Friday, 19th April 2024

ಉಚ್ಚಾರದ ಸುತ್ತಮುತ್ತ

ಪ್ರತಿಸ್ಪಂದನ

ಪ್ರೇಮದಾಸ್ ಅಡ್ಯಂತಾಯ

‘ಇದೇ ಅಂತರಂಗ ಸುದ್ದಿ’ ಅಂಕಣದಲ್ಲಿ (ವಿಶ್ವವಾಣಿ -.೧೮), ‘ಘಟೋತ್ಕಚ-ಘಟೋದ್ಗಜ-ಘಟೋತ್ಕಜ’ ಈ ಹೆಸರುಗಳ ಪೈಕಿ ‘ಘಟ+ಉತ್ಕಚ= ಘಟೋತ್ಕಚ’ ಸರಿ ಎಂದು ತಿಳಿಸಿದ್ದೀರಿ, ಧನ್ಯವಾದ. ನಾನು ತಿಳಿದ ಹಾಗೆ, ತಮಿಳಿನಲ್ಲಿ ಬರೆಯುವಾಗ ‘ತ’ ಮತ್ತು ‘ದ’, ‘ಕ’ ಮತ್ತು ‘ಗ’ ಹಾಗೆಯೇ ‘ಚ’ ಮತ್ತು ‘ಜ’ ಒಂದೇ ಆಗಿರುತ್ತವೆ. ಆದುದರಿಂದ ತಮಿಳಿನವರಿಗೆ ಈ ರೀತಿಯ ದ್ವಂದ್ವ ಕಾಡಿರಲಿಕ್ಕಿಲ್ಲ ಎಂಬುದು ನನ್ನ ಭಾವನೆ. ಆದರೆ ಕೆಲವು ಸಲ ಒಂದು
ಭಾಷೆಯಿಂದ ಇನ್ನೊಂದಕ್ಕೆ ತರ್ಜುಮೆ ಮಾಡುವಾಗ ಈ ರೀತಿಯಾದ ತಪ್ಪುಗಳು ಆಗುತ್ತಲೇ ಇರುತ್ತವೆ. ಉದಾಹರಣೆಗೆ, ‘ಜ್ಞಾನ’ ಎಂಬ ಪದವು ಹಿಂದಿಯಲ್ಲಿ ‘ಗ್ಯಾನ್’ ಎಂದಾಗುತ್ತದೆ. ‘ತೆಂಗಿನಕಾಯಿ’ ಎಂಬುದು ನಮ್ಮ ಶಾಸಕರೊಬ್ಬರ ಹೆಸರಿನ ಭಾಗವಾಗಿದೆ.

ಆದರೆ ಇಂಗ್ಲಿಷ್‌ನಲ್ಲಿ ಅದನ್ನು ‘ಟೆಂಗಿನಕಾಯಿ’ ಎಂಬ ಉಚ್ಚಾರ ಬರುವಂತೆ ಬರೆಯುತ್ತಾರೆ. ದುರದೃಷ್ಟವೆಂದರೆ ಕನ್ನಡದ ಕೆಲವು ಪತ್ರಿಕೆಗಳಲ್ಲೂ ‘ಟೆಂಗಿನಕಾಯಿ’ ಎಂದೇ ಬರೆಯುತ್ತಿದ್ದಾರೆ. ಇನ್ನೊಂದು ಉದಾಹರಣೆ- ‘ವರ್ಧಮಾನ’ ಎಂಬ ಹೆಸರು ಬಂಗಾಳಿ ಭಾಷೆಯಲ್ಲಿ ‘ಬರ್ಧಮಾನ್’ ಎಂದಾಗಿದೆ; ಉಚ್ಚಾರ ಮಾಡುವಾಗ ಅದು ‘ಬರ್ದ ವಾನ್’ ಆಗಿ, ಇಂಗ್ಲಿಷ್‌ನಲ್ಲಿ ‘ಬರ್ದ್ವಾನ್’ ಆಗಿಬಿಟ್ಟಿದೆ’. ಅದನ್ನು ಇಂಗ್ಲಿಷ್ ಲಿಪಿಯಲ್ಲಿ ‘ಆಖ್ಕಿಈUಅಘೆ’ ಎಂದು ಬರೆಯ ತೊಡಗಿ, ಅದನ್ನು ಓದುವವರು ‘ಬುರ್ದ್ವಾನ್’ ಎಂದೇ ಹೇಳುತ್ತಾರೆ. ಇದು ಪಶ್ಚಿಮ ಬಂಗಾಳದಲ್ಲಿರುವ ಒಂದು ಊರಿನ ಹೆಸರಾಗಿದ್ದು, ಅದನ್ನೀಗ
ಎಲ್ಲರೂ ‘ಬುರ್ದ್ವಾನ್’ ಎಂದೇ ಕರೆಯುವಂತಾಗಿದೆ. ‘ಬುರ್ದ್ವಾನ್’ಗೂ ‘ವರ್ಧಮಾನ’ಕ್ಕೂ ಎಲ್ಲಿಯ ಸಂಬಂಧ!

