Saturday, 23rd November 2024

ನಿಯಮ ಉಲ್ಲಂಘನೆ: 500 ಪ್ರಕರಣ ದಾಖಲು

ಚೆನ್ನೈ: ನಿಗದಿ ಪಡಿಸಿದ ಸಮಯ ಮೀರಿ ಪಟಾಕಿ ಸಿಡಿಸಿದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ 500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ.

ದೀಪಾವಳಿ ಪ್ರಯುಕ್ತ ಸುಪ್ರೀಂ ಕೋರ್ಟ್ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಚೆನ್ನೈ ಪೊಲೀಸರು 581 ಮಂದಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದರಲ್ಲಿ 554 ಪ್ರಕರಣಗಳು ಸಮಯ ಮೀರಿ ಪಟಾಕಿ ಸಿಡಿಸಿದ್ದಕ್ಕೆ ಸಂಬಂಧಿಸಿವೆ.

ತಮಿಳುನಾಡು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ನಡೆಸುತ್ತಿದ್ದ ಎಂಟು ಮಂದಿ ಪಟಾಕಿ ಅಂಗಡಿ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸ ಲಾಗಿದೆ. ಅತಿಯಾದ ಶಬ್ದವುಳ್ಳ ಪಟಾಕಿ ಸಿಡಿಸಿದ 19 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಚೆನ್ನೈನಲ್ಲಿ ಬೆಳಗ್ಗೆ 6 ರಿಂದ 7 ರವರೆಗೆ ಮತ್ತು ಮತ್ತೆ ಸಂಜೆ 7 ರಿಂದ ರಾತ್ರಿ 8 ರವರೆಗೆ ಎರಡು ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸಲು ಅನುಮತಿ ನೀಡಲಾಗಿದೆ.