Thursday, 22nd February 2024

ತುಂಗಭದ್ರಾ ಜಲಾಶಯಕ್ಕೆ 71 ಟಿಎಂಸಿ ನೀರು

– 75 ಕ್ಯುಸೆಕ್ ನೀರು ಜಲಾಶಯಕ್ಕೆ ಒಳಹರಿವು
– ಈ ವರ್ಷದಲ್ಲಿ ಇದೇ ಗರಿಷ್ಠ ಪ್ರಮಾಣದ ಒಳಹರಿವು
– ತುಂಗಾ ಜಲಾಶಯ, ವರದಾ ನದಿಯಿಂದ ಭಾರೀ ಪ್ರಮಾಣದ ನೀರು ಹರಿವು

ಕೊಪ್ಪಳ: ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ತುಂಗಾ ಜಲಾಶಯ ಹಾಗೂ ವರದಾ ನದಿಯಿಂದ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣ ತುಂಗಭದ್ರಾ ಜಲಾಶಯ ಇನ್ನೂ ನಾಲ್ಕೈದು ದಿನದಲ್ಲಿ ಭರ್ತಿಯಾಗುವ ಸಂಭವ ಇದೆ.

ಶನಿವಾರ ತುಂಗಭದ್ರಾ ಜಲಾಶಯಕ್ಕೆ 75008 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇದೇ ಒಳಹರಿವು ಇದ್ದರೆ ಮುಂದಿನ ಐದು ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯಾದ್ಯಂತ ಮಳೆ ಆರ್ಭಟ ಜೋರಾಗಿದ್ದು, ಶಿವಮೊಗ್ಗದ ತುಂಗಾ ಜಲಾಶಯದಿಂದ 75 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ. ಇದಲ್ಲದೆ ಹಾವೇರಿ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿ ತುಂಗಭದ್ರಾ ನದಿಯ ಉಪನದಿ ವರದಾ ನದಿ ಭರ್ತಿಯಾಗಿ ಹರಿಯುತ್ತಿದೆ. ಇದರ ಪರಿಣಾಮ ತುಂಗಭದ್ರಾ ಜಲಾಶಯಕ್ಕೆ‌ ಭಾರೀ ಪ್ರಮಾಣದಲ್ಲಿ ಒಳಹರಿವು ಹೆಚ್ಚಾಗಿದೆ.

ತುಂಗಭದ್ರಾ ಜಲಾಶಯಕ್ಕೆ 75,008 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇದು ಈ ವರ್ಷದ ಗರಿಷ್ಠ ಪ್ರಮಾಣದ ಒಳಹರಿವು ಆಗಿದೆ. ಕಳೆದ ವರ್ಷ ಇದೇ ಹೊತ್ತಿಗೆ ಕೇವಲ 13,196 ಕ್ಯುಸೆಕ್ ನೀರು ಬರುತ್ತಿತ್ತು. ಕಳೆದ ವರ್ಷ ಈ ಹೊತ್ತಿಗೆ ಜಲಾಶಯದಲ್ಲಿ 36.66 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಈಬಾರಿ ಈಗಾಗಲೆ 71.72 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೀರಿನ‌ ಸಂಗ್ರಹ ಹೆಚ್ಚಾಗಿದೆ. ಇದೇ ಒಳಹರಿವು ಇದ್ದರೆ ಇನ್ನು ನಾಲ್ಕೈದು ದಿನದಲ್ಲಿ ಜಲಾಶಯ ಭರ್ತಿಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಸಧ್ಯ ಜಲಾಶಯದಲ್ಲಿ 1624.62 ಅಡಿ ನೀರು ಇದ್ದು, 71.721 ಟಿಎಂಸಿ ನೀರು ಸಂಗ್ರಹವಾಗಿದೆ. ಕಾಲುವೆಗಳಿಗೆ 5,214 ಕ್ಯುಸೆಕ್ ನೀರನ್ನು ಹೊರ ಬಿಡಲಾಗು ತ್ತಿದೆ. ಎಡದಂಡೆ ಕಳಮಟ್ಟದ ಕಾಲುವೆಗೆ 32,46 ಕ್ಯುಸೆಕ್, ಬಲದಂಡೆ ಮೇಲ್ಮಟ್ಟದ ಕಾಲುವೆಗೆ 2479 ಕ್ಯುಸೆಕ್, ಬಲದಂಡೆ ಕೆಳಮಟ್ಟದ ಕಾಲುವೆಗೆ 500 ಕ್ಯುಸೆಕ್ ಹಾಗೂ ರಾಯ ಬಸವ ಕಾಲುವೆಗೆ 252 ಕ್ಯುಸೆಕ್ ನೀರು ಬಿಡಲಾಗಿದೆ.

ಜಲಾಶಯಕ್ಕೆ 75 ಸಾವಿರಕ್ಕೂ ಹೆಚ್ಚು ನೀರು ಒಳಹರಿವು ಬಂದರೆ ಜಲಾಶಯ ಭರ್ತಿಯಾಗಲಿದೆ. ಈಗಾಗಲೆ ಮುನ್ನೆಚ್ಚರಿಕೆ ಕ್ರಮವಾಗಿ ಜಲಾನಯನ ಪ್ರದೇಶದ ವಿವಿಧ‌ ಗ್ರಾಮಗಳಿಗೆ ಮುನ್ನೆಚ್ಚರಿಕೆ ನೀಡಬೇಕಿದೆ. 2019ರಲ್ಲಿ ಅವಧಿಗೂ ಪೂರ್ವ ಜಲಾಶಯ ಭರ್ತಿಯಾಗಿ ನದಿಗೆ ನೀರು ಬಿಟ್ಟಿದ್ದರಿಂದ ಕೆಲವು ಕಡೆ ಪ್ರವಾಹ ಸ್ಥಿತಿ ಉಂಟಾಗಿತ್ತು. ಒಳಹರಿವು ಗಮನಿಸಿದರೆ ಈ ಬಾರಿಯೂ ಪ್ರವಾಹ ಸ್ಥಿತಿ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಳೆದ ಎರಡು ದಿನದಿಂದ ತಗ್ಗಿದ್ದು, ಸ್ವಲ್ಪ ಬಿಡುವು ನೀಡಿದೆ. ಜಿಟಿ ಜಿಟಿ ಮಳೆಯಿಂದ ಮೂರು ಜಿಲ್ಲೆ ಜನತೆಗೆ ಮುಕ್ತಿ ಸಿಕ್ಕಿದೆ. ಆದರೆ ರಾಯಚೂರು ಜಿಲ್ಲೆಯಲ್ಲಿ ಮಳೆಯೂ ಹೆಚ್ಚಾಗಿ ಸುರಿದಿದ್ದು ಅತ್ತ ನಾರಾಯಣಪುರ ಜಲಾಶಯದಿಂದ ನೀರು ಹೆಚ್ಚಿನ‌ ಪ್ರಮಾಣದಲ್ಲಿ ಹೊರ ಬರುತ್ತಿರುವ ಕಾರಣ ಪ್ರವಾಹ ಸ್ಥಿತಿ ಉಂಟಾಗಿದೆ.

Leave a Reply

Your email address will not be published. Required fields are marked *

error: Content is protected !!