Sunday, 8th September 2024

ಮನಸ್ಸನ್ನು ಗಟ್ಟಿಗೊಳಿಸುವ ಸಾಧ್ಯತೆಯೆಡೆಗೆ ಕಲ್ಪನೆ ವಿಸ್ತರಿಸಲಿ !

ಶ್ವೇತಪತ್ರ

shwethabc@gmail.com

ಹುಟ್ಟಿನಿಂದಲೇ ನಾವೆಲ್ಲರೂ ಶ್ರೀಮಂತರು. ಹೇಗೆಂದಿರಾ? ಅಸಾಧ್ಯವಾದ ಮನಸ್ಸು ಹುಟ್ಟುತ್ತಲೇ ನಮ್ಮೊಂದಿಗಿದೆ. ಈ ಮನಸ್ಸು ೧೮ ಬಿಲಿಯನ್ ಜೀವಕೋಶ ಗಳಿಂದ ನಿಯಂತ್ರಿಸಲ್ಪಟ್ಟಿದೆ. ಈ ಜೀವಕೋಶಗಳು ಕಾಯುವುದು ನಮ್ಮ ನಿರ್ದೇಶನಕ್ಕಾಗಿ ಮಾತ್ರ. ನಮ್ಮ ಮನಸ್ಸನ್ನು-ಮಿದುಳನ್ನು ಉಪಯೋಗಿಸಲು, ನಾವೆಲ್ಲಿಗೆ ಹೋಗಬೇಕು, ಏನನ್ನು ಸಾಽಸಬೇಕು ಎಂಬುದನ್ನು ಅಷ್ಟೇ ಹೇಳಬೇಕು.

ಮನಸ್ಸಿನ ಶಕ್ತಿಯನ್ನು ನಿಜವಾಗಲೂ ಅಭ್ಯಸಿಸಬೇಕಾದರೆ ನಿಮಗೆ ನೀವೇ ಪ್ರಶ್ನೆಯೊಂದನ್ನು ಕೇಳಿಕೊಳ್ಳಿ- ‘ಇನ್ನು ಐದು ವರ್ಷದಲ್ಲಿ ನಾನೇನಾಗಿರಬೇಕು?’ ಎಂದು. ಇನ್ನು ಐದು ವರ್ಷದಲ್ಲಿ ಏನಾಗಬೇಕೆಂಬ ಸ್ಪಷ್ಟ ಪರಿಕಲ್ಪನೆ ನಿಮಗಿದ್ದರೆ ಅದನ್ನು ಅನುಷ್ಠಾನಗೊಳಿಸುವ ಸರಿಯಾದ ಸಮಯವೇ ಇಂದು. ಇದನ್ನು ಸಾಧ್ಯವಾಗಿಸುವುದು ನಿಮ್ಮ ಮನಸ್ಸು! ಉತ್ತರ ನಿಮಗೆ ಸ್ಪಷ್ಟವಾಗಿಲ್ಲದೆ ಹೋದರೆ, ಮನಸ್ಸು ಅದನ್ನು ಹೇಗೆ ತಾನೇ ಸಾಧ್ಯವಾಗಿಸುತ್ತದೆ ನೀವೇ ಹೇಳಿ? ವಿಜ್ಞಾನಿಗಳು ಹೇಳುವಂತೆ, ೧೮ ಬಿಲಿಯನ್ ಜೀವಕೋಶಗಳ ಒಟ್ಟು ಸಾಮರ್ಥ್ಯದಲ್ಲಿ ನಾವು ಉಪಯೋಗಿಸುವುದು ಶೇ.೧೦ರಷ್ಟು ಮಾನಸಿಕ ಶಕ್ತಿಯನ್ನು ಮಾತ್ರವಂತೆ.

ಮಿಕ್ಕ ಶೇ.೯೦ರಷ್ಟು ಸಾಮರ್ಥ್ಯವನ್ನು ನಾವು ಉಪಯೋಗಿಸುವಂತಾದರೆ ಅಸಾಧ್ಯವನ್ನು ಸಾಧ್ಯವಾಗಿಸಬಹುದು, ಹೌದಲ್ಲವೇ!? ಹಾಗಿದ್ದರೆ ಮಿದುಳಿನ-ಮನಸ್ಸಿನ ಸಾಮರ್ಥ್ಯವನ್ನು ಹೆಚ್ಚಿನ ಮಟ್ಟಿಗೆ ನಮ್ಮದಾಗಿಸಿಕೊಳ್ಳಲು ನಮ್ಮೆಲ್ಲರ ಬದುಕಿಗೊಂದು ಉದ್ದೇಶವಿರಬೇಕು. ಈ ಉದ್ದೇಶವು ಆಕಾಶದಲ್ಲಿ ಹೊಳೆಯುವ
ನಕ್ಷತ್ರದಂತಿರಬೇಕು. ಇದು ನಮಗೆ ಬೆಳಕಿನ ಹಾದಿಯನ್ನು ತೋರುವ ರೂಟ್‌ಮ್ಯಾಪ್ ಅಷ್ಟೇ ಅಲ್ಲ, ದಡ ಸೇರಿಸುವ ಬದುಕಿನ ಮ್ಯಾಪ್ ಕೂಡ ಆಗಿರಬೇಕು. ಮನಸ್ಸಿಗೆ ಉದ್ದೇಶವಿಲ್ಲದಿದ್ದರೆ ಅದು ದಿಕ್ಕುಗಾಣದೆ ಎಲ್ಲೋ ಅಲೆಯುತ್ತಿರುತ್ತದೆ. ಉದ್ದೇಶವಿಲ್ಲದ ಬದುಕು, ಟೊಳ್ಳು, ಅಸ್ಥಿರ ಮತ್ತು ಅಸ್ತವ್ಯಸ್ತವಾಗಿಬಿಡುತ್ತದೆ. ಬದುಕಿಗೊಂದು  ಉದ್ದೇಶವಿದ್ದರೆ ಅದು ಬದುಕಿಗೆ ಅರ್ಥವನ್ನು ತುಂಬುತ್ತದೆ.

ಬದುಕಲ್ಲಿ ಉದ್ದೇಶವನ್ನು ಮೈಗೂಡಿಸಿಕೊಳ್ಳುವುದು ನಮ್ಮೆಲ್ಲರ ಮೊದಲ ಮಾನಸಿಕ ಕೆಲಸವಾಗಬೇಕು. ಉದ್ದೇಶವನ್ನು ಮನಗಾಣಲು ನಿಮ್ಮೆಲ್ಲರಿಗೂ ಒಂದು ಮನೋವೈಜ್ಞಾನಿಕ ತಂತ್ರವನ್ನು ಹೇಳಿಕೊಡುತ್ತೇನೆ: ‘ಬದುಕಲ್ಲಿ ನನ್ನ ಉದ್ದೇಶ ಜನರಿಗೆ ………. ಆಗಿದೆ’. ಈ ಖಾಲಿ ಬಿಟ್ಟ ಭಾಗವನ್ನು ಮುಂದೆ ನೀಡಿರುವ ಯಾವುದಾದರೂ ಪದಗಳಿಂದ ಆಯ್ದು ತುಂಬಿರಿ- ಸಹಾಯ ಮಾಡುವುದೇ, ಅನುಕೂಲ ಮಾಡುವುದೇ, ಬೆಂಬಲಿಸುವುದೇ, ಸೇವೆ ಮಾಡುವುದೇ, ಉತ್ತೇಜನ ನೀಡುವುದೇ, ಮೌಲೀಕರಣ ಮಾಡುವುದೇ, ಅಂಗೀಕರಿಸುವುದೇ, ಅನ್ವೇಷಿಸುವುದೇ, ಪ್ರೋತ್ಸಾಹಿಸುವುದೇ, ಸಂಘಟಿಸುವುದೇ, ಬಲಪಡಿಸುವುದೇ, ಸೂರ್ತಿ ತುಂಬುವುದೇ, ದಾಖಲಿಸುವುದೇ, ವಿಸ್ತರಿಸುವುದೇ, ಸಕ್ರಿಯಗೊಳಿಸುವುದೇ, ಬಿಡುಗಡೆಗೊಳಿಸುವುದೇ, ಮಾರ್ಗದರ್ಶಿಸುವುದೇ, ತಯಾರು ಮಾಡುವುದೇ, ಸಂಸ್ಕರಿಸುವುದೇ, ಪ್ರಭಾವಿಸುವುದೇ, ಎತ್ತರಿಸುವುದೇ- ಹೀಗೆ.

