Friday, 22nd November 2024

ಸತ್ತವರನ್ನು ಹೊಗಳುವುದೇನೂ ತಪ್ಪಲ್ಲ, ಆದರೆ ಅದರಿಂದ ಸತ್ತವರಿಗೇ ಅವಮಾನವಾಗಬಾರದು!

ಗೌರಿ ಲಂಕೇಶ್ ಕೊಲೆಯಾಗಿ ಮೊನ್ನೆ ಸೆಪ್ಟೆಂಬರ್ ೫ಕ್ಕೆ ಆರು ವರ್ಷಗಳಾದವು. ಪತ್ರಕರ್ತೆಯಾಗಿ ಅಥವಾ ವ್ಯಕ್ತಿಯಾಗಿ ಗೌರಿಯ ನಿಲುವುಗಳೇನೇ ಇರಲಿ, ಅವಳು ಕೊಲೆಯಾಗುವಂಥ ಹೇಯ ಕೃತ್ಯಗಳನ್ನು ಮಾಡಿರಲಿಲ್ಲ. ಅದಕ್ಕೆ ಅವಳು ಯೋಗ್ಯಳಾಗಿರಲಿಲ್ಲ. ಹೀಗಾಗಿ ಅವಳ ಕೊಲೆಯನ್ನು ಮತ್ತು ಕೊಲೆ ಮಾಡಿದವರನ್ನು ಖಂಡಿಸಲೇಬೇಕಾಗುತ್ತದೆ. ವಾಸ್ತವದಲ್ಲಿ, ಗುಂಡು ಹೊಡೆದು ಸಾಯಿಸುವಂಥ ಯಾವ ಅಪರಾಧವನ್ನೂ ಅವಳು ಮಾಡಿರಲಿಲ್ಲ. ಅವಳ ವಿಚಾರ(?)ವನ್ನಾಗಲಿ, ಅವಳ ಪತ್ರಿಕೆಯನ್ನಾಗಲಿ, ರಾಜ್ಯದ ಜನತೆ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಅಷ್ಟಕ್ಕೂ ಕೊಲೆಯಾಗುವ ಸಂದರ್ಭದಲ್ಲಿ ಅವಳ ಪತ್ರಿಕೆ
(ಲಂಕೇಶ ಪುತ್ರಿಕೆ ಎಂದೂ ತಮಾಷೆ ಮಾಡುತ್ತಿದ್ದರು) ಅರೆಜೀವವಾಗಿತ್ತು. ಈ ಸಂಗತಿಯನ್ನು ‘ದ ಕ್ಯಾಪಿಟಲ್: ಲಂಕೇಶ್ ಪ್ರೈವೇಟ್ ಲಿಮಿಟೆಡ್’ ಪುಸ್ತಕದಲ್ಲಿ (ಐಬಿಎಚ್ ಪ್ರಕಾಶನ, ಪುಟ-೨೩೯) ಅದನ್ನು ಬರೆದ ಎನ್.ಕೆ.ಮೋಹನ್ ರಾಮ್ ಕೂಡ ದೃಢಪಡಿಸಿದ್ದಾರೆ, ಇರಲಿ. ಪತ್ರಕರ್ತರ ವಲಯದಲ್ಲಿ ಅವಳನ್ನು ಯಾರೂ ಗಂಭೀರ ಪತ್ರಕರ್ತೆ ಅಥವಾ ಪತ್ರಿಕೋದ್ಯಮಿ ಎಂದು ಪರಿಗಣಿಸಿರಲಿಲ್ಲ.

ಪ್ರಗತಿಪರರ ವಲಯದಲ್ಲೂ ಹಾಗೇ. ಅಸಲಿಗೆ ಅವಳ ಹತ್ತಿರ ಹತ್ತು ನಿಮಿಷ ಮಾತಾಡುವ ಸರಕಿರಲಿಲ್ಲ. ತುಸು ವೇಗದ, ತುಂಡು-ತುಂಡು ವಾಕ್ಯಗಳಿಂದ ಅವಳು ಹೇಳಿದ್ದು ಅರ್ಥ ವಾಗುತ್ತಿರಲಿಲ್ಲ. ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟರೂ ಕೊನೆಯಲ್ಲಿ ಉಳಿಯುತ್ತಿದ್ದುದು ಗೊಂದಲವೇ. ಕರ್ನಾಟಕದ ಸಾಹಿತ್ಯ, ಪತ್ರಿಕೋದ್ಯಮ, ಸಾಂಸ್ಕೃತಿಕ ಮತ್ತು ವೈಚಾರಿಕ ಲೋಕದಲ್ಲಿ ಅವಳಿಗೆ ಮನ್ನಣೆಯಿರಲಿಲ್ಲ. ಲಂಕೇಶರು ಪತ್ರಿಕೆ  ಆರಂಭಿಸಿ ಜನಪ್ರಿಯರಾಗುವ ತನಕ, ಅವಳ ಹೆಸರು ದಾಖಲೆಯಲ್ಲಿ ಪಿ.ಎಲ್.ಗೌರಿ ಎಂದಿತ್ತು. ದಿಲ್ಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್‌ನಲ್ಲಿ ಓದಿದ ಬಳಿಕ ‘ಟೈಮ್ಸ್ ಆಫ್ ಇಂಡಿಯ’ ಪತ್ರಿಕೆ ಸೇರಿಕೊಂಡಾಗ ಗೌರಿ ಲಂಕೇಶ್ ಆದದ್ದು. ಲಂಕೇಶ್ ಎಂಬ ಬಾಲಂಗೋಚಿ ಇಲ್ಲದಿದ್ದರೆ ಅವಳು ಬರೀ ಗೌರಿ. ಅವಳಿಗೆ ಬರವಣಿಗೆಯೂ ಇರಲಿಲ್ಲ. ಮಾತೂ ಇರಲಿಲ್ಲ. ಹೇಳಿಕೊಳ್ಳುವಂಥ ಆಕರ್ಷಕ ವ್ಯಕ್ತಿತ್ವವೂ ಅವಳದ್ದಾಗಿರಲಿಲ್ಲ. ಮೋಹನ್ ರಾಮ್ ಹೇಳುವಂತೆ, ಗೌರಿ ಮಾಧ್ಯಮ ವರ್ಗಗಳ ಸೂತ್ರಗಳನ್ನು ಧಿಕ್ಕರಿಸಿದ ಹೆಣ್ಣು, ಪ್ರೆಸ್ ಕ್ಲಬ್‌ನಲ್ಲಿ ಆ ದಿನಗಳಲ್ಲಿ ಬಹಿರಂಗ ಸಿಗರೇಟು ಸೇದುತ್ತಾ, ರಮ್ ಕುಡಿಯುತ್ತಿದ್ದ ಮೊದಲ, ಸಾಮಾನ್ಯ ಪತ್ರಕರ್ತೆ. ಕರ್ನಾಟಕದ ಜನಮಾನಸದ ಮೇಲೆ ಅವಳ ಭಾವ, ಪ್ರಭಾವ ಏನೂ ಇರಲಿಲ್ಲ. ತನ್ನದೇ ನಿಲುವು, ವಾದ, ತರ್ಕವನ್ನು ಬರಹದಲ್ಲಾಗಲಿ, ಭಾಷಣದಲ್ಲಾಗಲಿ ಅತ್ಯಂತ ಪ್ರಭಾವಯುತವಾಗಿ, ಪರಿಣಾಮಕಾರಿಯಾಗಿ ಮಂಡಿಸುವ ಕಲೆಗಾರಿಕೆಯೂ ಅವಳಿಗಿರಲಿಲ್ಲ.

ಹೀಗಿರುವಾಗ ಅವಳನ್ನು ಯಾವನೋ ತಲೆ ಮಾಸಿದ, ದುರುಳ ಕೊಲೆ ಮಾಡಿಬಿಟ್ಟ. ಯಾವ ಕೋನದಿಂದ ನೋಡಿದರೂ ಅವಳು ಕೊಲೆಯಾಗುವುದಕ್ಕೆ ಅರ್ಹಳಾಗಿರಲಿಲ್ಲ. ಅಂಥ ಯಾವ ‘ಘನಂಧಾರಿತ್ವ’ ಅವಳಿಗಿರಲಿಲ್ಲ. ಅದೊಂದು ಅತ್ಯಂತ ಹೇಡಿಕೃತ್ಯ. ಇದು ನಿಜಕ್ಕೂ ಅಕ್ಷಮ್ಯ ಮತ್ತು ಖಂಡನಾರ್ಹ. ಗೌರಿ ಕೊಲೆಯಾದಾಗ, ನಾನು ಬರೆದ ಲೇಖನವೊಂದಕ್ಕೆ, ‘ಆಕೆ ಗುಂಡಿಗೆ ಬಲಿಯಾಗದೇ ಗುಂಡು ಹಾಕಿ ಬಲಿಯಾಗಿದ್ದರೆ ಸಿಂಗಲ್ ಕಾಲಂ ಸುದ್ದಿಯಾಗುತ್ತಿದ್ದಳು!’ ಎಂದು ಹೆಡ್‌ಲೈನ್ ಹಾಕಿದ್ದೆ. ಈ ಹೆಡ್‌ಲೈನ್ ಸಾಲಿಗೆ ನಾನು ಇಂದಿಗೂ ಬದ್ಧನಾಗಿದ್ದೇನೆ. ಕಾರಣ ಇಷ್ಟೇ, ಕೊಲೆಯಾಗುವುದಕ್ಕಿಂತ ಆರು ತಿಂಗಳ ಮುಂಚೆ, ಗೌರಿ ನನಗೆ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದಳು. ಆಗ ನನಗೆ ಅವಳ ಗುರುತು ಹಿಡಿಯಲು ಆಗಿರಲಿಲ್ಲ. ಆ ಪ್ರಮಾಣದಲ್ಲಿ ಅವಳು ಸೊರಗಿ ಹೋಗಿದ್ದಳು. ಅವಳನ್ನು ನೋಡಿದ ನನ್ನ ಸ್ನೇಹಿತರು, ‘ಸಿಗರೇಟು ಮತ್ತು ಗುಂಡು ಇವಳನ್ನು ಬಲಿ ತೆಗೆದುಕೊಳ್ಳುವಂತೆ ಕಾಣುತ್ತದೆ, ಇವಳು ಹೆಚ್ಚು ದಿನ ಬದುಕುವುದು ಡೌಟು’ ಎಂದು ಹೇಳಿದ್ದರು.

ಒಂದು ವೇಳೆ ಹಾಗೆ (ಗುಂಡು ಹಾಕಿ) ನಿಧನಳಾಗಿದ್ದರೆ, ಪತ್ರಿಕೋದ್ಯಮದ ಪರಿಭಾಷೆಯಲ್ಲಿ ಸಿಂಗಲ್ ಕಾಲಂ ಸುದ್ದಿಯಾಗುತ್ತಿದ್ದಳು ಅಷ್ಟೇ. ಆದರೆ ಯಾವನೋ ಪಾತಕಿ ಗುಂಡು ಹೊಡೆದು ಸಾಯಿಸಿಬಿಟ್ಟ. ಗೌರಿ ಹಠಾತ್ ಹುತಾತ್ಮಳಾದಳು, ಮಹಾನ್ ಮಾನವತಾ ವಾದಿಯಾಗಿಬಿಟ್ಟಳು! ಈಗಲೂ ಗೌರಿಯನ್ನು ದಮನಿತರ ಧ್ವನಿ, ಮಹಾನ್ ಚೇತನ, ಅಪ್ರತಿಮ ಜೀವಪರ ವ್ಯಕ್ತಿ, ದಿಟ್ಟ ಪತ್ರಕರ್ತೆ, ರಾಜಿಮಾಡಿಕೊಳ್ಳದ ಧೀರ ಪತ್ರಕರ್ತೆ, ಕೋಮು ಸಾಮರಸ್ಯ ಮೂಡಿಸಿದ ಜೀವಪ್ರೇಮಿ ಎಂದೆಲ್ಲ ಹೊಗಳುವುದುಂಟು. ಅವಳ ಕೊಲೆಗೆ ಖೇದವಿದೆ, ಅನುಕಂಪ-ಸಹಾನುಭೂತಿಯಿದೆ. ಆದರೆ ಅವಳ ಕೊಲೆ ನಂತರ ಅವಳನ್ನು ವಾಚಾಮ-ಗೋಚರ ಹೊಗಳುವುದನ್ನು ಕೇಳಿದರೆ, ನೋಡಿದರೆ, ಕೆಲವರು ಗೌರಿಯ ಗೋರಿಯನ್ನೇ ತಮ್ಮ ಅಸ್ತಿತ್ವ, ಆಶ್ರಯದ ಚಪ್ಪಡಿಯನ್ನಾಗಿ ಮಾಡಿಕೊಂಡಿದ್ದಾರಾ, ಗೌರಿಯ ಹೆಸರು ಹೇಳಿಕೊಂಡು ತಮ್ಮ ಇರುವಿಕೆಯನ್ನು ಸಾಬೀತುಮಾಡಲು ಹೆಣಗುತ್ತಿದ್ದಾರಾ, ಆ ಮೂಲಕ ಅವಳಿಗೆ ಅವಮಾನ ಮಾಡುತ್ತಿದ್ದಾರಾ, ಅವಳನ್ನು ಹೀಗಳೆದು ಅಪಹಾಸ್ಯ ಮಾಡುತ್ತಿದ್ದಾರಾ, ಅವಳದಲ್ಲದ ವ್ಯಕ್ತಿತ್ವವನ್ನು ಸ್ತುತಿಸಿ, ಪಠಿಸಿ, ಅವಳನ್ನು ಕುಹಕ ಮಾಡುತ್ತಿದ್ದಾರಾ ಎಂಬ ಸಂದೇಹ ಬರುತ್ತದೆ. ಕಾರಣ ಗೌರಿ ಇವ್ಯಾವುದೂ ಆಗಿರಲಿಲ್ಲ.

