Saturday, 27th July 2024

ಆಗಬೇಕಿದೆ ಯುವ ಮನಸ್ಸುಗಳ ರೀಸೈಕ್ಲಿಂಗ್‌ !

ಶ್ವೇತಪತ್ರ

shwethabc@gmail.com

ಭಾರತದಲ್ಲಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನವಾಗಿ ಆಚರಿಸುತ್ತೇವೆ. ವಿವೇಕಾನಂದರ ಆದರ್ಶ-ಆಲೋಚನೆಗಳನ್ನು ಗೌರವಿಸುತ್ತ ಯುವಜನರು ಯಾವೆಲ್ಲ ರೀತಿಯಲ್ಲಿ ಸಕಾರಾತ್ಮಕ ಸಮಾಜ ನಿರ್ಮಾಣದೆಡೆಗೆ ತೊಡಗಿಸಿ ಕೊಳ್ಳಬೇಕು ಎಂಬುದು ರಾಷ್ಟ್ರೀಯ ಯುವದಿನದ ಪ್ರಮುಖ ಉದ್ದೇಶ.

ಇದು ವಿವೇಕಾನಂದರ ಜನ್ಮದಿನಕ್ಕಷ್ಟೇ ಸೀಮಿತವಾಗಬಾರದು, ಇದು ಪ್ರತಿದಿನದ ಆಲೋಚನೆ- ಆದರ್ಶವಾಗಬೇಕು. ಈ ಪ್ರಪಂಚದ ಅತಿ ದೊಡ್ಡ ಶಕ್ತಿಯೆಂದರೆ ಯುವಜನತೆಯೇ. ಹೀಗೆ ಅನೇಕ ಸಂದರ್ಭಗಳಲ್ಲಿ ಯುವ ಜನರ ಪ್ರಾಮುಖ್ಯದ ಬಗ್ಗೆ ಮಾತ ನಾಡುತ್ತೇವೆ; ಆದರೆ ಸರಿದಾರಿಯಲ್ಲಿ ನಡೆಯುವಂತೆ ಅವರನ್ನು ಗೈಡ್ ಮಾಡುತ್ತಿದ್ದೇವೆಯೇ? ಇದು ಪ್ರಶ್ನೆ.

ರಸ್ತೆಗಳಲ್ಲಿ ಬೈಕ್-ವೀಲಿಂಗ್ ಮಾಡುವ, ಶಿಕ್ಷಕರ ಮೇಲೆ ಕಸ ಸುರಿಯುವ ಹುಡುಗರನ್ನು ನೋಡಿದಾಗ, ಪಬ್ ಜೀ ರೀಚಾರ್ಜ್ ಮಾಡಿಸಿಕೊಡಲಿಲ್ಲ ವೆಂದು ತಂದೆಯನ್ನೇ ಇರಿದು ಕೊಂದ ಮಗನ, ಯಾವುದೋ ಕ್ರೈಮ್‌ನಲ್ಲಿ ಭಾಗಿಯಾದ ಯುವಕರ ಉದಾಹರಣೆಗಳನ್ನು ನೋಡಿದಾಗ ಯುವಜನತೆ ದಾರಿ ತಪ್ಪುತ್ತಿದೆಯೇ ಎಂದು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಾಗುತ್ತದೆ.

