Tuesday, 23rd April 2024

ಬಂಗಾಳದ ಆಡಲಿತ ತಾಲಿಬಾನಿಗಳನ್ನು ನೆನಪಿಸುತ್ತಿದೆ !

ವಿಶ್ಲೇಷಣೆ

ಮಾರುತೀಶ್ ಅಗ್ರಾರ

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಪಂಚಾಯಿತಿ ಚುನಾವಣೆಗಳ ವೇಳೆ ವ್ಯಾಪಕ ಗಲಭೆ ಮತ್ತು ಹಿಂಸಾಚಾರಗಳು ನಡೆದಿದ್ದು ನಿಮಗೀಗಾಗಲೇ ಗೊತ್ತಾಗಿದೆ. ಬಂಗಾಳದಲ್ಲಿ ಚುನಾವಣಾ ಹಿಂಸಾಚಾರ ಇದೇ ಮೊದಲೇನಲ್ಲ. ಅಲ್ಲಿನ ರಾಜಕೀಯ ಸಂಘರ್ಷ,
ದಳ್ಳುರಿಗೆ ದೊಡ್ಡ ಇತಿಹಾಸವೇ ಇದೆ. ಹಾಗೆ ನೋಡಿದರೆ, ಸ್ವಾತಂತ್ರ್ಯ ಪೂರ್ವದಿಂದಲೂ ಬಂಗಾಳದ ನೆಲದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸಾಕಷ್ಟು ನೆತ್ತರು ಹರಿದಿದೆ.

ಅಲ್ಲಿ ಮುಸ್ಲಿಂ ಲೀಗ್ ನಡೆಸಿದ ನರಮೇಧವನ್ನು ಯಾರು ತಾನೇ ಮರೆಯಲು ಸಾಧ್ಯ? ದುರಂತವೆಂದರೆ, ಸ್ವಾತಂತ್ರ್ಯಾನಂತರವೂ ಬಂಗಾಳವು ರಾಜಕೀಯ ವೈಷಮ್ಯ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣದಿಂದಾದ ಕೊಲೆ, ದಂಗೆ, ಹಿಂಸಾಚಾರಗಳನ್ನು ಕಂಡಿದೆ. ಬಂಗಾಳದಲ್ಲಿ ದೀರ್ಘಕಾಲ ಅಧಿಕಾರದಲ್ಲಿದ್ದ ಕಮ್ಯುನಿಸ್ಟರ ಅವಧಿಯಲ್ಲಿ ನಡೆದ ರಾಜಕೀಯ ಹಿಂಸಾಚಾರ, ಚುನಾವಣಾ ಗಲಭೆ, ಘರ್ಷಣೆಗಳನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.

ಅದರಲ್ಲೂ ನಿರ್ದಿಷ್ಟವಾಗಿ, ೧೯೭೦ರಲ್ಲಿ ನಡೆದ ಸೈನ್‌ಬರಿ ಹತ್ಯೆಗಳು, ೧೯೭೯ರಲ್ಲಿ ಜ್ಯೋತಿ ಬಸು ನೇತೃತ್ವದ ಎಡರಂಗ ಸರಕಾರವು ಬಾಂಗ್ಲಾದೇಶದಿಂದ ಬಂದ ಬಂಗಾಳಿ ಹಿಂದೂ ನಿರಾಶ್ರಿತರನ್ನು ಗುಂಡಿಟ್ಟು ಕೊಂದಿದ್ದು ಹಾಗೂ ಕೆಲವರನ್ನು ಹೊಡೆದು ಕೊಂದಿದ್ದು, ೧೯೮೨ರಲ್ಲಿ ನಡೆದ ಆನಂದಮಾರ್ಗಿ ಸನ್ಯಾಸಿಗಳ ಸಜೀವದಹನ, ೨೦೦೦ನೇ ಇಸವಿಯಲ್ಲಿ ನಡೆದ ನಾನೂರ್ ಹತ್ಯಾಕಾಂಡ, ೨೦೦೭ರ ನಂದಿಗ್ರಾಮ ಹತ್ಯಾಕಾಂಡ ಹೀಗೆ ಹೇಳುತ್ತ ಹೋದರೆ ಸ್ವಾತಂತ್ರ್ಯಾನಂತರವೂ ಬಂಗಾಳ ರಕ್ತಸಿಕ್ತ ಅಧ್ಯಾಯವನ್ನೇ ಕಂಡಿದೆ.

