ವರದಿ: ಮಶಾಕ ಬಳಗಾರ
ಕೊಲ್ಹಾರ: ಕಲೆ ಅಲಂಕಾರಿಕ ವಸ್ತುವಲ್ಲ, ಕಲೆ ಎನ್ನುವುದು ಒಬ್ಬ ಕಲಾವಿದನ ಸೃಜನಶೀಲತೆಯ ಅಭಿವ್ಯಕ್ತಿ ಹಾಗೂ ಭಾವ ಪ್ರಚೋದನೆಯಾಗಿರಬೇಕು ಎಂಬ ಚಿತ್ರಕಲಾವಿದ ಭೋಪಲೆಯವರ ನುಡಿಯಂತೆ ಪಟ್ಟಣದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಚಿತ್ರಕಲಾ ಶಿಕ್ಷಕ ಸಲೀಂ ಡಾಂಗೆ ತಮ್ಮ ಕುಂಚದಲ್ಲಿ ಸಾಮಾಜಿಕ ಕಳಕಳಿಯ, ಸಮಾಜಮುಖಿ ಚಿಂತನೆಯುಳ್ಳ ಚಿತ್ರಗಳನ್ನು ರಚಿಸುತ್ತಾ ಸಮಕಾಲೀನ ಪ್ರಮುಖ ವಿಷಯಗಳನ್ನು ಚಿತ್ರಗಳ ಮೂಲಕವೇ ಪ್ರಸ್ತುತಪಡಿಸುತ್ತಾ ಸಂವೇದನಾಶೀಲ ಚಿತ್ರಕಾರರಾಗಿ ಪ್ರಸಿದ್ಧ ಪಡೆದಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿ ಪಟ್ಟಣದವರಾದ ಸಲೀಂ ಡಾಂಗೆ ಪಟ್ಟಣದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯಲ್ಲಿ ಚಿತ್ರ ಕಲಾ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿ ಪ್ರತಿ ಹೊಸ ವರ್ಷದಂದು ವಿವಿಧ ಬಗೆಯ ಸಮಾಜಕ್ಕೆ ಪೂರಕವಾಗುವಂತಹ ಚಿತ್ರಗಳನ್ನು ರಚಿಸುವ ಮೂಲಕ ಸಮಾಜವನ್ನು ಕಟ್ಟುವ ಹಾಗೂ ತಿದ್ದುವ ಕಾರ್ಯ ಮಾಡುತ್ತಿದ್ದಾರೆ.
ಸಮಾಜಮುಖಿ ಚಿಂತನೆಯುಳ್ಳ ಚಿತ್ರಗಳು: ಪರಿಸರ ರಕ್ಷಣೆ, ಸ್ವಚ್ಛತೆಯ ಮಹಾತ್ವ, ಭಾವೈಕ್ಯತೆ, ಮಹಿಳಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಶಿಕ್ಷಣದ ಮಹತ್ವ, ಮಕ್ಕಳ ರಕ್ಷಣೆ, ಬಾಲಕಾರ್ಮಿಕ ಪದ್ಧತಿ ವಿರೋಧ ಹಾಗೂ ಪ್ರಸಕ್ತ ವರ್ಷ ಕೂಡುಕುಟುಂಬದಲ್ಲಿ ಸಾಮರಸ್ಯದ ಕೊರತೆ ಮತ್ತು ನಶಿಸುತ್ತಿರುವ ಕುಟುಂಬದ ಮೌಲ್ಯಗಳನ್ನು ಗಮನದಲ್ಲಿಟ್ಟು ಕೊಂಡು ಅವಿಭಕ್ತ ಕುಟುಂಬದ ಮೌಲ್ಯಗಳನ್ನು ಎತ್ತಿ ಹಿಡಿಯುವ ಚಿತ್ರ ರಚಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿ ದ್ದಾರೆ.
ಅಭಿನಂದನಾ ಪತ್ರಗಳು: ತಮ್ಮ ಕುಂಚದಲ್ಲಿ ಅರಳಿದ ಕಲೆಯನ್ನು ದೇಶದ ಹಾಗೂ ರಾಜ್ಯದ ಪ್ರಮುಖ ರಾಜಕೀಯ ನಾಯಕರುಗಳಿಗೆ, ಸಾಹಿತಿಗಳಿಗೆ, ಬುದ್ಧಿಜೀವಿಗಳಿಗೆ ಕಳಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ. ಪ್ರತಿ ವರ್ಷ ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಸಾಹಿತಿಗಳಿಂದ ಪ್ರಶಂಸನಾ ಹಾಗೂ ಅಭಿನಂದನಿಯ ಪತ್ರಗಳು ಚಿತ್ರಕಲಾ ಶಿಕ್ಷಕ ಸಲೀಂ ಡಾಂಗೆ ಅವರಿಗೆ ಬರುತ್ತಿವೆ.
ಅಪಾರ ಮೆಚ್ಚುಗೆ: ಚಿತ್ರಕಲಾ ಶಿಕ್ಷಕ ಸಲೀಂ ಡಾಂಗೆ ಅವರ ಕುಂಚದಲ್ಲಿ ಅರಳಿದ ಪ್ರತಿ ಕಲೆಯಲ್ಲೂ ಅಪಾರವಾದ ಸೃಜನಶೀಲತೆಯ ತಿರುಳು ಅಡಕ ವಾಗಿರುತ್ತದೆ ಇದು ಕಲಾಭಿಮಾನಿಗಳ ಪ್ರಶಂಸೆಗೆ ಹಾಗೂ ಮೆಚ್ಚುಗೆಗೆ ಪಾತ್ರವಾಗಿರುತ್ತದೆ.