Saturday, 23rd November 2024

ಮಾಸ್ ಶೂಟಿಂಗ್ಸ್ ಇನ್ ಅಮೆರಿಕ – 2

ಶಿಶಿರ ಕಾಲ

shishirh@gmail.com

ಈ ಲೇಖನ ಬರೆಯುವಾಗಲೇ ಸಂಜೆ ಓಕ್ಲಹಾಮಾ- ತುಲ್ಸಾದ ಆಸ್ಪತ್ರೆಯಲ್ಲಿ ಮಾಸ್ ಶೂಟಿಂಗ್ ನಡೆದು ನಾಲ್ವರು ಸತ್ತಿರುವುದು ಸುದ್ದಿಯಾಗುತ್ತಿದೆ. ಅಮೆರಿಕ ದಲ್ಲಿ ಇದ್ದವರಿಗೆ, ಸದಾ ಸುದ್ದಿಯ ಮೇಲೆ ಕಣ್ಣಿಡುವವರಿಗೆ ಇದು ಹೊಸತಲ್ಲ, ಒಂದು ಸುದ್ದಿಯೇ ಅಲ್ಲ.

2016ರ ಜೂನ್ ತಿಂಗಳು. ಬರಾಕ್ ಒಬಾಮ ಅಮೆರಿಕ ಅಧ್ಯಕ್ಷರಾಗಿ ಅದಾಗಲೇ ಏಳುವರೆ ವರ್ಷ ಕಳೆದಿತ್ತು. ಅಧಿಕಾರ ಇನ್ನೊಂದು ಆರು ತಿಂಗಳು ಬಾಕಿ ಇತ್ತು. ಆ ದಿನ ವೈಟ್ ಹೌಸ್‌ನ ಪ್ರೆಸ್‌ಮೀಟ್‌ನಲ್ಲಿ, ಅವರ ಪಕ್ಕದಲ್ಲಿ ಇಂದಿನ ಅಧ್ಯಕ್ಷ, ಅಂದಿನ ಉಪಾಧ್ಯಕ್ಷ ಜೋ ಬೈಡನ್ ಕೂಡ ನಿಂತಿದ್ದರು. ಒಬಾಮ ಇಂಥ ಮಾಸ್ ಶೂಟಿಂಗ್ ಘಟನೆಗಳನ್ನು ಸಾಲು ಸಾಲಾಗಿ ಹೆಸರಿಸುತ್ತ ಹೋಗಿದ್ದರು.

ಒಂದು ಘಟನೆಯಲ್ಲಿ ಒಂದನೇ ಕ್ಲಾಸಿನ ಮಕ್ಕಳು ಗುಂಡಿಗೆ ಬಲಿಯಾದದ್ದು ಆಗ ಮಾತಿನಲ್ಲಿ ಬಂತು. ಒಂದು ಕ್ಷಣ ಒಬಾಮ ಗದ್ಗದಿತರಾದರು. ಮುಂದಿನ ಕ್ಷಣ- ತುಂಬಿದ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಅಕ್ಷರಶಃ ಕಣ್ಣೀರು ಸುರಿಸು ತ್ತಿದ್ದರು. ಜೋ ಬೈಡನ್ ಕಣ್ಣಾಲಿಗಳೂ ಒದ್ದೆಯಾಗಿದ್ದವು. By the way, it happens on the streets of Chicago everyday ಎಂದಾಗ ಅವರ ಕಣ್ಣು ಅಸಹಾಯಕತೆ ಮತ್ತು ಹತಾಶೆಯಿಂದ ನೆಲ ನೋಡುತ್ತಿತ್ತು. ಅವರ ಕೆನ್ನೆಯ ಮೇಲೆ ಕಣ್ಣೀರು ಹರಿದಿತ್ತು.

