Share Market: ಸೆನ್ಸೆಕ್ಸ್ 1,131 ಅಂಕ ಜಿಗಿತ, ನಿಫ್ಟಿ 22,800ಕ್ಕೆ ಏರಿಕೆ; ಕಾರಣವೇನು?
Stock Market: ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 1,131 ಅಂಕಗಳ ಏರಿಕೆ ದಾಖಲಿಸಿತು. ನಿಫ್ಟಿ 22,800 ಅಂಕಗಳ ಗಡಿ ತಲುಪಿತು. ಆ ಮೂಲಕ ಹೂಡಿಕೆದಾರರ ಮೊಗದಲ್ಲಿ ನಗು ಮೂಡಲು ಕಾರಣವಾಯಿತು.

ಸಾಂದರ್ಭಿಕ ಚಿತ್ರ.

ಮುಂಬೈ: ಮುಂಬೈ ಷೇರು ಮಾರುಕಟ್ಟೆ (Share Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) ಮಂಗಳವಾರ 1,131 ಅಂಕಗಳ ಏರಿಕೆ ದಾಖಲಿಸಿತು. ನಿಫ್ಟಿ (Nifty) 22,800 ಅಂಕಗಳ ಗಡಿ ತಲುಪಿತು. ಹಣಕಾಸು, ಲೋಹ, ಆಟೊಮೊಬೈಲ್ ಷೇರುಗಳು ಭರ್ಜರಿ ಲಾಭ ಗಳಿಸಿತು. ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಪ್ರಭಾವ, ದೇಶೀಯ ಮಾರುಕಟ್ಟೆ ಮೇಲೆ ಹೂಡಿಕೆದಾರರ ವಿಶ್ವಾಸ ವೃದ್ಧಿಸಿದ ಪರಿಣಾಮ ಸೂಚ್ಯಂಕಗಳು ಚೇತರಿಸಿತು. ಸೆನ್ಸೆಕ್ಸ್ 75,301 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 325 ಅಂಕ ಏರಿಕೊಂಡು 22,834ಕ್ಕೆ ಸ್ಥಿರವಾಯಿತು.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಜೊಮ್ಯಾಟೊ, ಐಸಿಐಸಿಐ ಬ್ಯಾಂಕ್, ಮಹೀಂದ್ರಾ & ಮಹೀಂದ್ರಾ, ಟಾಟಾ ಮೋಟಾರ್ಸ್, ಎಲ್ & ಟಿ ಷೇರುಗಳು ಲಾಭ ಗಳಿಸಿತು. ಇವು 2.7%ರಿಂದ 7.4% ತನಕ ಲಾಭ ಪಡೆದವು. ಎಲ್ಲ ಸೆಕ್ಟರ್‌ಗಳು ಪಾಸಿಟಿವ್ ವಲಯದಲ್ಲಿತ್ತು. ಲೋಹ ವಲಯದ ಇಂಡೆಕ್ಸ್ 2.1% ಏರಿಕೆ ದಾಖಲಿಸಿತು. ಚೀನಾವು ತನ್ನ ಆರ್ಥಿಕ ಪ್ರಗತಿಗೆ ನೆರವಿನ ಪ್ಯಾಕೇಜ್ ಘೋಷಿಸಿರುವುದು ಸಕಾರಾತ್ಮಕ ಪ್ರಭಾವ ಬೀರಿತು. ಹಿಂಡಾಲ್ಕೊ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ಹಿಂದುಸ್ತಾನ್ ಕಾಪ್ಪರ್, ಅದಾನಿ ಎಂಟರ್ ಪ್ರೈಸಸ್ ಷೇರುಗಳ ದರ ಏರಿತು.
ಈ ಸುದ್ದಿಯನ್ನೂ ಓದಿ: Market outlook: ಕೊನೆಗೂ ಚೇತರಿಸಿದ ಸೆನ್ಸೆಕ್ಸ್, ನಿಫ್ಟಿ, ಬ್ಯಾಂಕಿಂಗ್, ಫೈನಾನ್ಸ್ ಷೇರುಗಳಿಗೆ ಲಾಭ
ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಎಲ್ಲ ಲಿಸ್ಟೆಡ್ ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯದಲ್ಲಿ 6.85 ಲಕ್ಷ ಕೋಟಿ ರುಪಾಯಿಗಳ ಏರಿಕೆಯಾಗಿದ್ದು, 400 ಲಕ್ಷ ಕೋಟಿ ರುಪಾಯಿಗೆ ಜಿಗಿಯಿತು.
ಸೂಚ್ಯಂಕ ಜಿಗಿತಕ್ಕೆ ಕಾರಣವೇನು?
ಅಮೆರಿಕದಲ್ಲಿ ಹಾಗೂ ಏಷ್ಯಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳ ಚೇತರಿಕೆಯು ಭಾರತೀಯ ಮಾರುಕಟ್ಟೆ ಮೇಲೆ ಕೂಡ ಸಕಾರಾತ್ಮಕ ಪ್ರಭಾವ ಬೀರಿತು. ಚೀನಾದ ಆರ್ಥಿಕತೆಯ ಮುನ್ನೋಟ ಪ್ರಬಲವಾಗಿರುವುದು ಕೂಡ ಪ್ಲಸ್ ಪಾಯಿಂಟ್ ಆಯಿತು. ಅತ್ತ ಅಮೆರಿಕದಲ್ಲೂ ಷೇರು ಸೂಚ್ಯಂಕಗಳು ಸ್ಥಿರತೆ ಪಡೆಯುತ್ತಿವೆ.
ಚೀನಾವು ತನ್ನ ದೇಶೀಯ ಬೇಡಿಕೆಗಳನ್ನು ಚುರುಕುಗೊಳಿಸಲು ವಿಶೇಷ ಕ್ರಮಗಳನ್ನು ಮತ್ತು ನೆರವಿನ ಪ್ಯಾಕೇಜ್ ಗಳನ್ನು ನೀಡಿದೆ. ಜನವರಿ-ಫೆಬ್ರವರಿಯಲ್ಲಿ ಇಕಾನಮಿ ಬೆಳವಣಿಗೆ ದಾಖಲಿಸಿದೆ.
ಅಮೆರಿಕದಲ್ಲಿ ಫೆಬ್ರವರಿಯಲ್ಲಿ ರಿಟೇಲ್ ಸೇಲ್ಸ್ ಅಂಕಿ ಅಂಶಗಳು ಚೇತರಿಕೆಯನ್ನು ತೋರಿಸಿವೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಐದು ತಿಂಗಳಿನ ದುರ್ಬಲ ಮಟ್ಟಕ್ಕೆ ಇಳಿಯಿತು. ರುಪಾಯಿ ಚೇತರಿಸಿತು. ರಷ್ಯಾ-ಉಕ್ರೇನ್ ಕದನ ವಿರಾಮಕ್ಕೆ ಅಮೆರಿಕ ಯತ್ನಿಸುತ್ತಿದ್ದು, ಇದನ್ನು ಜಗತ್ತು ಗಮನಿಸುತ್ತಿದೆ. ತಾಂತ್ರಿಕವಾಗಿಯೂ ಬುಲ್ಲಿಶ್ ಕ್ಯಾಂಡಲ್ ನಿರ್ಮಾಣವಾಗಿದ್ದು, ಚೇತರಿಕೆಗೆ ಕಾರಣವಾಗಿದೆ.