ಇಷ್ಟೇ ಅಲ್ಲ, ಗೌರಿಯ ಹೆಸರಿನಲ್ಲಿ ತಮ್ಮತನವನ್ನು ಉಳಿಸಿಕೊಳ್ಳಲು ಇವರೆಲ್ಲ ಅವಳನ್ನು ಆ ಪರಿ ಹೊಗಳುತ್ತಿದ್ದಾರಾ, ಆ ಮೂಲಕ ಅವಳಿಗೆ ದ್ರೋಹ ಬಗೆಯುತ್ತಿದ್ದಾರಾ ಎಂದೆನಿಸದೇ ಇರದು. ಅಪಾತ್ರರನ್ನು ಅವರದಲ್ಲದ ಗುಣಗಳಿಂದ ಪ್ರಶಂಸಿಸುವುದೂ ಸಹ ನಿಂದನೆಯ ವರಸೆಯೇ. ಒಂದು ವೇಳೆ ದಾವೂದ್ ಇಬ್ರಾಹಿಂನನ್ನು ಮಹಾನ್ ಮಾನವತಾವಾದಿ ಎಂದು ಹೊಗಳಿದರೆ, ನಿಜವಾದ ಮಾನವತಾವಾದಿಗಳ ಕತೆ
ಯೇನಾಗಬೇಕು? ಅದು ಅವರಿಗೆ ಎಸಗುವ ಅಪಚಾರ ವಲ್ಲವೇ? ಗೌರಿ ವಿಷಯದಲ್ಲಾಗಿರುವುದೂ ಅದೇ. ಆಕೆ ಕೊಲೆಯಾದ ಬಳಿಕ, ಅವಳನ್ನು ಇಲ್ಲದ ಗುಣಗಳಿಂದ ಹೊಗಳಿ, ಆಕೆಯ ವ್ಯಕ್ತಿತ್ವವನ್ನು ವೃಥಾ ಎತ್ತರಕ್ಕೇರಿಸುವ ಒಂದಷ್ಟು ಜನರ ಹಪಾಹಪಿ, ಹುನ್ನಾರ, ಆಕೆಯ ಅಸಲಿ ವ್ಯಕ್ತಿತ್ವಕ್ಕೆಸಗಿದ ಘೋರ ಅನ್ಯಾಯ. ಮಿಥ್ಯ ಸಂಕೇತ ಅಥವಾ ಪ್ರತಿಮೆಯ ಆರಾಧನೆ ಕೂಡ ಅಸಹನೀಯ ಎಂಬ ಸಾತ್ವಿಕ ಪ್ರಜ್ಞೆ ಕೂಡ ಇಂಥ
ಹುಚ್ಚಾಟಗಳನ್ನು ಸಹಿಸಿಕೊಳ್ಳುವುದಿಲ್ಲ. ಒಂದು ವೇಳೆ ಬೇರೆಯವರ ವಿಷಯದಲ್ಲಿ ಹೀಗೆ ಮಾಡಿದ್ದಿದ್ದರೆ ಸ್ವತಃ ಗೌರಿಯೇ ಇದನ್ನು ಸಹಿಸಿಕೊಳ್ಳುತ್ತಿರಲಿಲ್ಲವೇನೋ. ಆಕೆ ಇದನ್ನು ವಿರೋಧಿಸಿ ಬರೆಯುತ್ತಿದ್ದಳೇನೋ. ಆದರೆ ಇವೆಲ್ಲವನ್ನೂ ನಾವು ನೋಡಬೇಕಾಗಿ ಬಂದಿದ್ದು ಒಂದು ದುರಂತವೇ ಸರಿ.

