Monday, 25th November 2024

Stock Market: ಡೊನಾಲ್ಟ್‌ ಟ್ರಂಪ್‌ ವಿಕ್ಟರಿ- ನಿಫ್ಟಿ 24,500ಕ್ಕೆ ಜಿಗಿಯಲಿದೆಯೇ?‌

nufty 50

ಮುಂಬೈ: ಅಮೆರಿಕದ ಅಧ್ಯಕ್ಷೀಯ ಚುನಾವಣೆ(US Presidential Election)ಯಲ್ಲಿ ಡೊನಾಲ್ಡ್‌ ಟ್ರಂಪ್‌(Donald Trump) ಗೆದ್ದಿರುವುದರಿಂದ ಜಾಗತಿಕ ಷೇರು ಮಾರುಕಟ್ಟೆ(Stock Market)ಯಲ್ಲೊಂದು ವಿಶ್ವಾಸದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ(Nifty) ಈ ವಾರ ಈಗಿನ 24,150 ಅಂಕಗಳಿಂದ 24,500 ಕ್ಕೆ ಜಿಗಿಯಲಿದೆಯೇ ಎಂಬ ನಿರೀಕ್ಷೆ ಉಂಟಾಗಿದೆ.

ಅಮೆರಿಕ ಚುನಾವಣೆಯ ನಂತರ ಐಟಿ ಷೇರುಗಳು ಏರಿಕೆಯಾಗಿವೆ. ನಿಫ್ಟಿ ಐಟಿ ಇಂಡೆಕ್ಸ್‌ 4% ಏರಿಕೆ ದಾಖಲಿಸಿದೆ. ಮತ್ತೊಂದು ಕಡೆ ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದ ಕಾರ್ಪೊರೇಟ್‌ ಕಂಪನಿಗಳ ಫಲಿತಾಂಶ ದುರ್ಬಲವಾಗಿದೆ. ಹೀಗಾಗಿ ಹೂಡಿಕೆದಾರರು ಎಚ್ಚರಿಕೆಯ ನಡೆಯನ್ನು ಇಡುತ್ತಿದ್ದಾರೆ. ವಿದೇಶಿ ಸಾಂಸ್ಥುಕ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಂತೆಗೆದುಕೊಳ್ಳಲು ಇದೂ ಒಂದು ಕಾರಣವಾಗಿದೆ.

ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ತನ್ನ ಬಡ್ಡಿ ದರಗಳನ್ನು ಇಳಿಸುವ ಟ್ರೆಂಡ್‌ ಅನ್ನು ಮುಂದುವರಿಸುವ ನಿರೀಕ್ಷೆ ಇದೆ. ಅದು ಡಿಸೆಂಬರ್‌ನಲ್ಲಿ ಬಡ್ಡಿ ದರದಲ್ಲಿ ಮತ್ತೆ 0.25% ಇಳಿಕೆ ಮಾಡುವ ಸಾಧ್ಯತೆ ಇದೆ. ಭಾರತದಲ್ಲಿ ಅಕ್ಟೋಬರ್‌ನಲ್ಲಿ ಹಣದುಬ್ಬರ ಏರಿಕೆಯಾಗಿರುವುದರಿಂದ ಆರ್‌ಬಿಐ ಬಡ್ಡಿ ದರಗಳನ್ನು ಸದ್ಯಕ್ಕೆ ತಡೆ ಹಿಡಿಯುವ ಸಾಧ್ಯತೆ ಇದೆ.

ಈ ವಾರ ನಿಫ್ಟಿಯ ಚಲನವಲನಗಳ ಮೇಲೆ ಪ್ರಭಾವ ಬೀರಬಹುದಾದ ಅಂಶಗಳ ಬಗ್ಗೆ ತಿಳಿಯೋಣ.

  1. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ನಡೆ (FII) : ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶೀಯ ಷೇರು ಮಾರುಕಟ್ಟೆಯಿಂದ ಈ ತಿಂಗಳು ಈಗಾಗಲೇ 23,000 ಕೋಟಿ ರೂ.ಗಳನ್ನು ಹಿಂತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಯೂ ಟರ್ನ್‌ ನಿರೀಕ್ಷಿಸುವಂತಿಲ್ಲ. ಹೀಗಿದ್ದರೂ, ದೇಶೀಯ ಹೂಡಿಕೆದಾರರು ನಿರಂತರವಾಗಿ ಹೂಡಿಕೆ ಮಾಡುತ್ತಿದ್ದಾರೆ.ಎಫ್‌ಐಐಗಳು ಭಾರತದಿಂದ ಚೀನಾಕ್ಕೆ ಹೂಡಿಕೆಯನ್ನು ವರ್ಗಾಯಿಸುತ್ತಿದ್ದರೂ, ದೇಶೀಯ ಹೂಡಿಕೆದಾರರು ಗಟ್ಟಿಯಾಗಿ ನಿಂತಿದ್ದಾರೆ. ಹೀಗಾಗಿ ಇತರ ಮಾರುಕಟ್ಟೆಗೆ ಹೋಲಿಸಿದರೆ ಭಾರತೀಯ ಮಾರುಕಟ್ಟೆ ಸದೃಢವಾಗಿದೆ.
  2. ಎರಡನೇ ತ್ರೈಮಾಸಿಕ ಫಲಿತಾಂಶ: ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಫಲಿತಾಂಶಗಳ ಕೊನೆಯ ಚರಣ ನಡೆಯುತ್ತಿದೆ. ಒಎನ್‌ಜಿಸಿ, ಹಿಂಡಾಲ್ಕೊ, ಎಚ್‌ಎಎಲ್‌ ಮತ್ತು ಹೀರೊ ಮೋಟಾರ್‌ ಕಂಪನಿಗಳ ಫಲಿತಾಂಶ ಈ ವಾರ ಪ್ರಕಟವಾಗಲಿದೆ. ಇದುವರೆಗಿನ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಇದ್ದಿರಲಿಲ್ಲ.
  3. ಗ್ಲೋಬಲ್‌ ಮಾರ್ಕೆಟ್‌: ಅಮೆರಿಕದ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕವಾಗಿರುವ ಸ್ಟ್ಯಾಂಡರ್ಡ್‌ ಆಂಡ್‌ ಪೂರ್ಸ್‌ 500 ಸೂಚ್ಯಂಕವು ಡೊನಾಲ್ಡ್‌ ಟ್ರಂಪ್‌ ವಿಕ್ಟರಿ ಬಳಿಕ 6000 ಅಂಕಗಳಿಗೆ ಏರಿಕೆಯಾಗಿದೆ. ರಿಪಬ್ಲಿಕನ್‌ ಪಾರ್ಟಿ ನೇತೃತ್ವದ ಸರ್ಕಾರ ಬಿಸಿನೆಸ್‌ ಪರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆ ಇದೆ.
  4. ಟೆಕ್ನಿಕಲ್‌ ವಿಶ್ಲೇಷಣೆ: ತಾಂತ್ರಿಕವಾಗಿ ನಿಫ್ಟಿ 24,000-24,500 ಅಂಕಗಳ ನಡುವೆ ವಹಿವಾಟು ನಡೆಸುವ ನಿರೀಕ್ಷೆ ಇದೆ. 24,500 ಅಂಕಗಳ ಗಡಿದಾಟಿದರೆ, 24,800 ಅಂಕಗಳ ಮಟ್ಟಕ್ಕೆ ಏರಿಕೆಯಾಗಬಹುದು. ಬಳಿಕ ಸುಮಾರು 200 ಅಂಕ ಇಳಿಯಬಹುದು ಎನ್ನುತ್ತಾರೆ ತಜ್ಞರು.
  5. ಹಣದುಬ್ಬರ ಅಂಕಿ ಅಂಶ ಪ್ರಕಟ: ಕೇಂದ್ರ ಸರ್ಕಾರವು ನವೆಂಬರ್‌ 12ರಂದು ಚಿಲ್ಲರೆ ಹಣದುಬ್ಬರ ಮತ್ತು ನವೆಂಬರ್‌ 14ರಂದು ಸಗಟು ಹಣದುಬ್ಬರ ಕುರಿತ ಅಂಕಿ ಅಂಶಗಳನ್ನುಪ್ರಕಟಿಸಲಿದೆ. ಅಮೆರಿಕದಲ್ಲೂ ನವೆಂಬರ್‌ 13ರಂದು ಹಣದುಬ್ಬರ ವರದಿ ಬಿಡುಗಡೆಯಾಗಲಿದ್ದು, ಷೇರು ಪೇಟೆ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ಅಮೆರಿಕದ ಫೆಡರಲ್‌ ರಿಸರ್ವ್‌ ಇದರ ಅಧಾರದ ಮೇಲೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಟ್ರಂಪ್‌ ಇಂಪ್ಯಾಕ್ಟ್-ಬಂಗಾರದ ದರ ಇಳಿಕೆ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ಜಯಭೇರಿ ಬಾರಿಸಿದ ಬಳಿಕ ಬಂಗಾರದ ದರದಲ್ಲಿ ಇಳಿಕೆಯಾಗಿದೆ. ಟ್ರಂಪ್‌ ಅವರು ಆರ್ಥಿಕ ಪ್ರಗತಿಗೆ ಬೇಕಾದ ಕ್ರಮ ಕೈಗೊಳ್ಳುವ ವಿಶ್ವಾಸ ಉಂಟಾಗಿದೆ. ಅಂದರೆ ಟ್ರಂಪ್‌ ಸರ್ಕಾರ ಬೆಳವಣಿಗೆಗೆ ಅವಶ್ಯವಿರುವ ಭಾರಿ ಸಾಲವನ್ನು ಮಾಡಬಹುದು. ಇದರಿಂದ ಸಾಲಬಾಂಡ್‌ಗಳ ಉತ್ಪತ್ತಿ ಹೆಚ್ಚಬಹುದು ಎಂದು ಹೂಡಿಕೆದಾರರು ಭಾವಿಸಿದ್ದಾರೆ. ಇದರ ಪರಿಣಾಮ ಬಂಗಾರದ ದರ ಇಳಿಕೆಯಾಗಿದೆ.