ಒಬಾಮ ಚಿಕಾಗೊದಿಂದ ಆರಿಸಿ ಅಮೆರಿಕದ ಮೇಲ್ಮನೆ ಸೆನೆಟ್ ಮೆಟ್ಟಿಲೇರಿದವರು. ಅವರು ಬ್ಲ್ಯಾಕ್ ಅಮೆರಿ ಕನ್ ಎನ್ನುವುದಕ್ಕಿಂತ ಅಮೆರಿಕದ ಅತಿ ಹೆಚ್ಚು ಗನ್ ಕ್ರೌರ್ಯ ನಡೆಯುವ ಚಿಕಾಗೋದಿಂದ ಹೊರಟ ರಾಜಕಾರಣಿ. ಸೆನೆಟ್‌ಗೆ ಆರಿಸಿ ಹೋಗುವುದಕ್ಕಿಂತ ಮೊದಲು ಚಿಕಾಗೊ ರಸ್ತೆಗಳಲ್ಲಿ ಓಡಾಡಿಕೊಂಡು, ಸಮಾಜ ಸೇವೆ ಮಾಡಿಕೊಂಡಿದ್ದವರು. ಚಿಕಾಗೊದ ದಕ್ಷಿಣಕ್ಕೆ ಕೆಲವು ಪ್ರದೇಶಗಳಿವೆ. ಸೌತ್‌ಸೈಡ್ ಎಂದೇ ಕರೆಯೋದು. ಅದು ಇಡೀ ಅಮೆರಿಕದ ಅತಿ ಹೆಚ್ಚು ಗನ್ ಕೌರ್ಯ ನಡೆಯುವ ಪ್ರದೇಶ. ಅದೊಂದು ದಿನ ಟನಲ್‌ನಲ್ಲಿ ಹೋಗುವಾಗ ಜಿಪಿಎಸ್ ಸಿಗ್ನಲ್ ಸಿಗದೆ, ಅನುಸರಿಸುವಲ್ಲಿ ತಪ್ಪಾಗಿ ಆ ಪ್ರದೇಶಕ್ಕೆ ಕಾರಿನಲ್ಲಿ ಹೋಗಿಬಿಟ್ಟಿದ್ದೆ.

ಹಾಡು ಹಗಲೇ ಅಲ್ಲಿ ಭೀಕರತೆ ಕಾಣಿಸುತ್ತದೆ. ಇದು ಅಮೆರಿಕವೇ ಹೌದಾ ಎನ್ನುವಷ್ಟು. ರಸ್ತೆಗಳಲ್ಲಿ ಕಸದ ರಾಶಿಗಳು, ರಸ್ತೆಯ ಪಕ್ಕದ ಕುರ್ಚಿ ಹಾಕಿ ಕೂರುವ, ಉದ್ಯೋಗವಿಲ್ಲವೇ ಇವರಿಗೆ ಎಂದೆನಿಸುವ ಜನರು. ಭೀಕರತೆ ಅಲ್ಲಿಯ ಗಾಳಿಯಲ್ಲಿದೆ. ಆ ಪ್ರದೇಶದಲ್ಲಿ ಸಿಗ್ನಲ್ ಲೈಟ್ ಕೆಂಪಿದ್ದರೂ ನಿಲ್ಲಿಸಲೇಬೇಕೆಂಬುದಿಲ್ಲ ಎನ್ನುವ ಅಲಿಖಿತ ಕಾನೂನು. 60-80 ಗನ್ ಮರ್ಡರ್‌ಗಳು, 300-400 ಮಂದಿ ಗನ್ ನಿಂದ ಗಾಯಗೊಂಡು ಬಚಾವಾದವರು- ಇದು ತಿಂಗಳ ಸರಾಸರಿ!(heyjackass.com ವೆಬ್ಸೈಟ್ ನೋಡಿ). ಇಂಥ ಅಮೆರಿಕದ ವ್ಯವಸ್ಥೆಯ ವೈಪರೀತ್ಯದ ಸ್ಥಳದಿಂದ ಸೆನೆಟ್‌ಗೆ ಆರಿಸಿ ಹೋದ ನಂತರದಲ್ಲಿ ಅಮೆರಿಕದ ಅಧ್ಯಕ್ಷ ರಾದವರು ಒಬಾಮ. ಒಬಾಮ ಆ ದಿನ ಅತ್ತದ್ದು ಅವರಲ್ಲಿರುವ ಆಂತರಿಕ ಮಾನವೀಯತೆಗೆ ಸಾಕ್ಷಿ.