ಒಬ್ಬ ವ್ಯಕ್ತಿ ನಿಧನ(ಳಾ)ನಾದಾಗ, ಅವರನ್ನು ಹೊಗಳುವುದು ಸಭ್ಯತೆ, ಮಾನವೀಯತೆ, ಶಿಷ್ಟಾಚಾರದ ದೃಷ್ಟಿಯಿಂದ ಸರಿಯೇ. ಆದರೆ ಅದೇ ಸತ್ಯವಾಗಿ ಸ್ಥಾಪನೆ ಆಗಬೇಕಿಲ್ಲ, ಆಗ ಬಾರದು. ಕೊಲೆಯಾದರೆಂಬ ಕಾರಣಕ್ಕೆ ಪ್ರೇತಾತ್ಮರೆಲ್ಲ ಹುತಾತ್ಮ, ಪರಮಾತ್ಮ ಆಗಬೇಕಿಲ್ಲ, ಆಗಬಾರದು. ಅದು ನಾವು ಚರಿತ್ರೆಗೆ ಬಗೆಯುವ ದ್ರೋಹವಾಗುತ್ತದೆ. ಗೌರಿಯನ್ನೂ ಹಾಗೆ ಮಾಡುವ ವ್ಯರ್ಥ ಪ್ರಯತ್ನ ನಡೆಯುತ್ತಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಇದು ಹುಸಿ ಹುತಾತ್ಮರ ಹೈಡೌಟ್ ಒಳಗೆ ಕೆಲವರು ಹೊಕ್ಕಿಕೊಳ್ಳುವ ಹುನ್ನಾರ ಇದ್ದಿರಬಹುದಾ ಎಂಬ ಸಂದೇಹಕ್ಕೆ ಕಾರಣವಾಗುತ್ತದೆ. ಗೌರಿಯನ್ನು ಹತ್ತಿರದಿಂದ ಬಲ್ಲ, ಗೌರಿ ದೆಹಲಿಯಲ್ಲಿ ಓದುವಾಗ, ಆಕೆಯನ್ನು ಹತ್ತಾರು ತಿಂಗಳು ತಮ್ಮ ಮನೆಯಲ್ಲಿ ಇರಿಸಿಕೊಂಡು, ಲೋಕಲ್ ಗಾರ್ಡಿಯನ್ ಆಗಿದ್ದ, ಮೋಹನ್ ರಾಮ್ ತಮ್ಮ ಪುಸ್ತಕದಲ್ಲಿ ಒಂದೆಡೆ ಹೀಗೆ ಬರೆಯುತ್ತಾರೆ- ‘ಲಂಕೇಶ್
ಪತ್ರಿಕೆಯನ್ನು ವಹಿಸಿಕೊಳ್ಳುವ ಮುನ್ನ ಹದಿನೇಳು ವರ್ಷಗಳ ಅವಧಿಯಲ್ಲಿ ಗೌರಿಯೇನೂ ಹೇಳಿಕೊಳ್ಳುವಂಥ ಪತ್ರಕರ್ತೆ ಯಾಗಿರಲಿಲ್ಲ. ಅವಳಲ್ಲಿ ಓದುಗರನ್ನು ಹಿಡಿದಿಡಬಲ್ಲ ಭಾಷೆಯೂ ಇರಲಿಲ್ಲ. ಮೇಲ್ವರ್ಗದ ನಗರದ ಹುಡುಗಿಯರಂತೆ ಇವಳು ಬರೆಯುತ್ತಿದ್ದುದು ಠಸ್-ಪುಸ್ ಇಂಗ್ಲಿಷೇ. ಈಕೆಯ ಇಂಗ್ಲಿಷ್ ವರದಿಯನ್ನು ಯಾವ ಕನ್ನಡಿಗನೂ ಓದಿರಲಿಲ್ಲ. ಅವರಿಗೆ ಅಪರಿಚಿತಳಾಗೇ ಉಳಿದಿದ್ದಳು.

ಪರಿಚಿತಳಾಗುವುದು ಆಕೆಗೆ ಬೇಕೂ ಆಗಿರಲಿಲ್ಲ. ಅಪ್ಪನ ಯಶಸ್ಸನ್ನು ಧಾರಾಳವಾಗೇ ಅನುಭವಿಸಿದ ಈಕೆಗೆ ಕನ್ನಡ, ಸಂಸ್ಕೃತಿ-ಸಂವೇದನೆಗಳಾಗಲಿ, ಸೂಕ್ಷ್ಮತೆ-ಕಾವ್ಯಗುಣಗಳಾಗಲಿ, ಜನತೆಯ ದುಗುಡ-ಮ್ಮಾನಗಳಾಗಲಿ, ಇಲ್ಲಿನ ಚರಿತ್ರೆ-ಭೂಗೋಳಗಳಾಗಲಿ, ನದಿ-ಜಲಪಾತಗಳಾಗಲಿ, ಗುಡ್ಡ-ಬೆಟ್ಟಗಳಾಗಲಿ… ಯಾವುದರ ಪರಿವೆಯೂ ಇರಲಿಲ್ಲ. ಕನ್ನಡ ಬೇಡ, ಇಂಗ್ಲಿಷ್ ಆದರೂ ಇತ್ತೇ? ಅದೂ ಇರಲಿಲ್ಲ. ಆಕೆಗಿದ್ದದ್ದು ಎರಡೇ- ಒಂದು ತಾನು ಪತ್ರಕರ್ತೆ, ಮತ್ತೊಂದು ತನ್ನೊಂದಿಗಿದ್ದ ಲಂಕೇಶ ಎಂಬ ಹೆಸರು. ಇಂಗ್ಲಿಷ್ ಪತ್ರಿಕೋದ್ಯಮದಿಂದ ಕನ್ನಡಕ್ಕೆ ಬರುತ್ತಿದ್ದೇನೆ, ಓದುಗರ ಉದ್ಧಾರಕ್ಕೆ ತನ್ನ ಅವಶ್ಯಕತೆಯಿದೆ ಎಂಬ ದೇವದೂತನ, ಪ್ರವಾದಿಯ ಮನಃಸ್ಥಿತಿ ಈಕೆಯದ್ದಾಗಿತ್ತು. ತನ್ನ ಇತಿಮಿತಿಗಳನ್ನು ಈಕೆಗೆ ಊಹಿಸಲೂ ಅಸಾಧ್ಯವಾಗಿತ್ತು. ಪತ್ರಿಕೆ ಲಗಾಮು ಹಿಡಿದಾಗ, ಅದರ ಆರಂಭ-ಅಂತ್ಯಗಳ ಪರಿವೆ ಈ ಗೌರಿಗಿರಲಿಲ್ಲ. ತನಗೆ ತೋಚಿದ್ದನ್ನು ಬರೆದು ಕೊಡುತ್ತಿದ್ದಳು, ಬರೆದಿದ್ದನ್ನು ತಿದ್ದಿ ಡೆಸ್ಕ್ ಸಿಬ್ಬಂದಿ ಪ್ರಕಟಿಸುತ್ತಿದ್ದರು. ತನ್ನ ಬರವಣಿಗೆಯನ್ನು ಜನ ಓದುವುದಿಲ್ಲ, ಓದುತ್ತಿಲ್ಲ ಎಂದು ಆಕೆಗೆ ತಿಳಿಯುವ ಹೊತ್ತಿಗೆ ಮೂರ್ನಾಲ್ಕು ವರ್ಷ ದಾಟಿತ್ತು.

