Saturday, 23rd November 2024

ಯೂಟ್ಯೂಬರ್ ವಾಸನ್​ ಚಾಲನಾ ಪರವಾನಗಿ ಹತ್ತು ವರ್ಷ ಅಮಾನತು

ಚೆನ್ನೈ: ತಮಿಳುನಾಡಿನ ಯೂಟ್ಯೂಬರ್ ಟಿಟಿಎಫ್ ವಾಸನ್ ಅವರಿಗೆ ತಮಿಳುನಾಡು ಸರ್ಕಾರ ಶಾಕ್​ ನೀಡಿದೆ.

ವಾಸನ್ ಚಾಲನಾ ಪರವಾನಗಿ ಮುಂದಿನ ಹತ್ತು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ. ಇತ್ತೀಚೆಗೆ ಬೈಕ್​ ಅಪಘಾತದಲ್ಲಿ ಗಾಯಗೊಂಡಿರುವ ವಾಸನ್ ಸದ್ಯ ಜೈಲಿನಲ್ಲಿದ್ದಾರೆ. ಇದರ ಬೆನ್ನಲ್ಲೇ ಹತ್ತು ವರ್ಷ ಡ್ರೈವಿಂಗ್​ ಲೈಸೆನ್ಸ್​ ರದ್ದು ಮಾಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸಾರಿಗೆ ಇಲಾಖೆ ಕೈಗೊಂಡಿದೆ.

ಸೆಪ್ಟೆಂಬರ್ 19ರಂದು ಯೂಟ್ಯೂಬರ್ ಟಿಟಿಎಫ್ ವಾಸನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಂಚಿಪುರಂ ಬಳಿಯ ಚೆನ್ನೈ-ವೆಲ್ಲೂರು ಹೆದ್ದಾರಿಯಲ್ಲಿ ಅತಿವೇಗ, ಅಜಾಗರೂಕತೆ ಹಾಗೂ ಅಪಾಯಕಾರಿ ರೀತಿಯಲ್ಲಿ ಬೈಕ್​ ಚಲಾಯಿಸಿದ್ದ ಆರೋಪದ ಮೇಲೆ ಬಾಲುಚೆಟ್ಟಿ ಛತ್ರಂ ಠಾಣೆ ಪೊಲೀಸರು ಕೇಸ್​ ದಾಖಲಿಸಿ ದ್ದರು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ವಾಸನ್ ಸದ್ಯ ಪುಝಲ್ ಜೈಲಿನಲ್ಲಿದ್ದಾರೆ.

ಇತ್ತೀಚೆಗೆ ಟಿಟಿಎಫ್ ವಾಸನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಾಂಚೀಪುರಂ ನ್ಯಾಯಾಲಯ ತಿರಸ್ಕರಿಸಿತು. ಹೀಗಾಗಿ ವಾಸನ್ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್​ಗೂ ಮೊರೆ ಹೋಗಿದ್ದರು. ಆದರೆ, ಅಲ್ಲಿ ಕೂಡ ಹಿನ್ನಡೆಯಾಗಿದೆ.

ತಮಿಳುನಾಡಿನ ಸಾರಿಗೆ ಇಲಾಖೆಯು ವಾಸನ್ ಚಾಲನಾ ಪರವಾನಗಿಯನ್ನು ಹತ್ತು ವರ್ಷಗಳ ಕಾಲ ಎಂದರೆ 2033ರ ಅಕ್ಟೋಬರ್ 5ರವರೆಗೆ ಅಮಾನತುಗೊಳಿಸಿದೆ.