Saturday, 27th July 2024

ಶಸ್ತ್ರಚಿಕಿತ್ಸೆಯ ಕ್ರೌರ್ಯ ತಡೆದವನು

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಆಂಬ್ರೋಸ್ ಪ್ಯಾರೆ ಮತ್ತೊಂದು ದಿಟ್ಟ ಪ್ರಯೋಗವನ್ನು ಮಾಡಿದ. ರಕ್ತನಾಳವನ್ನು ಕಾದ ಸಲಾಕೆಯಿಂದ ಸುಟ್ಟು ರಕ್ತಸ್ರಾವವನ್ನು
ನಿಲ್ಲಿಸುವ ಬದಲು, ರಕ್ತನಾಳಕ್ಕೆ ದಾರವನ್ನು ಕಟ್ಟಿ ರಕ್ತಸ್ರಾವವನ್ನು ನಿಲ್ಲಿಸುವ ಒಂದು ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟ.

ಮಧ್ಯಯುಗದ ಯೂರೋಪಿನಲ್ಲಿ ಅರೆಬರೆ ಕಲಿತ ಕ್ಷೌರಿಕ ಶಸವೈದ್ಯರು ಅಪಾಯಕಾರಿ ಹಾಗೂ ಅವೈಜ್ಞಾನಿಕ ಚಿಕಿತ್ಸೆಯನ್ನು ನೀಡು ತ್ತಿದ್ದರು. ಇಂತಹ ದಿನಗಳಲ್ಲಿ ಅಪರೂಪಕ್ಕೆ ಕೆಲವು ಕ್ಷೌರಿಕ ಶಸ್ತ್ರವೈದ್ಯರು, ಅಧಿಕೃತ ವೈದ್ಯಕೀಯ ಪದವಿಯನ್ನು ಪಡೆದ ಶಸ್ತ್ರವೈದ್ಯರಿ ಗಿಂತಲೂ ಉತ್ತಮ ಚಿಕಿತ್ಸೆಯನ್ನು ನೀಡುವುದರ ಜತೆಯಲ್ಲಿ, ಶಸ್ತ್ರವೈದ್ಯಕೀಯ ವಿಜ್ಞಾನಕ್ಕೆ ಮಹಾ ತಿರುವುಗಳನ್ನು ಕೊಟ್ಟರು.

ಅಂಥವರಲ್ಲಿ ಫ್ರಾನ್ಸಿನ ಆಂಬ್ರೋಸ್ ಪ್ಯಾರೆ (1509-1590) ಮುಖ್ಯನಾದವನು. ಆಂಬ್ರೋಸ್ ಪ್ಯಾರೆ ಫ್ರಾನ್ಸ್ ದೇಶದ ಬೌರ್ಗ್- ಹೆರ್ಸೆಂಟ್‌ನಲ್ಲಿ ಹುಟ್ಟಿದ. ಈತನ ತಂದೆ ಓರ್ವ ಖ್ಯಾತ ಬಡಗಿಯಾಗಿದ್ದ. ಪ್ಯಾರೆಯು 13ನೆಯ ವರ್ಷಕ್ಕೆ ಕಾಲಿಡುತ್ತಿರುವಂತೆಯೇ, ಅವನ ತಂದೆಯು ಪ್ಯಾರೆಯನ್ನು ಹಳ್ಳಿಯ ಪಾದ್ರಿಯ ಬಳಿ ಲ್ಯಾಟಿನ್ ಭಾಷೆಯನ್ನು ಕಲಿಯಲು ಕಳುಹಿಸಿದ.

ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಲ್ಯಾಟಿನ್ ಭಾಷೆಯನ್ನು ಕಲಿಯುವುದು ಅನಿವಾರ್ಯ ವಾಗಿತ್ತು. ಆದರೆ ದುರದೃಷ್ಟವಶಾತ್ ಪ್ಯಾರೆಯ ತಲೆಗೆ ಲ್ಯಾಟಿನ್ ಭಾಷೆ ಹತ್ತಲಿಲ್ಲ. ಹಾಗಾಗಿ ಅವನು ವೈದ್ಯಕೀಯ ವಿದ್ಯಾಲಯವನ್ನು ಸೇರಿ ಅಧಿಕೃತವಾಗಿ ವೈದ್ಯಕೀಯವನ್ನು ಕಲಿಯುವ ಅವಕಾಶದಿಂದ ವಂಚಿತನಾದ. ಆದರೆ ಲ್ಯಾಟಿನ್ ಭಾಷೆಯ ಅಗತ್ಯವಿಲ್ಲದ ಕ್ಷೌರಿಕ ಶಸ್ತ್ರವೈದ್ಯನಾಗಿ ತರಬೇತಿಯನ್ನು ಪಡೆಯಲು ಮುಂದಾದ. 1530ರ ದಶಕದಲ್ಲಿ ಪ್ಯಾರಿಸ್ಸಿಗೆ ಬಂದ. ಓರ್ವ ಮಾಸ್ಟರ್ ಬಾರ್ಬರ್ ಸರ್ಜನ್ ಬಳಿ ತರಬೇತಿ ಪಡೆಯಲಾರಂಭಿಸಿದ. ಆ ಮಾಸ್ಟರ್, ಅವನಿಗೆ ಕೇವಲ ಕಸ ಗುಡಿಸುವುದನ್ನು ಕಲಿಸಿದ.

ಆಗಾಗ್ಗೆ ಕಟಿಂಗ್ ಮಾಡಲು ಇಲ್ಲವೇ ಗಡ್ಡವನ್ನು ಟ್ರಿಮ್ ಮಾಡಲು ಅವಕಾಶವನ್ನು ಮಾಡಿಕೊಡುತ್ತಿದ್ದ, ಅಷ್ಟೆ. ಇನ್ನು ವೈದ್ಯಕೀಯ ವಿದ್ಯಾ ಲಯಗಳಿಗೆ ಹೋಗಿ ವೈದ್ಯಕೀಯ ಪ್ರವಚನಗಳನ್ನು ಆಲಿಸುವುದು ಅಥವಾ ವೈದ್ಯಕೀಯ ಗ್ರಂಥಗಳನ್ನು ಓದುವುದು ಕನಸಿನ ಮಾತಾ ಗಿತ್ತು. ಏಕೆಂದರೆ ಹಗಲಲ್ಲಿ ಅವನು ಅಂಗಡಿಯನ್ನು ಹಾಗೇ ಬಿಟ್ಟು ಹೇಗೆ ತಾನೆ ಹೊರ ಹೋಗಿಯಾನು? ಹಾಗಾಗಿ ಪ್ಯಾರೆ ನಸುಕಿನಲ್ಲಿ ಹಾಗೂ ಇರುಳಿನಲ್ಲಿ ಮಾತ್ರ ವೈದ್ಯಕೀಯ ಗ್ರಂಥಗಳನ್ನು ಅಧ್ಯಯನ ಮಾಡಲಾರಂಭಿಸಿದ.

ವೈದ್ಯಕೀಯದ ಮೇಲೆ ಪ್ಯಾರೆಗಿದ್ದ ಆಸಕ್ತಿಯನ್ನು ಗಮನಿಸಿದ ಮಾಸ್ಟರ್ ಬಾರ್ಬರ್ ಸರ್ಜನ್, ರಕ್ತವಿಮೋಚನೆಯನ್ನು (ಕಾಯಿಲೆಯಿಂದ ನರಳುವವರ ರಕ್ತವನ್ನು ಹೊರಹರಿಸಿದರೆ ಕಾಯಿಲೆಯು ಗುಣವಾಗುವುದೆಂಬ ನಂಬಿಕೆಯಿದ್ದ ಕಾಲ. ಮುಂದೋಳಿನ ರಕ್ತನಾಳವನ್ನು ಛೇದಿಸಿ ನಿಗದಿತ ಪ್ರಮಾಣದ ರಕ್ತವನ್ನು ಹೊರಹರಿಸುತ್ತಿದ್ದರು. ಈ ಪ್ರಕ್ರಿಯೆಯು ರಕ್ತವಿಮೋಚನೆ (ಬ್ಲಡ್ ಲೆಟಿಂಗ್) ಎಂದು ಹೆಸರಾಗಿತ್ತು.) ಹಾಗೂ ಜಲೂಕ ರಕ್ತ ವಿಮೋಚನವನ್ನು (ಜಿಗಣೆಗಳನ್ನು ಕಚ್ಚಿಸಿ ರಕ್ತವನ್ನು ಹೊರಹರಿಸುವ ಕ್ರಮ) ಕಲಿಸಿದ. ಆಂಬ್ರೋಸ್ ಪ್ಯಾರೆ ಹೀಗೆ
ಅನೇಕ ವರ್ಷಗಳ ಅವಧಿಯಲ್ಲಿ ಕ್ಷೌರಿಕ ಶಸ್ತ್ರವೈದ್ಯಕೀಯದ ಅಗತ್ಯವಾದ ಅರಿವನ್ನು ಗಳಿಸಿದ.