ಈ ರೀತಿಯಾಗಿ, ಖಾಲಿ ಬಿಟ್ಟ ಜಾಗವನ್ನು ತುಂಬಿದರೆ ನಮ್ಮ ಬದುಕಿಗೆ ಉದ್ದೇಶವನ್ನು ಹೇಗೆ ತುಂಬಬೇಕೆಂಬ ಒಂದು ಸರಿಯಾದ ಆಲೋಚನೆ ನಮ್ಮದಾಗುತ್ತದೆ.
ಈಗ ಈ ಆಲೋಚನೆಯನ್ನು ನಾವು ಸಂಸ್ಕರಿಸಬೇಕು. ಅದನ್ನು ಸಾಧ್ಯವಾಗಿಸುವ ಒಂದು ಮೂಲಾಧಾರ ಇಲ್ಲಿದೆ: ‘ನನ್ನ ಬದುಕಿನ ಉದ್ದೇಶ ………..’. ಇಲ್ಲಿ ಮತ್ತೊಂದು ಖಾಲಿ ಬಿಟ್ಟ ಜಾಗವನ್ನು ನೀವೀಗ ತುಂಬಬೇಕು, ಅದು ಹೇಗೆ? ನಿಮ್ಮ ಬದುಕು ಹೇಗಿರಬೇಕೆಂದು ನೀವು ಆಶಿಸಿದ್ದೀರಿ? ನಿಮ್ಮ ಕನಸುಗಳೇನು? ನಿಮ್ಮ ಆಸೆಗಳೇನು? ನಿಮ್ಮ ಆಶಯಗಳೇನು? ಈಗ ಈ ಎಲ್ಲಾ ಪ್ರಶ್ನೆಗಳಿಗೆ ನಿಮ್ಮದೇ ಮನಸ್ಸಿನಿಂದ ಉತ್ತರ ಪಡೆಯಿರಿ. ಉತ್ತರ ದೊರಕಿದ ನಂತರ, ಬರೀ
ಆಸೆ-ಆಕಾಂಕ್ಷೆಗಳು ಇದ್ದರಷ್ಟೇ ಸಾಲದು, ಅವುಗಳನ್ನು ಸಾಧ್ಯವಾಗಿಸಲು ಬೇಕಾದ ತಯಾರಿಗಳೇನು? ಪಟ್ಟಿ ಮಾಡಿಕೊಳ್ಳಿ.

ನೀವೆಲ್ಲ ನೆನಪಿಡಬೇಕಾದ ಒಂದು ಮುಖ್ಯವಾದ ಅಂಶವೊಂದಿದೆ ಕೇಳಿ: ನಿಮಗೆ ಅವರೇಕಾಳಿನ ಉಪ್ಪಿಟ್ಟು ತಿನ್ನಬೇಕೆಂದು ಆಸೆಯಾಯಿತು ಎಂದಿಟ್ಟುಕೊಳ್ಳೋಣ. ಅವರೆಕಾಯಿ ಬಿಡಿಸಿ, ಸುಲಿದು, ತರಕಾರಿ ಎಲ್ಲ ಹೆಚ್ಚಿ, ರವೆ ಹುರಿದುಕೊಂಡು, ತರಕಾರಿ ಬೇಯಿಸಿ, ರವೆ ಹಾಕಿ, ಉಪ್ಪಿ ತಯಾರಿಸಿ ತಿನ್ನಲು ನಮಗೆ ಕಡಿಮೆ ಎಂದರೂ ಒಂದರಿಂದ ಒಂದೂವರೆ ಗಂಟೆಯಾದರೂ ಬೇಕು. ಅಂಥದ್ದರಲ್ಲಿ ಬದುಕಿಗೆ ಅರ್ಥ ಮತ್ತು ಉದ್ದೇಶ ತುಂಬುತ್ತಾ, ಈಗ ಅಂದುಕೊಂಡ ಆಸೆ-ಆಶಯಗಳು ಇನ್‌ಸ್ಟಂಟ್ ಮ್ಯಾಗಿಯಂತೆ Pಲ ಕೊಡಬೇಕೆಂದುಕೊಂಡರೆ, ಆರೋಗ್ಯ ಕೆಡುವಂತೆ ಬದುಕು ಕೆಡುತ್ತದೆ, ಜಾಗೃತವಾಗಿರಿ. ಯಾವುದೇ ಉದ್ದೇಶಗಳು ಫಲ ಕೊಡಬೇಕಾದರೆ ಸ್ಪಷ್ಟ ತಯಾರಿ, ಸವೆಸುವ ದಾರಿ ಬಹುಮುಖ್ಯ.

