Sunday, 8th September 2024

ತಾರೆ ಜಮೀನ್ ಪರ್‌-ಪ್ರತಿ ಮಗುವೂ ವಿಶೇಷ, ವಿಶಿಷ್ಟ, ವಿಭಿನ್ನ !

ಶ್ವೇತಪತ್ರ

shwethabc@gmail.com

ಎಸ್‌ಎಸ್‌ಎಲ್‌ಸಿ, ಪಿಯುಸಿ ಜೊತೆಗೆ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಗಳೆಲ್ಲವೂ ಹೊರ ಬಿದ್ದಾಗಿದೆ. ಇನ್ನು ಹೊಸ ಭರವಸೆ, ಹೊಸ ಆಶಯಗಳ ಜೊತೆಗೆ ಬದುಕನ್ನು ಕಟ್ಟಿಕೊಳ್ಳುವ ತಯಾರಿಯನ್ನು ನಾವೆಲ್ಲ ಮಾಡಿಕೊಳ್ಳಬೇಕಿದೆ.

ಮತದಾನದ ಎಣಿಕೆಗೆ ಚುನಾವಣಾ ಆಯೋಗ ಆಯ್ಕೆ ಮಾಡಿಕೊಂಡಿದ್ದ ಬೆಂಗಳೂರಿನ ನಾಲ್ಕು ಕಾಲೇಜುಗಳಲ್ಲಿ ನಮ್ಮದು ಒಂದಾಗಿದ್ದರಿಂದ ರಜೆ ಮುಗಿಸಿ ಕಾಲೇಜಿಗೆ ಸೋಮ ವಾರ ರಿಪೋರ್ಟ್ ಆದರೆ ಒಂದು ಕಿಲೋಮೀಟರ್ ನಷ್ಟು ಉದ್ದದ ಸರದಿ ಸಾಲನ್ನು ದಾಟಿ ಒಳ ಹೋಗಲು ಪ್ರಯಾಸವೇ ಪಡಬೇಕಾಯಿತು. ಪಿಯುಸಿ ಹಾಗೂ ಪದವಿ ತರಗತಿಗಳಿಗೆ ದಾಖಲಾಗಲು ಪೋಷಕ ರೊಡನೆ ವಿದ್ಯಾರ್ಥಿನಿಯರ ಸಮೂಹವೇ ಕಾಲೇಜಿನ ಕ್ಯಾಂಪಸ್ಸಿನ ತುಂಬಾ ನೆರೆದಿತ್ತು. ಭವಿಷ್ಯದ ಕನಸುಗಳನ್ನು ಹೊತ್ತು ಅದನ್ನು ಸಾಕಾರಗೊಳಿಸಿಕೊಳ್ಳುವ ತವಕ ಅವರೆಲ್ಲರ ಮುಖದಲ್ಲಿ ಇಣುಕಿದಂತಿತ್ತು.

ಇನ್ನೇನು ಕೆಲವೇ ದಿನಗಳಲ್ಲಿ ದಾಖಲಾತಿಗಳು ಮುಗಿದು, ತರಗತಿಗಳು ಪ್ರಾರಂಭಗೊಳ್ಳಲಿವೆ. ಕ್ಲಾಸ್ ರೂಮುಗಳು ಹಳೆಯವಾ ದರೂ ಹೊಸ ಜೀವನೋತ್ಸಾಹದೊಂದಿಗೆ ಹೊಸ ಮುಖಗಳು, ಹೊಸ ಮನಸ್ಸುಗಳು ನಮ್ಮಂತಹ ಮೇಷ್ಟ್ರು, ಮೇಡಮ್ಮು ಗಳನ್ನಂತೂ ಸದಾ ಹೊಸದಾಗಿರಿಸುವ ಯುವ ಪಡೆಕಾಲೇಜನ್ನು ಆವರಿಸುತ್ತದೆ. ಹದಿನಾಲ್ಕು ವರ್ಷಗಳ ನನ್ನ ಅಧ್ಯಾಪಕ ಅನುಭವದಲ್ಲಿ ಪ್ರತಿ ವಿದ್ಯಾರ್ಥಿನಿಯು ವಿಶೇಷ, ವಿಶಿಷ್ಟ, ವಿಭಿನ್ನ. ಆಲೋ ಚನೆ, ವಿವೇಚನೆ, ನಿರ್ಧಾರ ತೆಗೆದುಕೊಳ್ಳುವಿಕೆ, ಸಮಸ್ಯೆ ಬಗೆಹರಿಸುವಿಕೆ, ಸೃಜನಶೀಲತೆ, ಬುದ್ಧಿಮತ್ತೆ ಈ ಎಲ್ಲ ಸಂಜ್ಞಾನಾತ್ಮಕ ಕ್ರಿಯೆಗಳಲ್ಲೂ ಒಂದು ಮಗು ಮತ್ತೊಬ್ಬ ಮಗು ಮಗುವಿಗಿಂತ ಭಿನ್ನ. ಕಲಿಕಾ ನ್ಯೂನತೆ ಯುಳ್ಳ ನನ್ನ ಮೂವರು ಪಿಯುಸಿ ವಿದ್ಯಾರ್ಥಿನಿಯರು ಈ ವರ್ಷ ಪಾಸಾಗಿರುವುದು ವೈಯಕ್ತಿಕವಾಗಿ ನನಗೆ ಅತ್ಯಂತ ಸಂತಸದ ವಿಚಾರ.

೨೦೧೪ರಲ್ಲಿ ಹೀಗೆ ಕಲಿಕಾ ನ್ಯೂನತೆ ಇದ್ದ ವಿದ್ಯಾರ್ಥಿನಿ ಈ ಹೊತ್ತು ಗಗನಸಖಿಯಾಗಿದ್ದಾಳೆ. ಎಲ್ಲಾ ಸರಿಯಿದ್ದು ಸಾಧಿಸುವುದು ಒಂದೆಡೆಯಾದರೆ ಕಲಿಕಾ ನ್ಯೂನತೆ ಎಂಬ ದೋಷವನ್ನು ಹೆಗಲಿಗೊತ್ತು ಸಾಧಿಸುವುದು ಮತ್ತೊಂದೆಡೆ. ನಿಮಗೆಲ್ಲಾ ನೆನಪಿರ ಬಹುದು, ೨೦೦೭ರಲ್ಲಿ ಅಮೀರ್ ಖಾನ್ ಹಾಗೂ ಅಮೋಲ್ ಗುಪ್ತ ನಿರ್ದೇಶಿಸಿದ ತಾರೆ ಜಮೀನ್ ಪರ್ ಹೆಸರಿನ ಸಿನಿಮಾ
ಬಂದಿತ್ತು. ಈಶಾನ್ ಹೆಸರಿನ ಹುಡುಗ ಕಲಿಕಾ ನ್ಯೂನತೆಗೆ ಒಳಗಾಗಿ ಸ್ವತಃ ಪೋಷಕರು, ಶಿಕ್ಷಕರು, ಸಮಾಜದಿಂದ ಮೂದಲಿಕೆಗೆ ಒಳಗಾಗಿರುತ್ತಾನೆ. ಕೊನೆಗೆ ಆ ಹುಡುಗನನ್ನು ಹಾಸ್ಟೆಲ್‌ಗೆ ಸೇರಿಸಲಾಗುತ್ತದೆ. ಅಲ್ಲಿ ಅವನಿಗೆ ಸಿಗುವ ಆರ್ಟ್ ಟೀಚರ್ ನೆರವಿನಿಂದ ಆತ ಕಲಿಕಾ ನ್ಯೂನತೆಯನ್ನು ಗೆಲ್ಲುವ ಕಥೆ ಸಿನಿಮಾದ್ದು.

