Thursday, 19th September 2024

Kolkata Doctors Protest: ನ್ಯಾಯಕ್ಕಾಗಿ ರಾಷ್ಟ್ರಪತಿ, ಪ್ರಧಾನಿ ಮೊರೆ ಹೋದ ಪ್ರತಿಭಟನಾನಿರತ ವೈದ್ಯರು; ಪತ್ರದಲ್ಲೇನಿದೆ?

Kolkata Doctors Protest

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಕಿರಿ ವೈದ್ಯೆಯ ಅತ್ಯಾಚಾರ, ಹತ್ಯೆಯ ಬಳಿಕ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ನ್ಯಾಯಕ್ಕಾಗಿ ಆಗ್ರಹಿಸಿ ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಸತತ ಮೂರನೇ ದಿನವೂ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಗುರುವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಇದೀಗ ಪ್ರತಿಭಟನಾನಿರತರು ರಾಷ್ಟ್ರಪತಿ ಮತ್ತು ಪ್ರಧಾನಿಗೆ ಪತ್ರ ಬರೆದು ಮಧ್ಯಪ್ರವೇಶಿಸಿ ಬಿಕ್ಕಟ್ಟನ್ನು ಕೊನೆಗೊಳಿಸುವಂತೆ ಮನವಿ ಮಾಡಿದ್ದಾರೆ (Kolkata Doctors Protest).

ಆಗಸ್ಟ್ 9ರಂದು ಕೋಲ್ಕತ್ತಾದ ಆರ್‌.ಜಿ.ಕರ್‌ ಆಸ್ಪತ್ರೆಯಲ್ಲಿ ವೈದ್ಯೆಯ ಶವ ಪತ್ತೆಯಾದ ಬಳಿಕ ಆರಂಭವಾದ ವೈದ್ಯರ ಪ್ರತಿಭಟನೆ ಈಗಲೂ ಮುಂದುವರಿದಿದೆ.

ಪತ್ರದಲ್ಲಿ ಏನಿದೆ?

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದಿರುವ ನಾಲ್ಕು ಪುಟಗಳ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮತ್ತು ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೂ ಸಲ್ಲಿಸಲಾಗಿದೆ. ಈ ಪತ್ರದಲ್ಲಿ ಪ್ರತಿಭಟನಾನಿರತ ವೈದ್ಯರು, “ಅತ್ಯಂತ ಹೇಯ ಕೃತ್ಯಕ್ಕೆ ಬಲಿಯಾದ ನಮ್ಮ ಸಹೋದ್ಯೋಗಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡುತ್ತಿದ್ದೇವೆ. ಇದರಿಂದ ನಾವು, ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆಯಡಿ ಬರುವ ಆರೋಗ್ಯ ವೃತ್ತಿಪರರು ಭಯ ಮತ್ತು ಆತಂಕವಿಲ್ಲದೆ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆʼʼ ಎಂದಿದ್ದಾರೆ.

ಮುಂದುವರಿದು, ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಬೆದರಿಕೆ, ಹಿಂಸಾಚಾರ ಹೆಚ್ಚಾಗಿದೆ ಎಂದು ಹೇಳಿರುವ ವೈದ್ಯರು, ಈ ಕಷ್ಟದ ಸಮಯದಲ್ಲಿ ನಿಮ್ಮ ನೆರವು ನಮ್ಮೆಲ್ಲರಿಗೂ ಭರವಸೆಯ ದೀಪವಾಗಲಿದೆ. ನಮ್ಮನ್ನು ಸುತ್ತುವರಿದಿರುವ ಕತ್ತಲೆಯಿಂದ ಹೊರಬರಲು ನಿಮ್ಮ ಸಹಾಯ ಅತ್ಯಗತ್ಯ ಎಂದು ಮನವಿ ಮಾಡಿದ್ದಾರೆ.

ರಾಷ್ಟ್ರಪತಿ ಹೇಳಿದ್ದೇನು?

