Sunday, 8th September 2024

ಆಧುನಿಕ ಯುದ್ದದಲ್ಲಿ ಡ್ರೋನ್ ನಿಜ ಪ್ರತಾಪ

ಶಿಶಿರ ಕಾಲ

shishirh@gmail.com

ಜಾಕ್ ರಯಾನ್ ಎನ್ನುವ ಒಂದು ಸೀರೀಸ್ ಓಟಿಟಿಯಲ್ಲಿ ಇದೆ. ಅದು ಸಿಐಎ, ಅಮೆರಿಕದವರು ಶತ್ರುಗಳನ್ನು, ಭಯೋತ್ಪಾದಕರನ್ನು ಬೇಹುಗಾರಿಕೆ ಮಾಡುವ, ಬೇಧಿಸುವ, ಹಿಡಿಯುವ, ಕೊಲ್ಲುವ ಕಥೆಗಳು. ಇದು ಕಥೆ ಕಾದಂಬರಿಯಾದರೂ ಬೇಹುಗಾರಿಕಾ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಇದನ್ನು ನೋಡಿ ಅಂದಾಜಿಸಿಕೊಳ್ಳಬಹುದು. ಕಾಲ್ಪನಿಕವಾದರೂ ಸತ್ಯದಿಂದ ಬಹಳಷ್ಟು ದೂರವಿಲ್ಲದ್ದು. ಇದರಲ್ಲಿ ಮತ್ತು ಟಾಮ್ ಕ್ಲೇನ್ಸಿಯ ಹಲವು ಕಾದಂಬರಿಗಳಲ್ಲಿ ಬರುವ ಘಟನೆಗಳು ಅದೆಷ್ಟೋ ಬಾರಿ ನಿಜ ಜೀವನದಲ್ಲಿ ನಡೆದು ವರದಿಯಾಗುತ್ತವೆ.

ಹಾಗೆಲ್ಲ ಆದಾಗ ಇದು ಆ ಕಾದಂಬರಿಯಲ್ಲಿ ಇದ್ದಂತೆಯೇ ನಡೆದಿದೆ ನೋಡಿ ಎಂದು ಟಿವಿಗಳು ಸುದ್ದಿ ಮಾಡುತ್ತವೆ. ಅದರ ಒಂದು ಕಥೆಯ ಭಾಗವಾಗಿ ಅಮೆರಿಕದ ಇಬ್ಬರು ಡ್ರೋನ್ ಚಾಲಕ ಸೈನಿಕರು. ಅವರು ಕುಳಿತುಕೊಂಡಿರುವುದು ಅಮೆರಿಕದ ಮಿಲಿಟರಿ ಆಫೀಸಿನಲ್ಲಿ. ಆದರೆ ಅಫ್ಘಾನಿಸ್ತಾನದ ಯುದ್ಧ ನೆಲದಲ್ಲಿನ ಡ್ರೋನ್ ಅನ್ನು ಇಲ್ಲಿಂದಲೇ ಕೂತು ಚಲಾಯಿಸುತ್ತಿರುತ್ತಾರೆ, ಇಂಟರ್ನೆಟ್ ಮೂಲಕ, ಕಂಪ್ಯೂಟರ್ ಬಳಸಿ. ಅವರ ಕೆಲಸವೆಂದರೆ ಪ್ರತೀ ದಿನ ಅಫ್ಘಾನಿಸ್ತಾನದ ಸೈನ್ಯದ ಬೇಸ್ ಕ್ಯಾಂಪ್‌ನಲ್ಲಿ ನಿಂತಿರುವ ಡ್ರೋನ್ ಅನ್ನು ಅಮೆರಿಕದಲ್ಲಿ ಕೂತು ನಿಯಂತ್ರಿಸುವುದು, ಹಾರಿಸುವುದು. ಆ ಮೂಲಕ ಅಫ್ಘಾನಿಸ್ತಾನದ ನಿರ್ದಿಷ್ಟ ಸ್ಥಳ ಮತ್ತು ಜನರ ಮೇಲೆ ಬೇಹುಗಾರಿಕೆ ನಡೆಸುವುದು.

ಬೇಹುಗಾರಿಕಾ ಕೆಲಸ ಮುಗಿದ ಕೂಡಲೆ ಆ ಡ್ರೋನ್ ಅನ್ನು ಬೇಸ್ ಕ್ಯಾಂಪಿಗೆ ತಂದು ಬಿಡುವುದು. ಅದನ್ನು ಅಲ್ಲಿ ಚಾರ್ಜ್‌ಗೆ ಹಾಕಲಾಗುತ್ತದೆ.

ಮಾರನೆಯದಿನ ಮತ್ತದೇ ಕೆಲಸ. ಹೀಗೆ ಬೇಹುಗಾರಿಕೆಗೆ ಬಳಸುವ ಡ್ರೋನ್ ಶಸ್ತ್ರಸಜ್ಜಿತ ಕೂಡ. ಒಂದು ವೇಳೆ ಭಯೋತ್ಪಾದಕರು ಡ್ರೋನ್ ಕ್ಯಾಮರಾ ಮೂಲಕ ಕಂಡರೆ, ದೃಢಪಟ್ಟರೆ ಸಾವಿರ ಮೈಲಿ ದೂರ, ಅಮೆರಿಕಾದಲ್ಲಿ ಕೂತು ಒಂದು ಬಟನ್ ಒತ್ತಿದರೆ ಆ ಡ್ರೋನಿನಲ್ಲಿರುವ ಚಿಕ್ಕ ಮಿಸೈಲ್‌ಗಳು ಆತನನ್ನು ಕೊಳ್ಳುತ್ತವೆ. ಆ ಇಬ್ಬರು ಹೀಗೆ ಬೇಹುಗಾರಿಕೆ ಮಾಡುತ್ತಿರುವಾಗ ಕೆಲವೊಮ್ಮೆ ತಿಂಗಳಾನುಗಟ್ಟಲೆ ಒಂದೇ ಸ್ಥಳ, ಮನೆ, ಜನರನ್ನು ಡ್ರೋನ್ ಮೂಲಕ ನೋಡುತ್ತಿರಬೇಕು, ಹಿಂಬಾಲಿಸಬೇಕು. ನೋಡನೋಡುತ್ತ ಅವರಿಗೆ ಡ್ರೋನ್‌ನ ಲೆನ್ಸ್ ಮೂಲಕ ಆ ಪ್ರದೇಶದ ಎಲ್ಲ ಜನರ ಪರಿಚಯವಾಗಿರುತ್ತದೆ. ಕೆಳಗೆ ನೆಲ ದಲ್ಲಿ ಸಹಜ ಜೀವನ ನಡೆಸುವ ಯಾರಿಗೂ ಇದರ ಅಂದಾಜು ಕೂಡ ಇರುವುದಿಲ್ಲ.

ಒಮ್ಮೆ ಹೀಗೆ ಬೇಹುಗಾರಿಕೆ ನಡೆಸುವಾಗ ಒಬ್ಬ ಅಧಿನಿಯನ್ನು ಕೊಲ್ಲಲು ಮೇಲಽಕಾರಿಯಿಂದ ಆದೇಶ ಬರುತ್ತದೆ. ಆ ಡ್ರೋನ್ ಓಪರೇಟರ್ ಆತ ಭಯೋತ್ಪಾದಕನಾಗಿರಲಿಕ್ಕಿಲ್ಲ ಅಂದರೂ ಮೇಲಧಿಕಾರಿ ಕೇಳುವುದಿಲ್ಲ. ತನಗೆ ಬಂದ ಮಾಹಿತಿಯಂತೆ ಆತನೇ ಭಯೋತ್ಪಾದಕ ಎಂದು ಕೊಲ್ಲು ವಂತೆ ಆದೇಶಿಸುತ್ತಾನೆ. ಆಕಾಶದಿಂದ ಡ್ರೋನ್ ಸ್ಟ್ರೈಕ್ ಆಗುತ್ತದೆ ಮತ್ತು ಆತನ ದೇಹ ಛಿದ್ರವಾಗಿ ರಸ್ತೆಯಲ್ಲ ಚಪಿಲ್ಲಿಯಾಗುತ್ತದೆ. ಅದೆಲ್ಲವನ್ನು ಡ್ರೋನ್ ಚಾಲಕ ನೋಡುತ್ತಾನೆ. ಆದರೆ ನಂತರದಲ್ಲಿ ತಿಳಿದದ್ದೇನೆಂದರೆ ಆ ವ್ಯಕ್ತಿ ಅಸಲಿಗೆ ಭಯೋತ್ಪಾದಕನಾಗಿರುವುದಿಲ್ಲ. ಆತ ಮಕ್ಕಳು, ತಂದೆ ತಾಯಿ ಹೆಂಡತಿ, ಎಲ್ಲರೂ ಇರುವ ಜನಸಾಮಾನ್ಯ.

ನಂತರ ಈ ಡ್ರೋನ್ ಬೇಹುಗಾರ ಅವರ ಮನೆಯವರ ಆಕ್ರಂದನವನ್ನು, ಆತನ ದೇಹದ ಭಾಗಗಳನ್ನು ರಸ್ತೆಯ ಮಣ್ಣಿನಿಂದ ಹೆಕ್ಕಿ ಸ್ಮಶಾನಕ್ಕೆ ಒಯ್ಯುವುದನ್ನು ನೋಡುತ್ತಾನೆ. ಇದೆಲ್ಲದರಿಂದ, ಅಮಾಯಕ ವ್ಯಕ್ತಿಯನ್ನು ಕೊಂದದ್ದರಿಂದ, ಆತನ ಮನಸ್ಸು ಕದಡಿಹೋಗುತ್ತದೆ. ನಂತರ ಆ ಡ್ರೋನ್ ಚಾಲಕ ಸೈನ್ಯ ತ್ಯಜಿಸಿ ಅಮೆರಿಕದಿಂದ ಅಫ್ಘಾನಿಸ್ತಾನಕ್ಕೆ, ಆ ಕುಟುಂಬವನ್ನು ಕಾಣಲು ಹೋಗುತ್ತಾನೆ. ಪಾಪಪ್ರಜ್ಞೆ ನಿರಂತರ ಕಾಡು ತ್ತಿರುತ್ತದೆ. ಅವರ ಬಳಿ ಕ್ಷಮೆ ಕೇಳುತ್ತಾನೆ. ಅವರೆಲ್ಲರೂ ಅವನಿಗೆ ಗೊತ್ತು.

ಅವರಿಗೆ ಅವನ್ಯಾರೆಂದು ತಿಳಿದಿಲ್ಲ. ಆತನಿಗೆ ಅವರ ಸಂಬಂಧಗಳೂ ಗೊತ್ತು. ಆ ಜನರಿಗೆ ಈತನನ್ನು ಕಂಡು ಯಾರೆಂಬ ಆಶ್ಚರ್ಯ. ಅವರಿಗೆ ಈತನೇ ತಮ್ಮ ಮಗನನ್ನು ಕೊಂದದ್ದು ಎಂಬ ಅರಿವಿಲ್ಲ. ಆತನನ್ನು ಮನೆಯೊಳಕ್ಕೆ ಕರೆದು ಊಟ ಹಾಕುತ್ತಾರೆ. ಅವರಿಗೆ ಇಂಗ್ಲಿಷ್ ಗೊತ್ತಿಲ್ಲ, ಇವನಿಗೆ
ಅವರ ಭಾಷೆ ಬರುವುದಿಲ್ಲ. ನಿಮ್ಮ ಮಗನನ್ನು ನಾನೇ ಕೊಂದದ್ದೊಂದು ಹೇಳಬೇಕೆಂದು ಎಷ್ಟೇ ಪ್ರಯತ್ನಪಟ್ಟರೂ ಇದೆಲ್ಲ ಅವರಿಗೆ ತಿಳಿಯುವುದೇ ಇಲ್ಲ. ಈತ ತಾನು ಮಾಡಿದ ಪಾಪ ಕಾರ್ಯಕ್ಕೆ ಪರಿಹಾರವಾಗಿ ಒಂದಿಷ್ಟು ಹಣವನ್ನು ಅವರಲ್ಲಿ ಬಿಟ್ಟು ಮತ್ತಷ್ಟು ಖಿನ್ನನಾಗಿ ಅಲ್ಲಿಂದ ಹೊರಟು ಬಿಡುತ್ತಾನೆ. ಹೀಗೆ ಕಥೆ ಮುಂದುವರಿಯುತ್ತದೆ.

ಯುದ್ಧಗಳು ನಡೆಯುವ ರೀತಿ ಸಂಪೂರ್ಣ ಬದಲಾದದ್ದು ವಿಶ್ವಯುದ್ಧದ ಸಮಯದಲ್ಲಿ. ೨ನೇ ವಿಶ್ವಯುದ್ಧವೆಂದರೆ ಅದು ಆವಿಷ್ಕಾರಗಳ ಯುದ್ಧ. ಅಲ್ಲಿಂದ ಮುಂದೆ ತಾಂತ್ರಿಕವಾಗಿ ಜಗತ್ತಿನ ಬಹುತೇಕ ಗಟ್ಟಿ ಸೈನ್ಯಗಳು ಬದಲಾಗಿವೆ. ಬೇಹುಗಾರಿಕೆ, ಯುದ್ಧ ನಡೆಯುವ ರೀತಿಯೇ ಇಂದು ಬದಲಾಗಿ ಹೋಗಿದೆ. ಅತ್ಯಾಧುನಿಕ ರೈಫಲ್‌ಗಳು, ಶಬ್ಧವೇ ಮಾಡದ ಯುದ್ಧ ವಿಮಾನಗಳು, ಯುದ್ಧ ನೌಕೆಗಳು ಇವೆಲ್ಲ ಒಂದು ಕಡೆಯಾಯಿತು. ಇಂಟರ್ನೆಟ್, ಸ್ಯಾಟಲೈಟ್ ಗಳ ಬಳಕೆ, ಡ್ರೋನ್ ಮೂಲಕ ಜಗತ್ತಿನ ಯಾವುದೇ ಭೂಭಾಗವನ್ನು ಲೈವ್ ನೋಡುವುದು, ದಾಳಿ ಮಾಡುವುದು ಇವೆಲ್ಲ ಇಂದು ಸಾಧ್ಯ. ಮೇಲೆ ಹೇಳಿದ ಕಾಲ್ಪನಿಕ ಕಥೆ ಇಂದು ಕೇವಲ ಕಥೆಯಾಗಿ ಉಳಿದಿಲ್ಲ. ಎರಡು ವರ್ಷದ ಹಿಂದೆ ಅಮೆರಿಕಾ ಅಫ್ಘಾನ್‌ನ ಕಾಬೂಲ್‌ನ ಜನನಿಬಿಡ ಪ್ರದೇಶದಲ್ಲಿ ಮಾಡಿದ ದಾಳಿ ಇದಕ್ಕೆ ಉದಾಹರಣೆ.

ಅಲ್ಲಿ ಲೆಕ್ಕಾಚಾರ ತಪ್ಪಿ, ಭಯೋತ್ಪಾದಕನೆಂದು ಭಾವಿಸಿ ಡ್ರೋನ್ ದಾಳಿಯಲ್ಲಿ ಹತ್ತು ಜನ ನಾಗರಿಕರ ಸಾವಿಗೆ ಅಮೆರಿಕ ಕಾರಣವಾಗಿತ್ತು. ಅದರಲ್ಲಿ
ಮಕ್ಕಳೂ ಇದ್ದರು. ಅಮೆರಿಕ ಇರಾನಿನ ಸೇನಾ ಮುಖ್ಯಸ್ಥನನ್ನು ಇರಾನಿನ ನೆಲದಲ್ಲಿಯೇ ಕೊಂದಿದ್ದು ಡ್ರೋನ್ ಬಳಸಿ. ಇಂದು ಎಲ್ಲಿಯೋ ಜಗತ್ತಿನ ಮೂಲೆಯಲ್ಲಿ ಕೂತ ಒಬ್ಬ ವ್ಯಕ್ತಿ ಇನ್ಯಾವುದೋ ಜಗತ್ತಿನ ಮೂಲೆಯ ಜನರ ಮೇಲೆ ಬೇಹುಗಾರಿಕೆಯನ್ನು ಡ್ರೋನ್ ಮೂಲಕ ನಡೆಸಬಹುದು.
ಬೇಕೆಂದರೆ ಡ್ರೋನ್‌ಗೆ ಅಂಟಿದ ಚಿಕ್ಕ ರಾಕೆಟ್ ಅನ್ನು ಉಡಾಯಿಸಿ ಯಾವುದೇ ವ್ಯಕ್ತಿಯನ್ನು ಕ್ಷಣಾರ್ಧದಲ್ಲಿ ಕೊಲ್ಲಬಹುದು. ಎದುರುಬದುರು ಕಾದಾಡಿ ಯುದ್ಧಮಾಡುವುದು, ಮರೆಯಲ್ಲಿ ಗೆರಿ ರೀತಿಯಲ್ಲಿ ಯುದ್ಧ ಇವೆಲ್ಲ ಹಳೆಯದಾಯಿತು.

ಇದು ಹಾಗಲ್ಲ, ಕೊಲ್ಲುವ ವ್ಯಕ್ತಿ ಸಾವಿರಾರು ಮೈಲಿ ದೂರದಲ್ಲಿ ಕೂತು, ಮೇಲಿಂದ ಗುರಿಯಿಟ್ಟು ಒಂದು ಬಟನ್ ಒತ್ತಿದರಾಯ್ತು. ಇದು ಸಹಜವಾಗಿ ಹಲವಾರು ನೈತಿಕ ಪ್ರಶ್ನೆಗಳನ್ನು ಎತ್ತುತ್ತವೆ. ಇವು ಮಿಲಿಟರಿ ಬಳಕೆಯ ಡ್ರೋನ್‌ಗಳಾದವು. ೧೯ ಡಿಸೆಂಬರ್ ೨೦೧೮, ಯುನೈಟೆಡ್ ಕಿಂಗ್‌ಡಮ್‌ನ ಎರಡನೇ ನಿಬಿಡ ವಿಮಾನ ನಿಲ್ದಾಣ, ಗ್ಯಾಟ್ವಿಕ್ ಏರ್‌ಪೋರ್ಟ್. ಅಲ್ಲಿನ ಸೆಕ್ಯೂರಿಟಿ ಗಾರ್ಡ್ ರಾತ್ರಿ ತನ್ನ ಕೆಲಸ ಮುಗಿಸಿ ಮನೆಗೆ ಹೋಗಲೆಂದು ವಿಮಾನ ನಿಲ್ದಾಣದ ಹೊರಗಿನ ಬಸ್ ನಿಲ್ದಾಣದಲ್ಲಿ ನಿಂತಿದ್ದ. ಆಗ ಮೇಲೆ ನೋಡಿದಾಗ, ವಿಮಾನ ನಿಲ್ದಾಣದ ಟರ್ಮಾಕ್‌ನ ಮೇಲಿನ ಆಕಾಶದಲ್ಲಿ ಒಂದು ಡ್ರೋನ್ ಬೆಳಕು ಕಾಣಿಸುತ್ತದೆ. ಆತ ಅಲ್ಲಿನ ಅಪಾಯವನ್ನು ತಕ್ಷಣ ಗುರುತಿಸಿ ವರದಿ ಮಾಡುತ್ತಾನೆ.

ನೋಡನೋಡುತ್ತಿರುವಾಗಲೇ ಇನ್ನಷ್ಟು ಡ್ರೋನ್‌ಗಳು ವಿಮಾನ ನಿಲ್ದಾಣದ ಆಗಸದಲ್ಲಿ ಗೋಚರಿಸುತ್ತವೆ. ಇದರಿಂದ ಮಧ್ಯರಾತ್ರಿ ಆಗುವಲ್ಲಿ ವರೆಗೆ ೫೮ ವಿಮಾನಗಳು ರzಗುತ್ತವೆ. ಅಲ್ಲಿಗೆ ಬಂದಿಳಿಯಬೇಕಾಗಿದ್ದ ನೂರು ವಿಮಾನಗಳನ್ನು ಇನ್ನೆಲ್ಲಿಯೋ ಇಳಿಸುವ ವ್ಯವಸ್ಥೆಯಾಗುತ್ತದೆ. ಈ ರೀತಿ ಡ್ರೋನ್ ಅಸಂಖ್ಯ ರೀತಿಯಲ್ಲಿ ಕಾಣಿಸಿಕೊಳ್ಳುವುದು, ಮಾಯವಾಗುವುದು ಮುಂದಿನ ೭೨ ಗಂಟೆ ಮುಂದುವರಿಯುತ್ತದೆ. ಈ ಅವಧಿಯಲ್ಲಿ ೧೭೦ ಬಾರಿ ಡ್ರೋನ್‌ಗಳು ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಸಾವಿರಕ್ಕಿಂತ ಜಾಸ್ತಿ ವಿಮಾನ ರದ್ದಾಗುತ್ತದೆ.

ಅದೆಷ್ಟೋ ಮಿಲಿಯನ್ ಹಣ ಲಾಸ್ ಆಗುತ್ತದೆ. ಜಪ್ಪಯ್ಯ ಅಂದರೂ ಇದನ್ನೆ ಮಾಡುತ್ತಿರುವುದು ಯಾರು ಎಂದು ಬೇಧಿಸಲಿಕ್ಕಾಗುವುದಿಲ್ಲ. ಇಂದಿಗೂ ಅಂದು ಅಷ್ಟೆಲ್ಲ ಡ್ರೋನ್ ಅನ್ನು ಹಾರಿಸಿದ್ದು ಯಾರು ಎಂದು ತಿಳಿದಿಲ್ಲ. ಇದು ಯಾರೋ ಕಿತಾಪತಿ ಮಾಡಿದ್ದೆ ಅಥವಾ ಭಯೋತ್ಪಾದಕರ ಟೆಸ್ಟಿಂಗ್
ಕೆಲಸವೋ? ಅವೆಲ್ಲ ಸಾಮಾನ್ಯ ಡ್ರೋನ್‌ಗಳಲ್ಲ. ಕೈಗಾರಿಕಾ ಶ್ರೇಣಿಯ ಡ್ರೋನ್‌ಗಳು. ಅವನ್ನು ಅಲ್ಲಿ ಅಂದು ತಂದು ಹಾರಿಸಿದ್ದು ಯಾರು, ಅವರ ಉದ್ದೇಶವೇನು ಇವೆಲ್ಲ ಇಂದಿಗೂ ಬಗೆಹರಿದಿಲ್ಲ. ಒಂದು ವೇಳೆ ಆ ಸೆಕ್ಯೂರಿಟಿ ಗಾರ್ಡ್ ಅದನ್ನು ಅಂದು ಗ್ರಹಿಸಿರದಿದ್ದರೆ ಅದೆಷ್ಟು ವಿಮಾನಗಳು
ಲ್ಯಾಂಡ್ ಆಗುವಾಗ ಬೂದಿಯಾಗುತ್ತಿದ್ದವೋ ಗೊತ್ತಿಲ್ಲ.

ಡ್ರೋನ್ ಎಂದರೆ ನಾಲ್ಕಾರು ರೆಕ್ಕೆಪುಕ್ಕವಿರುವ, ಮದುವೆ ಮೊದಲಾದ ಫೋಟೋ ಶೂಟ್ ಮಾಡಲು ಬಳಸುವ ಡ್ರೋನ್‌ಗಳೆಂದು ಭಾವಿಸಬೇಕಿಲ್ಲ. ಸೈನ್ಯ ಬಳಸುವ ಡ್ರೋನ್ ಅನ್ನು UCAV (Unmanned Combat Aerial vehicles) ಅನ್ನುತ್ತಾರೆ. ಒಂದು ದುಂಬಿಯ ಗಾತ್ರದ ಡ್ರೋನ್‌ ನಿಂದ ಹಿಡಿದು ಒಂದು ಚಿಕ್ಕ, ನಾಲ್ಕ ಎಂಟು ಜನರನ್ನು ಹೊತ್ತೊಯ್ಯುವ ಚಾರ್ಟರ್ ವಿಮಾನದಷ್ಟು ಗಾತ್ರದ UCA ಇಂದು ಬಳಕೆಯಲ್ಲಿವೆ. ಅವು ಇಂದು ಅದೆಷ್ಟೋ ಟನ್ ಮದ್ದುಗುಂಡು, ರಾಕೆಟ್‌ಗಳನ್ನು ಹೊತ್ತು ಹೋಗಿ ಶತ್ರುನೆಲದ ಮೇಲೆ ದಾಳಿಮಾಡಬಲ್ಲವು. ಅವು ಎಷ್ಟು ಕರಾರುವಕ್ಕಾಗಿ ಕೆಲಸಮಾಡುತ್ತವೆ ಎಂದರೆ ಅವು ದಾಳಿ ಮಾಡುವಾಗ ಎರಡು ಸೆಂಟಿಮೀಟರ್‌ನಷ್ಟು ಆಚೀಚೆ ಆಗಲಿಕ್ಕಿಲ್ಲ.

ಅಂತಹ ಅತ್ಯಾಧುನಿಕ ಡ್ರೋನ್‌ಗಳನ್ನು ಇತ್ತೀಚೆಗೆ ಭಾರತ ಇಸ್ರೇಲ್‌ನಿಂದ ಖರೀದಿಸಿದ್ದು ಸುದ್ದಿಯಾಗಿತ್ತು. ಡ್ರೋನ್‌ನ ಎಲ್ಲ ಸಾಧ್ಯತೆಗಳು ಇಂದು ಎಲ್ಲ ಸೈನ್ಯಕ್ಕೆ ಗೊತ್ತು. ಇದೊಂದು ಸಾಧನ ಹೌದು, ಇದೇ ಆತಂಕಕ್ಕೂ ಕಾರಣ. ಕೇವಲ ಭಯೋತ್ಪಾದಕರನ್ನು ಕೊಲ್ಲಲು ನ್ಯಾಯ ಮಾರ್ಗದಲ್ಲಿ ಸೈನ್ಯ ಬಳಸಿದರೆ ತೊಂದರೆಯಿರಲಿಲ್ಲ. ಆದರೆ ಈ ಡ್ರೋನ್‌ಗಳನ್ನು ಖರೀದಿ ಮಾಡುವುದು ಅತ್ಯಂತ ಸುಲಭ. ಹಾಗಾಗಿ ಇದು ಭಯೋತ್ಪಾದಕರ ಕೈಗೆ ಸಿಗುವುದು ಕೂಡ. ೨೦೧೭ರಲ್ಲಿರಬೇಕು, ಐಸಿಸ್ ಉಗ್ರರು ಒಂದಿಷ್ಟು ಡ್ರೋನ್ ಖರೀದಿಸಿ, ಅದನ್ನು ಬದಲಾವಣೆ ಮಾಡಿ, ಅದಕ್ಕೆ ಬಾಂಬ್
ಕಟ್ಟಿ ಕರಾರುವಕ್ಕಾಗಿ ಇರಾಕಿ ಸೈನ್ಯದ ವಾಹನದ ಮೇಲೆ ದಾಳಿ ಮಾಡಿದ್ದರು.

ಇಂತಹ ಹಲವು ಉದಾಹರಣೆಗಳು, ಘಟನೆಗಳು ನಡೆಯುತ್ತಲೇ ಇರುತ್ತವೆ. ಇದು ಆಗ ಬಹಳ ಸಂಚಲನ ಎಬ್ಬಿಸಿದ ಸುದ್ದಿ. ಭಯೋತ್ಪಾದಕರು ಡ್ರೋನ್ ಬಳಸುವ ಸಾಧ್ಯತೆ ಇಡೀ ನ್ಯಾಟೋ ದೇಶಗಳಲ್ಲ ದಿಗಿಲು ಹುಟ್ಟಿಸಿತ್ತು. ನಂತರದಲ್ಲಿ ಅಮೆರಿಕನ್ ಸೈನ್ಯದ ಮೇಲೆ ದಾಳಿ ಮಾಡಲು, ಸೈನಿಕರು ಎಲ್ಲಿzರೆಂದು ತಿಳಿದು ಮುಂದುವರಿಯಲು ಐಸಿಸ್ ಭಯೋತ್ಪಾದಕರು ಡ್ರೋನ್ ಹೇರಳವಾಗಿ ಬಳಸಿದ್ದರು. ಅವರಿಂದ ನಗರದ ಮೇಲೆ ದಾಳಿಗೆ ಬಳಕೆಯಾದರೆ ಎನ್ನುವ ಆತಂಕ ಇಂದಿಗೂ ಇದೆ.

ಇದೆಲ್ಲ ಸುದ್ದಿಯಲ್ಲಿದ್ದಾಗ ಅಮೆರಿಕದ ಅಧ್ಯಕ್ಷರ ಮನೆ ಯಾದ ವೈಟ್ ಹೌಸ್‌ನ ಮೇಲೆ ಕುಡುಕನೊಬ್ಬ ತನ್ನ ಡ್ರೋನ್ ಅನ್ನು ಹಾರಿಸಿ ಅಲ್ಲಿನ ಅಂಗಳದಲ್ಲಿ ಅದನ್ನು ಕ್ರ್ಯಾಶ್ ಮಾಡಿದ್ದ. ವೈಟ್‌ಹೌಸ್ ಎಂದರೆ ಜಗತ್ತಿನ ಅತ್ಯಂತ ಸೆಕ್ಯೂರಿಟಿ, ಬಂದೋಬಸ್ತಿನ ಮನೆ. ಅಂತಹ ಜಾಗಕ್ಕೆ ಡ್ರೋನ್ ಅಷ್ಟು ಸುಲಭವಾಗಿ ಮತ್ತಿನಲ್ಲಿದ್ದವನೊಬ್ಬ ಹಾರಿಸಿ ಬೀಳಿಸಬಹುದು ಎನ್ನುವ ಸುದ್ದಿ ಡ್ರೋನ್‌ನ ಸಾಧ್ಯತೆಯನ್ನು ಮನಗಾಣಿಸುದೆ. ಅದನ್ನು ಅಮೆರಿಕದ ನೆಲದೊಳಗಿನ ಟೆರರಿಸ್ಟುಗಳು ಬಳಸುವ ಸಾಧ್ಯತೆಗಳಿಂದಾಗಿ ಇಡೀ ವೈಟ್‌ಹೌಸ್, ವಿಮಾನ ನಿಲ್ದಾಣ, ಸಂಸತ್ತು ಈ ಎಲ್ಲ ಜಾಗಗಳನ್ನು ನಂತರದಲ್ಲಿ ಆ ನಿಟ್ಟಿನಲ್ಲಿ ಸುರಕ್ಷಿತಗೊಳಿಸಲಾಯಿತು. ಆದರೂ ಸಂಪೂರ್ಣ ಸುರಕ್ಷತೆ ಅಸಾಧ್ಯ.

ಅಮೆರಿಕದ ಸೈನ್ಯದ ಮುಖ್ಯಸ್ಥಾನ ಪೆಂಟಗಾನ್‌ನ ಮೇಲೆ ನೂರಕ್ಕೂ ಜಾಸ್ತಿ ಈ ರೀತಿ ಡ್ರೋನ್ ಬಂದಿಳಿದು ಸುರಕ್ಷತೆಯನ್ನು ಉಲ್ಲಂಘಿಸಿದ್ದು ದಾಖಲಾಗಿದೆ. ಜಪಾನಿನ ಪರಿಸರವಾದಿಯೊಬ್ಬ ವಿಕಿರಣದ ಮರಳನ್ನು ಅಲ್ಲಿನ ಅಧ್ಯಕ್ಷರ ಮನೆಯ ಮೇಲೆ ಡ್ರೋನ್‌ನ ಮೂಲಕ ಇಳಿಸಿದ್ದ. ಅದು ಮುಂದಿನ ಎರಡು ವಾರ ಅಲ್ಲಿಯೇ ಅಧ್ಯಕ್ಷರ ಮೇಲೆ ವಿಕಿರಣ ಸೂಸುತ್ತಿತ್ತು. ವೆನಿಜುಯೆಲಾದ ಅಧ್ಯಕ್ಷ ಅಲ್ಲಿನ ಸೈನ್ಯವನ್ನುದ್ದೇಶಿಸಿ ಮಾತನಾ ಡುತ್ತಿದ್ದಾಗಲೇ ಮೇಲೊಂದು ಡ್ರೋನ್ ಕಾಣಿಸಿಕೊಂಡಿತು. ಅದನ್ನು ಮೊದಲು ಗ್ರಹಿಸಿದ್ದು ಅಧ್ಯಕ್ಷರ ಹೆಂಡತಿ. ನಂತರ ಕ್ಷಣಾರ್ಧದಲ್ಲಿ ಆಕಾಶದಲ್ಲಿ ಸೋಟಿಸಿದ ಶಬ್ದ ಕೇಳಿ ಬಂತು. ಆಗಬೇಕಾಗಿದ್ದ ಅನಾಹುತ ಮಿಸ್ ಫೈರ್ ಆಗಿ ಸ್ವಲ್ಪದರಲ್ಲಿಯೇ ತಪ್ಪಿ ಹೋಯಿತು.

ಹೀಗೆ ಒಳ್ಳೆಯದಕ್ಕೆ ಮತ್ತು ಕೆಟ್ಟದ್ದಕ್ಕೆ, ಎರಡಕ್ಕೂ ಇಂದು ಡ್ರೋನ್ ಬಳಕೆಯಾಗುತ್ತಿದೆ. ದಿನಗಳೆದಂತೆ ಅಮೆರಿಕ ಮತ್ತು ಪಾಶ್ಚಾತ್ಯ ಮಿಲಿಟರಿ ಲ್ಯಾಬೊರೇಟರಿಗಳು ಡ್ರೋನ್ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸುತ್ತಿವೆ. ಇಂದು ಜಗತ್ತಿನಲ್ಲಿ ಉತ್ಪಾದನೆಯಾಗುವ ಫೋಟೋಗ್ರಾಫಿ ಡ್ರೋನ್‌ನ ಹತ್ತು
ಪಟ್ಟು ಜಾಸ್ತಿ ಡ್ರೋನ್‌ಗಳು ಮಿಲಿಟರಿ ಉದ್ದೇಶಕ್ಕೆ ತಯಾರಿಕೆಯಾಗುತ್ತಿವೆ. ಇದನ್ನು ಅಭಿವೃದ್ಧಿ ಪಡಿಸುವ ಅದೇ ಲ್ಯಾಬೊರೇಟರಿಗಳು ಇಂದು ಶತ್ರು ಸೈನ್ಯದ ಡ್ರೋನ್ ದಾಳಿ ತಪ್ಪಿಸುವುದು ಹೇಗೆ, ಅವರ ಡ್ರೋನ್‌ಗಳನ್ನು ಗುರುತಿಸಿ ಅನಾಹುತವಾಗುವ ಮೊದಲೇ ಹೊಡೆದುರುಳಿಸುವ, ಇವೇ
ಮೊದಲಾದ ಪ್ರತಿ ತಂತ್ರeನ ಕೂಡ ಅಭಿವೃದ್ಧಿಯಾಗುತ್ತಿವೆ.

ಕೆಲವು ಕಡೆ ಡ್ರೋನ್ ಅನ್ನು ಉರುಳಿಸಲು ಹದ್ದುಗಳನ್ನು ಬಳಸುವ ಉದಾಹರಣೆಯಿದೆ. ಇನ್ನು ಅದು ಕೆಲವೊಂದು ಪ್ರದೇಶ ಹೊಕ್ಕದಂತೆ ಪ್ರತಿಸಿಗ್ನಲ್ ಗಳನ್ನು ಬಳಸುವುದು, ರೇಡಾರ್ ಬಳಸಿ ಗುರುತಿಸುವುದು ಮತ್ತು ಇನ್ನೊಂದು ಡ್ರೋನ್‌ನಿಂದ ಹೊಡೆದುರುಳಿಸುವುದು ಇತ್ಯಾದಿ. ಬಂದೂಕುಗಳ ಆವಿಷ್ಕಾರದ ನಂತರ ಬುಲೆಟ್ ಬ್ರೂಫ್ ಜಾಕೆಟ್‌ಗಳು ಅವಶ್ಯಕವಾದವು. ಹೀಗೆ ಯುದ್ಧದಲ್ಲಿ ದಾಳಿ, ಪ್ರತಿದಾಳಿಗೆ ವ್ಯತಿರಿಕ್ತ ತಂತ್ರಜ್ಞಾನ ಅಭಿವೃದ್ಧಿ ಯಾಗುವುದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದು. ಇದು ಪೈಪೋಟಿ. ಆವಿಷ್ಕಾರ, ಬಳಕೆ ಮೊದಲು ಮಾಡಿದವರಿಗೆ ವರವೆಂದೇ ಅನ್ನಿಸಿದರೂ ಕ್ರಮೇಣ ಅದೇ ತಂತ್ರಜ್ಞಾನ ಶೀಘ್ರದಲ್ಲಿ ಘಾತುಕ ಕೆಲಸಕ್ಕೆ ಬಳಕೆಯಾಗುವುದು ಮತ್ತು ಸಮಾಜ, ದೇಶ, ವ್ಯವಸ್ಥೆ ಅದಕ್ಕೆ ಪ್ರತಿಯಾಗಿ ರಕ್ಷಣೆಯ ಹೆಸರಿನಲ್ಲಿ ಇನ್ನೊಂದಿಷ್ಟು ಆವಿಷ್ಕಾರ, ಖರ್ಚು ಇತ್ಯಾದಿಯನ್ನು ಮಾಡುವುದು.

ದಿನಗಳೆದಂತೆ ನಾವು ಮಾಡುವ ಯುದ್ಧವೂ ನಮ್ಮೊಡನೆ ಅಭಿವೃದ್ಧಿಯಾಗುತ್ತಿದೆ. ಅತ್ತ ಅಮೆರಿಕ ಯುಕ್ರೇನಿಗೆ, ಇತ್ತ ಚೀನಾ ರಷ್ಯಾಕ್ಕೆ ಡ್ರೋನ್
ಸರಬರಾಜು ಮಾಡುತ್ತಿದೆ. ಇನ್ನು ಕೋವಿಡ್ ನಂತರ ಜಾಗತಿಕ ಸಂಬಂಧಗಳಲ್ಲಿ ಹಿಂದಿಲ್ಲದಷ್ಟು ಒಡಕಿದೆ. ಸೈಕೋ, ಜನರ ಜೀವಕ್ಕೆ ಬೆಲೆಯೇ ಕೊಡದ ದೇಶದ ನಾಯಕರಿದ್ದಾರೆ. ಇದೆಲ್ಲ ತಿಳಿದು ಭಾರತದಲ್ಲಿ, ಅಥವಾ ಅಮೆರಿಕದ ಸುರಕ್ಷಿತ ನೆಲದಲ್ಲಿ ಕೂತು ಸುಮ್ಮನೆ ನಮಗೇನಾಗಲಿಕ್ಕಿಲ್ಲ, ನಾವು ಸುರಕ್ಷಿತ ಎಂದು ನಿರ್ಲಕ್ಷ್ಯದಿಂದಿರಬೇಕೊ ಅಥವಾ ಈ ಎಲ್ಲ ಬೆಳವಣಿಗೆಯಿಂದ ಆತಂಕ ಪಡಬೇಕೋ? ಒಟ್ಟಾರೆ ಅಭಿವೃದ್ಧಿ ಹೊಂದುತ್ತ
ಇನ್ನಷ್ಟು ಸಾಧ್ಯತೆಗಳನ್ನು ನಾವೇ ಮಾಡಿಕೊಳ್ಳುವುದು, ನಂತರದಲ್ಲಿ ಅದೇ ತಂತ್ರeನದಿಂದ ಆಗುವ ಅಪಾಯದಿಂದ ಪರದಾಡುವುದು. ಇದು ನಾವು, ಮನುಷ್ಯರು.

error: Content is protected !!