Sunday, 8th September 2024

ಕುಟುಂಬಕ್ಕಾಗಿ ನಾವು, ನಮಗಾಗಿ ನೀವು

VIdhana Parishad

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಜಾಗತೀಕರಣದ ಕಾಲಘಟ್ಟದಲ್ಲಿ ಮನುಷ್ಯನ ಬದುಕು ದಿನದಿಂದ ದಿನಕ್ಕೆ ದುಬಾರಿಯಾಗುತ್ತಾ ನಡೆದಿರುವಾಗ, ಹಣಕ್ಕಾಗಿ ಪರದಾಡಿವರನ್ನೇ
ಮಹಾನ್ ನಾಯಕರು ಎಂದು ನಂಬಲಾರಂಭಿಸುತ್ತವೆ. ರಾಜಕಾರಣವನ್ನು ತಳಮಟ್ಟದಿಂದ ಗಮನಿಸಿ ನೋಡಿದರೆ ಢಾಳಾಗಿ ಕಣ್ಣಿಗೆ ರಾಚು ತ್ತದೆ.

ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ಆಕಾಂಕ್ಷಿಯೊಬ್ಬರು ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದರು. ಈ ಭೇಟಿಯ ಸಂದರ್ಭದಲ್ಲಿ ವಿಧಾನಪರಿಷತ್ ಚುನಾವಣೆ ಯಲ್ಲಿ ಸ್ಪರ್ಧಿಸಲು ನನಗೆ ಪಕ್ಷದ ಟಿಕೆಟ್ ಕೊಡಿಸಬೇಕು ಎಂದು ಮನವಿ ಮಾಡಿಕೊಂಡರು.

ಅವರ ಮಾತನ್ನು ಕೇಳಿದ ಆ ನಾಯಕರು: ಚುನಾವಣೆಯಲ್ಲಿ ಸ್ಪರ್ಧಿಸಲು ಎಷ್ಟು ಹಣ ಖರ್ಚು ಮಾಡಲು ರೆಡಿ ಇದ್ದೀರಾ? ಅಂತ ಕೇಳಿದರು.

ಅದಕ್ಕೆ ಆ ಟಿಕೆಟ್ ಆಕಾಂಕ್ಷಿ: ನನ್ನ ಬಳಿ ಒಂಭತ್ತು ಕೋಟಿ ರುಪಾಯಿ ಇದೆ ಸಾರ್ ಎಂದರು. ಅವರಾಡಿದ ಮಾತು ಕೇಳಿದ ಆ ನಾಯಕರು, ಒಂಭತ್ತು ಕೋಟಿಯಾ? ನೋ, ನೋ, ಅಷ್ಟು ಹಣ ಸಾಲುವುದಿಲ್ಲ. ಕನಿಷ್ಠ ಹದಿನೈದು ಕೋಟಿ ರುಪಾಯಿ ಇದ್ದರೆ ಹೇಳಿ. ಇಲ್ಲದಿದ್ದರೆ ಸುಮ್ಮನಿದ್ದು ಬಿಡಿ ಎಂದರು.

ಆದರೂ ಪಟ್ಟು ಬಿಡದ ಆ ಆಕಾಂಕ್ಷಿ: ಸಾರ್,ನಾನು ಒಂಭತ್ತು ಕೋಟಿ ರುಪಾಯಿ ಕೊಡುತ್ತೇನೆ. ಉಳಿದದ್ದನ್ನು ಪಾರ್ಟಿ ಫಂಡ್ ರೂಪದಲ್ಲಿ ಕೊಡಿಸಿ ಎಂದರು. ರೀ, ಪಾರ್ಟಿ ಫಂಡು-ಗಿಂಡು ಅಂತೆಲ್ಲ ಕೊಡಲು ಸಾಧ್ಯವಿಲ್ಲ ಕಣ್ರೀ. ನಿಮ್ಮ ಕೈಯ್ಯಾರೆ ಹದಿನೈದು ಕೋಟಿ ರುಪಾಯಿ ಕೊಡಲು ಸಾಧ್ಯವಾ ಹೇಳಿ. ಇಲ್ಲದಿದ್ದರೆ ಬೇರೆಯವರಿಗೆ ಟಿಕೆಟ್ ಕೊಡುತ್ತೇವೆ ಎಂದು ಬಿಟ್ಟರು.

ಅಷ್ಟೇ ಅಲ್ಲ, ಇವತ್ತು ನಮ್ಮ ಪಕ್ಷದ ವಿರುದ್ಧ ಕಣಕ್ಕಿಳಿಯಲಿರುವವರ ಪೈಕಿ ಒಬ್ಬರು ಒಂದು ವೋಟಿಗೆ ಮೂವತ್ತು ಸಾವಿರ ಕೊಡಲು ಸಜ್ಜಾಗಿದ್ದಾರೆ, ಮತ್ತೊಬ್ಬರು ಮೂವ ತ್ತೈದು ಸಾವಿರ ಕೊಡಲು ರೆಡಿ ಇದ್ದಾರೆ. ಆದರೆ ನಾನು ನಿಮಗೆ ಹೇಳುತ್ತಿರುವುದೇನೆಂದರೆ ಒಂದು ವೋಟಿಗೆ ಮಿನಿಮಮ್ ಇಪ್ಪತ್ತೈದು ಸಾವಿರ ರೂಪಾಯಿ ಗಳನ್ನಾದರೂ ಕೊಡಲು ನಾವು ರೆಡಿ ಇರಲೇಬೇಕು ಅಂತ ಎಂದರು.

ಅವರ ಮಾತು ಕೇಳಿದ ಆ ಟಿಕೆಟ್ ಆಕಾಂಕ್ಷಿ ವ್ಯಕ್ತಿ ಸುಮ್ಮನೆ ಹೊರನಡೆದರು. ಅಂದ ಹಾಗೆ ಅವರು ಈ ಹಿಂದೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದವರು. ಅವರ ತಂದೆ ಈ ನಾಡಿನ ಮಹಾನ್ ನಾಯಕರಾಗಿದ್ದವರು. ಅಂತಹವರು ಟಿಕೆಟ್ ಸಿಗದ ಅಸಹಾಯಕತೆಯಿಂದ ಹೊರಹೋದ ಮೇಲೆ ಆ ನಾಯಕರು, ಹದಿನೈದು ಕೋಟಿ ರುಪಾಯಿ ಕೊಡಲು ಸಜ್ಜಾದ ತಮ್ಮ ಆಪ್ತರೊಬ್ಬರಿಗೆ ಪಕ್ಷದ ಟಿಕೆಟ್ ಕೊಡಿಸಿದರು. ಹೀಗೆ ಟಿಕೆಟ್ ಪಡೆದವರು ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲಿ ಗೆದ್ದಿದ್ದಾರೆ.

**
ಅಂದ ಹಾಗೆ ಈ ಘಟನೆಯನ್ನು ಏಕೆ ನೋಡಬೇಕು ಎಂದರೆ, ನಾವು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಸಮಾಜ ಕಟ್ಟುತ್ತೇವೆ ಎಂದು ನಮ್ಮ ನಾಯಕರು ಹೇಳುತ್ತಾರೆ. ಆದರೆ ಹೀಗೆ ದಂಡಿಯಾಗಿ ಹಣ ಸುರಿದು ಚುನಾವಣೆಯಲ್ಲಿ ಗೆದ್ದವರು ಯಾವ ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡುತ್ತಾರೆ? ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದವರ ಪೈಕಿ ಒಂದೆರಡು ಅಪವಾದಗಳನ್ನು ಹೊರತುಪಡಿಸಿದರೆ ಬಹುತೇಕರು ಮತದಾರರಿಗೆ ದಂಡಿ ಯಾಗಿ ಹಣ ಹಂಚಿ ಬಂದವರು.

ಇವತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲ ಬಯಸಿದವರು ಹತ್ತರಿಂದ ಇಪ್ಪತ್ತೈದು ಕೋಟಿ ರುಪಾಯಿಗಳನ್ನು ಸುರಿಯುವ ಸ್ಥಿತಿ ಇದೆ ಎಂದರೆ ಒಂದು ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸೇರಿ ಇಪ್ಪತ್ತರಿಂದ ಐವತ್ತು ಕೋಟಿ ರೂಪಾಯಿಗಳವರೆಗೆ ಹಣ ಖರ್ಚು ಮಾಡಿದ್ದಾರೆ ಎಂದರ್ಥ. ಹೀಗೆ ಒಂದು ಚುನಾವಣೆಯಲ್ಲಿ ಈ ಪ್ರಮಾಣದ ಹಣ ಬಂಡವಾಳವಾಗಿ ಹೂಡಿಕೆಯಾಗುತ್ತಿದೆ ಎಂದರೆ ಅದರ ಹಲಪಟ್ಟು ಹಣವನ್ನು ಲಾಭವಾಗಿ ಪಡೆಯುವ ಕೆಲಸ ನಡೆಯುತ್ತದೆ ಎಂತಲೇ ಅರ್ಥ. ಕೆಲವೇ ಕಾಲದ ಹಿಂದೆ ವಿಧಾನ ಪರಿಷತ್ತಿಗೆ ಆಯ್ಕೆಯಾಗ ಬಯಸುವವರು ತಮ್ಮ ಜ್ಞಾನ, ಜನಸೇವೆಯ ಗುಣ ಮತ್ತು ಜನಪ್ರಿಯತೆಗಳನ್ನು ಮಾನದಂಡವಾಗಿಟ್ಟುಕೊಂಡು ಟಿಕೆಟ್ ಪಡೆಯುತ್ತಿದ್ದರು.

ಆದರೆ ಈಗ ಜ್ಞಾನ, ಜನಸೇವೆಯ ಗುಣ ಮತ್ತು ಜನಪ್ರಿಯತೆಗಳಿಗೂ, ಚುನಾವಣಾ ಟಿಕೆಟ್ ಪಡೆಯುವುದಕ್ಕೂ ಸಂಬಂಧವೇ ಇಲ್ಲ. ದೊಡ್ಡ ಪ್ರಮಾಣದ ಬಂಡವಾಳ ಹೂಡುವ ಶಕ್ತಿ ಯಾರಿಗಿದೆಯೋ? ಅವರೇ ಜನಪ್ರಿಯ ನಾಯಕರು. ವಿಧಾನ ಪರಿಷತ್ ಲೋಕಸಭೆ, ವಿಧಾನ ಸಭೆಯಿಂದ ಹಿಡಿದು ಎಲ್ಲ ಹಂತದ ಚುನಾವಣೆಗಳಲ್ಲೂ ಟಿಕೆಟ್ ಹಂಚಿಕೆಗೆ ಹಣವೇ ಮಾನದಂಡ.

**
ಇತ್ತೀಚೆಗೆ ಜಾತಿ ಸಂಘಟನೆಯೊಂದರ ಚುನಾವಣೆ ನಡೆಯಿತು. ಜಿಲ್ಲಾ ಮಟ್ಟಗಳಿಂದ ಆಯ್ಕೆಯಾಗುವವರು ಅಂತಿಮವಾಗಿ ರಾಜ್ಯ ಮಟ್ಟದಲ್ಲಿ ಅಧ್ಯಕ್ಷ ರನ್ನು ಆರಿಸುವುದು ಆ ಸಂಘಟನೆಯ ನಿಯಮ. ಸರಿ, ಮೊನ್ನೆ ಚುನಾವಣೆ ನಡೆದಾಗ ಜಿಲ್ಲಾ ಮಟ್ಟಗಳಲ್ಲಿ ಸ್ಪರ್ಧಿಸಿದವರು ಮತದಾರರಿಗೆ ದಂಡಿಯಾಗಿ ಹಣ ಕೊಟ್ಟರು.

