Friday, 13th December 2024

ಅಹಮದಾಬಾದ್’ನಲ್ಲಿ ಬಂಧಿತ ಐಸಿಸ್ ಭಯೋತ್ಪಾದಕರು ಶ್ರೀಲಂಕಾದವರು…!

ಚೆನ್ನೈ: ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ವಾರದ ಹಿಂದೆ ಬಂಧಿತರಾದ ನಾಲ್ವರು ಐಸಿಸ್ ಭಯೋತ್ಪಾದಕರಲ್ಲಿ ಒಬ್ಬನಾದ ನುಶ್ರತ್ ಮೂರು ವರ್ಷಗಳಿಂದ ಚೆನ್ನೈನಲ್ಲಿ ಸುತ್ತಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ದೇಶದ ಪ್ರಮುಖ ನಗರಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಐಸಿಸ್ ಭಯೋತ್ಪಾದಕ ಸಂಘಟನೆ ಯೋಜನೆ ರೂಪಿಸಿದ್ದು, ಈ ಸಂಘಟನೆಯ ನಾಲ್ವರು ಸದಸ್ಯರನ್ನು ಶ್ರೀಲಂಕಾದವರು ಎಂದು ಗುರುತಿಸಲಾಗಿದೆ. ಅವರು ಇತ್ತೀಚೆಗೆ ಚೆನ್ನೈನಿಂದ ವಿಮಾನದ ಮೂಲಕ ಅಹಮದಾಬಾದ್ ತಲುಪಿದ್ದರು.

ಮೊಹಮ್ಮದ್ ನುಶ್ರತ್, ಮೊಹಮ್ಮದ್ ಫಾರೂಕ್, ಮೊಹಮ್ಮದ್ ನಫ್ರಾನ್ ಮತ್ತು ಮೊಹಮ್ಮದ್ ರಸ್ಟೀನ್ ನನ್ನು ಅಹಮದಾಬಾದ್ ವಿಮಾನ ನಿಲ್ದಾಣದ ವಿಶೇಷ ತನಿಖಾ ವಿಭಾಗದ ಅಧಿಕಾರಿಗಳು ಬಂಧಿಸಿದ್ದರು.

ಇವರು ತಮಿಳಿನಲ್ಲೇ ಮಾತನಾಡುತ್ತಿದ್ದ ಕಾರಣ, ಭಾಷಾಂತರಕಾರರ ಸಹಾಯದಿಂದ ತನಿಖೆ ನಡೆಸಿದಾಗ ಐಸಿಸ್ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿರುವುದು ತಿಳಿದು ಬಂದಿದೆ.

ಈ ಪೈಕಿ ನುಶ್ರತ್ ಮೂರು ವರ್ಷದ ಹಿಂದೆಯೇ ಶ್ರೀಲಂಕಾದಿಂದ ವಿಮಾನದ ಮೂಲಕ ಚೆನ್ನೈಗೆ ಬಂದಿರುವುದು ಗೊತ್ತಾಗಿದೆ. ಶ್ರೀಲಂಕಾದಿಂದ ಚಿನ್ನದ ಬಿಸ್ಕತ್‌ಗಳನ್ನು ಕಳ್ಳಸಾಗಣೆ ಮಾಡಿ ಎರಡು ದಿನ ಚೆನ್ನೈನಲ್ಲಿಯೇ ತಂಗಿದ್ದು ನಂತರ ಮನೆಗೆ ಮರಳುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.