ಹದಿವಯಸ್ಸಿನ ಮನೋಭಾವ, ವರ್ತನೆ, ವ್ಯಕ್ತಿತ್ವ, ಆಲೋಚನೆ, ನಿರ್ಧಾರ ತೆಗೆದುಕೊಳ್ಳುವಿಕೆ, ಸಮಸ್ಯೆ ಬಗೆಹರಿಸಿ ಕೊಳ್ಳುವಿಕೆ, ಸಮಯ ನಿರ್ವಹಣೆ, ಮಾನವೀಯ ಮೌಲ್ಯಗಳು ಮತ್ತು ಆದರ್ಶಗಳನ್ನು ಮೈಗೂಡಿಸಿಕೊಳ್ಳುವಿಕೆಗಳಲ್ಲಿ ಯುವಜನ ಸೋಲುತ್ತಿದ್ದಾರೆ. ಮೊಬೈಲ್, ಇಂಟರ್‌ನೆಟ್ ಗೀಳಿನಲ್ಲಿ ಕಳೆದುಹೋಗಿದ್ದಾರೆ. ‘ವಿಕರ್ಷಣೆಗಳಿಂದಾಗಿ ಯುವಜನತೆ ಮೇಲಾಗುತ್ತಿರುವ ವಿನಾಶಕಾರಿ ಪರಿಣಾಮಗಳು’ ಎಂಬ ವಿಷಯದ ಕುರಿತಾಗಿ ಸಂಶೋಧನೆ ನಡೆಸಿರುವ ರೂವಾರಿಗಳು ಹೇಳಿರುವಂತೆ, ಮಾಡುತ್ತಿರುವ ಕೆಲಸದಿಂದ ನಮ್ಮನ್ನು ಸಂಪೂರ್ಣ ವಿಮುಖವಾಗಿಸುವುದೇ ಈ ವಿಕರ್ಷಣೆ. ಇದಕ್ಕೆ ಆಂತರಿಕ
ಮತ್ತು ಬಾಹ್ಯ ಎಂಬ ಎರಡು ಪ್ರಮುಖ ಕಾರಣಗಳಿವೆ.

ನಿದ್ರೆ ಮತ್ತು ವಿಳಂಬ ಪ್ರವೃತ್ತಿ ಆಂತರಿಕ ಕಾರಣಗಳಾದರೆ, ಟಿವಿ ರಿಯಾಲಿಟಿ ಷೋಗಳು, ಮೊಬೈಲ್ ಇಂಟರ್‌ನೆಟ್, ಲೈಂಗಿಕ
ಬಯಕೆಗಳು, ಪಾರ್ಟಿಗಳಲ್ಲಿ ಭಾಗವಹಿಸುವಿಕೆ ಬಾಹ್ಯ ಕಾರಣಗಳೆನಿಸಿಕೊಳ್ಳುತ್ತವೆ. ನಾವು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕೆಂದರೆ 7ರಿಂದ 8 ಗಂಟೆಗಳ ನಿದ್ದೆ ಅವಶ್ಯಕ. ಆದರೆ ಶೇ.17ರಷ್ಟು ಯುವಜನರ ನಿದ್ರಾವಧಿಯಲ್ಲಿ ವ್ಯತ್ಯಾಸವಾಗುತ್ತಿರುವ ಕಾರಣ ಜೈವಿಕ ಗಡಿಯಾರ ದಲ್ಲಿ ಬದಲಾವಣೆಗಳಾಗಿವೆ. ಪರಿಣಾಮ, ರೋಗನಿರೋಧಕ
ಶಕ್ತಿ ಕುಗ್ಗಿ, ರಕ್ತದೊತ್ತಡ ಜಾಸ್ತಿಯಾಗಿ ವ್ಯಕ್ತಿಯ ಸೃಜನಶೀಲತೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ.

ನಿಗದಿತ ಕೆಲಸಗಳನ್ನು ನಿರ್ಧಾರಗಳನ್ನು ವಿನಾಕಾರಣ ಮುಂದೂಡುವ ವಿಳಂಬ ಪ್ರವೃತ್ತಿಯು ಬದುಕಿನ ಮತ್ತು
ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪ್ರಭಾವ ಬೀರಿ, ಶಿಕ್ಷಣ, ಆರ್ಥಿಕತೆ, ಪರಸ್ಪರ ಸಂಬಂಧ, ನೆಮ್ಮದಿಗಳ ಮೇಲೆ
ಒತ್ತಡಪೂರ್ವಕ ಪರಿಣಾಮವನ್ನು ಉಂಟುಮಾಡುತ್ತದೆ. ವಿಳಂಬ ಪ್ರವೃತ್ತಿಯಿಂದಾಗಿ ಅಪರಾಧ ಪ್ರಜ್ಞೆ, ಅವಮಾನ,
ಹತಾಶೆ, ದುಃಖಗಳು ಕಾಡಿ, ನಮ್ಮ ಭಾವನೆ-ನೆಮ್ಮದಿ-ಮಾನಸಿಕ ಆರೋಗ್ಯವೂ ಹದಗೆಡುತ್ತವೆ. ಬಾಹ್ಯ ಕಾರಣಗಳಂತೂ ಯುವಜನರಲ್ಲಿ ಭ್ರಮೆಯ ಪ್ರಪಂಚವನ್ನೇ ಸೃಷ್ಟಿಸಿಬಿಟ್ಟಿವೆ.

ಕ್ಷಿಪ್ರವಾಗಿ ಖ್ಯಾತರಾಗಬೇಕು, ಎಲ್ಲರೂ ನಮ್ಮನ್ನು ಗುರುತಿಸುವಂತಾಗಬೇಕು ಎಂಬ ವಾಂಛೆಗಳಿಂದಾಗಿ ಇಂಥವರ ಮನಸ್ಸು ಕಲಸುಮೇಲೋಗರವಾಗಿಬಿಟ್ಟಿದೆ. ಹಾಡಿಯಲ್ಲಿ ಆರಾಮಾಗಿದ್ದ ಹುಡುಗನೊಬ್ಬ ಟಿವಿ ರಿಯಾಲಿಟಿ ಷೋ ಒಂದರ ಸಂಪರ್ಕಕ್ಕೆ ಬಂದು ವಾಸ್ತವಲೋಕ ಮತ್ತು ಭ್ರಮಾಲೋಕದ ನಡುವಿನ ವ್ಯತ್ಯಾಸಗಳನ್ನು ತಿಳಿಯದಾಗಿ ಖಿನ್ನತೆಗೆ ಜಾರಿ ಆತ್ಮಹತ್ಯೆ
ಮಾಡಿಕೊಂಡಿದ್ದು ಈಗಾಗಲೇ ಜಗಜ್ಜಾಹೀರು.

ಹೀಗೊಂದು ಕಥೆಯಿದೆ. ರಾಜಕುಮಾರನು ತನ್ನ ತಂದೆಯಾದ ಮಹಾರಾಜನನ್ನು ‘ನನಗೆ ನಿನ್ನ ಸಾಮ್ರಾಜ್ಯ ಬೇಕು’ ಎಂದು ಕೇಳಿದಾಗ, ‘ನಾನು ವಹಿಸುವ ಕೆಲಸವನ್ನು ಪರಿಪೂರ್ಣವಾಗಿ ಮಾಡಿ ಗೆದ್ದರೆ ಖಂಡಿತ ಸಾಮ್ರಾಜ್ಯವನ್ನು ನಿನಗೆ ವಹಿಸುತ್ತೇನೆ. ಇಲ್ಲಿಂದ ಏಳು ಸಮುದ್ರ ದಾಟಿಹೋದರೆ ಒಂದು ವಿಶೇಷವಾದ ಮಾವಿನಹಣ್ಣಿದೆ. ಅದನ್ನು ತರಬೇಕು, ಇಷ್ಟೇ ಕೆಲಸ’ ಎನ್ನುತ್ತಾನೆ ಮಹಾರಾಜ. ಇದಕ್ಕೊಪ್ಪಿ ಹೊರಡುವ ರಾಜಕುಮಾರನಿಗೆ ಮೊದಲ ಸಮುದ್ರದಲ್ಲಿ ವಜ್ರ-ವೈಡೂರ್ಯ ಸಿಗುತ್ತವೆ, ಅವನ್ನು ಹೆಕ್ಕಿಕೊಳ್ಳುತ್ತಾನೆ.

ಎರಡನೆಯ ಸಮುದ್ರದಲ್ಲಿ ಸಿಕ್ಕ ಯುದ್ಧ ಸಾಮಗ್ರಿಗಳನ್ನೂ ತೆಗೆದುಕೊಳ್ಳುತ್ತಾನೆ. ಮೂರನೆಯ ಸಮುದ್ರದಲ್ಲಿ ಕಂಡ ಸುಂದರಿಗೆ ಮಾರುಹೋಗುವ ರಾಜಕುಮಾರ ಅವಳನ್ನು ಮದುವೆಯಾಗಿ ಖುಷಿಯಿಂದಲೇ ಸಾಮ್ರಾಜ್ಯಕ್ಕೆ ಮರಳುತ್ತಾನೆ. ತನಗೆ ವಜ್ರ-ವೈಡೂರ್ಯ, ಯುದ್ಧ ಸಾಮಗ್ರಿ ಹಾಗೂ ಸುಂದರಿಯೊಬ್ಬಳು ಸಿಕ್ಕಿದ್ದನ್ನು ಮಹಾರಾಜನೊಂದಿಗೆ ಹೇಳಿಕೊಳ್ಳುತ್ತಾನೆ. ಆಗ ಮಹಾರಾಜ, ‘ವಿಶೇಷ ಮಾವಿನಹಣ್ಣು ತರಲು ನಿನಗೆ ಸವಾಲು ಹಾಕಿದ್ದೆ, ಆದರೆ ಅದನ್ನು ಬಿಟ್ಟು ಮಿಕ್ಕೆಲ್ಲವನ್ನೂ ತಂದಿದ್ದೀ ಯಲ್ಲಾ? ಹೀಗಿರುವಾಗ ನಿನಗೆ ಹೇಗೆ ನನ್ನ ಸಾಮ್ರಾಜ್ಯವನ್ನು ವಹಿಸಿಕೊಡಲಿ?’ ಎಂದು ಛೇಡಿಸುತ್ತಾನೆ.

ನಮ್ಮ ಯುವಜನರೂ ಈ ರಾಜಕುಮಾರನಂತೆಯೇ ವಿಕರ್ಷಣೆಗೆ ಒಳಗಾಗಿ ಗುರಿಯಿಂದ ವಿಮುಖರಾಗುತ್ತಿದ್ದಾರಾ
ಎನಿಸುತ್ತದೆ. ಸರಿಹಾದಿಯಲ್ಲಿ ಹೆಜ್ಜೆಹಾಕುವಂತೆ ಅವರನ್ನು ಗೈಡ್ ಮಾಡುವಲ್ಲಿ ಹೆತ್ತವರು, ಶಿಕ್ಷಕರು, ಹಿತೈಷಿಗಳ ಪಾತ್ರ
ಬಹಳ ಮುಖ್ಯ. ಜತೆಗೆ, ಕಲಿಕೆಯ ಪಾತ್ರವೂ ಬಹುಮುಖ್ಯವಾದುದು. ಅನುಭವಗಳ ಮೂಲಕ ವರ್ತನೆಯಲ್ಲಾಗುವ
ಶಾಶ್ವತ ಬದಲಾವಣೆಯೇ ಕಲಿಕೆ. ಇದರಲ್ಲಿರುವ ಬಗೆಗಳಲ್ಲಿ ‘ಅನುಕರಣಾ ಕಲಿಕೆ’ ಬಹುಮುಖ್ಯವಾದುದು. ಇದೇ ಅನುಕರಣೆ ಯಿಂದ ನಮ್ಮ ಯುವಜನರು ಪಾಶ್ಚಿಮಾತ್ಯ ವಿಷಯಗಳೆಡೆಗೆ ಆಕರ್ಷಿತರಾಗಿದ್ದಾರೆ, ಆದರೆ ನಮ್ಮ ನೆಲಕ್ಕೆ ಕನೆಕ್ಟ್
ಆಗಿದ್ದಾರೆ. ಇಲ್ಲಿ ವೈರುದ್ಧ್ಯ, ದ್ವಂದ್ವಗಳು ಹುಟ್ಟಿ ಅವರನ್ನು ದಾರಿ ತಪ್ಪಿಸುತ್ತವೆ.

ಪಾಶ್ಚಾತ್ಯರ ಜೀವನಶೈಲಿ, ಆಹಾರ, ಉಡುಗೆ-ತೊಡುಗೆ, ಮೋಜು-ಮಸ್ತಿಗಳಿಗೆ ನಾವು ಆಕರ್ಷಿತರಾಗುತ್ತೇವೆ; ಆದರೆ ಅವು ನಮ್ಮ ಸಾಮಾಜಿಕ ಶಿಸ್ತಿಗೆ ಒಳ ಪಡುವುದಿಲ್ಲ. ಹೀಗಾಗಿ ಭ್ರಮೆ ಮತ್ತು ವಾಸ್ತವದ ನಡುವಿನ ವ್ಯತ್ಯಾಸ ತಿಳಿಯದಷ್ಟು ಸಂವೇದನಾರಾಹಿತ್ಯ ರೂಪುಗೊಳ್ಳುತ್ತದೆ. ನಟನೊಬ್ಬ ಸಿನಿಮಾದಲ್ಲಿನ ತನ್ನ ತಾಯಿಯ ಪಾತ್ರ ತೀರಿಕೊಂಡಾಗ ಅದಕ್ಕೆ ಪ್ರತಿಕ್ರಿಯಿಸುವ ಭಾಗವಾಗಿ ವಿಪರೀತ ಅತ್ತು ಅತ್ತು, ನಿಜಜೀವನದಲ್ಲಿ ತನ್ನ ತಾಯಿ ತೀರಿಕೊಂಡಾಗ ಹೇಗೆ ಪ್ರತಿಕ್ರಿ ಯಿಸಬೇಕೆಂಬುದನ್ನೇ ಮರೆತುಬಿಟ್ಟಿದ್ದನಂತೆ!

ಅಂದರೆ, ಭ್ರಮೆಯ ಬದುಕು ಮತ್ತು ವಾಸ್ತವದ ಬದುಕಿನ ನಡುವಿನ ವ್ಯತ್ಯಾಸಗಳನ್ನು ಗುರುತಿಸುವ ಸೂಕ್ಷ್ಮತೆಯೇ ಅವನಲ್ಲಿ ಇಲ್ಲವಾಗಿ ಬಿಟ್ಟಿತ್ತು. ಈ ಸೂಕ್ಷ್ಮವನ್ನು ನಮ್ಮ ಯುವಜನತೆ ಅರ್ಥಮಾಡಿಕೊಳ್ಳಬೇಕಿದೆ. ಗ್ಲಾಮರ್ ಎಂಬ ಬಣ್ಣದ ಕನಸಿನ ಮರೀಚಿಕೆಯ ಹಿಂದೆ ಯುವಜನ ಓಡುತ್ತಿದ್ದಾರೆ. ನಮ್ಮಲ್ಲಿ ಅತ್ಯುತ್ತಮವಾದ ಶೈಕ್ಷಣಿಕ ವ್ಯವಸ್ಥೆ ಇದೆ, ಉದ್ಯಮವಿದೆ; ಆದರೆ ಯುವಜನರ ಮನಸ್ಸನ್ನು ಪರಿಪಕ್ವವಾಗಿಸುವ, ಅಚ್ಚುಕಟ್ಟಾಗಿ ಕಡೆದು ನಿಲ್ಲಿಸುವ ಅವಕಾಶಗಳು ಕಡಿಮೆ.

ಕಸದ ಮರುಬಳಕೆ, ನೀರಿನ ಮರುಬಳಕೆ, ಪ್ಲಾಸ್ಟಿಕ್‌ನ ಮರುಬಳಕೆಯ ಬಗ್ಗೆ ನಾವೆಲ್ಲ ಯಾವಾಗಲೂ ಮಾತನಾಡುತ್ತಿರುತ್ತೇವೆ; ಆದರೆ ನಮ್ಮ ಮನಸ್ಸಿನ ಮರುಬಳಕೆಯ ಬಗ್ಗೆ ಎಂದಾದರೂ ಯೋಚಿಸಿದ್ದೇವಾ ಎಂದು ನಮಗೆ ನಾವೇ ಪ್ರಶ್ನೆ ಮಾಡಿ ಕೊಳ್ಳೋಣ. ಮನಸ್ಸಿನ ಮರುಬಳಕೆಗೆ ‘ತ್ರೀ-ಎಚ್’ ಎಂಬ ಸೂತ್ರ ಬಹಳ ಮುಖ್ಯವಾಗುತ್ತದೆ.

Head to think-ಆಲೋಚಿಸುವ ಮಿದುಳು, Heart to feel- ಸಂವೇದನೆಯುಳ್ಳ ಹೃದಯ ಮತ್ತು Hands to work- ಕೆಲಸ ಮಾಡುವ ಕೈಗಳು. ಇದೇ ‘ತ್ರಿ-ಎಚ್’ ಸೂತ್ರ. ತುಂಬ ದೊಡ್ಡದಾಗಿ ಆಲೋಚನೆ ಮಾಡುವವರಿರುತ್ತಾರೆ, ಆದರೆ
ಅವರಿಗೆ ಸಂವೇದನೆಯೇ ಇರುವುದಿಲ್ಲ. ಬಹಳ ಸ್ವಾರ್ಥಿಗಳಾಗಿ ‘ನಾನು ನಾನು ನಾನು’ ಎಂಬ ಗೋಡೆ ಕಟ್ಟಿಕೊಂಡೇ ಬದುಕುತ್ತಿರುತ್ತಾರೆ. ಇನ್ನೊಂದು ಕಡೆ, ಜನ ಭಾವಜೀವಿಗಳಾಗಿರುತ್ತಾರೆ, ಆದರೆ ಯೋಚನೆ ಮಾಡುವುದಿಲ್ಲ. ಸದಾ ಕೊರಗುತ್ತಿರುತ್ತಾರೆ- ಅದು ಸರಿ ಇಲ್ಲ, ಇದು ಸರಿ ಇಲ್ಲ ಅಂತ.