ಹೇಳಿದರೆ ನಿಮಗೆ ಅಚ್ಚರಿಯಾಗಬಹುದು. ಆ ಜಾತಿ ಸಂಘಟನೆಗೆ ಜಿಲ್ಲಾ ಮಟ್ಟಗಳಲ್ಲಿ ಆಯ್ಕೆಯಾಗುವವರು ಎರಡರಿಂದ ಐದು ಕೋಟಿ ರೂಪಾಯಿ ಗಳಷ್ಟು ಹಣ ವೆಚ್ಚ ಮಾಡಿದ್ದರು. ಇಷ್ಟು ಪ್ರಮಾಣದ ಹಣ ವೆಚ್ಚ ಮಾಡುತ್ತೀ ರಲ್ಲ? ಇದನ್ನು ಹೇಗೆ ಮರಳಿ ಗಳಿಸುತ್ತೀರಿ? ಎಂದು ಆಯ್ಕೆ ಯಾದವ ರೊಬ್ಬರ ಬಳಿ ಕೇಳಿದರೆ ಅವರ ಉತ್ತರ ಸಿದ್ಧವಾಗಿತ್ತು.

ಗೆಲ್ಲಲು ನಾನೀಗ ಐದು ಕೋಟಿ ರುಪಾಯಿಗಳಷ್ಟು ಹಣ ಖರ್ಚು ಮಾಡಿದ್ದೀನಲ್ಲ? ಇಷ್ಟು ಪ್ರಮಾಣದ ಹಣ ನನಗೆ ಪ್ರಾಥಮಿಕ ಸುತ್ತಿನಲ್ಲೇ ವಾಪಸ್ ಬಂದು ಬಿಡುತ್ತದೆ. ಉದಾಹರಣೆಗೆ ನಮ್ಮ ಜಾತಿ ಸಂಘಟನೆಗಿರುವ ಮೆಡಿಕಲ್ ಕಾಲೇಜನ್ನೇ ತೆಗೆದುಕೊಳ್ಳಿ. ಅಲ್ಲಿ ಪ್ರತಿ ವರ್ಷ ನನ್ನ ಕೋಟಾದಡಿ ಸೀಟು ಸಿಗುತ್ತದೆ. ನನ್ನ ಪಾಲಿಗೆ ಸಿಗುವ ಸೀಟುಗಳನ್ನು ಮಾರಿಕೊಂಡರೂ ನಾನು ಖರ್ಚು ಮಾಡಿದ ಹಣ ನನಗೆ ಸಿಗುತ್ತದೆ. ಇದು ಕೇವಲ ಒಂದು ಬಾಬ್ತಾಯಿತು. ಉಳಿದಂತೆ ಇನ್ನೂ ಹಲವು ಬಾಬ್ತುಗಳಲ್ಲಿ ನನಗೆ ಹಣ ಸಿಗುತ್ತದೆ.

ಇದೇ ರೀತಿ ರಾಜ್ಯ ಮಟ್ಟದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೀವಲ್ಲ? ಆಗ ಅಧ್ಯಕ್ಷರಾಗ ಬಯಸುವವರು ನಮಗೆ ಕನಿಷ್ಠ ಮೂರು ಕೋಟಿ ರುಪಾಯಿ ಕೊಡಬೇಕಾಗುತ್ತದೆ. ಹೀಗಾಗಿ ನಾವು ವೆಚ್ಚ ಮಾಡಿದ್ದಕ್ಕಿಂತ ಹಲವು ಪಟ್ಟು ಹಣ ನಮಗೆ ವಾಪಸ್ಸು ಬರುತ್ತದೆ ಎಂಬುದು ನಿರ್ದೇಶಕನಾಗಿ ಆಯ್ಕೆಯಾದ ಅಭ್ಯರ್ಥಿಯ ಉತ್ತರವಾಗಿತ್ತು. ಹೀಗೆ ತಳಮಟ್ಟದಿಂದ ಮೇಲು ಮಟ್ಟದವರಿಗೆ ಎಲ್ಲ ಹಂತದಲ್ಲಿ, ವಿವಿಧ ಪ್ರಕಾರಗಳಲ್ಲಿ ನಡೆಯುವ ಚುನಾವಣೆಗಳು ಈ ಮಟ್ಟದಲ್ಲಿ ಭ್ರಷ್ಟವಾದರೆ ಜನರಿಗೆ ಸಾಮಾಜಿಕ ನ್ಯಾಯ ದೊರೆಯುವುದು ಹೇಗೆ? ಪರಿಸ್ಥಿತಿ ಹೀಗಿರುವುದರಿಂದಲೇ ಕುಟುಂಬ ರಾಜಕಾರಣದ ತಾಕತ್ತು ಹೆಚ್ಚಾಗುತ್ತಿರುವುದು.