ಟೆಸ್ಲಾ ಷೇರುಗಳ ದರದಲ್ಲಿ 29% ಜಿಗಿತ

ಅಮೆರಿಕದ ಎಲೆಕ್ಟ್ರಿಕ್‌ ಕಾರು ಉತ್ಪಾದಕ ಟೆಸ್ಲಾ ಕಂಪನಿಯ ಷೇರುಗಳ ದರದಲ್ಲಿ ಕಳೆದ ಒಂದು ವಾರದಲ್ಲಿ 29% ಹೆಚ್ಚಳವಾಗಿದೆ. ಷೇರಿನ ದರ 248 ಡಾಲರ್‌ನಿಂದ 321 ಡಾಲರ್‌ಗೆ ಏರಿಕೆಯಾಗಿದೆ. ಹಾಗಾದರೆ ಭಾರತೀಯ ಹೂಡಿಕೆದಾರರು ಅಮೆರಿಕನ್‌ ಕಂಪನಿಗಳ ಷೇರುಗಳನ್ನು ಖರೀದಿಸುವುದು ಹೇಗೆ? ಇದಕ್ಕಾಗಿ ಇಂಟರ್‌ ನ್ಯಾಶನಲ್‌ ಟ್ರೇಡಿಂಗ್‌ ಅಕೌಂಟ್‌ ತೆರೆಯಬೇಕು. ಇಂಡ್‌ಮನಿ, ಐಸಿಐಸಿಐ ಡೈರೆಕ್ಟ್‌, ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ಇತ್ಯಾದಿ ಬ್ರೋಕಿಂಗ್‌ ಸರ್ವೀಸ್‌ ಮೂಲಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ ಅಮೆರಿಕನ್‌ ಕಂಪನಿಗಳ ಷೇರುಗಳನ್ನು ನೀವೂ ಹೂಡಿಕೆ ಮಾಡಬಹುದು.

ಏಷ್ಯನ್‌ ಪೇಂಟ್ಸ್‌ ನಿವ್ವಳ ಲಾಭ 42% ಇಳಿಕೆ

ಪೇಂಟಿಂಗ್‌ ಇಂಡಸ್ಟ್ರಿಯಲ್ಲಿ ಮುಂಚೂಣಿಯಲ್ಲಿರು ಏಷ್ಯನ್‌ ಪೇಂಟ್ಸ್‌ ಕಳೆದ ಎರಡನೇ ತ್ರೈಮಾಸಿಕದಲ್ಲಿ 694 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, 42% ಇಳಿಕೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಏಷ್ಯನ್‌ ಪೇಂಟ್ಸ್‌ 1,205 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

ಯಾವ ಕಂಪನಿಯ ಐಪಿಒ ನಡೆಯಲಿದೆ?

ಈ ವಾರ ಎನ್‌ಟಿಪಿಸಿ ಗ್ರೀನ್‌ ಎನರ್ಜಿಯ ಐಪಿಒ ನಡೆಯಲಿದೆ. ರೋಸ್‌ಮೆರ್ಟಾ ಡಿಜಿಟಲ್‌ ಸರ್ವೀಸ್‌, ಅವನ್ಸೆ ಫೈನಾನ್ಷಿಯಲ್‌ ಸರ್ವೀಸ್‌, ಬ್ಲಾಕ್‌ಬಕ್‌ ಐಪಿಒ ನಡೆಯಲಿದೆ.

ಚಿನ್ನ-ಬೆಳ್ಳಿಯಲ್ಲಿ ಹೂಡಿಕೆಗೆ ಜಿಮ್‌ ರೋಜರ್ಸ್‌ ಸಲಹೆ:

ಅಮೆರಿಕದ ಖ್ಯಾತ ಹೂಡಿಕೆದಾದ ಜಿಮ್‌ ರೋಜರ್ಸ್‌, ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಕುಸಿತವನ್ನು ನಿರೀಕ್ಷಿಸುತ್ತಿದ್ದಾರೆ. ಮುಖ್ಯವಾಗಿ ಅಮೆರಿಕದ ಸ್ಟಾಕ್‌ ಮಾರ್ಕೆಟ್‌ನಲ್ಲಿ ಸೂಚ್ಯಂಕಗಳು ಕುಸಿಯಬಹುದು. ಆದ್ದರಿಂದ ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಸುರಕ್ಷಿತ ಎನ್ನುತ್ತಾರೆ ಜಿಮ್‌ ರೋಜರ್ಸ್.‌ ಅಮೆರಿಕದಲ್ಲಿ ಸದ್ಯಕ್ಕೆ ರಿಸೆಶನ್‌ ಇಲ್ಲದಿದ್ದರೂ, 2025ರಲ್ಲಿ ಬರಬಹುದು ಎನ್ನುತ್ತಾರೆ ತಜ್ಞರು.

ನಿಫ್ಟಿಯ 7 ಸ್ಟಾಕ್‌ಗಳ ದರ ಇಳಿಕೆ:

ಇತ್ತೀಚಿನ ಮಾರುಕಟ್ಟೆ ಏರಿಳಿತದ ಪರಿಣಾಮ ನಿಫ್ಟಿಯಲ್ಲಿ 7 ಷೇರುಗಳು ಅವುಗಳ ಉನ್ನತ ಮಟ್ಟದಿಂದ 20-40% ಇಳಿದಿವೆ. ವಿವರ ಇಲ್ಲಿದೆ.

  • ಇಂಡಸ್‌ ಇಂಡ್‌ ಬ್ಯಾಂಕ್‌ ಷೇರಿನ ದರ ಇತ್ತೀಚೆಗೆ 38% ಇಳಿಕೆಯಾಗಿದೆ. 1,700 ರೂ.ಗಳಿಂದ 1,050 ರೂ.ಗೆ ಇಳಿದಿದೆ.
  • ಟಾಟಾ ಮೋಟಾರ್ಸ್‌ ಷೇರು ದರ 1,200 ರೂ.ಗಳಿಂದ 820 ರೂ.ಗೆ ಇಳಿದಿದೆ.
  • ಒಎನ್‌ಜಿಸಿ ಷೇರಿನ ದರ 345 ರೂ.ಗಳಿಂದ 265 ರೂ.ಗೆ ಇಳಿದಿದೆ.
  • ಹೀರೊ ಮೋಟೊ ಕಾರ್ಪ್‌ ಷೇರಿನ ದರ 6,250 ರೂ.ಗಳಿಂದ 4,800 ರೂ.ಗೆ ಇಳಿದಿದೆ.
  • ಬಜಾಜ್‌ ಆಟೊ ಷೇರು ದರ 12,700 ರೂ.ಗಳಿಂದ 9,900 ರೂ.ಗೆ ಇಳಿಕೆಯಾಗಿದೆ.
  • ಟ್ರೆಂಟ್‌ ಷೇರಿನ ದರ 8,300 ರೂ.ಗಳಿಂದ 6,500 ರೂ.ಗೆ ಇಳಿದಿದೆ.
  • ಟಾಟಾ ಕನ್‌ಸ್ಯೂಮರ್‌ ಪ್ರಾಡಕ್ಟ್ಸ್‌ ಷೇರಿನ ದರ 1250 ರೂ.ಗಳಿಂದ 985 ರೂ.ಗೆ ತಗ್ಗಿದೆ.

ಈ ಸುದ್ದಿಯನ್ನೂ ಓದಿ: LPG Price Hike: ತಿಂಗಳ ಆರಂಭದಲ್ಲೇ ಬೆಲೆ ಏರಿಕೆಯ ಶಾಕ್‌; ವಾಣಿಜ್ಯ ಬಳಕೆಯ 19 ಕೆಜಿ ಗ್ಯಾಸ್‌ ಸಿಲಿಂಡರ್ ದರ ಹೆಚ್ಚಳ