Thursday, 12th December 2024

Priyamani: ಮದುವೆ ಬಳಿಕ ನಾನು ಇಸ್ಲಾಂಗೆ ಮತಾಂತರ ಆಗಿಲ್ಲ, ಆದರೂ…; ನಟಿ ಪ್ರಿಯಾಮಣಿ ಹೇಳಿದ್ದೇನು?

Priyamani

ಗೆಳೆಯ ಮುಸ್ತಫಾ ರಾಜ್ (Mustafa Raj) ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ತೀವ್ರ ಟ್ರೋಲ್‌ಗೆ ಗುರಿಯಾಗಿದ್ದ ನಟಿ ಪ್ರಿಯಾಮಣಿ (Priyamani) ಬಗ್ಗೆ ಟೀಕೆಗಳ ಸರಣಿ ಮುಂದುವರಿದಿದೆ. ಈದ್ ಬಗ್ಗೆ ಪೋಸ್ಟ್ ಮಾಡಿ ಮತ್ತೆ ಟ್ರೋಲ್ ಆಗಿರುವ ನಟಿ ಮತ್ತೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ಹಲವಾರು ಮಂದಿ ಇವರನ್ನು ಟೀಕಿಸಿದ್ದು, ನಿಮ್ಮ ಮಕ್ಕಳು ಭಯೋತ್ಪಾದಕರಾಗುತ್ತಾರೆ ಎಂದು ಹೇಳಿದ್ದಾರೆ.

ನಟಿ ಪ್ರಿಯಾಮಣಿ ಅವರು 2016ರಲ್ಲಿ ತಮ್ಮ ದೀರ್ಘಕಾಲದ ಗೆಳೆಯ ಮುಸ್ತಫಾ ರಾಜ್ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ ಸಾಕಷ್ಟು ಟ್ರೋಲ್‌ಗೆ ಗುರಿಯಾಗಿದ್ದರು.

ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯವೊಂದರಲ್ಲಿ ಭೇಟಿಯಾಗಿದ್ದರು. ಧರ್ಮದ ಕಾರಣದಿಂದ ಇವರಿಬ್ಬರ ಸಂಬಂಧ ತೀವ್ರ ಟೀಕೆಗೆ ಗುರಿಯಾಗಿದೆ. 2017ರಲ್ಲಿ ಮದುವೆಯಾದರೂ ಅವರನ್ನು ಟೀಕಿಸುವುದನ್ನು ಕೆಲವರು ಮುಂದುವರಿಸಿದ್ದಾರೆ.

ಈ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಿಯಾಮಣಿ ಹೇಳಿಕೊಂಡಿದ್ದು, ಹಲವಾರು ಮಂದಿ ಈಗಲೂ ತಮ್ಮ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿ ಟ್ರೋಲ್ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಮಣಿ ತಮ್ಮ ನಿಶ್ಚಿತಾರ್ಥದ ಘೋಷಣೆ ಮಾಡಿದ್ದರು. ಫೇಸ್‌ಬುಕ್‌ನಲ್ಲಿ ತಮ್ಮ ನಿಶ್ಚಿತಾರ್ಥದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಕುಟುಂಬದ ಒಪ್ಪಿಗೆ ಪಡೆದು ವಿವಾಹವಾಗುತ್ತಿರುವುದಾಗಿ ತಿಳಿಸಿದ್ದರು ಬಳಿಕ ಹಲವಾರು ದ್ವೇಷ ಪೂರಿತ ಕಾಮೆಂಟ್ ಗಳನ್ನು ಪಡೆದಿದ್ದಾರೆ.

ಈ ಬಗ್ಗೆ ನೆನಪಿಸಿಕೊಂಡ ಪ್ರಿಯಾಮಣಿ, ಜನರು ನನಗೆ ಸಂದೇಶ ಕಳುಹಿಸುತ್ತಿದ್ದರು. ಜಿಹಾದ್, ಮುಸ್ಲಿಂ, ನಿಮ್ಮ ಮಕ್ಕಳು ಭಯೋತ್ಪಾದಕರಾಗುತ್ತಾರೆ ಎಂದು ಹೇಳಿರುವುದಾಗಿ ತಿಳಿಸಿದರು.