ಈ ಸಿನಿಮಾವನ್ನು ನಾನು ಪ್ರತಿ ವರ್ಷವೂ ಲರ್ನಿಂಗ್ (ಕಲಿಕೆ) ಪಾಠ ಮಾಡುವಾಗ ಮೊದಲನೆಯ ವರ್ಷದ ಪಿಯುಸಿ ವಿದ್ಯಾರ್ಥಿ ನಿಯರಿಗೆ ತಪ್ಪದೇ ಸ್ಕ್ರೀನ್ ಮಾಡುತ್ತೇನೆ. ಹೀಗೆ ಎರಡು ವರ್ಷಗಳ ಕೆಳಗಿರಬಹುದು. ನನ್ನ ಹಳೆಯ ವಿದ್ಯಾರ್ಥಿನಿ ಯೊಬ್ಬಳು ನನ್ನನ್ನು ಹುಡುಕಿಕೊಂಡು ಕಾಲೇಜಿಗೆ ಬಂದಿದ್ದಳು. ಆಕೆ ಮಾತನಾಡುತ್ತಾ ಹೇಳಿದ ಮಾತುಗಳಿನ್ನೂ ನನ್ನ ಮನಸ್ಸಿನ
ಆಳದಲ್ಲಿ ಹಸಿರಾಗಿದೆ. ಶ್ವೇತಾ ಮ್ಯಾಮ್ ನೀವು ತಾರೆ ಜಮೀನ್ ಪರ್ ಸಿನಿಮಾವನ್ನು ಕಾಲೇಜಿನಲ್ಲಿ ನಮಗೆ ಪಿಯುಸಿ ದಿನಗಳಲ್ಲಿ ತೋರಿಸಿದ್ದೀರಿ. ಎವೆರಿ ಚೈಲ್ಡ್ ಇಸ್ ಸ್ಪೆಷಲ್ ಎನ್ನುವ ಸಿನಿಮಾದಲ್ಲಿನ ಸಂದೇಶ ನನ್ನನ್ನು ತೀವ್ರವಾಗಿ ತಟ್ಟಿತ್ತು.

ಸಿನಿಮಾದಲ್ಲಿ ಬರುವ ಈಶಾನ್ ಹಾಗೂ ನಿಕುಂಬ್ ಎಂಬ ಎರಡು ಪಾತ್ರಗಳು ನನ್ನ ನಿಜ ಜೀವನಕ್ಕೂ ಅನ್ವಯಿಸುವಂತಿವೆ. ಸಿನಿಮಾದಲ್ಲಿ ನಿಕುಂಬ್ ಮೇಷ್ಟ್ರು ಒಂಬತ್ತು ವರ್ಷದ ಈಶಾನನ ಕಲಿಕಾ ನ್ಯೂನತೆಯನ್ನು ಅರ್ಥೈಸಿ ಆ ಪುಟ್ಟ ಹುಡುಗನಿಗೆ
ನೆರವಾಗುತ್ತಾರೆ. ನಾವೆಲ್ಲರೂ ಪೋಷಕರಾಗಿ ಶಿಕ್ಷಕರಾಗಿ ಮಕ್ಕಳಿನ ಕಲಿಕೆಗೆ ಸಂಬಂಧಪಟ್ಟ ನ್ಯೂನತೆಗಳನ್ನು ಅರಿಯ ಬೇಕಿರು ವುದು ನಮ್ಮ ಜವಾಬ್ದಾರಿ ಅಲ್ಲವೇ ಮೇಡಂ? ಈ ಸಿನಿಮಾ ನಮ್ಮೆಲ್ಲರ ಸಾಮಾಜಿಕ ಬದುಕಿಗೆ ಒಂದು ಸಂದೇಶ. ಒಂದೊಂದು ಮಗುವು ವಿಭಿನ್ನ. ಪನಿಶ್ಮೆಂಟುಗಳ ಹೆಸರಲ್ಲಿ ನಾವು ಅವರ ಒಳ ಮನಸನ್ನು ಘಾಸಿಗೊಳಿಸುತ್ತಿದ್ದೇವೆ.

ಪೋಷಕರು ಮಕ್ಕಳ ಸಾಮರ್ಥ್ಯದ ಕುರಿತು ಸರಿಯಾಗಿ ಅರಿಯದೆ ಭಾವನಾತ್ಮಕವಾಗಿ ಹಾಗೂ ಮಾನಸಿಕವಾಗಿ ಅವರನ್ನು ಕುಗ್ಗುವಂತೆ ಮಾಡುತ್ತಿದ್ದಾರೆ. ಪ್ರೀತಿ ಮತ್ತು ಸಹಾನುಭೂತಿಯನ್ನು ತುಂಬುವುದು ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಪೂರಕ ವಾಗಿರುತ್ತದೆ. ನನ್ನ ಬಾಲ್ಯದ ದಿನಗಳಲ್ಲಿ ನನಗೆ ನಿಕುಂಬ್ ತರಹದ ಗುರುಗಳು ಸಿಗಲಿಲ್ಲವೆಂಬ ಬೇಸರ ಈಗಲೂ ಇದೆ ಮೇಡಂ. ನಾನು ನನ್ನ ಬಾಲ್ಯದಲ್ಲಿ ನಾಚಿಕೆ ಸ್ವಭಾವದವಳಾಗಿದ್ದೆ, ಹೆಚ್ಚು ಮೌನವಾಗಿರುತ್ತಿದ್ದೆ. ಆದರೆ ಸಾಹಿತ್ಯದಲ್ಲಿ ನನಗೆ ಮೊದಲಿನಿ
ಂದಲೂ ಆಸಕ್ತಿ. ನನ್ನ ಪೋಷಕರು ಹಾಗೂ ಶಿಕ್ಷಕರು ನನ್ನನ್ನು ಅವಲೋಕಿಸಿ, ಸೋತರೆ ಗೇಲಿ ಮಾಡುತ್ತಿದ್ದರು.