ಕೊನೆಗೆ ಡಿಪ್ಲೋಮ ಪದವಿಯನ್ನು ಪಡೆದು ಪೂರ್ಣ ಪ್ರಮಾಣದ ಕ್ಷೌರಿಕ ಶಸ್ತ್ರವೈದ್ಯನಾದ. ಆಂಬ್ರೋಸ್ ಪ್ಯಾರೆ ತನ್ನ ಡಿಪ್ಲೋಮ ನೆರವಿ ನಿಂದ ಫ್ರಾನ್ಸಿನ ಪ್ರಮುಖ ಆಸ್ಪತ್ರೆಯಾದ ಹೋಟೆಲ್ ಡ್ಯು ದ ಪ್ಯಾರಿಸ್ ಸೇರಿದ. ಇದು 3500 ಹಾಸಿಗೆಗಳಿದ್ದ ಪ್ರಸಿದ್ಧ ಆಸ್ಪತ್ರೆ
ಯಾಗಿತ್ತು. ಆದರೂ ಅನೇಕ ಸಲ ಒಂದು ಹಾಸಿಗೆಯಲ್ಲಿ ಇಬ್ಬರು ಅಥವಾ ಹೆಚ್ಚಿನ ರೋಗಿಗಳನ್ನು ಮಲಗಿಸಿ ಚಿಕಿತ್ಸೆಯನ್ನು ನೀಡಬೇಕಾ ದಂಥ ಅನಿವಾರ್ಯ ಒತ್ತಡವಿತ್ತು.

ಆಂಬ್ರೋಸ್ ಪ್ಯಾರೆ ಆಸ್ಪತ್ರೆಯಲ್ಲಿ ಹಲವು ವರ್ಷಗಳನ್ನು ಕಳೆದರೂ, ಅವನಿಂದ ಲ್ಯಾಟಿನ್ ಭಾಷೆಯನ್ನು ಕಲಿಯಲು ಆಗದೇ ಇದ್ದ ಕಾರಣ, ಆತ ಅಧಿಕೃತ ಶಸ್ತ್ರವೈದ್ಯನಾಗಲೇ ಇಲ್ಲ. ಕ್ಷೌರಿಕ ಶಸ್ತ್ರವೈದ್ಯರಿಗೆ ಮಿಲಿಟರಿಯಲ್ಲಿ ಉತ್ತಮ ಅವಕಾಶವಿತ್ತು. ಹಾಗಾಗಿ 1536-37ರಲ್ಲಿ ನಡೆದ ಟ್ಯೂರಿನ್ ಯುದ್ಧದಲ್ಲಿ ಪ್ಯಾರೆಯು ಕ್ಷೌರಿಕ ಶಸ್ತ್ರವೈದ್ಯನಾಗಿ ಸೈನ್ಯವನ್ನು ಸೇರಿಕೊಂಡ. ಈ ಒಂದು ತಿರುವು, ಕೇವಲ ಪ್ಯಾರೆಯ
ಬದುಕಿನಲ್ಲಿ ಮಾತ್ರವಲ್ಲ, ಶಸ್ತ್ರವೈದ್ಯಕೀಯ ವಿಜ್ಞಾನದ ಬೆಳವಣಿಗೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಯಿತು.

ಯುದ್ಧದಲ್ಲಿ ಶತ್ರುಗಳ ಗುಂಡೇಟಿಗೆ ಬಲಿಯಾದ ಯೋಧರಿಗೆ ನೀಡುತ್ತಿದ್ದ ಚಿಕಿತ್ಸೆಯನ್ನು ಕೇಳಿದರೆ ಇಂದು ನಮ್ಮ ಎದೆಯು ನಡುಗುತ್ತದೆ. ಗಾಯದ ಮೇಲೆ ಕಾದ ಎಣ್ಣೆ ಯನ್ನು ಸುರಿಯುತ್ತಿದ್ದರು. ರಕ್ತನಾಳ ಛೇದನದ ಕಾರಣ ವಿಪರೀತ ರಕ್ತಸ್ರಾವವಾಗುತ್ತಿದ್ದರೆ, ಆ ರಕ್ತನಾಳದ ತುದಿಯನ್ನು ಕಾದ ಕಬ್ಬಿಣದ ಸಲಾಕೆಯಿಂದ ಸುಡುತ್ತಿದ್ದರು. ಇದನ್ನು ನೋಡಿದ ಪ್ಯಾರೆ ಕಂಗಾಲಾದ. ಒಂದು ದಿನ ಗಾಯಾಳುಗಳು ಹೆಚ್ಚಿನ ಪ್ರಮಾಣದಲ್ಲಿ ಬಂದರು. ಆದರೆ ಅಂದು ವೈದ್ಯಕೀಯ ವಸ್ತುಗಳ ದಾಸ್ತಾನಿರಲಿಲ್ಲ.

