Thursday, 19th September 2024

ಪತ್ರಕರ್ತ ರಜತ್‌ ಶರ್ಮಾರಿಂದ ನಿಂದನಾತ್ಮಕ ಪದ ಬಳಕೆ: ಕಾಂಗ್ರೆಸ್‌ ವಕ್ತಾರೆ ಆರೋಪ

ನವದೆಹಲಿ: ಲೈವ್‌ ಚರ್ಚಾ ಕಾರ್ಯಕ್ರಮವೊಂದರಲ್ಲಿ ತಮ್ಮನ್ನು ಪತ್ರಕರ್ತ ರಜತ್‌ ಶರ್ಮಾ ನಿಂದಿಸಿದ್ದಾರೆಂದು ಕಾಂಗ್ರೆಸ್‌ ವಕ್ತಾರೆ ಡಾ. ರಾಗಿಣಿ ನಾಯಕ್‌ ಆರೋಪಿಸಿದ್ದಾರೆ.

ನಾಯಕ್‌ ಅವರು ಈ ನಿರ್ದಿಷ್ಟ ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದು ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶಗಳ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಯೆನ್ನಲಾಗಿದೆ.

ರಜತ್‌ ಶರ್ಮ ಹಿಂದಿ ಭಾಷೆಯಲ್ಲಿ ನಿಂದನಾತ್ಮಕ ಪದವೊಂದನ್ನು ಬಳಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ ಎಂದು ನಾಯಕ್‌ ಹೇಳುತ್ತಾರೆ.

“ಮೊದಲ ವೀಡಿಯೋವನ್ನು ನನ್ನ ಗಮನಕ್ಕೆ ಎಕ್ಸ್‌ ನಲ್ಲಿ ತರಲಾಗಿತ್ತು. ಇದರಲ್ಲಿ ರಜತ್‌ ಶರ್ಮಾ ಅವರು ನೇರ ಕಾರ್ಯಕ್ರಮದಲ್ಲಿ ನನ್ನನ್ನುದ್ದೇಶಿಸಿ ಕೆಟ್ಟ ಪದ ಬಳಸಿದ್ದಾರೆ. ಇದಕ್ಕಿಂತ ಕೆಳ ಮಟ್ಟಕ್ಕೆ ಪತ್ರಿಕೋದ್ಯಮ ಕುಸಿಯಬಹುದೇ? ನೀವೇನಾದರೂ ಉತ್ತರ ಹೊಂದಿದ್ದೀರಾ ರಜತ್‌ ಶರ್ಮ?” ಎಂದು ನಾಯಕ್‌ ಪೋಸ್ಟ್‌ ಮಾಡಿದ್ದಾರೆ.

ರಜತ್‌ ಶರ್ಮಾ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಟ್ವೀಟ್‌ ಮಾಡಿ “ರಜತ್‌ ಶರ್ಮಾ ಅವರು ಮಾಧ್ಯಮ ವ್ಯಕ್ತಿ. ಅವರು ಅವರದ್ದೇ ಆದ ರಾಜಕೀಯ ಒಲವುಗಳನ್ನು ಹೊಂದಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷದ ಪ್ರಮುಖ ವಕ್ತಾರೆಯೊಬ್ಬರಿಗೆ ಈ ರೀತಿಯ ಭಾಷೆ ಪ್ರಯೋಗ ಅಸ್ವೀಕಾರಾರ್ಹ ಮತ್ತು ಖಂಡನೀಯ. ಅವರು ಬೇಷರತ್‌ ಕ್ಷಮೆಯಾಚಿಸಬೇಕು,” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *