Saturday, 27th July 2024

ಆಯುಕ್ತರಿಂದ ನಗರದಲ್ಲಿ ಕೋವಿಡ್ ಪರಿಸ್ಥಿತಿ ಕುರಿತ ಪರಿಶೀಲನಾ ಸಭೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪರಿಸ್ಥಿತಿಗೆ ಸಂಬಂಧಿಸಿದಂತೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಮಲ್ಲೇಶ್ವರ ಐ.ಪಿ.ಪಿ ತರಬೇತಿ ಕೇಂದ್ರದಲ್ಲಿ ವಿಶೇಷ ಆಯುಕ್ತರು ಗಳಾದ ತುಳಸಿ ಮದ್ದಿನೇನಿ, ಬಸವರಾಜು, ಡಿ.ರಂದೀಪ್, ರೆಡ್ಡಿ ಶಂಕರ ಬಾಬು, ರವಿಂದ್ರ, ರಾಜೇಂದ್ರ ಚೋಳನ್, ಎಲ್ಲಾ ವಲಯ ಜಂಟಿ ಆಯುಕ್ತರುಗಳು, ಆರೋಗ್ಯಾಧಿಕಾರಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಿದರು.

ನಗರದಲ್ಲಿ ಕಳೆದ ಎರಡು ದಿನಗಳಲ್ಲಿ ಕಾವಲ್ ಭೈರಸಂದ್ರದ ಬಳಿ ಮಂಜುಶ್ರೀ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ 210 ವಿದ್ಯಾರ್ಥಿ ಗಳ ಪೈಕಿ 40 ಮಂದಿ ಹಾಗೂ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಎಸ್.ಎನ್.ಎನ್ ರಾಜ್ ಲೇಕ್ ವ್ಯೂವ್ ರೆಸಿಡೆಂನ್ಸಿಯಲ್ಲಿ 500 ಮಂದಿಗೆ ಟೆಸ್ಟ್ ಮಾಡಿದಾಗ 28 ಮಂದಿಗೆ ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, ಪಾಲಿಕೆ ವತಿಯಿಂದ ಎರಡೂ ಕಡೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯುಕ್ತರು ರವರು ತಿಳಿಸಿದರು.

ಕೋವಿಡ್ ಪರಿಸ್ಥಿತಿಗೆ ಸಂಬಂಧಿಸಿದಂತೆ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಆಯುಕ್ತರು ಮಾತನಾಡಿ, ಎಸ್.ಎನ್.ಎನ್ ರಾಜ್ ಲೇಕ್ ವ್ಯೂವ್ ರೆಸಿಡೆಂನ್ಸಿಯಲ್ಲಿ ಇದುವರಿಗೆ 500 ಮಂದಿಗೆ ಟೆಸ್ಟ್ ಮಾಡಲಾಗಿದ್ದು, ಇನ್ನೂ 1,000 ಮಂದಿಗೆ ಟೆಸ್ಟ್ ಮಾಡಲು ಕ್ರಮವಹಿಸಲಾಗಿದೆ. ಅದಕ್ಕಾಗಿ 6 ಕ್ಯಾಂಪ್ ಗಳನ್ನು ನಿಯೋಜಿಸಿ ಟೆಸ್ಟಿಂಗ್ ಮಾಡಲಾಗುತ್ತಿದೆ ಎಂದರು.

ಮಂಜುಶ್ರೀ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ಕೇರಳದ ಮೂಲದವರಾಗಿದ್ದು, ಅಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿರುವುದರಿಂದ ಇಲ್ಲಿಗೆ ಹಿಂತಿರುಗಿರುವ ವಿದ್ಯಾರ್ಥಿಗಳಿಂದ ಹೆಚ್ಚು ಸೋಂಕು ಹರಡಿದೆ. ಇನ್ನು ಎಸ್.ಎನ್.ಎನ್ ರೆಸಿಡೆನ್ಸಿಯಲ್ಲಿ ಆರ್.ಡಬ್ಲ್ಯೂ.ಎ ಪಾರ್ಟಿ ಹಾಲ್ ಗಳಲ್ಲಿ ಹೆಚ್ಚು ಜನಸಂಖ್ಯೆ ಸೇರುತ್ತಿದ್ದು, ಕೋವಿಡ್ ನಿಯಮಗಳನ್ನು‌ ಪಾಲನೆ ಮಾಡದಿರುವುದರಿಂದ ಹೆಚ್ಚು ಪ್ರಕರಣಗಳು ಕಂಡುಬರುತ್ತಿರವೆ. ಈ ಎರಡು ಘಟನೆಗಳು ಕೋವಿಡ್ ಸೂಪರ್ ಸ್ಪ್ರೆಡರ್ ಗಳಾಗಲಿದ್ದು, ಈ ಪೈಕಿ ಹೆಚ್ಚು ಪ್ರಕರಣಗಳು ಕಂಡುಬರದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಆದೇಶದಂತೆ ಕೇರಳದಿಂದ ಬರುವವರಿಗೆ ಯಾವುದೇ ನಿರ್ಬಂಧವಿಲ್ಲ. ಕೇರಳದಿಂದ ಬರುವ ವ್ಯಕ್ತಿ/ವಿದ್ಯಾರ್ಥಿ ನಗರಕ್ಕೆ ಬಂದರೆ ಅವರು 72 ಗಂಟೆಗಳ ಒಳಗಡೆ ಮಾಡಿರುವ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ಸಂಸ್ಥೆ/ಕಾಲೇಜಿಗೆ ಸೇರಿಕೊಳ್ಳಬೇಕು‌. ಯಾರಾದರು ನಿಯಮ ಉಲ್ಲಂಘಿಸಿದರೆ ಡಿಸಾಸ್ಟರ್ ಮ್ಯಾನೆಜ್ಮೆಂಟ್ ಆ್ಯಕ್ಟ್ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೆಚ್ಚು ಕೋವಿಡ್ ಟೆಸ್ಟ್ ಮಾಡಲು ಸೂಚನೆ: ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವ ಪರಿಣಾಮ ಎಲ್ಲೆ‌ಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿವೆ ಅಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ಗಳನ್ನು ಹೆಚ್ಚಳ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ 141 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 200 ಹೆಚ್ಚುವರಿ ತಂಡಗಳು ಸೇರಿದಂತೆ ಒಟ್ಟು 341 ಟೆಸ್ಟಿಂಗ್ ತಂಡಗಳಿದ್ದು, ಟೆಸ್ಟಿಂಗ್ ಮಾಡಲು ಅಗತ್ಯ ಸಿಬ್ಬಂದಿಯಿದ್ದಾರೆ‌. ಈ ಪೈಕಿ ಪ್ರತಿ ನಿತ್ಯ 100 ಟೆಸ್ಟ್ ಗಳಂತೆ 34,000 ಟೆಸ್ಟ್ ಗಳನ್ನು ಮಾಡಬಹುದಾಗಿದೆ. ಈ ಸಂಬಂಧ ಸದ್ಯ 20,000 ರಿಂದ 22,000 ಟೆಸ್ಟ್ ಗಳನ್ನು ಮಾಡಲಾಗುತ್ತಿದ್ದು, ಅದನ್ನು ಇನ್ನೂ ಹೆಚ್ಚಿಸು ವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಅಲ್ಲದೆ ಟೆಸ್ಟಿಂಗ್ ಮಾಡುವ ಸಂಬಂಧ ಪ್ರತಿ ನಿತ್ಯ ಜಂಟಿ ಆಯುಕ್ತರು ಪರಿಶೀಲನಾ ಸಭೆ ನಡೆಸಬೇಕು ಹಾಗೂ ವಲಯ ವಿಶೇಷ ಆಯುಕ್ತರು ಎರಡು ದಿನಕ್ಕೊಮ್ಮೆ ಪರಿಶೀಲನೆ ಸಭೆ ನಡೆಸಿ ಹೆಚ್ಚು ಪ್ರಕರಣಗಳು ಬರುವ ಕಡೆ ಹೆಚ್ಚು ಟೆಸ್ಟ್ ಮಾಡುವ ಹಾಗೂ ಪಾಸಿಟಿವ್ ಬಂದಿರುವವರರನ್ನು ಐಸೋಲೇಟ್ ಮಾಡುವ ಬಗ್ಗೆ ಕ್ರಮವಹಿಸಬೇಕು. ಅಲ್ಲದೆ ಪಾಸಿಟಿವ್ ಆದ ನಂತರ ಕಾಂಟ್ಯಾಕ್ಟ್ ಟ್ರೇಸಿಂಗ್ ಮೂಲಕ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಐಸೋಲೇಟ್ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಕಾಂಟ್ಯಾಕ್ಟ್ ಟ್ರೇಸಿಂಗ್ ಗೆ ಆರೋಗ್ಯಾಧಿಕಾರಿಗಳು, ಕಂದಾಯ ಹಾಗೂ ಇಂಜಿನಿಯರ್ ಗಳನ್ನು ಬಳಸಿಕೊಳ್ಳುವಂತೆ ತಿಳಿಸಲಾಗಿದೆ.

ಆರ್.ಡಬ್ಲ್ಯೂ.ಎ ಗಳ ಜೊತೆ ಸಂರ್ಪಕ ಮಾಡಲು ಸೂಚನೆ: ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಬಂಧ ಆರ್.ಡಬ್ಲ್ಯೂ.ಎ ಗಳನ್ನು ಸಂಪರ್ಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ನಾಳೆ ಆರ್.ಡಬ್ಲ್ಯೂ.ಎ ಅಸೋಸಿಯೇಷನ್‌ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡಸಿ, ಸೋಂಕು ಲಕ್ಷಣಗಳಿರುವವರು ಐಸೋಲೇಟ್ ಹಾಗಿ ಟೆಸ್ಟ್ ಮಾಡಿಸಿಕೊಳ್ಳಲು ತಿಳಿಸಲಾಗುತ್ತದೆ. ಸೋಂಕು ಲಕ್ಷಣಗಳಿರುವವರಿಗೆ ಟೆಸ್ಟ್ ಮಾಡಿಸಿಕೊಳ್ಳಲು‌ ಹಾಗೂ ಆ ಬಗ್ಗೆ ಅಗತ್ಯ ಮಾಹಿತಿ ಒದಗಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಇನ್ನು ಯಾವುದಾದರು ಕಾರ್ಯಕ್ರಮ ಆಯೋಜಿಸಿ ಹೆಚ್ಚು ಜನ ಸೇರಿದರೆ ಕೋವಿಡ್ ನಿಯಮ ಗಳನ್ನು ತಪ್ಪದೆ ಪಾಲನೆ ಮಾಡಲು ಸೂಚಿಸಲಾಗುತ್ತದೆ.

ಕೋವಿಡ್ ನಿಯಮ ಜಾರಿಗೆ ಮಾರ್ಷಲ್ ಗಳ ನಿಯೋಜನೆ: ನಗರದಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳು ಕಡಿಮೆಯಾಗು ತ್ತಿರುವುದರಿಂದ ನಾಗರಿಕರು ಮಾಸ್ಕ್ ಹಾಗೂ ಸಾಮಾಜಿಂಕ ಅಂತರ ಕಾಪಾಡಿಕೊಳ್ಳುವ ನಿಯಮವನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ‌. ಈ ಸಂಬಂಧ ಮಾರ್ಷಲ್ ಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಮಾಸ್ಕ್ ಧರಿಸದಿರುವುದು ಹಾಗೂ ಸಾಮಾಜಿಕ ಅಂತ ಕಾಯ್ದುಕೊಳ್ಳದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಇಂದಿನಿಂದ 2ನೇ ಡೋಸ್ ಪ್ರಾರಂಭ: ಇಂದಿನಿಂದ ಎರಡನೇ ಡೋಸ್ ವ್ಯಾಕ್ಸಿನ್ ನೀಡಲಾಗುತ್ತಿದ್ದು, ಆರೋಗ್ಯ ಕಾರ್ಯ ಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಎರಡನೇ ಡೋಸ್ ಸೇರಿ ಮೂರು ಪ್ರಕ್ರಿಯೆಗಳು ಒಂದೇ ಸರಿ ನಡೆಯುತ್ತಿವೆ.

