Saturday, 14th December 2024

ಯುದ್ಧವೆಂದರೆ ಹಲವು ಆಯಾಮಗಳು

ಶಿಶಿರ ಕಾಲ

ಶಿಶಿರ್‌ ಹೆಗಡೆ

shishirh@gmail.com

ಯುದ್ಧ ವಿಕೃತ ಭೀಕರವಾದರೂ ಜೀವ ಜಗತ್ತಿನ ಮಸೂರದಲ್ಲಿ ನೋಡಿದರೆ ಒಮ್ಮೆ ಇದೆಲ್ಲ ತೀರಾ ಸಹಜವಾದದ್ದೆನ್ನಿಸಿಬಿಡುತ್ತದೆ. ಪ್ರತಿಯೊಂದು ಜೀವಿಯ ಜೀವನವೂ ಇನ್ನೊಂದು ಜೀವಿಯ ವಿರುದ್ಧದ ಹೋರಾಟದ ನಿರಂತರ ಯುದ್ಧವೇ.

ನ್ಯಾಷನಲ್ ಜಿಯಾಗ್ರಫಿ, ಡಿಸ್ಕವರಿಯಂತಹ ಚಾನೆಲ್ ಅನ್ನು ನೋಡುವಾಗ ರಾಜಕೀಯ, ಮೇಲಾಟ, ಸ್ಥಾನ, ಹೆಣ್ಣು, ಸ್ಥಳಕ್ಕಾಗಿ ಹೊಡೆ ದಾಡುವುದು ಪ್ರಕೃತಿಯಲ್ಲಿ ಸಹಜ ಎಂದೆನಿಸಿಬಿಡುತ್ತದೆ. ಆಹಾರಕ್ಕಾಗಿ ಒಂದು ಜೀವಿಮ ಇನ್ನೊಂದರ ಮೇಲೆ ಎಗರುವುದು, ಕೊಲ್ಲುವುದು – ಬೇಟೆಯಾಯಿತು. ಪ್ರಾಣಿ ವರ್ಗದಲ್ಲಿ ಇನ್ನುಳಿದ ಎಲ್ಲ ಹೊಡೆದಾಟಗಳೂ ಹಕ್ಕು ಮತ್ತು ಪ್ರಾಂತ್ಯಕ್ಕಾಗಿ.

ಮೊದಲನೆಯದು ‘ಎಲ್ಲ ಉದ್ದೇಶದ ಪ್ರಾಂತ್ಯ’ – ಪ್ರಾಣಿಯ ಗುಂಪೊಂದು ತನ್ನೆಲ್ಲ ಕ್ರಿಯೆಗಳಿಗೆ, ಆಹಾರಕ್ಕೆ, ಉಳಿದುಕೊಳ್ಳಲು, ಕೂಡಲು, ಸಂತನೋತ್ಪತ್ತಿಗೆ ಹೀಗೆ ಎಲ್ಲ ಕಾರಣಗಳಿಗೆ ಒಂದು ಜಾಗವನ್ನು ಆಕ್ರಮಿಸಿ ಅದನ್ನು ಜೀವಮಾನದುದ್ದಕ್ಕೂ ಕಾಪಾಡಿ ಕೊಳ್ಳುವುದು. ಅದನ್ನು ಕಸಿಯಲು ಬಂದ ಇನ್ನೊಂದು ವರ್ಗ ಅಥವಾ ಗುಂಪನ್ನು ಹೊಡೆದಾಡಿ ಓಡಿಸುವುದು ಅಥವಾ ಸೋತು ಶರಣಾಗಿ ಬಿಟ್ಟು ಕೊಡುವುದು, ಸಾಯು ವುದು. ಎರಡನೆಯದು ವಾಸಕ್ಕೆ ಮಾಡಿಕೊಳ್ಳುವ ಉಪ ಪ್ರಾಂತ್ಯ. ಕೆಲವು ಕಲೊನಿಯಲ್ ಹಕ್ಕಿಗಳನ್ನು ನೋಡಿದರೆ ಅವು ಗೂಡು ಕಟ್ಟಿಕೊಳ್ಳಲು ಮತ್ತು ಸಂತಾನೋತ್ಪತ್ತಿಗೆ ಮಾತ್ರ ಒಂದಿಷ್ಟು ಜಾಗವನ್ನು ಆವರಿಸಿರುತ್ತವೆ.

