ಶ್ರೀವತ್ಸ ಜೋಶಿ
srivathsajoshi@yahoo.com
ಅಲ್ಲಿಗೆ ಹೇಗೆ ಹೋಗುವುದು? – ಅಪರಿಚಿತ ಸ್ಥಳಕ್ಕೆ ನಾವೇ ಡ್ರೈವ್ ಮಾಡಿಕೊಂಡು ಹೋಗುವಾಗಲೋ, ಅಥವಾ ಬೇರೆಯವರ ವಾಹನ ಸೇವೆ ಬಳಸಿಕೊಂಡು
ಹೋಗುವುದಿದ್ದರೂ- ಈ ಪ್ರಶ್ನೆ ಬಂದೇಬರುತ್ತದೆ. ಈಗಿನ ಆಧುನಿಕ ಯುಗದಲ್ಲಿ ತಂತ್ರeನದ ದಾಪುಗಾಲಿನಿಂದ, ಸ್ಮಾರ್ಟ್ ಫೋನ್ನ ದೆಸೆಯಿಂದ, ಬೆರಳ ತುದಿಯಲ್ಲೇ ಪ್ರಪಂಚ ಎಂದಾಗಿರುವಾಗ ಇದು ಅಷ್ಟೇನೂ ಸೀರಿಯಸ್ ಅನಿಸದು.
‘ಲೊಕೇಷನ್ ಕಳಿಸಿ. ಗೂಗಲ್ ಮಾಪ್ಸ್ ಯೂಸ್ ಮಾಡ್ಕೊಂಡು ನಾವೇ ಬರ್ತೇವೆ…’ ಎನ್ನುವ ಧೈರ್ಯ ಬಂದಿದೆ ಎಲ್ಲರಲ್ಲೂ. ಸ್ವಂತ ವಾಹನ ಹೊಂದಿರುವವರ ಸಂಖ್ಯೆ ಬೇರೆ ಹೆಚ್ಚಿದೆ. ಮೊನ್ನೆ ಒಂದು ಮದುವೆ ಕರೆಯೋಲೆ ನೋಡಿದೆ. ಯಕ್ಷಗಾನ ಕಲಾವಿದ, ಸನ್ಮಿತ್ರ ಕೆರೆಮನೆ ಶಿವಾನಂದ ಹೆಗಡೆಯವರು ನನಗೆ ವಾಟ್ಸ್ಯಾಪ್
ನಲ್ಲಿ ಕಳುಹಿಸಿದ್ದು. ಅವರ ಮಗನ ಮದುವೆ ಇನ್ವಿಟೇಷನ್.
ಮುಖಪುಟದಲ್ಲಿ ಮಾಮೂಲಿನಂತೆ ಗಣಪತಿ ಚಿತ್ರ, ವಧೂ-ವರರ ಹೆಸರು, ಸಮಾರಂಭದ ದಿನಾಂಕ, ಆದರದ ಆಮಂತ್ರಣ ಎಂಬ ವಾಕ್ಯ; ಒಳಗಿನ ಎರಡು ಪುಟಗಳಲ್ಲಿ ಟಿಪಿಕಲ್ ಮದುವೆ ಕಾಗದದ ಒಕ್ಕಣೆ, ಸುಖಾಗಮನ ಬಯಸುವವರ ಪಟ್ಟಿ ಇತ್ಯಾದಿ. ನನ್ನ ಗಮನವನ್ನು ವಿಶೇಷವಾಗಿ ಸೆಳೆದದ್ದು ಕೊನೆಯ
ಪುಟದಲ್ಲಿದ್ದ ಎರಡು ಕ್ಯೂಆರ್ ಕೋಡ್ಗಳ ಚೌಕಗಳು. ಅವುಗಳಿಗೆ ಅನುಕ್ರಮವಾಗಿ ವಿವಾಹ ಸ್ಥಳ ಮತ್ತು ಮಿತ್ರಭೋಜನ ಸ್ಥಳ ಎಂಬ ಲೇಬಲ್. ಕುತೂಹಲವಾಗಿ ನನ್ನದೇ ಐಫೋನ್ನಿಂದ ಸ್ಕ್ಯಾನ್ ಮಾಡಿ ನೋಡಿದೆ. ಗೂಗಲ್ ಮ್ಯಾಪ್ ತೆರೆದುಕೊಂಡಿತು.
ವಿವಾಹ ಸ್ಥಳವು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ- ಅಂಕೋಲಾ-ಶಿರಸಿ ಪಟ್ಟಣಗಳಿಂದಾಗುವ ತ್ರಿಭುಜದ ಮಧ್ಯ ಬಿಂದುವಿನಲ್ಲಿ ಚಿಕ್ಕ ಊರು. ವಧುವಿನ ತವರೂರಿರಬಹುದು. ಮಿತ್ರಭೋಜನ ಸ್ಥಳವು ಹೊನ್ನಾವರ ಸಮೀಪ ಕೆರೆಮನೆಯವರ ಯಕ್ಷಗಾನ ರಂಗಶಿಕ್ಷಣ ಕೇಂದ್ರದ ಆವರಣ. ದೂರದ ಊರುಗಳಿಂದ ಬರುವ ಅತಿಥಿಗಳಿಗೆ ಎರಡೂ ಸಮಾರಂಭಗಳ ಸ್ಥಳಗಳ ದಾರಿಯನ್ನು ಕರಾರುವಾಕ್ಕಾಗಿ ತಿಳಿಸಲು ಎಂಥ ಸ್ಮಾರ್ಟ್ ವಿಧಾನ!
