ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
vbhat@me.com
ನಾನೇನು ಜಪಾನಿನ ರಾಯಭಾರಿಯೂ ಅಲ್ಲ. ಬ್ರಾಂಡ್ ಅಂಬಾಸಿಡರ್ ಅಲ್ಲವೇ ಅಲ್ಲ. ಅದನ್ನು ಹೊಗಳಿ ನನಗೇನೂ ಆಗಬೇಕಿಲ್ಲ ಎಂಬ ಹಕ್ಕುತ್ಯಾಗ (Disclaimer)ದೊಂದಿಗೇ ಆರಂಭಿಸುವುದು ವಾಸಿ. ಅಲ್ಲಿ ಕಂಡಿದ್ದನ್ನು, ಕೇಳಿದ್ದನ್ನು, ಆ ದೇಶದ ಬಗ್ಗೆ ಓದಿದ್ದನ್ನು ನಿಮಗೆ ಒಪ್ಪಿಸುವುದಷ್ಟೇ ನನ್ನ ಚೋದುಗ. ಅದಕ್ಕಿಂತ ಮಿಗಿಲಾದ ಹಿತಾಸಕ್ತಿ ನನಗಿಲ್ಲ.
ಜಪಾನಿನ ಬಗ್ಗೆ ಒಂದು ಮಾತನ್ನು ನಾನು ಬಹಳ ಹಿಂದೆಯೇ ಕೇಳಿದ್ದೆ. ಅದೇನೆಂದರೆ- Japan is a magical place. The more you learn, the more you know you don’t know. It’s a lifelong journey. ಒಂದು ವಾರ ಕಾಲ ಆ ದೇಶದಲ್ಲಿದ್ದಾಗ, ಈ ಮಾತು ಅಪ್ಪಟ ನಿಜ ಎಂದೆನಿಸಿತು. ಸಾಮಾನ್ಯವಾಗಿ ನಾವು ಕೆಲವು ದೇಶಗಳನ್ನು ನೋಡಲು ಹೋಗುತ್ತೇವೆ. ಆದರೆ ಜಪಾನಿಗೆ ಕಲಿಯಲು ಹೋಗಬೇಕು. ಪ್ರೇರಣೆ ಪಡೆಯಲು ಹೋಗಬೇಕು. ಹಾಗಂತ ಅಲ್ಲಿ ನೋಡುವುದೂ ಸಾಕಷ್ಟಿದೆ.
ಜಪಾನಿನಲ್ಲಿ ಇರುವಷ್ಟು ಹೊತ್ತು ಕಲಿಕೆ ನೂರು ನೂರು ಥರ ಮತ್ತು ನಿರಂತರ. ಒಮ್ಮೆ ಕಣ್ಣು ಅಗಲಿಸಿ ಸುತ್ತ ದೃಷ್ಟಿ ಹಾಯಿಸಿದರೆ ಸಾಕು, ಏನೋ ಒಂದು ಹೊಸ ಸಂಗತಿಯನ್ನು ನೋಡಬಹುದು. ಏನೂ ಇಲ್ಲದಿದ್ದರೂ ನಾವು ನಿಂತ ಜಾಗದ ಸ್ವಚ್ಛತೆ ನಮಗೆ ನೂರು ಪಾಠಗಳನ್ನು ಹೇಳುತ್ತದೆ. ನಮ್ಮ ಕಣ್ಣಿಗೆ ಬೀಳುವ ಜನರಿಂದ ಏನೋ ಒಂದು ಹೊಸ ಅಂಶವನ್ನು ಕಲಿಯಬಹುದು. ಏನೂ ಇಲ್ಲದಿದ್ದರೂ ಅವರಿಗೊಂದು ನಮಸ್ಕಾರ ಅಂತ ಹೇಳಿ, ಅವರು ಸೊಂಟ ಬಗ್ಗಿಸಿ, ಮೆಲು ದನಿಯಲ್ಲಿ ತಮ್ಮ ಭಾಷೆಯಲ್ಲಿ ನಮಗೆ ವಾಪಸ್ ನಮಸ್ಕಾರ ಹೇಳುವ ರೀತಿಯೇ ಅನನ್ಯ ಮತ್ತು
ಆಪ್ತ. ಭಾಷೆ ಬರದಿದ್ದರೇನಾಯಿತು, ನಾನು ಅಲ್ಲಿ ಇರುವಷ್ಟು ಹೊತ್ತು, ಅಲ್ಲಿನ ಜನರೊಂದಿಗೆ, ಪರಿಸರದೊಂದಿಗೆ ಮಾತಾಡುತ್ತಲೇ ಇದ್ದೆ, ವ್ಯವಹರಿಸುತ್ತಿದ್ದೆ.
ಹೊಸ ಹೊಸ ಸಂಗತಿಗಳನ್ನು ತಿಳಿದುಕೊಳ್ಳುತ್ತಲೇ ಇದ್ದೆ. ಜಪಾನ್ ಇಷ್ಟವಾಗುವುದು ಈ ಕಾರಣಕ್ಕೆ. ಟೋಕಿಯೋಕ್ಕೆ ಬಂದ ಮರುದಿನ,
ಎಂಟನೇ ಮಹಡಿಯಲ್ಲಿನ ಹೋಟೆಲ್ ಕಾರಿಡಾರ್ನಲ್ಲಿ ಬರುವಾಗ, ಅಲ್ಲಿಯೇ ಇದ್ದ ಪರಿಚಾರಿಕೆಯನ್ನು ‘ಬ್ರೆಕ್- ಹಾಲ್’ ಎಷ್ಟನೇ ಮಹಡಿಯಲ್ಲಿದೆ ಎಂದು ಕೇಳಿದೆ. ‘ನೆಲಮಹಡಿಯಲ್ಲಿ, ರಿಸೆಪ್ಷನ್ ಪಕ್ಕದಲ್ಲಿದೆ’ ಎಂದು ಆಕೆ ಹೇಳಬಹುದಿತ್ತು. ಅದರ ಬದಲು ಆಕೆ, ತನ್ನನ್ನು ಹಿಂಬಾಲಿಸುವಂತೆ ಹೇಳಿದಳು.
ಲಿಫ್ಟಿನಲ್ಲಿ ಕೆಳಗಿಳಿದು ಬಂದು, ಸುಮಾರು ಐವತ್ತು ಮೀಟರ್ ನಡೆದು ನನ್ನನ್ನು ಬ್ರೆಕ್- ಹಾಲ್ ತನಕ ಬಂದು ಬಿಟ್ಟು, ತನ್ನ ಸೊಂಟ ಬಗ್ಗಿಸಿ, ‘ಎಂಜಾಯ್ ದಿ ಬ್ರೆಕ್-’ ಎಂದು ಹೇಳಿ ಹೊರಟುಹೋದಳು. ಅವಳ ಆ ನಡೆ ನನಗೆ ವಿಶೇಷವಾಗಿ ಕಂಡಿತು. ಅದೇ ದಿನ ನಾನು ಹೊಸ ಶೂ ಖರೀದಿಸಲೆಂದು ಮಾಲ್ಗೆ ಹೊರಟಿದ್ದೆ. ಅದೋ, ಬೃಹತ್ ಮಾಲ್. ಎಡೆ ಜಪಾನಿ ಭಾಷೆಯಲ್ಲಿಯೇ ಬರೆದ ಫಲಕಗಳು. ನನಗೆ ಹೆಚ್ಚು
ಸಮಯವಿರಲಿಲ್ಲ. ಎದುರಿಗೆ ಬರುತ್ತಿದ್ದ ಮಧ್ಯವಯಸ್ಕ ದಂಪತಿಗಳನ್ನು ನಿಲ್ಲಿಸಿ, ‘ನನಗೆ ಈ ಅಂಗಡಿಗೆ ಹೋಗಬೇಕು. ಅದು ಎಲ್ಲಿದೆ ಎಂಬುದು ಗೊತ್ತಾಗುತ್ತಿಲ್ಲ. ಜಪಾನಿ ಭಾಷೆ ಯಲ್ಲಿ ಫಲಕಗಳಿರುವುದರಿಂದ ಎಲ್ಲಿಗೆ ಹೋಗಬೇಕು ಎಂಬುದು ತಿಳಿಯುತ್ತಿಲ್ಲ.
ದಯವಿಟ್ಟು ಆ ಅಂಗಡಿ ಎಲ್ಲಿದೆ ಎಂದು ಹೇಳಬಹುದಾ?’ ಎಂದು ಕೇಳಿದೆ. ಅವರಿಗೆ ಅದ್ಯಾವ ತುರ್ತು ಕೆಲಸವಿತ್ತೋ, ಗೊತ್ತಿಲ್ಲ. ಅವರು ವಿರುದ್ಧ ದಿಕ್ಕಿನಡೆಗೆ ಹೆಜ್ಜೆ ಹಾಕುತ್ತಾ ತಮ್ಮನ್ನು ಹಿಂಬಾಲಿಸುವಂತೆ ನನಗೆ ಹೇಳಿದರು. ನಾನು ಅವರನ್ನು ಅನುಸರಿಸತೊಡಗಿದೆ. ಸುಮಾರು ನಾನೂರು ಮೀಟರ್ ನಡೆದು, ‘ನೀವು ಹುಡುಕುತ್ತಿರುವ ಅಂಗಡಿ ಇದೇ’ ಎಂದು ಹೇಳಿಹೋದರು. ಅವರು ಅಲ್ಲಿ ತನಕ ಬರಬೇಕಾದ ಅಗತ್ಯವಿರಲಿಲ್ಲ. ‘ಹೀಗೆ ಹೋಗಿ, ಹಾಗೆ ಹೋಗಿ, ಬಲಕ್ಕೆ ಹೊರಳಿ, ನಂತರ ತುಸು ದೂರ ನಡೆದು ಎಡಕ್ಕೆ ತಿರುಗಿದರೆ ಅಲ್ಲಿಯೇ ನಿಮ್ಮ ಅಂಗಡಿಯಿದೆ’ ಎಂದು
ಹೇಳಬಹುದಿತ್ತು. ಆದರೆ ಅವರು ಅಂಗಡಿ ತನಕ ಬಂದು ನನಗೆ ಮಾರ್ಗದರ್ಶನ ಮಾಡಿ ಹೋದರು.
ಹಾಗೆ ಇನ್ನೊಂದು ಪ್ರಸಂಗ. ನಾನು ಬೆಳಗ್ಗೆ ವಾಕಿಂಗ್ ಹೋದಾಗ, ಒಂದು ಅಡ್ಡರಸ್ತೆಯಲ್ಲಿ ತಪ್ಪಾಗಿ ತಿರುಗಿದ್ದರಿಂದ ದಾರಿ ತಪ್ಪಿಸಿಕೊಂಡೆ. ಅಲ್ಲಿಯೇ ಸುತ್ತುತ್ತಿದ್ದರೂ, ನಾನು ಉಳಿದುಕೊಂಡ ಹೋಟೆಲ್ ಸಿಗುತ್ತಿರಲಿಲ್ಲ. ಆ ಬೀದಿಯಲ್ಲಿ ಬರುತ್ತಿದ್ದ ಸುಮಾರು ಎಪ್ಪತ್ತು ವರ್ಷದ ಹಿರಿಯರೊಬ್ಬರನ್ನು ‘ಪ್ರಿ ಹೋಟೆಲಿಗೆ ಹೋಗುವ ದಾರಿ ಯಾವುದು?’ ಎಂದು ಕೇಳಿದೆ. ಆ ವ್ಯಕ್ತಿಗೆ ಅದ್ಯಾವ ಕೆಲಸವಿತ್ತೋ, ಅವರು ತಮ್ಮ
ಮಾರ್ಗ ಬದಲಿಸಿ, ಸುಮಾರು ಅರ್ಧ ಕಿ.ಮೀ. ನಡೆದು, ಹೋಟೆಲ್ ತನಕ ಬಂದು, ತಮ್ಮ ನಡು ಬಗ್ಗಿಸಿ, ಅತ್ಯಂತ ವಿಧೇಯರಾಗಿ ‘ನೀವು ಹುಡುಕುತ್ತಿರುವ ಹೋಟೆಲ್ ಇದೇ’ ಎಂದು ಹೇಳಿ ಹೊರಟುಹೋದರು. ನಾನು ವಿಳಾಸ ಕೇಳಿದ ಜಾಗದಲ್ಲಿಯೇ ಅವರು ನನಗೆ ಹೋಟೆಲ್ ದಾರಿಯನ್ನು ಹೇಳಬಹುದಿತ್ತು. ಆದರೆ ಅವರೇ ಖುzಗಿ ಹೋಟೆಲ್ ತನಕ ಬಂದು ಬಿಟ್ಟುಹೋದರು.
ನನಗೆ ಈ ಅನುಭವ, ನಮ್ಮ ದೇಶವೂ ಸೇರಿದಂತೆ, ಬೇರೆ ಯಾವ ದೇಶದಲ್ಲೂ ಆಗಿರಲಿಲ್ಲ. ಈ ದಿನಗಳಲ್ಲಿ ಗೂಗಲ್ ಮ್ಯಾಪ್ ಇರುವುದರಿಂದ ಯಾರೂ ವಿಳಾಸ ಕೇಳುವುದಿಲ್ಲ. ಒಂದು ವೇಳೆ ಕೇಳಿದರೂ, ಅಡ್ರೆಸ್ ತನಕ ಬಂದು ಯಾರೂ ಹೇಳುವುದಿಲ್ಲ. ಆದರೆ ಟೋಕಿಯೋದಲ್ಲಿ ಯಾರನ್ನಾದರೂ ದಾರಿ, ವಿಳಾಸ ಕೇಳಿದರೆ, ತಮ್ಮ ಕೆಲಸವನ್ನು ಬದಿಗೊತ್ತಿ ನಾವು ಕೇಳಿದ ಅಡ್ರೆಸ್ ತನಕ ಬಿಟ್ಟು ಹೋಗುತ್ತಾರೆ. ಈ ಒತ್ತಡದ,
ಪುರುಸೊತ್ತು ಇಲ್ಲದ ದಿನಗಳಲ್ಲಿ, ತಮ್ಮ ಕೆಲಸ-ಕಾರ್ಯ ಬದಿಗೊತ್ತಿ ಪರರ ನೆರವಿಗೆ ನಿಲ್ಲುವ ಅನನ್ಯ ಸಂಸ್ಕೃತಿಯ ಪರಿಚಯ ಎಂಥವರನ್ನಾ ದರೂ ಬೆರಗು ಮೂಡಿಸದೇ ಇರದು. ನಮ್ಮ ಹಳ್ಳಿಗಳಲ್ಲಿ ಯಾರದ್ದಾದರೂ ಮನೆ ಎಲ್ಲಿ ಎಂದು ಕೇಳಿದರೆ, ಆ ಮನೆ ತನಕ ಬಂದು ದಾರಿ ತೋರಿಸಿ ಹೋಗುತ್ತಿದ್ದ ಕಾಲವಿತ್ತು. ಈಗ ಯಾರೂ ಹಾಗೆ ಮಾಡುವುದಿಲ್ಲ. ಕಾರಣ ಯಾರಿಗೂ ಪುರುಸೊತ್ತು, ಸಂಯಮ ಇಲ್ಲ. ಆದರೆ ಟೋಕಿಯೋದಂಥ ವಿಶ್ವದಲ್ಲಿಯೇ ಅತಿ ಆಧುನಿಕ ಮತ್ತು ಬಿಜಿ ನಗರದಲ್ಲಿ ಇಂದಿಗೂ ಆ ಗುಣವನ್ನು ಕಾಪಾಡಿಕೊಂಡಿರುವುದು ವಿಶೇಷವೇ. ದಾರಿಹೋಕರು ವಿಳಾಸ ಕೇಳಿದರೆ, ಆ ವಿಳಾಸ ಗೊತ್ತಿದ್ದರೆ, ಅಲ್ಲಿ ತನಕ ಬಂದು ವಿಳಾಸ ತೋರಿಸಿ ಹೋಗುವುದು ಜಪಾನಿಯರ ಸಂಸ್ಕೃತಿ, ಸೌಜನ್ಯ. ಅದರಲ್ಲೂ ವಿಳಾಸ ಕೇಳಿದವರು ವಿದೇಶಿಯರಾಗಿದ್ದರೆ, ವಿಳಾಸ ಗೊತ್ತಿಲ್ಲದಿದ್ದರೂ ಬೇರೆಯವರನ್ನು ಕೇಳಿ ತಿಳಿದುಕೊಂಡು, ಅಡ್ರೆಸ್ ತನಕ ಬಂದು ಬಿಟ್ಟು ಹೋಗುವುದು ತೀರಾ ಅಪರೂಪದ ಗುಣವೇ.
ಪಾನಿನ ಉದ್ದಗಲಕ್ಕೆ ನಾನು ಒಂದು ವಾರ ಕಾಲ ಓಡಾಡಿದ್ದೇನೆ. ಪ್ರಮುಖವಾಗಿ ಒಸಾಕಾ, ಕ್ಯೋಟೋ, ಮೌಂಟ್ -ಜಿ, ಹನೊಕೆ ಮತ್ತು ಟೋಕಿಯೋ ನಗರಗಳಲ್ಲಿ ತಿರುಗಾಡಿದ್ದೇನೆ. ಯಾವ ಅತಿಶಯೋಕ್ತಿಯೂ ಇಲ್ಲ, ಇಡೀ ದೇಶದ ರಸ್ತೆಯಲ್ಲಿ ಒಂದೇ ಒಂದು ಉಬ್ಬಾಗಲಿ, ತಗ್ಗಾಗಲಿ,
ಹಳ್ಳವಾಗಲಿ ಕಾಣಲಿಲ್ಲ. ಸ್ಯಾಂಪಲ್ಲಿಗೆ ಅಂತ ಒಂದು ಸಣ್ಣ ಕಸವನ್ನೂ ಕಾಣುವ ‘ಭಾಗ್ಯ’ ನನಗೆ ಸಿಗದೇ ಹೋಯಿತು. ನಮ್ಮ ಮನೆಯ ಜಗುಲಿಗಿಂತ ಆ ದೇಶದ ರಸ್ತೆ ಸ್ವಚ್ಛವಾಗಿತ್ತು. ಹಾಗಂತ ಕಸವನ್ನು ಹಾಕಲು ಕಸದ ಡಬ್ಬ ಅಥವಾ ಬುಟ್ಟಿಗಳನ್ನಾದರೂ ಎಡೆ ಇಟ್ಟಿzರಾ, ಅದೂ ಇಲ್ಲ. ಒಂದೇ ಒಂದು ಕಸದ ಬುಟ್ಟಿಯೂ ನೋಡಲು ಸಿಗಲಿಲ್ಲ. ಜಪಾನಿನಲ್ಲಿ ಯಾರೂ ಕಸವನ್ನು ರಸ್ತೆಗೆ ಅಥವಾ ಕಂಡಲ್ಲ ಎಸೆಯುವುದಿಲ್ಲ. ಎಸೆಯಬೇಕಾದ ಕಸವನ್ನು ತಮ್ಮ ಜೇಬಿನಲ್ಲಿಯೇ ಇಟ್ಟುಕೊಳ್ಳುತ್ತಾರೆ. ಕಸದ ಬುಟ್ಟಿ ಎಲ್ಲೂ ಕಾಣದಿದ್ದರೆ ಮನೆಗೆ ಬಂದು ಅಲ್ಲಿ ಹಾಕುತ್ತಾರೆ.
ಸಾರ್ವಜನಿಕ ಶೌಚಾಲಯ, ವೆಂಡಿಂಗ್ ಮಷೀನ್ ಪಕ್ಕದಲ್ಲಿ ಕಸದ ಬುಟ್ಟಿ ಕಂಡೀತು. ಕಸಕ್ಕಿಂತ ಕಸದಬುಟ್ಟಿಯೇ ಗಬ್ಬು ನಾರುವುದರಿಂದ, ಇಡೀ ದೇಶದಲ್ಲಿ ಕಸದಬುಟ್ಟಿಗೆ ಮೋಕ್ಷ ನೀಡಲಾಗಿದೆ. ಅಮೆರಿಕದಂಥ ಮುಂದುವರಿದ ದೇಶದಲ್ಲೂ ಕಸವನ್ನು ಕಾಣದಿದ್ದರೂ ಕಸದಬುಟ್ಟಿಗಳನ್ನಾ
ದರೂ ನೋಡಬಹುದು. ಆದರೆ ಜಪಾನಿನಲ್ಲಿ ಅದನ್ನೂ ಹಂತಹಂತವಾಗಿ ಕಮ್ಮಿ ಮಾಡಲಾಗಿದೆ.
ಇನ್ನು ಬೀದಿಗಳಲ್ಲಿ, ಪ್ರೇಕ್ಷಣೀಯ ತಾಣಗಳಲ್ಲಿ ಕಸ-ಕಡ್ಡಿ, ಚಿ ಪ್ಯಾಕೆಟ್, ಗುಟಖಾ, ಸೇದಿ ಬಿಸಾಡಿದ ಸಿಗರೇಟ್ ತುಂಡು, ಖಾಲಿಯಾದ ನೀರಿನ ಬಾಟಲಿ, ಬಿಯರ್ ಬಾಟಲಿಗಳನ್ನು ಭೂತಗನ್ನಡಿ ಹಾಕಿ ನೋಡಿದರೂ ಸಿಗುವುದಿಲ್ಲ. ಹಾಗಂತ ಅಲ್ಲಿ ಯಾರೂ ಸಿಗರೇಟನ್ನು ಸೇದುವುದಿಲ್ಲ ಅಂತಿಲ್ಲ. ಸಿಗರೇಟನ್ನು ಸೇದುತ್ತಾರೆ. ಆದರೆ ಸಿಗರೇಟು ಸೇದುವವರೆಲ್ಲರೂ ತಮ್ಮ ಕಿಸೆಯಲ್ಲಿ ಬೂದಿಕುಂಡ (ashtray) ವನ್ನು ಇಟ್ಟುಕೊಂ ಡಿರುತ್ತಾರೆ. ಸೇದಿಬಿಟ್ಟ ತುಂಡನ್ನು ಎಸೆಯುವುದಿಲ್ಲ, ಬೂದಿಯನ್ನೂ ಬಿಸಾಡುವುದಿಲ್ಲ.
ಇಡೀ ದೇಶಕ್ಕೆ ದೇಶವೇ ಸಾಫ್ಟ್ ಸ್ವಚ್ಛ! ಜಪಾನಿನ ಆಫೀಸು ಹೇಗಿರಬಹುದು ಎಂಬುದನ್ನು ನೋಡಬೇಕೆಂದು ಅನಿಸಿದ್ದರಿಂದ ಗೆಳೆಯ ಸಿದ್ದೇಶ ಜತೆಗೆ ಒಂದು ಆಫೀಸಿಗೆ ಹೋಗಿದ್ದೆ. ರಿಸೆಪ್ಷನ್ ನೋಡಿಯೇ ದಂಗಾಗಿ ಹೋದೆ. ಸುಮಾರು ಎರಡು ಸಾವಿರಕ್ಕೂ ಅಧಿಕ ಚದರ ಅಡಿ ಜಾಗದಲ್ಲಿ ವಿಸಿಟರ್ಗಳಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಸುತ್ತಲೂ ಹಸಿರೋ ಹಸಿರು. ಅಲ್ಲಿ ಪುಟ್ಟ ಉದ್ಯಾನವನ್ನೇ ನಿರ್ಮಿಸಿದ್ದರು.
ಆಫೀಸಿನ ಒಳಗೆ ಹೋಗುವಾಗ ಚಪ್ಪಲಿ ಅಥವಾ ಶೂಗಳನ್ನು ಹೊರಗೆ ಬಿಚ್ಚಿಯೇ ಹೋಗಬೇಕು. ಆಫೀಸಿನ ಒಳಗೆ ಪಾದರಕ್ಷೆಗಳನ್ನು ಇಟ್ಟಿದ್ದಾ ರೆಂದರೆ, ಹೊರಗೆ ಅವುಗಳನ್ನು ಬಿಚ್ಚಿ ಹೋಗಬೇಕು ಎಂದರ್ಥ. ಒಳಗಿಟ್ಟ ಪಾದರಕ್ಷೆ ಧರಿಸಿ ಆಫೀಸಿನಲ್ಲಿ ಓಡಾಡಬಹುದು. ಆಫೀಸಿನಲ್ಲಿ ಪಾದರಕ್ಷೆಗಳನ್ನು ಜೋಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಆ ಕೆಲಸ ಮಾಡುತ್ತಿರುವವ ಸಂಸ್ಥೆಯ ಮಾಲೀಕನ ಮಗನೂ
ಆಗಿರಬಹುದು, ಮಾಲೀಕನೂ ಆಗಿರಬಹುದು!
ಹಾಗೆ ಯಾರದ್ದಾದರೂ ಮನೆಗೆ ಹೋದರೆ, ಬಾಗಿಲ ಹೊರಗೇ ಪಾದರಕ್ಷೆಗಳನ್ನು ಬಿಟ್ಟು ಹೋಗಬೇಕು. ಟೋಕಿಯೋ ನಗರದಲ್ಲಿ ಓಡಾಡುವಾಗ ಮೈ ಪರಚಿಕೊಂಡ, ಮೈ-ಕೈ ಉಜ್ಜಿಸಿಕೊಂಡ, ಹಿಂಭಾಗ ತೇಯ್ದ ಒಂದೇ ಒಂದು ವಾಹನ ನೋಡಲು ಸಿಗಲಿಲ್ಲ. ಯಾರೂ ಅನಗತ್ಯವಾಗಿ ಓವರ್ ಟೇಕ್ ಮಾಡಿದ್ದನ್ನೂ ನೋಡಲಿಲ್ಲ. ಹಾರ್ನ್ ಸಪ್ಪಳವಂತೂ ಇಲ್ಲವೇ ಇಲ್ಲ ಬಿಡಿ. ಹಾಗೆಯೇ ರಸ್ತೆಯ ಮೇಲೆ ಒಂದೇ ಒಂದು ವಾಹನವನ್ನು ಪಾರ್ಕ್ (ಸ್ಟ್ರೀಟ್ ಪಾರ್ಕಿಂಗ) ಮಾಡಿದ್ದನ್ನೂ ನೋಡಲಿಲ್ಲ. ನ್ಯೂಯಾರ್ಕ್, ಲಂಡನ್, ಪ್ಯಾರಿಸ್ ನಗರಗಳಲ್ಲಿ ವಾಹನಗಳನ್ನು ರಸ್ತೆಯಲ್ಲಿಯೇ ಪಾರ್ಕ್ ಮಾಡುವುದು ಸಾಮಾನ್ಯ. ಆದರೆ ಜಪಾನಿನಲ್ಲಿ ಯಾರೂ ವಾಹನಗಳನ್ನು ರಸ್ತೆಯಲ್ಲಿಯೇ ತಾಸುಗಟ್ಟಲೆ ನಿಲ್ಲಿಸಿ ಹೋಗುವುದಿಲ್ಲ. ನಿರ್ದಿಷ್ಟ ಅವಧಿಗೆ, ಮೀಟರ್ ಪಾರ್ಕಿಂಗ್ ಇರುವ ಕಡೆ ಮಾತ್ರ ನಿಲ್ಲಿಸಬಹುದಷ್ಟೆ.
ರಸ್ತೆ ಇರುವುದು ವಾಹನ ಸಂಚಾರಕ್ಕೆ ಹೊರತು ವಾಹನ ನಿಲುಗಡೆಗೆ ಅಲ್ಲ. ನಾಲ್ಕು ಲೇನ್ಗಳಿರುವ ರಸ್ತೆಯಲ್ಲಿ ಕೊನೆಯ ಲೇನ್ನಲ್ಲೂ ವಾಹನ ನಿಲ್ಲಿಸುವಂತಿಲ್ಲ. ೧೯೫೭ರಲ್ಲಿಯೇ ಪಾರ್ಕಿಂಗ್ ನಿಯಮಗಳನ್ನು ರೂಪಿಸಿದ ಜಪಾನ್, ರಸ್ತೆ ಎಷ್ಟೇ ವಿಶಾಲವಾಗಿರಲಿ, ರಾತ್ರಿ ವೇಳೆ ರಸ್ತೆ
ಮೇಲೆ ಪಾರ್ಕ್ ಮಾಡುವುದನ್ನು ನಿಷೇಽಸಿದೆ. ಜಪಾನಿನಲ್ಲಿ ವಾಹನ ಖರೀದಿಸುವುದಕ್ಕೆ ಮುನ್ನ ಪಾರ್ಕಿಂಗ್ ಜಾಗವನ್ನು ಹೊಂದಬೇಕು ಅಥವಾ ಖರೀದಿಸಬೇಕು. ಹೀಗಾಗಿ ಇಡೀ ರಸ್ತೆ ಅಡೆ-ತಡೆಯಿಲ್ಲದೇ ಸರಾಗ.
ಟೋಕಿಯೋ ಜಗತ್ತಿನಲ್ಲಿಯೇ ಅತಿ ಜನದಟ್ಟಣೆಯ, ಆಧುನಿಕ ಮತ್ತು ದುಬಾರಿ ನಗರವಾದರೂ, ಅದರ ಅಂತಃ ಸತ್ವವಿರುವುದು ನಯ, ವಿನಯ, ಸೌಜನ್ಯ ಮತ್ತು ಸಭ್ಯತೆಯಲ್ಲಿ. ಅಲ್ಲಿನ ಜನರಲ್ಲಿ ಇದನ್ನು ಧಾರಾಳವಾಗಿ ಕಾಣಬಹುದು. ಪರಸ್ಪರ ಗೌರವ, ಆದರವನ್ನು ಎಲ್ಲರಲ್ಲೂ
ಕಾಣಬಹುದು. ಒತ್ತಡದ ಜೀವನದಲ್ಲೂ ಮಾನವೀಯ ಅಂತಃಕರಣ ಬಿಟ್ಟುಕೊಡದ, ಉದಾತ್ತ ಮೌಲ್ಯಗಳನ್ನು ಪೊರೆಯುವ ಗುಣಗಳನ್ನು ಕಾಪಾಡಿಕೊಂಡಿರುವ ಟೋಕಿಯೋದಲ್ಲಿ ಕಂಗಾಲು ಅಬ್ಬೇಪಾರಿಗಳೂ, ವಿದೇಶಿಯರೂ ‘ಮನೆಗೆ ಬಂದ ಭಾವನೆ’ ಮೂಡಿಸಿಕೊಳ್ಳಲು
ನೆರವಾಗುವ ಸಹಜತೆ ಎದ್ದು ಕಾಣುತ್ತದೆ. Old meets New ಎಂಬುದು ಟೋಕಿಯೋ ನಗರದ ಬಗೆಗಿರುವ ಘೋಷವಾಕ್ಯ. ಅಲ್ಲಿ ಹಳೆ ಬೇರು ಮತ್ತು ಹೊಸ ಚಿಗುರು, ವೃದ್ಧರ ಜತೆಗೆ ಯುವಕರು ಮತ್ತು ಸಂಪ್ರದಾಯದ ಜತೆಗೆ ಆಧುನಿಕತೆಯನ್ನು ಜತೆಜತೆಯಾಗಿ ನೋಡಬಹುದು.
ಹಳತು-ಹೊಸತರ ಕೂಡುತಾಣವಾಗಿರುವ ಆ ನಗರ, ಆ ದೇಶದ ಅಂತಃಸತ್ವವಾಗಿರುವ Endless disovery ಎಂಬ ಮಂತ್ರವನ್ನು ಪಠಿಸುತ್ತಲೇ ಇರುವಂತೆ ಭಾಸವಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಒಂದು ಆದರ್ಶವಾಗಿ, ಮಹೋನ್ನತ ಮೌಲ್ಯವಾಗಿ ಅಲ್ಲಿನ ಕಣಕಣಗಳಲ್ಲೂ ದಟ್ಟೈಸಿರುವುದು ಎಂಥವರಿಗಾದರೂ ಅನುಭವಕ್ಕೆ ಬರುತ್ತದೆ.
ನನ್ನ ಜತೆಯಲ್ಲಿ ಬಂದಿದ್ದ ಸ್ನೇಹಿತರೊಬ್ಬರು ತಮಗಾದ ಒಂದು ಪ್ರಸಂಗವನ್ನು ಹೇಳುತ್ತಿದ್ದರು. ಅವರು ಟ್ಯಾಕ್ಸಿಯಲ್ಲಿ ಸಂಚರಿಸುವಾಗ ತಾವು ಹೋಗಬೇಕಾದ ಜಾಗ ಹನ್ನೊಂದು ಕಿ.ಮೀ. ದೂರದಲ್ಲಿದೆ ಎಂದು ಗೂಗಲ್ ಮ್ಯಾಪಿನಲ್ಲಿ ತೋರಿಸುತ್ತಿತ್ತಂತೆ. ಟ್ಯಾಕ್ಸಿ ಡ್ರೈವರ್ ಊರಲ್ಲ
ಸುತ್ತಿಸಿ, ಹೆಚ್ಚಿನ ಹಣ ಕೀಳಬಹುದು ಎಂದು ಅವರು ಭಾವಿಸಿದ್ದರಂತೆ. ಆದರೆ ಆತ ಒಳದಾರಿಯಲ್ಲಿ, ಕೇವಲ ಆರು ಕಿಮೀ ಕ್ರಮಿಸಿ, ಅವರ ನಿರೀಕ್ಷೆಗಿಂತ ಬೇಗ ತಲುಪಿಸಿದನಂತೆ. ಒಂದು ವೇಳೆ ಆತ ಹದಿನಾರು ಕಿ.ಮೀ. ಸುತ್ತಿಸಿ ಅವರನ್ನು ತಂದು ಬಿಟ್ಟಿದ್ದರೂ ಗೊತ್ತಾಗುತ್ತಿರಲಿಲ್ಲ.
ಆದರೆ ಆತ ಅವರು ಎಣಿಸಿದ್ದಕ್ಕಿಂತ ಬೇಗ, ಕಡಿಮೆ ದೂರದ ಹಾದಿಯಲ್ಲಿ ಕರೆದುಕೊಂಡು ಬಂದಿದ್ದ. ಜಪಾನಿಯರು ತಮ್ಮ ಬಗ್ಗೆ ಯಾರಾದರೂ, ಏನಾದರೂ ಹೇಳಿದರೆ ಸಹಿಸಿಕೊಂಡಾರು. ಆದರೆ ತಮ್ಮ ದೇಶದ ಬಗ್ಗೆ ಅಪದ್ಧ ಹೇಳಿದರೆ ಸಹಿಸರು. ಅದಕ್ಕಿಂತ ಮುಖ್ಯವಾಗಿ ಅಂಥ
ಸಂದರ್ಭವೇ ಬರದಂತೆ ನೋಡಿಕೊಳ್ಳುತ್ತಾರೆ ಎಂಬುದು ತಮಗೆ ಮನವರಿಕೆ ಯಾಯಿತು ಎಂದು ಹೇಳುತ್ತಿದ್ದರು.
ಅದು ಅಕ್ಷರಶಃ ಸತ್ಯ. ಆಗಾಗ ಭೂಕಂಪದಿಂದ ನಲುಗುತ್ತಿದ್ದರೂ, ಮಾನವ ಸಹಜ ಗುಣಗಳನ್ನು ಗಟ್ಟಿಯಾಗಿ ಸ್ಥಾಪಿಸಿರುವ ಜಪಾನ್,
ಮಾನವ ಸಂಬಂಧಗಳ ಭದ್ರ ನೆಲೆಯಲ್ಲಿ ಉಳಿದ ದೇಶಗಳಿಗಿಂತ ಭಿನ್ನವಾಗಿ ಕಾಣುತ್ತದೆ. Money can’t buy you happiness but it can buy a ticket to Japan ಎಂದು ಯಾರಾದರೂ ಹೇಳಿದರೆ ನಂಬಬಹುದು. ಹಾಗೆಯೇ A bad day in Tokyo is still better than a good day anywhere else ಎಂದು ಹೇಳಿದರೂ..! ಆದರೆ ನಾನು ಹೇಳುವುದೇ ಬೇರೆ- My good mood is sponsored by Japan!
ಇದನ್ನೂ ಓದಿ:@vishweshwarbhat