ಇನ್ನು ಕೆಲ ಹಕ್ಕಿಗಳು ಇಡೀ ಮರವನ್ನೇ ಆವರಿಸಿಕೊಳ್ಳುತ್ತವೆ. ಆ ಮರದಲ್ಲಿ ಇನ್ನೊಂದು ಹಕ್ಕಿಗೆ ವಾಸಕ್ಕೆ ಅವಕಾಶವಿಲ್ಲ. ಇನ್ನು ಕೆಲವು ಮರದ ಒಂದು ಕೊಂಬೆಗೆ. ಜೀವಿಗಳಲ್ಲ ಇದು ಸಾಮಾನ್ಯ. ಬ್ಯಾಕ್ಟೀರಿಯಾ ಕಾಲೊನಿಯಿಂದ ಹಿಡಿದು ಹುಲಿಗಳವರೆಗೆ. ಹುಲಿಗಳು ಒಂದಿಷ್ಟು ವಿಸ್ತೀರ್ಣದ ಕಾಡಿನ ಜಾಗ ಆವರಿ ಸುತ್ತವೆ. ಆ ಜಾಗದೊಳಕ್ಕೆ ಅದರ ಕುಟುಂಬ ಬಿಟ್ಟು ಬೇರೆ ಹುಲಿ ಬರುವಂತಿಲ್ಲ. ಇನ್ನು ಸಿಂಹಗಳು – ತಮ್ಮ ಕಾಡಿನ ಪ್ರಾಂತ್ಯದ ಸಿಂಹ ಕುಟುಂಬಗಳು ಉಪ ಪ್ರಾಂತ್ಯ ಮಾಡಿಕೊಳ್ಳುತ್ತವೆ. ಈ ಉಪ ಪ್ರಾಂತ್ಯದಲ್ಲಿ ಬೇರೆ ತನ್ನದೇ ಗುಂಪಿನ ಸಿಂಹಕ್ಕೆ ಜಾಗವಿಲ್ಲ. ಇನ್ನು ಪೆಂಗ್ವಿನ್ ಒಂದಿಡೀ ದ್ವೀಪವನ್ನೇ ಆವರಿಸುತ್ತವೆ.

ಇಲ್ಲ ಜೀವಿಗಳ ನಡುವೆ ನಡೆಯುವ ಹೊಡೆದಾಟಗಳಿಗೆ ಈ ಪ್ರಾಂತ್ಯ, ಅದು ತನ್ನದು ಎನ್ನುವ ಯಜಮಾನಿಕೆ ಕಾರಣ. ಮನುಷ್ಯನೆಂಬ ಪ್ರಾಣಿಗೆ ದೇಶ, ರಾಜ್ಯ, ತಾಲೂಕು, ಊರು, ಕೇರಿ, ಮನೆ, ರೂಮು. ಎಲ್ಲ ಜೀವಿಗೂ ಅದರದೇ ಆದ ಪ್ರಾಂತ್ಯ ಬೇಕು. ಅದನ್ನು ಒತ್ತು ವರಿಯಲು ಪ್ರಯತ್ನಿಸಿದಾಗಲೆಲ್ಲ ಮುನಿಸಿನಿಂದ ಯುದ್ಧದ ವರೆಗೆ. ಪರ ದೇಶದವರು ಒಳಕ್ಕೆ ಬಂದರೆ ದೇಶವೇ ಒಂದುಗೂಡಿ
ಹೋರಾಟ ಮಾಡುತ್ತದೆ. ಅಣ್ಣನ ರೂಮಿಗೆ ತಂಗಿ ಬಂದರೆ ಅಣ್ಣನದು ಮುನಿಸು. ಅದೇ ಮನೆಗೆ ಕಳ್ಳ ಬಂದರೆ ಮನೆಯವರೆಲ್ಲ ಒಂದಾ ಗುತ್ತಾರೆ. ಈ ಸಾಮ್ಯದ ಅಂದಾಜು ನಿಮಗೀಗ ಸಿಕ್ಕಿರಬಹುದು. ಹೀಗೆಲ್ಲ ಗ್ರಹಿಸಿದಾಗ ಯುದ್ಧ ವೆನ್ನುವ ವಿಕೃತಿಯೂ ನಮ್ಮೆಲ್ಲರ ಜೀವನದ ಭಾಗವಾಗಿಯೇ ಗೋಚರಿಸುತ್ತದೆ. ಹಾಗಂತ ಇದೆಲ್ಲ ವಿಚಾರಗಳು ಯುದ್ಧಕ್ಕೆ ಸಮರ್ಥನೆಯಲ್ಲ.

ಈಗ ಬದುಕಿರುವ ನಮ್ಮೆಲ್ಲರ ಜೀವನದ ಉದ್ದಕ್ಕೂ ಯುದ್ಧವೆನ್ನುವುದನ್ನು ನೋಡಿಕೊಂಡು, ಕೇಳಿಕೊಂಡೇ ಬಂದಿದ್ದೇವೆ. ನನ್ನಂಥ ಮಿಲೇನಿಯಲ್‌ಗಳಂತೂ ಜಾಗತಿಕ ಬೆಳವಣಿಗೆಗಳನ್ನು ತಿಳಿಯಲು, ಗ್ರಹಿಸಲು ಶುರುಮಾಡಿದಾಗಿನಿಂದ ಒಂದಿಂದು ಯುದ್ಧದ ಸುದ್ದಿ
ನಿರಂತರವಾಗಿ ಅವಗಾಹನೆಯಲ್ಲಿ ಇರುವಂಥದ್ದೇ. ಅಂತೆಯೇ ಪ್ರಾಂತೀಯ ಗಲಾಟೆಗಳು, ರಾಜ್ಯದ ನಡುವಿನ ಮುನಿಸಿನಿಂದ ಹಿಡಿದು ಅಕ್ಕ ಪಕ್ಕದ ಮನೆಯವರ ಬೇಲಿ ಜಗಳದವರೆಗೆ. ಅಲ್ಲಿಂದ ಒಂದು ಹಂತ ಕೆಳಕ್ಕೆ ಹೋದರೆ ಕೋವಿಡ್, ಏಐ, ನೆಗಡಿ ಇವೆಲ್ಲ ದೇಹವೆನ್ನುವ ಒಂದು ಸಂಕೀರ್ಣ ವ್ಯವಸ್ಥೆಗೆ ಪರಕೀಯ, ನಮಗಾಗದ ಸೂಕ್ಷ್ಮಾಣುಗಳ ವಿರುದ್ಧದ ಹೋರಾಡುವ ಯುದ್ಧವೇ. ಈ ಯುದ್ಧದಲ್ಲಿ ದೇಹ ಗೆದ್ದರೆ ಜೀವ ಬಚಾವು.

ಮನುಷ್ಯನ ಉಗಮ ಆಫ್ರಿಕಾವೆನ್ನುವ ವಾದವನ್ನೇ ಒಪ್ಪುವುದಾದರೆ ಅಲ್ಲಿ ದಾಖಲೆಗೆ ಸಿಕ್ಕ ಮೊದಲ ಯುದ್ಧ ಹತ್ತು ಸಾವಿರ ವರ್ಷ ಹಿಂದಿನದು. ಆ ನರಮೇಧದ ಹೆಸರು ನಾಟುರಾಕ. ಇದನ್ನು ಹತ್ಯಾಕಾಂಡ ಎಂದರೂ ಅಂದು ಅಲ್ಲಿ ಸತ್ತದ್ದು ಒಂದೆರಡು ಡಜನ್ ಜನರು ಮಾತ್ರ. ಪಳೆಯುಳಿಕೆ ತಜ್ಞರ ಪ್ರಕಾರ ಆ ಯುದ್ಧ ನಡೆದದ್ದು ಕೂಡ ಹೆಣ್ಣು, ಹೊನ್ನು ಮತ್ತು ಮಣ್ಣಿಗೋಸ್ಕರ. ಅದಕ್ಕಿಂತ ಮೊದಲು ಕೂಡ ಯುದ್ಧ ನಡೆದೇ ಇರುತ್ತದೆ. ಅದರ ನಂತರ ಕೂಡ ಅದೆಷ್ಟೋ ಸಾವಿರ, ಲಕ್ಷದ ಲೆಕ್ಕದಲ್ಲಿ ಯುದ್ಧಗಳು ನಿರಂತರವಾಗಿ ನಡೆದುಕೊಂಡೇ ಬಂದಿವೆ.

ಈಗ ಕೆಲವು ಸಾವಿರ ವರ್ಷದಿಂದೀಚೆ ಮನುಷ್ಯ ವಿಚಾರ ಮಾಡಲು ಶುರುಮಾಡಿದಾಗಿನಿಂದ ವೈಚಾರಿಕ ಅರ್ಥಾತ್ ಧಾರ್ಮಿಕ ಹಿನ್ನೆಲೆ ಯಲ್ಲಿ ನಡೆದ, ನಡೆಯುತ್ತಿರುವ ನರಮೇಧಗಳು, ಹಿಂಸಾಚಾರ, ಯುದ್ಧಗಳು. ಕಳೆದ ಇಪ್ಪತ್ತೇ ವರ್ಷದ ಇತಿಹಾಸವನ್ನು ಪ್ರಾಸಂಗಿಕವಾಗಿ ತೆಗೆದುಕೊಳ್ಳೋಣ. ಕಾಂಗೊ 1998ರಿಂದ ಐದು ವರ್ಷ ನಡೆದ ಯುದ್ಧದಲ್ಲಿ, ಅದರಿಂದಾಗಿ ಸುಮಾರು ೫೫ ಲಕ್ಷ ಮಂದಿ ಸತ್ತರು. ಸಿರಿಯಾ ಯುದ್ಧದಲ್ಲಿ 3.5 ಲಕ್ಷ, ಸುಡಾನ್ ಯುದ್ಧ – ನಂತರದ ಸ್ಥಿತಿಗೆ ೨೫ ಲಕ್ಷ, ಇರಾಕ್ ಯುದ್ಧದಲ್ಲಿ ೫ ಲಕ್ಷ , ೨೦ ವರ್ಷ ನಡೆದ ಅ-ನ್ ಯುದ್ಧದಲ್ಲಿ ಲೆಕ್ಕಕ್ಕೆ ಸಿಕ್ಕವರು ೨ ಲಕ್ಷ , ಇಸ್ಲಾಮಿಸ್ಟ್ ಬೋಕೋ ಹರಾಮ್ ನಿಂದಾಗಿ ೩.೫ ಲಕ್ಷ, ಯೆಮನ್ ಯುದ್ಧದಲ್ಲಿ (ಇಂದಿಗೂ ನಡೆಯುತ್ತಲೇ ಇದೆ) ೩.೭ ಲಕ್ಷ, ಮತ್ತು ಈಗ ದಶಕದ ಹಿಂದಿನ ರಷ್ಯಾ – ಉಕ್ರೇನ್ ಯುದ್ಧ. ಲಕ್ಷ ಲಕ್ಷ ಸಾವುಗಳು. ಮನೆ, ಮಠ, ಊರು, ದೇಶ ಬಿಟ್ಟವರು ಕೋಟಿಗಳ ಲೆಕ್ಕದಲ್ಲಿ.

ಹೀಗೆ ಎಲ್ಲವೂ ಸಾಲು ಸಾಲು. ಬಹುಶಃ ಕರ್ನಾಟಕದ, ಭಾರತದ ಇನ್ಯಾವುದೋ ಸುಭಧ್ರ ರಾಜ್ಯದಲ್ಲಿದ್ದವರಿಗೆ ಯುದ್ಧ ಕೇವಲ ಸುದ್ದಿ, ವಿಡಿಯೋ ಮಾತ್ರ . ಯುದ್ಧದ ಭೀಕರತೆ ನಮಗೆಲ್ಲ ಅಂದಾಜಿಗೆ ಹತ್ತುವುದಿಲ್ಲ. ಆ ಕಾರಣಕ್ಕೇ ಅದ್ಯಾವುದೋ ಯಡವಟ್ಟೊಬ್ಬ ವಾಪಸ್ ಬಂದು ದೇಶಕ್ಕೆ ಗಟ್ಸ ಇಲ್ಲ ಎನ್ನುವ ಮಾತು ನಮ್ಮನ್ನು ಅಷ್ಟೆಲ್ಲ ಕೆರಳಿಸುತ್ತದೆ. ಅಸಲಿಗೆ ಯುದ್ಧವೆಂದರೆ ಏನು ಎನ್ನುವ ನೈಜ ಚಿತ್ರಣದ ಅರಿವು ನಮಗಿದ್ದಿದ್ದರೆ ಇಂಥದ್ದೊಂದು ಮಾತು ಸುದ್ದಿಯೇ ಆಗುತ್ತಿರಲಿಲ್ಲ.

ಇರಲಿ. ಯಾವುದೇ ಯುದ್ಧವಿರಲಿ ಅಲ್ಲಿ ಎರಡು ನೆರೇಷನ್‌ಗಳು ಸಾಮಾನ್ಯ. ಮೇಲೆ ಹೇಳಿದ ಎಲ್ಲ ಯುದ್ಧಗಳಲ್ಲೂ ಒಂದೊಂದು ಕಡೆಯದು ಒಂದೊಂದು ಆಯಾಮ. ಯುದ್ಧವೆಂದಾಗ ಎರಡು ಗುಂಪುಗಳು ಸಂಪೂರ್ಣ, ತನ್ನದೇ ಆಯಾಮವನ್ನು ಹೊಂದುವುದು ಸಮಾನ್ಯ.
ಈಗ ನಡೆಯುತ್ತಿರುವ ಯುದ್ಧವನ್ನೇ ತೆಗೆದುಕೊಳ್ಳಿ – ರಷ್ಯಾದ್ದು ಒಂದು ನೆರೇಷನ್, ಉಕ್ರೇನ್, ಅಮೆರಿಕ ಮತ್ತು ಯುರೋಪಿಯನ್ ದೇಶಗಳದ್ದು ಇನ್ನೊಂದು. ಆದರೆ ಕೆಲ ಯುದ್ಧಗಳಲ್ಲಿ ಮೂರನೆಯ ಆಯಾಮವಿರುತ್ತದೆ. ಅದು ಡಿಕ್ಟೇಟರ್‌ಶಿಪ್ ಇರುವಲ್ಲಿನ ಸಾಮನ್ಯರ ಆಯಾಮ.

ಹೌದು – ರಷ್ಯಾದ ಮೊಸ್ಕೋದಲ್ಲಿ ಜನರು ದಂಗೆಯೇಳುತ್ತಿದ್ದಾರೆ, ಈಗಾಗಲೇ ಸಾವಿರದ ಲೆಕ್ಕದಲ್ಲಿ ಈ ರೀತಿ ಯುದ್ಧ ಬೇಡ ಎನ್ನುವವ ರನ್ನು ಅಲ್ಲಿ ಬಂಧಿಸಲಾಗುತ್ತಿದೆ ಮತ್ತು ಥಳಿಸಲಾಗುತ್ತಿದೆ. ಟೆಲಿಗ್ರಾಮ(ಚಾಟ್ ಅಪ್ಲಿಕೇಶನ್)ನ ರಷ್ಯಾದ ಕೆಲವು ಗ್ರೂಪ್‌ಗಳಲ್ಲಿ ಎನ್‌ಕ್ರಿಪ್ಟ್ ಆಗಿ ಕಲಿನಿಗ್ರಾಡ್, ಮಾಸ್ಕೋ, ಸೈನ್ಟ್, ಪೀಟರ್ಸ್ ಬರ್ಗ್… ಹೀಗೆ ರಷ್ಯಾದ ಹಲವು ಊರಿಗಳಿಂದ ಈ ರೀತಿಯ ಪ್ರತಿಭಟನೆಯ, ಹಿಂಸೆಯ ವಿಡಿಯೋಗಳು ಟೈಮ್‌ಸ್ಟ್ಯಾಂಪ್‌ನ ಜೊತೆ ಪ್ರತೀ ದಿನ ಹೊರಬರುತ್ತಿವೆ.