ಬೈಗುಳಗಳ ಮಳೆಯನ್ನೇ ಸುರಿಸುತ್ತಿದ್ದರು. ಕಾಲೇಜಿಗೆ ಬಂದ ಮೇಲೆ ನನಗೆ ಈ ಸಿನಿಮಾ ನೋಡಲು ಸಾಧ್ಯವಾಗಿತ್ತು. ನೀವು ನನಗೆ ನಿಕುಂಬ್ ತರಹದ ಗುರುವಾದಿರಿ, ನನ್ನೊಳಗೆ ಭರವಸೆ ಮೂಡಿಸಿದಿರಿ. ನಿಧಾನವಾಗಿ ನಾನು ಆತ್ಮವಿಶ್ವಾಸ ಬೆಳೆಸಿಕೊಂಡೆ. ನಾನು ಈಗ ಒಬ್ಬ ಹೈಸ್ಕೂಲ್ ಟೀಚರ್ ಆಗಿದ್ದೇನೆ, ಕವಿತೆ ಬರೆಯುತ್ತೇನೆ, ಎಷ್ಟೋ ಮಕ್ಕಳ ಭವಿಷ್ಯ ಕಟ್ಟಿಕೊಟ್ಟಿದ್ದೇನೆ. ಚಿಕ್ಕವಯಸ್ಸಿನಲ್ಲಿ ಕೆಲಸಕ್ಕೆ ಬಾರದವಳು ಎಂಬ ತಾತ್ಸಾರಕ್ಕೆ ಗುರಿಯಾಗಿದ್ದ ನಾನು, ಇಂದು ಬೇರೆಯವರ ಬದುಕಲ್ಲಿ ಭರವಸೆ ಮೂಡಿಸುತ್ತಿದ್ದೇನೆ-ಆಕೆ ಮಾತನಾಡುತ್ತಾ ಹೋಗುತ್ತಿದ್ದಳು. ಅಚ್ಚರಿಯ ಸರದಿ ನನ್ನದಾಗಿತ್ತು.

ಹೊಸ ಕಲಿಕಾ ವರ್ಷದಲ್ಲಿ ನಾವಿದ್ದೇವೆ. ಎಲ್ಲಾ ಮಕ್ಕಳು ರ‍್ಯಾಂಕ್ ತೆಗೆಯಲು ಸಾಧ್ಯವಿಲ್ಲ. ಪೋಷಕರಾಗಿ, ಶಿಕ್ಷಕರಾಗಿ ನಾವು ಅರಿಯಬೇಕಿರುವ ಮುಖ್ಯ ವಿಚಾರವೆಂದರೆ ಕಲಿಕಾ ನ್ಯೂನತೆ ಎಂಬುದು ಮೆದುಳಿನ ಸಾಮರ್ಥ್ಯವನ್ನು ಅಡ್ಡಿಪಡಿಸುವ ಒಂದು ಅಶಕ್ತತೆ. ಮಗುವಿಗೆ ಓದಲು ಬರೆಯಲು ಮಾತನಾಡಲು, ವಿಷಯಗಳನ್ನು ಹಾಗೂ ಸಂಕೇತಗಳನ್ನು, ಗಣಿತದ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಲು ಕಷ್ಟವಾಗುವ ಒಂದು ವೈಕಲ್ಯ. ಡಿಸ್ ಕ್ಯಾಲ್ಕುಲಿಯ (ಗಣಿತದ ಸಮಸ್ಯೆ), ಡಿಸ್ ಗ್ರಾಫಿಯ (ಮಕ್ಕಳ ಕೈಬರಹ ಹಾಗೂ ಚಲನೆಯ ಕೌಶಲ್ಯದ ಸಮಸ್ಯೆ), ಡಿಸ್ಲೆಕ್ಸಿಯಾ (ಓದುವ ಬರೆಯುವ ಅರ್ಥೈಸುವ ಸಮಸ್ಯೆ), ಡಿಸ್ -ಕ್ಸಿಯ (ಸಮತೋಲನ ಭಾಷೆ ಹಾಗೂ ಮಾತಿನ ಸಮಸ್ಯೆ)-ಇವೆ ಮುಂತಾದವುಗಳು ಕಲಿಕಾ ನ್ಯೂನತೆಯ ಅನೇಕ ವಿಧಗಳಾಗಿವೆ.

