Tuesday, 3rd December 2024

ರಕ್ಷಾ ಬಂಧನ: ಸೇನಾ ಸಿಬ್ಬಂದಿಗೆ 900 ರಾಖಿ ಕಳಿಸಿದ ಬಳ್ಳಾರಿ ಯುವತಿ

ಬಳ್ಳಾರಿ: ರಕ್ಷಾ ಬಂಧನದಂದು ಗಡಿಯಲ್ಲಿ ಬೀಡುಬಿಟ್ಟಿರುವ ಸೇನಾ ಸಿಬ್ಬಂದಿಗೆ ಬಳ್ಳಾರಿಯ ವಿದ್ಯಾಶ್ರೀ ಬಿ ಎಂಬಾಕೆ 900 ರಾಖಿಗಳನ್ನು ಕಳುಹಿಸಿದ್ದಾರೆ.

ಬೆಂಗಳೂರಿನಲ್ಲಿರುವ ಸೇನಾ ಸಂಘಟನೆ ಯೋಧ ನಮನ ಮೂಲಕ ವಿದ್ಯಾ ಈ ರಾಖಿ ಗಳನ್ನು ಕಳುಹಿಸಿದ್ದಾರೆ.

900 ರಾಖಿಗಳಲ್ಲಿ 300 ರಾಖಿಗಳನ್ನು ವಾಘಾ ಗಡಿಯಲ್ಲಿರುವ ಸೈನಿಕರಿಗೆ, 300 ಅಸ್ಸಾಂ ಗಡಿಯಲ್ಲಿರುವ ಸೈನಿಕರಿಗೆ ಮತ್ತು 300 ರಾಖಿಗಳನ್ನು ಹರಿಯಾಣದ ಗಡಿ ಭದ್ರತಾ ಪಡೆ ಸಿಬ್ಬಂದಿಗೆ ಕಳುಹಿಸಲಾಗಿದೆ. ಆ.11 ರಂದು ಸೈನಿಕರು ರಾಖಿಗಳನ್ನು ಸ್ವೀಕರಿಸಿದರು ಎನ್ನಲಾಗಿದೆ.

ತಮ್ಮ ಕುಟುಂಬದಿಂದ ದೂರವಿದ್ದು, ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ಈ ಮಂಗಳಕರ ದಿನದಂದು ಅವರಿಗೆ ಒಳ್ಳೆಯ ದಾಗಲಿ ಎಂದು ರಾಖಿಗಳನ್ನು ಕಳುಹಿಸಿ ದ್ದೇನೆ. ಸಹೋದರತ್ವದ ಸಂಕೇತವಾಗಿ ಇದನ್ನು ಕಳುಹಿಸಿದ್ದೇನೆ. ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾದ ಸುಮಾರು 200 ಸೈನಿಕರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ವಿದ್ಯಾ ಹೇಳಿದ್ದಾರೆ.

ವಿದ್ಯಾಶ್ರೀ ಸೈನಿಕರಿಗೆ ರಾಖಿ ದಾರಗಳನ್ನು ಕಳುಹಿಸುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಅವರು ಸೈನಿಕರಿಗೆ 300 ಕಳುಹಿಸಿದ್ದರು. ಇದಕ್ಕೆ ಪ್ರತಿಯಾಗಿ ಸೈನಿಕರು ರಾಖಿಗಳೊಂದಿಗೆ ಅವರ ಚಿತ್ರಗಳನ್ನು ಕಳುಹಿಸಿದ್ದರು. ವಿದ್ಯಾಶ್ರೀ ಕರ್ನಾಟಕ ರಾಜ್ಯ ನಾಗರಿಕ ಸೇವಾ ಆಕಾಂಕ್ಷಿಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ.

ದೇಶಾದ್ಯಂತ ರಾಖಿ ಕಟ್ಟುವ ಹಬ್ಬ ರಕ್ಷಾ ಬಂಧನ ಆ.11ರಂದು ಜರುಗಿದ್ದು, ಎಲ್ಲೆಡೆ ಸಹೋದರ ಸಹೋದರಿಯರು ರಾಖಿ ಕಟ್ಟುವ ಮೂಲಕ ಸಡಗರದಿಂದ ರಕ್ಷಾ ಬಂಧನ ಆಚರಣೆ ಮಾಡಿದರು. ಮಹಿಳೆಯರಿಗೆ ಉತ್ತರಪ್ರದೇಶ ಸರ್ಕಾರ ಹಾಗೂ ಹರಿಯಾಣದಲ್ಲಿ ಮಹಿಳೆಯರಿಗೆ ಹಬ್ಬದ ಉಡುಗೊರೆಯಾಗಿ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು.