Sunday, 8th September 2024

ಬೊಮ್ಮಾಯಿ ಬಾಯಿಂದ ಸಿಂಕ್ರೋನೈಜ್‌

ಅಭಿಪ್ರಾಯ

ಪವನ್‌ ವಶಿಷ್ಠ

ಸುಮಾರು ೨೦೧೪-೨೦೧೫ನೇ ವರ್ಷ ಇರಬಹುದು, ಹೈಕೋರ್ಟ್ ನಲ್ಲಿ ಖಾಸಗಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು, ವಿಚಾರಣೆ ವೇಳೆ ವಕೀಲರು ಬೆಂಗಳೂರಿನ ಟ್ರಾಫಿಕ್ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆ ವೇಳೆ ನ್ಯಾಯಮೂರ್ತಿಗಳು ಬೆಂಗಳೂರಿನಲ್ಲಿ ಬಿಬಿಎಂಪಿ, ಟ್ರಾಫಿಕ್ ಇಲಾಖೆ ಇದೆಯೋ ಇಲ್ಲವೋ ಎನ್ನುವ ಅನುಮಾನ ಶುರುವಾಗಿದೆ.

ಒಂದು ಸಿಗ್ನಲ್ ನಿಂದ ಮತ್ತೊಂದು ಸಿಗ್ನಲ್‌ಗೆ ಸಿಂಕ್ರೋನೈಜ ಮಾಡಬೇಕಿದೆ. ಇಲಾಖೆ ಗಳಿಗೆ ಕೇಳಿದ್ರೆ ಅದರ ಸ್ಪೆಲ್ಲಿಂಗ್ ಹುಡುಕಲು ಆರಂಭಿಸುತ್ತಾರೆ. ಸಿಂಕ್ರೋನೈಸೇಷನ್ ಎಂದರೇನು ಎಂಬುದೇ ಅಧಿಕಾರಿಗಳಿಗೆ ತಿಳಿದಿರುವುದಿಲ್ಲ. ಇನ್ನು ಟ್ರಾಫಿಕ್ ಪೊಲೀಸರೇ
ನಿದ್ದರೂ ಮರದ ಸಂಧಿ, ಗೋಡೆ ಸಂಧಿಯಲ್ಲಿ ಅವಿತುಕೊಂಡು ವ್ಯಾಪಾರದಲ್ಲಿ ತಲ್ಲೀನ ರಾಗಿರುತ್ತಾರೆ. ಇನ್ನು ಬಿಬಿಎಂಪಿ ಅವರನ್ನ ನೋಡಿದ್ರೆ ಆ ದೇವರಿಗೆ ಪ್ರೀತಿ ಆಗಬೇಕು. ಸಧ್ಯ, ವಿಮಾನ ನಿಲ್ದಾಣ ಮಾಡುವ ಯೋಜನೆ ಬಿಬಿಎಂಪಿ ಕೈಗೆತ್ತಿಕೊಂಡಿಲ್ಲ.

ಹಾಗೇನಾದರು ಬಿಬಿಎಂಪಿ ಅವರಿಗೆ ವಿಮಾನ ನಿಲ್ದಾಣ ಮಾಡುವ ಕಾಮಗಾರಿ ಮಾಡಿದ್ದೇ ಆದಲ್ಲಿ ಪೈಲೆಟ್‌ಗಳು ವಿಮಾನ ಲ್ಯಾಂಡಿಂಗ್ ಮಾಡುವ ದುಸ್ಸಾಹಸಕ್ಕೆ ಕೈ ಹಾಕುವುದೇ ಇಲ್ಲ. ಬಿಬಿಎಂಪಿ ಅವರು ವಿಮಾನ ನಿಲ್ದಾಣ ಮಾಡುವುದೇನಾದರು ನನ್ನ ಗಮನಕ್ಕೆ ಬಂದರೆ ಬೆಂಗಳೂರಿನಿಂದ ವಿಮಾನ ಯಾನ ಮಾಡುವ ಗೋಜಿಗೆ ನಾನು ಹೋಗುವುದಿಲ್ಲ. ‘ನಮ್ಮ ಮನೆ ಇರುವುದು ಲಾಲ್‌ಬಾಗ್ ಹತ್ತಿರ, ನಾನು ನಿವೃತ್ತಿ ಆಗುವು ದರೊಳಗೆ ಮೆಟ್ರೋದಲ್ಲಿ ಕೋರ್ಟಿಗೆ ಬರಬೇಕೆಂಬುದು ನನ್ನ ಆಸೆ.