ಗಾಯಗಳನ್ನು ಸುಡಲು ಬಳಸುತ್ತಿದ್ದ ಎಣ್ಣೆಯೂ ಇರಲಿಲ್ಲ. ಹಾಗಾಗಿ ಪ್ಯಾರೆ ಯೋಚನಾಗ್ರಸ್ತನಾದ. ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ಚಿಕಿತ್ಸಾ ಕ್ರೌರ್ಯಕ್ಕೆ ಕೊನೆ ಹಾಡುವ ಅಮೃತ ಘಳಿಗೆ ಒದಗಿ ಬಂದ್ದಿತ್ತು. ಮೊಟ್ಟೆಯ ಹಳದಿ ಭಾಗಕ್ಕೆ ಗುಲಾಬಿ ತೈಲವನ್ನು ಹಾಗೂ ಟರ್ಪೆಂಟೈನ್ ಸೇರಿಸಿದ. ಗಟ್ಟಿಯಾಗಿ ನಾದಿದ. ಒಂದು ಹೊಸ ಲೇಪನವನ್ನು ಸಿದ್ಧಪಡಿಸಿದ. ಗಾಯಗಳಿಗೆ ಹಚ್ಚಿ ಪಟ್ಟಿಯನ್ನು ಕಟ್ಟಿದ. ಆದರೆ ಆ ರಾತ್ರಿ ಪ್ಯಾರೆಗೆ ನಿದ್ರೆಯೇ ಬರಲಿಲ್ಲ.

ಕಾರಣ ತಾನು ನೀಡಿದ ಹೊಸ ಚಿಕಿತ್ಸೆಯ ಪರಿಣಾಮವು ಏನಾಗುತ್ತದೆಯೋ ಎನ್ನುವ ಒಂದು ಸಣ್ಣ ಅಳುಕು ಆತನನ್ನು ಕಾಡುತ್ತಿತ್ತು. ಆದರೆ ಮರು ದಿನ ಬೆಳಿಗ್ಗೆ ಆತನು ಗಾಯಾಳು ಯೋಧರನ್ನು ನೋಡಿದಾಗ, ಅವನಿಗೆ ಆಶ್ಚರ್ಯ ಹಾಗೂ ಸಂತೋಷಗಳೆರಡೂ ಒಟ್ಟಿಗೆ ಆದವು. ಮರಳುವ ಎಣ್ಣೆಯನ್ನು ಸುರಿದು ಚಿಕಿತ್ಸೆ ನೀಡಿದ ಯೋಧರಿಗೆ ಇಡೀ ರಾತ್ರಿ ಜ್ವರ ಬಂದಿತ್ತು. ವಿಪರೀತ ನೋವಿನಿಂದ ನರಳುತ್ತಿದ್ದರು. ಗಾಯದ ಅಂಚೆಲ್ಲ ಉರಿಯೂತಕ್ಕೆ ಒಳಗಾಗಿ ಊದಿಕೊಂಡಿತ್ತು. ಅವರು ಇಡೀ ರಾತ್ರಿ ನಿದ್ರೆಯನ್ನೇ ಮಾಡಿರಲಿಲ್ಲ.

ಮೊಟ್ಟೆ ಪಟ್ಟಿಯನ್ನು ಕಟ್ಟಿದ್ದ ಯೋಧರಿಗೆ ಯಾವುದೇ ಜ್ವರವು ಬಂದಿರಲಿಲ್ಲ. ನೋವು ಅವರನ್ನು ಹೆಚ್ಚು ಕಾಡಿರಲಿಲ್ಲ. ಗಾಯದ ಅಂಚಿನಲ್ಲಿ ಉರಿಯೂತದ ಲಕ್ಷಣಗಳಿರಲಿಲ್ಲ. ಅವರು ಸಾಕಷ್ಟು ಒಳ್ಳೆಯ ನಿದ್ರೆಯನ್ನೇ ಮಾಡಿದ್ದರು. ಈ ಹೊಚ್ಚ ಹೊಸ ಪ್ರಯೋಗವು, ಗಾಯದ
ಮೇಲೆ ಮರಳುವ ಎಣ್ಣೆಯನ್ನು ಸುರಿಯುವ ಕ್ರೌರ್ಯಕ್ಕೆ ಸದಾ ಕಾಲಕ್ಕೂ ಕೊನೆಯನ್ನು ಹಾಡಿತು. ಈ ಪವಾಡವನ್ನು ನೋಡಿ ಹೊಗ ಳಿದವರಿಗೆ, ಪ್ಯಾರೆ ನಾನು ಪಟ್ಟಿಯನ್ನು ಕಟ್ಟಿದೆ, ಅವನು ಗುಣಪಡಿಸಿದ ಎಂದು ಚಿಕಿತ್ಸಾ ಯಶಸ್ಸನ್ನು ಭಗವಂತನಿಗೆ ಅರ್ಪಿಸಿದ.

ಆಂಬ್ರೋಸ್ ಪ್ಯಾರೆ ಮತ್ತೊಂದು ದಿಟ್ಟ ಪ್ರಯೋಗವನ್ನು ಮಾಡಿದ. ರಕ್ತನಾಳವನ್ನು ಕಾದ ಸಲಾಕೆಯಿಂದ ಸುಟ್ಟು ರಕ್ತ ಸ್ರಾವವನ್ನು ನಿಲ್ಲಿಸುವ ಬದಲು, ರಕ್ತನಾಳಕ್ಕೆ ದಾರವನ್ನು ಕಟ್ಟಿ ರಕ್ತಸ್ರಾವವನ್ನು ನಿಲ್ಲಿಸುವ ಒಂದು ಕ್ರಾಂತಿಕಾರಕ ಹೆಜ್ಜೆಯ ನ್ನಿಟ್ಟ. ಇಲ್ಲಿ ಒಂದು ಪುಟ್ಟ ಸಮಸ್ಯೆ ಎದುರಾಯಿತು. ಗುಂಡಿ ನಿಂದಾದ ಆಳವಾದ ಗಾಯದಲ್ಲಿ ಯಾವ ರಕ್ತನಾಳವು ಸೋರುತ್ತಿದೆ ಎನ್ನುವುದನ್ನು ಪತ್ತೆಹಚ್ಚಿ, ಅದನ್ನು ಹಿಡಿದುಕೊಂಡು ದಾರ ಕಟ್ಟುವುದು ಹೇಳುವಷ್ಟು ಸುಲಭದ ಕೆಲಸವಾಗಿರಲಿಲ್ಲ. ಹಾಗಾಗಿ ಬೆಕ್ ದ ಕಾರ್ಬಿನ್ ಎಂಬ ಇಕ್ಕಳವನ್ನು ರೂಪಿಸಿದ.

ಇದರ ಸಹಾಯದಿಂದ ಆಳವಾದ ಗಾಯದಲ್ಲಾಗುತ್ತಿದ್ದ ರಕ್ತಸ್ರಾವವನ್ನು ಗುರುತಿಸಿ, ಅದನ್ನು ಇಕ್ಕಳದಿಂದ ನಿಲ್ಲಿಸಿ, ಅದಕ್ಕೆ ದಾರವನ್ನು ಕಟ್ಟುವುದು ಸುಲಭವಾಯಿತು. ಮುಂದಿನ ದಿನಗಳಲ್ಲಿ ಪ್ಯಾರೆ ಇತರ ಹಲವು ರೀತಿಯ ಶಸ್ತ್ರವೈದ್ಯಕೀಯ ಉಪಕರಣಗಳನ್ನು ರೂಪಿಸಿದ.
ಅವುಗಳಲ್ಲಿ ಬೆಕ್ ದ ಗ್ರೂ ಹಾಗೂ ಬೆಕ್ ದ ಕೇನ್ ಮುಖ್ಯವಾದವು. ಗಾಯಗಳಿಗೆ ಹೊಲಿಗೆಯನ್ನು ಹಾಕುವ ತಂತ್ರಜ್ಞಾನವು ಗ್ಯಾಲನ್‌ನ ಕಾಲದಲ್ಲಿಯೇ ಅಸ್ತಿತ್ವದಲ್ಲಿತ್ತು ಎಂಬುದು ನಿಜ. ಆದರೆ ಅದರ ಮಹತ್ವವನ್ನು ಯಾರೂ ಮನಗಂಡಿರಲಿಲ್ಲ. ಪ್ಯಾರೆ, ಈ ಹಳೆಯ ತಂತ್ರ ಜ್ಞಾನವನ್ನು ಸಮಕಾಲೀನ ವೈದ್ಯಕೀಯದಲ್ಲಿ ಪರಿಣಾಮಕಾರಿಯಾಗಿ ಬಳಸಿದ. ಗಾಯಗಳನ್ನು ಹೊಲಿದು ಅವು ಬೇಗ ಮಾಯು ವಂತೆ ಮಾಡಿದ.