ಆಗಲೇ ಅದರ ಫಲಿತಾಂಶ ಫಲಪ್ರದವಾಗುವುದು ನೆನಪಿರಲಿ! ಈಗಂತೂ ನಿಮ್ಮ ಬದುಕಿನ ಉದ್ದೇಶ ಸ್ಪಷ್ಟವಾಗಿದ್ದರೆ ಅದನ್ನು ಸಾಧ್ಯವಾಗಿಸುವುದಕ್ಕೆ ನಿಮಗೆ ಮುಖ್ಯವಾಗಿ ಬೇಕಿರುವುದು ನಿಮ್ಮದೇ ಮಾನಸಿಕ ಶಕ್ತಿ. ಎಲ್ಲವನ್ನೂ ನಿರ್ದೇಶಿಸುವುದೇ ನಮ್ಮ ಮಾನಸಿಕ ಶಕ್ತಿ. ಹಾಗಿದ್ದರೆ ಈ ಮನಸ್ಸಿನ ಶಕ್ತಿಯನ್ನು ರೂಢಿಸಿ ಕೊಳ್ಳುವುದಾದರೂ ಹೇಗೆ? ಮೊದಲನೆಯದು- ಒಳ್ಳೆಯದನ್ನು ಓದೋಣ. ಆಪ್ತ ಸಲಹೆಯ ಅನುಭವದಲ್ಲಿ ಎಷ್ಟೋ ಜನ ಮಾತನಾಡುವುದನ್ನು ಕೇಳಿಸಿಕೊಂಡರೆ
ಭಯವಾಗುತ್ತದೆ. ಕೆಲವರಿಗೆ ಓದುವ ಅಭ್ಯಾಸವೇ ಇರುವುದಿಲ್ಲ. ಕೆಲವರಂತೂ ನ್ಯೂಸ್ ಪೇಪರ್‌ನ ಕ್ರೈಂ ಕಾಲಂ ಅನ್ನು ಮಾತ್ರ ಓದುತ್ತಾರಂತೆ. ನಾನು ಹೇಳುವುದು- ನಮ್ಮ ಮನಸ್ಸಿಗೆ ಸ್ಫೂರ್ತಿ ತುಂಬುವ, ಮನಸ್ಸನ್ನು ಎತ್ತರಿಸುವ, ಖುಷಿ ಕಾಣಿಸುವ ಸಂಗತಿಗಳನ್ನು ಓದಿ ನೋಡಿ.