ಕೆಲವರು ಯೋಚನೆಯನ್ನು ಮಾಡುತ್ತಾರೆ, ಸಂವೇದನಾಶೀಲರೂ ಆಗಿರುತ್ತಾರೆ; ಆದರೆ ಏನೂ ಕೆಲಸವನ್ನು ಮಾಡುವುದಿಲ್ಲ. ಇಂತಹ ಸಂದಿಗ್ಧತೆಯಲ್ಲಿರುವ ಜನರಿಗೆ ಬದುಕಿನ ಉದ್ದೇಶವನ್ನು ಅರ್ಥಮಾಡಿಸುವ ಅಗತ್ಯವಿದೆ. ಪ್ರಾಣಿಗಳು ಕೂಡ ಬದುಕುತ್ತವೆ, ನಾವು ಜೀವಿಸುತ್ತೇವೆ. ಬದುಕಿಗೂ ಜೀವಿಸುವಿಕೆಗೂ (concept of existing and living) ನಡುವಿನ
ಅರಿವು ಮೂಡಿಸಬೇಕಿದೆ.

ಕೊನೆಯ ಟಿಪ್ಪಣಿ: ಮನೆ-ಮನಸ್ಸುಗಳನ್ನು ಬೆಸೆಯುತ್ತ, ಬದುಕಿನ ಪ್ರೀತಿ ಯನ್ನು ನವೀಕರಿಸಲು ಇರುವ ಸಂದರ್ಭಗಳೇ ಹಬ್ಬಗಳು. ನಮ್ಮೆಲ್ಲರಿಗೂ ಬದುಕಿನ ಪಾಠ ಹೇಳಿಕೊಡಲು, ಖುಷಿ, ಚೇತನದ ಅನುಭವಗಳನ್ನು ನಮ್ಮದಾಗಿಸಲು ಗಣಪ ಮತ್ತೆ
ಬಂದಿದ್ದಾನೆ. ಗಣೇಶನ ಮೂರ್ತರೂಪದಲ್ಲಿ ವಿಶಿಷ್ಟತೆ ಇರುವುದು ನಮಗೆಲ್ಲ ಎದ್ದುಕಾಣುತ್ತದೆ. ಆನೆಮುಖದೊಂದಿಗೆ ಸಿಂಹಾ ಸನದಲ್ಲಿ ಕುಳಿತ ಗಣೇಶನ ಮುಖದಲ್ಲೊಂದು ಶಾಂತತೆ-ನೆಮ್ಮದಿಯಿದೆ.

ಹಣೆಯ ಮೇಲಿರುವ 3 ಗೆರೆಗಳು ಸೃಷ್ಟಿಕ್ರಿಯೆಯನ್ನು ಪ್ರತಿನಿಧಿಸುತ್ತವೆ. ಹಣೆಮಧ್ಯದ ಬಿಂದುವು ಮನಸ್ಸಿನ ಆಳದಲ್ಲಿನ ಚೇತ ನಾನುಭವವೇ ಆಗಿರುತ್ತದೆ. ಅವನ 2 ದಂತಗಳಲ್ಲಿ ಒಂದು ಪೂರ್ಣವಾಗಿದ್ದರೆ ಮತ್ತೊಂದು ಮುರಿದಿದೆ; ಬದುಕಿನ ವೈರುದ್ಧ್ಯ ಗಳಿಗೆ ನಾವು ಹೇಗೆ ಮುಖಾಮುಖಿಯಾಗಿ ಇರಬೇಕೆಂಬುದನ್ನು ಮುರಿದ ದಂತ ಸೂಚಿಸುತ್ತದೆ. ಗಣೇಶನ ಸೊಂಡಿಲು ಶಕ್ತಿ ಮತ್ತು ವಿವೇಚನೆಯ ಪ್ರತೀಕ. ದೊಡ್ಡ ಮರವನ್ನು ಉರುಳಿಸಲು ಆನೆ ಸೊಂಡಿಲನ್ನು ಬಳಸುತ್ತದೆ; ಹಾಗೆ ಸಣ್ಣ ಹುಲ್ಲುಕಡ್ಡಿ ಯ ಜತೆ ಆಟವನ್ನಾಡಲೂ ಅದೇ ಸೊಂಡಿಲನ್ನು ಬಳಸುತ್ತದೆ. ಯಾವುದನ್ನು ಹೇಗೆ ಬಳಸಬೇಕೆಂಬ ಪ್ರಜ್ಞಾ ಪೂರ್ವಕತೆಯ ಪಾಠ ಇಲ್ಲಿದೆ.

ಗಣೇಶನ ದೊಡ್ಡದಾದ ಕಿವಿಗಳು ಆತ್ಮದ ಅನುಸಂಧಾನದ ಜತೆಗೆ ಸಂಘರ್ಷಗಳಿಗೆ ತೆರೆದುಕೊಂಡಿರುತ್ತವೆ. ಅವನ ದೊಡ್ಡ
ತಲೆ ಪ್ರಕೃತಿಯೊಂದಿಗೆ ಲೀನವಾಗಿ ನಡೆಯುವುದರ ಪ್ರತಿಬಿಂಬವೇ ಆಗಿದೆ. ಅವನ ಒಂದು ಕೈಯಲ್ಲಿರುವ ಕೊಡಲಿಯು ಅeನವನ್ನು ತುಂಡರಿಸಿದರೆ, ಮತ್ತೊಂದು ಕೈಯಲ್ಲಿರುವ ಹಗ್ಗವು ಜ್ಞಾನವೃಕ್ಷವನ್ನು ಹತ್ತುವುದಕ್ಕೆ ಪೂರಕವಾಗಿರುತ್ತದೆ. ಮೂರನೆಯ ಕೈ ಶಿವನ ಅನುಗ್ರಹಕ್ಕೆ ಪಾತ್ರವಾಗಿದ್ದರೆ, ನಾಲ್ಕನೆಯ ಕೈ ಜ್ಞಾನದ ಫಲಗಳನ್ನು ಹೊಂದಿದೆ. ಬದುಕಲ್ಲಿ ಬರುವ ಎಂಥದೇ ಸಮಸ್ಯೆಯನ್ನು ಹೇಗೆ ಜೀರ್ಣಿಸಿಕೊಳ್ಳಬೇಕು ಎಂಬುದನ್ನು ಅವನ ದೊಡ್ಡಹೊಟ್ಟೆ ನೆನಪಿಸುತ್ತದೆ.

ನೆಲಕ್ಕೆ ತಾಗಿರುವ ಕಾಲು ಮತ್ತು ನೆಲದಿಂದ ಮೇಲಿರುವ ಕಾಲು ಸಂಪೂರ್ಣವಾದ ಬದುಕಿನ ಇರುವಿಕೆಯ ಅರಿವನ್ನು ಅರ್ಥೈಸುತ್ತವೆ. ವಿನಾಯಕನ ವಾಹನ ಮೂಷಿಕವು ನಿಯಂತ್ರಣದಲ್ಲಿರುವ ಮನಸ್ಸಿನ ಅಹಂ ಆಗಿದೆ. ‘ಸೆಲ್ಪ್-ಹೆಲ್ಪ್’ ಪುಸ್ತಕಗಳ ವ್ಯಕ್ತಿತ್ವ ವಿಕಸನ ಕೋರ್ಸುಗಳ, ಮೋಟಿವೇಷನಲ್ ಟ್ರೇನಿಂಗುಗಳ ಮೊರೆಹೋಗುವ ನಾವು, ಸಂಪೂರ್ಣ ವ್ಯಕ್ತಿತ್ವದ
ಗುಣಲಕ್ಷಣಗಳ ಸಾರವೇ ಆಗಿರುವ ಗಣೇಶನಿಂದ ಬದುಕಿನ ಪಾಠಗಳನ್ನು ಕಲಿಯಬೇಕಿದೆ, ಮನಸ್ಸಿನ ‘ರೀಸೈಕಲ್’ ಅನ್ನು
ಮಾಡಿಕೊಳ್ಳಬೇಕಿದೆ.

error: Content is protected !!