ಅಂದಿನ ದಿನಗಳಲ್ಲಿ ಕಪಾಲ ರಂಧ್ರನವನ್ನು (ಟ್ರೆಪಾನಿಂಗ್) ಮಾಡುತ್ತಿದ್ದರು. ಆದರೆ ಕಪಾಲದಲ್ಲಿ ರಂಧ್ರವನ್ನು ಕೊರೆಯಲು ಬಳಸುತ್ತಿದ್ದ ಭೈರಿಗೆಯು ಅತ್ಯಂತ ಸ್ಥೂಲವಾಗಿತ್ತು. ಅರೆಬರೆ ಎಚ್ಚರವಿದ್ದ ರೋಗಿಯ ತಲೆಯಲ್ಲಿ ರಂಧ್ರವನ್ನು ಕೊರೆಯುವುದು ಕಷ್ಟದ ಕೆಲಸವಾಗಿತ್ತು. ಹಾಗಾಗಿ ಪ್ಯಾರೆ ಮೂರು ಕಾಲುಗಳಿದ್ದ ಭೈರಿಗೆಯನ್ನು ರೂಪಿಸಿದ. ಭೈರಿಗೆಯ ಈ ಮೂರೂ ಕಾಲುಗಳು ಸ್ಥಿರವಾಗಿ ಇರಿಸಲು ಸಾಧ್ಯ ವಾಯಿತು. ಹಾಗಾಗಿ ಕಪಾಲ ರಂಧ್ರನವನ್ನು ಸುಲಭವಾಗಿ ಮಾಡಬಹುದಿತ್ತು.

ಅಂದಿನ ದಿನಗಳಲ್ಲಿ ಶಸವೈದ್ಯರು ಗಾಯಾಳುವಿನ ಒಳಾಂಗಗಳನ್ನು ಬೇಕಾಬಿಟ್ಟಿಯಾಗಿ ಎಳೆದಾಡುತ್ತಿದ್ದರು. ಪ್ಯಾರೆಯು ಶಸ್ತ್ರವೈದ್ಯರು ಯಾವುದೇ ರೀತಿಯ ಒರಟುತನವನ್ನು ತೋರದೆ, ಅತ್ಯಂತ ನಾಜೂಕಾಗಿ ಒಳಾಂಗಗಳನ್ನು ಮುಟ್ಟ ಬೇಕೆಂದ. ಅವನ್ನು ಎಷ್ಟು ಸೌಮ್ಯ ವಾಗಿ ಸಂಬಾಳಿಸುತ್ತೇವೆಯೋ, ಅಷ್ಟೇ ಬೇಗ ಗುಣವಾಗುತ್ತದೆ ಎನ್ನುವುದನ್ನು ಪ್ರಾಯೋಗಿಕವಾಗಿ ತೋರಿಸಿದ. ಅರಿವಳಿಕೆಯು ಇಲ್ಲದಿದ್ದ ದಿನಗಳಲ್ಲಿ, ಶಸಚಿಕಿತ್ಸೆಗೆ ಒಳಗಾದವರಿಗೆ ಸಾಕಷ್ಟು ಅಫೀಮನ್ನು ನೀಡಿ, ಅವರ ನೋವನ್ನು ಶಮನ ಮಾಡಿದ.

