Sunday, 8th September 2024

ಹಳ್ಳಿಗಳನ್ನು ಕಟ್ಟುವ ಕಷ್ಟ-ಸುಖ: ಸಾಮಾಜಿಕ ಚಿಂತನ

ವ್ಯಕ್ತಿ- ಚಿತ್ರ

ಪ್ರೊ.ಆರ್‌.ಜಿ.ಹೆಗಡೆ

ಉತ್ತರ ಕನ್ನಡ ಜಿಲ್ಲೆಯ ಹೊಲನಗದ್ದೆಯಿಂದ ಬಂದು ಧಾರವಾಡದಲ್ಲಿ ನೆಲೆಸಿರುವ ಖ್ಯಾತ ಸಮಾಜ ವಿಜ್ಞಾನಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಪ್ರಕಾಶ್ ಭಟ್ ಅವರ ಪುಸ್ತಕ ’ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ ’ ವನ್ನುಓದಬೇಕು. ಅದರಲ್ಲಿಯೂ ಮುಖ್ಯವಾಗಿ, ನಾವು, ಅಂದರೆ ಹಳ್ಳಿಗಳನ್ನು ಕಟ್ಟು ವುದು ಸಾಧ್ಯವೇ ಇಲ್ಲ ಎನ್ನುವ ಮಾತುಗಳನ್ನು ದಿನ ನಿತ್ಯವೂ ಓದುತ್ತಿರುವವರು, ಕೇಳುತ್ತಿರುವವರು, ಹಳ್ಳಿಗಳು ಕಣ್ಣ ಮುಂದೆಯೇ ನಾಶವಾಗುತ್ತಿರುವು ದನ್ನು ನೋಡುತ್ತಿರುವವರು ಓದಲೇಬೇಕು. ಉತ್ತರ ಕನ್ನಡ ಜಿಲ್ಲೆಯ ಹಳ್ಳಿಗಳ ಅವಸ್ಥೆ ನೋಡಿ!

ಸಂಪದ್ಭಭರಿತ ಅಡಿಕೆ ತೋಟಗಳಿಂದ ತುಂಬಿದ್ದ ಹಳ್ಳಿಗಳ ಸಾವಿರಾರು ಮನೆಗಳಲ್ಲಿ ಇಂದು ದೀಪ ಹಚ್ಚಲೂ ಜನರಿಲ್ಲ. ಏಕೆ ಹೀಗಾಯಿತು ಎನ್ನುವುದಕ್ಕೆ ಹಲವು ಕಾರಣಗಳಿವೆ. ನಮ್ಮ ಶಿಕ್ಷಣವಂತರಿಗೆ ಅಲ್ಲಿಉದ್ಯೋಗವಿಲ್ಲ. ಕೃಷಿ ಈಗ ಲಾಭದಾಯಕವಲ್ಲ. ಕೃಷಿ ಕಾರ್ಮಿಕರ ಲಭ್ಯತೆಯಿಲ್ಲ. ಇದ್ದರೂ ಕೌಶಲ ಉಳ್ಳವರು ಕಡಿಮೆ. ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾಗಿಲ್ಲ. ಒಳ್ಳೆಯ ಶಾಲೆಗಳು, ಆಸ್ಪತ್ರೆಗಳು ಹತ್ತಿರದಲ್ಲಿ ಇಲ್ಲ. ಸಹಕಾರ ಕೃಷಿ ವ್ಯಾವ ಹಾರಿಕವಲ್ಲ.

ಬರ ನೆರೆ ಹಾವಳಿ ಕಾಡುವುದು ಹಳ್ಳಿಗಳನ್ನು. ಕೃಷಿಗೆ ಹಲವು ಪ್ರಾಣಿಗಳು ವೈರಿಗಳು. ಮಂಗ, ಹಂದಿ, ಆನೆ, ಹಾವು, ಹಕ್ಕಿಗಳು, ಕೀಟಗಳು ಇದ್ದ ಬಿದ್ದ ಬೆಳೆಯನ್ನೂ ನಾಶಮಾಡುತ್ತವೆ. ಕೃಷಿ ಜತೆ ಹೈನುಗಾರಿಕೆ ಇತ್ಯಾದಿ ಮಾಡುವುದು ಇತ್ಯಾದಿ ಕೇವಲ ಕನಸು. ಏಕೆಂದರೆ ಹತ್ತಿರದಲ್ಲಿ ಕೊಳ್ಳುವವರಿಲ್ಲ. ಈಗ ಹೆಚ್ಚು ಕಡಿಮೆ ಎಲ್ಲ ಹಳ್ಳಿಗಳವರು ವಲಸೆ ಹೋಗಲು ತುದಿಗಾಲ ಮೇಲೆ ನಿಂತು ಬಿಟ್ಟಿದ್ದಾರೆ. ಮನಸ್ಥಿಯಿ ಹೇಗಿದೆಯೆಂದರೆ ಮೂಲಭೂತ ಸೌಕರ್ಯ ಗಳನ್ನು ಸರಕಾರ ಸೃಷ್ಟಿ ಮಾಡಿದರೂ ಕೂಡ ಜನರಿಗೆ ಹಳ್ಳಿಗಳ ಕಡೆ ವಿಶೇಷ ಆಸಕ್ತಿ ಇದ್ದಂತಿಲ್ಲ.

ಆ ಸಮಯ ಮುಗಿದಂತಿದೆ. ಕೆಲವರು ಈ ವರ್ಷ ಊರು ಬಿಡಲಿದ್ದಾರೆ. ಇನ್ನು ಕೆಲವರು ಐದಾರು ವರ್ಷಗಳಲ್ಲಿ ಅಷ್ಟೇ ವ್ಯತ್ಯಾಸ. ಬೇರೆ ಜಿಲ್ಲೆಗಳ ಹಳ್ಳಿಗಳ ಪರಿಸ್ಥಿತಿಯೂ ಕೆಟ್ಟದಾಗಿಯೇಇದೆ. ಇಂತಹ ವ್ಯಾಪಕ ದುಸ್ಥಿತಿಯ ಹಿನ್ನೆಲೆಯಲ್ಲಿಯೂ ಹಳ್ಳಿಗಳನ್ನು ಯಶಸ್ವಿಯಾಗಿ ಕಟ್ಟಿದ ಕಥೆ ಹೇಳುವ, ಅದು
ಸಾಧ್ಯದೆ ಎನ್ನುವುದನ್ನು ಆಧಾರಗಳೊಂದಿಗೆ ತಂದಿಡುವ ’ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ -ಒಂದು ’ರೀತಿಯ ಆತ್ಮಕಥನ’ ಅಥವಾ ಸಾಮಾಜಿಕ ಚಿಂತನ’- ನಮ್ಮನ್ನುಚಕಿತರನ್ನಾಗಿಸುತ್ತದೆ. ಅಚ್ಚರಿ ಹುಟ್ಟಿಸುತ್ತದೆ. ಏಕೆಂದರೆ ಪುಸ್ತಕ ಹಳ್ಳಿಗಳನ್ನು ಕಟ್ಟುವ ಸುಖದ ಕುರಿತೂ ಮಾತನಾಡುತ್ತದೆ.

ತೃಪ್ತಿಕರವಾಗಿ ಒಂದು ಹಂತ ಕಟ್ಟಿ ಮುಗಿಸಿದ ಸಂತೃಪ್ತಿಯೂ ಪುಸ್ತಕದಲ್ಲಿ ಧಾರಾಳವಾಗಿ ವ್ಯಕ್ತವಾಗುತ್ತದೆ. ಹಳ್ಳಿಗಳನ್ನು ಕಟ್ಟಲು ಸಾಧ್ಯವಿದೆ ಎಂಬ ವಿಶ್ವಾಸ ಪುಸ್ತಕದಲ್ಲಿ ಮೂಡಿ ನಿಂತಿದೆ. ಐವತ್ತು ಹಳ್ಳಿಗಳನ್ನು ಕಟ್ಟಿ ನಿಲ್ಲಿಸಿದ ಅನುಭವದ ಹಿನ್ನೆಲೆಯಲ್ಲಿ ಬರೆಯಲಾದ ಪುಸ್ತಕ ಇದು. ಭಟ್ ಅವರ ವ್ಯಕ್ತಿತ್ವದ, ಸಾಧನೆಯ ಕುರಿತು ಪುಸ್ತಕದಲ್ಲಿ ಈ ದಿನಗಳಲ್ಲಿ ನಾವು ಸುಲಭವಾಗಿ ನಂಬದ ಮಾತುಗಳು ಬಂದಿವೆ. ಪುಸ್ತಕಕ್ಕೆ ಮೊದಲ ಮಾತು ಬರೆದಿರುವ ಖ್ಯಾತ ಪತಕರ್ತಜಿ.ಎನ್. ಮೋಹನ್ ಹೇಳುವಂತೆ ಗಾಂಧಿಯಂತಹ ಪ್ರಭಾವಶಾಲಿ ಜನ ಹೇಗಿದ್ದರು ಎಂದು ಕಲ್ಪಿಸಿಕೊಳ್ಳುವುದಿದ್ದರೆ ಪ್ರಕಾಶ್ ಭಟ್‌ರನ್ನು
ನೋಡಬೇಕು. ಇಂದು ಸುಮಾರುಎಪ್ಪ ತ್ತೈದು ಹಳ್ಳಿಗಳ ಮುಖದಲ್ಲಿ ಸಂತೋಷದ ಬುಗ್ಗೆ ಇದೆ.

