Wednesday, 13th November 2024

Al-Bayan Radio Station: ಅಲ್‌ ಬಯಾನ್‌ ರೇಡಿಯೋ ಐಸಿಸ್‌ ಉಗ್ರರ ಪ್ರಬಲ ಅಸ್ತ್ರ-ಇದರ ಮೂಲಕವೇ ನಡೆಯುತ್ತೆ ನೇಮಕಾತಿ, ದುಷ್ಕೃತ್ಯಕ್ಕೆ ಸಂಚು!

isis

ನವದೆಹಲಿ: ಇಸ್ಲಾಮಿಕ್ ಸ್ಟೇಟ್ (ISIS) ಉಗ್ರ ಸಂಘಟನೆ ತನ್ನ ಅಲ್-ಬಯಾನ್ ರೇಡಿಯೊ ಸ್ಟೇಷನ್(Al-Bayan Radio Station) ಅನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಯುವಕರನ್ನು ಉಗ್ರ ಸಂಘಟನೆಗೆ ನೇಮಕಾತಿ ನಡೆಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಶಾರ್ಟ್‌ವೇವ್ ರೇಡಿಯೊ ತರಂಗಾಂತರಗಳು, ಎನ್‌ಕ್ರಿಪ್ಟ್ ಮಾಡಿದ ಇಂಟರ್ನೆಟ್ ಪ್ರೋಟೋಕಾಲ್‌ಗಳಾದ VPN ಗಳು ಅಥವಾ ಟಾರ್ ನೆಟ್‌ವರ್ಕ್‌ಗಳು, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಹೀಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ರೇಡಿಯೋ ಸೇವೆ ಐಸಿಸ್‌ ನೆಲೆಯಾಗಿರುವ ಭೂಪ್ರದೇಶಗಳಿಂತ ಹೊರಭಾಗದಲ್ಲಿ ಯುವಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗಿದೆ.

ಐಸಿಸ್‌ ನಿಷೇಧಿತ ನಿಯತಕಾಲಿಕೆ ವಾಯ್ಸ್ ಆಫ್ ಖುರಾಸನ್ ಪ್ರಕಾರ, ಅಲ್-ಬಯಾನ್ ಐಸಿಸ್‌ನ ಅಧಿಕೃತ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಮುಜಾಹಿದ್ದೀನ್, ಮುಹಾಜಿರೀನ್ ಮತ್ತು ಅನ್ಸಾರ್ ಜಿಹಾದ್‌ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೇ ಭಯ, ಹಿಂಸೆಯತ್ತ ಯುವಕರನ್ನು ಪ್ರಚೋದಿಸುತ್ತಿದೆ. ತನ್ನ ಸಿದ್ಧಾಂತವನ್ನು ಹರಡಲು, ಅಸ್ತಿತ್ವದಲ್ಲಿಲ್ಲದ ಜಿಹಾದಿಗಳ ಬಗ್ಗೆ ಕಟ್ಟುಕಥೆಗಳೊಂದಿಗೆ ಯುವಕರನ್ನು ನೇಮಿಸಿಕೊಳ್ಳಲು ಮತ್ತು “ಜಿಹಾದ್ ಭೂಮಿ” ಎಂದು ಕರೆಯಲ್ಪಡುವದನ್ನು ಹೇಗೆ ತಲುಪಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಲು ಈ ರೇಡಿಯೊ ಸ್ಟೇಷನ್ ಐಸಿಸ್‌ಗೆ ಮತ್ತೊಂದು ಸಾಧನವಾಗಿದೆ.