(ಆಗಿನ್ನು ಹಸಿರು ಮಾರ್ಗ ಮೆಟ್ರೋ ಕಾಮಗಾರಿ ಪೂರ್ಣಗೊಂಡಿರಲಿಲ್ಲ) ಕೆಲಸ ಸಾಗುತ್ತಿರುವ ರೀತಿ ನೋಡಿದರೆ ನನ್ನ ಆಸೆ ಈಡೇರಿಸುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ’ ಹೀಗೆ ನ್ಯಾಯಮೂರ್ತಿಗಳು ನಗರದ ಟ್ರಾಫಿಕ್ ಮೇಲಿದ್ದ ಕೋಪವನ್ನ ಒಮ್ಮೆಲೆ ಹೊರ ಹಾಕಿದ್ದರು. ಅಷ್ಟು ಸಾಲದೆಂಬಂತೆ ಇಲಾಖೆ ಮತ್ತು ಅಧಿಕಾರಿಗಳ ಕಾರ್ಯವೈಖರಿಯನ್ನ ಕೋರ್ಟ್ ಹಾಲ್‌ನಲ್ಲಿ ಬೆತ್ತಲು ಗೊಳಿಸಿದ್ದರು.

ನ್ಯಾಯಮೂರ್ತಿಗಳು ಸಹ ಬೆಂಗಳೂರಿನ ಟ್ರಾಫಿಕ್ ವ್ಯವಸ್ಥೆಗೆ ಹೈರಾಣಾಗಿ ಸರಕಾರಕ್ಕೆ ಎಷ್ಟೇ ಕಿವಿ ಹಿಂಡಿದರೂ ಪ್ರಯೋಜನ ವಾಗದೇ ಕೈ ಚಲ್ಲಿ ಕೂತಿದ್ದರು. ಇದಾಗಿ 8 ವರ್ಷಗಳ ನಂತರ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿ ಟ್ರಾಫಿಕ್ ಸಮಸ್ಯೆ ಕುರಿತು ಮಾತನಾಡಿರುವುದು ನಗರದ ಜನತೆಗೆ ಒಂದು ರೀತಿಯ ಆಕ್ಸಿಜನ್ ದೊರೆತಂತಾಗಿದೆ ಎಂದರೆ ತಪ್ಪಿಲ್ಲ. ಮೋದಿ ಹೇಳಿದ್ದಾರೆ ಎಂದ ಮೇಲೆ ಕಿಂಚಿತ್ ಆದರೂ ಬದಲಾವಣೆ ನಿರೀಕ್ಷಿಸಬಹುದು.

ಏಕೆಂದರೆ ಅವರು ಒಬ್ಬ ಟಾ ಮಾಸ್ಟರ್. ಮೋದಿ ಪಾಲಿಗೆ ಸಿಎಂ ಬೊಮ್ಮಾಯಿ ಇವಾಗ ಒಬ್ಬ ಟ್ರಾಫಿಕ್ ಕಂಟ್ರೋಲರ್. ಬೊಮ್ಮಾಯಿ ಏನಾದರು ಮೋದಿಗೆ ಕರೆ ಮಾಡಿದರೆ ಮೊದಲು ಟ್ರಾಫಿಕ್ ಬಗ್ಗೆ ವಿಚಾರಿಸಿಕೊಂಡು ನಂತರ ಪಕ್ಷದ ಕುರಿತು ಚರ್ಚೆ ಮಾಡಿದರೂ ಆಶ್ಚರ್ಯವಿಲ್ಲ!