ಇಲ್ಲಿ ಕಮ್ಯುನಿಸ್ಟರು ದೀರ್ಘಕಾಲ ಅಧಿಕಾರ ನಡೆಸಿದರಾರೂ, ಬಂಗಾಳವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದನ್ನು ಬಿಟ್ಟು ಅಧಿಕಾರದ ದಾಹಕ್ಕಾಗಿ ರಾಜಕೀಯ ಹಿಂಸಾಚಾರ, ಕೊಲೆಗಳನ್ನು ಪೋಷಿಸಿದ್ದೇ ಅವರ ಸರಕಾರದ ದೊಡ್ಡ ಸಾಧನೆಯಾಗಿತ್ತು. ವಿಪರ್ಯಾಸವೆಂದರೆ, ಆಗಲೂ ನೂರಾರು ಅಮಾಯಕರು ಚುನಾವಣಾ ಗಲಭೆಗಳಿಂದಾಗಿ ಹತರಾಗಿದ್ದರು. ‘ಕಾಕ’ಗಳ (ಕಾಂಗ್ರೆಸ್-ಕಮ್ಯನಿಸ್ಟರ) ಆಟಾಟೋಪಗಳನ್ನೇ ದೀರ್ಘ ಕಾಲದಿಂದ ಕಂಡಿದ್ದ ಬಂಗಾಳಿಗರು ರಾಜ್ಯವನ್ನು ಶಾಂತಿ, ಸಮೃದ್ಧಿ, ಅಭಿವೃದ್ಧಿ ಯತ್ತ ಕೊಂಡೊಯ್ಯುವ ಹೊಸ ದೊಂದು ನಾಯಕತ್ವಕ್ಕಾಗಿ ಎದುರುನೋಡುತ್ತಿದ್ದರು.

ಅದೇ ಸಮಯದಲ್ಲಿ ಮಮತಾ ಬ್ಯಾನರ್ಜಿಯವರು ಭಿನ್ನಾಭಿಪ್ರಾಯಗಳ ಕಾರಣದಿಂದ ಕಾಂಗ್ರೆಸ್‌ನಿಂದ ಹೊರಬಂದು ೧೯೯೮ ರಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ಸ್ಥಾಪಿಸಿದರು. ‘ಕಾಕ’ಗಳ ರಾಜಕೀಯ ಕಾರ್ಯವೈಖರಿಗಳನ್ನು ಕಟುವಾಗಿ ಟೀಕಿಸುತ್ತಾ ಬಂಗಾಳ ಜನತೆಯ ಭವಿಷ್ಯದ ಆಶಾಕಿರಣವಾಗಿ ಹೊರಹೊಮ್ಮಿದ ಮಮತಾ ಬ್ಯಾನರ್ಜಿ, ‘ಒಮ್ಮೆ ಅಧಿಕಾರ
ಕೊಡಿ, ರಾಜ್ಯವನ್ನು ಹೊಸದೊಂದು ದಿಕ್ಕಿನೆಡೆಗೆ ಕೊಂಡೊ ಯ್ಯುತ್ತೇನೆ’ ಎಂದಿದ್ದರು. ೨೦೧೧ರಲ್ಲಿ ನಡೆದ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ, ೩೫ ವರ್ಷಗಳ ಎಡಪಕ್ಷ ಗಳ ಸರಕಾರದ ಕಾರ್ಯವೈಖರಿಗೆ ಬೇಸತ್ತಿದ್ದ ಬಂಗಾಳಿಗರು ಮಮತಾ ಬ್ಯಾನರ್ಜಿಯವರ ಹಸಿಹಸಿ ಸುಳ್ಳುಗಳನ್ನೇ ನಂಬಿ ಮೊದಲ ಬಾರಿಗೆ ಟಿಎಂಸಿಯನ್ನು ಅಧಿಕಾರಕ್ಕೆ ತಂದರು.

ಅಲ್ಲಿಂದೀಚೆಗೆ ಬಂಗಾಳದಲ್ಲಿ ಸರ್ವಾಧಿಕಾರಿ ಧೋರಣೆಯ ಮಮತಾ ಬ್ಯಾನರ್ಜಿಯವರದ್ದೇ ದರ್ಬಾರ್! ಮಮತಾ ಅಧಿಕಾರಕ್ಕೆ ಬಂದ ನಂತರ ಬಂಗಾಳದಲ್ಲಿ ‘ಕಾಕ’ ಪಕ್ಷಗಳು ಅತ್ಯಂತ ದುರ್ಬಲವಾದವು. ಆದರೆ ಟಿಎಂಸಿಗೆ ಟಕ್ಕರ್ ಕೊಡಲು ಬಿಜೆಪಿ ಅಣಿಯಾಗಿತ್ತು. ಅದರಲ್ಲೂ ೨೦೧೬ರಿಂದ ಈಚೆಗೆ ಬಂಗಾಳದಲ್ಲಿ ಟಿಎಂಸಿಗೆ ಪ್ರಬಲ ಎದುರಾಳಿಯಾಗಿರುವುದು ಬಿಜೆಪಿ! ನೆನಪಿರಲಿ, ೧೯೭೧ರ ಜನಸಂಘ ಕಾಲದಿಂದಲೂ ಬಿಜೆಪಿ ಬಂಗಾಳದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದೆಯಾದರೂ ಅದು ಸಾಧ್ಯವಾಗಿರಲಿಲ್ಲ. ಆದರೀಗ ಅಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ಮೂಲೆಗುಂಪಾದ ಪರಿಣಾಮ ಬಿಜೆಪಿ ಈ ಎರಡೂ ಪಕ್ಷಗಳಿಗಿಂತ ಬಲಿಷ್ಠವಾಗಿದೆ.

ದುರಂತವೆಂದರೆ, ‘ಮಮತಾ ದೀದಿ’ಯ ಅವಧಿಯಲ್ಲಿ ಬಿಜೆಪಿ ತನ್ನ ಸಾಕಷ್ಟು ಕಾರ್ಯಕರ್ತರನ್ನು ಕಳೆದುಕೊಂಡಿದೆ! ಅಷ್ಟಕ್ಕೂ,
ಮಮತಾ ಅಧಿಕಾರಕ್ಕೆ ಬಂದ ನಂತರ ಬಂಗಾಳದ ಪರಿಸ್ಥಿತಿ ಬದಲಾಯಿತಾ? ರಾಜ್ಯವು ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದೆಯಾ? ಅಲ್ಲಿ ರಾಜಕೀಯ ಪ್ರೇರಿತ ಘರ್ಷಣೆಗಳಿಗೆ ಹಾಗೂ ಕೋಮುಗಲಭೆಗಳಿಗೆ ಕಡಿವಾಣ ಬಿದ್ದಿದೆಯಾ? ಎಂದು ಪ್ರಶ್ನಿಸಿದರೆ ಖಂಡಿತವಾಗಿಯೂ ಇಲ್ಲ ಎನ್ನಬಹುದು. ಏಕೆಂದರೆ ಕಮ್ಯುನಿಸ್ಟರನ್ನು ಸೋಲಿಸಿ ಅಧಿಕಾರಕ್ಕೇರಿದ ಮಮತಾರ ಮನಸ್ಥಿತಿಯೇನೂ ಕಮ್ಯುನಿಸ್ಟರಿಗಿಂತ ಭಿನ್ನವಾಗಿರಲಿಲ್ಲ. ಬಂಗಾಳವು ತೋಳದ ಬಾಯಿಂದ ತಪ್ಪಿಸಿಕೊಂಡು ತಿಮಿಂಗಿಲದ ಬಾಯಿಗೆ ಬಿದ್ದಂತಾಯಿತು, ಅಷ್ಟೆ!

ಹೌದು, ಮಮತಾರ ಈ ೧೨ ವರ್ಷಗಳ ಅಧಿಕಾರಾವಧಿಯಲ್ಲಿ ಬಂಗಾಳ ಸಾಕಷ್ಟು ಕೋಮುಗಲಭೆಗಳನ್ನು, ರಾಜಕೀಯ ಪ್ರೇರಿತ ಹತ್ಯೆಗಳನ್ನು ಕಂಡಿದೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ತೀವ್ರವಾಗುವುದಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಮಮತಾ ನೇತೃತ್ವದ ಟಿಎಂಸಿ ಸರಕಾರವು ಮುಸ್ಲಿಮರ ತುಷ್ಟೀಕರಣಕ್ಕೆ ನಿಂತ ಪರಿಣಾಮ ಹಿಂದೂ ಗಳು ನರಕಯಾತನೆ ಅನುಭವಿಸುವಂತಾಗಿದೆ. ಸಾಲ ದೆಂಬಂತೆ, ಹಿಂದೂಗಳ ಹಬ್ಬ-ಹರಿದಿನಗಳ ಮೇಲೆ ಅನೇಕ ನಿಬಂಧನೆಗಳನ್ನು ಹೇರಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿ ದ್ದಾರೆ ಮಮತಾ ದೀದಿ.