ಈ ನ್ಯೂನತೆಗಳು ಮಕ್ಕಳಲ್ಲಿ ಹತಾಶೆಯನ್ನು, ಪೋಷಕರಲ್ಲಿ ಗೊಂದಲವನ್ನು, ಶಿಕ್ಷಕರಲ್ಲಿ ಸವಾಲಾಗಿಯೂ ಪರಿಣಮಿಸುತ್ತವೆ.
ಕಲಿಕಾ ನ್ಯೂನತೆಗೂ ಬುದ್ಧಿಶಕ್ತಿಗೂ ಯಾವುದೇ ಸಂಬಂಧವಿರುವುದಿಲ್ಲ. ಬದಲಿಗೆ ಕಲಿಕೆಯಲ್ಲಿ ವ್ಯತ್ಯಾಸಗಳು ಏಕೆ ಉಂಟಾಗುತ್ತ ವೆಂದರೆ ವ್ಯಕ್ತಿಯ ಮೆದುಳಿನ ನರಕೋಶದ ಸಂಪರ್ಕದಲ್ಲಿ ವ್ಯತ್ಯಾಸವಾದ ಕಾರಣಕ್ಕೆ ಎನ್ನುತ್ತದೆ ಸಂಶೋಧನೆ. ಜಗತ್ತಿನಲ್ಲಿ ಅತ್ಯಂತ ಯಶಸ್ವಿ ವ್ಯಕ್ತಿಗಳಿಗೂ ಕಲಿಕಾ ನ್ಯೂನತೆ ಇತ್ತು ಎನ್ನುತ್ತಾರೆ ಮನೋವಿಜ್ಞಾನಿಗಳು.

ಕಲಿಕಾ ನ್ಯೂನತೆಯ ಬಗ್ಗೆ ಹೆಚ್ಚು ತಿಳಿದುಕೊಂಡಂತೆಲ್ಲಾ ಅರೆ! ಚಿಕ್ಕ ವಯಸ್ಸಿನಲ್ಲಿ ಈ ತೆರನಾದ ಸಮಸ್ಯೆ ನಮಗೂ ಇತ್ತು ಎಂದು ಭಾಸವಾಗುತ್ತದೆ. ನನ್ನ ಅನುಭವಕ್ಕೆ ಬಂದಂತೆ ಓದಲು ಬರೆಯಲು ಗಣಿತವನ್ನು ಅರ್ಥೈಸಲು ಸಾಧ್ಯವಾಗದಿರುವುದು ಕಲಿಕಾ ನ್ಯೂನತೆಯಲ್ಲಿ ಕಂಡುಬರುವ ಅತಿ ಹೆಚ್ಚಿನ ಸಮಸ್ಯೆಯಾಗಿದೆ. ಉದಾಹರಣೆಗೆ ಹೇಳುವುದಾದರೆ I ಅಕ್ಷರವನ್ನು U ಅಕ್ಷರವೆಂದು ಬರೆಯುವುದು ಈ ಅಕ್ಷರವನ್ನು ಆ ಅಕ್ಷರವೆಂದು ಓದುವುದು-ಹೀಗೆ ಇನ್ನು ಗಣಿತದ ವಿಷಯಕ್ಕೆ ಬಂದರೆ ನನ್ನನ್ನು ಒಳಗೊಂಡಂತೆ ಅನೇಕರಿಗೆ ಅದು ಕಬ್ಬಿಣದ ಕಡಲೆ.

