ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 52 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಿದೆ.
ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಂಧಿತರಾಗಿದ್ದ ಟಿ.ರಾಜಾ ಸಿಂಗ್ ಅವರಿಗೂ ಬಿಜೆಪಿ ಟಿಕೆಟ್ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಹಾಲಿ ಶಾಸಕರೂ ಆಗಿರುವ ಟಿ. ರಾಜಾ ಸಿಂಗ್ ಅವರಿಗೆ ಗೋಶಮಹಲ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ. ಇನ್ನು ಬೋತ್ ಕ್ಷೇತ್ರದಿಂದ ಸೋಯಂ ರಾವ್, ಕೊರಾಟ್ಲ ಕ್ಷೇತ್ರದಿಂದ ಅರವಿಂದ್ ಧರ್ಮಾಪುರಿ, ಕರೀಮ್ ನಗರ ಕ್ಷೇತ್ರದಿಂದ ಬಂಡಿ ಸಂಜಯ್ ಕುಮಾರ್ ಅವರು ಕಣಕ್ಕಿಳಿದಿದ್ದಾರೆ. ಆದರೆ, ವಿವಾದಾತ್ಮಕ ಹೇಳಿಕೆ ನೀಡಿದ ಟಿ. ರಾಜಾ ಸಿಂಗ್ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಜನರಿಂದ ಆಕ್ಷೇಪ ವ್ಯಕ್ತವಾಗಿದೆ.
ಟಿ. ರಾಜಾ ಸಿಂಗ್ ಅವರು 2022ರಲ್ಲಿ ಸ್ಟಾಂಡ್‌ಅಪ್ ಕಮಿಡಿಯನ್ ಮುನಾವರ್ ಫಾರೂಕಿ ಅವರಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಹೇಳಿಕೆಗೆ ಸಂಬಂಧಿಸಿದಂತೆ ಟಿ. ರಾಜಾ ಸಿಂಗ್ ಅವರು ಜೈಲುವಾಸವನ್ನೂ ಅನುಭವಿಸಿದ್ದು, ಬಳಿಕ ಬಿಡುಗಡೆಯಾಗಿದ್ದಾರೆ.
ಒಟ್ಟು 119 ಕ್ಷೇತ್ರಗಳಿಗೆ ನವೆಂಬರ್ 30ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.