ಹೀಗೆಲ್ಲ ಇರುವಾಗ ಕೂಡ, ತನ್ನ ಅಧ್ಯಕ್ಷತೆಯ ಬಹುತೇಕ ಭಾಗ ಮುಗಿಸುವ ಹಂತದಲ್ಲಿ ಕೂಡ ಒಬಾಮ ಗನ್ ಕಂಟ್ರೋಲ್ ಬಗ್ಗೆ ಇನ್ನೂ ಕನವರಿಸುತ್ತಲೇ ಇದ್ದರು. ಅಮೆರಿಕದ ಇತಿಹಾಸದ ಅತ್ಯಂತ ಭೀಕರವೆನ್ನಿಸುವ ಸ್ಯಾಂಡಿಹೂಕ್ ಶಾಲೆಯಲ್ಲಿ ನಡೆದ ಶಾಲಾ ಮಾಸ್ ಶೂಟಿಂಗ್‌ನಲ್ಲಿ ೨೧ ಕಂದಮ್ಮಗಳು ಮೃತರಾಗಿದ್ದು ಕೂಡ ಒಬಾಮ ಆಳ್ವಿಕೆಯಲ್ಲಿಯೇ. ಒಬಾಮ ಅದೆಷ್ಟು ಬಾರಿ ಗನ್ ಕಂಟ್ರೋಲ್ ಬಗ್ಗೆ ಮಾತನಾಡಿದ್ದರೋ ಲೆಕ್ಕವಿಲ್ಲ. ತನ್ನ ಅಧ್ಯಕ್ಷೀಯ ಸಮಯದ ಅಂತ್ಯದಲ್ಲಿ ಒಬಾಮ ಪ್ರೆಸಿಡೆಂಟ್‌ನ ಪರಮೋಚ್ಚ ಅಽಕಾರವಾದ ಎಕ್ಸಿಕ್ಯೂಟಿವ್ ಆರ್ಡರ್ ಚಲಾಯಿಸಲು ಅಂದು ಮುಂದಾಗಿದ್ದರು. ಇದೆಲ್ಲದಕ್ಕೆ ಅಮೆರಿಕದ ಸಂಸತ್ತು ಕಾಂಗ್ರೆಸ್ ಸಹಕರಿಸಬೇಕೆಂದು ಕೇಳಿಕೊಂಡಿದ್ದರು.

ಹಾಗೊಂದು ಹೇಳಿಕೆ ಹೊರಬೀಳುತ್ತಿದ್ದಂತೆ ಶುರುವಾಯಿತು ನೋಡಿ ರಾಜಕೀಯ, ಡ್ರಾಮಾಗಳು. ಆಗಿನ್ನೂ ಅಧ್ಯಕ್ಷ ರುಯಾವ ಕಾನೂನು ಜಾರಿಗೆ ತರಬಹುದು ಎಂಬ ವಿವರಣೆ ಕೂಡ ಹೊರಬಂದಿರಲಿಲ್ಲ. ಒಂದಿಡೀ ರಾಜಕೀಯ ವ್ಯವಸ್ಥೆ, ವಿರೋಧ ಪಕ್ಷದವರಾದ ರಿಪಬ್ಲಿಕನ್ನರು ಒಬಾಮ ಮೇಲೆ ಮುಗಿಬಿದ್ದರು. ಅಮೆರಿಕದ ಎರಡನೇ ಅಮೆಂಡ್ಮೆಂಟ್, ಬಂದೂಕನ್ನು ಹೊಂದುವುದು ಹಕ್ಕು ಎನ್ನುವ ಕಾನೂನು, ಸಂವಿಧಾನ ಡೇಂಜರ್ ನಲ್ಲಿದೆ ಎಂದು ಗೌಜಿ ಎದ್ದುಬಿತ್ತು. ಒಬ್ಬ ರೈಟ್ ವಿಂಗ್ ಟಿವಿ ಚ್ಯಾನಲ್ಲಿನ ಪ್ಯಾನಲ್ಲಿನಲ್ಲಿ ಒಬಾಮ ನಿಂತ ಪೋಡಿಯಂ ಪರಿಶೀಲಿಸಬೇಕು, ಅವರು ಅಲ್ಲಿ ಹಸಿ ಈರುಳ್ಳಿ ಇಟ್ಟುಕೊಂಡು, ಅದನ್ನು ಕಣ್ಣಿಗೆ ತಿಕ್ಕಿ ಅತ್ತಿದ್ದು ಎನ್ನುವ ಲೆವೆಲ್ಲಿನ ಮಾತುಗಳೂ ಬಂದವು. ರಿಪಬ್ಲಿಕನ್ ಪಕ್ಷದವರೆಲ್ಲ ಒಬಾಮ ಮೇಲೆ ಮುಗಿಬಿದ್ದರು. ಅಮೆರಿಕದಲ್ಲಿ ಗನ್- ತೀರಾ ರಾಜಕೀಯ ಧ್ರುವೀಕರಣದ ವಿಚಾರ. ಹಾಗಾಗಿ ಒಬಾಮ ಅವರ ಸ್ವಂತ ಡೆಮೊಕ್ರಾಟ್ ಪಕ್ಷದವರು ಕೂಡ ತುಟಿಪಿಟಕ್ ಅನ್ನಲಿಲ್ಲ.

