ಸುಳ್ಳು ಹೇಳಿದ್ದು ಸತ್ಯದಂತೆ ಒಳಿತನ್ನೇ ಉಂಟುಮಾಡುತ್ತದೆ. ಜೀವಿಗಳ ಹಿತಕ್ಕೆ ಸಾಧಕವಾಗುವ ಇಂತಹ ಸುಳ್ಳೂ ಮಾನ್ಯವಾಗುವ ಸಂದರ್ಭದಲ್ಲಿ ‘ರಾಮ ಸುಳ್ಳು ಹೇಳಿದ’ ಎಂದು ಆಕ್ಷೇಪಿಸುವವರ ವಾದಕ್ಕೆ ಯಾವ ಆಧಾರವೂ ಸಿಗದೇ ಬಿದ್ದುಹೋಗುತ್ತದೆ.
ಹಾಗೆಯೇ ಇನ್ನೂ ಒಂದು ಸಂದರ್ಭವನ್ನು ಎತ್ತಿಕೊಂಡು ರಾಮನನ್ನು ಆಕ್ಷೇಪಿಸುವವರು ಇದ್ದಾರೆ.

ಅಯೋಧ್ಯೆಯಿಂದ ವನವಾಸಕ್ಕೆ ಹೊರಡುವ ಸಂದರ್ಭದಲ್ಲಿ ‘ಬೇಗ ಬೇಗ ರಥ ನಡೆಸು’ ಎಂದು ಶ್ರೀರಾಮನೂ ‘ನಿಧಾನವಾಗಿ ನಡೆಸು’ ಎಂದು (ನಿಂತಲ್ಲಿಂದಲೇ) ದಶರಥನೂ ಪರಸ್ಪರ ವಿರುದ್ಧವಾದ ಆಜ್ಞೆಗಳನ್ನಿತ್ತಾಗ ಸುಮಂತ್ರ ‘ಯಾರ ಮಾತು ಕೇಳಲಿ?’ ಎಂದಾಗ ರಾಮ ‘ನಾನೆಂದಂತೆ ಮಾಡು’. ಆಮೇಲೆ ತಂದೆ ಆಕ್ಷೇಪಿಸಿದರೆ ‘ನೀವು ಹೇಳಿದ್ದು ಗದ್ದಲದಲ್ಲಿ ಕೇಳಲಿಲ್ಲ’ ಎಂದುಬಿಡು ಎಂದು ಹೇಳುತ್ತಾನೆ.

ಆಗ ರಾಮ ಸುಳ್ಳು ಹೇಳಿದಂತಾಗಲಿಲ್ಲವೆ ಎಂದು ಆಕ್ಷೇಪಿಸುವವರ ಅಂಬೋಣ. ಹಾಗೆ ರಾಮ ಹೇಳದೇ ಇರುತ್ತಿದ್ದರೆ ದಶರಥ ರಾಮನ ಮೇಲಿನ ಅತಿ ಮೋಹದಿಂದ ಆಗಲೇ ಪ್ರಾಣ ಬಿಟ್ಟುಬಿಡುತ್ತಿದ್ದ. ಹಾಗಾಗದಿರಲಿ ಎಂದು ದಶರಥನ ಮೇಲಿನ ಪ್ರೀತಿಯಿಂದ, ಕರುಣೆಯಿಂದ, ವಾತ್ಯಲ್ಯದಿಂದ ಹಾಗೆ ಒಂದು ಸುಳ್ಳು ಹೇಳಿಸುತ್ತಾನೆ. ಇದು ‘ಪ್ರಾಣಾತ್ಯಯ’ದ ಸಂದರ್ಭ. ಧರ್ಮಸೂಕ್ಷ್ಮದ ಹಿನ್ನೆಲೆಯಲ್ಲಿ ಸುಳ್ಳೂ ಸತ್ಯದಂತೆ ಕೆಲಸ ಮಾಡುತ್ತವೆ ಅನ್ನುವುದಕ್ಕೆ ಇವು ಸುಂದರ ಉದಾಹರಣೆಗಳು.

Leave a Reply

Your email address will not be published. Required fields are marked *

error: Content is protected !!