ಪತ್ರಿಕೋದ್ಯಮಕ್ಕೆ ಬರುವುದಕ್ಕಿಂತ ಮುನ್ನ ಲಂಕೇಶ್ ಕವಿ, ಕತೆಗಾರ, ನಾಟಕಕಾರ, ವಿಮರ್ಶಕ ಮತ್ತು ಸಿನಿಮಾ ನಿರ್ದೇಶಕ ಆಗಿದ್ದರು. ಸಿನಿಮಾವೊಂದನ್ನು ಬಿಟ್ಟು ಉಳಿದೆಡೆ ತಮ್ಮ ಶ್ರೇಷ್ಠತೆಯನ್ನು ಛಾಪಿಸಿದರು. ಆದರೆ ಗೌರಿ ಇವ್ಯಾವವೂ ಆಗಿರಲಿಲ್ಲ. ಅಸಲಿಗೆ ಗೌರಿ ಯಾವುದನ್ನೂ ಗಂಭೀರವಾಗಿ ಮಾಡಲೇ ಇಲ್ಲ. ತಂದೆ ನಿಧನದ ಬಳಿಕ ಪತ್ರಿಕೆಯನ್ನು ಐದು ವರ್ಷ ನಡೆಸುವಷ್ಟರಲ್ಲಿ ಗೌರಿ ಸುಸ್ತಾದಳು. ಈ ಮಧ್ಯೆ ಅವಳ
ಸಹೋದರ ಆಕೆಯೊಂದಿಗೆ ಕಾಳಗ ಆರಂಭಿಸಿದ. ಅವಳು ನಕ್ಸಲೀಯರನ್ನು ಬೆಂಬಲಿಸುತ್ತಾಳೆ ಎಂಬ ಆರೋಪದಲ್ಲಿ ಇಬ್ಬರೂ ಬಹಿರಂಗವಾಗಿ ಕಿತ್ತಾಡಿ ಪೊಲೀಸರ ತನಕ ತಲುಪಿ ಬೇರೆ ಬೇರೆಯಾದರು. ಗೌರಿಯ ಜ್ಞಾನವೆಲ್ಲ ಅರೆ-ಬರೆಯಾಗಿತ್ತು. ಯಾವುದರ ಬಗ್ಗೆಯೂ ಸ್ಪಷ್ಟತೆ ಇರಲಿಲ್ಲ. ಏನನ್ನೂ ಆಳವಾಗಿ ಅಧ್ಯಯನ ಮಾಡಿರಲಿಲ್ಲ. ಕಮ್ಯುನಿಸ್ಟರು ಇವಳನ್ನು ಒಪ್ಪುವುದು ಅಸಾಧ್ಯವಾಗಿತ್ತು. ಆಗ ಅವಳ ನೆನಪಿಗೆ ಬಂದಿದ್ದೇ ಕಾಮ್ರೇಡ್ ಸಾಕೇತ್ ರಾಜನ್. ಆತ ಹತನಾದಾಗ ಅದನ್ನು ಬಂಡವಾಳ ಮಾಡಿಕೊಂಡಳು. ಗೌರಿಗೆ ನಕ್ಸಲ್ ವಾದದ ಬಗ್ಗೆ ಇದ್ದ ಒಲವು ಅನಿವಾರ್ಯವಾಗಿತ್ತು. ಅಲ್ಲಿ ಕಮ್ಯುನಿಸಂ ಇದೆಯಾದರೂ, ಪಕ್ಷದ ಶಿಸ್ತಿಲ್ಲದಿರುವುದು, ಯಾರಿಗೂ ಉತ್ತರದಾಯಿಯಾಗಿಲ್ಲದಿರುವುದು ನಕ್ಸಲ್ ಗುಂಪುಗಳಲ್ಲಿ ಮಾತ್ರ. ಆಕೆ ಕ್ರಾಂತಿಕಾರಿಯಾದಳು. ನಕ್ಸಲ್ ಪರವಿದ್ದ ಒಂದಿಬ್ಬರು ಲೇಖಕರೂ ಸಿಕ್ಕರು. ಬರೆದೇ ಬರೆದಳು, ಹೋರಾಟಗಾರರಿಗೂ ಗೌರಿ ಪತ್ರಿಕೆಯ ವೇದಿಕೆ ಅಗತ್ಯ ವಾಗಿತ್ತು. ಅವರಿಗೂ ಗೌರಿ ಬೇಕಾದಳು. ಇದು ಪರಸ್ಪರರ ಅಗತ್ಯವಾಗಿತ್ತು. ಬರೀ ನಕ್ಸಲೀಯರ ಪರವಾಗಿದ್ದರೆ ಸಾಲದು.

ಸಾರ್ವಜನಿಕವಾಗಿ ಕಾಣಲು ಒಂದು ವೇದಿಕೆ ಬೇಕೇ ಬೇಕು, ಇಲ್ಲದಿದ್ದರೆ ಸೆಮಿನಾರು, ಪತ್ರಿಕಾಗೋಷ್ಠಿಗಳು ಸಾರ್ವಜನಿಕ ಮನ್ನಣೆಗಳಿಗೆ, ನಕ್ಸಲೀಯ ಛಾಪು ನೆರವಿಗೆ ಬರುವುದಿಲ್ಲ. ಆಗ ಗೌರಿಗೆ ಕಂಡದ್ದೇ ಕೋಮು ಸೌಹಾರ್ದ ವೇದಿಕೆ. ಇದು ಆಕೆಗೆ ಸಾರ್ವಜನಿಕ ವೇದಿಕೆಯಾಯಿತು. ಬಾಬಾ ಬುಡನ್‌ಗಿರಿಯ ಆರ್‌ಎಸ್‌ಎಸ್ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯಲ್ಲಿ ಈಕೆ ಮುಸ್ಲಿಮರ ಪರವಾಗಿ ನಿಂತಳು. ಅದು ಕಾಲದ, ಸಮಾಜದ ಅವಶ್ಯಕತೆಯೂ ಆಗಿತ್ತು. ಅಲ್ಲಿಂದ ಗೌರಿಯ ಕ್ರಾಂತಿಕಾರಿ ಬದುಕು ಆರಂಭವಾಯಿತು. ಹೀಗೆಂದು ಮೋಹನ್ ರಾಮ್ ಬರೆಯುತ್ತಾರೆ (ಇವು ನನ್ನ ಅನಿಸಿಕೆಯೂ ಹೌದು. ಆದರೆ ಆಕೆಯನ್ನು ತೀರಾ ಹತ್ತಿರದಿಂದ ಬಲ್ಲವರು ಬರೆದರೆ ಅದಕ್ಕೆ ಪೂರ್ವಗ್ರಹದ ಲೇಪನ ಇರುವುದಿಲ್ಲ ಎಂಬ ಕಾರಣಕ್ಕೆ ಮೋಹನ ರಾಮ್ ಬರೆದಿದ್ದನ್ನು ಇಲ್ಲಿ ಉದ್ದೇಶಪೂರ್ವಕವಾಗಿ ಉದ್ಧರಿಸಿದ್ದೇನೆ). ಸಾಕೇತ್ ರಾಜನ್ ಕೊಲೆಯಾದಾಗ, ಆತನ ಶವದ ಮುಂದೆ ಅಂದಿನ ಮುಖ್ಯಮಂತ್ರಿ ಧರಮ್ ಸಿಂಗ್ ಸಮ್ಮುಖದಲ್ಲಿ ಗೌರಿ ಆಡಿದ ನಾಟಕವನ್ನು ಈ ರಾಜ್ಯ ನೋಡಿದೆ. ಸಾಕೇತ್ ಕೊಲೆಗೆ ಪ್ರತೀಕಾರವಾಗಿ ಒಂದು ವಾರದಲ್ಲಿ ತುಮಕೂರು ಜಿಲ್ಲೆಯ ಪಾವಗಡದ ಸನಿಹದ ವೆಂಕಟಮ್ಮನಹಳ್ಳಿಯಲ್ಲಿ ನಕ್ಸಲೀಯರು  ಆರು ಪೊಲೀಸರನ್ನು ಹತ್ಯೆ ಮಾಡಿದಾಗ, ‘ಮಾನವತಾವಾದಿ’ ಗೌರಿ ಮಾತೇ ಆಡಲಿಲ್ಲ. ಆ ಪೊಲೀಸರಾದರೂ ಏನು ಮಾಡಿದ್ದರು? ಅವರ ಜೀವಕ್ಕೂ ಬೆಲೆಯಿಲ್ಲವೇ? ಈ ‘ಮಾನವತಾವಾದಿ’ ಬಾಯಿಂದ ಒಂದೇ ಒಂದು ಖಂಡನೆ, ಸಾಂತ್ವನದ ಮಾತು ಬರಲೇ ಇಲ್ಲ!

ಮೋಹನ್ ರಾಮ್ ಆಕೆಯ ಪತ್ರಿಕೆಯ ಬಗ್ಗೆ ಸಂಕ್ಷಿಪ್ತವಾಗಿ ಹೀಗೆ ಬರೆಯುತ್ತಾರೆ- ‘ಪತ್ರಿಕೆಯೊಂದು ಸಿದ್ಧಾಂತಕ್ಕೆ ಅಂಟಿಕೊಳ್ಳುವುದು ಅವಶ್ಯವಾದರೂ, ಸಿದ್ಧಾಂತದ ತಪ್ಪುಗಳನ್ನೂ ಖಂಡಿಸುವಂತಿರಬೇಕು. ಇದೇ ಲಂಕೇಶರ dissent ತತ್ವ. ಗೌರಿಯ ಪತ್ರಿಕೆಯ ಪ್ರಸಾರ ಎಂದೂ ಎರಡು-ಮೂರು ಸಾವಿರ ದಾಟಿರಲಿಲ್ಲ. ಪ್ರತಿ ವಾರ ಮುದ್ರಣಕ್ಕೆ, ತಿಂಗಳ ಕೊನೆಯಲ್ಲಿ ಸಿಬ್ಬಂದಿಯ ಸಂಬಳಕ್ಕೆ ಆಕೆ ಅಡುಗೆ ಮನೆಯ ಡಬ್ಬಗಳನ್ನೆಲ್ಲ ತಡಕಾಡುವ ಸ್ಥಿತಿಗೆ ಬಂದಿದ್ದಳು. ಅವಳಿಗೆ ಪತ್ರಿಕೆಯ economics ಸಹ ಗೊತ್ತಿರಲಿಲ್ಲ. ಅಪ್ಪನ ಆಸ್ತಿಗೆ ಜೋತು ಬಿದ್ದ ಇವಳಿಗೆ ಕಲಿಯುವ ಚಾಕಚಕ್ಯತೆಯೂ ಇರಲಿಲ್ಲ’. ಗೌರಿಯನ್ನು ದಿಟ್ಟ ಹೋರಾಟಗಾರ್ತಿ, ಅಪ್ರತಿಮ
ಪತ್ರಕರ್ತೆ ಎಂದು ಹೊಗಳುವ, ಅವಳನ್ನು ಇನ್ನಿಲ್ಲದ ವಿಶೇಷಣಗಳಿಂದ ಗುಣಗಾನ ಮಾಡುವ ಅವಿವೇಕಿಗಳ ಗಮನಕ್ಕೆ ಒಂದು ಸಂಗತಿಯನ್ನು ತರಬೇಕು. ಗೌರಿ ಕೊಲೆಯಾಗುವುದಕ್ಕಿಂತ ಒಂದು ವರ್ಷದಿಂದ ಅವಳ ಪತ್ರಿಕೆ ನಿಯತವಾಗಿ ಬರುತ್ತಿರಲಿಲ್ಲ. ಬಂದರೆ ಬಂತು, ಇಲ್ಲದಿದ್ದರೆ ಇಲ್ಲ. ಕೊನೆ ಕೊನೆಗೆ  ಅವಳ ‘ಕಂಡ ಹಾಗೆ’ ಅಂಕಣವೂ ಪ್ರಕಟವಾಗುತ್ತಿರಲಿಲ್ಲ. ತಾನು ಬರೆಯಲಿ, ಬರೆಯದೇ ಇರಲಿ, ವ್ಯತ್ಯಾಸವೇನೂ ಇಲ್ಲ
ಎಂದು ಅವಳು ಮನಗಂಡಿದ್ದಳು. ಹೇಳಿ ಕೇಳಿ ಟ್ಯಾಬ್ಲಾಯಿಡ್ ಪತ್ರಕರ್ತೆಯಾಗಿದ್ದ ಗೌರಿ, ಬೊಗಳುವ-ಕಚ್ಚುವ ತ್ರಾಣವನ್ನು ಕಳೆದುಕೊಂಡಿದ್ದಳು. ಅವಳ ಮುಂದೆಯೇ ಅವಳ ಪತ್ರಿಕೆ ಸತ್ತುಹೋಗಿತ್ತು. ಆಗ ಜೀವನೋಪಾಯಕ್ಕೆ ಆಕೆ ನೆಚ್ಚಿಕೊಂಡಿದ್ದು ಎಂದೋ ಬರೆದ ಅಪ್ಪನ ಹಳಸಲು ಲೇಖನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವುದನ್ನು. ಇದು ತನ್ನ ಚಟಗಳನ್ನು ಕೂಡ ಸಲಹಲಾರವು ಎಂಬುದನ್ನು ಅರಿತ ಆಕೆ ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ಮಾರ್ಗವನ್ನು ಕಂಡು ಕೊಳ್ಳಲೇಬೇಕಿತ್ತು. ಆಗ ಹೊಳೆದಿದ್ದು ಗೈಡುಗಳ ಪ್ರಕಟಣೆ.

