Thursday, 25th April 2024

’ಆಧುನಿಕ ಭಗೀರಥ’ ಮಂಡ್ಯದ ಕಾಮೇಗೌಡರು ವಿಧಿವಶ

ಮಂಡ್ಯ: ಪರಿಸರ ಸಂರಕ್ಷಕ, ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ್ದ ಮಂಡ್ಯದ ಕಾಮೇಗೌಡರು ವಿಧಿವಶರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನ ದೊಡ್ಡಿಯ ಕೆರೆ ಕಾಮೇಗೌಡರು (84) ಸೋಮವಾರ ನಿಧನ ಹೊಂದಿದರು. ಆಧುನಿಕ ಭಗೀರಥ ಎಂದು ಕಾಮೇಗೌಡರು ಪ್ರಸಿದ್ಧರಾಗಿದ್ದರು.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕುಂದನಿ ಪರ್ವತದ ಮೇಲೆ ಕೆರೆ ಕಟ್ಟಿರುವ ಕಾಮೇಗೌಡರನ್ನು ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೊಗಳಿದ್ದರು. ಬಳಿಕ ಆಗಿನ ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಕಾಮೇಗೌಡರನ್ನು ಭೇಟಿ ಮಾಡಿದ್ದರು. ರಾಜ್ಯೋತ್ಸವ ಪ್ರಶಸ್ತಿಯೂ ಕಾಮೇಗೌಡರಿಗೆ ಒಲಿದು ಬಂದಿತ್ತು. ಸೋಮವಾರ ಸಂಜೆ ಕಾಮೇಗೌಡರ ಅಂತ್ಯಕ್ರಿಯೆ ನಡೆಯುವ ನಿರೀಕ್ಷೆ ಇದೆ.

ಕಾಮೇಗೌಡರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದವರು. ತಂದೆ ನೀಲಿ ವೆಂಕಟಗೌಡ, ತಾಯಿ ರಾಜಮ್ಮ. ಶಾಲೆಯ ಮೆಟ್ಟಿಲು ಹತ್ತಿ ಅಕ್ಷರ ಕಲಿಯದ ಕಾಮೇಗೌಡರು ತಮ್ಮ ಪರಿಸರ ಪ್ರೀತಿಯಿಂದಾಗಿಯೇ ಇತರರಿಗೆ ಮಾದರಿ.

12 ವರ್ಷಗಳ ಹಿಂದೆ ಕುಂದೂರು ಬೆಟ್ಟಕ್ಕೆ ಕುರಿಗಳನ್ನು ಮೇಯಿಸಲು ಕಾಮೇಗೌಡರು ಹೋದಾಗ ವಿಪರೀತ ದಾಹವಾಗಿತ್ತು. ಎಲ್ಲಿ ಹುಡುಕಿ ದರೂ ಒಂದು ಹನಿ ನೀರು ಸಿಗಲಿಲ್ಲ. ತುಸು ದೂರದಲ್ಲಿದ್ದ ಮನೆಗೆ ಹೋಗಿ ಅವರು ದಾಹ ಇಂಗಿಸಿಕೊಂಡರು.

ಬಳಿಕ ಪ್ರಾಣಿಗಳಿಗೆ ನೀರುಣಿಸಲು ಕೆರೆ ತೋಡುವ ಕಾರ್ಯ ಕೈಗೊಂಡರು. ಮೊದಲು ಊರಿನವರು ಕಾಮೇಗೌಡರು ಕೆರೆಗಳನ್ನು ತೋಡುವುದನ್ನು ಕಂಡು ಗೇಲಿ ಮಾಡಿದರು, ಇವರು ಹುಚ್ಚ ಎಂದು ಸಹ ಜರಿದರು. ಆದರೂ ಛಲ ಬಿಡದ ಗೌಡರು 14ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕಾಮೇಗೌಡರ ಕಾರ್ಯವನ್ನು ಹೊಗಳಿದ್ದರು. ಆ ಮೂಲಕ ಕಾಮೇಗೌಡರು ರಾಷ್ಟ್ರಕ್ಕೆ ಪರಿಚಿತರಾದರು. ಬಳಿಕ ಕಾಮೇಗೌಡರು ಪ್ರಧಾನಿ ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದರು.

error: Content is protected !!