ತಮ್ಮ ಅಭಿವೃದ್ಧಿಯನ್ನುತಾವೇ ಮಾಡಿಕೊಳ್ಳುವ ಹುಮ್ಮಸ್ಸನ್ನು ಹಳ್ಳಿಗಳ ಏಳು ಸಾವಿರಕ್ಕೂ ಹೆಚ್ಚಿನ ಜನ ತೋರಿಸಿದ್ದಾರೆ. ಈ ಹಳ್ಳಿಗಳಲ್ಲಿ ೨೦ ಲಕ್ಷಕ್ಕೂ ಹೆಚ್ಚಿನ ಮರಗಳು ನೆಡಲ್ಪಟ್ಟಿವೆ. ಐದು ಸಾರಕ್ಕೂ ಹೆಚ್ಚಿನ ಕುಟುಂಬಗಳ ಬದುಕು ಬದಲಾಗಿದೆ. ಐವತ್ತು ಕೋಟಿ ಲೀಟರ್ ನೀರನ್ನು ಸಂಗ್ರಸಲಾಗಿದೆ. ಸಾಫ್ಟ್ ವೇರ್ ಉದ್ಯಮವೇ ದೇಶವನ್ನು ಸಾಕುತ್ತಿದೆ ಎನ್ನುವ ಭ್ರಮೆಯಲ್ಲಿ ನಾವು ಬದುಕಿರುವಾಗ ಹಳ್ಳಿಗಳಲ್ಲಿ ಕೆಲಸ ಮಾಡುತ್ತಿರುವ ಇಂತಹ ಯುವಕ ಯುವತಿಯರನ್ನು ನೋಡಬೇಕು.

ಸಾಧಕ ಹಾಗೂ ಬರಹಗಾರ ಪ್ರಕಾಶ್ ಭಟ್ ಹೇಳುವಂತೆ ಈ ಕಾರ್ಯದ ಸಫಲತೆಯ ಹಿಂದೆ ಹಲವು ಪ್ರೇರಣೆಗಳಿವೆ. ಮುಖ್ಯವಾಗಿ ತಮ್ಮ ಗುರು ಮಣಿ ಭಾಯಿದೇಸಾಯಿ ಗ್ರಾಮೀಣಾಭಿವೃದ್ಧಿಯನ್ನು ತನ್ನ ಉಸಿರಾಗಿಸಿದವರು ಎಂದು ಭಟ್ ಹೇಳುತ್ತಾರೆ. ಹಾಗೆಯೆ ಭಟ್‌ಅವರ ಬೆಂಬಲಕ್ಕೆ ನಿಂತಿದ್ದು
ಇಡೀ ಬೈ- ಸಂಸ್ಥೆ. ಯುರೋಪಿಯನ್ ಯೂನಿಯನ್ ನಬಾರ್ಡ್ ಮೂಲಕ ಹಣಕಾಸು ಬೆಂಬಲ ಒದಗಿಸಿತು. ಅದರೆ ಶ್ರೀಧರನ್ ಎನ್ನುವ ಬರಹಗಾರ ಹೇಳಿರುವಂತೆ ಇದು ಹಣದ ಮೂಲಕವಾಗಿ ಸಾಧಿಸಲಾದ ಕೆಲಸವಲ್ಲ. ಭಟ್ ಅವರ, ಹಾಗೂ ಸಂಗಾತಿಗಳ ಇಚ್ಛಾಶಕ್ತಿ, ನಾಯಕತ್ವ, ತ್ಯಾಗ ಮತ್ತು ಬಧ್ದತೆಯ ಫಲ ಇದು. ಇದೆಲ್ಲವನ್ನು ಬಳಸಿಕೊಂಡ ಆಗ ಬೈ-ನ ರಾಜ್ಯ ಸಂಚಾಲಕರಾಗಿದ್ದ ಭಟ್‌ಗೆ ಗ್ರಾಮೀಣಾಭಿವೃದ್ಧಿಯೇ ಜೀವನವಾಗಿ ಹೋಯಿತು.

ಪುಸ್ತಕದ ಕಥನ ವಿಧಾನ ಸರಳ, ಮಾತನಾಡುವ ಶೈಲಿಯಲ್ಲಿರುವಂತಹುದು. ಮುಳ್ಳಿನ ದಾರಿಯಲ್ಲಿ ನಡೆಯುತ್ತ ಹೂವು ಬೆಳೆದ ಕಥೆ ಇದು. ಈ ಕಥೆ ಯನ್ನು ಭಟ್ ಅವರು ಯೋಜನೆಯ ಹಂತದಿಂದ ಹಿಡಿದು ಸಿಽಯ ತನಕವೂ ಕುತೂಹಲಕಾರಿಯಾಗಿ ಹೇಳುತ್ತಾ ಹೋಗುತ್ತಾರೆ. ಅವರು ಹೇಳುವಂತೆ ಯೋಜನೆಯಲ್ಲಿ ಏನನ್ನು ಮಾಡುವುದು ಎನ್ನುವುದು ಮೊದಲೇಒಂದಿಷ್ಟು ನಿರ್ಧರಿತವಾಗಿದ್ದರೂ ಹೇಗೆ ಮಾಡುವುದು ಎನ್ನುವುದರಲ್ಲಿ ನಮಗೆ ಸ್ವಾತಂತ್ರ್ಯವಿತ್ತು. ಜನ ಕೇಂದ್ರಿತ ಸಮಗ್ರಅಭಿವೃದ್ಧಿಯ ಪ್ರಕ್ರಿಯೆಯನ್ನು ಪ್ರಯೋಗಿಸಿ ಮೆಥಡಾಲಜಿಯನ್ನು ಸ್ಥಿರಗೊಳಿಸಿದೆವು. ಕ್ರಮೇಣ ಅದು ನಮಗೆ
ಗ್ರಾಮೀಣ ಅಭಿವೃದ್ಧಿಯ ಹೊಸ ದಾರಿಯನ್ನೇ ದೊರಕಿಸಿಕೊಟ್ಟಿತು. ಸಮಗ್ರ ಕೃಷಿ, ಕೃಷಿಗೆ ತರಬೇತಿ ಚಟುವಟಿಕೆ, ನೆಲ ನೀರು ಸಂರಕ್ಷಣೆ, ಶೌಚಾಲಯ, ಶುದ್ಧ ಅಡುಗೆ ಮನೆ, ಗೋಬರ್ ಗ್ಯಾಸ್, ಹೊಗೆ ರಹಿತ ಒಲೆ, ಕೈತೋಟಗಳು, ಸಂಘಟನೆಯ ಮೂಲಕ ಉಳಿತಾಯ, ಸಾಲ, ಸ್ನೇಹದ ಜಾತ್ರೆ ಎಲ್ಲವೂ ಸುಲಿದ ಬಾಳೆಹಣ್ಣಿನಂತಾಗಿದ್ದು ಜನ ಕೇಂದ್ರಿತ ವಿಧಾನದಿಂದ ಸೇರಿ ಕಾರ್ಯ ಸಾಗುವ ಈ ಮಾದರಿ ಸಮುದಾಯದ ಶಕ್ತಿಯನ್ನು ಎಷ್ಟು ಬೆಳೆಸಿದೆ ಯೆಂದರೆ ಬಡತನವನ್ನು ಆಗ ತಾನೇ ಮೀರುತ್ತಿದ್ದ ಜನರೆಲ್ಲ ಕೈಗೂಡಿಸಿ ತರಬೇತಿ ಸಂಸ್ಥೆಯೊಂದನ್ನು ಕಟ್ಟಿ ನಿಲ್ಲಿಸಿ ಪವಾಡವೆಸಗಿದರು.