ಆನ್‌ಲೈನ್‌ನಲ್ಲಿ ಉಗ್ರರೊಂದಿಗೆ ಹೇಗೆ ಸಂಪರ್ಕ ಸಾಧಿಸಬಹುದು, ಜಿಹಾದಿ ನೆಟ್‌ವರ್ಕ್‌ಗಳನ್ನು ಹೇಗೆ ಪ್ರವೇಶಿಸುವುದು ಮತ್ತು ಅಂತಿಮವಾಗಿ ಹ್ಯಾಂಡ್ಲರ್‌ಗಳ ಜೊತೆ ಹೇಗೆ ಸಂಪರ್ಕ ಬೆಳೆಸಲಾಗುತ್ತದೆ ಹೀಗೆ ಹಲವು ವಿಚಾರಗಳನ್ನು ಉಗ್ರರು ಹಂಚಿಕೊಳ್ಳುತ್ತಾರೆ. ಅಲ್ಲದೇ ತರಬೇತಿ ಸಮಯದಲ್ಲಿ ಯಾವು ಎದುರಿಸುವ ಸವಾಲುಗಳು, ಸಂಕಷ್ಟಗಳೇನು? ಅಮೆರಿಕ ಸೇನೆ ದಾಳಿ ವೇಳೆ ಹೇಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಹೀಗೆ ಬಣ್ಣ ಬಣ್ಣದ ಮಾತುಗಳ ಮೂಲಕ ಯುವಕರನ್ನು ಸೆಳೆಯುವ ಪ್ರಯತ್ನವನ್ನು ಐಸಿಸ್‌ ನಡೆಸುತ್ತಿದೆ ಎನ್ನಲಾಗಿದೆ. ಅಲ್ಲದೇ ತಮ್ಮ ಮಕ್ಕಳನ್ನು ಜಿಹಾದ್‌ಗಾಗಿ ಒಪ್ಪಿಸಬೇಕು ಎಂದು ಪೋಷಕರಿಗೆ ಈ ರೇಡಿಯೋ ಕಾರ್ಯಕ್ರಮದಲ್ಲಿ ಒತ್ತಾಯಿಸಲಾಗುತ್ತದೆ.

ಅಲ್-ಬಯಾನ್ ರೇಡಿಯೋ ಬಗ್ಗೆ

ಅಲ್-ಬಯಾನ್ ರೇಡಿಯೋ, ಆರಂಭದಲ್ಲಿ ISIS-ನಿಯಂತ್ರಿತ ಪ್ರದೇಶಗಳ ಮೇಲೆ ಪ್ರಾದೇಶಿಕ ಪ್ರಸಾರವನ್ನು ಕೇಂದ್ರೀಕರಿಸಿತ್ತು. ಈಗ ಅರೇಬಿಕ್, ಇಂಗ್ಲಿಷ್, ಫ್ರೆಂಚ್ ಮತ್ತು ರಷ್ಯನ್ ಸೇರಿದಂತೆ ಬಹು ಭಾಷೆಗಳಲ್ಲಿ ಜಾಗತಿಕವಾಗಿ ಪ್ರಸಾರ ಮಾಡಲು ಪ್ರಯತ್ನಿಸುತ್ತಿದೆ. ಇದು ಶಾರ್ಟ್‌ವೇವ್ ರೇಡಿಯೊ ಆವರ್ತನಗಳನ್ನು ಬಳಸುತ್ತದೆ. ಈ ತರಂಗಾಂತರಗಳು ರೇಡಿಯೋ ತರಂಗಗಳನ್ನು ದೂರದವರೆಗೆ ಪ್ರಯಾಣಿಸಲು ಮತ್ತು ಗಡಿಗಳಾದ್ಯಂತ ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಪ್ರಸರಣವು ಸಾಮಾನ್ಯವಾಗಿ 5,000 ರಿಂದ 10,000 kHz ವ್ಯಾಪ್ತಿಯಲ್ಲಿ ನಡೆಯುತ್ತದೆ. ಒಂದು ಕಾರ್ಯತಂತ್ರದ ಬ್ಯಾಂಡ್‌ವಿಡ್ತ್ ಅದರ ಪ್ರಸಾರಗಳನ್ನು ಹಸ್ತಕ್ಷೇಪ ಮತ್ತು ಅಡ್ಡಿಗಳ ಪದರಗಳನ್ನು ಭೇದಿಸಲು ಅನುವು ಮಾಡಿಕೊಡುತ್ತದೆ. ಯುರೋಪ್, ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಏಷ್ಯಾದಾದ್ಯಂತ ಜನರನ್ನು ಗುರಿಯಾಗಿಸಿ ಈ ರೇಡಿಯೋ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Israel Airstrike: ಇಸ್ರೇಲ್‌ ಸೇನೆಯಿಂದ ಮತ್ತೆ ಏರ್‌ಸ್ಟ್ರೈಕ್‌; ಲೆಬನಾನ್‌ನಲ್ಲಿ 40 ಜನರ ಮಾರಣಹೋಮ!