ಅದರಂತೆ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರು ಸೇರಿದಂತೆ 2.42 ಲಕ್ಷ ಮಂದಿಯ ಪೈಕಿ 93 ಸಾವಿರ ಮಂದಿ(ಶೇ.38) ಲಸಿಕೆ ಪಡೆದಿದ್ದಾರೆ. ರಾಜ್ಯ ಸರ್ಕಾರವು ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಅಂತಿಮ‌ ದಿನಾಂಕವನ್ನು ನಿಗದಿಪಡಿಸಿದ್ದು, ಲಸಿಕೆ ಪಡೆಯದವರು ಫೆಬ್ರವರಿ 25 ರೊಳಗೆ ಲಸಿಕೆ ಪಡೆಯಬೇಕು. ಆ ಬಳಿಕ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುದಿಲ್ಲ. ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ನೀಡಲಾಗುತ್ತದೆ. ಮುಂಚೂಣಿ ಕಾರ್ಯಕರ್ತರು ಮಾರ್ಚ್ ಮೊದಲನೆ ವಾರದವರೆಗೆ ಲಸಿಕೆ ಪಡೆಯಬಹುದಾಗಿದ್ದು, ಮಾರ್ಚ್ ತಿಂಗಳಲ್ಲಿ ಎರಡನೇ ಡೋಸ್ ನೀಡಲಾಗುತ್ತದೆ.

ಮೂರನೇ ಹಂತದಲ್ಲಿ ಲಸಿಕೆ ನೀಡಲು ಪಟ್ಟಿ‌ ಸಿದ್ದಪಡಿಸುವಂತೆ ಸೂಚನೆ: ಮೊದಲ ಎರಡು ಹಂತಗಳಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಮುಗಿದ ನಂತರ ಮೂರನೇ ಹಂತದಲ್ಲಿ ಲಸಿಕೆ ನೀಡಲು ಕ್ರಮವಹಿಸಲಾಗುತ್ತದೆ. ಅದರಂತೆ ಮತದಾರರ ಪಟ್ಟಿಗನು ಗುಣವಾಗಿ 50 ರಿಂದ 60, 60 ರಿಂದ 70, 70 ರಿಂದ 80, 80 ರಿಂದ 90 ಹಾಗೂ 90 ವರ್ಷ ಮೇಲ್ಪಟ್ಟವರನ್ನು ಬೇರ್ಪಡಿಸಿ ವಾರ್ಡ್ ವಾರು ಪಟ್ಟಿ ಮಾಡಲು ತಿಳಿಸಲಾಗಿದೆ.

ಇದರ ಜೊತೆಗೆ 50 ವರ್ಷದೊಳಿರುವವರು ಅನ್ಯ ರೋಗಗಳಿಂದ ಬಳಲುತ್ತಿರುವವರನ್ನು ಸಮೀಕ್ಷೆ ಮಾಡಲು ಕ್ರಮವಹಿಸು ತ್ತಿದ್ದು, ಮುಂದಿನ ವಾರದಿಂದ ಸಮೀಕ್ಷೆ ಪ್ರಾರಂಭಿಸಿ ಮಾರ್ಚ್ ವೇಳೆಗೆ ಪೂರ್ಣಗೊಳಿಸಲು ಕ್ರಮವಹಿಸಗುವುದು ಎಂದು ಆಯುಕ್ತರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!