ಒಟ್ಟಿನಲ್ಲಿ ಹಿಂದೂ ಗಳನ್ನು ಮತ್ತು ಹಿಂದೂ ಧರ್ಮದ ಆಚರಣೆಗಳನ್ನು ಕಂಡರೆ ನಖಶಿಖಾಂತ ಉರಿದುಬೀಳುವ ಮಮತಾ,
ಮುಸ್ಲಿಮರ ವಿಚಾರದಲ್ಲಿ ಮಾತ್ರ ಮೃದುಧೋರಣೆ ತಳೆದಿದ್ದಾರೆ. ಜತೆಗೆ ತಮ್ಮ ರಾಜಕೀಯ ಲಾಭಕ್ಕಾಗಿ ರಾಷ್ಟ್ರೀಯ ಭದ್ರತೆ ಯನ್ನು ಬದಿಗೊತ್ತಿ ಬಂಗಾಳದ ಗಡಿಯಲ್ಲಿ ಬಾಂಗ್ಲಾದ ಮುಸ್ಲಿಂ ನುಸುಳುಕೋರರನ್ನು ತಡೆಯುವಲ್ಲಿ ಉದಾಸೀನ ತೋರು ತ್ತಿದ್ದಾರೆ. ಇದರಿಂದಾಗಿ ಬಂಗಾಳದಲ್ಲಿ ಮುಸ್ಲಿಮರ ಸಂಖ್ಯೆ ಏರುತ್ತಿದೆ. ಈ ಬೆಳವಣಿಗೆಯಿಂದ ಸಹಜವಾಗಿಯೇ ಮತಬ್ಯಾಂಕಿನ
ದೃಷ್ಟಿಯಿಂದ ಟಿಎಂಸಿಗೆ ಲಾಭವಾಗುವುದರಿಂದ, ಬಾಂಗ್ಲಾ ನುಸುಳುಕೋರರ ವಿರುದ್ಧ ಮಮತಾ ಸರಕಾರ ಬಿಗಿಯಾದ ಕ್ರಮ ಕೈಗೊಳ್ಳದೆ ನುಣುಚಿಕೊಳ್ಳುತ್ತಿದೆ. ಜತೆಗೆ ಇಂಥ ನುಸುಳುಕೋರರಿಗೆ ಅಕ್ರಮವಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅನ್ನು ಟಿಎಂಸಿ ಸರಕಾರ ಒದಗಿಸುತ್ತಿದೆ ಎಂದು ಕಳೆದ ಒಂದು ದಶಕದಿಂದಲೂ ಬಿಜೆಪಿ ಆರೋಪಿಸುತ್ತಿದೆ.

ಆದರೂ ಮಮತಾ ಇಂಥ ಯಾವ ಆರೋಪಕ್ಕೂ ಬಗ್ಗುತ್ತಿಲ್ಲ! ಏತನ್ಮಧ್ಯೆ, ಬಂಗಾಳದಲ್ಲಿ ಚುನಾವಣಾ ಹಿಂಸಾಚಾರ ಗಳು ಎಗ್ಗಿಲ್ಲದೆ ನಡೆದಿವೆ, ನಡೆಯುತ್ತಲೇ ಇವೆ. ಮೊನ್ನಿನಪಂಚಾಯತಿ ಚುನಾವಣೆಗಳ ಸಂದರ್ಭದ ಹಿಂಸಾಚಾರವನ್ನು ಗಮನಿಸಿದರೆ ಅಫ್ಘಾನಿಸ್ತಾನದ ತಾಲಿಬಾನಿಗಳ ಆಡಳಿತ ನೆನಪಾಗುತ್ತಿದೆ. ಅಲ್ಲಂತೂ ಪ್ರಜಾಪ್ರಭುತ್ವ, ಸಂವಿಧಾನ ಎಂಬುದು ಸತ್ತು ಸಮಾಧಿ ಯಾಗಿವೆ.