ಮೋದಿ ಅವರ ಹೇಳಿಕೆ ಹಿಂದೆಯೇ ಸಿಎಂ ಬೊಮ್ಮಾಯಿ ಅವರು ನಗರದ ಪ್ರಮುಖ 10 ಪ್ರದೇಶದಲ್ಲಿ ವಾಹನ ದಟ್ಟಣೆ ನಿವಾರಿಸುವುದರ ಜತೆ ಟ್ರಾಫಿಲ್ ಸಿಂಕ್ರೋನೈಜ್ ಮಾಡುವಂತೆ ಕ್ರಮ ತಗೆದುಕೊಳ್ಳಲು ಇಲಾಖೆಗಳಿಗೆ ಸೂಚಿಸಿರುವುದು ಸಂತಸದ ವಿಷಯ. ಆದರೆ ಇದು ಎಷ್ಟರ ಮಟ್ಟಿಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಾರೆ? ಎಷ್ಟರ ಮಟ್ಟಿಗೆ ವಾಹನ ದಟ್ಟಣೆ ನಿವಾರಣೆ ಮಾಡಲು ಸಾಧ್ಯ ಎಂಬುದು ಕಾದು ನೋಡಬೇಕಿದೆ. ಆದರೆ ಮೊದಲ ಬಾರಿಗೆ ಸರಕಾರದ ಪ್ರಮುಖರೊಬ್ಬರು ಸಿಂಕ್ರೋ ನೈಜ್ ಪದ ಬಳಸಿರುವುದು ನಿಜಕ್ಕೂ ಸಂತಸದ ವಿಚಾರ.

ಇನ್ನು ಅವರು ನಿರ್ದೇಶಿಸಿದಂತೆ ಆಗಿದ್ದೇ ಆದಲ್ಲಿ ಅದು ಸ್ವರ್ಗವೇ ಸರಿ. ನ್ಯಾಯಮೂರ್ತಿಗಳು ಹೇಳಿದ ಹಾಗೆ ಯಾವ ಅಧಿಕಾರಿ ಯೂ ತಿಳಿದು ಕೊಳ್ಳುವ ಗೋಜಲಿಗೆ ಹೋಗದ ಸಿಕ್ರೋನೈಜ್ ಪದವನ್ನ ಇಂದು ಇಲಾಖೆಗಳು, ಕೆಳಹಂತದ ಸಿಬ್ಬಂದಿವರೆಗೂ ಎಲ್ಲರಿಗೂ ಬಾಯಿ ಪಾಠ ಮಾಡಿಸಿರುತ್ತಾರೆ ಎಂಬುದರಲ್ಲಿ ಆಶ್ಚರ್ಯವೇ ಇಲ್ಲ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಇಷ್ಟು ಉಲ್ಬಣ ಗೊಂಡಿದ್ದರೂ ಜಾಣ ಕುರುಡನಂತೆ ವರ್ತಿಸಿದ ಸರಕಾರಗಳಿಗೆ ನಿಜಕ್ಕೂ ನಾಚಿಕೆ ಆಗಬೇಕು. ಮೋದಿ ಇದರ ಬಗ್ಗೆ ಹೇಳದಿದ್ದರೆ ಸಿಎಂಗೆ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಅರಿವೇ ಆಗುತ್ತಿರಲಿಲ್ಲವೇನೋ. ಶಂಖದಿಂದ ಬಂದರೆ ಮಾತ್ರ ನಮ್ಮ ಕೆಲಸ ಎಂಬಂತೆ ವರ್ತಿಸುತ್ತಿರುವ ರಾಜ್ಯ ಬಿಜೆಪಿ ಸರಕಾರ ನೋಡಿದರೆ ಇವರು ಆಡಳಿತ ಮಾಡುವುದನ್ನೇ ಮರೆತುಬಿಟ್ಟಿದ್ದಾರೋ ಅಥವಾ ಆಡಳಿತ ಮಾಡಲು ತಿಳಿಯದ ಎಳಸುಗಳೋ ಎಂಬಂತೆ ಭಾಸವಾಗುತ್ತಿದೆ.

ಕೋವಿಡ್‌ನಿಂದಾಗಿ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ಇದ್ದರಿಂದ ಐಟಿ ಕಾರಿಡಾರ್ ರಸ್ತೆಗಳು ಸ್ವಲ್ಪ ಮಟ್ಟಿಗೆ ಉಸಿರಾ ಡುತ್ತಿವೆ ಇಲ್ಲದಿದ್ದರೆ ನಗರದ ಟ್ರಾಫಿಕ್ ಯಾರ ಊಹೆಗೂ ನಿಲುಕದ್ದು. ನಗರ ರಸ್ತೆಗಳನ್ನ ಅಭಿವೃದ್ಧಿ ಪಡಿಸಲು ಇದ್ದ ಒಂದು ಸುವರ್ಣಾವಕಾಶವೆಂದರೆ ಕೋವಿಡ್ ಲಾಕ್ ಡೌನ್ ಸಮಯ. ಸಿಕ್ಕಿದ್ದ ಒಂದು ಅವಕಾಶವನ್ನು ಬಳಸಿಕೊಳ್ಳದೆ ಸರಕಾರ ಕೈಚಲ್ಲಿ ತೆಪ್ಪಗಿದಿದ್ದೇ ಶೋಚನೀಯ.

ಕಳೆದೊಂದು ದಶಕದಲ್ಲಿ 50 ಲಕ್ಷ ಇದ್ದ ವಾಹನಗಳ ನೋಂದಣಿ ಸಂಖ್ಯೆ ಇಂದು ದುಪ್ಪಟ್ಟಾಗಿದ್ದು, ಬೆಂಗಳೂರೊಂದರ 1.04 ಕೋಟಿ ವಾಹನಗಳು ನಮ್ಮ ರಾಜಧಾನಿ ರಸ್ತೆಗೆ ಲಗ್ಗೆ ಇಟ್ಟಿವೆ. ನಗರ ಒಂದರ 1 ಕೋಟಿ ವಾಹನ ಸಂಚರಿಸುವ ಅಂಕಿ ಅಂಶವನ್ನ 2017 ರ ಅಂದಾಜಿಸಲಾಗಿತ್ತು. ಆದರೆ ನಮ್ಮ ನಾಯಕರೆಲ್ಲರೂ ಸರಕಾರ ಉಳಿಸಲು ಮತ್ತು ಉರುಳಿಸಲು ಬೇಕಾದ ಅಂಕಿ ಅಂಶದಲ್ಲಿ ಬ್ಯುಸಿ ಆಗಿದ್ದರಿಂದ ನಗರದ ಟ್ರಾಫಿಕ್ ಸಮಸ್ಯೆ ಸಮಸ್ಯೆಯಾಗಿಯೇ ಉಳಿಯಿತು.

ದಿನಂಪ್ರತಿ ಜನ ಟ್ರಾಫಿಕ್‌ನಲ್ಲಿ ನಿಂತು ಹೈರಾಣಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಆಡಳಿತ ಪಕ್ಷಕ್ಕೆ ಬಾಯಿ ತುಂಬ
ಶಪಿಸುತ್ತಿದ್ದಾರೆ. ನಮ್ಮ ಜನಪ್ರತಿನಿಧಿಗಳೂ ಅಷ್ಟೆ ಎಮ್ಮೆ ಚರ್ಮದವರು, ಅವರಿಗೂ ಚೆನ್ನಾಗಿ ತಿಳಿದಿದೆ ನಮ್ಮ ಜನರೇನಿದ್ದರು ಸೋಶಿಯಲ್ ಮೀಡಿಯಾ ವಾರಿಯರ್ಸ್ ಅದಕ್ಕೆ ಅಷ್ಟಾಗಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಜನಪ್ರತಿನಿಽಗಳು ಬಂದಿದ್ದಾರೆ.

ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಜಯದೇವ ಜಂಕ್ಷನ್ ಮೇಲ್ಸೇತುವೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದಿದ್ದರು. ಅವರ ದೂರದೃಷ್ಟಿಯಿಂದ ಕೆಲಸವೂ ಪ್ರಾರಂಭವಾಯಿತು, ನಂತರ ಆ ಕಾಮಗಾರಿ ಮುಗಿಸಲು ತೆಗೆದುಕೊಂಡ ಅವಧಿ ಹಲವಾರು
ವರ್ಷ! ಅಷ್ಟು ಸಾಲದೆಂಬಂತೆ ಇಡೀ ಮೇಲ್ಸೇತು ವೆಗೆ ಒಬ್ಬನೇ ವೆಲ್ಡರ್! ಹೀಗಿದ್ದಾಗ ಟ್ರಾಫಿಕ್ ಸಮಸ್ಯೆ ಬಗೆ ಹರಿಸಲು ಸಾಧ್ಯವಾ? ಕೋರಮಂಗಲದ ಸೋನಿ ಜಂಕ್ಷನ್ ಮೇಲ್ಸೇತುವೆಯದ್ದು ಈಗ ಇದೇ ಪಾಡೇ. ಅದು ಮುಗಿಯುವುದರೊಳೆಗೆ ರಾಮಲಿಂಗಾರೆಡ್ಡಿ ನಂತರದ 2 ನೇ ತಲೆಮಾರಿನವರು ರಾಜಕೀಯ ಅಖಾಡಕ್ಕೆ ಧುಮಿಕಿರುತ್ತಾರೆ.

ಆರ್.ಟಿ.ಒ ಮತ್ತು ನಗರಾಭಿವೃದ್ದಿ ಸಮನ್ವಯ ಸಾಧಿಸಿದ್ದೇ ಆದಲ್ಲಿ ನಗರದ ವಾಹನ ದಟ್ಟಣೆ ನಿವಾರಿಸಲು ಸಾಧ್ಯವಿದೆ.
ಅದರಲ್ಲೂ ವಿಶೇಷವಾಗಿ ಜನಪ್ರತಿನಿಧಿಗಳನ್ನ ಹೊಡೆದೆಬ್ಬಿಸಲು ಬೇಕಿರುವ ಶಕ್ತಿಯನ್ನ ರೂಪಿಸುವಂತ ನಿಯಮ ಜಾರಿ
ಮಾಡುವ ಇಚ್ಛಾಶಕ್ತಿಯನ್ನ ಪ್ರದರ್ಶಿಸಬೇಕಿದೆ. ನಿಮ್ಮ ವಾರ್ಡಿನಲ್ಲಿರುವ ಮೂಲಭೂತ ಸೌಕರ್ಯಕ್ಕನುಗುಣವಾಗಿ ವಾಹನ
ನೋಂದಣಿ ಮಾಡಲಾಗುತ್ತದೆ ಎಂಬ ನಿಯಮ ಜಾರಿ ಮಾಡಿದರೆ ಅಷ್ಟೇ ಸಾಕು. ಸೋಷಿಯಲ್ ಮೀಡಿಯಾ ವಾರಿಯರ್ಸ್‌ಗಳೆ ಸ್ರ್ಟೀಟ್ ವಾರಿಯರ್ಸ್‌ಗಳಾಗಿ ಬದಲಾಗುತ್ತಾರೆ.

ನೀವು ಕೊಡದ ಮೂಲಭೂತಸೌಕರ್ಯದಿಂದಾಗಿ ನಾವು ವಾಹನ ಕೊಳ್ಳುವ ಭಾಗ್ಯದಿಂದ ವಂಚಿತರಾಗೊದ್ದೇವೆ ಎಂಬ ಘೇರಾವ್ ಹಾಕಿದರೆ ಅಲ್ಲಿಗೆ ಜನಪ್ರತಿನಿಧಿಗಳಿಗೆ ಬೆವರೆಳಿಯಲು ಆರಂಭವಾಗುತ್ತೆ. ಇದನ್ನ ನಗರದ ಎಲ್ಲಾ ವಾರ್ಡ್‌ಗಳಿಗೆ ವಿಸ್ತರಿದರೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಒಂದು ಗತಿ ಕಾಣಿಸಬಹುದು. ಸಮನ್ವಯ ಕೊರತೆಗೆ ನಗರದ ಸಾರಕ್ಕಿ ಸಿಗ್ನಲ್ ಜಂಕ್ಷನ್
ಒಂದು ಕ್ಲಾಸಿಕ್ ಉದಾಹರಣೆ. ಸಾರಕ್ಕಿ ಜಂಕ್ಷನ್‌ನ್ನು ಸಿಲ್ಕ್ ಬೋರ್ಡ್ ಜಂಕ್ಷನ್‌ನ ಸಹೋದರ ಎಂದರೆ ತಪ್ಪಾಗಲಾರದು
ಅಷ್ಟರ ಮಟ್ಟಿಗೆ ಕಿ.ಮೀ. ಗಟ್ಟಲೇ ಟ್ರಾಫಿಕ್ ಜಾಮ್ ನೋಡಬಹುದು.