ಬದುಕಿನಲ್ಲಿ ಎಲ್ಲ ಮಾಡಿ ದೈಡು ಆಗದೇ, ಪದೇ ಪದೆ ಪೆಟ್ಟು ತಿಂದವರು, ಕೊನೆಯಲ್ಲಿ ಏನೋ ಆಗುತ್ತಾರಲ್ಲ ಹಾಗೆ ಪತ್ರಿಕೋದ್ಯಮದ ಎಲ್ಲ ಪಟ್ಟುಗಳನ್ನು ಬಿಟ್ಟು, ಕೊನೆಗೆ ಎಲ್ಲ ಬಿಟ್ಟ ಬಂಗಿ ನೆಟ್ಟ ಎಂಬಂತೆ ಸ್ಕೂಲ್ ಗೈಡ್ ಪ್ರಕಟಣೆಗೆ ಇಳಿದಾಗ ಅವಳೊಳಗಿನ ಪತ್ರಕರ್ತೆ ಸತ್ತೇ ಹೋಗಿದ್ದಳು! ಪತ್ರಿಕೆಯಲ್ಲಿ ಬರೆದ ಲೇಖನವೊಂದಕ್ಕೆ ಮಾನಹಾನಿ ಕೇಸು ಹಾಕಿಸಿಕೊಂಡಿದ್ದ ಲಂಕೇಶ್, ಮಹಾರಾಷ್ಟ್ರದ ಕೋರ್ಟಿಗೆ ಹಾಜರಾಗದೇ ಮೀನ-ಮೇಷ ಎಣಿಸುತ್ತಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ಅಲ್ಲಿನ ಪೊಲೀಸರು ಧುತ್ತೆಂದು ಹಾಜರಾಗಿ ಲಂಕೇಶ್ ಅವರನ್ನು ಎತ್ತಾಕಿಕೊಂಡು ಹೋದರು. ತಾನು ಅಂಥವನು, ಇಂಥವನು, ರಾವಣೇಶ್ವರನು ಎಂದು ಆಗ
ಬಡಾಯಿ ಕೊಚ್ಚಿಕೊಂಡಾಗ, ಪೊಲೀಸರು ಮುಖಮೂತಿ ನೋಡದೇ, ಲಂಕೇಶರಿಗೆ ಚಚ್ಚಿದ್ದರು. ಅಪ್ಪನನ್ನು ಬಿಡಿಸಿಕೊಡಿ ಎಂದು ಆಗ ಓಡೋಡಿ ಬಂದ ಗೌರಿ, ಅಂದಿನ ಕೇಂದ್ರ ಸಚಿವ ಅನಂತಕುಮಾರ ಅವರ ಕಾಲಿಗೆ ಬಿದ್ದಿದ್ದು, ಅವರು ಅಂದಿನ ಮಹಾರಾಷ್ಟ್ರ ಗೃಹ ಸಚಿವ ಗೋಪಿನಾಥ ಮುಂಡೆ ಅವರಿಗೆ  ಫೋನ್ ಮಾಡಿ ಲಂಕೇಶರನ್ನು ಬಿಡಿಸಿದ್ದು, ಅದನ್ನು ಉಪಕಾರ ಎಂದು ಭಾವಿಸದೇ ಲಂಕೇಶ್ ಅನಂತಕುಮಾರ್ ಅವರನ್ನು
ತಮ್ಮ ಪತ್ರಿಕೆಯಲ್ಲಿ ಪುಂಖಾನುಪುಂಖ ಟೀಕಿಸಿದ್ದು, ಅಪ್ಪನ ನಿಧನದ ನಂತರ ಅದೇ ಚಾಳಿಯನ್ನು ಗೌರಿಯೂ ಮುಂದುವರಿಸಿದ್ದು, ಕೊನೆಗೆ ಅನಂತಕುಮಾರ ಅವರಿಂದ ದೊಡ್ಡ ಪ್ರಮಾಣದಲ್ಲಿ ಉಪಕೃತಳಾಗಿದ್ದು… ನನ್ನ ಕಣ್ಣುಗಳೇ ಸಾಕ್ಷಿ.