ಆಫ್ಘಾನ್ ನಲ್ಲಿ ತಾಲಿಬಾನಿಗಳು ಮಾಡಿದ್ದೇ ಕಾನೂನು, ಆಡಿದ್ದೇ ಆಟ; ಅವರಿಗೆ ಷರಿಯಾ ಕಾನೂನಿನ ಮುಂದೆ ಬೇರೆಲ್ಲವೂ
ನಗಣ್ಯ. ಹಾಗಾಗಿ ತಾಲಿಬಾನಿಗಳ ಆಡಳಿತದಲ್ಲಿ ಅಮಾಯಕರು ಜೀವಭಯದಿಂದಲೇ ಬದುಕುತ್ತಿದ್ದಾರೆ. ಅದೇ ರೀತಿಯ ಪರಿಸ್ಥಿತಿ ನಮ್ಮ ಪಶ್ಚಿಮ ಬಂಗಾಳದಲ್ಲೂ ನಿರ್ಮಾಣವಾಗಿದೆಯಾ? ಗೊತ್ತಿಲ್ಲ. ಆದರೆ ಇತ್ತೀಚಿನ ಹಿಂಸಾಚಾರಗಳನ್ನು ಗಮನಿಸಿದಾಗ ಎಂಥವರೂ ಭಯಭೀತರಾಗುತ್ತಾರೆ. ಯಾಕೆ ಗೊತ್ತೇ? ಸೇನಾಪಡೆ, ಪೊಲೀಸ್ ಭದ್ರತೆಯ ನಡುವೆಯೂ ಚುನಾವಣೆಯ ದಿನ
ರಾಜಕೀಯದ ಜಿದ್ದಾಜಿದ್ದಿಗೆ ೧೫ ಮಂದಿ ಕೊಲೆಯಾಗಿರುವುದು. ಇದು ಯಾರಿಗೆ ತಾನೇ ಭಯ ಹುಟ್ಟಿಸುವುದಿಲ್ಲ? ಮಾತ್ರವಲ್ಲದೆ, ಪಂಚಾಯಿತಿ ಚುನಾವಣೆಯ ವೇಳೆ ರಾಜಕೀಯ ವೈಷಮ್ಯದಿಂದ ಹಲ್ಲೆಗೊಳಗಾದ ಜನರ ಸಂಖ್ಯೆಯ ಲೆಕ್ಕವಿಲ್ಲ.

ಮತಗಟ್ಟೆಯಲ್ಲೇ ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಯಾಗಿದ್ದು, ಮತಯಂತ್ರಗಳನ್ನೇ ಹೊತ್ತುಕೊಂಡು ಪರಾರಿ ಯಾಗಿದ್ದು, ಅಕ್ರಮ ಮತಪೆಟ್ಟಿಗಳನ್ನು ಚರಂಡಿಯಲ್ಲಿ ಹೂತಿಟ್ಟಿದ್ದು, ಬಾಂಬ್ ಸ್ಫೋಟ, ಕಂಡಕಂಡವರ ಮೇಲೆ ದಾಳಿಗಳು ಇವೆಲ್ಲವೂ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಅಡಿಯಲ್ಲಿ ಅಧಿಕಾರ ನಡೆಸುತ್ತಿರುವ ಟಿಎಂಸಿ ಸರಕಾರದ ಅವಧಿಯಲ್ಲಿ
ನಡೆಯುತ್ತಿರುವ ದಾಂಧಲೆಗಳು. ಒಟ್ಟಿನಲ್ಲಿ ಬಂಗಾಳದಲ್ಲಿ ಅರಾಜಕತೆಯೇ ಮನೆಮಾಡಿದೆ ಎನ್ನಬಹುದು.

ಈಗಿನ ಪಂಚಾಯತ್ ಚುನಾವಣೆಯ ಪೂರ್ವದಲ್ಲೂ ಸಾಕಷ್ಟು ಸಾವು-ನೋವು ಸಂಭವಿಸಿವೆ, ಆಗಲೂ ಅನೇಕ ಅಮಾಯಕರು ರಾಜಕೀಯ ಕಾರಣಗಳಿಂದ ಹಲ್ಲೆಗೊಳ ಗಾಗಿದ್ದಾರೆ. ೨೦೧೬ ಮತ್ತು ೨೦೨೧ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ಭುಗಿಲೆದ್ದಿತ್ತು. ಆಗಲೂ ಅನೇಕರು ರಾಜಕೀಯ ಗೂಂಡಾಗಳ ದಬ್ಬಾಳಿಕೆಗೆ ಸಿಲುಕಿ ಪ್ರಾಣ ಬಿಟ್ಟಿದ್ದರು. ಆದರೆ ಮಮತಾ ನೇತೃತ್ವದ ಟಿಎಂಸಿ ಸರಕಾರ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆರೋಪಿಗಳ ವಿರುದ್ಧ ಬಿಗಿಕ್ರಮ ಕೈಗೊಳ್ಳದೆ ಗೂಂಡಾಗಿರಿಯನ್ನು ಪೋಷಿಸುತ್ತಲೇ ಬಂತು.