ಸಂಖ್ಯೆಗಳನ್ನು, ಚಿಹ್ನೆಗಳನ್ನು ನೋಡುತ್ತಿದ್ದರೆ ಅಯೋಮಯವೆನಿಸ ತೊಡಗುತ್ತದೆ. ನೀವು ನಂಬಲಿಕ್ಕೆ ಇಲ್ಲ ನನ್ನ ಮಗಳ ಸಿಬಿಎಸ್‌ಸಿ ಪಠ್ಯಕ್ರಮದ ಐದನೆಯ ತರಗತಿಯ ಗಣಿತದ ಪಾಠಗಳನ್ನು ಆಕೆಗೆ ಹೇಳಿಕೊಡಲು ನನ್ನಿಂದ ಅಸಾಧ್ಯ. ನನಗೆ ನಂಬರ‍್ಸ್ ಎಂದರೆ ಭಯ, ಒಂಥರಾ – ಬಿಯ. ೨೦೧೭ರ ನ್ಯಾಷನಲ್ ಸೆಂಟರ್ ಫಾರ್ ಲರ್ನಿಂಗ್ ಡಿಸೆಬಿಲಿಟಿಯ ವರದಿಯನ್ನು ನೋಡುತ್ತಿದ್ದೆ. ಆ ವರದಿಯ ಪ್ರಕಾರ ಪ್ರತಿ ಐದು ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಕಲಿಕಾ ನ್ಯೂನತೆಯನ್ನು ಶಾಲೆಗಳಲ್ಲಿ, ಕ್ಲಾಸ್ ರೂಮಿನಲ್ಲಿ ಅನುಭವಿಸುತ್ತಿದ್ದಾನೆ. ಹೀಗಿದ್ದು ೧೬ ಜನರಲ್ಲಿ ಕೇವಲ ಒಬ್ಬ ವಿದ್ಯಾರ್ಥಿಯನ್ನು ಮಾತ್ರ ನಾವೆಲ್ಲ ವೃತ್ತಿಪರವಾಗಿ ಕಲಿಕಾ ನ್ಯೂನತೆಯುಳ್ಳವರು ಎಂದು ಗುರುತಿಸಲು ಸಾಧ್ಯವಾಗುತ್ತಿರುವುದು.

ಮಿಕ್ಕಂತೆ ಪೋಷಕರ, ಶಿಕ್ಷಕರ, ಸಮಾಜದ ಅಸಡ್ಡೆತನದಿಂದ ಮಕ್ಕಳಲ್ಲಿ ಈ ನ್ಯೂನತೆಯನ್ನು ಗುರುತಿಸಲು ಸಾಧ್ಯವೇ ಆಗುತ್ತಿಲ್ಲ. ನನ್ನ ಅಧ್ಯಾಪಕ ಅನುಭವದಲ್ಲಿ ಹೇಳುವುದಾದರೆ ಕಲಿಕಾ ನ್ಯೂನತೆಯುಳ್ಳ ಮಕ್ಕಳಿಗೂ ಮಿಕ್ಕ ಸಾಮಾನ್ಯ ವಿದ್ಯಾರ್ಥಿಗಳಿಗೂ ಭೌತಿಕವಾಗಿ ಯಾವುದೇ ವ್ಯತ್ಯಾಸಗಳಿರುವುದಿಲ್ಲ. ಆದರೆ ಮಾನಸಿಕವಾಗಿ ಹಲವಾರು ವ್ಯತ್ಯಾಸಗಳನ್ನು ಕಾಣಬಹುದು. ಏಕಾಗ್ರತೆ ಕೊರತೆ, ನೆನಪಿನ ಶಕ್ತಿಯ ಅಡಚಣೆ, ಗ್ರಹಿಕೆಯ ಅಸಾಮರ್ಥ್ಯತೆ, ಭಾಷಾ ತೊಡಕು, ವ್ಯವಸ್ಥಿತವಾಗಿ ಆಲೋಚಿಸಲು ಸಾಧ್ಯವಾಗದಿ
ರುವುದು-ಹೀಗೆ ಇಲ್ಲಿ ನಾವೆಲ್ಲ ಬಹುಮುಖ್ಯವಾಗಿ ತಿಳಿಯ ಬೇಕಿರುವುದು, ಇದು ನ್ಯೂನತೆಯೇ ಹೊರತು ಅಸ್ವಸ್ಥತೆಯಲ್ಲ ಅಥವಾ ಇದರಿಂದ ಬಹಳ ದೊಡ್ಡ ಸಮಸ್ಯೆ ಏನೋ ಉಂಟಾಗಿ ಬಿಡುವುದಿಲ್ಲ.