ರಷ್ಯನ್ ಸಾಮಾನ್ಯ ಜನರಿಗೆ ಯುಕ್ರೇನಿನ ಮೇಲಿನ ಯುದ್ಧಕ್ಕೆ ಮನಸ್ಸೇ ಇಲ್ಲ ಎನ್ನುವುದು ಈಗ ಜಗಜ್ಜಾಹೀರ. ಅದಕ್ಕೆ ಮೊದಲ ಕಾರಣ ಅಲ್ಲಿನವರು ಯುಕ್ರೇನ್ ಅನ್ನು ಶತ್ರುವಾಗಿ ಕಾಣದಿರುವುದು. ಎರಡನೆಯದು ಒಂದೇ ಸಂಸ್ಕೃತಿ, ಭಾಷೆ ಮತ್ತು ಸಂಬಂಧಿಕರು ಆಚೀಚೆ
ಇರುವುದು. ಸರ್ವಾಧಿಕಾರಿ ನಡೆಸುವ ಯುದ್ಧದಲ್ಲಿ ಜನರ ಯೋಚನಾ ಆಯಾಮವೇ ಮೂರನೆಯದು. ಈ ಮೂರನೆಯ ಆಯಾಮವನ್ನು ತಡೆಯಲು ಈಗ ಎಲ್ಲಿಲ್ಲದ ಪ್ರಯತ್ನ ನಡೆಯುತ್ತಿದೆ. ರಷ್ಯಾದಲ್ಲಿ ಸರಕಾರೀ ಚಾನೆಲ್‌ಗಳನ್ನೊಂದು ಬಿಟ್ಟು ಬಹುತೇಕ ಖಾಸಗೀ ಚಾನೆಲ್
ಗಳು ಬಾಗಿಲು ಮುಚ್ಚಿವೆ. ಟಿವಿ ರೈನ್ ತನ್ನ ಕೆಲಸದವರು ಮತ್ತು ಆಂಕರ್‌ಗಳು ಕಚೇರಿ ಮುಚ್ಚಿ ಹೊರನಡೆಯುತ್ತಿರುವುದನ್ನು ಕೊನೆಯ ಬಾರಿ ಲೈವ್ ಬಿತ್ತರಿಸಿದೆ. ಸೋಷಿಯಲ್ ಮೀಡಿಯಾ, ಜಾಗತಿಕ ಮೀಡಿಯಾ ವೆಬ್‌ಸೈಟ್ ಗಳೂ ಅಲ್ಲಿ ಬ್ಲಾಕ್ ಆಗಿವೆ. ಹೀಗಿರುವಾಗ ಅಲ್ಲಿನ ಸರಕಾರೀ ಚಾನೆಲ್ ಹೇಳಿದ್ದೊಂದನ್ನು ಬಿಟ್ಟು ಉಳಿದದ್ದೇನೂ ಅಲ್ಲಿನ ಒಂದು ವರ್ಗಕ್ಕೆ ತಿಳಿಯುತ್ತಿಲ್ಲ.

ಆದರೆ ೨೦-೪೫ ವರ್ಷದ ಯುವಕ ಯುವತಿಯರಿಗೆ ಇಂಟರ್‌ನೆಟ್‌ನಲ್ಲಿ ಬ್ಲಾಕ್ ಮಾಡಿದಾಗಲೂ ವಿಪಿಎನ್ ಮೊದಲಾದವನ್ನು ಬಳಸಿ
ಹೊರ ಜಗತ್ತಿನ ಸುದ್ದಿ ಪಡೆಯಲು ಗೊತ್ತು. ಅತ್ತ 45 ವರ್ಷ ದಾಟಿದವರೆಲ್ಲ ಪುಟಿನ್ ಹೇಳಿದ್ದೇ ಸರಿ ಎಂದು ನಂಬುತ್ತಿದ್ದಾರೆ. ಅವರಿಗೆಲ್ಲ ರಷ್ಯಕ್ಕಿಂತ ಅಮೆರಿಕ, ಯುರೋಪ್ ಮತ್ತು ಉಕ್ರೇನ್ ವಿಲನ್. ಹೀಗಾಗಿ ಅಲ್ಲಿನ ಜನಸಾಮಾ ನ್ಯರಲ್ಲಿ ಯುದ್ಧವನ್ನು ಒಪ್ಪುವ ಮತ್ತು ಒಪ್ಪದ ಎರಡು ಗುಂಪಾಗಿದೆ.

ಪುಟಿನ್ ಈಗ ನಿರಂಕುಶಾಧಿಕಾರಿಯಾಗಿ ಉಳಿದಿಲ್ಲ – ಈಗ ಆತ ಸರ್ವಾಽಕಾರಿ. ಸರ್ವಾಧಿಕಾರದಲ್ಲಿ ಅನುಮಾನ ಬಂದರೆ ಪ್ರತಿಭಟನೆ ಮಾಡುವಂತೆ ಕೂಡ ಇಲ್ಲ. ಇದು ಮಧ್ಯಮವರ್ಗದವರ ಕಥೆಯಾದರೆ ಇನ್ನು ಶ್ರೀಮಂತರದ್ದು, ಕಂಪನಿ ನಡೆಸುವವರದ್ದು ಹೇಳತೀರದ ಗೋಳು. ಬಹುತೇಕ ರಷ್ಯನ್ ಕಂಪನಿಗಳು ಅಲ್ಲಿನ ರುಬೆಲ್ ನೆಲಕಚ್ಚಿರುವುದರಿಂದ ಇವೂ ಪಾತಾಳ ಸೇರಿವೆ. ರಷ್ಯಾದ ಅತ್ಯಂತ
ದೊಡ್ಡ ಇಂಡಸ್ಟ್ರಿ ಪೆಟ್ರೋಲಿಯಂ. ಅಮೆರಿಕ ಪೆಟ್ರೋಲ್ ಆಮದು ನಿಲ್ಲಿಸಿರುವುದರಿಂದ ಅಗ್ಗದ ಬೆಲೆಗೆ ಭಾರತ ಮತ್ತು ಚೀನಾಕ್ಕೆ ಪೆಟ್ರೋಲ್ ಮಾರುವ ಸ್ಥಿತಿ. ಹಾಗಾಗಿ ಅವರೆಲ್ಲರಿಗೂ ಇದೆಲ್ಲ ಸಾಕಾಗಿದೆ. ಅಂತಾರಾಷ್ಟ್ರೀಯ ಬ್ರಾಂಡ್‌ಗಳಾದ ಐಕಿಯಾ, ಆಪಲ, ಮೈಕ್ರೋಸಾಫ್ಟ್, ನೆಟ್‌ಫ್ಲಿಕ್ಸ್, ಫೆಸ್ಬುಕ್, ಟ್ವಿಟ್ಟರ್‌ಗಳು ಜಾಗ ಕಾಲಿ ಮಾಡಿವೆ.

ಅಲ್ಲದೇ ವೀಸಾ ಮತ್ತು ಮಾಸ್ಟರ್ ಕಾರ್ಡ್ ಕೂಡ ರಷ್ಯಾದಲ್ಲಿ ವ್ಯವಹಾರ ನಿಲ್ಲಿಸಿವೆ. ಇದೆಲ್ಲದರ ಪರಿಣಾಮ ಕೆಳ, ಮಧ್ಯಮ ವರ್ಗದ ಜತೆಗೆ ಮೇಲ್ವರ್ಗದವರಿಗೆಲ್ಲ ನಾನಾ ರೀತಿಯಾಗಿ ತಟ್ಟಿದೆ. ರಷ್ಯಾದ ಹಣದ ಬೆಲೆ ಬೀಳುತ್ತಿದ್ದಂತೆ ಜನರೆ ಅಮೆರಿಕಾ ಡಾರ್ಲ ನಲ್ಲಿ ಹಣವನ್ನು
ಬ್ಲಾಕ್ ನಲ್ಲಿ ಖರೀದಿಸಿ ಶೇಖರಿಸಿಡಲು ಶುರುಮಾಡಿದ್ದಾರೆ.

ಇನ್ನು ಕೆಲವರಂತೂ ಹಣದ ಬೆಲೆ ಕೆಳಕ್ಕೆ ಬೀಳುವ ಮುನ್ಸೂಚನೆಯಿಂದಾಗಿ ಟಿವಿ, ಫ್ರಿಜ್ ಮೊದಲಾದ ವಸ್ತುಗಳನ್ನು ಖರೀದಿಸಿ ಆ ಮೂಲಕ ತಮ್ಮ ಹಣದ ಮೌಲ್ಯವನ್ನು ಕಾಪಾಡಿಕೊಳ್ಳುವ ಕಸರತ್ತು ನಡೆಸಿದ್ದಾರೆ. ಒಟ್ಟಾರೆ ಅಲ್ಲಿನ ಜನರಿಗೆ ಆರ್ಥಿಕ ಪರಿಸ್ಥಿತಿ ಯಿಂದಾಗಿ ಸಾಕೋ ಸಾಕಾಗಿದೆ. ಹೀಗೆ ಯುದ್ಧವೆಂದರೆ ಹಲವು ಆಯಾಮಗಳು. ಪುಟಿನ್‌ನ ಆಯಾಮವೊಂದನ್ನು ಬಿಟ್ಟು ಇನ್ಯಾವ ಆಯಾಮವೂ ಈ ಯುದ್ಧವ ನ್ನು ಒಪ್ಪುತ್ತಿಲ್ಲ.