ಊರು ಅಥವಾ ಪ್ರದೇಶಗಳ ವಾಸ್ತವಿಕ ಹೆಸರುಗಳು ಅಪಭ್ರಂಶ ಗೊಂಡಿರುವುದಕ್ಕೆ ಹಾಗೂ ಆ ಪರಿಪಾಠ ಇನ್ನೂ ಮುಂದುವರಿದಿರುವುದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಪಾಂಡಿಚೆರಿ(ಪುದುಚೇರಿ), ಬ್ಯಾಂಗಲೋರ್ (ಬೆಂಗಳೂರು), ಶಿಮೊಗಾ (ಶಿವಮೊಗ್ಗ), ಮ್ಯಾಂಗಲೋರ್ (ಮಂಗಳೂರು), ಪೂನಾ (ಪುಣೆ), ಬನಾರಸ್ (ವಾರಾಣಸಿ), ಕ್ಯಾಲ್‌ಕಟ್ಟಾ (ಕೋಲ್ಕತ್ತ), ತ್ರಿವೇಂದ್ರಂ (ತಿರುವನಂತಪುರಂ), ಟ್ರಿಚಿ (ತಿರುಚಿರಾಪಳ್ಳಿ), ಬಾಂಬೆ (ಮುಂಬೈ) ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಈ ಪೈಕಿ ಹೆಚ್ಚಿನವನ್ನು ಬ್ರಿಟಿಷರು ತಮ್ಮ ಅನುಕೂಲಕ್ಕೆ ತಕ್ಕಂತೆ ಉಚ್ಚರಿ ಸುತ್ತಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಆಯಾ ಪ್ರದೇಶದ ಅಸ್ಮಿತೆ, ಮಣ್ಣಿನ ಘಮಲು, ಪರಂಪರೆ ಇತ್ಯಾದಿಗಳಿಗೆ ತಕ್ಕಂತೆ ಮೂಲ ಹೆಸರನ್ನೇ ಉಳಿಸಿಕೊಳ್ಳುವುದು ಮತ್ತು ಅದನ್ನು ನಿರಂತರವಾಗಿ ಬಳಸುವುದು ನಮ್ಮ ಪರಿಪಾಠವಾಗಬೇಕು.

ಆದರೆ ಅಂಧಾನುಕರಣೆ ಯಿಂದಲೋ ಅಥವಾ ಅನಾದರದಿಂದಲೋ ಬ್ರಿಟಿಷರ ಮೇಲ್ಪಂಕ್ತಿ ಯನ್ನೇ ಅನುಸರಿಸುವುದು ನಮ್ಮಲ್ಲಿ ಕೆಲವರ ಚಾಳಿಯಾ ಗಿಬಿಟ್ಟಿದೆ. ಇದು ತಪ್ಪಬೇಕು. ಪ್ರದೇಶಗಳಿಗೆ ಯಾವುದೇ ಹೆಸರು ಇಡುವುದಕ್ಕೆ ಅಥವಾ ಅದು ಹುಟ್ಟುವುದಕ್ಕೆ ಏನಾದರೊಂದು ಬಲವಾದ ಕಾರಣ ವಿರುತ್ತದೆ. ಉದಾಹರಣೆಗೆ ನಮ್ಮ ರಾಜ್ಯದಲ್ಲೇ ‘ಐವರು ಕಂಡ ಪುರ’ ಎಂಬ ಹೆಸರಿನ ಒಂದು ಊರು ಇದೆ. ಊರಿಗೆ ಇದೇ ಹೆಸರು ಬರಲು ಏನಾದರೊಂದು ಬಲವಾದ ಕಾರಣ ಇದ್ದೇ ಇರುತ್ತದೆ. ಅದನ್ನು ತಡಕಿದಾಗ, ಸ್ಥಳ ಮಹಾತ್ಮೆ ಅಥವಾ ಇತಿಹಾಸವು ಬೆಳಕಿಗೆ ಬಂದೀತು. ಈ ರೀತಿಯಾಗಿ ಬಹಳಷ್ಟು ಕಡೆ ಹೆಸರುಗಳು ಬದಲಾಗುತ್ತಲೇ ಇವೆ. ತುಳುನಾಡಿನಲ್ಲಿ ಹೀಗೆಯೇ ಕನ್ನಡೀಕರಣವಾದಾಗ ಎಷ್ಟೋ ಹೆಸರುಗಳು ಬದಲಾಗಿವೆ (ಪೇರೂರು = ಹೇರೂರು; ಜುಮಾದಿ = ಧೂಮಾವತಿ ಇತ್ಯಾದಿ). ಇವುಗಳನ್ನು ಮತ್ತೆ ಬದಲಾಯಿಸಲು ಸಾಧ್ಯವೇ ಇಲ್ಲ ಎಂಬುದು ನನ್ನ ಅಭಿಪ್ರಾಯ. ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರು, ಅಂಕಣಕಾರ ಶ್ರೀವತ್ಸ ಜೋಶಿಯವರು ಹಾಗೂ ಕೊಕ್ಕಡ ವೆಂಕಟರಮಣ ಭಟ್ ಅವರು ಕನ್ನಡ ಭಾಷೆಯ ಬಗ್ಗೆ
ಪತ್ರಿಕೆಯ ಮುಖೇನ ಬಹಳಷ್ಟು ವಿಚಾರಗಳನ್ನು ತಿಳಿಸುತ್ತಿರುವುದಕ್ಕೆ ಒಬ್ಬ ತುಳುವ ಕನ್ನಡಿಗನಾಗಿ ಆತ್ಮೀಯ ವಂದನೆಗಳು.

(ಲೇಖಕರು ಕೆನರಾ ಬ್ಯಾಂಕ್ ನಿವೃತ್ತ ಪ್ರಬಂಧಕರು)

Leave a Reply

Your email address will not be published. Required fields are marked *

error: Content is protected !!