ದೊಡ್ಡ ಮಟ್ಟದ ಬಂಡವಾಳ ಹೂಡಿ, ಇನ್ನೂ ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುವುದು ಅನಿವಾರ್ಯ ಎಂಬ ಭಾವನೆ ಈಗ ಎಲ್ಲ ರಾಜಕೀಯ ಪಕ್ಷಗಳ ನಾಯಕರಲ್ಲೂ ಇದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದವರನ್ನೇ ನೋಡಿ, ಎಲ್ಲ ರಾಜಕೀಯ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಎಂಬುದು ದೊಡ್ಡ ಮಟ್ಟದಲ್ಲಿ ಮೇಳೈಸಿದೆ. ನಲವತ್ತೈದು ವರ್ಷಗಳಿಗೂ ಹಿಂದೆ ಪ್ರಧಾನಮಂತ್ರಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಯನ್ನು ಹೇರಿದ ಸಂದರ್ಭದಲ್ಲಿ ಎಲ್ಲೆಡೆ ವ್ಯಾಪಕ ಪ್ರತಿಭಟನೆ ನಡೆಯಿತು.

ಸರ್ವೋದಯ ಚಳವಳಿಯನ್ನು ಕಟ್ಟಿದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರಂತೂ; ಇದು ಸರ್ವಾಧಿಕಾರ ಮತ್ತು ವಂಶಪಾರಂಪರ್ಯ ರಾಜಕಾರಣದ ವಿರುದ್ಧದ ಹೋರಾಟ ಎಂದು ಗುಡುಗಿದ್ದರು. ಅವತ್ತು ಜೆಪಿ ಅವರ ಸರ್ವೋದಯ ಚಳವಳಿಗೆ ಬೆಂಬಲ ನೀಡಿ ಸರ್ವಾಧಿಕಾರ ಮತ್ತು ವಂಶಪಾರಂಪರ್ಯ ರಾಜಕಾರಣ ವಿರುದ್ಧ ಹೋರಾಡಿದ ಬಹುತೇಕರು ಆನಂತರದ ದಿನಗಳಲ್ಲಿ ತಮ್ಮ ತಮ್ಮ ರಾಜ್ಯವನ್ನೇ ಪಾಳೇಪಟ್ಟನ್ನಾಗಿ ಮಾಡಿ ಕೊಂಡು ವಂಶಪಾರಂಪರ್ಯ ರಾಜಕಾರಣಕ್ಕೆ ನೀರು, ಗೊಬ್ಬರ ಹಾಕಿದರು.