ಓದು ಬರಹದ ಸಾಮರ್ಥ್ಯ ಬೇರೆ ಮಕ್ಕಳಿಗೆ ಹೋಲಿಸಿದರೆ ವ್ಯತ್ಯಾಸವಾಗಬಹುದು. ನಮ್ಮ ಮಕ್ಕಳಿಗೇನಾದರೂ ಓದುವ ಹಾಗೂ ಬರೆಯುವ ಅಥವಾ ನಿರ್ದಿಷ್ಟ ವಿಷಯವನ್ನು ಅರ್ಥೈಸುವ ಸಾಮರ್ಥ್ಯದಲ್ಲಿ ನ್ಯೂನತೆ ಇದೆಯೇ ಅದನ್ನು ಗುರುತಿಸಬೇಕಾಗು ತ್ತದೆ. ಹೀಗೆ ಗುರುತಿಸಿದ ಮಕ್ಕಳಿಗೆ ಪೋಷಕರ ಶಿಕ್ಷಕರ ಹಾಗೂ ವೃತ್ತಿಪರರ ಸರಿಯಾದ ಮಾರ್ಗದರ್ಶನ ದೊರೆತರೆ ಅವರೊಳಗೆ ಉತ್ತಮವಾದ ಆತ್ಮಸ್ಥೈರ್ಯವನ್ನು ಕಟ್ಟಿಕೊಡಬಹುದು. ಹೀಯಾಳಿಕೆ ಮೂದಲಿಕೆಗೆ ಒಳಗಾದ ಮಕ್ಕಳಲ್ಲಿ ಆತಂಕ ಖಿನ್ನತೆಗಳು ಮೂಡಿಬಿಡಬಹುದು. ನಾವೆಲ್ಲ ಸಾಮಾಜಿಕವಾಗಿ ಹೆಚ್ಚು ಸಂವೇದನಾಶೀಲರಾಗಬೇಕು, ಮಕ್ಕಳ ಮನಸ್ಸನ್ನು ಅರಿಯುವ ಮ್ಯಾಜಿಶಿಯನ್‌ಗಳಾಗ ಬೇಕು. ನೆನಪಿರಲಿ, ಇದೊಂದು ಮಾನಸಿಕ ಅಸ್ವಸ್ಥತೆಯಲ್ಲ.

ಇದಕ್ಕೆ ಬೇಕಾಗಿರುವುದು ತಾತ್ಸಾರವಲ್ಲ, ಬದಲಿಗೆ ಪ್ರೀತಿ ಮತ್ತು ಸಹಾನುಭೂತಿ. ಹೊಸ ಕನಸುಗಳನ್ನು ಹೊತ್ತು ಶಾಲಾ-ಕಾಲೇಜು ಮೆಟ್ಟಿಲೇರುತ್ತಿರುವ ವಿದ್ಯಾರ್ಥಿಗಳೇ, ಅವರ ಪೋಷಕರೇ ಗಮನಿಸಿ ಆಲ್ಬರ್ಟ್ ಐನ್‌ಸ್ಟೀನ್, ಥಾಮಸ್ ಆಲ್ವಾ ಎಡಿಸನ್, ಅಭಿಷೇಕ್ ಬಚ್ಚನ್ ಎಲ್ಲರೂ ಬಾಲ್ಯದಲ್ಲಿ ಕಲಿಕಾ ನ್ಯೂನತೆಯನ್ನು ಹೊಂದಿದ್ದವರೇ. ಆದರಿಂದು ಅವರು ಆಕಾಶದಲ್ಲಿ ನಕ್ಷತ್ರಗಳಾಗಿ ಮಿಂಚುತ್ತಿದ್ದಾರೆ. ನಿಮ್ಮಲ್ಲೂ ಆ ನ್ಯೂನತೆ ಇದ್ದರೆ ನೀವು ಎಲ್ಲರಿಗಿಂತ ವಿಭಿನ್ನ, ವಿಶಿಷ್ಟ, ವಿಶೇಷ!

error: Content is protected !!