ಸ್ವಲ್ಪದರಲ್ಲೇ ಅನಂತಕುಮಾರ್ ಅವಳ ಗೈಡ್ ಮಾರಾಟದ ಹೊಣೆಗಾರಿಕೆ ಹೊರೆಯಿಂದ ಬಚಾವ್ ಆಗಿದ್ದು ಇನ್ನೊಂದು ಕಥೆ. ಇಂಥವರನ್ನೆಲ್ಲ ‘ದಿಟ್ಟ…’ ಎಂದೆಲ್ಲ ಯಾರಾದರೂ ಬಣ್ಣಿಸಿದರೆ ಹೇಗಾಗಬೇಡ? ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ ಟೌನ್ ಶಿಪ್‌ನಲ್ಲಿ ಗೌರಿ ಮನೆಯ ಹಿಂಬದಿಯಲ್ಲಿ ಹದಿನೈದು ಮೀಟರ್ ಅಂತರದಲ್ಲಿ ನನ್ನ ಮನೆಯಿತ್ತು. ಐದು ವರ್ಷಗಳ ಕಾಲ ನಾವಿಬ್ಬರೂ ಅಕ್ಕ-ಪಕ್ಕದವರು (ನಂತರ ನಾನು ಅದೇ ಬಡಾವಣೆಯಲ್ಲಿ ಬೇರೆಡೆ ಹೋದೆ). ಗೌರಿ ಮನೆಯಲ್ಲಿ ನಡೆಯುತ್ತಿದ್ದ ರಾತ್ರಿ ಪಾರ್ಟಿಗಳು, ಕೇಕೆಗಳು ನನ್ನ ಮನೆಗೆ ಕಾಣಿಸುತ್ತಿದ್ದವು, ಕೇಳಿಸುತ್ತಿದ್ದವು. ಆ ಮನೆಯಲ್ಲಿ ಗೌರಿ ಒಬ್ಬಂಟಿಯಾಗಿ ಇರುತ್ತಿದ್ದಳು. ಆದರೆ ಸಾಯಂಕಾಲ ವಾಗುತ್ತಿದ್ದಂತೆ ಯಾರ್ಯಾರೋ ಬಂದು-ಹೋಗುತ್ತಿದ್ದರು. ಈ ಸಂಬಂಧ ನೆರೆಹೊರೆಯವರೊಂದಿಗೆ ಜಗಳವೂ ಆಗಿತ್ತು. ಒಮ್ಮೆ ಆ ಮನೆಗೆ ಮಗಳನ್ನು ನೋಡಲು, ಲಂಕೇಶ್ ಆಗಮಿಸಿದ್ದರು. ಅದೇನಾಯಿತೋ ಏನೋ, ಆ ದಿನ ಅಪ್ಪನನ್ನು ಮನೆಯೊಳಗೆ ಕರೆಯದೇ, ಕುಡಿದ ಮತ್ತಿನಲ್ಲಿ ಹಿಗ್ಗಾಮುಗ್ಗಾ ಬೈದು ಆಚೆಗೆ ಅಟ್ಟಿದ್ದಳು. ಮಗಳ ರಣಚಂಡಿ ಅವತಾರಕ್ಕೆ ಕಬ್ಬಕಂಗಾಲಾದ ಲಂಕೇಶ್, ಕುಂಡಿಗೆ ಕಾಲು ಹಚ್ಚಿ ಓಡಿಹೋಗಿದ್ದರು! ಇನ್ನೊಂದು ಸಂದರ್ಭದಲ್ಲಿ ಅವಳ ಮನೆಯಲ್ಲಿ ಕಳ್ಳತನವಾದಾಗ, ಅವಳ ಮನೆಗೆ ಭೇಟಿ ನೀಡಿದ ಪೊಲೀಸರು ಅಲ್ಲಿ ಕಂಡ ವಸ್ತುಗಳನ್ನು ನೋಡಿ ದಂಗಾಗಿ ಹೋಗಿದ್ದರು (ಈಗಲೂ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಮಾಹಿತಿ ಸಿಗುತ್ತದೆ). ಕಳ್ಳನಿಗೂ ಶಾಕ್ ಆಗಿ ಈ ವಸ್ತುಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರು ತಮಾಷೆ ಮಾಡಿದ್ದರು.

ಆ ಅವಧಿಯಲ್ಲಿ ನಾನು ಕಂಡ ಅವೆಷ್ಟೋ ಅಂಶಗಳನ್ನು ಬೇಕೆಂದೇ ಇಲ್ಲಿ ಪ್ರಸ್ತಾಪಿಸಿಲ್ಲ. ಒಬ್ಬ ವ್ಯಕ್ತಿಯ ನಿಧನದ ಬಳಿಕ ಅವನ/ಅವಳ ಗುಣಕಥನ ತಪ್ಪಲ್ಲ. ಆದರೆ ಇಲ್ಲದಿರುವ ಸಂಗತಿಗಳಿಂದ ವೈಭವೀಕರಿಸು
ವುದು, ವಿಜೃಂಭಿಸುವುದು ಆ ವ್ಯಕ್ತಿಗೆ ಮಾಡುವ ಅಪಚಾರ. ಇದನ್ನು ಇಂಗ್ಲಿಷಿನಲ್ಲಿ Worshipping False Gods ಎಂದು ಹೇಳುತ್ತಾರೆ. ಈಗ ಆಗುತ್ತಿರುವುದು ಅದು. ‘ಗಲಾಟೆ ದೇವರಿಗೆ ಮರದ ಜಾಗಟೆ’ ಎಂಬ ಗಾದೆಯಂತೆ, ಗಲಾಟೆ ಮಾಡುವ ದೇವರಿಗೆ ತಕ್ಕುದಾದ ರೀತಿಯಲ್ಲಿ ಭಕ್ತರೂ ಹುಟ್ಟಿಕೊಳ್ಳುತ್ತಾರೆ. ಅವರು ಮರದ ಜಾಗಟೆಯನ್ನಾದರೂ ಬಡಿದು ಸದ್ದು ಮಾಡುತ್ತಿರುತ್ತಾರೆ. ಈಗ ಆಗುತ್ತಿರುವುದೂ ಅದೇ. ಎಷ್ಟೋ ಸಲ ಹೊಗಳುವ ಭರದಲ್ಲಿ, ಕೆಲವರು ಅಯೋಗ್ಯರನ್ನು, ಅಪಾತ್ರರನ್ನು ಅಟ್ಟಕ್ಕೇರಿಸಿ ಮೆರೆಯಿಸುತ್ತಾರೆ. ತಮ್ಮ ಅಸ್ತಿತ್ವಕ್ಕಾಗಿ ಯಾರನ್ನೋ ಆಶ್ರಯಿಸುತ್ತಾರೆ. ಅಂಥವರು ಹುಸಿ ಅಥವಾ ನಕಲಿ ದೇವರನ್ನು ಆರಾಧಿಸುತ್ತಾರೆ.
ಆ ಗಲಾಟೆ ಅಥವಾ ಗಿಲೀಟು ದೇವರು ಮಾನವತಾವಾದಿಯಾಗಿ ಕಂಗೊಳಿಸುತ್ತಾನೆ. ಈಗ ಆಗುತ್ತಿರುವುದೂ ಅದೇ.  ಸತ್ತವರನ್ನು ಹೊಗಳುವುದು ತಪ್ಪಲ್ಲ, ಆದರೆ ಅದರಿಂದ ಸತ್ತವರಿಗೇ ಅವಮಾನವಾಗಬಾರದು! ನಮ್ಮ ಹೃದಯದಲ್ಲಿರುವ ಖಾಲಿ ಕುರ್ಚಿಯಲ್ಲಿ ಅಪಾತ್ರರನ್ನು ಕುಳ್ಳಿರಿಸಿ ಪೂಜಿಸುವುದಕ್ಕಿಂತ, ಅದು ಖಾಲಿ ಯಾಗಿರುವಂತೆ ನೋಡಿಕೊಳ್ಳುವುದೇ ಲೇಸು. ಏನಂತೀರಿ?