ಅವರು ಹೇಳುವಂತೆ ಪುಸ್ತಕ ಗ್ರಾಮ ಅಭಿವೃದ್ಧಿಯ ಸ್ವಾರಸ್ಯಕರ ಘಟನೆಗಳನ್ನು ಹೇಳುವ ಹೊತ್ತಿಗೆಯಲ್ಲ. ಅನುಭವ ಹಾಗೂ ಅವುಗಳಿಂದ ಬಂದ ಪಾಠಗಳನ್ನು ಕಲಿಯುವ ಪ್ರಯತ್ನ. ಇಪ್ಪತೈದು ವರ್ಷಗಳ ಕಾರ್ಯ ನಿರೀಕ್ಷಣೆ, ಅನುಭವ, ಒಳನೋಟಗಳನ್ನಾಧರಿಸಿದ ಜನಕೇಂದ್ರಿತ ವಿಕಾಸ ಕ್ರಿಯೆಯ
ವಿವರಣೆಯೇ ಈ ಪುಸ್ತಕ. ಹಳ್ಳಿಗಳನ್ನು ಕಟ್ಟುವ ಕಷ್ಟಗಳು ಮತ್ತು ಸುಖಗಳನ್ನು ಅವರು ಪ್ರತ್ಯೇಕವಾಗಿಸಿ ಲಿಸ್ಟ್ ಮಾಡಿ ಹೇಳುವುದಿಲ್ಲ. ಕಷ್ಟಗಳು ಹೆಚ್ಚು
ಕಡಿಮೆ ತಿಳಿದವುಗಳೇ! ಹಳ್ಳಿಗಳಲ್ಲಿ ಸಂಪತ್ತುಇಲ್ಲ.

ಹುಟ್ಟಿಕೊಳ್ಳುತ್ತಿಲ್ಲ. ಹೆಚ್ಚು ಕಡಿಮೆ ಎಲ್ಲರೂ ಜಮೀನು ಮಾರುವ ಮನಸ್ಥಿತಿಯಲ್ಲಿ ಇರುವವರು. ಕೃಷಿಯನ್ನು ಬದಲಾಯಿಸಬಹುದು ಎನ್ನುವ ವಿಚಾರ ಮೂಡುತ್ತಲೇ ಇಲ್ಲ. ಅದು ಸಾಧ್ಯವಿಲ್ಲ ಎನ್ನುವ ವಾತಾವರಣ ಇದೆ. ಕೃಷಿಯನ್ನು ಉದ್ದಿಮೆಯಾಗಿಸಬೇಕು ಎನ್ನುವ ಕಲ್ಪನೆ ತಲೆಯೊಳಗೆ ಹೋಗಿ
ಎಲ್ಲರೂ ಹೆಚ್ಚು ಆದಾಯ ತರುವ ಬೆಳೆ ತೆಗೆಯಲು ನೋಡುತ್ತಾರೆ. ನೀರನ್ನು ಕೂಡ ಬೆಳೆದುಕೊಳ್ಳಬಹುದು ಎನ್ನುವ ಪರಿಕಲ್ಪನೆ ಇಲ್ಲ. ಕೃಷಿಯ ಬೆನ್ನೆಲುಬು ಅರಣ್ಯವನ್ನೂ ಕೃಷಿಯ ಭಾಗವಾಗಿ ಬೆಳೆಯಬೇಕು ಎಂಬ ಸತ್ಯ ಜನರ ಮನಸ್ಸಿನಲ್ಲಿ ಮೂಡಿ ನಿಲ್ಲುತ್ತಿಲ್ಲ. ಕ್ರಷಿ ಭೂಮಿಯೊಂದಿಗಿನ ಸಮಗ್ರ
ಸಂವಾದ’ ಎನ್ನುವ ಪರಿಕಲ್ಪನೆ ಇಲ್ಲ. ಹಳ್ಳಿಗಳಲ್ಲಿ ನಾಯಕತ್ವ ಇಲ್ಲ. ಜಮೀನು ಮಾರಿ ಬಿಟ್ಟರೆ ದೊಡ್ಡ ಹಣ ಸಿಗುತ್ತದೆ.