ಅದು ಉತ್ತರ ಪ್ರದೇಶದ ಮುಲಾಯಂಸಿಂಗ್ ಯಾದವ್ ಇರಬಹುದು, ಬಿಹಾರದ ಲಲ್ಲೂ ಪ್ರಸಾದ್ ಯಾದವ್ ಇರಬಹುದು, ಒರಿಸ್ಸಾದ ಬಿಜು ಪಾಟ್ನಾ ಯಕ್ ಇರಬಹುದು, ಕರ್ನಾಟಕದ ಎಚ್.ಡಿ.ದೇವೇಗೌಡರೇ ಇರಬಹುದು. ಒಟ್ಟಿನಲ್ಲಿ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಹೋರಾಡಿದ ಬಹುತೇಕರು, ತಾವೇ ಅದರ ಕಟ್ಟಾ ಆರಾಧಕರಾಗಿ ಬಿಟ್ಟರು. ದೇವೇಗೌಡರ ವಂಶಪಾರಂಪರ್ಯ ರಾಜಕಾರಣವಂತೂ ಜವಾಹರ ಲಾಲ್ ನೆಹರೂ ಅವರ ಲೆವೆಲ್ಲಿಗೆ ತಲುಪಿಬಿಟ್ಟಿತು. ಹಾಗೆ ನಾಲ್ಕು ತಲೆಮಾರುಗಳಲ್ಲಿ ನೆಹರೂ ಅವರ ವಂಶಪಾರಂಪರ್ಯ ರಾಜಕಾರಣ ಯಾವ ಲೆವೆಲ್ಲಿಗೆ ತಲುಪಿತೋ? ದೇವೇ ಗೌಡರ ವಂಶಪಾರಂಪರ್ಯ ರಾಜಕಾರಣ ಮೂರೇ ತಲೆಮಾರುಗಳಲ್ಲಿ ಆ ದಾಖಲೆಯನ್ನು ತಲುಪುವ ಮಟ್ಟಕ್ಕೆ ಬಂದಿದೆ.

ನೆಹರೂ, ಅವರ ಪುತ್ರಿ ಇಂದಿರಾಗಾಂಧಿ, ಇಂದಿರಾ ಪತಿ ಫಿರೋಜ್ ಗಾಂಧಿ, ಮಕ್ಕಳಾದ ರಾಜೀವ್ ಗಾಂಧಿ, ಸಂಜಯ ಗಾಂಧಿ, ರಾಜೀವ್ ಪತ್ನಿ ಸೋನಿಯಾ  ಗಾಂಧಿ, ಸಂಜಯ್ ಪತ್ನಿ ಮೇನಕಾ ಗಾಂಧಿ, ರಾಜೀವ್ ಮಕ್ಕಳಾದ ಪ್ರಿಯಾಂಕ, ರಾಹುಲ್ ಮತ್ತು ಸಂಜಯ್ ಗಾಂಧಿ ಪುತ್ರ ವರುಣ್ ಗಾಂಧಿ ರಾಜಕಾರಣದ ವರ್ತುಲಕ್ಕೆ ಬಂದಿದ್ದಾರೆ. ಇನ್ನು ದೇವೇಗೌಡರ ಕುಟುಂಬದಲ್ಲಿ ದೇವೇಗೌಡರು, ಅವರ ಮಕ್ಕಳಾದ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರ ಸ್ವಾಮಿ, ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ, ಅವರ ಮಕ್ಕಳಾದ ಸೂರಜ್ ರೇವಣ್ಣ,ಪ್ರಜ್ವಲ್ ರೇವಣ್ಣ ಈಗಾಗಲೇ ರಾಜಕಾರಣದಲ್ಲಿ ಮಹತ್ವದ ಮೆಟ್ಟಿಲುಗಳನ್ನೇರಿದ್ದಾರೆ.

ಈಗಾಗಲೇ ರಾಜಕಾರಣಕ್ಕೆ ಎಂಟ್ರಿ ಕೊಟ್ಟು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಸಧ್ಯದಲ್ಲೇ ಅಧಿಕಾರದ ಮನೆಯನ್ನು ನುಗ್ಗುವ ತಯಾರಿಯಲ್ಲಿದ್ದಾರೆ. ಹೀಗೆ ಹೋಲಿಸಿ ನೋಡಿದರೆ ನೆಹರೂ ಕುಟುಂಬದಿಂದ ಬಂದವರು ಎಷ್ಟು ಜನರೋ? ದೇವೇಗೌಡರ ಕುಟುಂಬದಿಂದಲೂ ಹೆಚ್ಚು ಕಡಿಮೆ ಅಷ್ಟೇ ಜನ ರಾಜಕಾರಣದ ಮಹಲಿಗೆ ನುಗ್ಗಿದ್ದಾರೆ. ಆದರೆ ಅವರನ್ನು ಪ್ರಶ್ನಿಸುವ ಶಕ್ತಿ ಉಳಿದ ರಾಜಕೀಯ ಪಕ್ಷಗಳಿಗೂ ಇಲ್ಲ .

