ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

G N Narasimhamurthy Column: ಬ್ಯಾಂಕಿಂಗ್‌ ಕನ್ನಡಕ್ಕಾಗಿ ಹೋರಾಡುತ್ತಿರುವವರು !

ನಮ್ಮ ದೇಶದ ಬ್ಯಾಂಕುಗಳು 1960ರ ದಶಕದಲ್ಲಿ ಸಾರ್ವಜನಿಕರಿಗೆ ಅಷ್ಟೇನು ಪರಿಚಿತವಾಗಿರ ಲಿಲ್ಲ. 1969ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾದ ಮೇಲೆ ಬ್ಯಾಂಕುಗಳು ಸಾರ್ವಜನಿಕರಿಗೆ ಮುಕ್ತವಾಗಿ ತೆರೆದುಕೊಂಡವು. ಪ್ರಾದೇಶಿಕ ಬ್ಯಾಂಕುಗಳಲ್ಲಿ ಗ್ರಾಹಕರ ಜೊತೆಗೆ ನಡೆಯುವ ವ್ಯವಹಾರಗಳು ಸಹಜವಾಗಿ ಆಯಾ ಪ್ರದೇಶದ ಭಾಷೆ ಯೆಲ್ಲಿಯೇ ನಡೆಯ ಬೇಕಿತ್ತು

ಬ್ಯಾಂಕಿಂಗ್‌ ಕನ್ನಡಕ್ಕಾಗಿ ಹೋರಾಡುತ್ತಿರುವವರು !

Profile Ashok Nayak Mar 2, 2025 12:53 PM

ಜಿ.ಎನ್. ನರಸಿಂಹಮೂರ್ತಿ

ಕಳೆದ ಐದು ದಶಕಗಳಂದ, ಕನ್ನಡದ ಕುರಿತು ಇವರು ಚಿಂತಿಸುತ್ತಿದ್ದಾರೆ. ತಾವು ಕೆಲಸ ಮಾಡುತ್ತಿದ್ದ ಬ್ಯಾಂಕ್‌ ನಲ್ಲಿದ್ದುಕೊಂಡು, ಬ್ಯಾಂಕಿಂಗ್‌ ಕನ್ನಡದ ಕುರಿತು ಹಲವು ಅಪರೂಪದ ಕೆಲಸಗಳನ್ನು ಮಾಡಿದ್ದಾರೆ. ಬ್ಯಾಂಕಿಂಗ್‌ ನಿಘಂಟುವಿ ನಂತಹ ಪುಸ್ತಕಗಳನ್ನು ಸಿದ್ಧ ಪಡಿಸುವಲ್ಲಿ ತೊಡಗಿಕಂಡಿದ್ದಾರೆ. ಬ್ಯಾಂಕಿನಲ್ಲಿ ಕ್ರಮೇಣ ಕನ್ನಡ ಮರೆಯಾಗುತ್ತಿರುವ ಇಂದಿನ ಕಾಲಮಾನದಲ್ಲಿ, ಈ ಹಿರಿಯರು ತಮ್ಮ ಅಪರೂಪದ ಕೆಲಸದಿಂದಾಗಿ ಎದ್ದು ಕಾಣಿಸುತ್ತಿದ್ದಾರೆ.

ನಮ್ಮ ದೇಶದ ಬ್ಯಾಂಕುಗಳು 1960ರ ದಶಕದಲ್ಲಿ ಸಾರ್ವಜನಿಕರಿಗೆ ಅಷ್ಟೇನು ಪರಿಚಿತ ವಾಗಿರಲಿಲ್ಲ. 1969ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾದ ಮೇಲೆ ಬ್ಯಾಂಕುಗಳು ಸಾರ್ವ ಜನಿಕರಿಗೆ ಮುಕ್ತವಾಗಿ ತೆರೆದುಕೊಂಡವು. ಪ್ರಾದೇಶಿಕ ಬ್ಯಾಂಕುಗಳಲ್ಲಿ ಗ್ರಾಹಕರ ಜೊತೆಗೆ ನಡೆಯುವ ವ್ಯವಹಾರಗಳು ಸಹಜವಾಗಿ ಆಯಾ ಪ್ರದೇಶದ ಭಾಷೆ ಯೆಲ್ಲಿಯೇ ನಡೆಯ ಬೇಕಿತ್ತು.