ಹಳ್ಳಿಗರಲ್ಲಿ ಈಗ ಯಾರು ಹೇಳಿದ್ದನ್ನೂ, ಅದರಲ್ಲಿಯೂ ಹೊರಗಿನವರು ಹೇಳಿದ್ದನ್ನು ಕೇಳುವ ಮನಸ್ಥಿತಿ ಇಲ್ಲವೇ ಇಲ್ಲ. ಇವೆಲ್ಲ ಕಷ್ಟ ಗಳು. ಕಷ್ಟ ಇರುವುದು ಇಂತಹ ಒಂದು ತಾರ್ಕಿಕ ಚೌಕಟ್ಟನ್ನು ಮುರಿಯುವುದರಲ್ಲಿ ಮತ್ತು ಮುರಿಯುವಲ್ಲಿ ಜನರ ಭಾಗವಹಿಸುವಿಕೆ ಪಡೆಯುವುದೇ ದೊಡ್ಡ ಸವಾಲು ಎಂದು ಭಟ್ ಹೇಳುತ್ತಾರೆ. ಪುಸ್ತಕ ಅವರ ’ಸುಖದ’ ಅಂದರೆ ಯಶಸ್ವಿಯಾದ ಕಥೆಗಳನ್ನು ಹೇಳುತ್ತದೆ. ಕೃಷಿ ತಜ್ಞರು, ಅರಣ್ಯತಜ್ಞರು, ಚಿಂತಕರು
ಇವರೆಲ್ಲರ ಬೆಂಬಲದೊಂದಿಗೆ ಭಟ್‌ಕರ್ನಾಟಕದಎರಡುಕಡೆ, ಉತ್ತರ ಕನ್ನಡ ಜಿಲ್ಲೆಯ ದಾಸನ ಕೊಪ್ಪ ಮತ್ತುಧಾರವಾಡ ಜಿಲ್ಲೆಯ ಸೂರಶೆಟ್ಟಿ ಕೊಪ್ಪಗಳ ಸುತ್ತಮುತ್ತಲಿನ ಒಟ್ಟಾರೆ ಸುಮಾರು ಐವತ್ತು ಹಳ್ಳಿಗಳನ್ನು ಪುನಃ ಕಟ್ಟುವ ಸವಾಲನ್ನು ಸ್ವೀಕರಿಸಿದರು. ಇದರ ಭಾಗವಾಗಿ ಮೊಟ್ಟ ಮೊದಲು ಅವರು ಹಳ್ಳಿಗರೊಂದಿಗೆ ಸಂಪರ್ಕ ಸಾಧಿಸಿದರು.

ವಿಶ್ವಾಸ ಗಳಿಸಿದರು. ಅವರು ಅದನ್ನು ಸಾಧಿಸಿದ್ದು ತಮ್ಮ ಪ್ರಾಮಾಣಿಕತೆ ಮತ್ತು ನಿಷ್ಠೆಯ ಮೂಲಕ. ವಿಶ್ವಾಸ ಬೆಳೆಯುತ್ತ ಹೋದಂತೆ ಭಟ್ ’ಅರಣ್ಯ ಆಧಾರಿತ, ವೃಕ್ಷಾಧಾರಿತ, ಸಮಗ್ರ ಕೃಷಿ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದರು. ಅವರು ಮೊದಲು ಆರಂಭಿಸಿದ ಕೆಲಸ ಭೂಮಿಯ ಫಲವತ್ತತೆ ಯನ್ನು ಸುಧಾರಿಸುವುದು ಹಾಗೂ ನೀರನ್ನು ಸಂಗ್ರಸುವುದು. ನಂತರ ನೀರು ಸಂಗ್ರಹವಾಗುವಂತೆ ಬದುಗಳನ್ನು ಹಾಕುವುದನ್ನು ಹೇಳಿಕೊಟ್ಟರು. ಸುಮಾರು ಎರಡೂವರೆ ಸಾವಿರ ಎಕರೆಗಳಲ್ಲಿ ಎರಡೂವರೆ ಸಾವಿರ ರೈತರು ಕಾಲುವೆ ಮತ್ತು ಬದುಗಳನ್ನು ಹಾಕಿದರು. ಸುಮಾರು ಒಂದುವರೆ ಸಾವಿರದಷ್ಟು ಕೃಷಿ ಹೊಂಡಗಳನ್ನು ತೆಗೆದರು. ಮೇಲುಮಣ್ಣನ್ನು ಸಂರಕ್ಷಿಸಿದರು. ಸುಮಾರು ಎರಡೂವರೆ ಸಾವಿರ ಎಕರೆ ಭೂಮಿಯಲ್ಲಿ ರೈತರು ಕೋಟಿಗಟ್ಟಲೆ ಲೀಟರ್ ನೀರು ಸಂಗ್ರಹಿಸಿದರು. ಅವರು ಹೇಳುವಂತೆ ಮಳೆ ನೀರನ್ನು ಹಿಡಿಯುವುದಕ್ಕಿಂತ ದೊಡ್ಡ ನೀರಾವರಿ ಯೋಜನೆ ಇನ್ನೊಂದಿಲ್ಲ.

