Thursday, 19th September 2024

ಸುನಾಮಿ: ಮುಂದಾಲೋಚನೆ ಒಂದೇ ಪರಿಹಾರ

ತನ್ನಿಮಿತ್ತ

ರಾಜು ಭೂಶೆಟ್ಟಿ

ಮನುಷ್ಯ ಇಂದು ವಿಜ್ಞಾನ – ತಂತ್ರಜ್ಞಾನದಲ್ಲಿ ಎಷ್ಟೇ ಅದ್ಭುತವಾದ ಸಾಧನೆಯನ್ನು ಮಾಡಿದ್ದರೂ ಕೂಡ ನಿಸರ್ಗವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮಾತ್ರ ಅಸಾಧ್ಯದ ಮಾತು.

ಅದಕ್ಕಾಗಿಯೇ ಹೇಳುವುದು ಯಾವುದೇ ಅಭಿವೃದ್ಧಿ ಕಾರ್ಯಗಳು ಪರಿಸರಕ್ಕನುಗುಣವಾಗಿರಬೇಕೇ ಹೊರತು ಪರಿಸರಕ್ಕೆ ಧಕ್ಕೆೆ ಯನ್ನುಂಟು ಮಾಡಿ ಮಾಡುವ ಅಭಿವೃದ್ಧಿ ಎಂದಿಗೂ ಅಭಿವೃದ್ಧಿ ಅನಿಸಿಕೊಳ್ಳಲಾರದು. ಪರಿಸರ ಹಾಗೂ ಅಭಿವೃದ್ಧಿ ಎರಡೂ ಒಟ್ಟೊಟ್ಟಿಗೆ ಸಾಗಬೇಕಿದೆ. ಪರಿಸರದ ನಾಶ ಹಲವಾರು ನೈಸರ್ಗಿಕ ವಿಕೋಪಗಳ ರೂಪದಲ್ಲಿ ಮನುಷ್ಯನ ಅಸ್ತಿತ್ವವನ್ನೇ ಅಲ್ಲಾಡಿಸಬಹುದು. ಅದರಲ್ಲಿ ಒಂದು ಪ್ರಕಾರವನ್ನು ಹೆಸರಿಸಲಾಗಿ ಅದುವೇ ಸುನಾಮಿ. ಸುನಾಮಿಯು ಈಗಾಗಲೇ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ತನ್ನ ರೌದ್ರರೂಪವನ್ನು ಪ್ರದರ್ಶಿಸಿ ಸಾಕಷ್ಟು ಪ್ರಮಾಣದಲ್ಲಿ ಜನರನ್ನು ನಿರಾಶ್ರಿತರನ್ನಾಗಿ ಮಾಡಿ, ಪ್ರಾಣ ಹಾನಿಗೂ ಕಾರಣವಾದ ಉದಾಹರಣೆಗಳು ನಮ್ಮ ಕಣ್ಣು ಮುಂದೆಯೇ ಇವೆ.

ಇದುವರೆಗೆ ಜಗತ್ತು 1755, 2004, 2011ರಲ್ಲಿ ಹೀಗೆ ಮೂರು ಪ್ರಮುಖ ಸುನಾಮಿ ದುರಂತಗಳು ಘಟಿಸಿ ಹೋಗಿವೆ. ಅದರಲ್ಲೂ ವಿಶೇಷವಾಗಿ ಸುನಾಮಿ ಈ ಪದವನ್ನು ಕೇಳಿದ ತಕ್ಷಣ ನೆನಪಿಗೆ ಬರುವುದು 2004ರ ಸುನಾಮಿ. ಅದು 2004 ಡಿಸೆಂಬರ್ 26, ಲಕ್ಷಾಂತರ ಜನರು ಭಯಂಕರವಾದ ಈ ಸುನಾಮಿ ಹೊಡೆತಕ್ಕೆ ಸಿಕ್ಕು ಜೀವವನ್ನು ಕಳೆದುಕೊಂಡಿರುವುದು ಮಾತ್ರ ಒಂದು ಕರಾಳ ಇತಿಹಾಸ. ಇಂಡೋನೇಷ್ಯಾದ ಸುಮಾತ್ರ ದ್ವೀಪದ ಪಶ್ಚಿಮ ಕರಾವಳಿಯ ಹಿಂದೂ ಮಹಾಸಾಗರದ ಆಳದಲ್ಲಿ ಈ ಭೂ ಕಂಪನದ ಕೇಂದ್ರ ಕಂಡುಬಂದಿತ್ತು.

ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 9ರ ಪ್ರಮಾಣದಲ್ಲಿತ್ತು ಸುಮಾರು 30 ಅಡಿಗಳಷ್ಟು ಎತ್ತರದ ಅಲೆಗಳನ್ನು ಸೃಷ್ಟಿಸಿತ್ತು. ಭಾರತವೂ ಸೇರಿದಂತೆ ಒಟ್ಟು 14 ದೇಶಗಳ ಅಂದಾಜು 2 ಲಕ್ಷಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿತ್ತು. ಈ ಸುನಾಮಿಯ ಅಬ್ಬರ ಎಷ್ಟೊಂದು ತೀವ್ರವಾಗಿತ್ತೆಂದರೆ ನಮ್ಮ ಕಿವಿಯ ಬಳಿ ಜೆಟ್ ವಿಮಾನವೊಂದು ಸರಿದು ಹೋದರೆ ಹೇಗೆ ಕೇಳಿಸುತ್ತದೆಯೋ ಅದಕ್ಕಿಂತಲೂ ಭಯಂಕರವಾಗಿತ್ತೆಂದು ಹೇಳಲಾಗಿದೆ. 2011ರಲ್ಲಿ ಜಪಾನ್‌ನಲ್ಲಿ ಉಂಟಾದ ಭೂಕಂಪನದಿಂದಾಗಿ ಸುನಾಮಿಗೂ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಹೊಸದೊಂದು ಸಮಸ್ಯೆಯೂ ಉದ್ಭವವಾಗಿತ್ತು. ಅದೇನೆಂದರೆ ಪರಮಾಣು ವಿದ್ಯುತ್ ಸ್ಥಾವರದ ದುರಂತಕ್ಕೂ ಕಾರಣವಾಗಿ ಜಗತ್ತಿಗೆ ಇದೊಂದು ದೊಡ್ಡ ಎಚ್ಚರಿಕೆಯ ಗಂಟೆಯಾಗಿತ್ತೆಂದರೆ ತಪ್ಪಾಗಲಾರದು.

ಹೆಚ್ಚಿನ ಸುನಾಮಿಗಳಿಗೆ ಕೆಲವು ಕಾರಣಗಳನ್ನು ನೋಡಲಾಗಿ – ಮಾನವನ ಅತಿಯಾದ ಪರಿಸರ ವಿರೋಧಿ ಚಟುವಟಿಕೆಗಳು, ನೀರಿನೊಳಗಿನ ಭೂಕಂಪಗಳು, ಭೂಕುಸಿತಗಳು, ಜ್ವಾಲಾಮುಖಿ ಸ್ಫೋಟಗಳು, ಬದಲಾಗುತ್ತಿರುವ ಹವಾಮಾನ ಮುಂತಾದವು ಗಳು. ಹೀಗೆ ಸುನಾಮಿಗಳಿಂದ ಅಪಾರ ಪ್ರಮಾಣದ ಆಸ್ತಿ – ಪಾಸ್ತಿ, ಸಾವು – ನೋವುಗಳು ಉಂಟಾಗುವುದರಿಂದ ಇದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ನವೆಂಬರ್-5ನ್ನು ವಿಶ್ವ ಸುನಾಮಿ ಜಾಗೃತಿ ದಿನವನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಸುನಾಮಿ ಎಂದರೆ ಸಾಗರ ಅಥವಾ ಇನ್ನಿತರ ಜಲರಾಶಿಯಲ್ಲಿ ಅಗಾಧ ಪ್ರಮಾಣದ ಚಲನೆಯುಂಟಾದಾಗ ಜನಿಸುವ ಸಾಗರದ ತರಂಗಗಳ ಸರಣಿಗೆ ಸುನಾಮಿ (ತ್ಸುನಾಮಿ) ಎಂದು ಕರೆಯುವರು. ತ್ಸುನಾಮಿ ಎಂಬ ಪದ ಮೂಲತಃ ಜಪಾನಿ ಭಾಷೆಯಿಂದ ಬಂದದ್ದು. ಇಲ್ಲಿ ತ್ಸು ಅಂದರೆ ಬಂದರು ಹಾಗೂ ನಾಮಿ, ಅಂದರೆ ಅಲೆ ಎಂದರ್ಥ.

ಒಟ್ಟಾರೆಯಾಗಿ ಸುನಾಮಿ ಪದವು ಜಪಾನಿ ಭಾಷೆಯಲ್ಲಿ ಬಂದರು ಅಲೆ ಎಂಬ ಅರ್ಥ ಕೊಡುತ್ತದೆ. ಭೂಕಂಪ, ಜ್ವಾಲಾಮುಖಿ ಇತ್ಯಾದಿ ಸುನಾಮಿ ಅಲೆಗಳನ್ನು ಹುಟ್ಟು ಹಾಕುವ ಸಾಮರ್ಥ್ಯ ಪಡೆದಿವೆ. ಸಮುದ್ರದಾಳದಲ್ಲಿ ಗಂಭೀರ ಸ್ವರೂಪದ ಭೂಕಂಪ ಸಂಭವಿಸಿದಾಗ ಸಮುದ್ರದ ತಳಭಾಗವು ಹಠಾತ್ತಾಗಿ ಮೇಲೇರಿ ನೀರನ್ನು ಮೇಲಕ್ಕೆ ದೂಡುತ್ತದೆ. ಆದರೆ ಗುರುತ್ವಾಕರ್ಷಣೆಯು ಈ ನೀರನ್ನು ಹಿಂದಕ್ಕೆ ಎಳೆಯುತ್ತದೆ. ಈ ಒಂದು ಪ್ರಕ್ರಿಯೆಯಲ್ಲಿ ದೊಡ್ಡ ಗಾತ್ರದ ಅಲೆ/ತರಂಗಗಳು ಏಳುತ್ತವೆ. ಪ್ರತಿಯೊಂದು ಅಲೆಗಳ ಎತ್ತರ ಆರಂಭದಲ್ಲಿ 3 ಅಡಿಗಳಷ್ಟು ಇರುತ್ತದೆ. ಸಮುದ್ರದ ದಂಡೆಯ ಸಮೀಪ ಬರುತ್ತಿದ್ದಂತೆ ಅಲೆಗಳ ಎತ್ತರ ಹೆಚ್ಚಳ ಗೊಳ್ಳುತ್ತಾ ಹೋಗುತ್ತದೆ. ಒಟ್ಟಾರೆಯಾಗಿ ಭವಿಷ್ಯದಲ್ಲಿ ಸುನಾಮಿಯ ಬಗ್ಗೆ ನಿಖರವಾಗಿ ಮುನ್ನಚ್ಚರಿಕೆ ನೀಡುವುದು, ಪರಿಣಾಮ ಕಾರಿಯಾಗಿ ತಡೆಗಟ್ಟುವ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳಬೇಕಿದೆ.