Sunday, 23rd June 2024

ಅಪಘಾತ ಪ್ರಕರಣಗಳ ಸಂಖ್ಯೆ ತಗ್ಗಿಸಬೇಕಿದೆ

ರಾಜ್ಯದಲ್ಲಿ ನಿತ್ಯ ಒಂದಿಲ್ಲೊಂದು ಕಡೆ ಭೀಕರ ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇವೆ. ೨೦೨೩-೨೪ನೇ ಸಾಲಿನ ಮೊದಲಾರ್ಧದಲ್ಲಿ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ೫,೮೩೦ ಜನ ಮೃತಪಟ್ಟಿದ್ದಾರೆ. ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಬೆಂಗಳೂರು ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ ಎನ್ನುವುದು ಕಳವಳಕಾರಿ. ಈ ರಸ್ತೆ ಅಪಘಾತಗಳಿಗೆ ಪ್ರಮುಖವಾಗಿ ಎರಡು ಕಾರಣಗಳನ್ನು ಗಮನಿಸಬಹುದು, ಮೊದಲನೇಯದು ರಸ್ತೆ ಅವ್ಯವಸ್ಥೆ, ಎರಡನೇಯದು ಚಾಲಕರ ಪ್ರಮಾದ. ಕಳಪೆ ಹಾಗೂ ಅವೈಜ್ಞಾನಿಕ ರಸ್ತೆ ಉಬ್ಬುಗಳು, ರಸ್ತೆ ವಿಭಜಕಗಳು ಹಾಗೂ ಗುಂಡಿಗಳು, ರಾತ್ರೋರಾತ್ರಿ ನಿರ್ಮಿಸಿ ಪಟ್ಟಿ ಬಳಿಯದೇ ಹೋದ ಹಂಪ್‌ನಿಂದಾಗಿ ದ್ವಿಚಕ್ರ ವಾಹನ ಸವಾರರು ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ವರದಿಗಳು ದಾಖಲಾಗುತ್ತಲೇ ಇವೆ. ರಸ್ತೆ ತೆರಿಗೆ, ವಾಹನ ತೆರಿಗೆಗಳನ್ನು ವಸೂಲು ಮಾಡುವ ಸರಕಾರವು ರಸ್ತೆಗಳ ಸುರಕ್ಷತೆ, ವೈಜ್ಞಾನಿಕ ವಿನ್ಯಾಸದ ಕಡೆಗೆ ಗಮನ ಹರಿಸಿ ಪ್ರಯಾಣಿಕರ ಜೀವರಕ್ಷಣೆ ಮಾಡಬೇಕು. ವಾಹನ ಸವಾರರು ವೈಯಕ್ತಿಕವಾಗಿಯೂ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ತಡರಾತ್ರಿಯ ನಂತರ ಡ್ರೈವ್ ಮಾಡುವುದು ಅಪಾಯಕರ ಎಂಬುದನ್ನು ತಿಳಿದುಕೊಳ್ಳಬೇಕು. ತಮ್ಮ ವಾಹನ ಚಾಲನೆಗೆ ಸುರಕ್ಷಿತವೇ ಎಂದು ಖಚಿತಪಡಿಸಿಕೊಳ್ಳದೆ ರಸ್ತೆಗಿಳಿಯಬಾರದು. ರಸ್ತೆ ಅಪಘಾತಗಳಿಗೆ ಮತ್ತೊಂದು ಪ್ರಮುಖ ಕಾರಣ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು. ವಾಹನ ಚಾಲನೆಗೆ ಹೆಚ್ಚಿನ ಏಕಾಗ್ರತೆ ಮತ್ತು ತ್ವರಿತ ಪ್ರತಿಕ್ರಿಯೆಗಳ ಅಗತ್ಯವಿರುತ್ತದೆ. ಆಲ್ಕೋಹಾಲ್ ಸೇವನೆ ನಮ್ಮ ಇಂದ್ರಿಯಗಳನ್ನು ಮಂದಗೊಳಿಸಿ ಅರಿವಿನ ಸಾಮರ್ಥ್ಯಗಳನ್ನು ಕಡಿಮೆಗೊಳಿಸುತ್ತದೆ. ಇದು ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗುತ್ತದೆ. ಇತ್ತೀಚೆಗೆ ಸೇರ್ಪಡೆಯಾಗಿರುವ ಹೊಸ ಪ್ರಮುಖ ಕಾರಣ ಎಂದರೆ ರಸ್ತೆ ಮೇಲಿರಬೇಕಾದ ಗಮನ ಮೊಬೈಲ್ ಫೋನ್ ಮೇಲಿರುವುದು. ಇವೆಲ್ಲ ವಾಹನ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದರಿಂದ ಅಪಘಾತ ಸಂಭವಿಸಿ ಜೀವಹಾನಿ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುತ್ತಿದೆ. ಕಾರಿನಲ್ಲಿ ಸೀಟ್ ಬೆಲ್ಟ, ಬೈಕ್‌ನಲ್ಲಿ ಹೆಲ್ಮೆಟ್‌ಗಳು ಚಾಲಕ ಮತ್ತು ಸವಾರರನ್ನು ಅಪಘಾತಗಳಿಂದ ರಕ್ಷಿಸಲೆಂದೇ ಉದ್ದೇಶಿಸಿ ಇಡಲಾಗಿದೆ ಹಾಗೂ ಅವು ಕಡ್ಡಾಯವಾಗಿದ್ದರೂ ಹಲವರು ಬಳಸುತ್ತಿಲ್ಲ. ಆದ್ದರಿಂದ ಅಪಘಾತಗಳನ್ನು ತಡೆಯುವಲ್ಲಿ ಸರಕಾರ ಮತ್ತು ವಾಹನ ಸವಾರರ ಪಾತ್ರ ಬಹಳಷ್ಟಿದೆ.

Leave a Reply

Your email address will not be published. Required fields are marked *

error: Content is protected !!