ಹಾಗೆಯೇ ತಾವೇ ಸ್ವತಃ ಅಭಿವೃದ್ಧಿಪಡಿಸಿದ್ದ ಬಡತನದ ಸ್ಕೋರ್‌ಗಳನ್ನು ಆಧರಿಸಿ ಕುಟುಂಬಗಳನ್ನು ಸಂಘಟನೆ ಮಾಡಿದರು. ಉಳಿತಾಯ
ಯೋಜನೆಗಳನ್ನು ಜಾರಿಗೆ ತಂದರು. ರೈತರೊಡನೆ ಅಧ್ಯಯನ ಪ್ರವಾಸಗಳನ್ನು ಹಮ್ಮಿಕೊಂಡರು. ಅಲ್ಲಿ ನೋಡಿದ ಮಾದರಿಯನ್ನು ಯಾರಾದರೂ ರೈತರು ತಮ್ಮ ಹೊಲಗಳಲ್ಲಿ ಬಳಸಿಕೊಳ್ಳಲು ಬಯಸಿದರೆ ಅದನ್ನು ಚರ್ಚಿಸಿ ಆ ರೀತಿ ಕೃಷಿಯಲ್ಲಿ ತೊಡಗಿಸಿದರು. ಗಿಡಗಳನ್ನು ಅಥವಾ ಬೇರೇನನ್ನಾ
ದರೂ ಖರೀದಿಸುವಾಗ ಪ್ರಕ್ರಿಯೆ ಪಾರದರ್ಶಕವಾಗಿರುವಂತೆ ಮಾಡಲು ಜನರಿಂದಲೇ ಕೂಡಿದ ಪರ್ಚೇಸ್ ಕಮಿಟಿಗಳನ್ನು ರಚಿಸಿದರು ನರ್ಸರಿಗಳನ್ನು ರೂಪಿಸಿದರು. ಗಿಡಗಳನ್ನು ನೆಡುವ, ಆರೈಕೆ ಮಾಡುವ ಪ್ರಕ್ರಿಯೆಗಾಗಿ ಒಂದು ಮಾದರಿ ಟೈಮ್ ಟೇಬಲ್ ಹಾಕಿಕೊಟ್ಟರು.

ಇದೆಲ್ಲದಕ್ಕಾಗಿ ವಿದ್ವಾಂಸರ, ಕೃಷಿ ತಜ್ಞರ ತಾಂತ್ರಿಕ ನೆರವು ಪಡೆದರು. ನಂತರದ ಹಂತಗಳಲ್ಲಿ ಜನ ಹಸುಗಳನ್ನು ಆಡುಗಳನ್ನು ಸಾಕಲು ಪ್ರೋತ್ಸಾಹಿಸಿ ದರು. ನೆಲ ಸವಕಳಿಯಾಗದಂತೆ ಮುಚ್ಚಿಗೆ ಮಾಡುವ ಬೆಳೆ ಬೆಳೆದರು. ವಿವಿಧ ರೀತಿಯಲ್ಲಿ ಗೊಬ್ಬರ ಮಾಡುವುದನ್ನು ಕಲಿಸಿಕೊಟ್ಟರು. ಫಲಶ್ರುತಿ ಯಾಗಿ ಹಳ್ಳಿಗರು ತಮ್ಮ ಆದಾಯವನ್ನು ಮೂರರಿಂದ ಹತ್ತು ಪಟ್ಟು ಹೆಚ್ಚಿಸಿಕೊಂಡರು ಬೆಳೆ ವೈವಿಧ್ಯ ಕೂಡ ಶೇಕಡಾ ಎರಡು ನೂರರಿಂದ ಮೂರು ನೂರರ ತನಕ ಹೆಚ್ಚಿತು. ಗೊಬ್ಬರದ ಗಿಡಗಳನ್ನು ಬೆಳೆದು ಹಸಿರು ಬೇಲಿ ಮಾಡಿದರು. ಸುಮಾರು ಎರಡುವರೆ ಸಾವಿರಕ್ಕೂ ಹೆಚ್ಚು ರೈತರು ತಮ್ಮ ಹೊಲಗಳಲ್ಲಿ ಅಂದಾಜು ಹದಿನೈದು ಲಕ್ಷ ಗಿಡಗಳನ್ನು ನೆಟ್ಟರು. ಎಂಟರಿಂದ ಹತ್ತು ಲಕ್ಷ ಗಿಡಗಳು ಬದುಕಿರ ಬಹುದು ಎಂದು ಅಂದಾಜು.

ನಂತರ ಅವರು ಈ ಹಳ್ಳಿಗಳಿಗೆ ತಂದಕ್ರಿಯಾ ಯೋಜನೆ: ಬೆಳೆದ ಬೆಳೆಯನ್ನೇ ಆಧರಿಸಿ ವ್ಯಾಪಾರ, ವ್ಯವಹಾರ ಕೈಗೊಳ್ಳುವುದು. ಕೋಳಿ ಸಾಕಾಣಿಕೆ ಆರಂಭವಾಯಿತು. ಜನ ತಮ್ಮ ಕೈತೋಟಗಳಲ್ಲಿ ತರಕಾರಿ ಬೆಳೆಯಲಾರಂಭಿಸಿದರು. ಹಾಗೆಯೇ ನೈರ್ಮಲ್ಯ ಮತ್ತುಆರೋಗ್ಯ ಯೋಜನೆಗಳನ್ನು ಹಮ್ಮಿಕೊಂಡರು. ಆರೋಗ್ಯ ನಿಽಯನ್ನು ಸ್ಥಾಪಿಸಿದರು. ಮಕ್ಕಳ ಕುಪೋಷಣೆಯನ್ನುತಡೆಗಟ್ಟುವ ಪ್ರಯತ್ನಗಳನ್ನು ಯಶಸ್ವಿಯಾಗಿಸಿದರು. ಹಸಿರು ಹಬ್ಬ, ಗಿಡ ನೆಡುವ ಹಬ್ಬ ಇತ್ಯಾದಿಗಳನ್ನು ಆರಂಭಿಸಿದರು. ಪ್ರಕ್ರತಿಯಲ್ಲಿ ಸಿಗುವ ಬಣ್ಣ ಬಣ್ಣದ ಮಣ್ಣು ಬಳಸಿ ಮನೆಗಳಿಗೆ ಪೇಂಟ್ ಮಾಡಿದರು. ಹಳ್ಳಿಗಳು ಬದಲಾದವು.

ಬದಲಾವಣೆಯ ಕಥೆಯನ್ನು ಕೆಲವು ಹಳ್ಳಿಗರ ವೈಯಕ್ತಿಕ ಯಶಸ್ಸಿನ ಕಥೆಗಳೂ ಹೇಳುತ್ತವೆ. ರೈತ ಚೆನ್ನಬಸಪ್ಪ ಕೋಂಬಳಿ ’ಕನ್ನಡ ಪ್ರಭ’ ಪತ್ರಿಕೆ ನೀಡುವ’ ವರ್ಷದ ವ್ಯಕ್ತಿ’ ಪ್ರಶಸ್ತಿ ಪಡೆದಿದ್ದಾರೆ. ಸೂರಶೆಟ್ಟಿಕೊಪ್ಪದ ಬಸನಗೌಡರ ನಿಂಗನಗೌಡ ಅವರು ಕರ್ನಾಟಕ ಕೃಷಿ ವಿದ್ಯಾಲಯದಿಂದ ’ಅತ್ಯುತ್ತಮ ಕೃಷಿಕ’ ಪ್ರಶಸ್ತಿಯನ್ನು ಪಡೆದಿದ್ದಾರೆ. ಭಟ್ಟರ ಕೆಲಸ ಮತ್ತು ಪುಸ್ತಕ ಹಳ್ಳಿಗಳನ್ನು ಪುನಃ ಕಟ್ಟಲು ಸಾಧ್ಯವಿದೆ ಎನ್ನುವ ರೋಮಾಂಚಕ ಸಂದೇಶವನ್ನು ನೀಡುತ್ತವೆ. ಒಂದು ಸಮಗ್ರ ಸಾಮಾಜಿಕ ತತ್ವ ಜ್ಞಾನದ ಕಥನ ’ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ‘

Leave a Reply

Your email address will not be published. Required fields are marked *

error: Content is protected !!