ಸಾರಕ್ಕಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ಅಥವಾ ಮೇಲ್ಸೇತುವೆ ಮಾಡಬೇಕೆಂದರೆ ಅದು ಸಾಮಾನ್ಯ ವಿಷಯವಲ್ಲ. ಕಾರಣ ಇಷ್ಟೇ ಈ ಜಂಕ್ಷನ್ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ಗಡಿವ್ಯಾಪ್ತಿಗೆ ಬರುತ್ತದೆ. ಈ ಜಂಕ್ಷನ್ ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ ಮತ್ತು ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರಗಳ ಗಡಿ ವ್ಯಾಪ್ತಿಗೆ ಒಳಪಡುತ್ತದೆ. ನಾಲ್ಕು ಎಂಎಲ್ಎ ಗಳ ಸಮನ್ವಯ ಇರದ ಕಾರಣ ಇದೊಂದು ನಗರದ ಅತ್ಯಂತ ಕ್ಲಿಷ್ಟಕರ ಜಂಕ್ಷನ್ ಆಗಿಯೇ ಉಳಿದಿದೆ.

ಇದೊಂದು ಕ್ಲಾಸಿಕ್ ಉದಾಹರಣೆ ಈ ರೀತಿ ಒಮ್ಮೆ ನಗರ ಪ್ರದಕ್ಷಿಣೆ ಮಾಡಿದರೆ ಒಂದೆರಡು ಸಿಗಬಹುದು. ಏತನ್ಮಧ್ಯೆ ಈ ಜಂಕ್ಷನ್
ರಾಷ್ಟ್ರೀಯ ಹೆzರಿ ವ್ಯಾಪ್ತಿಗೆ ಬರುವುದರಿಂದ ಜಂಕ್ಷನ್ ಕಾಮಗಾರಿ ಯಾರ ವ್ಯಾಪ್ತಿಗೆ ಬರುತ್ತದೆ ಯಾರು ಮಾಡಬೇಕು ಎಂಬುದು ಇಂದಿಗೂ ಯಕ್ಷಪ್ರಶ್ನೆ ಆಗಿಯೇ ಉಳಿದಿದೆ. ಈ ರೀತಿ ತಾಂತ್ರಿಕ ಕಾರಣಗಳಿಂದ ಸುಗಮ ಸಂಚಾರಕ್ಕೆ ಉದಾಹರಣೆ ಆಗಬೇಕಿದ್ದ ಜಂಕ್ಷನ್‌ಗಳು ಜನರ ಶಾಪಕ್ಕೆ ತುತ್ತಾಗುತ್ತಿವೆ.

ಅದೇನೇ ಇರಲಿ ಇವಾಗ ನಮ್ಮ ಬೊಮ್ಮಾಯಿ ಸಾಹೇಬರು ನಗರದ ಟ್ರಾಫಿಕ್ ಕಂಟ್ರೋಲ್ ಮಾಡುವ ದುಸ್ಸಾಹಸಕ್ಕೆ ಕೈ
ಹಾಕಿದ್ದಾರೆ. ಅವರ ಆಸೆ ಆದಷ್ಟು ಬೇಗ ಇಡೇರಲಿ ಎಂಬುದು ನಮ್ಮ ಕಳಕಳಿ ಹಾಗೂ ಪ್ರಾರ್ಥನೆ.

error: Content is protected !!