ಅಂದಿನ ದಿನಗಳಲ್ಲಿ ವೈದ್ಯರು ಒಬ್ಬ ರೋಗಿಗೆ ಒಂದು ಸಲ ಮಾತ್ರ ಚಿಕಿತ್ಸೆಯನ್ನು ನೀಡುತ್ತಿದ್ದರು. ಮತ್ತೆ ಅವನನ್ನು ನೋಡುತ್ತಿರಲಿಲ್ಲ. ಅಂತಹ ದಿನಗಳಲ್ಲಿ ರೋಗಿಗೆ ಪೂರ್ಣ ಉಪಶಮನವು ದೊರೆಯುವವರಿಗೂ, ಅವರನ್ನು ಮತ್ತೆ ಮತ್ತೆ ನೋಡಬೇಕು ಎನ್ನುವ ತತ್ತ್ವವನ್ನು ಪ್ಯಾರೆ ಜಾರಿಗೆ ತಂದ. ಅಂಗ ವಿಚ್ಛೇದನವನ್ನು ಮಾಡಿದ ಮೇಲೆ, ಅದಕ್ಕೆ ಕೃತಕ ಅಂಗವನ್ನು ಜೋಡಿಸುವ ತಂತ್ರವನ್ನು ಅಭಿವೃದ್ಧಿ ಪಡಿಸಿದ. ಚಿನ್ನ, ಬೆಳ್ಳಿ, ಗಾಜು, ಪಿಂಗಾಣಿಯನ್ನು ಬಳಸಿ ಕೃತಕ ಕಣ್ಣುಗಳನ್ನು ರೂಪಿಸಿದ.

ಅಂದಿನ ಪ್ಯಾರಿಸ್ ನಗರದಲ್ಲಿ ಸಂಭವಿಸುವ ಅಸಹಜ ಹಾಗೂ ಹಿಂಸಾತ್ಮಕ ಸಾವುಗಳ ವೈದ್ಯಕೀಯ ವರದಿಯನ್ನು ಸಿದ್ಧಪಡಿಸಿ, ರಾಜನಿಗೆ ಸಲ್ಲಿಸುತ್ತಿದ್ದ. ಇದು ಇಂದಿನ ನ್ಯಾಯವೈದ್ಯಕೀಯಕ್ಕೆ ಬುನಾದಿಯನ್ನು ಹಾಕಿತು. ಪ್ಯಾರೆ ಸಲ್ಲಿಸಿದ ಮರಣೋತ್ತರ ವೈದ್ಯಕೀಯ ವರದಿಯು ಇಂದಿಗೂ ನಮಗೆ ಮಾದರಿಯಾಗಿದೆ. ಗರ್ಭದಲ್ಲಿ ಅಡ್ಡಡ್ಡವಾಗಿ ಮಲಗಿರುವ ಮಗುವನ್ನು, ನವಿರಾಗಿ ನೀವಿ ನೀವಿ ಸಹಜ ಪ್ರಸವಕ್ಕೆ ಅನುವು
ಮಾಡುವ ಪಾದಾಗ್ರ ಪ್ರಸವ ತಂತ್ರವನ್ನು ಜನಪ್ರಿಯಗೊಳಿಸಿದ. (ಇಂದಿನ ದಿನಗಳಲ್ಲಿ ಇಷ್ಟೆಲ್ಲ ಕಷ್ಟ ಪಡುವುದಿಲ್ಲ.

ನೇರವಾಗಿ ಸಿಸೇರಿಯನ್ ಮಾಡಿಬಿಡುತ್ತಾರೆ) ಫ್ರಾನ್ಸಿನ ನಾಲ್ವರು ಚಕ್ರವರ್ತಿಗಳ ಖಾಸಾ ಕ್ಷೌರಿಕ ಶಸ್ತ್ರವೈದ್ಯನಾಗಿ ಸೇವೆ ಯನ್ನು ಸಲ್ಲಿಸಿ, ಅನೇಕ ವೈದ್ಯಕೀಯ ಗ್ರಂಥವನ್ನು ಫ್ರೆಂಚ್ ಭಾಷೆಯಲ್ಲಿ ಬರೆದ ಆಂಬ್ರೋಸ್ ಪ್ಯಾರೆಯನ್ನು ಆಧುನಿಕ ಶಸ್ತ್ರವೈದ್ಯಕೀಯದ ಪಿತಾಮಹರಲ್ಲಿ ಒಬ್ಬರು ಎಂದು ಕರೆಯಲು ಯಾವ ಅಡ್ಡಿಯೂ ಇಲ್ಲ.

error: Content is protected !!