Tuesday, 3rd December 2024

ರಾಜಸ್ಥಾನ ಚುನಾವಣೆ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

ಜೈಪುರ: ಕಾಂಗ್ರೆಸ್ ಮಂಗಳವಾರ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜಸ್ಥಾನದ ಪಕ್ಷದ ಉಸ್ತುವಾರಿ ಸುಖ್ಜಿಂದರ್ ಸಿಂಗ್ ರಾಂಧವ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಪಕ್ಷದ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸ್ರಾ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸಿ.ಪಿ.ಜೋಶಿ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ರಾಜ್ಯ ಪಕ್ಷದ ಕಚೇರಿಯಲ್ಲಿ ‘ಜನ ಘೋಷಣಾ ಪತ್ರ’ ಪ್ರಣಾಳಿಕೆ ಬಿಡುಗಡೆ ಮಾಡಿದರು.

ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಪಂಚಾಯತ್ ಮಟ್ಟದಲ್ಲಿ ನೇಮಕಾತಿ ಮತ್ತು ಜಾತಿ ಜನಗಣತಿಗೆ ಹೊಸ ಯೋಜನೆಯನ್ನು ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

“…ರಾಜಸ್ಥಾನದ ಆರ್ಥಿಕ ಪರಿಸ್ಥಿತಿಯನ್ನು ನಾವು ನಿರ್ವಹಿಸಿದ ರೀತಿಯ ಬಗ್ಗೆ ರಾಜಸ್ಥಾನದ ಜನ ಹೆಮ್ಮೆ ಪಡುತ್ತಾರೆ. ರಾಜಸ್ಥಾನದಲ್ಲಿ ತಲಾ ಆದಾಯ ಶೇಕಡಾ 46.48 ರಷ್ಟು ಹೆಚ್ಚಾಗಿದೆ. 2030 ರವರೆಗೆ, ತಲಾ ಆದಾಯದಲ್ಲಿ ನಂಬರ್ ಒನ್ ಸ್ಥಾನ ಸಾಧಿಸುವುದು ನಮ್ಮ ಕನಸು ಎಂದು ಎಂದು ಗೆಹ್ಲೋಟ್ ಹೇಳಿದರು.

“ನಾವು ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ಯಾವುದೇ ಪಕ್ಷವು ಪ್ರಣಾಳಿಕೆಯಲ್ಲಿ ಹೇಳಿರುವ ಶೇಕಡಾ 90ರಷ್ಟು ಕೆಲಸಗಳನ್ನು ಮಾಡಿದರೆ ಅದು ದೊಡ್ಡ ಸಾಧನೆಯಾಗಿರುತ್ತದೆ. ಅಂಥ ಸಾಧನೆಯನ್ನು ರಾಜಸ್ಥಾನ ಕಾಂಗ್ರೆಸ್ ಮಾಡಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಗೃಹ ಲಕ್ಷ್ಮಿ ಯೋಜನೆ ಖಾತರಿಯಡಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ವಾರ್ಷಿಕ 10,000 ರೂ.; 1.05 ಕೋಟಿ ಕುಟುಂಬಗಳಿಗೆ 500 ರೂ.ಗೆ ಎಲ್ಪಿಜಿ ಸಿಲಿಂಡರ್; ಗೋಧನ್ ಗ್ಯಾರಂಟಿ ಅಡಿಯಲ್ಲಿ ಜಾನುವಾರು ಸಾಕಣೆದಾರರಿಂದ ಪ್ರತಿ ಕೆ.ಜಿ.ಗೆ ₹ 2 ರಂತೆ ಸಗಣಿ ಖರೀದಿಸುವುದು; ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ; ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅಥವಾ ಟ್ಯಾಬ್ಲೆಟ್; ಪ್ರಕೃತಿ ವಿಕೋಪ ದಿಂದ ಉಂಟಾಗುವ ನಷ್ಟ ಸರಿದೂಗಿಸಲು ಪ್ರತಿ ಕುಟುಂಬಕ್ಕೆ ₹ 15 ಲಕ್ಷದವರೆಗೆ ವಿಮಾ ರಕ್ಷಣೆ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ; ಚಿರಂಜೀವಿ ಆರೋಗ್ಯ ವಿಮಾ ಯೋಜನೆ ಮಿತಿ 25 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗಳಿಗೆ ಹೆಚ್ಚಳ.

ರಾಜಸ್ಥಾನದಲ್ಲಿ ನ. 25ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 73 ಸ್ಥಾನಗಳನ್ನು ಗೆದ್ದಿತ್ತು. ಅಂತಿಮವಾಗಿ ಬಿಎಸ್ಪಿ ಶಾಸಕರು ಮತ್ತು ಸ್ವತಂತ್ರರ ಬೆಂಬಲದೊಂದಿಗೆ ಗೆಹ್ಲೋಟ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.