Tuesday, 3rd December 2024

SBI Q2 Results: ಎಸ್‌ಬಿಐ ಲಾಭ 18,331 ಕೋಟಿ ರೂ.; ಶೇ. 28ರಷ್ಟು ಏರಿಕೆ

SBI Q2 Results

ಮುಂಬೈ: ಸೆ. 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದ ನಿವ್ವಳ ಲಾಭದಲ್ಲಿ ಶೇ. 28ರಷ್ಟು ಏರಿಕೆಯಾಗಿ 18,331 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭ 14,330 ಕೋಟಿ ರೂ. ಆಗಿತ್ತು (SBI Q2 Results).

ಆಗಸ್ಟ್‌ನಲ್ಲಿ ಸಿ.ಎಸ್.ಶೆಟ್ಟಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಬ್ಯಾಂಕಿನ ಒಟ್ಟು ಆದಾಯವು ಹಿಂದಿನ ವರ್ಷದ 1.12 ಲಕ್ಷ ಕೋಟಿ ರೂ.ಗಳಿಂದ 1.29 ಲಕ್ಷ ಕೋಟಿ ರೂ.ಗೆ ಏರಿದೆ. ಈ ತ್ರೈಮಾಸಿಕದಲ್ಲಿ ಒಟ್ಟು ವೆಚ್ಚವು 99,847 ಕೋಟಿ ರೂ.ಗೆ ಏರಿದೆ. ಹಿಂದಿನ ವರ್ಷದ ಅವಧಿಯಲ್ಲಿ ಇದು 92,752 ಕೋಟಿ ರೂ. ಆಗಿತ್ತು. ನಿವ್ವಳ ಬಡ್ಡಿ ಆದಾಯ ಶೇ. 5.37ರಷ್ಟು ಹೆಚ್ಚಾಗಿದ್ದು, 41,620 ಕೋಟಿ ರೂ.ಗೆ ಮುಟ್ಟಿದೆ. ವರ್ಷದ ಹಿಂದಿನ ಅವಧಿಯಲ್ಲಿ ಈ ಆದಾಯ 39,500 ಕೋಟಿ ರೂ. ಇತ್ತು. ನಿವ್ವಳ ಬಡ್ಡಿ ಮಾರ್ಜಿನ್‌ ಮಾತ್ರ 15 ಮೂಲಾಂಶಗಳಷ್ಟು ಕುಸಿದಿದ್ದು, ಶೇ. 3.14ಕ್ಕೆ ಇಳಿಕೆಯಾಗಿದೆ.

ಇನ್ನು ಬ್ಯಾಂಕ್‌ನ ಒಟ್ಟು ಠೇವಣಿ ಶೇ. 9.13ರಷ್ಟು ಏರಿಕೆ ಕಂಡಿದ್ದು, 51.17 ಲಕ್ಷ ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಇದು 46.89 ಲಕ್ಷ ಕೋಟಿ ರೂ. ಇತ್ತು.

ಎಸ್‌ಬಿಐ ಫೆ. 3ರಂದು ತನ್ನ 3ನೇ ತ್ರೈಮಾಸಿಕ ವರದಿ ಪ್ರಕಟಿಸಿತ್ತು. ಈ ವೇಳೆ ನಿವ್ವಳ ಲಾಭದಲ್ಲಿ ಶೇ. 35ರಷ್ಟು ಕುಸಿತ ದಾಖಲಾಗಿತ್ತು. ಡಿಸೆಂಬರ್ ತ್ರೈಮಾಸಿಕದಲ್ಲಿ ಎಸ್‌ಬಿಐ ಲಾಭ 9,164 ಕೋಟಿ ರೂ.ಗೆ ಇಳಿಕೆಯಾಗಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಎಸ್‌ಬಿಐ 14,205 ಕೋಟಿ ರೂ. ಲಾಭ ಗಳಿಸಿತ್ತು.

ಈ ಸುದ್ದಿಯನ್ನೂ ಓದಿ: PAN Card New Rule: ಪಾನ್ ಕಾರ್ಡ್ ಅಪ್‌ಡೇಟ್‌ಗೆ ಯಾವಾಗ ಕೊನೆಯ ದಿನ? ಮಾಡದಿದ್ದರೆ ಆಗುವ ನಷ್ಟ ಏನು?