ಇದನ್ನೂ ಓದಿ: South Indian Bank: ಸೌತ್‌ ಇಂಡಿಯನ್‌ ಬ್ಯಾಂಕ್‌ನಿಂದ ಸುಲಭ, ತ್ವರಿತ ‘ಸ್ಥಿರ ಠೇವಣಿ’ ಯೋಜನೆ

ಆದರೆ ಒಂದು ದಶಕದೊಳಗೆ ರಾಷ್ಟ್ರೀಕೃತ ಬ್ಯಾಂಕುಗಳು ತಮ್ಮ ಭಾಷೆಯನ್ನು ಹಿಂದಿ ಮತ್ತು ಇಂಗ್ಲಿಷಿಗೆ ಬದಲಾಯಿಸಿಕೊಂಡುಬಿಟ್ಟವು. ಬ್ಯಾಂಕುಗಳು ಹಳ್ಳಿ ಹಳ್ಳಿಗಳನ್ನು ಪ್ರವೇಶಿಸಿದವು; ಆದರೆ ಆ ಸಮಯದಲ್ಲಿ ಕನ್ನಡಕ್ಕೆ ಯಾವ ಆದ್ಯತೆಯೂ ಇರಲಿಲ್ಲ. ಪಾ. ರಾಜಗೋಪಾಲ ಆ ಆದ್ಯತೆಯನ್ನು ತಂದುಕೊಡಲು ಶಕ್ತಿಮೀರಿ ಪ್ರಯತ್ನಿಸಿದರು.

ಭಾರತೀಯ ಸ್ಟೇಟ್ ಬ್ಯಾಂಕಿನ ನಗರ ಶಾಖೆಯಲ್ಲಿ ಸೇರಿಕೊಂಡ ರಾಜಗೋಲ್ ಅವರದು ಸ್ವಲ್ಪ ಎತ್ತರವಾದ ಶರೀರ, ತೆಳುವಾದ ಮೈಕಟ್ಟು, ಅಗಲವಾದ ಹೊಳೆಯುವ ಕಣ್ಣುಗಳು. ನಿರ್ಭಿಡೆಯ ಮಾತು. ಕನ್ನಡಕ್ಕೆ ಸಂಬಂಧಿಸಿದಂತೆ ನಿಷ್ಠುರವಾದ ನಿಲವು, ಯಾರ ಅಂಕೆಗೂ ಒಳಗಾಗದ ಸ್ವಭಾವ, ಅಪ್ಪಟ ಪ್ರಾಮಾಣಿಕತೆ. ರಾಜಗೋಪಾಲ್ ಅವರ ನೇತೃತ್ವ ದಲ್ಲಿ 1972ರ ನವೆಂಬರಿನಲ್ಲಿ ಶಾಖೆಯಲ್ಲಿ ಒಂದು ಕನ್ನಡ ಸಂಘ ಸ್ಥಾಪನೆಯಾಯಿತು. 1973ರರಲ್ಲಿ ಬ್ಯಾಂಕಿಗೆ ಸೇರ್ಪಡೆಗೊಂಡವರಲ್ಲಿ ಕನ್ನಡದವರೇ ಹೆಚ್ಚಾಗಿದ್ದರು. ಇವರೆಲ್ಲ ಜತೆಯಾಗಿ ದೊರಕಿದ್ದು ಕನ್ನಡದ ಕೆಲಸಗಳನ್ನು ಮುಂದುವರಿಸಲು ರಾಜಗೋಪಾಲ್ ಅವರಿಗೆ ಹೊಸ ಹುರುಪನ್ನು ನೀಡಿತು. 1973 ನವೆಂಬರ್ ತಿಂಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ನಗರ ಶಾಖೆಯ ಕನ್ನಡ ಸಂಘ ಮೊಟ್ಟ ಮೊದಲ ರಾಜ್ಯೋತ್ಸವವನ್ನು ಆಚರಿ ಸಿತು. ಅತಿಥಿಯಾಗಿ ಕನ್ನಡದ ಖ್ಯಾತ ಕವಿ ಹಾಗೂ ಸಾಹಿತಿ ವಿ.ಸೀ. ಅವರು ಬಂದಿದ್ದರು. ಕ್ರಮೇಣ ಪಾ.ರಾಜಗೋಪಾಲ್,ಅನೇಕರನ್ನು ಕನ್ನಡ ಸಂಘದ ಕೆಲಸಗಳತ್ತ ಸೆಳೆದು ಕೊಂಡರು. ಅವರ ಮಾತು ಅಧಿಕಾರಿಯುತವಾಗಿರುತ್ತಿತ್ತು. ಆದರೆ ಅದರಲ್ಲಿ ಅಹಂಕಾರ ವಿರಲಿಲ್ಲ.