ಅದೇಕೆ ಹೀಗೆ? ಇದೊಂದು well oiled ವ್ಯವಸ್ಥೆ. ಗನ್ ನಿಷೇಽಸುವುದಂತೂ ಸಾಧ್ಯವಿಲ್ಲ. ಏಕೆಂದರೆ ಅದು ಅಲ್ಲಿನ ಕಾನೂನು ಕೊಟ್ಟ ಹಕ್ಕು. ಹಾಗಾಗಿ ವ್ಯವಸ್ಥೆಯ ಮುಂದಿರುವುದು ಅದನ್ನು ಬೇಕಾಬಿಟ್ಟಿ- ಅಪಾತ್ರರಿಗೆ, ಮಾನಸಿಕ ಗಿರಾಕಿಗಳಿಗೆ ಸಿಗದಂತೆ ಮಾಡುವ ಕಾನೂನು ಜಾರಿಗೆ ತರುವುದು. ಆದರೆ ಹಾಗೊಂದು ಕಾನೂನು ತಂದರೆ ಅದರ ನೇರ ಹೊಡೆತ ಬಂದೂಕು ತಯಾರಿಸುವ ಕಂಪನಿಗಳ ಮೇಲೆ.

ಈ ಕಂಪನಿಗಳು ಸಾಕಿ ಸಲಹುವ ವ್ಯವಸ್ಥೆ NRA & National Rifle Association. ಅಮೆರಿಕದ ಘ್ಕೆಅ ಗೆ ಈಗ ೧೫೦ ವರ್ಷ. ಮೂಲದಲ್ಲಿ ಇದು ಶುರು ವಾಗಿದ್ದು ಗನ್ ಸಂಬಂಧಿ ಕ್ರೀಡೆಗಳನ್ನು ನಡೆಸಲು ಮತ್ತು ಜನಸಾಮಾನ್ಯರಿಗೆ ಬಂದೂಕನ್ನು ಹೇಗೆ ಚಲಾಯಿಸುವುದು ಎನ್ನುವುದನ್ನು ಕಲಿಸಲು. ಯುದ್ಧದ ಸಂದರ್ಭ ಬಂದರೆ ಜನಸಾಮಾನ್ಯರೂ ಭಾಗಿಯಾಗುವಂತೆ ತಯಾರಾಗಿರಿಸುವುದು. ಆಗ ಈ ಉದ್ದೇಶ ಆವಶ್ಯಕತೆಯೆನ್ನಿಸಿತ್ತು. ಏಕೆಂದರೆ ಇಡೀ ಸೈನ್ಯದ ತರಬೇತಿಯಲ್ಲಿ ಬಂದೂಕು ಚಲಾಯಿಸುವುದು ಅತ್ಯಂತ ಮುಖ್ಯವಾದ, ದೀರ್ಘ ಸಮಯ ತೆಗೆದುಕೊಳ್ಳುವ, ದುಬಾರಿ ತರಬೇತಿ. ಜನಸಾಮಾನ್ಯರಿಗೆ ಇಂಥದ್ದೊಂ ದು ಟ್ರೇನಿಂಗ್ ಕೊಡುವ ಜವಾಬ್ದಾರಿ, ದೂರದೃಷ್ಟಿ ಹೊಂದಿ ಹುಟ್ಟಿಕೊಂಡ ಒಂದು ಸಂಸ್ಥೆ ಕ್ರಮೇಣ, ಕಾಲ ಕಳೆದಂತೆ ಮತ್ತು ಇಂದು ಇಡೀ ಅಮೆರಿಕನ್ ವ್ಯವಸ್ಥೆ ಯಲ್ಲಿಯೇ ಅತ್ಯಂತ ಶಕ್ತಿಶಾಲಿ ವಶೀಲಿ ಸಂಸ್ಥೆ ಯಾಗಿ ನಿಂತಿರುವುದು ಇದೆಲ್ಲ ಸಮಸ್ಯೆಗೆ ಮೂಲ ಕಾರಣ.