ಆಹ್ವಾನಕ್ಕಾಗಿ ಧನ್ಯವಾದ ತಿಳಿಸುತ್ತ ಶಿವಾನಂದ ಹೆಗಡೆಯವರಿಗೆ ಬರೆದೆ. ಕ್ಯೂಆರ್ ಕೋಡ್ಗಳ ಬಗ್ಗೆ ಮೆಚ್ಚುಗೆ ಸೂಚಿಸಿದೆ. ‘ಛತ್ರದಲ್ಲಿ ಕೈ ತೊಳೆಯುವ ಸ್ಥಳ, ಹೆಂಗಸರ/ಗಂಡಸರ ಶೌಚಾಲಯಕ್ಕೆ ದಾರಿಗಳನ್ನು ಕ್ಯೂಆರ್ ಕೋಡ್ ಮೂಲಕ ತಿಳಿಸುವ ದಿನವೂ ಮುಂದೊಮ್ಮೆ ಬಂದೀತು!’ ಎಂದು ಸ್ಮೈಲಿ ಸಹಿತ ಸೇರಿಸಿದೆ.
ಅವರೂ ಸ್ಮೈಲಿ ಇಮೋಜಿ ಮೂಲಕವೇ ನಗು ವ್ಯಕ್ತಪಡಿಸಿದರು. ಮದುವೆ-ಮುಂಜಿ ಆಹ್ವಾನ ಪತ್ರಿಕೆಯಲ್ಲಿ, ಸಮಾರಂಭ ನಡೆಯುವ ಸ್ಥಳವನ್ನು ಅಕ್ಕಪಕ್ಕದ ಊರುಗಳ ಹೆಸರು ಮತ್ತು ಅಲ್ಲಿಂದ ಎಷ್ಟು ದೂರ ಎಂಬ ವಿವರಗಳನ್ನೂ ಸೇರಿಸಿ ನಕ್ಷೆಯ ರೂಪದಲ್ಲಿ ಮುದ್ರಿಸುವುದು ಹೊಸತೇನಲ್ಲ. ಬಹುಶಃ ಮೇಲಿನಂತೆ
ಕ್ಯೂಆರ್ ಕೋಡ್ ಈಗ ನಕ್ಷೆಯ ಸ್ಥಾನವನ್ನು ಅಲಂಕರಿಸಿದೆ, ಮತ್ತು ಹಾಗೆ ಅಚ್ಚುಮಾಡುವುದೇ ಟ್ರೆಂಡ್ ಆಗಿದೆ.
ನಾನು ಇದುವರೆಗೆ ನೋಡಿರಲಿಲ್ಲ ಅಷ್ಟೇ. ಈಗ ಭಾರತದಲ್ಲಿ ಚಿಲ್ಲರೆ ದುಡ್ಡಿನ ಲೇವಾದೇವಿ ಸಹ ಕ್ಯೂಆರ್ ಕೋಡ್ ಮೂಲಕವೇ ಆಗುತ್ತಿರುವಾಗ ಮದುವೆ ಕರೆಯೋಲೆಯಲ್ಲಿ ಲೊಕೇಷನ್ ಕ್ಯೂಆರ್ ಕೋಡ್ ಹಾಕುವುದೇನು ಮಹಾ ಎಂದು ಕೆಲವರೆನ್ನಬಹುದು. ಇರಲಿ, ನನ್ನ ಚಿಂತನೆ ಬಹೂಪಯೋಗಿ ಕ್ಯೂಆರ್ ಕೋಡ್
ವಿಚಾರದಲ್ಲಿ ಅಲ್ಲ. ಬದಲಿಗೆ, ‘ದಾರಿ ತಿಳಿಸುವುದು’ ಎಂಬ ಅತಿ ಸ್ವಾರಸ್ಯಕರ ಪ್ರಕ್ರಿಯೆಯ ಬಗೆಗೆ. ಸ್ವಾರಸ್ಯ ಏನುಬಂತು ಅದರಲ್ಲಿ ಮಣ್ಣಾಂಗಟ್ಟಿ ಎನ್ನುವವರು ನೀವಲ್ಲವಾದ್ದರಿಂದ ಮುಂದೆ ಓದಿ: ದಾರಿ ತಿಳಿಸುವ ಪ್ರಕ್ರಿಯೆಯನ್ನು ಅತ್ಯಂತ ರಮಣೀಯವಾಗಿಸಿದ ಖ್ಯಾತಿ ಕಾಳಿದಾಸನ ಮೇಘದೂತಮ್ ಖಂಡಕಾವ್ಯದಲ್ಲಿ
ಬರುವ ಯಕ್ಷನದು. ಕುಬೇರನಿಂದ ಬಹಿಷ್ಕೃತಗೊಂಡು ಮಧ್ಯ ಭಾರತದ ರಾಮಗಿರಿಯಲ್ಲಿ ಅeತವಾಸ ಅನುಭವಿಸುತ್ತಿದ್ದ ಯಕ್ಷನೊಬ್ಬನು ಕೈಲಾಸ ಪರ್ವತದ ಅಲಕಾಪುರಿಯಲ್ಲಿರುವ ಪ್ರಿಯತಮೆಗೆ ಮೋಡಗಳ ಮೂಲಕ ಸಂದೇಶ ಕಳುಹಿಸುತ್ತಾನೆ.
ರಾಮಗಿರಿಯಿಂದ ಅಲಕಾಪುರಿಗೆ ಹೇಗೆ ಹೋಗಬೇಕೆಂದು ಮೋಡಗಳಿಗೆ ‘ಡೈರೆಕ್ಷನ್ಸ್’ ಕೊಡುತ್ತಾನೆ. ಹೇಗೂ ಆಕಾಶಮಾರ್ಗ, ಸರಳರೇಖೆ ಎಳೆದಂತೆ ನೇರವಾಗಿ ಹೋಗಬಹುದಾಗಿದ್ದರೂ ‘ಹಾಗೆ ಹೋಗಬೇಡ. ದಾರಿ ಕೊಂಚ ಓರೆಕೋರೆಯಾದರೂ ಅಡ್ಡಿಯಿಲ್ಲ, ಉಜ್ಜಯಿನಿಯ ಮೂಲಕ ಹಾದುಹೋಗುವುದನ್ನು
ಮರೆಯಬೇಡ. ಮಹಾಕಾಲನಿಗೆ ಪೂಜೆ-ಮಂಗಳಾರತಿ ಜರುಗುವಾಗಿನ ಗೌಜಿಯನ್ನು ತಪ್ಪಿಸಿಕೊಳ್ಳಬೇಡ. ಅದಕ್ಕಿಂತಲೂ ಮುಖ್ಯವಾಗಿ ಉಜ್ಜಯಿನಿಯ ಎತ್ತರದ ಸೌಧಗಳ ಉಪ್ಪರಿಗೆಯಲ್ಲಿ ನಿಂತಿರುವ ಚೆಲುವೆಯರ ಕಂಗಳ ನೋಟವನ್ನು ಕಣ್ತುಂಬಿಸಿಕೊಳ್ಳದೇ ಇರಬೇಡ!’ ಎಂದು ಆದೇಶ ನೀಡುತ್ತಾನೆ.
ಕಾಳಿದಾಸನು ಯಕ್ಷನ ಬಾಯಿಯಿಂದ ಹೇಳಿಸಿದ ಭೌಗೋಳಿಕ-ಪ್ರಾಕೃತಿಕ ವಿವರಗಳು ಅಕ್ಷರಶಃ ಹಾಗೆಯೇ ಇರುವುದನ್ನು ಕೆಲ ವರ್ಷಗಳ ಹಿಂದೆ ಪುಣೆಯ ವಿಜ್ಞಾನಿಗಳ ತಂಡವೊಂದು ವೈಮಾನಿಕ ಸಮೀಕ್ಷೆ ನಡೆಸಿ ದೃಢೀಕರಿಸಿದ್ದು, ಅದರ ಬಗ್ಗೆ ‘ಸುಧಾ’ದಲ್ಲೊಂದು ಮುಖಪುಟ ಲೇಖನ ಪ್ರಕಟವಾದದ್ದು… ಇವೆಲ್ಲ ಪೂರಕ ವಿಚಾರಗಳು. ಮುಖ್ಯ ಪಾಯಿಂಟ್ ಏನೆಂದರೆ ಮೋಡಗಳಿಗೆ ದಾರಿ ತಿಳಿಸಿದ ರೀತಿ!
ಅಷ್ಟೇ ಸ್ವಾರಸ್ಯಕರವಾಗಿ ದಾರಿ ತಿಳಿಸಿದ ಇನ್ನೊಂದು ನಿದರ್ಶನವೆಂದರೆ ನಮ್ಮ ಕನ್ನಡದ ಜನಪದ ಗೀತೆ ‘ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ…’! ಬಳೆಗಾರನನ್ನು ತನ್ನ ತವರುಮನೆಗೂ ಒಮ್ಮೆ ಹೋಗಿ ಬರುವಂತೆ ಕೇಳಿದ ಮುತದೆ ಹೆಣ್ಣು, ಅವನಿಗೆ ಅಲ್ಲಿಗೆ ಹೋಗುವ ಡೈರಕ್ಷನ್ಸ್ ಕೊಟ್ಟದ್ದು ಹೇಗೆ?
‘ಬಾಳೆಗಿಡ ನಿನ್ನ ಬಲಭಾಗಕ್ಕೆ ಮತ್ತು ಸೀಬೆಗಿಡ ಎಡಭಾಗಕ್ಕೆ ಇರುವಂತೆ ನಡುವಿನ ದಾರಿಯಲ್ಲಿ ಸಾಗು. ಅದು ನನ್ನ ತವರೂರನ್ನು ಸೇರುತ್ತದೆ. ಅಲ್ಲಿ ಅಂಚಿನ ಮನೆಗೆ ಕಂಚಿನ ಕದ ಇರುವುದನ್ನು ಕಾಣು. ಪಂಜರದಲ್ಲಿ ಮಿಂಚಾಡುವ ಗಿಣಿಗಳನ್ನು ಕಾಣು. ಅದೇ ನನ್ನ ತವರುಮನೆಯ ಗುರುತು. ಅಲ್ಲದೇ ಅಲ್ಲಿ ನಿನಗೆ ಒಂದು ಆಲೆಮನೆ ಕಾಣುತ್ತದೆ. ಗಾಣ ತಿರುಗುತ್ತಿರುತ್ತದೆ.
ನವಿಲು ಸಾರಂಗಗಳು ನಲಿದಾಡುತ್ತಿರುತ್ತವೆ. ಅದು ನನ್ನ ತವರುಮನೆಯ ಪರಿಸರ. ಮುತ್ತಿನ ಚಪ್ಪರ ಹಾಕಿದ ಹಟ್ಟಿಯಲ್ಲಿ ನಟ್ಟನಡುವೆ ಕುಳಿತು ಸಖಿಯರೊಡನೆ ಪಗಡೆ ಆಡುತ್ತ ಇರ್ತಾಳೆ, ಅವಳೇ ನನ್ನ ಹಡೆದವ್ವ!’ ಎಂದು ಕಣ್ಣಿಗೆಕಟ್ಟುವ ಚಿತ್ರಣ ಕೊಡುತ್ತಾಳೆ. ಬಳೆಗಾರ ಮಿಸುಕಾಡುವುದಿಲ್ಲ. ಆತನಿಗೆ ಆ ಡೈರೆಕ್ಷನ್ಸ್ ಅಷ್ಟು ಸರಿಯಾಗಿ ತಲೆಯೊಳಗೆ ಹೊಕ್ಕಿರಲಿಕ್ಕಿಲ್ಲ. ಅದಕ್ಕಿಂತಲೂ, ಇವಳ ತವರುಮನೆಗೆ ಹೋದರೆ ಅಲ್ಲಿ ವ್ಯಾಪಾರ ಆಗುತ್ತದೋ ಇಲ್ಲವೋ ಯಾರಿಗೆ ಗೊತ್ತು? ಅಷ್ಟು ದೂರ ಕ್ರಮಿಸಿ ಒಂದೆರಡು ಕಾಸೂ ಗಿಟ್ಟದಿದ್ದರೆ ಏನು ಪ್ರಯೋಜನ ಎಂದು ಆತನ ನಿಲುವು. ಯಾವಾಗ ಆಕೆ ‘ಅಚ್ಚಕೆಂಪಿನ ಬಳೆ ಹಸುರುಗೀರಿನ ಬಳೆ
ನನ್ನ ಹಡೆದವ್ವಗೆ ಬಲು ಆಸೆ. ಅವುಗಳನ್ನು ತೆಗೆದುಕೊಂಡು ಹೋಗು!’ ಎಂದಳೋ ಆಗ ಬಳೆಗಾರನ ಕಿವಿ ನಿಮಿರುತ್ತದೆ. ಆಕೆ ಹೇಳಿದ ಡೈರೆಕ್ಷನ್ಸ್ ನೆನಪಿಟ್ಟು ಕೊಂಡು ಜೋಳಿಗೆಯೊಂದಿಗೆ ಹೊರಡುತ್ತಾನೆ ಆಕೆಯ ತವರುಮನೆಗೆ.
ಈ ‘ಭಾಗ್ಯದ ಬಳೆಗಾರ’ ಹಾಡಿನಲ್ಲಿ ಒಂದು ಗಹನವಾದ ಮನೋವೈeನಿಕ ತಥ್ಯ ಅಡಗಿದೆ ಎಂದರೆ ನಂಬುತ್ತೀರಾ? ಮುತದೆ ಹೆಣ್ಣು ತನ್ನ ತವರುಮನೆಯ ದಾರಿ ತಿಳಿಸಿದ್ದು ಎಲ್ಲ ಲ್ಯಾಂಡ್ಮಾರ್ಕ್ಸ್ ಮೂಲಕವೇ ಹೊರತು ‘ಈ ರಸ್ತೆಯಲ್ಲಿ ಪಶ್ಚಿಮಾಭಿಮುಖವಾಗಿ ಇಷ್ಟು ದೂರ ಹೋಗು, ಅಲ್ಲಿ ರಸ್ತೆ ಕವಲಾದಾಗ ಎಡಕ್ಕೆ ತಿರುಗುವ ರಸ್ತೆಯಲ್ಲಿ ಸಾಗು, ಅದರಲ್ಲಿ ಎಂಟ್ಹತ್ತು ನಿಮಿಷ ನಡೆಯುವಷ್ಟು ಹೊತ್ತಿಗೆ ಒಂದು ಕೆರೆದಂಡೆಯ ಮೇಲಿನ ಕಾಲ್ದಾರಿ ಸಿಗುತ್ತೆ, ಆಮೇಲೆ ನೂರು ಹೆಜ್ಜೆ ಹಾಕಿದರೆ ನನ್ನ ತವರುಮನೆಯ ಗೇಟು ಕಾಣಿಸ್ತದೆ…’ ಅಂತ ಅಲ್ಲ! ಏಕೆಂದರೆ ಅದು ಟಿಪಿಕಲ್ ಹೆಣ್ಣೊಬ್ಬಳು ದಾರಿ ತಿಳಿಸುವ ರೀತಿಯಲ್ಲ.
ಒಂದುವೇಳೆ ಆಕೆಯ ಗಂಡನು ಬಳೆಗಾರನಿಗೆ ತನ್ನ ಮಾವನಮನೆಯ ಡೈರೆಕ್ಷನ್ಸ್ ಕೊಡುವುದಾಗಿದ್ದರೆ ಅಕ್ಷರಶಃ ದೂರ-ದಿಕ್ಕು-ಸಮಯ ಪರಿಗಣನೆಗಳ ರೀತಿಯಲ್ಲೇ ಹೇಳಿರುತ್ತಿದ್ದ. ಬೇಕಿದ್ದರೆ ತಮಾಷೆಗಾಗಿ, ಅಮೆರಿಕದಲ್ಲಾಗಿದ್ದಿದ್ರೆ ‘ಇಂಟರ್ಸ್ಟೇಟ್ ಹೈವೇ ೮೫ ನಾರ್ತ್ನಲ್ಲಿ ಹೋಗು, ಎಕ್ಸಿಟ್ ೧೧ ತಗೋ, ಮೂರನೇ ಸಿಗ್ನಲ್ ಲೈಟ್ನಲ್ಲಿ ರೌಟ್-೧೨೪ ಸಿಕ್ಕಿದಾಗ ಲೆಫ್ಟ್ ಟರ್ನ್ ತಗೋ. ಸ್ಟಾಪ್ ಸೈನ್ನಲ್ಲಿ ರೈಟ್ಗೆ ಹೋದರೆ ಬಲಬದಿಯಲ್ಲಿ ೪ನೆಯ ಇಂಡಿಪೆಂಡೆಂಟ್ ಹೌಸ್ ನಮ್ಮ ಮಾವನದ್ದು’ ಎನ್ನುತ್ತಿದ್ದ! ಅಮೆರಿಕದಲ್ಲಿರಲಿ ಭಾರತದಲ್ಲಿರಲಿ, ಗಂಡ ಹೇಳಿದ ದೂರ-ದಿಕ್ಕು-ಸಮಯ ಪರಿಗಣನೆಯ ಡೈರೆಕ್ಷನ್ಸ್ ಬಳೆಗಾರನಿಗೆ ಚಾಚೂತಪ್ಪದೆ ಅರ್ಥವಾಗುತ್ತಿತ್ತು. ಹೌದು, ದಾರಿ ತಿಳಿಸುವ ವಿಷಯಕ್ಕೆ ಬಂದಾಗ ಹೆಣ್ಣು ಮತ್ತು ಗಂಡಿನ ಮೆದುಳುಗಳಲ್ಲಿ ಸ್ಪಷ್ಟ ವ್ಯತ್ಯಾಸವಿದೆ. ಒಟ್ಟಾರೆಯಾಗಿ ಮ್ಯಾಪ್ ರೀಡಿಂಗ್ ಅನ್ನೋದು ಗಂಡಸರಿಗೆ ನೀರು ಕುಡಿದಷ್ಟು ಸುಲಭ.
ಹೆಣ್ಮಕ್ಕಳಿಗೆ ಕ್ಲಿಷ್ಟಕರ ಸಂಗತಿ. ಎಷ್ಟು ಕ್ಲಿಷ್ಟ ಎನ್ನುವುದಕ್ಕೆ ಪುರಾವೆಯೆಂದರೆ ದಕ್ಷಿಣಾಭಿಮುಖವಾಗಿ ಹೋಗುವಾಗ ಮ್ಯಾಪನ್ನು ತಲೆಕೆಳಗಾಗಿ ಹಿಡಿದು (ಮ್ಯಾಪ್ನಲ್ಲಿ ಉತ್ತರದಿಕ್ಕು ಮೇಲಕ್ಕೆ, ಪೂರ್ವದಿಕ್ಕು ಬಲಕ್ಕೆ ತಾನೆ?) ಅನುಸರಿಸುವ ಹೆಂಗಸರೂ ಅನೇಕರಿದ್ದಾರೆ! ಮ್ಯಾಪನ್ನು ಹಾಗೆ ಹಿಡಿಯುವುದರಿಂದ ಸುತ್ತಲೂ ಕಾಣುತ್ತಿರುವುದನ್ನು ಮ್ಯಾಪ್ನೊಂದಿಗೆ ತಾಳೆ ಮಾಡುವುದು ಅವರಿಗೆ ಸುಲಭವಾಗುತ್ತದೆ. ಹೀಗೇಕಿರಬಹುದು? ಹೆಣ್ಣಿಗಿಂತ ಗಂಡು ಎಲ್ಲ ವಿಧದಲ್ಲೂ ಶಾರ್ಪ್, ಇಂಟೆಲಿಜೆಂಟ್ ಅಂತೇನಾದ್ರೂ ಬರೆದೆನೋ ಮುಗೀತು ನನ್ನಕಥೆ!
ನಿಜ ಸಂಗತಿಯೇನೆಂದರೆ ಹೆಣ್ಣು ಮತ್ತು ಗಂಡು ಮೆದುಳುಗಳು ಮಾಹಿತಿಸಂಗ್ರಹ ಮತ್ತು ಸಂಸ್ಕರಣ ಮಾಡುವ ವಿಧಾನದಲ್ಲಿ ವ್ಯತ್ಯಾಸವಿರುವುದು ಹೌದಾದರೂ ಸಾಮರ್ಥ್ಯದಲ್ಲಿ ಅಲ್ಲ. ಇದೊಂಥರ ಮ್ಯಾಕ್ ಕಂಪ್ಯೂಟರ್ ಮತ್ತು ವಿಂಡೋಸ್ ಪಿಸಿ ನಡುವೆ, ಐಫೋನ್ ಮತ್ತು ಆಂಡ್ರಾಯ್ಡ್ ಫೋನ್ ನಡುವೆ ಸಾಮರ್ಥ್ಯ ಒಂದೇ ಇದ್ದರೂ ಕಾರ್ಯತಂತ್ರದಲ್ಲಿ ವ್ಯತ್ಯಾಸವಿರುವ ಹಾಗೆ.
ಗಂಡಸರಿಗೆ ದೂರ-ದಿಕ್ಕು-ಸಮಯ ಪ್ರಮಾಣಗಳ ಪರಿವೆ ಹೆಚ್ಚು; ಹೆಂಗಸರಿಗೆ ದೃಶ್ಯಾವಳಿಯನ್ನು ನೆನಪಿಡುವ ಸಾಮರ್ಥ್ಯ ಹೆಚ್ಚು. ಒಂದು ಸಂಶೋಧನೆಯ ಪ್ರಕಾರ, ಮನುಷ್ಯನಲ್ಲಿ ಮಾನಸಿಕ ಪರಿಭ್ರಮಣ ಅಂತೊಂದಿರುತ್ತದೆ, ನಮ್ಮ ಸುತ್ತಲಿನ ಯಾವುದೇ ವಸ್ತುವನ್ನಾದರೂ ವಿವಿಧ ಕೋನಗಳಿಂದ ಮನಸ್ಸಿನೊಳಗೆ ಚಿತ್ರಿಸಿಕೊಳ್ಳುವ ಪ್ರಕ್ರಿಯೆ. ಮ್ಯಾಪ್ರೀಡಿಂಗ್ ಅದಕ್ಕೊಂದು ಉತ್ತಮ ಪ್ರಾಯೋಗಿಕ ಉದಾಹರಣೆ. ಈ ಪ್ರಕ್ರಿಯೆಯಲ್ಲಿ ಗಂಡಸರ ಮೆದುಳು ಹೆಂಗಸರದಕ್ಕಿಂತ ಹೆಚ್ಚು ದಕ್ಷ. ಸಂಶೋಧಕರು ಹೇಳುವುದೇನೆಂದರೆ ಇದರಲ್ಲಿ ಪ್ರಕೃತಿ ಮತ್ತು ಪೋಷಣೆ ಎರಡೂ ಪ್ರಮುಖ ಪಾತ್ರ ವಹಿಸುತ್ತವೆ.
ಬಾಲ್ಯದಲ್ಲಿ ಗಂಡುಮಕ್ಕಳ ಆಟಿಗೆ ಅಥವಾ ಆಟಗಳು- ಕಾರು, ರೈಲ್ವೇ ಟ್ರಾಕ್, ಬಿಲ್ಡಿಂಗ್, ಟವರ್- ಇವೆಲ್ಲದರಲ್ಲಿ ದೂರ-ದಿಕ್ಕು-ಸಮಯಗಳ ಪ್ರಮಾಣದ ಕಲ್ಪನೆ ಮಗುವಿನ ಮೆದುಳಿಗೆ ಪರಿಚಯವಾಗುತ್ತದೆ. ಹೆಣ್ಣುಮಗುವಾದರೋ ಬಾರ್ಬಿ ಗೊಂಬೆಗೆ ಬಣ್ಣದ ಲಂಗ ತೊಡಿಸುವ, ಹಾಲು ಕುಡಿಸುವ ಸಂಭ್ರಮದಲ್ಲಿರುವಾಗ ಆ eನಾರ್ಜನೆಗೆ ಆಸ್ಪದವಿಲ್ಲ. ಗಂಡುಮಗು ಬೆಳೆದು ಫುಟ್ಬಾಲ್, ಕ್ರಿಕೆಟ್ ಆಟಗಳನ್ನು ಆಡತೊಡಗಿದಾಗಲೂ ತಾನಿರುವ ಜಾಗ ಮತ್ತು ಚಲಿಸಬೇಕಾದಾಗ
ತಾನು ಸಾಗಬೇಕಾದ ದಿಕ್ಕಿನ ಸ್ಪಷ್ಟತೆ ಇರಬೇಕಾಗುತ್ತದೆ. ಸಹಜವಾಗಿಯೇ ಮಾನಸಿಕ ಪರಿಭ್ರಮಣ ಸಾಮರ್ಥ್ಯ ಗಂಡುಮಗುವಿನಲ್ಲಿ ಮೈಗೂಡುತ್ತದೆ.
