Tuesday, 23rd April 2024

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದ್ದೇವೆ, ತಪ್ಪೇನು?

– ಹುಬ್ಬಳ್ಳಿ ಕರಸೇವಕರ ಬಂಧನ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಕೊಪ್ಪಳ: ಹಳೇ ಪ್ರಕರಣಗಳನ್ನೆಲ್ಲ ವಿಲೇವಾರಿ ಮಾಡುವಂತೆ ಸೂಚಿಸಿದ್ದೇವೆ. ಈ ಹಿನ್ನೆಲೆ ಕಳೆದ 1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಅರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕೊಪ್ಪಳದ ಬಸಾಪೂರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ರಾಮಜನ್ಮಭೂಮಿ ಕರಸೇವೆಗೂ ಮೊದಲು ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತಿದೆ.‌ ಅದು ಏಷ್ಟೇ ವರ್ಷ ಆಗಲಿ, ತಪ್ಪಿತಸ್ಥರನ್ನು ಸುಮ್ಮನೇ ಬಿಡಬೇಕೆನ್ರಿ ಎಂದು ಮರು ಪ್ರಶ್ನೆ ಹಾಕಿದ ಸಿಎಂ, ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಹೈ ಕೋರ್ಟ್ ನಿರ್ದೇಶನದಂತೆ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದರು.

ರಾಮಮಂದಿರ ಉದ್ಘಾಟನೆಗೆ ರಾಜ್ಯ ಸರಕಾರ ರಜೆ ಘೋಷಣೆಗೆ ಬಿಜೆಪಿ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಸರಕಾರ ರಜೆ ಘೋಷಣೆ ಮಾಡಲಿ, ನಾವು ಏಕೆ ರಜೆ ನೀಡಬೇಕು ಎಂದರು. ರಾಮ ಮಂದಿರ ಉದ್ಘಾಟನೆಗೆ ಯಾರಿಗೆಲ್ಲ ಆಹ್ವಾನ ಬಂದಿದೆ ಗೊತ್ತಿಲ್ಲ. ಆಹ್ವಾನ ಬಂದವರು ಹೋಗಲಿ ಎಂದರು. ಬರದ ಹಿನ್ನೆಲೆ ತಾತ್ಕಾಲಿಕ 2 ಸಾವಿರ ಪರಿಹಾರ ಘೋಷಣೆ ಮಾಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಇನ್ನೂ ಬರ ಪರಿಹಾರ ತಲುಪಿಲ್ಲ.‌ ಕೂಡಲೇ 2 ಸಾವಿರ ರೂ. ಪರಿಹಾರ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.‌

ಅತಿಥಿ ಉಪನ್ಯಾಸಕರ ಜೊತೆಗೆ ಈಗಾಗಲೇ ಮಾತನಾಡಿದ್ದೇವೆ. ಪ್ರತಿಭಟನೆ ವಾಪಸ್ ಪಡೆಯಲು ಮನವಿ ಮಾಡಿದ್ದೇವೆ. ಆದರೂ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಸೇವಾ ಕಾಯಂ ಮಾಡುವಂತೆ ಅವರ ಬೇಡಿಕೆ ಇದೆ. ಕಾನೂನು ತೊಡಕಿನಿಂದ ಸೇವೆ ಖಾಯಂ ಮಾಡುವುದು ಕಷ್ಟ ಸಾದ್ಯ ಎಂದು ತಿಳಿಸಿದರು. ಶಾಸಕರಾದ ರಾಘವೇಂದ್ರ ಹಿಟ್ನಾಳ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ, ವಿನಯ ಕುಲಕರ್ಣಿ, ಐಜಿಪಿ ಬಿ. ಲೋಕೇಶ ಕುಮಾರ, ಡಿಸಿ ನಲಿನ್ ಅತುಲ್, ಎಸ್ಪಿ ಯಶೋಧ ವಂಟಗೋಡಿ ಇದ್ದರು.

Leave a Reply

Your email address will not be published. Required fields are marked *

error: Content is protected !!