ಈ ಸಂಸ್ಥೆ ಇಲ್ಲದಿದ್ದಲ್ಲಿ ಅದ್ಯಾವತ್ತೋ ಅಮೆರಿಕದಲ್ಲಿ ಗನ್ ನಿಯಂತ್ರಣಾ ಕಾನೂನು ಜಾರಿಗೆ ಬಂದಾಗುತ್ತಿತ್ತು. ಅಂದು ಅಂಥದ್ದೊಂದು ಉದ್ದೇಶಕ್ಕೆ ಹುಟ್ಟಿಕೊಂಡ ಘ್ಕೆಅ ಎಂಬ ಸಂಸ್ಥೆಗೆ ಅಮೆರಿಕನ್ ಸರಕಾರ ಕೂಡ ಹಣಸಹಾಯ ಮಾಡುತ್ತಿತ್ತು. ಏಕೆಂದರೆ ತನ್ನ ಜನಸಾಮಾನ್ಯರಲ್ಲಿ ಇಂಥದ್ದೊಂದು ಗನ್ ಕೌಶಲ್ಯ ಅಗತ್ಯವಿದ್ದ ಕಾಲವದು. ಆದರೆ ಸಮಯ ಕಳೆದಂತೆ, ಗನ್ ಕ್ರೀಡೆಗಳು ಹೆಚ್ಚಿದಂತೆ ಈ ಸರಕಾರ ಕೊಡುವ ಹಣ ಅರೆಕಾಸಿನ ಮಜ್ಜಿಗೆಯಂತಾಯಿತು. ಅಲ್ಲಿ ಪುಕ್ಸಟ್ಟೆ ಹಣ ಕೊಡಲು ಮುಂದಾಗಿ ಬಂದವರು ಈ ಬಂದೂಕು ತಯಾರಿಸುವ ಕಂಪನಿಯವರು.

ಬರೀ ಬಂದೂಕಷ್ಟೆ ಅಲ್ಲ, ಬಂದೂಕು ಕ್ರೀಡೆಗೆ ಬೇಕಾಗುವ ಪರಿಕರಗಳು, ಗನ್ ಸ್ಟಾಂಡ್‌ಗಳು, ಮದ್ದು ಗುಂಡುಗಳು. ಗನ್ ಕಂಟ್ರೋಲ್ ಎಂದರೆ ಇವರೆಲ್ಲರ ವ್ಯವಹಾರಕ್ಕೆ ನೇರ ಹೊಡೆತ. ಅಮೆರಿಕದಲ್ಲಿ ಪ್ರತಿ ವರ್ಷ ಸುಮಾರು ೨೦ ಲಕ್ಷ ಸಣ್ಣ ಪಿಸ್ತೂಲುಗಳು ಮಾರಾಟವಾಗುತ್ತವೆ. ಸೆಮಿ ಆಟೋಮ್ಯಾಟಿಕ್ ಗನ್‌ಗಳನ್ನೂ ಅಂಗಡಿಗೆ ಹೋಗಿ ಮೊಬೈಲ್ ತಂದಂತೆ ತರಬಹುದು- ಮನೆಯಲ್ಲಿಟ್ಟುಕೊಳಬಹುದು. ಇಂದು ಇದು ಹಲವು ಬಿಲಿಯನ್ ಡಾಲರ್‌ನ ವ್ಯವಹಾರ.
ಈ ವ್ಯವಹಾರವೇ ಅಮೆರಿಕದ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಂಟ್ರೋಲ್ ಮಾಡುತ್ತದೆ.

ಇತ್ತ ರಾಜಕೀಯವನ್ನು ಕಂಟ್ರೋಲ್ ಮಾಡುತ್ತ ಅತ್ತ ಜನರಲ್ಲಿ ಬಂದೂಕು ಹೊಂದುವ, ಬಳಸುವ ಕ್ರೇಜ್ ಅನ್ನು ಕೂಡ ಅಷ್ಟೇ ಜೀವಂತವಾಗಿಡುತ್ತದೆ ಈ ಸಂಸ್ಥೆ. ರಾಜಕಾರಣಿಗಳಿಗೆ ಹಣಕೊಟ್ಟು ಲಾಬಿ ಮಾಡುವುದು ಒಂದು ಕಡೆ, ಯಾವುದೇ ರಾಜ್ಯ ಸರಕಾರ ಇದರ ವಿರುದ್ಧ ಹೊರಟರೆ ದೇಶದ ಟಾಪ್ ಲಾಯರ್ ಗಳನ್ನು ಬಳಸಿ, ಯಥೇಚ್ಛ ವ್ಯಯಿಸಿ ಅಂತಹ ಕಾನೂನನ್ನು ಈ ಬಂದೂಕು ಹೊಂದುವ ಹಕ್ಕಿಗೆ ಆಗುವ ಹೊಡೆತವೆನ್ನುವಂತೆ ಬಿಂಬಿಸಿ, ತೀರ್ಪು ಗನ್ ಕಂಟ್ರೋಲ್ ಮಾಡದಂತೆ ಹೊರಬರುವಂತೆ ನೋಡಿಕೊಳ್ಳುತ್ತದೆ.