ಪರಿಣಾಮ ರಾಜ್ಯದಲ್ಲಿ ಗೂಂಡಾಗಳ ಮೇಲಾಟ ಹೆಚ್ಚಾಯಿತು. ಹೀಗಾಗಿ ಅಲ್ಲಿನ ಪ್ರತಿ ಚುನಾವಣೆಯಲ್ಲೂ ನಾಗರಿಕರು ಜೀವಭಯದಿಂದಲೇ ಮತಚಲಾಯಿಸು ವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಆಗಿರುವ ಅವಮಾನವೇ ಸರಿ. ಪ್ರಧಾನಿ ಮೋದಿಯವರ ಪ್ರತಿ ನಿರ್ಧಾರವನ್ನೂ ವಿರೋಧಿಸಿ ಬೀದಿಗಿಳಿಯುವ ಕೆಲ ಬುದ್ಧಿಜೀವಿಗಳು,
ತಥಾಕಥಿತ ಹೋರಾಟಗಾರರು, ಪ್ರಗತಿಪರರು, ‘ಈಗ ಬಂಗಾಳದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ’  ಎಂದೇಕೆ ಹೋರಾಟಕ್ಕೆ ಇಳಿಯುತ್ತಿಲ್ಲ? ಬಂಗಾಳದವರೇ ಆದ ಕೆಲ ‘ಪೇಯ್ಡ್’ ಇತಿಹಾಸಕಾರರು ಮಮತಾ ಸರಕಾರದ ಅವಧಿಯಲ್ಲಿ ನಡೆಯುತ್ತಿರುವ ಇಂಥ ಅಪಸವ್ಯಗಳ ವಿರುದ್ಧ ಯಾಕೆ ತುಟಿಪಿಟಿಕ್ ಎನ್ನುತ್ತಿಲ್ಲ?ಬಹುಶಃ ಅವರ ಬಾಯಿಗೆ ಲಕ್ವ ಹೊಡೆದಿರುವುದೇ ಇದಕ್ಕೆ
ಕಾರಣವಿರಬಹುದೇ?!

ಯಾರು ಮಾತಾಡಲಿ ಬಿಡಲಿ, ಕಾಲ ಯಾರನ್ನೂಸುಮ್ಮನೆ ಬಿಡುವುದಿಲ್ಲ ಎನ್ನುವ ಮಾತಿದೆ. ಆದರೆ ಬಂಗಾಳದ ಜನರು ಇನ್ನೂ ಎಷ್ಟು ವರ್ಷ ಇಂಥ ಭಯದಿಂದಲೇ ಬದುಕಬೇಕು? ಎಂಬುದು ಸದ್ಯದ ಪ್ರಶ್ನೆ. ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರ,
ಕೋಮುಗಲಭೆ, ಕೊಲೆಗಳಿಂದಾಗಿ ಅಭಿವೃದ್ಧಿ ಎಂಬುದು ಕುಂಠಿತವಾಗಿದೆ, ಅನೇಕ ಕೈಗಾರಿಕೆಗಳು ಅಲ್ಲಿಂದ ಕಾಲ್ಕಿತ್ತಿವೆ. ಹೊಸ ಉದ್ದಿಮೆಗಳು ಅಲ್ಲಿಗೆ ಪ್ರವೇಶಿಸಲು ಹಿಂದೇಟು ಹಾಕುತ್ತಿವೆ. ಇಷ್ಟಾಗಿಯೂ, ಬಂಗಾಳದ ಪಂಚಾಯತಿ ಚುನಾವಣೆಯ ವೇಳೆ ಘಟಿಸಿದ ಹಿಂಸಾಚಾರವನ್ನು ‘ವಿರೋಧಪಕ್ಷಗಳ ಸಂಚು’ ಎಂದು ಆರೋಪಿಸುತ್ತ ತಮ್ಮನ್ನು ಸಮರ್ಥಿಸಿಕೊಳ್ಳುತ್ತಿರುವ
ಮಮತಾ ಬ್ಯಾನರ್ಜಿ, ಬಂಗಾಳಕ್ಕೆ ಏನು ಗತಿ ಕಾಣಿಸಲು ಹೊರಟಿದ್ದಾರೋ ಗೊತ್ತಿಲ್ಲ!

Leave a Reply

Your email address will not be published. Required fields are marked *

error: Content is protected !!