ಅವು ನಮ್ಮನ್ನು ಧನಾತ್ಮಕವಾಗಿ ಸದ್ದಿಲ್ಲದಂತೆ ಪ್ರಭಾವಿಸಿಬಿಡುತ್ತವೆ. ಒಳ್ಳೆಯ ಬರವಣಿಗೆಗಳಲ್ಲಿ ಸಾಧಕರ ಕಥೆಗಳಿರುತ್ತವೆ. ಸಾಧಕರು ತಾವು ಸಾಧಿಸುವ ಮೊದಲು ನಡೆದು ಬಂದ ಕಲ್ಲು-ಮುಳ್ಳಿನ ಹಾದಿಯ ತಮ್ಮ ಅನುಭವಗಳನ್ನು ಹಂಚಿಕೊಂಡಿರುತ್ತಾರೆ. ಇವು ನಮ್ಮ ಬದುಕಿಗೂ ದಾರಿದೀಪಗಳಾಗಬಹುದು. ‘ಉನ್ನತವಾದ ಏನನ್ನಾದರೂ ಸಾಽಸಬೇಕಾದರೆ ವಾರಕ್ಕೆ ಎರಡು ಉತ್ತಮ ಪುಸ್ತಕಗಳನ್ನು ಓದಬೇಕು’ ಹೀಗೆನ್ನುತ್ತಾನೆ ಪ್ರಸಿದ್ಧ ಮೋಟಿವೇಷನಲ್ ಗುರು ಜಿಮ್ ರಾನ್. ಇನ್ನು, ಮಾನಸಿಕವಾಗಿ ಗಟ್ಟಿಯಾಗುವ ಎರಡನೆಯ ಹಂತ ಪುಸ್ತಕಗಳ ಜತೆ ಮನಸ್ಸನ್ನು ಓದುವುದು.

ಹೌದು! ನೀವು ಓದಿದ್ದು ನಿಜ. ನಾವೆಲ್ಲರೂ ಎದುರುಗಿರುವವರ, ಭೇಟಿಯಾಗುವ ಪ್ರತಿಯೊಬ್ಬರ ಮನಸ್ಸನ್ನು ಓದಬೇಕು. ಮನಸ್ಸನ್ನು ಓದುವ ಕಲೆ ನಮ್ಮದಾದರೆ ಅದೃಷ್ಟವು ನಮ್ಮದಾದಂತೆ. ಜನರನ್ನು ಸರಿಯಾಗಿ ಅವಲೋಕಿಸಿದರೆ ಅವರ ಅಭ್ಯಾಸ ಹಾಗೂ ವರ್ತನೆ ಏನೆಂಬುದನ್ನು ನಾವು ಸುಲಭವಾಗಿ ಊಹಿಸಬಹುದು. ನಾವೆಲ್ಲ ಏನೆಲ್ಲಾ ವೃತ್ತಿ ಮಾಡುತ್ತಿರಬಹುದು, ಆದರೆ ಆ ಎಲ್ಲಾ ವೃತ್ತಿಗಳು ಒಂದಲ್ಲ ಒಂದು ದಿಕ್ಕಿನಿಂದ ಜನರ ಮನಸ್ಸಿಗೆ ಸಂಬಂಧಪಟ್ಟ ಹಾಗೆ ಇರುತ್ತವೆ. ಜನರ ಮನಸ್ಸನ್ನು ಓದುವುದರ ಜತೆಜತೆಗೆ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಬೇಕು, ಸಹಾನುಭೂತಿಯನ್ನು ರೂಢಿಸಿಕೊಳ್ಳಬೇಕು, ಮಮತೆ ನಮ್ಮದಾಗಬೇಕು. ಇವೆಲ್ಲವೂ ಮನಸ್ಸಿನ ಸಾಮರ್ಥ್ಯಗಳು.

ಇವೇ ಮುಂತಾದ ಸಂವೇದನೆಗಳನ್ನು ನಾವು ಮತ್ತೊಬ್ಬರಿಗೆ ನೀಡಿದರೆ, ಅವು ಮತ್ತೊಬ್ಬರಿಂದಲೂ ನಮಗೆ ದೊರೆಯುತ್ತವೆ. ನ್ಯೂಟನ್ಸ್ ಲಾ ಆಫ್ ಮೋಷನ್‌ನ ‘-ರ್ ಎವರಿ ಆಕ್ಷನ್ ದೇರ್ ಈಸ್ ಆನ್ ಈಕ್ವಲ್ ಅಂಡ್ ಅಪೋಸಿಟ್ ರಿಯಾಕ್ಷನ್’ ಎಂಬಂತೆ. ಅಮೆರಿಕನ್ ಬರಹಗಾರ್ತಿ ಹೆಲನ್ ಕೆಲರ್ ಅದ್ಭುತವಾದ ಸಂಗತಿ ಒಂದನ್ನು ಬರೆಯುತ್ತಾ ಹೇಳುತ್ತಾಳೆ- ‘ನೀನು ಕತ್ತಲಲ್ಲಿ ಇರುವೆ ಎಂದಾದರೆ ನನ್ನ ದೀಪದಿಂದ ನಿನ್ನ ದೀಪವನ್ನು ಹಚ್ಚಿಕೋ, ಹಾಗೆ ಮಾಡಿದ ಕ್ಷಣ ನನ್ನ ದೀಪವೇನೂ ಆರಿ ಹೋಗುವುದಿಲ್ಲವಲ್ಲ’. ಮನಸ್ಸುಗಳ ನಡುವೆ ದೀಪದಿಂದ ದೀಪವನ್ನು ನಾವು ಹೀಗೆ ಹಚ್ಚಬೇಕು ಅಲ್ಲವೇ? ಮೂರನೆಯ ಮಂತ್ರ- ‘ಉತ್ತಮ ಗುರುವನ್ನು ಕಂಡುಕೋ’.

ಎದುರಲ್ಲಿ ಗುರಿ ಇದ್ದು ಹಿಂದೆ ಗುರುವಿದ್ದರೆ ಅಲ್ಲಿಗೆ ಬದುಕು ಸರಿದಾರಿಯತ್ತ ದಿಕ್ಕು ಕಾಣುತ್ತದೆ ಎಂದೇ ಅರ್ಥ. ನಮ್ಮಲ್ಲಿ ಎಷ್ಟೋ ಜನ ಏಕಲವ್ಯರು ಇರಬಹುದು ಗುರುವಿಲ್ಲದೆ, ಆದರೆ ಗುರಿಯಂತೂ ನಮ್ಮೆಲ್ಲರಿಗೂ ಇದ್ದೇ ಇದೆಯಲ್ಲ. ಮತ್ತೇಕೆ ಯೋಚನೆ? ಎಷ್ಟೋ ಸೆಮಿನಾರುಗಳು, ಟಾಕ್ ಷೋಗಳು,ಸೆಲ್ಫ್ ಹೆಲ್ಪ್ ಪುಸ್ತಕಗಳು, ವ್ಯಕ್ತಿತ್ವ ವಿಕಸನ ಶಿಬಿರಗಳು ನಮ್ಮ ಮುಂದಿವೆ. ಹೀಗೆ ನಮ್ಮ ಮುಂದೆ ಅವಕಾಶಗಳ ಸಾಲೇ ಇರುವುದರಿಂದ ಅವುಗಳನ್ನು ಉಪಯೋಗಿಸಿಕೊಂಡು ಗುರಿಸಾಧನೆಯ ಕಡೆಗೆ ಮುಖ ಮಾಡಬೇಕು. ನಿಮ್ಮ ಎದೆಯ ಮೇಲೆ ಕೈ ಇಟ್ಟು ಜೋರಾಗಿ ಕೂಗಿ ಹೇಳಿ- ನನ್ನೆಲ್ಲಾ ಮಿತಿಗಳನ್ನು ಮೀರಿ ನನ್ನನ್ನು ನಾನು ಮುಂದಕ್ಕೆ ತಳ್ಳುತ್ತಿದ್ದೇನೆ ಮತ್ತು ಆ ಮೂಲಕ ನನ್ನ ನಿಜ ಸಾಮರ್ಥ್ಯಗಳೇನು ಎಂದು ಅರಿಯುವ ಪ್ರಯತ್ನವೇ ನನ್ನದು.

ಇಡೀ ಬ್ರಹ್ಮಾಂಡದಲ್ಲೇ ಅತ್ಯಂತ ಶಕ್ತಿಯುತವಾದ ಸಾಧನ- ಅದು ನಮ್ಮ ಮನಸ್ಸು. ಅದಕ್ಕೆ ಆಕಾಶಕ್ಕೆ ಜಿಗಿದು ತಾರೆಗಳನ್ನು ಸ್ಪರ್ಶಿಸುವ ಅಥವಾ ಸಮುದ್ರದ ಆಳಕ್ಕೆ ಇಳಿಯುವ ಎಲ್ಲಾ ಶಕ್ತಿಯು ಇದೆ. ನಮ್ಮ ಮನಸ್ಸಿನ ಮೌಲ್ಯವನ್ನು ಶಕ್ತಿಯನ್ನು ಅರಿಯುವ ಉತ್ತಮ ಮಾರ್ಗವೆಂದರೆ, ‘ಮನಸ್ಸಿನ ಶಕ್ತಿಯನ್ನು ನಾವು ಅರಿಯದೆ ಹೋಗಿದ್ದರೆ ಜಗತ್ತು ಇಂದು ಏನಾಗಿರುತ್ತಿತ್ತು’ ಎಂದು ಯೋಚಿಸುವುದು.

ಇತ್ತೀಚೆಗೆ ಸೆಮಿನಾರ್ ಒಂದರಲ್ಲಿ ಕೇಳಿದ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುವೆ. ಈತನೊಬ್ಬ ಚೀನಾದ ನಾಗರಿಕ; ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ನಮ್ಮ ಮೋಟಿವೇಷನ್ ಗುರು ಆ ಮಾಲ್‌ನಲ್ಲಿ ಏನೋ ಖರೀದಿಸುತ್ತಿದ್ದಾಗ, ಈತ ಮಾತನಾಡುವ ಅದ್ಭುತವಾದ ಇಂಗ್ಲಿಷ್‌ಗೆ ಮಾರುಹೋಗಿ ಈತನನ್ನು ಮಾತನಾಡಿಸುತ್ತಾರೆ. ಆಗ ತಿಳಿದುಬರುವ ವಿಚಾರವೆಂದರೆ, ಆತ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಮಾಲ್‌ನಲ್ಲಿ ಆತನಿಗೆ
ಕೇವಲ ಕ್ಲರ್ಕ್ ಕೆಲಸವಷ್ಟೇ ದೊರಕಿರುತ್ತದೆ. ಆತ ದಿನದಲ್ಲಿ ಎಂಟು ಗಂಟೆ ಕೆಲಸ ಮಾಡಬೇಕು ಮತ್ತು ವಾರದಲ್ಲಿ ಒಂದು ದಿನ ಮಾತ್ರ ರಜೆ ಇರುತ್ತದೆ. ಆಗ ಮೋಟಿವೇಷನಲ್ ಗುರು ಆತನನ್ನು ‘ನಿನ್ನ ದೊಡ್ಡ ಕನಸು ಯಾವುದು?’ ಎಂದು ಕೇಳುತ್ತಾರೆ.

ತಕ್ಷಣವೇ ಉತ್ತರಿಸುವ ಆತ ‘ಅವಕಾಶಗಳ ನಾಡು ಅಮೆರಿಕದಲ್ಲಿ ಬದುಕಬೇಕು’ ಎನ್ನುತ್ತಾನೆ. ‘ಏಕೆ?’ ಎಂದು ಮರುಪ್ರಶ್ನಿಸುವ ಮೋಟಿವೇಷನಲ್ ಗುರುವಿಗೆ ಉತ್ತರಿಸುವ ಆತ ಹೇಳುತ್ತಾನೆ- ‘ಅಮೆರಿಕದಲ್ಲಿ ನಿನಗೇನು ಬೇಕೋ, ಅದು ಯಾವಾಗ ಬೇಕೋ, ಎಷ್ಟು ಬೇಕೋ ಅದನ್ನು ಮಾಡಬಹುದು’. ಇದರ ಅರ್ಥ ಇಷ್ಟೇ- ನಮ್ಮ ಮನಸ್ಸಿನ ಖಾಲಿ ಬಿಟ್ಟ ಜಾಗಗಳನ್ನು ನಾವು ಇರುವಲ್ಲಿಯಿಂದಲೇ ತುಂಬಬೇಕೇ ಹೊರತು, ಬೇರಾವುದೋ ಅವಕಾಶಕ್ಕಾಗಿ ಕಾದು ಕೂರೂವುದಲ್ಲ..
ಏನಂತೀರಿ?!

Leave a Reply

Your email address will not be published. Required fields are marked *

error: Content is protected !!