Sunday, 23rd June 2024

ತಲ ಕ್ರಮಾಂಕದ ಆಟಗಾರ

ಸಿನಿಗನ್ನಡ

ತುಂಟರಗಾಳಿ

ರಾಜ್ ಕುಟುಂಬದ ಹೊಸ ತಲೆಮಾರಿನ ಯುವರಾಜ್ ಕುಮಾರ್ ಅಭಿನಯವಿರುವಂಥದ್ದು ಅನ್ನೋ ಕಾರಣಕ್ಕೆ ಸುದ್ದಿ ಮಾಡಿದ್ದ ‘ಯುವ’ ಚಿತ್ರ, ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಈಗ ಓಟಿಟಿಯತ್ತ ಮುಖ ಮಾಡಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಹೇಳಿಕೊಳ್ಳುವಂಥ ಯಶಸ್ಸು ಕಾಣಲಿಲ್ಲ.
ರಾಜ್‌ಕುಮಾರ್ ಅವರ ಮೊಮ್ಮಗನ, ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರನ ಮೊದಲ ಸಿನಿಮಾ ಅನ್ನೋ ಕಾರಣಕ್ಕೆ ಒಂದಷ್ಟು ಜನ ಪ್ರೀತಿ ತೋರಿಸಿದ್ದು ಬಿಟ್ಟರೆ ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಇದಕ್ಕಿಂತ ಒಳ್ಳೆಯ ಸಿನಿಮಾ ಮಾಡಬಹುದಿತ್ತು ಅಂದವರೇ ಹೆಚ್ಚು. ಚಿತ್ರಮಂದಿರಗಳಲ್ಲೂ ಅಂಥಾ ದೊಡ್ಡ ಗಳಿಕೆಯನ್ನು ಮಾಡಲಿಲ್ಲ ‘ಯುವ’. ಈ ಸಿನಿಮಾದಿಂದ ಕನ್ನಡದಲ್ಲಿ ಹೀರೋ ಅಂತ ಹೇಳಿಕೊಳ್ಳೋಕೆ ಇನ್ನೊಬ್ಬ ಹುಡುಗ ಸಿಕ್ಕ ಅನ್ನೋದು ಬಿಟ್ರೆ ಬಾಕ್ಸ್ ಆಫೀಸ್‌ನಲ್ಲಿ ‘ಯುವ’ನ ಸದ್ದು ಅಷ್ಟೊಂದು ಜೋರಾಗಿ ಕೇಳಿಸಲಿಲ್ಲ. ಇನ್ನು ‘ಯುವ’ನಿಗಿಂತ ದೊಡ್ಡವರಂತೆ ಕಾಣುವ ಸಪ್ತಮಿ ಗೌಡ ಅವರನ್ನು ಈ ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆ ಮಾಡಿದ್ದರ ಬಗ್ಗೆಯೂ ಹಲವರಿಗೆ ತಕರಾರು ಇತ್ತು. ಅದೇನೇ ಇರಲಿ, ಇಷ್ಟು ದಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ‘ಯುವ’ ಈಗ ಓಟಿಟಿಗೆ ಬಂದಿದ್ದಾನೆ. ಅಮೆಜಾನ್ ಪ್ರೈಮ್‌ನಲ್ಲಿ ಈಗ ‘ಯುವ’ನ ಪ್ರದರ್ಶನ ಶುರು ಆಗಿದೆ. ಆದರೆ ಇದು ಉಚಿತ ಸ್ಟ್ರೀಮಿಂಗ್ ಅಲ್ಲ. ಸದ್ಯಕ್ಕೆ ಕೇವಲ ರೆಂಟಲ್ ಬೇಸಿಸ್ ಮೇಲೆ ಪ್ರೈಮ್‌ನಲ್ಲಿ ‘ಯುವ’ ಸಿಗುತ್ತಾನೆ. ಇನ್ನು ಚಿತ್ರಮಂದಿರಗಳಲ್ಲಿ ರೆಂಟ್ ಕಟ್ಟಿ ಉಪಯೋಗ ಇಲ್ಲ ಅಂತ ಗೊತ್ತಾದ ಮೇಲೆ ಓಟಿಟಿಗೆ ಬಂದಿರುವ ‘ಯುವ’ ಇಲ್ಲಿ ಒಳ್ಳೆ ರೆಂಟ್ ಕಲೆಕ್ಟ್ ಮಾಡುತ್ತಾ ಅಂತ ಕಾದು ನೋಡಬೇಕಾಗಿದೆ.

*

ಮಹೇಂದ್ರ ಸಿಂಗ್ ಧೋನಿ
ಏನ್ ಧೋನಿ ಅವ್ರೇ?
– ಹಲೋ ಕಾಲ್ ಮಿ, ತಲಾ…

ಯಾಕೆ? ಓವರ್ ಎಲ್ಲ ಮುಗಿದ್ಮೇಲೆ ಕೊನೆಯಲ್ಲಿ ಒಂದೆರಡು ಬಾಲ್ ಇದ್ದಾಗ, ಬ್ಯಾಟಿಂಗ್ ಆಡೋಕೆ ಬರ್ತೀರ ಅಂತ ನಿಮ್ಮನ್ನ ತಲ
ಕ್ರಮಾಂಕದ ಆಟಗಾರ ಅನ್ಬೇಕಾ?
– ರೀ, ನಾನು ತಳ ಮಟ್ಟದಿಂದ ಇಷ್ಟು ಎತ್ತರಕ್ಕೆ ಬೆಳೆದ ಆಟಗಾರ. ಅದಕ್ಕೆ ಜನ ನನ್ನ ತಲಾ ಅನ್ನೋದು.

ಓ ಹಂಗೆ, ಸರಿ, ನೀವು ಸಿಎಸ್ಕೆ ಟೀಮಿಗೆ ಆಡಿದಷ್ಟು ಇಂಟರೆಸ್ಟ್ ಕೊಟ್ಟು ಇಂಡಿಯಾ ಟೀಮಿಗೆ ಆಡ್ಲಿಲ್ಲ ಅಂತ ಕೆಲವರು ಆಡ್ಕೊತಾರಲ್ಲ?
– ಅಯ್ಯೋ, ಬ್ಲೂ ಜೆರ್ಸಿ, ಯೆಲ್ಲೋ ಜೆರ್ಸಿ ಎರಡೂ ಒಂದೇ ನಂಗೆ. ಕಾಮಾಲೆ ಕಣ್ಣಿಗೆ ಲೋಕ ಎಲ್ಲ ಹಳದಿ ಅಂತಾರಲ್ಲ ಹಂಗೆ ಕೆಲವರು ಮಾತಾಡ್ತಾರೆ . ಹೋಗ್ಲಿ ಬಿಡಿ.

ಸರಿ, ನೀವ್ಯಾಕೆ ಬೇರೆಯವರನ್ನ ಕ್ಯಾಪ್ಟನ್ ಮಾಡಿ, ಮತ್ತೆ ನಾಯಕತ್ವದಲ್ಲಿ ಮೂಗು ತೂರಿಸೋದು?
– ನೋಡಿ, ಕ್ಯಾಪ್ಟನ್ ಆದವನಿಗೆ ಗಾಯ ಆದ್ರೆ ಇನ್ನೊಬ್ಬ ಕ್ಯಾಪ್ಟನ್ಸಿ ವಹಿಸಿಕೊಳ್ತಾನೆ ತಾನೇ. ಇದೂ ಹಂಗೇ. ನಮ ಕ್ಯಾಪ್ಟನ್ ಹೆಸರೇ ಗಾಯಕ್ವಾಡ್ ಅಲ್ವಾ, ಅದಕ್ಕೇ ನಾನ್ ಕ್ಯಾಪ್ಟನ್ಸಿ ಮಾಡ್ತೀನಿ.

ಸರಿ, ಸರಿ. ಅಂದಹಾಗೆ,  ಐಪಿಎಲ್‌ನಿಂದ ನೀವು ರಿಟೈರ್ ಆಗೋದು ಯಾವಾಗ?
– ನೋಡ್ರೀ, ಇದೇ ನನ್ನ ಲಾಸ್ಟ್ ಎಲೆಕ್ಷನ್, ಇದೇ ನನ್ನ ಲಾಸ್ಟ್ ಐಪಿಎಲ್ ಅನ್ನೋದೆಲ್ಲಾ ಒಂಥರಾ ಸ್ಪೆಷಲ್ ಹೇಳಿಕೆಗಳು. ಅವನ್ನ ಕೆದಕೋಕೆ ಹೋಗಬಾರದು.

(ಕಾಲ್ಪನಿಕ ಸಂದರ್ಶನ)

*

ನೆಟ್ ಪಿಕ್ಸ್
ಎಂಜಿನಿಯರಿಂಗ್ ಓದಿದ್ದ ಖೇಮು ಮತ್ತು ಸೋಮು ಒಂದ್ ಇಂಟರ್ವ್ಯೂಗೆ ಹೋಗಿದ್ರು. ಇಬ್ಬರಿಗೂ ಎಷ್ಟೇ ಹುಡುಕಿದ್ರೂ ಕೆಲಸ ಸಿಗ್ತಾ ಇರಲಿಲ್ಲ. ಅದರಲ್ಲೂ ಖೇಮುಗಂತೂ ಕೆಲಸದ ಅವಶ್ಯಕತೆ ತುಂಬಾ ಇತ್ತು. ಪ್ರತಿಬಾರಿಯಂತೆ ಈ ಬಾರಿ ಯೂ ಯಾರು ಮೊದಲು ಒಳಗೆ ಹೋಗಿ ಬರ್ತಾರೋ ಅವರು, ಸಂದರ್ಶನ ಕೊಠಡಿಯಿಂದ ಹೊರಗೆ ಬಂದ ಮೇಲೆ ಅಲ್ಲಿ ಕೇಳಿದ ಪ್ರಶ್ನೆಗಳನ್ನು ಇನ್ನೊಬ್ಬರಿಗೆ ಹೇಳಬೇಕು ಅಂತ ಕರಾರು ಆಗಿತ್ತು.

ಸರಿ ಇಬ್ಬರೂ ಹೋಗಿ ಇಂಟರ್ವ್ಯೂಗೆ ರೆಡಿ ಆಗಿ ಕೂತರು. ಈ ಬಾರಿ ಮೊದಲು ಸೋಮುವನ್ನು ಒಳಗೆ ಕರೆದರು. ಒಳಗೆ ಹೋಗಿ ಕೂತ ಸೋಮುವನ್ನು ಸಂದರ್ಶಕರು ಪ್ರಶ್ನೆ ಮಾಡಲು ಶುರುಮಾಡಿದರು. ಎಲ್ಲಾ ವೈಯಕ್ತಿಕ ವಿವರಗಳನ್ನು ಕೇಳಿದ ಮೇಲೆ ನಾಲೆಡ್ಜ್ ಬೇಸ್ಡ್ ಪ್ರಶ್ನೆಗಳ ಸರದಿ ಆರಂಭವಾಯಿತು.
ಸಂದರ್ಶಕರು ಶುರು ಮಾಡಿದರು. ‘ನೀವು ಒಂದು ರೈಲಿನಲ್ಲಿ ಹೋಗ್ತಾ ಇದ್ದೀರಾ. ಅದರ ಕಂಪಾರ್ಟ್‌ಮೆಂಟ್ ತುಂಬಾ ಬಿಸಿ ಆಗೋಕೆ ಶುರುವಾಗಿದೆ.
ಆಗ ನೀವು ಏನು ಮಾಡುತ್ತೀರಿ?’. ‘ನಾನಿರುವ ಕಂಪಾರ್ಟ್‌ಮೆಂಟ್‌ನ ಕಿಟಕಿ ತೆಗೀತೀನಿ’.

‘ಸರಿ, ಈಗ ಕಿಟಕಿಯ ವಿಸ್ತೀರ್ಣ ೧.೫ ಚದರ ಮೀಟರ್ ಅಂದುಕೊಳ್ಳೋಣ. ಕಂಪಾರ್ಟ್‌ಮೆಂಟ್‌ನ ವಾಲ್ಯೂಮ್ ೧೨ ಮೀಟರ್ ಕ್ಯೂಬ್ ಇದೆ, ಟ್ರೈನ್ ಗಂಟೆಗೆ ೮೦ ಕಿಲೋಮೀಟರ್ ವೇಗದಲ್ಲಿ ಉತ್ತರಮುಖವಾಗಿ ಚಲಿಸುತ್ತಿದೆ. ಗಾಳಿ ದಕ್ಷಿಣದ ಕಡೆಯಿಂದ ೫ ಕಿ.ಮೀ. ವೇಗದಲ್ಲಿ ಬೀಸುತ್ತಿದೆ. ಹಾಗಾದ್ರೆ, ನೀವು ಕಿಟಕಿ ತೆಗೆದ ಮೇಲೆ ಕಂಪಾರ್ಟ್‌ಮೆಂಟ್ ಕೂಲ್ ಆಗೋಕೆ ಎಷ್ಟು ಹೊತ್ತು ಬೇಕು?’.

ಸೋಮುಗೆ ಪಿತ್ತ ನೆತ್ತಿಗೇರಿ, ‘ಇದಕ್ಕಿಂತ ಕೆಲಸ ಕೊಡಲ್ಲ ಅಂತ ನೇರವಾಗಿ ಹೇಳಿ’ ಅಂತ ಬಯ್ದು ಎದ್ದು ಬಂದ. ಹೊರಗೆ ಬಂದ ಸೋಮುವಿನ ಮುಖ ನೋಡಿದ ಖೇಮುಗೆ ಗಾಬರಿ ಆಯ್ತು. ಆದ್ರೂ, ‘ಏನ್ ಪ್ರಶ್ನೆ ಕೇಳಿದ್ರು?’ ಅಂದಿದ್ದಕ್ಕೆ ಸೋಮು ಅವರು ಕೇಳಿದ ಪ್ರಶ್ನೆ ಹೇಳಿದ. ಖೇಮು ಅದಕ್ಕೆ ಉತ್ತರ ಏನು ಅಂತ ಹುಡುಕಿಕೊಳ್ಳುವಷ್ಟರಲ್ಲಿ ಒಳಗಿನಿಂದ ಅವನಿಗೆ ಕರೆ ಬಂತು. ಒಲ್ಲದ ಮನಸ್ಸಿನಿಂದಲೇ ಖೇಮು ಒಳಗೆ ಹೋದ. ಮಾಮೂಲಿ ಪ್ರಶ್ನೆಗಳ ಸರದಿ ಮುಗಿಯಿತು.

ಆಕ್ಚುವಲ್ ಪ್ರಶ್ನೆಗಳು ಶುರುವಾದ್ವು. ‘ನೀವು ಒಂದು ರೈಲಿನಲ್ಲಿ ಹೋಗ್ತಾ ಇದ್ದೀರಾ. ಅದರ ಕಂಪಾರ್ಟ್‌ಮೆಂಟ್ ತುಂಬಾ ಬಿಸಿ ಆಗೋಕೆ ಶುರುವಾಗಿದೆ.
ಆಗ ನೀವು ಏನು ಮಾಡುತ್ತೀರಿ?’. ‘ನಾನು, ನನ್ನ ಕೋಟ್ ಬಿಚ್ತೀನಿ’ ‘ಆಗ್ಲೂ ಬಿಸಿ ಕಮ್ಮಿ ಆಗದೇ ಇದ್ರೆ?’ ‘ನಾನು, ನನ್ನ ಶರ್ಟ್ ಬಿಚ್ತೀನಿ’ ‘ಆಗ್ಲೂ ಬಿಸಿ ಕಮ್ಮಿ ಆಗದೇ ಇದ್ರೆ?’ ‘ಪ್ಯಾಂಟ್ ಬಿಚ್ತೀನಿ’ ‘ಆಗ್ಲೂ ಬಿಸಿ ಕಮ್ಮಿ ಆಗದೇ ಇದ್ರೆ?’ ‘ಅವ್ನಜ್ಜಿ ಅದೇನಾರಾ ಆಗ್ಲಿ, ಬೇಕಿದ್ರೆ ಚಡ್ಡಿನೂ ಬಿಚ್ತೀನಿ. ಆದ್ರೆ ಆ ಕಿಟಕಿ ಮಾತ್ರ ತೆಗೆಯಲ್ಲ.

*

ಲೈನ್ ಮ್ಯಾನ್
೩ ಕೆರೆಗಳಿಗೆ ಕಾಯಕಲ್ಪ ಮಾಡಿ ನೀರು ತುಂಬಿಸಿದ ಆರ್‌ಸಿಬಿ
– ಆಡುವಾಗ ಏಳು ಕೆರೆ ನೀರು ಕುಡಿದವರಂತೆ ಆಡಲ್ಲವಾದ್ರೂ, ೩ ಕೆರೆಗಳಿಗ ನಾವೇ ಕುಡಿಸಿದ್ದೇವೆ

ಐಪೋನ್ ಪ್ರಿಯರ ಪ್ರಕಾರ

– ‘ಎ’ ಫಾರ್ ಆಪಲ್ ಅಲ್ಲ, ‘ಐ’ ಫಾರ್ ಆಪಲ್

ವಾಹನಗಳಿಗೆ ತಬಲಾ, ಪಿಟೀಲು, ಕೊಳಲು ಸೌಂಡ್ ಬರೋ ಹಾರ್ನ್
– ಇನ್ಮೇಲೆ ಎಲ್ರೂ ಕಚೇರಿಗೆ ಹೋಗೋವಾಗ್ಲೇ ಕಛೇರಿ ನೋಡ್ಕಂಡ್ ಹೋಗಬಹುದು.

ಬಿಜೆಪಿ ನಾಯಕರು ಜ್ಯೋತಿಷ್ಯ ಕೇಳೋಕ್ ಹೋಗಲ್ಲ
– ಯಾಕಂದ್ರೆ ಜ್ಯೋತಿಷಿಗಳು ‘ಕೈ’ ನೋಡಿ ಭವಿಷ್ಯ ಹೇಳ್ತಾರೆ

ಜಾಸ್ತಿ ಹೈಟ್ ಇರೋ ಜಾಗದಲ್ಲಿ ನಿಂತಿದ್ದಾಗ ಆಗೋ ಭಯ, ಫೋಬಿಯಾ ಆಫ್ ಹೈಟ್ಸ್. ಆದ್ರೆ, ನೆಲದ ಮೇಲೆ ನಿಂತಾಗಲೂ ಭಯ ಆದ್ರೆ, ಅದು

-‘ಹೈಟ್ಸ್’ ಆಫ್ ಫೋಬಿಯಾ

ಹೆಂಡತಿಗೆ ಪ್ರಾಮಿಸ್ ಮಾಡಿದ ಟೈಮಿಗೆ ಸರಿಯಾಗಿ ಉಂಗುರ ಕೊಡಿಸದೆ ಕಾಯಿಸಿದ್ರೆ, ಅದು

– ಬಫ‘ರಿಂಗ್’

ಮೂತ್ರಪಿಂಡದಲ್ಲಿರುವ ಕಲ್ಲು ತೆಗೆಯುವ ಆಪರೇಶನ್ ಮಾಡಿದ ಮೇಲೆ ರೋಗಿಗೆ ಆಗುವ ಮೂತ್ರ ವಿಸರ್ಜನೆ
– ‘ಸುಸೂ’ತ್ರ

ಗಾಂಧಿನಗರ talks

‘ಸರ್, ಏನ್ ಕೆಲ್ಸ ಮಾಡ್ತಿದ್ದೀರಾ ನೀವು?’
-‘ನಾನೊಬ್ಬ ಡಿಟೆಕ್ಟಿವ್’

‘ಮತ್ತೆ, ಗಾಂಧಿನಗರದಲ್ಲಿ ಏನ್ ಮಾಡ್ತಾ ಇದ್ದೀರಾ?’
-‘ಸಿನಿಮಾ ಮಾಡೋಕೆ ಕಥೆ ಹುಡುಕ್ತಾ ಇದ್ದೀನಿ, ಅದಾದ್ಮೇಲೆ ಪ್ರೊಡ್ಯೂಸರ್ ಹುಡುಕ್ತೀನಿ’

ಕ್ರಿಕೆಟ್ ಟೀಮ್ ಸೆಲೆಕ್ಷನ್ ‘ಅವ್ನ್ ಲಾಸ್ಟ್ ಮ್ಯಾಚ್ ಚೆನ್ನಾಗೇ ಆಡಿದ್ನಲ್ಲ, ಅವನನ್ನ ಯಾಕ್ ಬಿಟ್ರು?’
-‘ಅವ್ನಿಗೆ ಪೈಲ್ಸ್ ಆಗಿದೆಯಂತೆ, ಅದಕ್ಕೇ ಕೂರ‍್ಸಿದಾರೆ’

-‘ಪೈಲ್ಸ್ ಆದ್ರೆ ಕೂರ‍್ಸಂಗಿಲ್ಲ, ಆಡಿಸ್ಬೇಕು ತಾನೇ?’

Leave a Reply

Your email address will not be published. Required fields are marked *

error: Content is protected !!