ಈ ಅನುಭವವು ತಮ್ಮ ಮೇಲೆ ಪರಿಣಾಮ ಬೀರಿದೆ. ಇದು ನಿರಾಶಾದಾಯಕವಾಗಿದೆ. ಜಾತಿ ಅಥವಾ ಧರ್ಮದ ಹೊರಗೆ ಮದುವೆಯಾಗಿರುವ ಅನೇಕ ಟಾಪ್ ನಟರಿದ್ದಾರೆ. ಅವರು ಯಾವ ಧರ್ಮ ಪಾಲನೆ ಮಾಡುತ್ತಿದ್ದಾರೆ ಎಂದಲ್ಲ. ಅವರು ತಮ್ಮ ಧರ್ಮವನ್ನು ಲೆಕ್ಕಿಸದೆ ಇನ್ನೊಬ್ಬರನ್ನು ಪ್ರೀತಿಸಿದರು.

ಪ್ರಿಯಾಮಣಿ ಅವರು ಇತ್ತೀಚೆಗೆ ಈದ್ ಬಗ್ಗೆ ಪೋಸ್ಟ್ ಮಾಡಿದ ಅನಂತರ ಯಾರೋ ಒಬ್ಬರು ಅವರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಆರೋಪಿಸಿರುವುದಾಗಿ ನಟಿ ತಿಳಿಸಿದ್ದಾರೆ.

ಇದಕ್ಕೆ ಉತ್ತರ ನೀಡಿರುವ ಪ್ರಿಯಾಮಣಿ, ನಾನು ಮತಾಂತರಗೊಂಡಿದ್ದೇನೆ ಎಂದು ನಿಮಗೆ ಹೇಗೆ ಗೊತ್ತು? ಇದು ನನ್ನ ನಿರ್ಧಾರ ಎಂದು ಅವರು ಹೇಳಿದರು.

ತಾನು ಮತಾಂತರಗೊಳ್ಳುವುದಿಲ್ಲ ಎಂದು ತಮ್ಮ ಮದುವೆಗೂ ಮುನ್ನ ಮುಸ್ತಫಾಗೆ ತಿಳಿಸಿದ್ದಾಗಿ ಅವರು ಹೇಳಿದರು.
ನಾನು ಹುಟ್ಟಿನಿಂದ ಹಿಂದೂ ಆಗಿದ್ದೇನೆ ಮತ್ತು ನನ್ನ ನಂಬಿಕೆಯನ್ನು ಯಾವಾಗಲೂ ಅನುಸರಿಸುತ್ತೇನೆ ಎಂದಿರುವ ಅವರು, ಪರಸ್ಪರರ ನಂಬಿಕೆಗಳನ್ನು ಅನುಸರಿಸಲು ನನ್ನ ಮೇಲೆ ಯಾವುದೇ ಒತ್ತಡವಿಲ್ಲ ಎಂದು ತಿಳಿಸಿದ್ದಾರೆ.

ಈದ್ ಪೋಸ್ಟ್‌ ಬಳಿಕ ನಾನು ನವರಾತ್ರಿಗೆ ಏಕೆ ಪೋಸ್ಟ್ ಮಾಡಲಿಲ್ಲ ಎಂದು ಕೆಲವರು ಪ್ರಶ್ನಿಸಿದ್ದಾರೆ. ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ತಿಳಿದಿರಲಿಲ್ಲ. ಆದರೆ ನಾನು ಇನ್ನು ಮುಂದೆ ಅದರಿಂದ ಪ್ರಭಾವಿತನಾಗುವುದಿಲ್ಲ. ಅಂತಹ ನಕಾರಾತ್ಮಕತೆಗೆ ಗಮನ ಕೊಡದಿರಲು ನಾನು ನಿರ್ಧರಿಸುತ್ತೇನೆ ಎಂದು ತಿಳಿಸಿದ್ದಾರೆ.

Yash Shetty: ಯಶ್ ಶೆಟ್ಟಿ ಅಭಿನಯದ ನೂತನ ಚಿತ್ರದ ಶೀರ್ಷಿಕೆ ಅನಾವರಣ

ಈವೆಂಟ್ ಮ್ಯಾನೇಜರ್ ಆಗಿರುವ ಮುಸ್ತಫಾ ರಾಜ್ ಅವರನ್ನು ಪ್ರಿಯಾಮಣಿ 2017ರಲ್ಲಿ ವಿವಾಹವಾದರು. ಈ ಜೋಡಿ ಬೆಂಗಳೂರಿನಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡಿದ್ದಾರೆ.