ಕಳೆದ ತಿಂಗಳು ಘಟನೆ ಬಗ್ಗೆ ಮಾತನಾಡಿದ್ದ ದ್ರೌಪದಿ ಮುರ್ಮು ತೀವ್ರ ಆಘಾತ ವ್ಯಕ್ತಪಡಿಸಿದ್ದರು. ತರಬೇತಿ ನಿರತ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯಿಂದ ತಾನು ದಿಗ್ಭ್ರಮೆಗೊಂಡಿದ್ದೇನೆ ಎಂದು ಹೇಳಿದ್ದರು. “ಇದು (ಕೋಲ್ಕತಾ ಅತ್ಯಾಚಾರ ಮತ್ತು ಕೊಲೆ) ಈ ರೀತಿಯ ಏಕೈಕ ಘಟನೆಯಲ್ಲ. ಇದು ಮಹಿಳೆಯರ ವಿರುದ್ಧದ ಅಪರಾಧಗಳ ಸರಣಿಯ ಭಾಗ” ಎಂದು ಅವರು ಆಕ್ರೋಶ ವ್ಯಕ್ತಪಡಸಿದ್ದರು. “ನಿರ್ಭಯಾ ನಂತರದ 12 ವರ್ಷಗಳಲ್ಲಿ, ಅಸಂಖ್ಯಾತ ಅತ್ಯಾಚಾರಗಳನ್ನು ಸಮಾಜವು ಮರೆತಿದೆ. ಈ ಸಾಮೂಹಿಕ ಮರೆಗುಳಿತನವನ್ನು ಸಹಿಸಲು ಸಾಧ್ಯವಿಲ್ಲʼʼ ಎಂದು ಬೇಸರ ವ್ಯಕ್ತಪಡಿಸಿದ್ದರು.

ಗುರುವಾರ ಪಶ್ಚಿಮ ಬಂಗಾಳ ಸರ್ಕಾರವು ಪ್ರತಿಭಟನಾ ನಿರತ ವೈದ್ಯರನ್ನು ಮತ್ತೆ ಮಾತುಕತೆಗೆ ಆಹ್ವಾನಿಸಿತ್ತು. ಆದರೆ ಸಭೆಯ ನೇರ ಪ್ರಸಾರಕ್ಕಾಗಿ ಒಪ್ಪದ ಕಾರಣ ಅವರು ಹಾಜರಾಗಿರಲಿಲ್ಲ. ಎರಡು ಗಂಟೆಗಳಿಗೂ ಹೆಚ್ಚು ಕಾಲ ವೈದ್ಯರಿಗಾಗಿ ಕಾದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಜನರ ಹಿತದೃಷ್ಟಿಯಿಂದ ಹುದ್ದೆಯಿಂದ ಕೆಳಗಿಳಿಯಲು ಸಿದ್ಧ ಎಂದು ಹೇಳಿದ್ದರು. “ನಿಯೋಗದಲ್ಲಿದ್ದ ಅನೇಕರು ಮಾತುಕತೆಯಲ್ಲಿ ಆಸಕ್ತಿ ಹೊಂದಿದ್ದರು ಎಂದು ನನಗೆ ತಿಳಿದಿದೆ. ಆದರೆ ಕೆಲವರು ‘ಮಾತುಕತೆ ನಡೆಸಬೇಡಿ, ಸಭೆಗೆ ಹೋಗಬೇಡಿ’ ಎಂದು ಸೂಚನೆಗಳನ್ನು ನೀಡುತ್ತಿದ್ದರು” ಎಂದು ಅವರು ಆರೋಪಿಸಿದ್ದರು.

ಈ ಸುದ್ದಿಯನ್ನೂ ಓದಿ: Mamata Banerjee : ವೈದ್ಯರ ಅಸಹಾಕಾರ; ರಾಜೀನಾಮೆ ನೀಡಲು ಮುಂದಾದ ಮಮತಾ ಬ್ಯಾನರ್ಜಿ!