ಬದಲಿಗೆ ಕನ್ನಡದ ಮೇಲಣ ಕಳಕಳಿ ಇತ್ತು. ಅದು ಅವರು ಹೇಳಿದ್ದನ್ನು ಎಲ್ಲರೂ ಸುಮ್ಮನೆ ಪಾಲಿಸುವ ಹಾಗೆ ಮಾಡುತ್ತಿತ್ತು. ಬ್ಯಾಂಕಿನ ಆಡಳಿತ ವರ್ಗ ಒಂದು ಕೋಣೆಯನ್ನು ಕನ್ನಡ ಸಂಘದ ಚಟುವಟಿಕೆಗಳಿಗಾಗಿ ಬಿಟ್ಟುಕೊಟ್ಟಿತು. ಆ ಕೊಠಡಿಯಲ್ಲಿ ಒಂದು ಸಣ್ಣ ಕನ್ನಡದ ಗ್ರಂಥಾಲಯ ಪ್ರಾರಂಭವಾಯಿತು. ರಾಜಗೋಪಾಲರು ಗೆಳೆಯರೊಡನೆ ಅರಳೇಪೇಟೆ ಯಲ್ಲಿದ್ದ ಪುಸ್ತಕದ ಮಳಿಗೆಯಿಂದ ಕನ್ನಡದ ಕೃತಿಗಳನ್ನು ಖರೀದಿಸಿ ಗ್ರಂಥಾಲಯಕ್ಕೆ ಸೇರಿಸುತ್ತಿದ್ದರು.

ಈ ವೇಳೆಗಾಗಲೇ ಕನ್ನಡದ ಉತ್ಸಾಹಿಗಳಾದ ಬೆಂ ಶ್ರೀ ರವೀಂದ್ರ, ಕೆ ಎನ್ ಜಯರಾಮ್, ಮೇ.ಕೃ. ಅನಂತಸ್ವಾಮಿ ಮುಂತಾದವರು ಬ್ಯಾಂಕಿಗೆ ಸೇರಿದ್ದರು. 1973ರ ರಾಜ್ಯೋತ್ಸವದ ವೇಳೆಗೆ ‘ಮಂದಾರ’ ಎಂಬ ಸಂಚಿಕೆಯನ್ನು ಕೈಬರಹದಲ್ಲಿ, ನಂತರ ಮುದ್ರಿತ ರೂಪದಲ್ಲಿ ಹೊರತರಲಾಯಿತು.

ಪಾ.ರಾಜಗೋಪಾಲರು ಕನ್ನಡದ ಕುರಿತು ಬೇರೆ ಚಿಂತನೆ ಮಾಡತೊಡಗಿದರು. ಬ್ಯಾಂಕಿನ ಬೇರೆ ಶಾಖೆಗಳಲ್ಲಿ ಕನ್ನಡ ಸಂಘಗಳನ್ನು ಸ್ಥಾಪಿಸುವುದು, ಬೇರೆ ಬ್ಯಾಂಕುಗಳಲ್ಲಿ ಕನ್ನಡ ಸಂಘಗಳನ್ನು ಸ್ಥಾಪಿಸಲು ಅಲ್ಲಿಯ ಸಿಬ್ಬಂದಿಗಳನ್ನು ಪ್ರೇರಿಸುವುದು ಮುಂತಾದವುಗಳ ಕಡೆ ಅವನ ಮನಸ್ಸು ಹೊರಳಿತು.

‘ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳು’ ಎಂಬ ಸಂಸ್ಥೆಯ ಕಲ್ಪನೆಯನ್ನು ರಾಜ ಗೋಪಾಲ್ ಅವರು ಎಲ್ಲರ ಮುಂದಿಟ್ಟು ಅನುಮೋದನೆ ಪಡೆದುಕೊಂಡರು. ಪ್ರಾಚಾರ್ಯ ಎಚ್ಚೆಸ್ಕೆಯವರನ್ನು ಸಂಪರ್ಕಿಸಿ ಬ್ಯಾಂಕಿಂಗಿನಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಲು ಅನುವಾಗುವಂತೆ ಲೇಖನಗಳನ್ನು ಬರೆಸಿ ಒಂದು ಒಳ್ಳೆಯ ಗುಣಮಟ್ಟದ ಪತ್ರಿಕೆಯನ್ನು ತರಬೇಕೆಂಬ ತನ್ನ ಆಸೆಯನ್ನು ಎಚ್ಚೆಸ್ಕೆ ಅವರಲ್ಲಿ ತೋಡಿಕೊಂಡರು. ಅವರು ಅದಕ್ಕೆ ಒಪ್ಪಿಕೊಂಡರು. ಸಮನ್ವಯ ಸಮಿತಿಯ ವತಿಯಿಂದ ‘ಬ್ಯಾಂಕಿಂಗ್ ಪ್ರಪಂಚ’ ಎಂಬ ತ್ರೈಮಾಸಿಕ ಪತ್ರಿಕೆಯ ಪ್ರಕಟಣೆ ಪ್ರಾರಂಭವಾಯಿತು.

ಎಚ್ಚೆಸ್ಕೆ ಅವರು ರಾಜಗೋಪಾಲರಿಗೆ ಒಮ್ಮೆ ‘ಬ್ಯಾಂಕಿಂಗ್ ಪ್ರಪಂಚಕ್ಕೆ ಬರುತ್ತಿರುವ ಲೇಖನಗಳ ಗುಣಮಟ್ಟ ಅಷ್ಟೇನೂ ಆಶಾದಾಯಕವಾಗಿಲ್ಲ. ಜೊತೆಯಲ್ಲಿ ಅವು ಸಮ ಯಕ್ಕೆ ಸರಿಯಾಗಿ ದೊರಕುತ್ತಿಲ್ಲ. ನೀವುಗಳೇ ಲೇಖನಗಳನ್ನು ಬರೆದು ಕೊಡಬೇಕು’ ಎಂದ ರು. ಅದಕ್ಕೆ ರಾಜಗೋಪಾಲ್ ‘ನಮ್ಮಲ್ಲಿ ಅನೇಕ ಬರಹಗಾರರಿದ್ದಾರೆ. ಅವರಿಗೆ ಬ್ಯಾಂಕಿಂಗಿನ ಕುರಿತು ಬರೆಯಲು ಸಾಧ್ಯವಾಗುವುದೋ ಇಲ್ಲವೋ ’ ಎಂದು ಹೇಳಿದರು. ಅವರು ‘ಕಮ್ಮಟ ಗಳನ್ನು ನಡೆಸಿ ಅವರಿಗೆ ಆ ಶಕ್ತಿಯನ್ನು ತುಂಬೋಣ’ ಎಂದರು. ಅನಂತರ ‘ಬ್ಯಾಂಕಿಂಗ್ ಕಮ್ಮಟ’ಗಳು ಪ್ರಾರಂಭವಾದವು.

ಒಂದು ದಿನದ ಕಮ್ಮಟ; ಇಲ್ಲಿ ಕನ್ನಡದಲ್ಲೇ ಬ್ಯಾಂಕಿಂಗ್ ಚಿಂತನೆ; ಎಚ್ಚೆಸ್ಕೆ ಅವರ ನಾಯ ಕತ್ವ. ಬೆಳಗ್ಗೆ ಬ್ಯಾಂಕಿಂಗಿನ ವಿಷಯಗಳ ಕುರಿತ ಕನ್ನಡ ಪ್ರಬಂಧಗಳ ಮಂಡನೆ ಮಧ್ಯಾಹ್ನ ಬ್ಯಾಂಕಿಂಗ್ ಕುರಿತ ಒಂದು ಒಳ್ಳೆಯ ಇಂಗ್ಲಿಷ್ ಲೇಖನದ ಅನುವಾದ ಎಂಬ ರೀತಿಯಲ್ಲಿ ಕಮ್ಮಟದ ಸ್ವರೂಪ ನಿಷ್ಕರ್ಷೆಯಾಯಿತು. ಕಮ್ಮಟದಲ್ಲಿ ಕನ್ನಡದ ಪದಗಳು ಟಂಕಿಸಲ್ಪ ಟ್ಟವು; ಬ್ಯಾಂಕಿಂಗ್ ಮತ್ತು ಆರ್ಥಿಕ ವಿಷಯಗಳ ಕುರಿತು ಲೇಖನಗಳು ತಯಾರಾದವು. ಸುಮಾರು 20 ವರ್ಷ ‘ಬ್ಯಾಂಕಿಂಗ್ ಪ್ರಪಂಚ’ದ ಸಂಚಿಕೆಗಳು ನಿಯತವಾಗಿ ಪ್ರಕಟವಾದವು.

‘ಬ್ಯಾಂಕಿಂಗ್ ಪ್ರಪಂಚ’ ಪತ್ರಿಕೆಯಲ್ಲಿ ಬ್ಯಾಂಕಿಂಗಿನ ಕುರಿತ ಕೆಲವು ಇಂಗ್ಲಿಷ್- ಕನ್ನಡ ಶಬ್ದಾರ್ಥಗಳು ಪ್ರಕಟವಾಗುತ್ತಿದ್ದವು. ರಾಜಗೋಪಾಲ್ ಅವರು ಇದನ್ನು ಸಮಗ್ರವಾಗಿ ಒಂದು ನಿಘಂಟಿನ ರೂಪದಲ್ಲಿ ಹೊರತರಬೇಕೆಂಬ ಸಲಹೆಯನ್ನು ಮುಂದಿಟ್ಟು, ಸ್ನೇಹಿತರ ಜತೆಗೂಡಿ ನಿಘಂಟಿನ ಕರಡನ್ನು ಸಿದ್ಧಪಡಿಸಿದರು. ಎಚ್ಚೆಸ್ಕೆಯವರು ಕರಡನ್ನು ತಿದ್ದಿದರು. ಅದು ‘ಬ್ಯಾಂಕಿಂಗ್ ನಿಘಂಟು’ ಎಂಬ ಹೆಸರಿನಲ್ಲಿ 1982ರಲ್ಲಿ ಬಿಡುಗಡೆಯಾಯಿತು. ಈ ರೀತಿಯ ಕನ್ನಡದ ಮೊತ್ತಮೊದಲ ನಿಘಂಟು ಅದು.

ಎಚ್ಚೆಸ್ಕೆಯವರ ಸಲಹೆ ಮತ್ತು ರಾಜಗೋಪಾಲ್ ಅವರ ಚಿಂತನೆಯಂತೆ ಬ್ಯಾಂಕಿಂಗಿನ ಕುರಿತು ಕನ್ನಡದಲ್ಲಿ ಸಂಶೋಧನೆ ನಡೆಸಲು ಮತ್ತು ಅಂತಹ ಕೃತಿಗಳ ಪ್ರಕಟಣೆಗಾಗಿ ಕನ್ನಡ ಬ್ಯಾಂಕಿಂಗ್ ಪ್ರತಿಷ್ಠಾನ ಎಂಬ ಸಂಸ್ಥೆ ರೂಪುಗೊಂಡಿತು.

ಹಲವಾರು ಮೌಲಿಕ ಕೃತಿಗಳು ಕನ್ನಡ ಬ್ಯಾಂಕಿಂಗ್ ಪ್ರತಿಷ್ಠಾನದಿಂದ ಬಿಡುಗಡೆಯಾದವು. ಅದು ಹಾಗೆಯೇ ಮುಂದುವರೆದು ಪ್ರತಿಷ್ಠಾನ ಇಡೀ ನಾಡಿಗೆ ಒಂದು ಮಾದರಿ ಸಂಶೋಧನ ಸಂಸ್ಥೆಯಾಗಬೇಕು ಎನ್ನುವುದು ರಾಜಗೋಪಾಲ್ ಅವರ ಆಶಯವಾಗಿತ್ತು. ಆದರೆ ಅದು ಹಾಗಾಗದೆ ಅದರ ಚಟುವಟಿಕೆಗಳು ಕ್ರಮೇಣ ಸ್ಥಗಿತವಾದವು. ಆದರೆ ರಾಜಗೋಪಾಲ್ ಅವರ ಮನಸ್ಸು ಇಂದಿಗೂ ಇನ್ನೂ ಅಷ್ಟೇ ಉತ್ಸಾಹದಿಂದಿದೆ. ಅವರ ಹಾಗೆ ಬ್ಯಾಂಕಿಂಗು ಮತ್ತು ಕನ್ನಡಕ್ಕೆ ಇಡೀ ಬದುಕನ್ನು ಮೀಸಲಿಟ್ಟವರು ಮತ್ತೊಬ್ಬರಿಲ್ಲ.

ನಿವೃತ್ತಿಯ ಅನಂತರದಲ್ಲಿಯೂ ರಾಜಗೋಪಾಲ್ ಅವರಿಗೆ ಬ್ಯಾಂಕಿಂಗ್ ಸಾಹಿತ್ಯ ನಿರ್ಮಾ ಣವೇ ಮುಖ್ಯವೆನಿಸಿ ‘ಪರಸ್ಪರ ನಿಧಿ ನಿಘಂಟು’ ಎಂಬ ಕೃತಿಯನ್ನು ಹೊರ ತಂದರು. ಇದು ಮ್ಯೂಚುವಲ್ ಫಂಡ್ ಕುರಿತಾದದ್ದು. ಈಗ ‘ಷೇರುಪೇಟೆ ಶಬ್ದಕೋಶ’ ವನ್ನು ಸಿದ್ಧಪಡಿಸಿ ದ್ದಾರೆ. ಈ ಪುಸ್ತಕವು 02-03-2025ರಂದು ಬಿಡುಗಡೆಯಾಗುತ್ತಿದೆ. ಇದೇ ದಿನ, ಕನ್ನಡದ ಸಮಾನಾಸಕ್ತ ಗೆಳೆಯರು ಪಾ.ರಾಜಗೋಪಾಲ ಅವರನ್ನು ಸನ್ಮಾನಿಸುತ್ತಿದ್ದಾರೆ.

ಪಾ.ರಾಜಗೋಪಾಲ ಅವರ ‘ಸಮಗ್ರ ಬ್ಯಾಂಕಿಂಗ್ ನಿಘಂಟಿ’ನ ಕನಸೇನೂ ಕಣ್ಣ ಮುಂದಿ ನಿಂದ ಮರೆಯಾಗಿಲ್ಲ. ಅವರಿಗೆ ಇದರಲ್ಲಿ ಎಲ್ಲ ಯಶಸ್ಸು ಸಿಗಲಿ ಎಂದು ನಾವೆಲ್ಲ ಹಾರೈಸ ಬೇಕಾಗಿದೆ. ರಾಜಗೋಪಾಲರ ಕೆಲಸಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ತರುಣ ಪೀಳಿಗೆ ಇಂದಿನ ತುರ್ತು ಅಗತ್ಯವಾಗಿದೆ. ಆದರೆ, ಅಂತಹ ತರುಣ ಪೀಳಿಗೆಯನ್ನು ಎಲ್ಲಿಂದ ತರುವುದು, ಹೇಗೆ ಸಿದ್ಧಪಡಿಸುವುದು ಎನ್ನುವುದೇ ಪ್ರಶ್ನೆಯಾಗಿದೆ - ಅನೇಕ ಕನ್ನಡದ ಸಮಸ್ಯೆಗಳಿಗಿದ್ದ ಹಾಗೆ!