ಮಾಸ್ ಶೂಟಿಂಗ್‌ಗಳು ಈ ಪ್ರಮಾಣದಲ್ಲಿ ನಡೆದಾಗ, ಮಕ್ಕಳ ಮಾರಣಹೋಮ ನಡೆದಾಗ ಕೂಡ ಇದೆಲ್ಲ ಒಂದು ಸಂಪೂರ್ಣ ನಾಟಕ ಎನ್ನುವ ನೆರೇಷನ್ ಕಟ್ಟುವುದಕ್ಕೂ ಹಿಂಜರಿಯದ ಸಂಸ್ಥೆ ಇದು. ಮಕ್ಕಳನ್ನು ಕಳೆದುಕೊಂಡು ಕ್ಯಾಮೆರಾ ಎದುರಿಗೆ ಬಂದರೆ ಇದೆಲ್ಲ ಒಂದು ವ್ಯವಸ್ಥಿತ, ಹಣಪಡೆಯಲು ನಡೆಯುವ ನಾಟಕ ಎನ್ನುವ, ಅದನ್ನೇ ನಂಬುವ ವರ್ಗವನ್ನು ಕೂಡ ಈ ವ್ಯವಸ್ಥೆ ಹುಟ್ಟಿಹಾಕಿದೆ. ಈ ಕಾರಣಕ್ಕೆ ಅದೆಷ್ಟೋ ಬಾರಿ- ಈ ರೀತಿ ಪ್ರಾಣ ಕಳೆದುಕೊಂಡ ಮನೆಯ ವರು ಪಬ್ಲಿಕ್ ಹೇಳಿಕೆ ಕೊಡಲು ಹಿಂಜರಿಯುವುದಿದೆ.

ಈ ಲೇಖನ ಬರೆಯುವಾಗಲೇ ಸಂಜೆ ಓಕ್ಲಹಾಮಾ- ತುಲ್ಸಾದ ಆಸ್ಪತ್ರೆಯಲ್ಲಿ ಮಾಸ್ ಶೂಟಿಂಗ್ ನಡೆದು ನಾಲ್ವರು ಸತ್ತಿರುವುದು ಸುದ್ದಿಯಾಗುತ್ತಿದೆ. ಅಮೆರಿಕದಲ್ಲಿ
ಇದ್ದವರಿಗೆ, ಸದಾ ಸುದ್ದಿಯ ಮೇಲೆ ಕಣ್ಣಿಡುವವರಿಗೆ ಇದು ಹೊಸತಲ್ಲ, ಒಂದು ಸುದ್ದಿಯೇ ಅಲ್ಲ. ಇದು ಇಲ್ಲಿನ ನಿತ್ಯ ಕರ್ಮ ಎನ್ನುವಷ್ಟು ಜಾಡ್ಯತೆ ಟ್ಟಿಬಿಡುತ್ತದೆಯಲ್ಲ
ಅದು ನಮ್ಮೊಳಗಿನ ಮಾನವೀಯತೆ ಬತ್ತಿಹೋದ ಲಕ್ಷಣ ವೂ ಅಲ್ಲ. ಅದು ಅಸಹಾಯಕತೆಯಲ್ಲಿ ಹುಟ್ಟುವ ವೈರಾಗ್ಯ, ಜಡ್ಡು. ಕೊನೆಯಲ್ಲಿ- ಹಿಂದಿನ ವಾರ ಶಾಲೆ
ಯಲ್ಲಿ ನಡೆದ ಮಾಸ್ ಶೂಟಿಂಗ್‌ನಲ್ಲಿ ಮಗುವನ್ನು ಕಳೆದುಕೊಂಡ ಒಬ್ಬ ತಾಯಿ ಮೀಡಿಯಾದ ಎದುರು ಬಂದು ಹೇಳಿದ್ದು ಒಂದೇ ಶಬ್ದ- Give!’.