ಇನ್ನೊಂದು ವಿಶ್ಲೇಷಣೆಯೂ ಇದೆ: ಆದಿಮಾನವನ ಕಾಲದಲ್ಲೂ- ಗಂಡಸು ಗುಹೆಯಿಂದ ಹೊರಗೆ ಹೋಗಿ ಬೇಟೆಯಾಡಿ ಆಹಾರ ಸಂಗ್ರಹಣೆಗೆ ದಿನವಿಡೀ ಅಲೆದು
ಸಂಜೆಗೆ ಹಿಂದಿರುಗುವುದು; ಹೆಂಗಸು ಗುಹೆಯಲ್ಲೇ ಅಡುಗೆ ಪಡುಗೆ ಮಾಡ್ಕೊಂಡು ಮಕ್ಕಳನ್ನು ನೋಡ್ಕೊಂಡು ಇರುವುದು- ಜೀವನಕ್ರಮ. ಸಹಜವಾಗಿ ಗಂಡಸಿಗೆ ದೂರ-ದಿಕ್ಕು-ಸಮಯಗಳ ಪ್ರಜ್ಞೆ ಸದಾ ಜಾಗೃತವಿರಬೇಕಿತ್ತು. ತಾನಿರುವ ಸ್ಥಳದಿಂದ ಗೂಡಿಗೆ ಹಿಂದಿರುಗುವುದಕ್ಕೆ ಒಂದು ನಕ್ಷೆ ಮನಸ್ಸಲ್ಲೇ ಸಿದ್ಧವಿರಬೇಕಿತ್ತು.
ಹೀಗೆ ಮ್ಯಾಪ್ರೀಡಿಂಗ್ ಗಂಡಸಿನ ರಕ್ತದಲ್ಲೇ ಹರಿಯಿತು. ನಿಜವಾಗಿಯಾದರೆ ರಕ್ತದಲ್ಲಲ್ಲ, ಮೆದುಳಿನ ವಿಶೇಷ ದ್ರವದಲ್ಲಿ. ಮನುಷ್ಯನ ಮೆದುಳಿನಲ್ಲಿ ಬೂದು ಮತ್ತು ಬಿಳಿ ಎರಡು ದ್ರವಗಳಿರುತ್ತವೆ.
ಗಂಡಸರಲ್ಲೂ ಹೆಂಗಸರಲ್ಲೂ ಇವೆರಡು ಸಮಪ್ರಮಾಣದಲ್ಲೇ ಇರುತ್ತವೆ. ಆದರೆ ಅದನ್ನು ಬಳಸಿಕೊಳ್ಳುವುದರಲ್ಲಿ ಮಾತ್ರ ವ್ಯತ್ಯಾಸವಿದೆ. ಗಂಡಸರು ಬೂದುದ್ರವವನ್ನು ಹೆಚ್ಚು ಬಳಸಿದರೆ ಹೆಂಗಸರು ಬಿಳಿದ್ರವವನ್ನು ಬಳಸುತ್ತಾರೆ. ಲೆಕ್ಕ ಬಿಡಿಸುವುದು, ನಕ್ಷೆ ಅರ್ಥಮಾಡಿಕೊಳ್ಳುವುದು, ತಾರ್ಕಿಕ ವಿಶ್ಲೇಷಣೆ ನಡೆಸುವುದು- ಇವೆಲ್ಲದಕ್ಕೆ ಬೂದುದ್ರವ ಬೇಕು. ಭಾವೋದ್ವೇಗ, ಭಾಷೆಯ ಉಪಯೋಗ, ಕುಸುರಿ ನಿರ್ಮಾಣ ಮುಂತಾದುವಕ್ಕೆ ಬಿಳಿದ್ರವ ಮುಖ್ಯ ಇಂಧನ. ಮ್ಯಾಪ್ ರೀಡಿಂಗ್ ನಲ್ಲಿ ಗಂಡಸರೇಕೆ ಪಳಗಿರುತ್ತಾರೆ, ಹೆಂಗಸರು ಪರದಾಡುತ್ತಾರೆ ಎಂಬುದಕ್ಕೆ ಇದು ಅತಿ ಸಮಂಜಸ ವೈಜ್ಞಾನಿಕ ವಿವರಣೆ.