ಯಾಕೆಂದರೆ ಕಾಂಗ್ರೆಸ್, ಬಿಜೆಪಿಯಲ್ಲೂ ಮುಖ್ಯಮಂತ್ರಿಗಳಾಗಿದ್ದ ಬಹುತೇಕರ ಮಕ್ಕಳು, ಸಹೋದರರು ಒಂದಲ್ಲ, ಒಂದು ಮನೆಗೆ ನುಗ್ಗಿದ್ದಾರೆ. ಅದೇ ರೀತಿ ನಾಯಕರಾದ ಬಹುತೇಕರ ಕುಟುಂಬದವರು ರಾಜಾರೋಷಾಗಿ ರಾಜಕಾರಣಕ್ಕೆ ನುಗ್ಗಿ ನಿರುಮ್ಮಳವಾಗಿದ್ದಾರೆ. ಹೀಗಾಗಿ ರಾಜಕಾರಣದಲ್ಲೀಗ ಒಂದು ಘೋಷ ವಾಕ್ಯ ಜನಪ್ರಿಯವಾಗಿದೆ.

ಅದೆಂದರೆ: ಕುಟುಂಬಕ್ಕಾಗಿ ನಾವು, ನಮಗಾಗಿ ನೀವು ಎಂಬುದು. ಎಲ್ಲಿಯವರೆಗೆ ತತ್ವ, ಸಿದ್ಧಾಂತದ ಮ-ರು ಅಗತ್ಯವಿರುತ್ತೋ? ಅಲ್ಲಿಯವರೆಗೂ ಚುನಾ ವಣೆಯಲ್ಲಿ ಸ್ಪರ್ಧಿಸುವವರಿಗೆ ಸಾಮಾಜಿಕ ನ್ಯಾಯದ ಮಾತೇ ಚಲಾವಣೆಯ ನಾಣ್ಯವಾಗಿತ್ತು. ಆದರೆ ಯಾವಾಗ ಚುನಾವಣೆಯಲ್ಲಿ ಗೆಲ್ಲಲು ಹಣವೇ ಮುಖ್ಯ ಮಾನದಂಡವಾಯಿತೋ? ಇದಾದ ನಂತರ ಕುಟುಂಬ ರಾಜಕಾರಣದ ಸೊಗಡು ಎಲ್ಲ ಪಕ್ಷಗಳಲ್ಲಿ ತನ್ನ ಘಮವನ್ನು ಬೀರುತ್ತಲೇ ನಡೆದಿದೆ.

ಜಾಗತೀಕರಣದ ಕಾಲಘಟ್ಟದಲ್ಲಿ ಮನುಷ್ಯನ ಬದುಕು ದಿನದಿಂದ ದಿನಕ್ಕೆ ದುಬಾರಿಯಾಗುತ್ತಾ ನಡೆದಿರುವಾಗ, ಹಣಕ್ಕಾಗಿ ಪರದಾಡುವ ಮನಸ್ಸುಗಳು ದುಡ್ಡಿದ್ದವರನ್ನೇ ಮಹಾನ್ ನಾಯಕರು ಎಂದು ನಂಬಲಾರಂಭಿಸುತ್ತವೆ. ಈಗಿನ ರಾಜಕಾರಣವನ್ನು ತಳಮಟ್ಟದಿಂದ, ಮೇಲು ಮಟ್ಟದವರೆಗೆ ಗಮನಿಸಿ ನೋಡಿದರೆ ಇದು ಢಾಳಾಗಿ ಕಣ್ಣಿಗೆ ರಾಚುತ್ತದೆ.

error: Content is protected !!