ಅಷ್ಟಾಗಿ, ನಮ್ಮ ನಿತ್ಯಬಳಕೆಯ ಮ್ಯಾಪ್ಗಳನ್ನೆಲ್ಲ ರಚಿಸಿದವರಾರು? ಹೆಚ್ಚಾಗಿ ಗಂಡಸರೇ. ಸಿವಿಲ್ ಎಂಜಿನಿಯರಿಂಗ್, ಸರ್ವೇಯಿಂಗ್, ಬ್ಲೂಪ್ರಿಂಟಿಂಗ್ ಇವೆಲ್ಲ ಹೆಚ್ಚಾಗಿ ಗಂಡಸರ ಕ್ಷೇತ್ರಗಳೇ ತಾನೆ? ಗ ಬಳಕೆಯಲ್ಲಿರುವ ಮ್ಯಾಪ್ಗಳೆಲ್ಲ ಗಂಡಸರು ರಚಿಸಿ ಗಂಡಸರು ಮಾರಾಟಮಾಡಿ ಗಂಡಸರು ಬಳಸುವಂಥವೇ
ಇರೋದು ಎಂದರೂ ತಪ್ಪಲ್ಲ. ಒಂದುವೇಳೆ ಹೆಂಗಸರೇ ಮ್ಯಾಪ್ ರಚಿಸುತ್ತಿದ್ದರೆ? ಆಗ ಅದರಲ್ಲಿ ಚೌಕಗಳ ಜಾಲ ಮತ್ತು ಬಿಂದುಗಳ ಬದಲಿಗೆ ಲ್ಯಾಂಡ್ಮಾರ್ಕ್ಗಳ ಚಿತ್ರಗಳೇ ಇರುತ್ತಿದ್ದವು.
ಸೀರೆಯಂಗಡಿ ಇರುವಲ್ಲಿ ಸೀರೆಯ ಚಿತ್ರ, ಬಾಟಾ ಸ್ಟೋರ್ ಇರುವಲ್ಲಿ ಪಾದರಕ್ಷೆಯ ಚಿತ್ರ… ಇತ್ಯಾದಿ. ಇನ್ನೊಬ್ಬ ಹೆಂಗಸು ಆ ಮ್ಯಾಪ್ ನೋಡಿದರೆ ಆಕೆಗದು ಸುಲಭದಲ್ಲಿ ಅರ್ಥವಾಗುತ್ತಿತ್ತು. ಅಂದಮೇಲೆ, ಭಾಗ್ಯದ ಬಳೆಗಾರನಿಗೆ ಮುತದೆ ಹೆಣ್ಣು ತವರುಮನೆಗೆ ಹೋಗಲು ಲ್ಯಾಂಡ್ಮಾರ್ಕ್ಗಳಿಂದಲೇ ಡೈರೆಕ್ಷನ್ಸ್
ಕೊಟ್ಟ ರೀತಿ ವೈeನಿಕವಾಗಿಯೂ ಸರಿಯಾಗಿಯೇ ಇದೆಯೆಂದಾಯ್ತು!
ಗುಹೆಗಳಲ್ಲಿ ವಾಸದ ಕಾಲದಲ್ಲಿ ಮನುಷ್ಯನು ದಾರಿ ತಿಳಿದುಕೊಳ್ಳುವುದಕ್ಕೆ ನೂಲಿನ ಉಂಡೆ ಬಳಸುತ್ತಿದ್ದನಂತೆ. ಹೊರಗೆ ಎಲ್ಲಿಗೇ ಹೋದರೂ ದಾರಿಯುದ್ದಕ್ಕೂ ನೂಲನ್ನು ಬಿಟ್ಟುಕೊಂಡು ಹೋಗುವುದು. ಹಿಂದಿರುಗುತ್ತ ಆ ನೂಲಿನ ಗುಂಟವೇ ಹೆಜ್ಜೆಯಿಟ್ಟು ತನ್ನ ಗುಹೆಯನ್ನು ಸ-ಸೂತ್ರ ತಲುಪುವುದು. ಇಂಗ್ಲಿಷ್
ಭಾಷೆಯಲ್ಲಿ ಛಿ ಎಂಬ ಪದ ಹುಟ್ಟಿಕೊಂಡಿದ್ದೇ ಹಾಗೆ. ಅದರ ನಿಜವಾದ ಅರ್ಥ ನೂಲಿನ ಉಂಡೆ ಅಂತಲೇ. ಈಗ ಪದಬಂಧದ ಸುಳಿವಿಗೂ ಕ್ಲೂ ಎನ್ನುತ್ತೇವೆ. ಇನ್ನೊಂದು ವಿಚಾರ ಸಿವಿಲ್ ಎಂಜಿನಿಯರಿಂಗ್, ಸರ್ವೇಯಿಂಗ್, ಮ್ಯಾಪ್-ಮೇಕಿಂಗ್ ಇವೆಲ್ಲ ಗಂಡಸರ ಕ್ಷೇತ್ರಗಳೆಂದಾಗ ನೆನಪಾಗುತ್ತದೆ.
ಅಮೆರಿಕದಲ್ಲಿ ದೇಶದ ಉದ್ದಗಲ ಹರಡಿರುವ ಅಂತಾರಾಜ್ಯ ಹೆದ್ದಾರಿಗಳನ್ನು ಸಂಖ್ಯೆಗಳಿಂದ ಗುರುತಿಸುವುದು; ಪೂರ್ವ-ಪಶ್ಚಿಮ ಹೆದ್ದಾರಿಗಳಿಗೆ ಸಮ ಸಂಖ್ಯೆ, ದಕ್ಷಿಣೋತ್ತರ ಹೆದ್ದಾರಿಗಳಿಗೆ ಬೆಸ ಸಂಖ್ಯೆ; ಭೂಪಟದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ, ದಕ್ಷಿಣದಿಂದ ಉತ್ತರಕ್ಕೆ ಹೋದಂತೆಲ್ಲ ಸಂಖ್ಯೆಗಳ ಏರಿಕೆ ಕ್ರಮ. ಅತಿಪ್ರಮುಖ
ಹೆದ್ದಾರಿಗಳಿಗೆ ೫ರ/೧೦ರ ಅಪವರ್ತ್ಯ ಸಂಖ್ಯೆಗಳು. ಹೈವೇಯ ಎಕ್ಸಿಟ್ಗಳಿಗೂ ಅಷ್ಟೇ- ಒಂದು ರಾಜ್ಯವನ್ನು ಪ್ರವೇಶಿಸಿದಾಗ ಸೊನ್ನೆ ಮೈಲಿ ಎಂದು ಪರಿಗಣಿಸಿ ಅಲ್ಲಿಂದ ಉತ್ತರಕ್ಕೆ ಮತ್ತು ಪೂರ್ವಕ್ಕೆ ಹೋದಂತೆಲ್ಲ ಎಕ್ಸಿಟ್ ಸಂಖ್ಯೆ ಮೈಲುಗಳ ಪ್ರಮಾಣದ ರೀತಿಯಲ್ಲಿ ಏರಿಕೆ.
ಇದನ್ನೆಲ್ಲ ಗಂಡಸರಿಗೆ ‘ದಾರಿ ತಿಳಿಯಲು’ ಸರಳವಾಗುವಂತೆ ಮಾಡಿರಬಹುದೇ? ನಮ್ಮ ವಾಷಿಂಗ್ಟನ್ ಡಿಸಿ.ಯ ಬೀದಿಗಳು ದಕ್ಷಿಣೋತ್ತರದವು ೧, ೨, ೩, ೪… ಎಂದು ಅನುಕ್ರಮ ಸಂಖ್ಯೆಯಿಂದಲೂ ಪೂರ್ವ-ಪಶ್ಚಿಮದವು ಎ, ಬಿ, ಸಿ, ಡಿ… ಎಂದು ಇಂಗ್ಲಿಷ್ ವರ್ಣಮಾಲೆಯಿಂದಲೂ ಗುರುತು. ಕ್ಯಾಪಿಟೊಲ್ ಬಿಲ್ಡಿಂಗ್ ಈ ಗ್ರಿಡ್ನ ಝೀರೊ ಪಾಯಿಂಟ್ ಎಂದು ಪರಿಗಣನೆ- ಇದನ್ನೂ ಗಂಡಸರ ಅನುಕೂಲಕ್ಕಾಗಿ ಮಾಡಿರಬಹುದೇ? ಅದೇನೇ ಇರಲಿ. ದಾರಿ ತಿಳಿಸುವ ಪರಿಪರಿಯ ವಿಧಾನಗಳು ಸ್ವಾರಸ್ಯಕರವಂತೂ ಹೌದು. ‘ಇದೇ ರಸ್ತೆಯಲ್ಲಿ ಡೆಡ್ಎಂಡ್ ವರೆಗೂ ಹೋಗಿ. ಅಲ್ಲಿ ಲೆಫ್ಟ್ ತಗೊಂಡು ಮೂರನೆಯ ಕ್ರಾಸ್ ಬಳಿ ಒಂದು ಬೇಕರಿ ಕಾಣ್ತದೆ. ಅಲ್ಲಿ ಯಾರನ್ನು ಬೇಕಿದ್ರೂ ಕೇಳಿ, ನೀವು ಹುಡುಕ್ತಿರೋ ಮನೆ ತೋರಿಸ್ತಾರೆ…’ ರೀತಿಯಲ್ಲಿ ದಾರಿ ತಿಳಿಸಿಯೂ ತಿಳಿಸದಂತೆ ತಿಳಿಸುವುದು; ಅಥವಾ,
ಆಟೋರಿಕ್ಷಾದಲ್ಲಿ ಕುಳಿತ ನೀವು ‘ಇಲ್ಲಿ ಎಡಕ್ಕೆ ಹೋಗಪ್ಪಾ’ ಎಂದರೆ ಅರ್ಥವಾಗದ ಬೆಂಗಳೂರಿನ ಅಪ್ಪಟ ಕನ್ನಡಿಗ ಆಟೋವಾಲಾ, ಆ ಎಡ ತಿರುವನ್ನೂ ದಾಟಿ ಮುಂದೆಹೋದಾಗ ನೀವು ಗದರಿದರೆ ‘ಲೆಫ್ಟ್ ಹೋಗಿ ಅಂತ ಹೇಳ್ಬೇಕಿತ್ತಲ್ಲ ನೀವು?’ ಎಂದು ನಿಮಗೇ ದಬಾಯಿಸುವುದು; ಅಥವಾ ‘ಅಂಧ ಗೋಲಾಂಗೂಲ ನ್ಯಾಯ’ ಎಂಬ ಸಂಸ್ಕೃತ ನ್ಯಾಯದಲ್ಲಿ ತುಂಟಹುಡುಗನು ದಾರಿ ಕೇಳಿದ ಅಮಾಯಕ ಕುರುಡನೊಬ್ಬನನ್ನು ಸೊಕ್ಕಿದ ಹಸುವಿನ ಬಳಿಗೆ ಕರೆದುಕೊಂಡು ಹೋಗಿ ಅದರ ಬಾಲವನ್ನು ಕುರುಡನ ಕೈಗೆ ಕೊಟ್ಟು ‘ಇದನ್ನು ಹಿಡಿದುಕೊಂಡು ಮುಂದೆ ಸಾಗಿದರೆ, ನೀನು ಹೋಗಬೇಕಾದ ಹಳ್ಳಿಗೇ ಹೋಗುತ್ತೀ’ ಎಂದು ಹೇಳಿ ಕುರುಡನ ಪಾಡನ್ನು ನೋಡಿ ನಗಾಡುವುದು; ಜೀವನದಲ್ಲಿ ಕೆಲವರು ‘ದಾರಿ ತಿಳಿಸುವವರು’ ನಾವು ಕೇಳದೆಯೂ ನಮಗೆ ಯಾವ್ಯಾವ್ದೋ ದಾರಿಗಳನ್ನು ತೋರಿಸುವ
ಹುಚ್ಚಿನವರು ಇರುವುದು… ಇವೆಲ್ಲ ಸ್ವಾರಸ್ಯಗಳಲ್ಲದೆ ಇನ್ನೇನು? ಇಂಥ ಸ್ವಾರಸ್ಯಗಳನ್ನೆಲ್ಲ ಗೂಗಲ್ ಮ್ಯಾಪ್ ಕ್ಯೂಆರ್ ಕೋಡ್ ಹೊಸಕಿ ಹಾಕುತ್ತದೇನೋ ಅಂತ ನನ್ನ ಚಿಂತನೆಯಲ್ಲಿ ಒಮ್ಮೆ ಹಾದುಹೋಯ್ತು. ನೀವೇನಂತೀರಿ?